ಕೈಗಾರಿಕಾ ದಣಿವು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಡೆಬಿಡದ ಶ್ರಮದ ಫಲವಾಗಿ, ಒಬ್ಬ ಕೆಲಸಗಾರನ ಅಥವಾ ಒಟ್ಟಾಗಿ ಅನೇಕರ ಕಾರ್ಯನಿರ್ವಹಣ ಶಕ್ತಿ ಕುಂದಿದಾಗ ಉಂಟಾಗುವ ಸ್ಥಿತಿಯೇ ದಣಿವು. ಕೈಗಾರಿಕಾ ಕ್ಷೇತ್ರದಲ್ಲಿ ಇದರ ವ್ಯಾಪ್ತಿ ಏನು, ಇದನ್ನು ತಡೆಗಟ್ಟುವ ಬಗೆಗಳಾವುವು ಎಂಬುದನ್ನು ಇಲ್ಲಿ ವಿವೇಚಿಸಲಾಗಿದೆ. ಹಾಗೆ ಕುಂದಿದ ಶಕ್ತಿಯನ್ನು ವಿಶ್ರಾಂತಿಯ ಅನಂತರ ಪುನಃ ಪಡೆಯಲು ಸಾಧ್ಯ. ಕೆಲಸ ಬಹಳ ತೀವ್ರವಾಗಿದ್ದಷ್ಟೂ ಬೇಗಬೇಗ ಕೆಲಸಗಾರ ದಣಿಯುತ್ತಾನೆ. ಒಂದು ಉದ್ಯಮ ಸನ್ನಿವೇಶದಲ್ಲಿ ಕಂಡುಬರುವ ಕಾರ್ಯಚಟುವಟಿಕೆಗಳಿಂದ ಉಂಟಾಗುವ ದಣಿವು ಕೆಲಸಗಾರನ (ಅ)ಕೆಲಸಕ್ಕಾಗಿ ವ್ಯಯವಾದ ಚೈತನ್ಯ (ಆ) ಕೆಲಸದ ಪರಿಮಾಣ ಮತ್ತು ಗುಣಮಟ್ಟದಲ್ಲಿ ಕಂಡುಬರುವ ಕೊರೆ ಮತ್ತು (ಇ) ವಿಶ್ರಾಂತಿಗಾಗಿ ಅವನ ಹಂಬಲ-ಇವುಗಳ ಮೂಲಕ ಪ್ರಕಟವಾಗುತ್ತದೆ. ದಣಿವು ಎಷ್ಟು ಶಾರೀರಿಕವೋ ಅಷ್ಟೂ ಅಷ್ಟು ಮಾನಸಿಕವೂ ಹೌದು.[೧]

ಕೆಲಸಗಾರನ ಕಾರ್ಯಚಟುವಟಿಕೆ[ಬದಲಾಯಿಸಿ]

ಒಬ್ಬ ಕೆಲಸಗಾರನ ಕಾರ್ಯಚಟುವಟಿಕೆಯಲ್ಲಿ ಬಳಸಿಕೊಳ್ಳಲಾದ ಮಾಂಸ ಖಂಡಗಳಲ್ಲಿ, ಚೈತನ್ಯದಾಯಕ ವಸ್ತುವಾದ ಗ್ಲೈಕೋಜನ್ನಿನ ನಾಶವಾಗುತ್ತದಾಗಿ ಶಾರೀರಿಕ ದಣಿವು ಉಂಟಾಗುತ್ತದೆ. ಈ ಕಾರ್ಯಚಟುವಟಿಕೆಯ ಪ್ರಕ್ರಿಯೆಯಲ್ಲಿ, ಗ್ಲೈಕೋಜನ್ನಿನ ಉಪ ಉತ್ಪನ್ನವಾದ ಲ್ಯಾಕ್ಟಿಕ್ ಆಮ್ಲದಿಂದಾಗಿ ಗ್ಲೈಕೋಜನ್ ಸ್ಥಳಾಂತರ ಹೊಂದುತ್ತದೆ. ಹೀಗೆ ಮಾಂಸಖಂಡಗಳಲ್ಲಿ ಶೇಖರವಾದ ಲ್ಯಾಕ್ಟಿಕ್ ಆಮ್ಲ ಅವುಗಳ ಚಟುವಟಿಕೆಯನ್ನು ನಿರೋಧಿಸುತ್ತದೆ. ಆದರೆ ಕಾರ್ಯ ಚಟುವಟಿಕೆ ಬಹಳ ತೀಕ್ಷ್ಣ ಹಾಗೂ ನಿರಂತರವಾಗಿಲ್ಲದಿದ್ದರೆ ಲ್ಯಾಕ್ಟಿಕ್ ಆಮ್ಲ ಶೇಖರವಾಗುವುದಿಲ್ಲ. ಇದರಿಂದಾಗಿ ಕೆಲಸಗಾರ ತನ್ನ ಕೆಲಸವನ್ನು ತೀರ ಹೆಚ್ಚು ವೇಳೆಯವರೆಗೆ ಮುಂದುವರಿಸುವ ಸ್ಥಿತಿಯಲ್ಲಿರುತ್ತಾನೆ.ಮಾನಸಿಕ ದಣಿವು ಒಬ್ಬ ಕೆಲಸಗಾರ ತನ್ನ ಕೆಲಸಕ್ಕೆ ತೋರಿಸುವ ಪ್ರತಿಕ್ರಿಯೆಗೆ ಸಂಬಂಧಿಸಿರುತ್ತದೆ. ನಿರಂತರವಾಗಿ ಕೂಡಿ ಕಳೆವ ಲೆಕ್ಕಾಚಾರದ ಕೆಲಸ ಮಾಡುವುದರಿಂದ ಒಂದೇ ಕೆಲಸವನ್ನು ಎಡೆಬಿಡದೆ ಮಾಡುವುದರಿಂದ ಮಾನಸಿಕ ಆಲಸಿಕೆ ಉಂಟಾಗುತ್ತದೆ. ವ್ಯಕ್ತಿಗೆ ತನ್ನ ಕಸಬಿನಲ್ಲಿ ಅಭಿರುಚಿಯ ಅಭಾವವಿದ್ದಾಗಲೂ ಬೇಸರವುಂಟಾಗುತ್ತದೆ. ಹೆಚ್ಚು ಯಂತ್ರೀಕರಿಸಿದ ಕೆಲವು ಆಧುನಿಕ ಉದ್ಯಮಗಳಲ್ಲಿ ತೊಡಗಿರುವಾಗ ಸಾಕಾದಷ್ಟು ದೈಹಿಕ ಅಥವಾ ಇತರ ಕಾರ್ಯ ಚಟುವಟಿಕೆಗಳು ಇಲ್ಲವಾಗುವುದರಿಂದ ಬೇಸರವುಂಟಾಗುತ್ತದೆ. ಮಾನಸಿಕ ದಣಿವಿನಿಂದ ಬಳಲುತ್ತಿರುವ ಒಬ್ಬ ಕೆಲಸಗಾರನನ್ನು ತನ್ನ ಕೆಲಸವನ್ನು ಮುಂದುವರಿಸುವಂತೆ ಒತ್ತಾಯ ಪಡಿಸಿದಾಗ, ಆತನ ಸಂವೇದಗ್ರಹಣ (ಪರ್‍ಸೆಪ್ಚುಯಲ್) ಮತ್ತು ಭಾವರೂಪ (ಕಾನ್‍ಸೆಪ್ಚುಯಲ್) ಶಕ್ತಿಗಳು ಕ್ಷಯಿಸುತ್ತವೆಯಲ್ಲದೆ ತತ್ಫಲವಾಗಿ ಆತನ ಕೆಲಸದ ಮಟ್ಟ ಕುಂದುತ್ತದೆ.

ಶಾರೀರಿಕ ಮತ್ತು ಮಾನಸಿಕ ದಣಿವು[ಬದಲಾಯಿಸಿ]

