ವಿಷಯಕ್ಕೆ ಹೋಗು

ಕೃಷಿ ವಾರ್ತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರೈತರಿಗೆ ಮತ್ತು ರೈತರೊಂದಿಗೆ ಕೆಲಸ ಮಾಡುವ ಸಂಘಸಂಸ್ಥೆಗಳ ಕಾರ್ಯಕರ್ತರಿಗೆ ಕೃಷಿಯ ವಿಷಯವಾಗಿ ಸಮಯೋಚಿತ ಮಾಹಿತಿ; ಇತ್ತೀಚಿನ ಸಂಶೋಧನೆಗಳು, ಸುಧಾರಿತ ಪದ್ಧತಿಗಳ ಗುಣಗಳು ಮತ್ತು ಅವುಗಳನ್ನು ಹಂತಹಂತವಾಗಿ ಅನುಸರಿಸುವ ವಿಧಾನಗಳು-ಇವನ್ನು ಕುರಿತ ವಾರ್ತೆ. ಕೃಷಿವಾರ್ತೆಯ ಸಹಾಯದಿಂದ ರೈತ ತನ್ನ ಬೇಸಾಯವನ್ನು ಅಭಿವೃದ್ದಿಪಡಿಸಿಕೊಂಡು ಹೆಚ್ಚು ಇಳುವರಿ ಪಡೆದು ತನ್ನ ಆರ್ಥಿಕಸ್ಥಿತಿಯನ್ನು ಉತ್ತಮಪಡಿಸಿಕೊಳ್ಳುವುದಲ್ಲದೆ, ಹೊರದೇಶದ ಆಹಾರ ಪದಾರ್ಥಗಳನ್ನು ತರಿಸಿಕೊಳ್ಳುವುದನ್ನು ನಿಲ್ಲಿಸುವುದು ಸಾಧ್ಯವಾಗುತ್ತದೆ.ಕೃಷಿವಾರ್ತೆ ಸಂಪೂರ್ಣವಾಗಿ ಯಶಸ್ವಿಯಾಗಿ ಪರಿಣಾಮಕಾರಿಯಾಗಲು ಮೂರು ಅಂಶಗಳು ಮುಖ್ಯ ; 1. ವಾರ್ತೆಯ ಮೂಲ ಮತ್ತು ಅದನ್ನು ಕಳುಹಿಸುವ ವ್ಯಕ್ತಿ, 2. ಅದನ್ನು ಕಳುಹಿಸುವ ವಿಧಾನ, 3. ಪಡೆಯುವ ಜನ.[]

1. ವಾರ್ತೆಯ ಮೂಲ

[ಬದಲಾಯಿಸಿ]

