ಕುಂಭಲ್‌ಗಢ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರಾವಳಿ ಬೆಟ್ಟದ ಸಾಲಿನಲ್ಲಿ ಹರಡಿಕೊಂಡಿರುವ ಕೋಟೆ

ಕುಂಭಲ್‌ಗಢ್ (ಕುಂಭಲ್ ಕೋಟೆ- ಕುಂಭಲ್‌ಗರ್ ಎಂದೂ ಕರೆಯುತ್ತಾರೆ.) ರಾಜಸ್ಥಾನ ರಾಜ್ಯದ ರಾಜಸಮಂದ್ ಜಿಲ್ಲೆಯಲ್ಲಿರುವ ಒಂದು ಕೋಟೆ. ಇದನ್ನು ಅರಾವಳಿ ಬೆಟ್ಟಗಳ ಸಾಲಿನಲ್ಲಿ ಕಟ್ಟಲಾಗಿದೆ. ಮೇವಾರ ಪ್ರಾಂತ್ಯವನ್ನು (ಕ್ರಿ.ಶ.೧೪೩೩ರಿಂದ ಕ್ರಿ.ಶ.೧೪೬೮ರವರೆಗೆ) ಆಳಿದ ರಜಪೂತ ರಾಜವಂಶದ ಸಿಸೋಡಿಯಾ ಕುಲದ ರಾಜನಾದ ರಾಣಾ ಕುಂಭ ಇದನ್ನು ಕಟ್ಟಿದುದರಿಂದ ಇದಕ್ಕೆ ಕುಂಭಲ್‌ಗಢ (ಗಢ=ಕೋಟೆ) ಎಂದು ಹೆಸರು ಬಂದಿದೆ. ೧೫ನೇ ಶತಮಾನದಲ್ಲಿ ಕಟ್ಟಲ್ಪಟ್ಟಿರುವ ಈ ಕೋಟೆ, ಒಟ್ಟು ೩೫ ಕಿಮೀ ಉದ್ದ ಹಾಗೂ ೨೩ಮೀ ಅಗಲ ಇದೆ.

ಇತಿಹಾಸ[ಬದಲಾಯಿಸಿ]

ಈ ಕೋಟೆಯ ಆರಂಭಿಕ ಇತಿಹಾಸದ ಬಗ್ಗೆ ಹೆಚ್ಚು ತಿಳಿದುಬರುವುದಿಲ್ಲವಾದರೂ ಆರಂಭದಲ್ಲಿ ಈ ಕೋಟೆಗೆ ಮಚ್ಚೀಂದ್ರಪುರವೆಂಬ ಹೆಸರಿತ್ತು ಎಂದು ಕಂಡುಬರುತ್ತದೆ. ಮುಸ್ಲಿಮ್ ಇತಿಹಾಸಕಾರ ಈ ಕೋಟೆಗೆ ಮಹೋರ್ ಎಂದು ಹೆಸರಿಸಿದ್ದಾನೆ. ಈ ಮೂಲ ಕೋಟೆಯನ್ನು ಮೌರ್ಯ ಸಾಮ್ರಾಜ್ಯದ ಅರಸರಲ್ಲಿ ಒಬ್ಬನಾದ ಸಂಪ್ರತಿ(ಅಶೋಕ ಚಕ್ರವರ್ತಿಯ ಮೊಮ್ಮಗ) ಎಂಬಾತ, ೬ನೇ ಶತಮಾನದ ಸುಮಾರಿನಲ್ಲಿ ನಿರ್ಮಿಸಿದನು ಎಂದು ಕಂಡುಬರುತ್ತದೆ. ೧೩೦೩ರಲ್ಲಿ ಅಲ್ಲಾವುದ್ದೀನ್ ಖಿಲ್ಜಿಯ ಆಕ್ರಮಣದ ನಂತರದ ಈ ಕೋಟೆಯ ಇತಿಹಾಸ ಮಸುಕಾಗಿದೆ[೧].