ಶಾರೀರಿಕ ಮತ್ತು ಮಾನಸಿಕ ದಣಿವುಗಳ ಮಧ್ಯದ ಸೀಮಾರೇಖೆ ಬಹಳ ತೆಳುವಾಗಿದೆ. ತನ್ನಲ್ಲಿರುವ ಚೈತನ್ಯದ ಕೊನೆಯ ಅಂಶ ಕೆಲಸಕ್ಕಾಗಿ ವಿನಿಯೋಗವಾಗುವುದಕ್ಕಿಂತ ಬಹಳ ಮುಂಚಿತವಾಗಿಯೇ ಕೆಲಸಗಾರ ದಣಿವಿನ ಅನುಭವವನ್ನು ಪಡೆಯಲು ಪ್ರಾರಂಭಿಸುತ್ತಾನೆ. ಮತ್ತೊಂದು ರೀತಿಯಲ್ಲಿ, ಕೆಲಸಗಾರನಿಗೆ ತನ್ನ ಕೆಲಸದತ್ತ ಇರುವ ವಿರುದ್ಧ ಮನೋವೃತ್ತಿ ಶಾರೀರಿಕ ದಣಿವಿನ ಲಕ್ಷಣಗಳನ್ನು ಬೇಗ ಉದ್ರೇಕಗೊಳಿಸಬಹುದು. ವಿಶ್ರಾಂತಿಯಿಂದ ಮಾತ್ರವಲ್ಲದೆ, ಕೆಲವು ಸಂದರ್ಭಗಳಲ್ಲಿ, ಒಬ್ಬನ ಕಾರ್ಯ ಚಟುವಟಿಕೆಯ ರೀತಿಯಲ್ಲಿ ಬದಲಾವಣೆ ಆದಾಗಲೂ ಆತನಿಗೆ ದಣಿವಿನಿಂದ ವಿಮುಕ್ತಿ ದೊರೆಯುತ್ತದೆ. ಚಿಕ್ಕ ಹಾಗೂ ಹಿತಕರವಾದ ಗುಂಪುಗಳಲ್ಲಿ ಕೆಲಸಮಾಡುವುದು, ಒಂಟಿಯಾಗಿ ಕೆಲಸ ಮಾಡುವುದಕ್ಕಿಂತ ಕಡಿಮೆ ದಣಿವನ್ನುಂಟುಮಾಡುತ್ತದೆ.

ದಣಿವಿನ ಮಾಪನ[ಬದಲಾಯಿಸಿ]

ಒಬ್ಬ ಕೆಲಸಗಾರ ಎಷ್ಟು ದಣಿದಿದ್ದಾನೆ ಎಂದು ಅಳೆಯಲು ಉಸಿರಾಡುವಿಕೆಯ ರೀತಿ, ರಕ್ತದ ಒತ್ತಡ, ಮೂತ್ರದಲ್ಲಿರುವ ಅಂಶಗಳು ಮೊದಲಾದ ವಸ್ತುನಿಷ್ಠ ವಿಧಾನಗಳನ್ನು ಉಪಯೋಗಿಸಲಾಗುತ್ತಿದೆ. ಬಡಿಯುವ (ಟ್ಯಾಪಿಂಗ್) ವೇಗ, ಪ್ರತಿಕ್ರಿಯೆಯ ಸುಸಂಘಟನೆ (ಕೋ ಆರ್ಡಿನೇಷನ್), ದೇಹದ ಓಲಾಟ, ಕೈಗಳ ಸ್ಥಿರತೆ ಮತ್ತು ಮಿಣುಕುವುದನ್ನು ಏಕೀಭವಿಸುವುದು (ಫ್ಲಿಕರ್ ಫ್ಯೂಷನ್) ಮೊದಲಾದ ಮಾನಸಿಕ ಪರೀಕ್ಷೆಗಳನ್ನು ಈ ಉದ್ದೇಶಕ್ಕಾಗಿ ಈಚೆಗೆ ಬಳಸಲಾಗುತ್ತದೆ. ಆದರೆ, ಕೆಲಸಗಾರನಿಗೆ ದಣಿವನ್ನುಂಟುಮಾಡುತ್ತಿರುವ ಚಟುವಟಿಕೆಗಳನ್ನು ಬಿಟ್ಟು ಬೇರೆಯವನ್ನು ಅವಲಂಬಿಸಲು ಮಾನಸಿಕ ಪರೀಕ್ಷೆಗಳು ಸಹಾಯಮಾಡುತ್ತವಾದರೂ ದಣಿವನ್ನು ಮಾಪನ ಮಾಡುವುದರಲ್ಲಿ ಅವುಗಳ ಉಪಯುಕ್ತತೆ ಅಷ್ಟಕ್ಕಷ್ಟೆ. ಅನೇಕ ವ್ಯಾವಹಾರಿಕ ಉದ್ದೇಶಗಳಿಗಾಗಿ, ಕೆಲಸಗಾರನ ಗಂಟೆ ಗಂಟೆಯ ಉತ್ಪನ್ನದ ಆಧಾರದ ಮೇಲೆ ರಚಿತವಾದ ಕೆಲಸದ ರೇಖೆ(ವರ್ಕ್ ಕರ್ವ್), ಕೆಲಸದ ವಿವಿಧ ಹಂತಗಳಲ್ಲಿ ಉಂಟಾಗುವ ದಣಿವಿನ ಪ್ರಮಾಣವನ್ನು ನಿರ್ಧರಿಸಲು ಸಮರ್ಪಕ ಅಳತೆಗೋಲು ಎಂದು ಸಿದ್ಧವಾಗಿದೆ.