ಕೃಷಿವಾರ್ತೆಯ ಮೂಲಗಳು ಅನೇಕ. ಅವುಗಳಲ್ಲಿ ಕೃಷಿಸಂಶೋಧಕರು, ಕೃಷಿ ವಿಸ್ತರಣ ತಜ್ಞರು ಮತ್ತು ಕೃಷಿಪತ್ರಿಕೆ ಮತ್ತು ಲೇಖನಗಳು ಮುಖ್ಯವಾದವು. ಕೃಷಿ ಸಂಶೋಧಕರು ರೈತರ ಸಮಸ್ಯೆಗಳನ್ನು ಅರಿತುಕೊಂಡು ಅವನ್ನು ನಿವಾರಿಸಲು ಅನುಸರಿಸಬೇಕಾದ ಪದ್ಧತಿಗಳನ್ನು ಸಂಶೋಧನಾಲಯಗಳಲ್ಲಿ ಕಂಡುಹಿಡಿದು, ಪರೀಕ್ಷಿಸುತ್ತಾರೆ. ಅಲ್ಲದೆ ಅವನ್ನು ರೈತರ ವಿವಿಧ ಕ್ಷೇತ್ರಗಳಲ್ಲಿ ಪರೀಕ್ಷಿಸಲು ತಜ್ಞರಿಗೆ ಸಹಾಯ ಮಾಡುತ್ತಾರೆ. ಕೃಷಿತಜ್ಞರು ಇತ್ತೀಚಿನ ಸಂಶೋಧನೆಗಳ ಫಲಿತಾಂಶಗಳನ್ನು ತಿಳಿದುಕೊಂಡು ಅವನ್ನು ವಿಶ್ಲೇಷಿಸಿ, ಆಯಾ ಋತುಗಳಲ್ಲಿ ನಿರ್ದಿಷ್ಟ ಸ್ಥಳಗಳಲ್ಲಿ ಅನುಸರಿಸಬೇಕಾದ ಪದ್ಧತಿಗಳನ್ನು ರೈತರಿಗೆ ತಿಳಿಯಪಡಿಸುತ್ತಾರೆ. ಇವರ ಇನ್ನೊಂದು ಕಾರ್ಯವೆಂದರೆ ರೈತರ ಸಮಸ್ಯೆಗಳನ್ನು ಅರಿತುಕೊಂಡು ಸಂಬಂಧಪಟ್ಟ ಸಂಶೋಧಕರಿಗೆ ಹೆಚ್ಚಿನ ಸಂಶೋಧನೆಗೆ ಸೂಚನೆ ನೀಡುವುದು. ಕೃಷಿ ಪತ್ರಿಕೆ ಮತ್ತು ಲೇಖನಗಳು, ಸಂಶೋಧನ ಫಲಿತಾಂಶಗಳು, ಕ್ಷೇತ್ರ ಪರೀಕ್ಷೆಗಳ ಫಲಿತಾಂಶಗಳು ಮತ್ತು ಕೃಷಿ ವಿಜಯದ ಕಥೆಗಳು-ಇವನ್ನು ಪ್ರಕಟಿಸಿ, ಇವು ರೈತರಿಗೆ ಮತ್ತು ಕಾರ್ಯಕರ್ತರಿಗೆ ಬೇಕಾದಾಗ ದೊರೆಯುವುಂತೆ ಮಾಡುವುದೂ ಕರ್ತವ್ಯವಾಗಿದೆ. ಕೃಷಿವಾರ್ತೆಯನ್ನು ಕಳುಹಿಸುವವನು ಕೃಷಿತಜ್ಞ, ಕೃಷಿವಿಸ್ತರಣ ಕಾರ್ಯಕರ್ತ, ಕೃಷಿವಾರ್ತಾಧಿಕಾರಿ, ಆಕಾಶವಾಣಿಯ ಕೃಷಿ ವಿಭಾಗದ ಅಧಿಕಾರಿ ಅಥವಾ ಸಂಘಸಂಸ್ಥೆಗಳ ಕಾರ್ಯಕರ್ತನಾಗಿರಬಹುದು.[]

2. ಕಳುಹಿಸುವ ವಿಧಾನ

[ಬದಲಾಯಿಸಿ]

ವಾರ್ತೆಯನ್ನು ಕಳುಹಿಸಲು ಅನೇಕ ವಿಧಾನಗಳನ್ನು ಅನುಸರಿಸಬೇಕಾಗಬಹುದು. ವೃತ್ತಪತ್ರಿಕೆ ಮತ್ತು ರೇಡಿಯೋಗಳಿಗೆ ಪೂರಕವಾಗಿ ಕೃಷಿ ವಾರ್ತಾ ಕರಪತ್ರಿಕೆಗಳು, ಭಿತ್ತಿಪತ್ರಗಳು, ಸುತ್ತೋಲೆಗಳು, ಕೃಷಿ ಪುಸ್ತಕಗಳು, ಚಿತ್ರಗಳು, ಪ್ರದರ್ಶನಗಳು, ಚಲನಚಿತ್ರಗಳು, ವಾಸ್ತವ ಕಥೆಗಳು, ಕ್ಷೇತ್ರೋತ್ಸವಗಳು ಮತ್ತು ರೈತ ದಿನಾಚರಣೆಗಳು, ಇವು ಕೆಲವು ವಿಧಾನಗಳು. ಕೃಷಿ ವಾರ್ತೆಯನ್ನು ವೈಯಕ್ತಿಕವಾಗಿ ರೈತನಲ್ಲಿಗೆ ತೆಗೆದುಕೊಂಡು ಹೋಗುವುದಕ್ಕಿಂತ ಪರಿಣಾಮಕಾರಿಯಾದ್ದು ಬೇರೆ ಯಾವುದೂ ಇಲ್ಲ. ಆದರೆ ಇದಕ್ಕೆ ಬೇಕಾದ ಜನಬಲ ಮತ್ತು ಆರ್ಥಿಕ ಬಲವನ್ನು ಒದಗಿಸುವುದು ಸದ್ಯದಲ್ಲಿ ಸಾಧ್ಯವಿಲ್ಲ. ಆದ್ದರಿಂದ ಅನೇಕ ಬಗೆಯ ಇತರ ಸಾಮೂಹಿಕ ಸಂಪರ್ಕಸಾಧನಗಳನ್ನೂ ವಿವಿಧ ಶ್ರವ್ಯದೃಶ್ಯ ಮಾಧ್ಯಮಗಳನ್ನೂ ಬಳಸಬೇಕಾಗುತ್ತದೆ.