ಪ್ರಸ್ತುತ ರೂಪದಲ್ಲಿರುವ ಕೋಟೆಯನ್ನು ರಜಪೂತ ರಾಜವಂಶದ ಸಿಸೋಡಿಯಾ ಕುಲದ ರಾಜನಾದ ರಾಣಾ ಕುಂಭ ನಿರ್ಮಿಸಿದನು[೨]. ಆಗಿನ ಖ್ಯಾತ ವಾಸ್ತುಶಿಲ್ಪಿಯಾದ ಮಂದನ ಎಂಬಾತನ ಸಹಾಯವನ್ನು ಪಡೆದು ಈ ಕೋಟೆಯನ್ನು ಕಟ್ಟಿಸಿದನು. ತನ್ನ ಆಡಳಿತಾವಧಿಯಲ್ಲಿ ನಿರ್ಮಿಸಿದ ಒಟ್ಟು ೩೨ ಕೊಟೆಗಳಲ್ಲಿ ಈ ಕುಂಭಲ್‌ಗಢ್ ಕೋಟೆ ಬಹಳ ಸಂಕೀರ್ಣವಾದ ರಚನೆಯನ್ನು ಹೊಂದಿದೆ. ಮೇವಾರ ಮತ್ತು ಮಾರವಾರ ಪ್ರದೇಶಗಳನ್ನು ಬೇರ್ಪಡಿಸುತ್ತಿದ್ದ ಈ ಕೋಟೆಯು, ಶತ್ರುಗಳ ದಾಳಿಯ ಸಮಯದಲ್ಲಿ, ಮೇವಾರದ ಆಡಳಿತಗಾರರಿಗೆ ಆಶ್ರಯತಾಣವಾಗಿ ಬಳಸಲ್ಪಡುತ್ತಿತ್ತು.(ಮೇವಾರ- ದಕ್ಷಿಣ-ಮಧ್ಯ ರಾಜಸ್ಥಾನ ರಾಜ್ಯದ ಅರಾವಳಿ ಪರ್ವತದ ನಡುವೆ ಇರುವ ಪ್ರದೇಶ. ಇದು ಇಂದಿನ ಭಿಲ್ವಾರಾ, ಚಿತ್ತೋರ್‌ಗಢ್, ರಾಜ್‌ಸಮಂಡ್, ಉದಯಪುರ, ರಾಜಸ್ಥಾನದ ಜಲಾವರ್ ಜಿಲ್ಲೆಯ ಪಿರವಾ ತಾಲೂಕು, ಮಧ್ಯಪ್ರದೇಶದ ನೀಮುಚ್ ಮತ್ತು ಮಾಂಡ್‌ಸೌರ್ ಮತ್ತು ಗುಜರಾತ್‌ನ ಕೆಲವು ಭಾಗಗಳನ್ನು ಒಳಗೊಂಡಿದೆ. ಇನ್ನು ಮಾರವಾರ್- ನೈರುತ್ಯ ರಾಜಸ್ಥಾನಕ್ಕೆ ಇರುವ ಬಾರ್ಮರ್, ಜಲೋರ್, ಜೋಧ್‌ಪುರ, ನಾಗೌರ್, ಪಾಲಿ ಮತ್ತು ಸಿಕಾರ್‌ನ ಕೆಲವು ಭಾಗಗಳನ್ನು ಒಳಗೊಂಡಿದೆ.)[೩]

ಕೋಟೆಯ ರಚನೆ[ಬದಲಾಯಿಸಿ]

ಬಲಿಷ್ಟವಾದ ಕೋಟೆಯ ಕಾವಲುಗೋಪುರ

ಅರಾವಳಿ ಬೆಟ್ಟಗಳ ಶ್ರೇಣಿಯಲ್ಲಿ, ಸಮುದ್ರ ಮಟ್ಟದಿಂದ ೧೧೦೦ ಮೀ ಎತ್ತರದಲ್ಲಿ ನಿರ್ಮಿಸಲಾಗಿರುವ ಈ ಕೋಟೆಯು ಸುಮಾರು ೩೫ ಕಿ.ಮೀ (೨೨ ಮೈಲಿ) ಉದ್ದವಾದ ಗೋಡೆಗಳನ್ನು ಹೊಂದಿದ್ದು, ಮುಂಭಾಗದ ಗೋಡೆಗಳು ಸುಮಾರು ೧೫ ಅಡಿಯಷ್ಟು ದಪ್ಪ ಇವೆ. ಈ ಕೋಟೆಗೆ ಒಟ್ಟು ೭ ಎತ್ತರವಾದ ದ್ವಾರಗಳಿವೆ. ಕೋಟೆಯ ಮುಖ್ಯದ್ವಾರ ರಾಮ್ ಪೋಲ್, ದಕ್ಷಿಣ ದಿಕ್ಕಿನಲ್ಲಿರುವ ಅರೈಟ್ ಪೋಲ್, ಮುಂದೆ ಹನುಮಾನ್ ಪೋಲ್, ಹುಲ್ಲಾ ಪೋಲ್, ಕೋಟೆಯ ಮೇಲೆ ಹೋಗಲು ಇರುವ ಭೈರನ್ ಪೋಲ್, ನಿಂಬೂ ಪೋಲ್, ಪಘರಾ ಪೋಲ್- ಇವೇ ೭ ದ್ವಾರಗಳು[೪]..