ಕೆಲಸ ಯೋಗ್ಯ[ಬದಲಾಯಿಸಿ]

ಕೆಲಸ ಯೋಗ್ಯವಾದುದಾಗಿದ್ದು ಕೆಲಸಗಾರ ಆರೋಗ್ಯ ದೃಢಕಾಯನಾಗಿದ್ದಲ್ಲಿ ಕೆಲಸದ ರೇಖೆ ನಿಧಾನವಾಗಿ ಮೇಲೇರುತ್ತ ಹೋಗಿ ದಕ್ಷತೆಯ ಪರಮಾವಧಿಯನ್ನು ಮುಟ್ಟಿದಾಗ ಅದೇ ನಿಲವಿನಲ್ಲಿ ಸ್ವಲ್ಪಕಾಲ ನಿಂತು ಅನಂತರ ಆಯಾಸಮೊದಲಾದಂತೆ ಇಳಿಮುಖವಾಗತೊಡಗುತ್ತದೆ. ಕೆಲಸ ಬೇಸರ ತರುವಂಥದಾಗಿದ್ದಲ್ಲಿ ಕೊನೆಕೊನೆಗೆ ರೇಖೆ ಏರುಮುಖವಾಗುವುದನ್ನು ಕಾಣಬಹುದು.ಕಾರ್ಯದ ಅವಧಿಗಳು ಮತ್ತು ವಿಶ್ರಾಂತಿಯ ಅಂತರಗಳು ; ಉದ್ಯಮದಲ್ಲಿ ಕಾರ್ಯದ ಅವಧಿಗಳು ಮತ್ತು ಅವುಗಳ ವಿತರಣೆಗಳಿಗೂ ದಣಿವಿಗೂ ನಿಕಟ ಸಂಬಂಧವಿದೆ. ಒಬ್ಬ ಕೆಲಸಗಾರ ಒಂದು ಗಂಟೆಯಲ್ಲಿ ಗೊತ್ತಾದ ಕಾರ್ಯದ ಒಂದು ಭಾಗವನ್ನು ಮಾಡಿ ಮುಗಿಸುವುದಾದರೆ, ಹದಿನಾರು ಗಂಟೆಗಳಲ್ಲಿ ಅಂಥ ಹದಿನಾರು ಕಾರ್ಯಭಾಗಗಳನ್ನು ಪೂರ್ಣಗೊಳಿಸುತ್ತಾನೆ-ಎಂಬ ನಂಬಿಕೆ ಒಂದನೆಯ ಮಹಾಯುದ್ಧಕ್ಕೆ ಮುಂಚೆ ಇತ್ತು. ಆದ್ದರಿಂದ ಕೆಲಸಗಾರನಿಗೆ ಎಡೆಬಿಡದೆ ಅನೇಕ ಗಂಟೆಗಳ ಕಾಲ ಕೆಲಸ ಕೊಡಲಾಗುತ್ತಿತ್ತು. ಆದರೆ ಒಂದು ಮಿತಿಯನ್ನು ಮೀರಿ ಮುಂದುವರಿಸುವ ಕೆಲಸದಿಂದ ಅವ್ಯವಸ್ಥೆಯುಂಟಾಗುತ್ತದಲ್ಲದೆ ಅಪಘಾತಗಳೂ ರೋಗ ಮತ್ತು ಗೈರು ಹಾಜರಿಗಳೂ ಹೆಚ್ಚುತ್ತವೆಂದು ಈಚಿನ ಸಂಶೋಧನೆಗಳು ತೋರಿಸಿಕೊಟ್ಟಿವೆ. ಇಂದು ಬಹುಶಃ ಎಲ್ಲ ಕಾರ್ಯ ಕ್ಷೇತ್ರಗಳಲ್ಲೂ ಕೆಲಸದ ಅವಧಿ ಹೆಚ್ಚು ಕಡಿಮೆ ದಿನಕ್ಕೆ ಎಂಟು ಗಂಟೆಗಳೆಂದು ವಿಧಿ ಇದ್ದರೂ ಮಧ್ಯೆ ಮಧ್ಯೆ ಸೂಕ್ತ ವಿಶ್ರಾಂತಿ ಇದ್ದೇ ಇರುತ್ತದೆ. ಎಡೆಬಿಡದೆ ದೀರ್ಘಾವಧಿ ಕೆಲಸ ಮಾಡಲು ಸಾಧ್ಯವಿಲ್ಲ ಎಂಬುದನ್ನು ಸಂಶೋಧನೆಗಳು ಸ್ಥಿರಪಡಿಸಿವೆ. ಕೆಲಸಗಾರರು ಕಾರ್ಯದ ಸ್ವಭಾವವನ್ನನುಸರಿಸಿ, ತಮ್ಮ ಕೆಲಸದ ಒಂದು ಗಂಟೆಯ ಅವಧಿಯಲ್ಲಿ 3 ರಿಂದ 15 ನಿಮಿಷಗಳ ವೇಳೆಯನ್ನು ಸುಮ್ಮನೆ ಕಳೆಯುತ್ತಿದ್ದುದನ್ನು ಪತ್ತೆ ಮಾಡಲಾಗಿದೆ. ಆದರೆ ಈ ವಿಧವಾದ ಅನೈಚ್ಛಿಕ ವಿಶ್ರಾಂತಿಗಳಿಂದ ಕೆಲಸಗಾರರಿಗೆ ಸಾಕಷ್ಟು ಉಪಯೋಗ ಕಂಡುಬರುವುದಿಲ್ಲ. ಸರಿಯಾಗಿ ನಿಯಮಿಸಲ್ಪಟ್ಟ, ಅಧಿಕೃತ ವಿಶ್ರಾಂತಿ ವೇಳೆಗಳಿದ್ದಲ್ಲಿ ಕೆಲಸಗಾರರಿಗೂ ಮಾಲೀಕರಿಗೂ ಹಿತ, ಲಾಭದಾಯಕ, ಒಂದು ಉದ್ಯಮದಲ್ಲಿ ಸ್ಥಾನೀಕರಣ (ಪ್ಲೇಸ್‍ಮೆಂಟ್) ಮತ್ತು ವಿಶ್ರಾಂತಿ ವೇಳೆಗಳ ಅವಧಿಗಳು ಕೆಲಸದ ರೇಖೆಯ ಸಹಾಯದಿಂದ ನಿರ್ಧರಿಸಲ್ಪಡುತ್ತವೆ.ದಕ್ಷತೆ ಇಳಿಮುಖವಾಗುವುದಕ್ಕೆ ಸ್ವಲ್ಪ ಮುಂಚಿತವಾಗಿ ಕೊಟ್ಟಾಗ ವಿರಾಮ ವೇಳೆ ಹೆಚ್ಚು ಅನುಕೂಲಕರವಾಗಿ ಪರಿಣಮಿಸುತ್ತದೆ. ಒಬ್ಬ ಕೆಲಸಗಾರ ತನ್ನ ವಿರಾಮವೇಳೆಯ ಆರಂಭದಲ್ಲಿ ಶೀಘ್ರವಾಗಿ, ದಣಿವಿನಿಂದ ಚೇತರಿಸಿಕೊಳ್ಳುತ್ತಾನೆ. ಆದರೆ ಸಹಜಸ್ಥಿತಿಗೆ ಬರುವುದಕ್ಕೆ ಉಳಿದೆಲ್ಲ ವೇಳೆಯನ್ನೂ ಉಪಯೋಗಿಸಿಕೊಳ್ಳುತ್ತಾನೆ. ಆದ್ದರಿಂದ ಸಾಧ್ಯವಾದಷ್ಟು ಮಟ್ಟಿಗೆ ಕೆಲಸಗಾರ ದಣಿವಿನಿಂದ ವಿಮುಕ್ತಿ ಹೊಂದಲು ವಿಶ್ರಾಂತಿವೇಳೆ ನೆರವಾಗಬೇಕು ಎಂಬ ತಥ್ಯಾಂಶವನ್ನು ಗಮನದಲ್ಲಿಟ್ಟುಕೊಂಡು, ಅದರ ಅವಧಿಯನ್ನು ನಿರ್ಧರಿಸಬೇಕು.