3. ಪಡೆಯುವ ಜನ

[ಬದಲಾಯಿಸಿ]

ಕೃಷಿ ವಾರ್ತೆ ಮೂರು ಬಗೆಯ ಜನರನ್ನು ತಲುಪಬೇಕಾಗುತ್ತದೆ.-ಬೇಸಾಯಗಾರ, ರೈತರೊಂದಿಗೆ ಅವರ ಅಭಿವೃದ್ಧಿಗಾಗಿ ಕೆಲಸ ಮಾಡುವ ವಿವಿಧ ಸಂಘಸಂಸ್ಥೆಗಳ ಕಾರ್ಯಕರ್ತರು ಮತ್ತು ಇತರ ಸಂಶೋಧಕರು; ವ್ಯವಸಾಯ ಯೋಜನೆಗಳನ್ನು ರೂಪಿಸುವ ಅಧಿಕಾರಿಗಳು, ರಾಜಕಾರಣಿಗಳು; ಮತ್ತು ಸಾಮಾನ್ಯ ಜನರು. ರೈತರು ನೋಡಿ, ಕೇಳಿ, ಮಾಡಿ ಕಲಿಯುವುದು ಸಾಧ್ಯವಾಗುವಂತೆ ಪ್ರಚಾರಕ ಅನೇಕ ಸಾಧನಗಳನ್ನು ತನ್ನ ಕೆಲಸಕಾರ್ಯಗಳಲ್ಲಿ ಬಳಸಿಕೊಳ್ಳಬೇಕು. ಸಾಧನಗಳನ್ನು ಬಳಸಲು ಇರುವ ಜನಬಲ, ಹಣಬಲ, ತಾಂತ್ರಿಕ ಸೌಲಭ್ಯ, ಕಾಲಾವಕಾಶ ಮತ್ತು ಅದು ತಲುಪಬೇಕಾದ ಜನಗಳ ಗುಣ ಲಕ್ಷಣಗಳನ್ನು ತಿಳಿದುಕೊಂಡಿರಬೇಕು. ಕಾಲಕ್ಕನುಗುಣವಾಗಿ ಸಂಪನ್ಮೂಲಗಳನ್ನು ಅರಿತುಕೊಂಡು ಸೂಕ್ತ ಸಾಧನಗಳನ್ನು ಪ್ರಯೋಗಿಸಬೇಕು. ಈ ಸಾಧನಗಳನ್ನು ಅವುಗಳ ಕಾರ್ಯಕ್ಕನುಗುಣವಾಗಿ ವಿಂಗಡಿಸಬಹುದು : 1. ತೋರಿಸಿ ಕಲಿಸುವ ಸಾಧನಗಳು. ಕೆಲವು ಸಾಧನಗಳನ್ನು ತೋರಿಸಿ ಆ ಮೂಲಕ ತಿಳಿವಳಿಕೆಯನ್ನುಂಟು ಮಾಡಬಹುದು. ಚಿತ್ರಪಟಗಳು, ಚಲನಚಿತ್ರಗಳು, ರೇಖಾಚಿತ್ರಗಳು, ಪ್ರದರ್ಶನಗಳು, ಅಚ್ಚಾದ ವಿಷಯಗಳು, ಶೈಕ್ಷಣಿಕ ಪ್ರವಾಸಗಳು ಹಾಗೂ ಪ್ರಾತ್ಯಕ್ಷಿಕೆಗಳು ಈ ಗುಂಪಿಗೆ ಸೇರುತ್ತವೆ. 2. ಕೇಳಿಸಿ ಕಲಿಸುವ ಸಾಧನಗಳು : ಒಂದು ವಿಷಯವನ್ನು ಹೇಳಿ ಅದರ ಮೂಲಕ ತಿಳಿವಳಿಕೆ ಉಂಟುಮಾಡಲು ಕೆಲವು ಸಾಧನಗಳನ್ನು ಬಳಸಬಹುದು. ರೇಡಿಯೋ, ಶಬ್ದಚಿತ್ರ, ಟೆಲಿಫೋನ್, ಧ್ವನಿಮುದ್ರಿಕೆಗಳು, ಧ್ವನಿವರ್ಧಕಗಳು ಮತ್ತು ನೇರ ಮಾತುಕತೆ ಇವು ಶ್ರವ್ಯ ಸಾಧನಗಳು. 3. ಮಾಡಿಸಿ ಕಲಿಸುವ ಸಾಧನಗಳು : ಕೆಲವು ಸಾಧನಗಳು ಸ್ವತಃ ಮಾಡಿಸುವುದರ ಮೂಲಕ ತಿಳಿವಳಿಕೆ ಉಂಟುಮಾಡಲು ಅನುಕೂಲವಾಗುತ್ತವೆ. ಜನರು ಪಾತ್ರವಹಿಸುವ ಪ್ರದರ್ಶನಗಳು, ಫಲಿತಾಂಶ ಪ್ರದರ್ಶನಗಳು ಮತ್ತು ಕಾರ್ಯವಿಧಾನ ಪ್ರದರ್ಶನಗಳು ಈ ಗುಂಪಿಗೆ ಸೇರುತ್ತವೆ. ಅನೇಕ ವೇಳೆ ಈ ಮೂರರಲ್ಲಿ ಎರಡು ಅಥವಾ ಮೂರು ಕಾರ್ಯಗಳನ್ನು ಕೆಲವು ಸಾಧನಗಳಿಂದ ನೆರವೇರಿಸಬಹುದು. ವಾಕ್ಚಿತ್ರ ಮತ್ತು ಟೆಲಿವಿಷನ್ ಪ್ರದರ್ಶನಗಳು ತೋರಿಸಿ ಮತ್ತು ಕೇಳಿಸಿ ಕಲಿಸುವ ಸಾಧನಗಳು. ವಸ್ತುಪ್ರದರ್ಶನಗಳೂ ಫಲಿತಾಂಶ ಮತ್ತು ಕಾರ್ಯವಿಧಾನ ಪ್ರದರ್ಶನಗಳೂ ನೋಡಿಸುವ, ಕೇಳಿಸುವ ಮತ್ತು ಮಾಡಿಸುವ ವಿಧಾನಗಳು.