ಕೋಟೆಯೊಳಗೆ ೩೬೦ ಕ್ಕೂ ಹೆಚ್ಚು ದೇವಾಲಯಗಳಿವೆ. ಅವುಗಳಲ್ಲಿ ೩೦೦ ಪ್ರಾಚೀನ ಜೈನ ಮಂದಿರಗಳಾದರೆ ಉಳಿದವು ಹಿಂದೂ ದೇವರುಗಳಿಗೆ ಕಟ್ಟಲ್ಪಟ್ಟ ಮಂದಿರಗಳು. ಕೋಟೆಯ ಒಳಗೆ, ಬೆಟ್ಟದ ಮೇಲ್ಭಾಗದಲ್ಲಿ ಮಹಾರಾಜ ಕುಂಭನ ಅರಮನೆ ಮತ್ತು ರಾಣಾ ಫತೇಸಿಂಘ್ ಕಟ್ಟಿಸಿರುವ ಅರಮನೆ(ಬಾದಲ್ ಮಹಲ್)ಗಳನ್ನು ನೋಡಬಹುದಾಗಿದೆ[೫]..

ದಾಳಿಯ ಸಂದರ್ಭದಲ್ಲಿ[ಬದಲಾಯಿಸಿ]

೧೫೩೫ನೇ ಇಸವಿಯಲ್ಲಿ ಮುಸ್ಲಿಮ್ ದಾಳಿಕೋರ ಬಹಾದೂರ್ ಶಾ ಚಿತ್ತೋರ್‌ಗಢ ಕೋಟೆಯ ಮೇಲೆ ದಾಳಿ ಮಾಡಿದನು. ಹೋರಾಟದ ಸಂದರ್ಭದಲ್ಲಿ ಅಲ್ಲಿನ ರಾಜ ರಾಣಾ ಸಂಗ್ರಾಮ್ ಸಿಂಗ್(ರಾಣಾಸಂಗ್ ಎಂದೂ ಹೆಸರಿದೆ.) ಮರಣವನ್ನಪ್ಪುತ್ತಾನೆ. ಅವನ ರಾಣಿ ಕರ್ಣಾವತಿ, ಮುಸ್ಲಿಮ್ ದಾಳಿಕೋರನ ಕೈಗೆ ತನ್ನ ಮಗ ಸಿಗದಂತೆ ಮಾಡಲು, ಕಳ್ಳದಾರಿಯ ಮೂಲಕ ತನ್ನ ಪುಟ್ಟ ಮಗ ಉದಯಸಿಂಘ್‌ನನ್ನು ಕುಂಭಲ್‌ಗಢ ಕೋಟೆಗೆ ಸಾಗಿಸಿ, ತನ್ನ ಸಖಿಯರೊಂದಿಗೆ ಅಗ್ನಿಪ್ರವೇಶ ಮಾಡುತ್ತಾಳೆ. ಪ್ರಾಯಪ್ರಬುದ್ಧನಾದ ನಂತರ ಉದಯಸಿಂಗ್ ಚಿತ್ತೋರ್‌ಗಢ ಕೋಟೆಯ ಮೇಲೆ ಪ್ರತಿದಾಳಿ ಮಾಡಿ ತನ್ನ ಸಾಮ್ರಾಜ್ಯವನ್ನು ಮರುವಶ ಮಾಡಿಕೊಳ್ಳುತ್ತಾನೆ[೬].

ಮುಸ್ಲಿಮ್ ದಾಳಿಕೋರ ೧ನೇ ಅಹಮದ್ ಶಾ ೧೪೫೭ರಲ್ಲಿ ಈ ಕೋಟೆಯ ಮೇಲೆ ದಾಳಿ ಮಾಡುವ ವ್ಯರ್ಥಪ್ರಯತ್ನವನ್ನು ಮಾಡುತ್ತಾನೆ. ಆ ಸಂದರ್ಭದಲ್ಲಿ, ಕೋಟೆಯೊಳಗಿದ್ದ ಬನ್ಮಾತಾ ದೇವಿಯೇ ತಮ್ಮನ್ನು ದಾಳಿಕೋರರಿಂದ ರಕ್ಷಿಸುತ್ತಿದ್ದಾಳೆ ಎಂಬ ನಂಬಿಕೆ ಸ್ಥಳೀಯರಲ್ಲಿ ಇತ್ತು. ಇದನ್ನು ತಿಳಿದ ಅಹಮದ್ ಶಾ, ಮೊದಲು ದೇವಿಯ ಮಂದಿರವನ್ನು ನೆಲಸಮ ಮಾಡಿ ಮುಂದುವರಿಯಲು ಪ್ರಯತ್ನಿಸಿದ. ಆದರೂ ದಾಳಿಯ ಪ್ರಯತ್ನಗಳು ಕೈಗೂಡಲಿಲ್ಲ.

