ವಿಷಯಕ್ಕೆ ಹೋಗು

ಕರ್ಣಾವತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ಣಾವತಿ ಮೇವಾರದ ರಾಣಾ ಸಂಗ್ರಾಮಸಿಂಹನ ಪತ್ನಿ, ರಾಣಾ ವಿಕ್ರಮಜಿತ್ ಮತ್ತು ರಾಣಾ ಉದಯಸಿಂಹರ ತಾಯಿ. ಈಕೆಗೆ ಕರ್ಮಾವತಿಯೆಂದೂ ಹೆಸರುಂಟು. ಹೋರಾಟದಲ್ಲಿ ತೀವ್ರವಾಗಿ ಪೆಟ್ಟುತಿಂದು, ದೇಹದಲ್ಲಿ ಎಂಬತ್ತು ಗಾಯಗಳಾಗಿದ್ದರೂ ಸ್ವಾತಂತ್ರ್ಯರಕ್ಷಣೆಗಾಗಿ ಹೋರಾಡಿದ ಸಂಗ್ರಾಮನ ಮರಣಾನಂತರ, ಬಾಲಕನಾದ ವಿಕ್ರಮಜಿತ್ ಮೇವಾರದ ಗದ್ದುಗೆಯನ್ನೇರಿದ. 1533ರಲ್ಲಿ ಗುಜರಾತಿನ ಸುಲ್ತಾನ ಬಹದ್ದೂರ್ ಷಹ ಚಿತ್ತೂರನ್ನು ಮುತ್ತಿದ. ಸಂಗ್ರಾಮನ ಕಾಲದಲ್ಲಿ ಕಳೆದುಕೊಂಡಿದ್ದ ಮಾಳ್ವವನ್ನು ಪುನರ್ವಶ ಗೊಳಿಸಿಕೊಳ್ಳುವುದು ಈತನ ಮುಖ್ಯ ಧ್ಯೇಯವಾಗಿತ್ತು. ರಾಣಾ ವಿಕ್ರಮಜಿತ್ ತನ್ನ ರಾಜಧಾನಿಯ ರಕ್ಷಣೆಯ ವಿಚಾರದಲ್ಲಿ ನಿರಾಸಕ್ತನಾಗಿದ್ದುದರಿಂದ ಇತರ ರಜಪುತ ನಾಯಕರೂ ತಂತಮ್ಮ ಜಾಗೀರುಗಳಿಗೆ ಹಿಂತಿರುಗಿದರು. ಇಂಥ ಶೋಚನೀಯ ಪರಿಸ್ಥಿತಿ ಯಲ್ಲಿ ರಾಜಮಾತೆ ಕರ್ಣಾವತಿ ಆಗಿನ ರಜಪುತ ಪದ್ಧತಿಯಂತೆ ತನ್ನ ತೋಳಬಂದಿಯನ್ನು ಮೊಗಲ್ ಚಕ್ರವರ್ತಿ ಹುಮಾಯೂನನಿಗೆ ಕಳುಹಿಸಿ ತನ್ನ ಸೋದರನನ್ನಾಗಿ ಪರಿಗಣಿಸಿ, ಆತನ ಸಹಾಯ ಯಾಚಿಸಿದಳು. ಬಹದ್ದೂರ್ ಷಹ ಮೇವಾರದ ಶತ್ರುವಾಗಿದ್ದಂತೆ ಮೊಗಲರ ಶತ್ರುವೂ ಆಗಿದ್ದ; ಮೊಗಲರನ್ನು ಗುಜರಾತ್ ಮತ್ತು ಮಾಳ್ವಗಳಿಂದ ಓಡಿಸುವ ಯತ್ನದಲ್ಲಿದ್ದ. ಕರ್ಣಾವತಿಯ ಬೇಡಿಕೆಯಂತೆ ಹುಮಾಯೂನ್ ಚಿತ್ತೂರಿನ ರಕ್ಷಣೆಗೆ ಧಾವಿಸುತ್ತಿದ್ದಾಗ, ಬಹದ್ದೂರ್ ಷಹ ಅವನಿಗೆ ಪತ್ರ ಬರೆದು ಕಾಫರರ ಮೇಲೆ ಧರ್ಮಯುದ್ಧ (ಜೇಹಾದ್) ಮಾಡುತ್ತಿರುವ ಮುಸ್ಲಿಂ ದೊರೆಯ ಮೇಲೆ ಅದೇ ಮತಕ್ಕೆ ಸೇರಿದ ಹುಮಾಯೂನ್ ಯುದ್ಧಮಾಡುವುದು ಉಚಿತವಲ್ಲವೆಂದು ತಿಳಿಸಿದ. ಈ ನಯಗಾರಿಕೆಯ ಮಾತಿನಿಂದ ವಂಚಿತನಾದ ಹೂಮಾಯೂನ್ ಕರ್ಣಾವತಿಗೆ ನೆರವು ನೀಡಲಿಲ್ಲ. ಚಿತ್ತೂರು ಶರಣು ಹೋಗಿ ಮಾಳ್ವವನ್ನು ಬಹುದ್ದೂರ್ ಷಹನಿಗೆ ಹಿಂತಿರುಗಿಸಬೇಕಾಯಿತಲ್ಲದೆ ಯುದ್ಧದ ಖರ್ಚಿಗಾಗಿ ಅಪಾರ ಧನ ಕೊಡಬೇಕಾಯಿತು. ಪ್ರಾಬಲ್ಯಾಕಾಂಕ್ಷಿಯಾದ ಬಹದ್ದೂರ್ ಷಹ ಪುನಃ 1535ರಲ್ಲಿ ಚಿತ್ತೂರನ್ನು ಮುತ್ತಿದ. ಅಪ್ರಯೋಜಕನಾಗಿದ್ದ ವಿಕ್ರಮಜಿತ್ತನನ್ನು ರಾಣಿ ಕರ್ಣಾವತಿ ಸ್ಥಳಾಂತರಿಸಿ, ಸ್ವತಃ ನಗರ ರಕ್ಷಣೆಗೆ ನಿಂತಳು. ಎಲ್ಲ ರಜಪುತ ನಾಯಕರನ್ನೂ ಯೋಧರನ್ನೂ ಹುರಿದುಂಬಿಸಿ ರಕ್ಷಣೆಯ ವ್ಯವಸ್ಥೆ ಮಾಡಿದರೂ ಮುಸ್ಲಿಮರ ಪ್ರಬಲ ಸೈನ್ಯದ ಮುಂದೆ, ಅದರಲ್ಲೂ ಫಿರಂಗಿದಳದ ಮುಂದೆ ರಜಪುತ ಸೈನ್ಯ ಸೋತು ಹೋಯಿತು. ರಜಪುತ ವೀರರೆಲ್ಲ ರಣರಂಗದಲ್ಲಿ ಹೋರಾಡುತ್ತ ಮಡಿದರು. ಕರ್ಣಾವತಿಯ ನೇತೃತ್ವದಲ್ಲಿ 1535ರ ಮಾರ್ಚ್ 8 ರಂದು 300ಕ್ಕೂ ಹೆಚ್ಚಿನ ರಜಪುತ ವೀರರಮಣಿಯರು ಜೋಹರ್ ಪದ್ಧತಿಗನುಸಾರವಾಗಿ ಅಗ್ನಿಪ್ರವೇಶ ಮಾಡಿದರು. ತನ್ನ ಮಾತೆಯ ಮತ್ತು ರಜಪುತ ಯೋಧರ ಧೈರ್ಯಸಾಹಸಗಳಿಂದ ಜಾಗೃತನಾದ ವಿಕ್ರಮಜಿತ್ ಅನತಿಕಾಲದಲ್ಲಿಯೇ ಮುಸ್ಲಿಮರನ್ನು ಹೊಡೆದಟ್ಟಿ ಚಿತ್ತೂರಿನ ಸ್ವಾತಂತ್ರ್ಯ ರಕ್ಷಿಸಿದ. *