ಕೃಷಿವಾರ್ತೆ ಪರಿಣಾಮ

[ಬದಲಾಯಿಸಿ]

ಕೃಷಿವಾರ್ತೆ ರೈತರಿಗೆ ಎಷ್ಟು ವಿಧಗಳಲ್ಲಿ ಎಷ್ಟು ಸಾರಿ ತಲುಪುತ್ತದೋ ಅಷ್ಟು ಪರಿಣಾಮಕಾರಿಯಗುತ್ತದೆ. ಇದು ಮರೆತಿರುವುದನ್ನು ಜ್ಞಾಪಕಮಾಡುತ್ತದೆ, ಸಂಶಯಗಳನ್ನು ನಿವಾರಿಸುತ್ತದೆ ಮತ್ತು ಪರೀಕ್ಷಿಸಿ ನೋಡುವಂತೆ ಮಾಡುತ್ತದೆ. ಒಂದು ವಿಷಯವನ್ನು ಮೇಲಿಂದಮೇಲೆ ವಿವಿಧ ರೀತಿಗಳಲ್ಲಿ ಹೇಳಿದರೆ-ಮಾತು, ಚಿತ್ರ, ಮುದ್ರಿತ ಪದ, ಚಲನಚಿತ್ರ, ಇತ್ಯಾದಿಗಳ ಮೂಲಕ ಹೇಳುತ್ತ ಬಂದರೆ ಅದನ್ನು ಪರೀಕ್ಷಿಸಬೇಕೆಂಬ ಆಕಾಂಕ್ಷೆ ಮೂಡುವುದು ಸಹಜ. ಈ ಪದ್ಧತಿಯನ್ನು ಬಹಳ ಯಶಸ್ವಿಯಾಗಿ ಬೆಳೆಸಿಕೊಂಡು ಬಂದಿದ್ದಾರೆ. ರೈತರಲ್ಲಿ ಆಕಾಂಕ್ಷೆ ಮೂಡಿ ಬಂದಾಗ ವಿಸ್ತರಣ ಕಾರ್ಯಕರ್ತರು ಆ ವಿಧಾನದ ಬಗ್ಗೆ ಹೆಚ್ಚು ವಿಷಯಗಳನ್ನು ಮತ್ತು ಅದನ್ನು ಆಚರಣೆಗೆ ತರಲು ಬೇಕಾಗುವ ವಸ್ತು ಸಂಪನ್ಮೂಲಗಳನ್ನು ಮತ್ತು ತಾಂತ್ರಿಕ ತಿಳುವಳಿಕೆಯನ್ನು ಒದಗಿಸಿ ಅದನ್ನು ಪ್ರತ್ಯಕ್ಷ ಮಾಡಿ ನೋಡಲು ಅವನಿಗೆ ಅನುಕೂಲ ಕಲ್ಪಿಸಿಕೊಡಬೇಕು. ರೈತ ಅದನ್ನು ಆಚರಣೆಗೆ ತಂದ ಮೇಲೂ ಆಗಾಗ ಅದನ್ನು ಪರೀಕ್ಷಿಸುತ್ತಿರಬೇಕು.ಹೊಸ ಪದ್ಧತಿಯೊಂದನ್ನು ಮೊಟ್ಟಮೊದಲಿಗೆ ಪರೀಕ್ಷೆಮಾಡಲು ಒಪ್ಪುವವನನ್ನು ಪ್ರದರ್ಶನಕಾರರೈತ ಎಂದು ಕರೆಯುತ್ತಾರೆ. ಇವನ ಸಹಾಯದಿಂದ ಆ ಪದ್ಧತಿಯನ್ನು ಇನ್ನೂ ಬಹಳ ಜನರು ಆಚರಣೆಗೆ ತರಬಹುದು. ಇವನನ್ನು ಕೇಂದ್ರವಾಗಿ ಮಾಡಿಕೊಂಡು, ಇವನಿಂದ ತಿಳಿವಳಿಕೆ ಹರಡುವಂತೆ ಮಾಡಬೇಕು. ಬೇರೆಯವರು ಹೇಳುವುದಕ್ಕಿಂತ ನೆರೆಹೊರೆಯ ರೈತರು ಮಾಡಿ ಲಾಭ ಪಡೆದಿರುವುದನ್ನು ಕೇಳಿ ನೋಡಿದರೆ ನಂಬುವುದು ಸುಲಭ. ಕೃಷಿವಾರ್ತೆ ಪ್ರದರ್ಶನಕಾರ ರೈತನಿಗೆ ಸುಲಭವಾಗಿ, ಕಾಲಕ್ಕೆ ಸರಿಯಾಗಿ ದೊರೆಯುವಂತಿರಬೇಕು. ಪ್ರದರ್ಶನಕಾರ ಸ್ವತಃ ಮಾಡುವುದನ್ನು ಪ್ರತ್ಯಕ್ಷವಾಗಿ ಕಂಡು ಅವನೊಂದಿಗೆ ಸಂಭಾಷಿಸಿ ಸಂಶಯಗಳನ್ನು ನಿವಾರಿಸಿಕೊಂಡು ಇತರ ರೈತರು ಅದನ್ನು ಅನುಷ್ಠಾನಕ್ಕೆ ತರುವುದರಿಂದ ಸಂಶೋಧನೆಯಿಂದ ಸ್ಥಿರಪಟ್ಟಂಥ ವಾರ್ತೆಗಳು ಪ್ರದರ್ಶನಕಾರ ರೈತನಿಗೆ ತಲುಪುವಂತೆ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಬೇಕು.