೧೪೫೮-೫೯ ಮತ್ತು ೧೪೬೭ನೇ ಇಸವಿಯಲ್ಲಿ ಮುಸ್ಲಿಮ್ ದಾಳಿಕೋರ ಮಹ್ಮದ್ ಖಿಲ್ಜಿ ದಾಳಿ ಮಾಡಿ ಕೋಟೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿ ವಿಫಲನಾದನು.

೧೫೭೬ರಲ್ಲಿ ನಡೆದ ಹಲ್ದೀಘಾಟ್ ಕದನ(ಮೊಘಲ್ ಮತ್ತು ಮೇವಾರ ರಾಜವಂಶದ ನಡುವೆ ನಡೆದ ಯುದ್ಧ)ವನ್ನು ಮೊಘಲರು ಗೆದ್ದ ನಂತರ, ಸೈನ್ಯದ ಜನರಲ್ ಆಗಿದ್ದ ೧ನೇ ಮಾನ್ ಸಿಂಗನ ಆದೇಶದಂತೆ ಶಾಬಾಝ್ ಖಾನ್(ಇವನೂ ಸಹ ಮೊಘಲ್ ಸೈನ್ಯದ ಇನ್ನೊಬ್ಬ ಜನರಲ್) ಕುಂಭಲ್‌ಗಢ ಕೋಟೆಯನ್ನು ವಶಪಡಿಸಿಕೊಂಡನು. ಆದರೆ ೧೫೮೫ರಲ್ಲಿ ಅಕ್ಬರನು ದೂರದ ಲಾಹೋರ್‌ನಲ್ಲಿ ಇದ್ದ ಸಂದರ್ಭವನ್ನು ಬಳಸಿಕೊಂಡು ರಾಣಾಪ್ರತಾಪ್ ಕೋಟೆಯ ಮೇಲೆ ದಾಳಿ ಮಾಡಿ, ಕೋಟೆಯನ್ನು ಮರುವಶಪಡಿಸಿಕೊಂಡನು.

ಕೋಟೆಯೊಳಗಿನ ರಚನೆಗಳು[ಬದಲಾಯಿಸಿ]

ಬಾದಲ್ ಮಹಲ್[ಬದಲಾಯಿಸಿ]

ಕುಂಭಲ್‌ಗಢ ಕೋಟೆಯೊಳಗಿನ ಇನ್ನೊಂದು ಆಕರ್ಷಕ ಕಟ್ಟಡ, ಬಾದಲ್ ಮಹಲ್ ಎಂದು ಇದು ಕೋಟೆಯ ಮೇಲ್ಭಾಗದಲ್ಲಿದೆ. ಇದು ರಾಜಸ್ಥಾನದ ಮಹಾನ್ ರಾಜ ಮತ್ತು ಯೋಧನಾಗಿದ್ದ ಮಹಾರಾಣಾ ಪ್ರತಾಪ್ ಅವರ ಜನ್ಮಸ್ಥಳ. ಬಾದಲ್ ಮಹಲ್ ಹಸಿರು, ಬಿಳಿ ಮತ್ತು ವೈಡೂರ್ಯದ ಸುಂದರವಾದ ಬಣ್ಣ ಸಂಯೋಜನೆಯೊಂದಿಗೆ ಸುಂದರವಾದ ಕೊಠಡಿಗಳನ್ನು ಹೊಂದಿದೆ.

