ವಿಷಯಕ್ಕೆ ಹೋಗು

ಕೃಷಿ ವಿದ್ಯೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೊಲದ ಸಾಗುವಳಿಯಿಂದ ಪೈರಿನ ಉತ್ಪಾದನೆ ಹಾಗು ಮಣ್ಣಿನ ರಕ್ಷಣೆಯನ್ನು ಅಭ್ಯಸಿಸುವ ಕೃಷಿವಿಭಾಗ (ಅಗ್ರಾನಮಿ). ಇದರಲ್ಲಿ ಅಡಕವಾಗಿರುವ ಇತರ ಶಾಸ್ತ್ರವಿಭಾಗಗಳು ಪ್ರಧಾನವಾಗಿ ಕೃಷಿಸಸ್ಯಶಾಸ್ತ್ರ, ಕೃಷಿರಸಾಯನಶಾಸ್ತ್ರ, ಕೀಟಶಾಸ್ತ್ರ, ಕೃಷಿಶಿಲ್ಪ ಇತ್ಯಾದಿ. ಸಸ್ಯದ ಮತ್ತು ಭೂಮಿಯ ವ್ಯಾಸಂಗವನ್ನು ಆಧರಿಸಿ ಕೃಷಿವಿದ್ಯೆಯಲ್ಲಿ ಸಸ್ಯಕೃಷಿ ಮತ್ತು ಭೂಮಿಕೃಷಿ ಎಂಬ ಎರಡು ಭಾಗಗಳಿವೆ.


ಭೂಮಿ ಕೃಷಿ[ಬದಲಾಯಿಸಿ]

ಉತ್ತು ಭೂಮಿಯನ್ನು ಸಡಿಲ ಮಾಡುವುದು ಭೂಮಿಕೃಷಿಯ ಮೊದಲ ಹಂತ. ಗೊಬ್ಬರಗಳ ಹಾಗೂ ರಾಸಾಯನಿಕ ಗೊಬ್ಬರಗಳ ಪಾತ್ರ ಇಲ್ಲಿ ಹಿರಿದಾಗಿದೆ. ಬೆಳೆ ಎತ್ತಲು ಬೇಕಾದ ನೀರನ್ನು ಭೂಮಿಗೆ ಒದಗಿಸುವುದರ ಜೊತೆಗೆ ನೀರಿನ ಹೆಚ್ಚಿನ ಪ್ರವಾಹದಿಂದ ನೆಲದ ಸಾರ ತೊಳೆದು ಹೋಗದಂತೆ ಎಚ್ಚರವನ್ನು ವಹಿಸುವುದು ಅಗತ್ಯ. ಹವೆಯ ವ್ಯತ್ಯಾಸಗಳು ಭೂಮಿಕೃಷಿಯ ಮೇಲೆ ಮಾಡುವ ಪರಿಣಾಮಗಳು ಮತ್ತು ಅವುಗಳಿಗೆ ಪರಿಹಾರಗಳು ರೈತನಿಗೆ ತಿಳಿದಿರಬೇಕು.ಸಸ್ಯ ಕೃಷಿ: ಉತ್ತಮ ತಳಿಯ ಬೀಜಗಳ ಆಯ್ಕೆ, ಬಿತ್ತುವುದರಲ್ಲಿ ವೈಜ್ಞಾನಿಕ ವಿಧಾನದ ಅನುಸರಣೆ ಹಾಗೂ ಯಂತ್ರಗಳ ಉಪಯೋಗ, ಬೆಳೆಯ ಆವರ್ತನೆ ಇವೆಲ್ಲವೂ ಈ ವಿಭಾಗದಲ್ಲಿ ಬರುತ್ತವೆ. ರೋಗ, ಕೀಟ ಮತ್ತು ಕಳೆಗಳ ನಿವಾರಣೆಯನ್ನು ಸಮರ್ಪಕವಾಗಿ ಕೈಗೊಳ್ಳಬೇಕು. ಬೀಜಗಳ ತಳಿಸುಧಾರಣೆಯೂ ಅಗತ್ಯ.