ಕೃಷಿ ವಾರ್ತೆಯನ್ನು ಈ ಕಾರ್ಯಕ್ರಮಗಳಲ್ಲಿ ಯಶಸ್ವಿಯಾಗಿ ಉಪಯೋಗಿಸಬಹುದು

[ಬದಲಾಯಿಸಿ]

1.ರೈತರಿಗೆ ವಿಷಯ ತಿಳಿಸುವುದು: ಒಂದು ಹೊಸ ಪದ್ಧತಿ ಅಥವಾ ಹಳೆಯ ಪದ್ಧತಿಯನ್ನು ಸರಿಯಾಗಿ ಅನುಸರಿಸಲು ಅನುವಾದಂಥ ಸಂಶೋಧನೆಯ ಫಲಿತಾಂಶಗಳನ್ನು ರೈತರಿಗೆ ತಿಳಿಸಲು ಕೃಷಿವಾರ್ತೆಯನ್ನು ಉಪಯೋಗಿಸಿಕೊಳ್ಳಬೇಕು. 2. ರೈತರಲ್ಲಿ ಆಸೆ ಹುಟ್ಟಿಸುವುದು; ಸುಧಾರಿತ ಪದ್ಧತಿಯನ್ನು ಸರಿಯಾಗಿ ಆಚರಣೆಗೆ ತರುವುದರಿಂದ ಅಥವಾ ಹೊಸ ಪದ್ಧತಿಯನ್ನು ಉಪಯೋಗಿಸುವುದರಿಂದ ಬರುವ ಹೆಚ್ಚು ಇಳುವರಿಯ ವಿಷಯವಾಗಿ ಪ್ರದರ್ಶನ ತಾಕುಗಳಲ್ಲಿ ಫಸಲನ್ನು ಬೆಳೆದು ತೋರಿಸುವುದರಿಂದ ರೈತರಲ್ಲಿ ಆಸೆ ಹುಟ್ಟಿಸಬಹುದು. ಕೃಷಿ ವಾರ್ತೆ ಇಲ್ಲಿ ಸಹ ನೆರವಾಗುತ್ತದೆ. 3. ರೈತರಲ್ಲಿ ಸ್ಫೂರ್ತಿ ತುಂಬುವುದು; ರೈತರಲ್ಲಿ ಆಸೆ ಹುಟ್ಟಿದ ಅನಂತರ ಅದನ್ನು ಅನುಷ್ಠಾನಕ್ಕೆ ತರಲು ಬೇಕಾಗುವ ತಾಂತ್ರಿಕ ತಿಳಿವಳಿಕೆ ಕೊಡಲು ಕೃಷಿವಾರ್ತೆ ಅನುಕೂಲ ಮಾಡಿಕೊಡುತ್ತದೆ. 4. ರೈತನಿಗೆ ತಿಳಿವಳಿಕೆ ಕೊಡುವುದು: ಒಂದು ಪದ್ಧತಿಯನ್ನು ಅನುಸರಿಸಲು ಮೊದಲಿಂದ ಕೊನೆಯವರೆಗೂ ರೈತನಿಗೆ ಅದರ ವಿಷಯವಾಗಿ ತಿಳಿವಳಿಕೆ ಬೇಕಾಗುತ್ತದೆ. ಈ ತಿಳಿವಳಿಕೆಯನ್ನು ಕೃಷಿವಾರ್ತೆ ನೀಡುತ್ತದೆ.

ಅನಕ್ಷರಸ್ಥ

[ಬದಲಾಯಿಸಿ]