೧೯ನೇ ಶತಮಾನದ ಉತ್ತರಾರ್ಧದಲ್ಲಿ, ರಾಣಾ ಫತೇಹ್ ಸಿಂಗ್ ಅರಮನೆಯನ್ನು ಪುನರ್ನಿರ್ಮಿಸಲು ಉಪಕ್ರಮಗಳನ್ನು ಕೈಗೊಂಡರು. ಈ ಕೋಟೆಯು ಯುದ್ಧದ ಸಮಯದಲ್ಲಿ ಅನೇಕ ಮೇವಾರ ದೊರೆಗಳಿಗೆ ಆಶ್ರಯ ನೀಡಿತು. ಚಿತ್ತೋರ್‌ಗಢದಿಂದ ಮುಸ್ಲಿಮ್ ದಾಳಿಕೋರರಿಂದ ತಪ್ಪಿಸಿಕೊಂಡು ಬಂದ ಪುಟ್ಟ ಉದಯಸಿಂಗ್, ತನ್ನ ಬಾಲ್ಯ ಯವ್ವನ, ಮತ್ತು ರಾಜಕೀಯ ಬದುಕನ್ನು ಮುಂದುವರಿಸಿದ್ದು ಇದೇ ಅರಮನೆಯಲ್ಲಿ[೭].

ರಾಣಾ ಕುಂಭನ ಅರಮನೆ[ಬದಲಾಯಿಸಿ]

ಪಘರಾ ಪೋಲ್‌ಗೆ ಸಮೀಪದಲ್ಲಿರುವ ಈ ಅರಮನೆಯು ರಜಪೂತ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದಾಗಿದೆ. ಇದು ಸುಂದರವಾದ ದರ್ಬಾರ್ ಹಾಲ್ ಹೊಂದಿರುವ ಎರಡು ಅಂತಸ್ತಿನ ಕಟ್ಟಡವಾಗಿದೆ. ಕಾರಿಡಾರ್, ಮರ್ದಾನಾ(ಪುರುಷರಿಗಾಗಿ) ಮಹಲ್ ಮತ್ತು ಜನಾನ(ಮಹಿಳೆಯರಿಗಾಗಿ) ಮಹಲ್ ಎಂದು ಅರಮನೆಯನ್ನು ಎರಡು ಭಾಗವಾಗಿ ಬೇರ್ಪಡಿಸುತ್ತದೆ[೮].

ರಾಣಿವಾಸದವರಿಗೆ ಇರುವ ಜನಾನ ಮಹಲ್‌ನ ಗೋಡೆಗಳು ಆನೆಗಳು, ಮೊಸಳೆಗಳು ಮತ್ತು ಒಂಟೆಗಳೊಂದಿಗೆ ಚಿತ್ರಿತವಾಗಿದ್ದು, ಆಕರ್ಷಕವಾದ ಬಣ್ಣವನ್ನು ಹೊಂದಿವೆ. ವೃತ್ತಾಕಾರದ ಗಣೇಶ ದೇವಾಲಯವನ್ನು ಅಂಗಳದ ಮೂಲೆಯಲ್ಲಿ ಕಾಣಬಹುದು.

ಶಿವ ಮಂದಿರ[ಬದಲಾಯಿಸಿ]

ನೀಲಕಂಠ ಮಹಾದೇವ ಮಂದಿರ

ಕೋಟೆಯೊಳಗಿನ ಈ ದೇವಾಲಯವನ್ನು ರಾಣಾ ಕುಂಭ ನಿರ್ಮಿಸಿದ್ದಾನೆ. ಮಂದಿರದ ಒಳಗೆ ೪ರಿಂದ ೫ ಅಡಿ ಎತ್ತರದ ಶಿವಲಿಂಗ ಅತ್ಯಾಕರ್ಷಕವಾಗಿದ್ದು ಶಿವ ದೇವಾಲಯದಲ್ಲಿ ಕೆತ್ತಿದ ಕಲ್ಲಿನ ಕಂಬಗಳಿವೆ. ಈ ದೇವಾಲಯದ ಒಳಗಿರುವ ಶಿವಲಿಂಗವನ್ನು, ಬಂಗಾರದ ಅಸಲಿತನವನ್ನು ಪರೀಕ್ಷಿಸಲು ಬಳಸಲಾಗುವ ಕಸೋಟಿ ಕಲ್ಲಿನಿಂದ ಮಾಡಲ್ಪಟ್ಟಿದೆ ಎಂದು ಹೇಳಲಾಗುತ್ತದೆ[೯].

ಪಿತಾಲಿಯಾ ದೇವ್ ಮಂದಿರ[ಬದಲಾಯಿಸಿ]

ಪೂರ್ವಕ್ಕೆ ಮುಖ ಮಾಡಿ ನಿರ್ಮಿಸಲಾದ ಈ ಜೈನ ಬಸದಿ, ಕೋಟೆಯ ಉತ್ತರ ಭಾಗದಲ್ಲಿದೆ. ಕ್ರಿ.ಶ. ೧೪೫೫ರಲ್ಲಿ ಪಿಟಲಿಯಾ ಜೈನ್ ಸೇಥ್ ಎಂಬಾತ ನಿರ್ಮಿಸಿದ ಈ ಬಸದಿ, ಸಭಾಮಂಟಪ ಮತ್ತು ನಾಲ್ಕು ದಿಕ್ಕುಗಳಿಂದ ಪ್ರವೇಶದ್ವಾರಗಳನ್ನು ಹೊಂದಿರುವ ಗರ್ಭಗೃಹವನ್ನು ಒಳಗೊಂಡಿದೆ. ಪ್ರವೇಶದ್ವಾರದ ಮೇಲಿನ ಭಾಗದಲ್ಲಿ ತೀರ್ಥಂಕರನ ವಿಗ್ರಹ, ಅದರ ಸುತ್ತಲೂ ನರ್ತಿಸುತ್ತಿರುವ ದೇವ ಮತ್ತು ದೇವತೆಗಳ ಕೆತ್ತನೆಗಳಿಂದ ಅಲಂಕರಿಸಲಾಗಿದೆ[೧೦].

ಕೋಟೆಯೊಳಗಿನ ಜೈನ ಮಂದಿರಗಳು

ಗಣೇಶ ಮಂದಿರ[ಬದಲಾಯಿಸಿ]

ರಾಮ್ ಪೋಲ್‍ನ ಎಡಕ್ಕೆ ಇರುವ ಈ ದೇವಾಲಯವನ್ನು ರಾಣಾ ಕುಂಭ ನಿರ್ಮಿಸಿದ್ದಾನೆ. ಗರ್ಭಗೃಹದಲ್ಲಿನ ಎತ್ತರದ ಪೀಠದ ಮೇಲೆ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಮಂದಿರವು ಕಂಬಗಳಿಂದ ನಿರ್ಮಿತವಾದ ಕಕ್ಷಾಸನ ಮಂಟಪ, ಮುಖಮಂಟಪ, ಅಂತರಾಳ, ಮತ್ತು ಗರ್ಭಗೃಹವನ್ನು ಹೊಂದಿದೆ. ಮಂಟಪ ಮತ್ತು ಮುಖ ಮಂಟಪದ ಮೇಲೆ ಗುಮ್ಮಟಾಕಾರದ ಛಾವಣಿಯನ್ನು ನಿರ್ಮಿಸಿಲಾಗಿದೆ[೧೧].

ಇತರ ವಿಶೇಷತೆಗಳು[ಬದಲಾಯಿಸಿ]