ಮಿಶ್ರ ವ್ಯವಸಾಯ[ಬದಲಾಯಿಸಿ]

ಒಂದೇ ಭೂ ಹಿಡುವಳಿಯಲ್ಲಿ ಹಲವಾರು ವಿಧದ ಕೃಷಿ ಉತ್ಪಾದನೆಗಳನ್ನು ಏಕಕಾಲದಲ್ಲಿ ಕೈಗೊಳ್ಳುವುದು. ಉದಾಹರಣೆಗೆ, ಒಂದೇ ಜಮೀನಿನಲ್ಲಿ ಗೋಧಿ, ಬಾರ್ಲಿ, ಆಲೂಗೆಡ್ಡೆ, ಓಟ್ಸ್ ಮೊದಲಾದ ಬೆಳೆಗಳನ್ನು ಏಕಕಾಲದಲ್ಲಿ ಎತ್ತುವ ವಿಧಾನ. ರಾಗಿ, ಹುರುಳು ಫಸಲು; ಅಚ್ಚೆಳ್ಳು, ಹುರುಳಿ, ಹೊಗೆ ಸೊಪ್ಪು ಫಸಲು; ಅಲಸಂದೆ, ಹೆಸರು, ಅವರೆ ಫಸಲು; ಅಡಿಕೆ, ತೆಂಗು, ವೀಳ್ಯದೆಲೆ, ಬಾಳೆ, ಕಾಳು ಮೆಣಸು ಫಸಲು-ಇವೇ ಮುಂತಾದವು ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಮಿಶ್ರವ್ಯವಸಾಯದ ಉದಾಹರಣೆಗಳು. ಮಿಶ್ರ ವ್ಯವಸಾಯದ ಕ್ರಮದಲ್ಲಿ ಸ್ಥೂಲವಾಗಿ ಮೂರು ವಿಭಾಗಗಳಿವೆ : 1. ತರೀ ಜಮೀನಿನಲ್ಲಿ ಅನುಸರಿಸುವ ಮಿಶ್ರ ವ್ಯವಸಾಯ. 2. ಖುಷ್ಕಿ ಜಮೀನಿನಲ್ಲಿ ಅನುಸರಿಸುವ ಮಿಶ್ರ ವ್ಯವಸಾಯ, 3. ತೋಟಗಳಲ್ಲಿ ಅನುಸರಿಸುವ ಮಿಶ್ರ ವ್ಯವಸಾಯ.

ಉಪಯೋಗಗಳು[ಬದಲಾಯಿಸಿ]

1. ಹಿಡುವಳಿಯ ಫಲವಂತಿಕೆ ಹಿಂಗುವುದಿಲ್ಲ. ಆದ್ದರಿಂದ ದೀರ್ಘಕಾಲ ಲಾಭದಾಯಕವಾಗಿ ಉತ್ಪನ್ನಗಳನ್ನು ಪಡೆಯುತ್ತಿರಬಹುದು. 2. ಕೀಟಗಳಿಂದಲೂ ಸಸ್ಯರೋಗಗಳಿಂದಲೂ ಒದಗುವ ನಷ್ಟವನ್ನು ಕಡಿಮೆ ಮಾಡಬಹುದು. 3. ಕಳೆಗಳ ಮೇಲೆ ಹೆಚ್ಚಿನ ಹತೋಟಿ ಸಾಧ್ಯ. 4. ಉಪೋತ್ಪನ್ನಗಳು ಒದಗಿಸುವ ಲಾಭ.

ಬಂಜರುಭೂಮಿಗಳ ಸಾಗುವಳಿ[ಬದಲಾಯಿಸಿ]