ರೈತರಲ್ಲಿ ಬಹುಮಂದಿ ಅನಕ್ಷರಸ್ಥರಾಗಿರುವುದರಿಂದ ಮುದ್ರಿತ ಅಥವಾ ಲಿಖಿತ ಪದಗಳು ಅವರಿಗೆ ಉಪಯೋಗವಾಗಲಾರವು. ಆದ್ದರಿಂದ ಮುದ್ರಿತ ಪದಗಳ ಜೊತೆಗೆ ಕೃಷಿವಾರ್ತೆಯನ್ನು ಚಿತ್ರ, ಚಲನಚಿತ್ರ, ಭಿತ್ತಿಪತ್ರಗಳು, ಪ್ರಚಾರ ಪತ್ರಗಳು, ಪ್ರಾತ್ಯಕ್ಷಿಕೆಗಳು, ಪ್ರದರ್ಶನಗಳು-ಇವುಗಳ ಮೂಲಕ ಹರಡಬೇಕು. ಕೃಷಿವಾರ್ತೆಯನ್ನು ಉಪಯೋಗಿಸುವುದು ಒಂದು ಕಲೆ. ಯಾವಾಗ, ಯಾರಿಗೆ, ಎಲ್ಲಿ, ಯಾವ ಸಾಧನಗಳನ್ನು ಬಳಸಬೇಕೆಂದು ಅರಿತು ಅವನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದರಿಂದ ಹೆಚ್ಚು ಲಾಭ ಪಡೆಯಬಹುದು. ಸಾಧನಗಳು ತಮ್ಮಷ್ಟಕ್ಕೆ ತಾವೇ ಏನನ್ನೂ ತಿಳಿಸುವುದಿಲ್ಲವಾದ್ದರಿಂದ ಕಾರ್ಯಕರ್ತರು ಬೇಕಾದಾಗ ಸರಿಯಾದವುಗಳನ್ನು ಉಪಯೋಗಿಸಬೇಕು. ವಾರ್ತಾಸಾಧನಗಳು ಸರಿಯಾಗಿ ಉಪಯೋಗವಾಗುವಂತೆ ಮಾಡಲು ಅವನ್ನು ಬಳಸುವ ಜನಕ್ಕೆ, ಎಂದರೆ ವಿಸ್ತರಣ ಕಾರ್ಯಕರ್ತರಿಗೆ ಆಗಾಗ ತರಬೇತು ಕೊಡುವುದು ಅವಶ್ಯಕ. ಬೇರೆಯವರು ಮಾಡಿದ ಸಾಧನಗಳನ್ನು ಬಳಸುವುದಕ್ಕಿಂತ ತಾವೇ ಸ್ವತಃ ಮಾಡಿದ ಸಾಧನಗಳನ್ನು ಬಳಸುವುದು ಹೆಚ್ಚು ಪರಿಣಾಮಕಾರಿಯಾದ್ದರಿಂದ ವಿಸ್ತರಣ ಕಾರ್ಯಕರ್ತರಿಗೆ ಶ್ರವ್ಯದೃಶ್ಯ ಸಾಧನಗಳನ್ನು ತಯಾರಿಸಿಕೊಳ್ಳುವುದರಲ್ಲೂ ಶಿಕ್ಷಣ ನೀಡುವುದು ಬಹು ಮುಖ್ಯ.

ಕೃಷಿ ಆಂದೋಲನ

[ಬದಲಾಯಿಸಿ]