 • ಪುರಾತನ ಕಾಲದಲ್ಲಿ ಕಟ್ಟಿರುವ ಗೋಡೆಗಳಲ್ಲಿ, ಕುಂಭಲ್‌ಗಢ ವಿಶ್ವದಲ್ಲಿಯೇ ೨ನೇ ಅತಿ ಉದ್ದದ ಗೋಡೆ (ಮೊದಲನೆಯದು ಚೀನಾದ ಮಹಾಗೋಡೆ)
 • ಈ ಕೋಟೆ, ಮಹಾರಾಣಾ ಪ್ರತಾಪನ ಜನ್ಮಸ್ಥಳವೂ ಹೌದು. ಚಿತ್ತೋರ್‌ಗಢದಿಂದ ಮುಸ್ಲಿಮ್ ದಾಳಿಕೋರರಿಂದ ತಪ್ಪಿಸಿಕೊಂಡು ಬಂದ ಉದಯಸಿಂಗ್ ಪ್ರತಾಪನ ತಂದೆ.
 • ಸ್ಥಳೀಯ ಹಿರಿಯರು ಹೇಳುವ ಪ್ರಕಾರ, ಕಣಿವೆಯಲ್ಲಿ ರಾತ್ರಿ ಕೆಲಸ ಮಾಡುತ್ತಿದ್ದ ರೈತರಿಗೆ ಬೆಳಕು ಒದಗಿಸುವ ಸಲುವಾಗಿ ಮಹಾರಾಣ ಕುಂಭ, ಐವತ್ತು ಕಿಲೋಗ್ರಾಂ ತುಪ್ಪ ಮತ್ತು ನೂರು ಕಿಲೋಗ್ರಾಂ ಹತ್ತಿಯನ್ನು ಬಳಸಿ ತಯಾರಿಸಿದ ಬೃಹತ್ ದೀಪಗಳನ್ನು ಬೆಳಗಿಸಲು ವ್ಯವಸ್ಥೆ ಮಾಡಿದ್ದ.
 • ಕುಂಭಲ್‌ಗಢ ಕೋಟೆಯ ಗೋಡೆ ಎಷ್ಟು ಅಗಲವಾಗಿದೆ ಎಂದರೆ, ಒಮ್ಮೆಗೇ ೮ ಕುದುರೆ ಸವಾರರು ಅಕ್ಕಪಕ್ಕದಲ್ಲಿ ಸವಾರಿ ನಡೆಸಬಹುದು[೧೨].
 • ಕೋಟೆಯೊಳಗೆ ಪ್ರವೇಶಿಸಲು ಒಂದಾದ ಮೇಲೆ ಒಂದು ಒಟ್ಟು ೭ ಮಹಾದ್ವಾರಗಳಿವೆ. ಪ್ರತಿಯೊಂದು ದ್ವಾರವೂ ಹಿಂದಿನ ದ್ವಾರಕ್ಕಿಂತ ಕಿರಿದಾಗುತ್ತಾ ಹೋಗುತ್ತದೆ. ಆನೆಗಳು ಮತ್ತು ಕುದುರೆಗಳು ಒಂದು ನಿರ್ದಿಷ್ಟ ಹಂತವನ್ನು ಮೀರಿ ಕೋಟೆಯನ್ನು ಪ್ರವೇಶಿಸದಂತೆ ಗೇಟ್‌ಗಳನ್ನು ಈ ರೀತಿಯಲ್ಲಿ ನಿರ್ಮಿಸಲಾಗಿದೆ[೧೩].
 • ಈ ಅಭೇದ್ಯ ಕೋಟೆಯ ಹಿಂದೆ ಒಂದು ದಂತ ಕಥೆ ಇದೆ. ರಾಜ ರಾಣಾಕುಂಭನು ಈ ಎತ್ತರವಾದ ಬೆಟ್ಟದ ಮೇಲೆ ಕೋಟೆಯನ್ನು ಕಟ್ಟಿಸಲು ಮಾಡಿದ ಪ್ರಯತ್ನವೆಲ್ಲ ವಿಫಲವಾದವು. ಹತಾಶನಾದ ರಾಜ ರಾಣಕುಂಭನು ಒಮ್ಮೆ ಧರ್ಮಗುರು ಒಬ್ಬರನ್ನು ಭೇಟಿ ಮಾಡಿ ಈ ಸಮಸ್ಯೆಗೆ ಪರಿಹಾರ ಕೇಳಿದಾದನು. ಅದಕ್ಕೆ ಅವರು ಈ ಕೋಟೆಯು ಯಾವುದೇ ಸಮಸ್ಯೆಗಳಿಲ್ಲದೇ ನಿರ್ಮಾಣವಾಗಬೇಕಾದರೆ ಅಲ್ಲೊಂದು ನರಬಲಿಯಾಗಬೇಕಿದೆ. ಅದೂ ಸ್ವಯಂ ಪ್ರೇರಿತರಾಗಿ ತನ್ನ ಜೀವವನ್ನು ತ್ಯಾಗ ಮಾಡುವ ವ್ಯಕ್ತಿಯದೇ ಆಗಿರಬೇಕೆಂದು ತಿಳಿಸುತ್ತಾರೆ. ಹಾಗೇ ಬಲಿದಾನವು ವಿಧಿವತ್ತಾಗಿ ನಡೆಯಬೇಕು, ಆ ಜಾಗದಲ್ಲೊಂದು ದೇವಾಲಯ ನಿರ್ಮಾಣವಾಗಬೇಕು ಆಗ ಮಾತ್ರ ಕೋಟೆಯು ಯಾವುದೇ ಅಡಚಣೆ ಇಲ್ಲದೇ ನಿರ್ಮಾಣವಾಗಲು ಸಾಧ್ಯ ಎಂದು ಸೂಚಿಸುತ್ತಾರೆ. ಆದರೆ ರಾಣಕುಂಭನಿಗೆ ಎಷ್ಟು ಪ್ರಚಾರ ಮಾಡಿದರೂ ಸ್ವಯಂ ಪ್ರೇರಿತರಾಗಿ ಮುಂದೆ ಬದು ತನ್ನ ಜೀವವನ್ನು ಬಲಿ ನೀಡುವ ವ್ಯಕ್ತಿ ಸಿಗಲೇ ಇಲ್ಲ. ಆದರೆ ಕೆಲವು ವರ್ಷಗಳ ನಂತರ ಇಲ್ಲಿಗೆ ಬಂದ ಯಾತ್ರಿಕನೊಬ್ಬ ತನ್ನ ಜೀವವನ್ನು ಬಲಿ ನೀಡಲು ಮುಂದಾದ. ಈ ಯಾತ್ರಿಕನನ್ನು ಈ ಮೊದಲು ಸಲಹೆ ಇತ್ತ ಧರ್ಮಗುರು ಎಂದು ಸಹ ಹೇಳಲಾಗುತ್ತದೆ. ನಂತರ ನರಬಲಿಯು ವಿಧಿವತ್ತಾಗಿ ನಡೆಯಿತು. ನಂತರ ಇಲ್ಲಿ ದೇವಾಲಯವನ್ನು ನಿರ್ಮಾಣ ಮಾಡಲಾಯಿತು. ಇದಾದ ನಂತರವೇ ಕೋಟೆಯ ಸುಸೂತ್ರವಾಗಿ ನಿರ್ಮಾಣವಾಗತೊಡಗಿತು[೧೪].