ಸಾಗುವಳಿ ಆಗದೇ ಇರುವ ಅಥವಾ ಕನಿಷ್ಠ ಬೆಳೆ ಕೊಡುವ ಭೂಮಿಗಳ ಕೃಷಿ. ಇವುಗಳಲ್ಲಿ ಸಾಗುವಳಿ ಮಾಡಲು ಯೋಗ್ಯವಾಗಿರುವ ಭೂಮಿಯನ್ನು ದೇಶದ ಅವಶ್ಯಕತೆಗೆ ಅನುಸಾರವಾಗಿ ನೇಗಿಲಿನ ಅಡಿಯಲ್ಲಿ ತರುವುದು ಅವಶ್ಯ. ಭಾರತದಲ್ಲಿ ಇಂಥ ಭೂಮಿ ಸುಮಾರು 40.5 ದಶಲಕ್ಷ ಎಕರೆಗಳೆಂದು (1960-61) ಅಂದಾಜು ಮಾಡಿದ್ದಾರೆ. ಬಂಜರು ಭೂಮಿಗಳನ್ನು ಮುಖ್ಯವಾಗಿ ಐದು ಭಾಗಗಳಾಗಿ ವಿಂಗಡಿಸಲಾಗಿದೆ ; 1. ಕರಿಕೆ ಕಣಿಗಲುಗಳಿಂದ ಬೀಳಾದವು, 2. ಅತಿ ತೇವಪೂರಿತ ಮತ್ತು ವಾಸಿಸಲು ಸಾಧ್ಯವಿಲ್ಲದಂಥ ಪ್ರದೇಶಗಳು, 3. ಮಣ್ಣು ಕೊಚ್ಚಿಹೋದ ಬಡ ಮತ್ತು ಉಸುಕು ಭೂಮಿಗಳು, 4. ಉಪ್ಪು ಭೂಮಿಗಳು, 5. ಸಮುದ್ರ ದಂಡೆಯಲ್ಲಿರುವಂಥ ಗಝನೀ (ಖಾರ್) ಬೀಳುಭೂಮಿಗಳು.ಕಂತೆ ಕಣಿಗಲುಗಳುಳ್ಳ ಬಂಜರು ಭೂಮಿಗಳನ್ನು 12”-14” ಆಳವಾಗಿ ಟ್ರಾಕ್ಟರುಗಳ ಸಹಾಯದಿಂದ ರಂಟೆ ಹೊಡೆದು ಸಾಗುವಳಿ ಮಾಡುವುದು ಸಾಧ್ಯ. ಅತಿ ತೇವ ಹಿಡಿದ ಪ್ರದೇಶಗಳಲ್ಲಿ ಗಿಡಗಳನ್ನು ಮಾರಿಹಲುಬೆಯ (ಬುಲ್‍ಡೋಜûರ್) ಸಹಾಯದಿಂದ ತೆಗೆದು ಅವನ್ನು ಸುಧಾರಿಸಿ ವಸತಿಗಳನ್ನು ಪುನಃ ನಿರ್ಮಿಸಬಹುದು. ಮಣ್ಣುಕೊಚ್ಚಿಹೋದ ಮತ್ತು ಆಳವಾದ ಕೊರಕಲುಗಳುಳ್ಳ ಬೀಳುಭೂಮಿಗಳ ಸುಧಾರಣೆ ಮಣ್ಣು ತಡೆ ಹಿಡಿಯುವ ಅನೇಕ ವಿಧಾನಗಳ ಮೂಲಕ ಮಾಡಬಹುದು. ಉಪ್ಪು ಬಂಜರು ಭೂಮಿಗಳ ಸುಧಾರಣೆಯನ್ನು ಕಡಿಮೆ ಮಳೆಯಾಗುವ ಪ್ರದೇಶಗಳಲ್ಲಿ ಎರಡು ವಿಧಾನದಿಂದ ಮಾಡಬಹುದು : 1. ಉಪ್ಪು ಬಸಿದುಹೋಗುವಂತೆ ಭೂಮಿಗೆ ಹೆಚ್ಚು ನೀರುಣ್ಣಿಸಿ ಆ ನೀರನ್ನು ಬಸಿಗಾಲುವೆಗಳಿಂದ ಹೊರಗೆಡಹುವುದು, 2. ಗಂಧಕ ಮತ್ತು ಜಿಪ್ಸಮ್ ಎಂಬ ರಾಸಾಯನಿಕ ವಸ್ತುಗಳಿಂದ ಭೂಮಿಯಲ್ಲಿಯ ಉಪ್ಪಿನ ಅಂಶವನ್ನು ಹೋಗಲಾಡಿಸುವುದು. ಸಮುದ್ರದ ದಂಡೆಗಿರುವ ಗಝನಿ ಬೀಳು ಭೂಮಿಗಳನ್ನು ಒಡ್ಡು ಮತ್ತು ಮೋರಿಗಳಿಂದ ಕಟ್ಟಿ ಸಮುದ್ರದ ನೀರನ್ನು ತಡೆಹಿಡಿದು ಅವುಗಳಲ್ಲಿ ಉಪ್ಪಿನ ಅಂಶವನ್ನು ಸಹಿಸಲಿಕ್ಕೆ ಬತ್ತ ಬೆಳಸಬೇಕು. ಇಂಥ ಬಂಜರು ಭೂಮಿಗಳನ್ನು ಸುಧಾರಿಸಿ ಒಕ್ಕಲತನದ ಹುಟ್ಟವಳಿಯನ್ನು ಹೆಚ್ಚಿಸಲು ಅವಕಾಶವಿದೆ.[೧]

ಜೀವನಾಧಾರ ಮತ್ತು ವಾಣಿಜ್ಯ ವ್ಯವಸಾಯ[ಬದಲಾಯಿಸಿ]