ಪೂರ್ಣ ಸ್ವಾತಂತ್[ಬದಲಾಯಿಸಿ]

ಈಚೆಗೆ ಹೊಸವಿಧಾನವೊಂದನ್ನು ಪರೀಕ್ಷಿಸಿ ನೋಡಲಾಗುತ್ತಿದೆ. ಒಬ್ಬ ಕೆಲಸಗಾರ ನಿಗದಿಯಾಗಿರುವಂತೆ ದಿನಕ್ಕೆ ಎಂಟು ಅಥವಾ ಹತ್ತು ಗಂಟೆ ಕೆಲಸ ಮಾಡಬೇಕಾಗುತ್ತದಷ್ಟೆ. ಅವನು ಎಷ್ಟು ಹೊತ್ತಿಗೆ ಬಂದ, ಯಾವಾಗ ವಿಶ್ರಾಂತಿ ಪಡೆದ ಇತ್ಯಾದಿಗಳನ್ನು ವೇಳಾಪಟ್ಟಿಯಂತೆ ಗಮನಿಸದೆ ಅವನಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟು ನೋಡುವುದು. ಅವನು ದಿನದಲ್ಲಿ ಎಷ್ಟು ಪರಿಮಾಣ ಕೆಲಸ ನಿರ್ವಹಿಸಿದ್ದಾನೆ ಎಂಬುದನ್ನು ಮಾತ್ರ ಆಡಳಿತ ವರ್ಗ ಗಮನಿಸಿ ನೋಡಿದರಾಯಿತು. ಇಂಥ ಕ್ರಮವನ್ನು ಕೆಲವು ಕ್ಷೇತ್ರಗಳಲ್ಲಿ ಬಳಕೆಗೆ ತಂದಾಗ ಉತ್ತಮ ಪ್ರತಿಫಲ ಸಿಕ್ಕಿದೆಯೆಂದು ತಿಳಿದು ಬಂದಿದೆ. ಪೂರ್ಣಸ್ವಾತಂತ್ರ್ಯ ಕೊಡುವುದರಿಂದ ಇಲ್ಲಿ ಕೆಲಸಗಾರನಿಗೆ ಪೂರ್ಣ ಮಾನಸಿಕ ನೆಮ್ಮದಿ ಸಿಕ್ಕಿದಂತಾಗುತ್ತದೆ. ಆದರೆ ಇದರಿಂದ ಅವನ ಜವಾಬ್ದಾರಿ ಏನೂ ಕಡಿಮೆಯಾಗುವುದಿಲ್ಲ.

ಪರಿಸರಕ್ಕೆ ಸಂಬಂಧಿಸಿದ ಅಂಶಗಳು[ಬದಲಾಯಿಸಿ]

ಒಂದು ಉದ್ಯಮದಲ್ಲಿ ಒಬ್ಬ ಕೆಲಸಗಾರನ ಮೇಲೆ ದಣಿವಿನ ಆಕ್ರಮಣವನ್ನು ತೀವ್ರಗೊಳಿಸುವ ಕೆಲವು ಮೂಲಾಂಶಗಳಿವೆ. ಉಷ್ಣತೆ, ಆದ್ರ್ರತೆ, ವಾಯುಚಲನೆ, ಅಸಮಂಜಸ ಬೆಳಕು ಮತ್ತು ಗದ್ದಲ ಮೊದಲಾದ ಪರಿಸರ ಸ್ಥಿತಿಗಳು ಕೆಲಸಗಾರನ ದಣಿವಿನ ಮೂಲಗಳು. ಅವನ್ನು ಸರಿಪಡಿಸಿದಾಗ ಕೆಲಸಗಾರನ ಆರೋಗ್ಯ ಹೆಚ್ಚಿ ಕೆಲಸ ಚೆನ್ನಾಗಿ ನಡೆಯುತ್ತದೆ. ಉದ್ಯಮ ಎಂಥದು, ಯಾವ ಪರಿಸರದಲ್ಲಿ ಇದೆ-ಎಂಬ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಅಲ್ಲಿನ ವಾತಾವರಣ ಹೇಗಿರಬೇಕೆಂಬುದನ್ನು ನಿರ್ಧರಿಸಬೇಕಾಗುತ್ತದೆ. ಬಿಸಿ ಹಾಗೂ ಆದ್ರ್ರವಾಯುಗುಣವುಳ್ಳ, ಕಲ್ಕತ್ತೆಯ ಸಮೀಪದಲ್ಲಿರುವ ಉದ್ಯಮ ಕ್ಷೇತ್ರಗಳಿಗೆ ನೆಮ್ಮದಿಯ ಪರಿಮಿತಿ 68 ಡಿಗ್ರಿಯಿಂದ 76.5 ಡಿಗ್ರಿ ಫ್ಯಾ. ವರೆಗಿನ ಪರಿಣಾಮಕಾರಿ ಉಷ್ಣತೆಯ ನಡುವೆ ಇರುತ್ತದೆಯೆಂಬುದನ್ನು ಗುರುತಿಸಲಾಗಿದೆ. ಕೆಳಮಟ್ಟದ ಆದ್ರ್ರತೆ ಮತ್ತು ಹೆಚ್ಚಿನ ವಾಯುವೇಗ- ಇವೆರಡೂ ಕೆಲಸಗಾರನ ದೇಹದಲ್ಲಿ ಆಗುವ ಬಿಸಿಯ ನಷ್ಟದ ವೇಗವನ್ನು ಹೆಚ್ಚಿಸುತ್ತದೆ. ಅದನ್ನು ಸಮತೂಕದಲ್ಲಿಡಲು, ಉಷ್ಣತೆಯನ್ನು ನಿಯಂತ್ರಿಸುವ ಇತರ ಸಲಕರಣೆಗಳ ಜೊತೆಗೆ, ಕೆಲವು ಉದ್ಯಮಗಳ ಕಾರ್ಮಿಕರು ಸೂಕ್ತವಾದ ಉಡುಪುಗಳನ್ನು ಉಪಯೋಗಿಸುವಂತೆ ಸಲಹೆ ಮಾಡಲಾಗಿದೆ.[೨]