ಯುನೆಸ್ಕೋ ವಿಶ್ವ ಪರಂಪರೆಯ ತಾಣ[ಬದಲಾಯಿಸಿ]

೨೦೧೩ರಲ್ಲಿ ಕಾಂಬೋಡಿಯಾದ ನೊಮ್ ಪೆನ್‌ನಲ್ಲಿ ನಡೆದ ವಿಶ್ವ ಪರಂಪರೆಯ ಸಮಿತಿಯ ೩೭ ನೇ ಅಧಿವೇಶನದಲ್ಲಿ ರಾಜಸ್ಥಾನದ ಇತರ ಐದು ಕೋಟೆಗಳೊಂದಿಗೆ ಕುಂಭಲ್‌ಗಢ ಕೋಟೆಯನ್ನೂ ಸೇರಿಸಿ, ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಯಿತು[೧೫].

ಇವನ್ನೂ ಓದಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. "Kumbhalgarh Fort: An Awe-inspiring Hill Fort in Rajasthan". fabhotels.com. FabHotels. Retrieved 17 May 2021.
 2. "ARCHITECTURAL PRIDE OF MEWAR – KUMBHALGARH FORT". triparambh.com. triparambh. Retrieved 17 May 2021.
 3. "ARCHITECTURAL PRIDE OF MEWAR – KUMBHALGARH FORT". triparambh.com. triparambh. Retrieved 17 May 2021.
 4. "Kumbhalgarh Fort: An Awe-inspiring Hill Fort in Rajasthan". fabhotels.com. FabHotels. Retrieved 17 May 2021.
 5. "Kumbhalgarh Fort: An Awe-inspiring Hill Fort in Rajasthan". fabhotels.com. FabHotels. Retrieved 17 May 2021.
 6. "History Of Kumbhalgarh". liveindia.com. Rajesh Chopra. Retrieved 17 May 2021.
 7. "Badal Mahal Kumbhalgarh". liveindia.com. Rajesh Chopra. Retrieved 18 May 2021.
 8. "Kumbha Palace Kumbhalgarh". liveindia.com. Rajesh Chopra. Retrieved 18 May 2021.
 9. "Shiva Temple Kumbhalgarh". liveindia.com. Rajesh Chopra. Retrieved 18 May 2021.
 10. "Pitalia Dev Temple Kumbhalgarh". liveindia.com. Rajesh Chopra. Retrieved 18 May 2021.
 11. "Full text of "Kumbhalgarh"". archive.org. archive.org. Retrieved 18 May 2021.
 12. "Kumbhalgarh Fort: An Awe-inspiring Hill Fort in Rajasthan". fabhotels.com. FabHotels. Retrieved 17 May 2021.
 13. "Kumbhalgarh Fort: An Awe-inspiring Hill Fort in Rajasthan". fabhotels.com. FabHotels. Retrieved 17 May 2021.
 14. "ಜಗತ್ತಿನ ಎರಡನೇ ಅತಿ ಉದ್ದನೆಯ ಮಹಾಗೋಡೆ ಅದು ಇರುವುದು ಭಾರತದಲ್ಲೇ". nethyasuddi.com. nethyasuddi. Archived from the original on 17 ಮೇ 2021. Retrieved 17 May 2021.
 15. "Hill Forts of Rajasthan". whc.unesco.org. ಯುನೆಸ್ಕೋ. Retrieved 18 May 2021.