ಕೃಷಿಯನ್ನು ಕೈಗೊಳ್ಳುವ ಉದ್ದೇಶವನ್ನು ಅನುಸರಿಸಿ ತಲೆದೋರುವ ಎರಡು ವಿಭಾಗಗಳು. ಒಬ್ಬ ಬೇಸಾಯಗಾರ ತನ್ನ ಹಿಡುವಳಿಯಲ್ಲಿ ಬೇಸಾಯವನ್ನು ಸ್ವಪೋಷಣೆಗೋಸ್ಕರ ಮಾಡಿದಾಗ ಅದು ಜೀವನಾಧಾರ ವ್ಯವಸಾಯವಾಗುತ್ತದೆ. ಇದರ ಬದಲು ತನ್ನ ವ್ಯವಸಾಯಿಕೋತ್ಪನ್ನಗಳನ್ನು ಮಾರಾಟಮಾಡಬೇಕು ಎಂಬ ಉದ್ದೇಶ ಪ್ರಚೋದಿತ ಸಾಗುವಳಿ ವಾಣಿಜ್ಯ ವ್ಯವಸಾಯವಾಗುತ್ತದೆ. ಪ್ರಪಂಚದ ಜನಜೀವನದ ಸಂಕೀರ್ಣಗೊಂಡಂತೆ ವಾಣಿಜ್ಯ ವ್ಯವಸಾಯ ಮೈದಳೆದು ಇಂದಿನ ಅಸ್ತಿತ್ವವನ್ನು ಪಡೆದಿದೆ. ಜೀವನಾಧಾರ ವ್ಯವಸಾಯ ಕೈಗೊಳ್ಳುತ್ತಿದ್ದ ರೈತ ಅಂದಿನ ಸಂಕುಚಿತ ಆರ್ಥಿಕ ಮತ್ತು ಸಾಮಾಜಿಕ ಘಟಕವಾಗಿದ್ದ ಹಳ್ಳಿಯ ಒಂದು ಅಂಗ ಮಾತ್ರ ಆಗಿದ್ದ. ಆದರೆ ಇಂದು ಪ್ರಪಂಚದ ನಾನಾಭಾಗಗಳ ಮಾರುಕಟ್ಟೆಗಳಿಗೆ ವಾಣಿಜ್ಯ ವ್ಯವಸಾಯದ ಮೂಲಕ ಸರಕುಗಳನ್ನು ಒದಗಿಸುವ ವ್ಯವಸಾಯಗಾರ ಇಡೀ ಪ್ರಪಂಚದ ಆರ್ಥಿಕ ವ್ಯವಸ್ಥೆಯ ಒಂದು ಅಂಗವಾಗಿದ್ದಾನೆ. ಜೀವನಾಧಾರ ವ್ಯವಸಾಯದಲ್ಲಿ ರೈತ ಸ್ವಯಂಪೂರ್ಣನಾಗಿರುತ್ತಾನೆ. ಇಲ್ಲಿ ಅವನ ಆವಶ್ಯಕತೆಗಳು ತೀರ ಮಿತ ಎಂಬುದನ್ನು ಗಮನಿಸಬೇಕು. ವಾಣಿಜ್ಯ ವ್ಯವಸಾಯದಲ್ಲಿ ಹೀಗಲ್ಲ. ಅವನು ಪರಾವಲಂಬಿಯಾಗಿರುತ್ತಾನೆ, ನಿಜ. ಆದರೆ ಶ್ರಮವಿಭಜನೆ ಹಾಗೂ ಕೃಷಿಪ್ರಾವೀಣ್ಯದ ವಿನಿಮಯ ಇಲ್ಲಿ ಆತನಿಗೆ ಲಭಿಸುವ ಸ್ಪಷ್ಟ ಸೌಕರ್ಯಗಳು, ಪ್ರಪಂಚದ ಯಾವುದೇ ಮೂಲೆಯಲ್ಲಿ ಸಂಭವಿಸುವ ಒಂದು ಘಟನೆ ಈ ರೈತನ ಆರ್ಥಿಕ ಸ್ಥಿತಿಯ ಮೇಲೆ ದುಷ್ಪರಿಣಾಮ ಬೀರುವುದು ಇಲ್ಲಿ ಸಾಧ್ಯ. ಇದು ಹೇಗೆಯೇ ಇರಲಿ, ಇಂದಿನ ಜೀವನಕ್ರಮದಲ್ಲಿ ವಾಣಿಜ್ಯ ವ್ಯವಸಾಯ ಬಹುಮಟ್ಟಿಗೆ ಸಾರ್ವತ್ರಿಕವಾಗಿಯೇ ಅಸ್ತಿತ್ವಕ್ಕೆ ಬಂದಿದೆ.

ಉಲ್ಲೇಖಗಳು[ಬದಲಾಯಿಸಿ]

  1. http://publictv.in/public-hero-haveri-makbal-saabh-dukandar/[ಶಾಶ್ವತವಾಗಿ ಮಡಿದ ಕೊಂಡಿ]