ಸೂಕ್ಷ್ಮ ಪರಿಶೀಲನೆಯ ಅವಶ್ಯಕತೆ[ಬದಲಾಯಿಸಿ]

ಸೂಕ್ಷ್ಮ ಪರಿಶೀಲನೆಯ ಅವಶ್ಯಕತೆ ಇರುವ ಕಸಬುಗಳಿಗೆ ಹೆಚ್ಚೆಂದರೆ 400 ಫುಟ್‍ಕ್ಯಾಂಡಲ್‍ಗಳನ್ನು (ಪ್ರಕಾಶಮಾನವಾದ ಹಗಲು ಬೆಳಕಿಗೆ ಸಮವಾದುದು) ಉಪಯೋಗಿಸಿ ಅದು ಸಮರ್ಪಕವಾಗಿದ್ದುದನ್ನು ಗುರುತಿಸಿದ್ದಾರಾದರೂ ಕಾರ್ಯಸ್ಥಾನದಲ್ಲಿ15-20 ಫುಟ್ ಕ್ಯಾಂಡಲ್‍ಗಳ ಬೆಳಕಿನಿಂದ ದಣಿವು ಇನ್ನೂ ಕಡಿಮೆಯಾಗುತ್ತದೆ ಎಂಬುದನ್ನೂ ಪತ್ತೆ ಮಾಡಿದ್ದಾರೆ. ಫ್ಲೂರೊಸೆಂಟ್ ಅಥವಾ ಪಾದರಸದ ಹಬೆಯ ದೀಪಗಳಿಂದ ಪಡೆದ ಬೆಳಕು ಉತ್ತಮವಾಗಿರುತ್ತದೆ. ಅದಕ್ಕೆ ಕಾರಣ, ಅದು ವ್ಯಾಪಿಸಿದ ಬೆಳಕನ್ನು ಬೀರುವುದಲ್ಲದೆ ಅತಿ ತೀಕ್ಷ್ಣ ಪ್ರಭೆಯನ್ನು ತಪ್ಪಿಸುತ್ತದೆ. ಗೋಡೆಗಳಿಗೆ ಸಮರ್ಪಕವಾದ ಬಣ್ಣಗಳನ್ನು ಬಳಿಯುವುದು ಮತ್ತು ಕಿಟಕಿಗಳು ಹಾಗೂ ಕಾರ್ಖಾನೆಯ ವಿಸ್ತಾರದಲ್ಲಿ ಹಗಲು ಬೆಳಕನ್ನು ಪಡೆಯಲು ಸಹಕಾರಿಗಳಾದ ಇತರ ಮೂಲಗಳನ್ನು ನಿಯಮಬದ್ಧವಾಗಿ ಸ್ವಚ್ಛಗೊಳಿಸುವುದು-ಇವುಗಳಿಂದ ಕೂಡ ಹೆಚ್ಚಿನ ಅನುಕೂಲ ಉಂಟು. ಪರಿಸರದಲ್ಲಿ ಉಂಟಾಗುವ ಗದ್ದಲದ ಪರಿಣಾಮ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಬೇರೆ ಬೇರೆಯಾಗಿರಬಲ್ಲುದಾದರೂ ಸುತ್ತಮುತ್ತ ಮಧ್ಯೆ ಮಧ್ಯೆ ಉಂಟಾಗುವ ಜೋರಾದ ಗದ್ದಲ, ಕರ್ಕಶ ಶಬ್ದ ಅಥವಾ ಕಿರಿಚಾಟಗಳು ಯಾವ ಕೆಲಸಗಾರನಿಗಾದರೂ ತ್ರಾಸದಾಯಿಗಳಾಗಿ ಶೀಘ್ರವಾಗಿ ಆತನನ್ನು ಬಳಲಿಸುತ್ತವೆ. ಕೆಲಸಗಾರನ ಕಿವಿ ತಲಪುವ ಗದ್ದಲದ ಬಹು ಪಾಲು ಗೋಡೆ ಮತ್ತು ಮಾಳಿಗೆಯ ಒಳಮೈಗಳಿಂದ ಪ್ರತಿಧ್ವನಿತವಾಗುವುದರಿಂದ ಶಬ್ದದ ಅಲೆಗಳನ್ನು ಹೀರಿಕೊಳ್ಳುವಂಥ ತಡಿಕೆಗಳಿಂದ ಅವನ್ನು ಮುಚ್ಚುವುದು ಉಪಯುಕ್ತವಾಗಿ ಕಂಡುಬಂದಿದೆ.