ಕೃಷಿ ಆಂದೋಲನಗಳಲ್ಲಿ ಕೃಷಿ ವಾರ್ತೆ ಮುಖ್ಯ ಪಾತ್ರ ವಹಿಸುತ್ತದೆ. ಆಂದೋಲನವನ್ನು ಪ್ರಾರಂಭಿಸುವುದಕ್ಕೆ ಕನಿಷ್ಠ ಪಕ್ಷ ಒಂದು ತಿಂಗಳ ಮೊದಲು ಆಂದೋಲನದ ವಿಷಯ ಮತ್ತು ಅದು ಪ್ರಾರಂಭವಾಗುವ ದಿನವನ್ನು ತಿಳಿಸುವುದು ಆವಶ್ಯಕ. ಇದರಿಂದ ಅದರಲ್ಲಿ ಪಾತ್ರವಹಿಸಬೇಕಾಗುವ ರೈತರನ್ನು ತಯಾರು ಮಾಡಿದಂತಾಗುತ್ತದೆ, ಅಲ್ಲದೆ ಆಂದೋಲನ ಪ್ರಾರಂಭವಾದಾಗ ಅದರಲ್ಲಿ ಸಂಬಂಧಪಟ್ಟವರು ಭಾಗವಹಿಸಲು ಸಿದ್ಧರಾಗಿರುತ್ತಾರೆ. ಅವರಿಗೆ ಆಂದೋಲನದ ರೂಪರೇಖೆ ಮತ್ತು ಅನುಕೂಲಗಳು ಮನದಟ್ಟಾಗಿರುತ್ತವೆ. ಈ ರೀತಿ ಪೂರ್ವಭಾವಿ ತಿಳಿವಳಿಕೆ ಕೊಡಲು ವೃತ್ತಪತ್ರಿಕೆ, ರೇಡಿಯೋ, ಭಿತ್ತಿಪತ್ರಗಳು, ಚಿತ್ರಗಳು ಮತ್ತು ಸಭೆಗಳು ಅನುಕೂಲವಾಗಿರುತ್ತವೆ.ಆಂದೋಲನ ಪ್ರಾರಂಭವಾದ ಮೇಲೆ ಅದರ ವಿಷಯವಾಗಿ ಆಗಾಗ ಮಾಡಬೇಕಾದ ಕಾರ್ಯಗಳನ್ನು ತಿಳಿಸುತ್ತಿರಬೇಕಾಗುತ್ತದೆ. ಹಂತಹಂತವಾಗಿ ಮಾಡಬೇಕಾದ ಪದ್ಧತಿಗಳನ್ನು ಸಮಯಕ್ಕೆ ಸರಿಯಾಗಿ ತಿಳಿಸುತ್ತಿರಬೇಕು. ಇದಕ್ಕೆ ಸುತ್ತೋಲೆ, ರೇಡಿಯೋ, ಕರಪತ್ರ, ಪ್ರಾತ್ಯಕ್ಷಿಕೆ ಮತ್ತು ವೈಯಕ್ತಿಕ ಭೇಟಿ ಸಹಾಯ ಮಾಡುತ್ತವೆ.ಆಂದೋಲನ ಮುಗಿದ ಅನಂತರ ಅದರಲ್ಲಿ ಪಾಲ್ಗೊಂಡವರಿಗೆ ಮತ್ತು ಅದರಲ್ಲಿ ಆಸಕ್ತಿ ವಹಿಸಿದವರಿಗೆ ಅದರಿಂದಾದ ಉಪಯೋಗ, ಅದರ ಫಲಿತಾಂಶ, ಅದರ ಗುಣಾವಗುಣಗಳು ಮತ್ತು ಅದರಿಂದ ಬಂದ ನಿವ್ವಳ ಲಾಭವನ್ನು ತಿಳಿಸಬೇಕು. ಹೀಗೆ ತಿಳಿಸುವುದರಿಂದ ಆ ಪದ್ಧತಿಯಲ್ಲಿ ರೈತರಿಗೆ ನಂಬಿಕೆ ಹುಟ್ಟಿ ಅದನ್ನು ಮುಂದೆ ಅನುಸರಿಸಿಕೊಂಡು ಬರಲು ಉತ್ತೇಜನ ದೊರಕುತ್ತದೆ. ಈ ಸಂದರ್ಭದಲ್ಲಿ ಕ್ಷೇತ್ರೋತ್ಸವ, ಅಂಕಿ-ಅಂಶ, ಚಿತ್ರ, ಕರಪತ್ರ ಮತ್ತು ವೃತ್ತಪತ್ರಿಕೆಗಳನ್ನು ಉಪಯೋಗಿಸಿಕೊಳ್ಳಬಹುದು.ಕೃಷಿವಾರ್ತೆಯನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡು ಬರುವುದರಿಂದ ವ್ಯವಸಾಯದ ಅಭಿವೃದ್ಧಿಯ ವೇಗವನ್ನು ವರ್ಧಿಸಿ ಆಹಾರದ ಅಭಾವ ಬೇಗ ತೀರಿ ಮತ್ತೆ ಅಂಥ ಅಭಾವ ಬರದ ಹಾಗೆ ಮಾಡಲು ಯತ್ನಿಸಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. http://publictv.in/public-hero-haveri-makbal-saabh-dukandar/[ಶಾಶ್ವತವಾಗಿ ಮಡಿದ ಕೊಂಡಿ]
  2. http://www.prajavani.net/news/article/2014/12/30/289038.html[ಶಾಶ್ವತವಾಗಿ ಮಡಿದ ಕೊಂಡಿ]