ಮಾನವ-ಯಂತ್ರ ಹೊಂದಾಣಿಕೆ[ಬದಲಾಯಿಸಿ]

ಒಂದು ಉದ್ಯಮದಲ್ಲಿ ಉತ್ಕøಷ್ಟ ಫಲವನ್ನು ನಡೆಯಬೇಕಾದರೆ ಮಾನವ(ಕೆಲಸಗಾರ) ಮತ್ತು ಯಂತ್ರಗಳ ನಡುವೆ ಸುಸಂಗತ ಹೊಂದಾಣಿಕೆ ಇರುವುದು ಅತ್ಯಾವಶ್ಯಕ. ವೇಗವಾಗಿ ನಡೆಯುವ ಯಂತ್ರಗಳನ್ನು ನಿಭಾಯಿಸಲಾರದ ಕೆಲಸಗಾರ ಶೀಘ್ರವಾಗಿ ದಣಿಯುತ್ತಾನೆ. ಆದ್ದರಿಂದ ಕೆಲಸಕ್ಕೆ ಯುಕ್ತನಾದ ಮನುಷ್ಯನನ್ನು ಆರಿಸಿಕೊಳ್ಳುವ ಅವಶ್ಯಕತೆ ಬಹಳ ಮುಖ್ಯವಾದ್ದು. ಇದರಂತೆಯೇ ಒಂದು ಕೆಲಸ ಮಾಡುವಾಗ ಕೆಲಸಗಾರ ಮಾಡುವ ನಿರುಪಯುಕ್ತ ಚಲನೆಗಳು ಮತ್ತು ತೊಡಕಾದ ದೇಹ ಭಂಗಿಗಳು ಅವನ ಚೈತನ್ಯವನ್ನು ಪೋಲು ಮಾಡುತ್ತವೆ. ಆದ್ದರಿಂದ ಒಂದು ಕೆಲಸವನ್ನು ಸಮರ್ಪಕವಾಗಿ ಮಾಡಲು ದೊರೆಯಬೇಕಾದ ತರಬೇತಿಯ ಪ್ರಾಮುಖ್ಯವನ್ನು ಹೆಚ್ಚು ಒತ್ತಿ ಹೇಳಬೇಕಾಗಿಲ್ಲ. ಯಂತ್ರಸ್ಥಿರಾಂಶ, ಮನುಷ್ಯ ಚರಾಂಶಗಳೆಂಬ ಮನುಷ್ಯನ ದೇಹದ ರಚನೆ, ಕೆಲಸದ ವೈಖರಿ, ಮಾನಸಿಕ ಶಕ್ತಿ ಸಾಮಥ್ರ್ಯಗಳು-ಇವೆಲ್ಲವಕ್ಕೂ ಹೊಂದಿಕೊಳ್ಳುವಂಥ ಹೊಸ ಹೊಸ ಯಂತ್ರಗಳನ್ನು ಈಚೆಗೆ ನಿರ್ಮಿಸುತ್ತಿದ್ದಾರೆ. ಇದರಿಂದಾಗಿ, ಹಿಂದಿನ ಕಾಲದಲ್ಲಿ ಯಂತ್ರಗಳಿಂದಾಗಿ ಮನುಷ್ಯ ಅಗತ್ಯವಾಗಿ ಅನುಭವಿಸಬೇಕಾಗಿದ್ದ ಅನೇಕ ತೊಂದರೆಗಳು ತಪ್ಪುವಂತಾಗಿವೆ.

ಉಲ್ಲೇಖಗಳು[ಬದಲಾಯಿಸಿ]

  1. http://www.prajavani.net/news/article/2011/07/05/29604.html[ಶಾಶ್ವತವಾಗಿ ಮಡಿದ ಕೊಂಡಿ]
  2. http://www.livefromlockdown.com/kn/tag/gangland/page/4/[ಶಾಶ್ವತವಾಗಿ ಮಡಿದ ಕೊಂಡಿ]