ವಿಷಯಕ್ಕೆ ಹೋಗು

ಕುಂಟಿಕಾನಮಠ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಂಗಳೂರಿನಿಂದ ಕಾಸರಗೋಡಿಗೆ ಸಾಗುವ ಕಡಲತೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ೪೦ ಕಿಲೋಮೀಟರ್ ಪಯಣಿಸಿದರೆ ಕುಂಬಳೆ ಸಿಗುತ್ತದೆ.ಅಲ್ಲಿ ಎಡಕ್ಕೆ ತಿರುಗಿ ಬದಿಯಡ್ಕ ರಸ್ತೆಯಲ್ಲಿ ೧೪ ಕಿಲೋಮೀಟರ್ ಸಾಗಿದರೆ ಕನ್ಯಪ್ಪಾಡಿ ಎಂಬ ಒಂದು ಊರು ಸಿಗುತ್ತದೆ.ಅಲ್ಲಿ ಮತ್ತೆ ಎಡರಸ್ತೆಯಲ್ಲಿ ೪ ಕಿಲೋಮೀಟರ್ ಚಲಿಸಬೇಕು.ಪುಟ್ಟಪುಟ್ಟ ಗುಡ್ಡಗಳ ನಡುವೆ ದಟ್ಟ ಕಾಡಿನಲ್ಲಿ ಅಂಕುಡೊಂಕಾದ ದಾರಿ.ಹಸಿರ ತೇರಿನಲ್ಲಿ ತಂಪಾದ ಗಾಳಿ. ವಿಹಂಗಮನೋಟದೋಕುಳಿಯ ಸವಾರಿ.ವನರಾಶಿಯ ಮಡಿಲಲ್ಲಿ ವರದಾನದಿಯತೀರದಲ್ಲಿ ಕಟ್ಟಕಡೆಯದಾಗಿ ಸಿಗುತ್ತದೆ ಕುಂಟಿಕಾನಮಠ.

ಕುಂಟಿಕಾನ ಹೆಸರು ಬಂದದ್ದು ಹೇಗೆ?

[ಬದಲಾಯಿಸಿ]

ಪ್ರಾಚೀನಕಾಲದಲ್ಲಿ ಇಲ್ಲಿಯ ಭಕ್ತರಿಗೆ ಭಕ್ತಿ ಉಕ್ಕಿಬಂದು ದೇವರಗಾನ ಮಾಡುತ್ತಿರುವಾಗ ಕಂಠವು ಗದ್ಗದಿತವಾಗಿ ಗಾನವು ಕುಂಠಿತವಾಯಿತಂತೆ.ಆದ್ದರಿಂದ ಕುಂಠಂ ಗಾನಂ ಯಸ್ಮಿನ್ ಸಃ=ಕುಂಠಗಾನಃ,ಕುಂಠಗಾನಶ್ಚಾಸೌ ಮಠಶ್ಚ=ಕುಂಠಗಾನಮಠಃ.ಹೀಗೆ ಸಂಸ್ಕೃತದ ಕುಂಠಗಾನವು ಕನ್ನಡದಲ್ಲಿ ಕುಂಟಿಕಾನವಾಯಿತೆಂಬ ಪ್ರತೀತಿ ಇದೆ.

ಕ್ಷೇತ್ರದ ಇತಿಹಾಸ

[ಬದಲಾಯಿಸಿ]

ಸುಮಾರು ೪೦೦ ವರುಷಗಳ ಹಿಂದೆ ಈ ಪ್ರದೇಶಗಳನ್ನಾಳುತ್ತಿದ್ದ ಬಲ್ಲಾಳದ ಅರಸರಿಗೆ ತುಂಬ ತೊಂದರೆಗಳಾಯಿತಂತೆ.ಪರಿಹಾರಕಾರ್ಯಕ್ಕಾಗಿ ಕಾಶ್ಯಪಗೋತ್ರೋತ್ಪನ್ನ ವೈದಿಕ,ತಾಂತ್ರಿಕ ವಿದ್ವಾಂಸರಾದ ಮಹಾತಪಸ್ವಿಗಳಾದ ಗಂಗಾಧರಭಟ್ಟರನ್ನು ಪರಸ್ಥಳದಿಂದ ಕರೆದುಕೊಂಡು ಬಂದರು.ಕುಂಟಿಕಾನವನ್ನು ದಾನವಾಗಿ ನೀಡಿ ಆಶ್ರಯವನ್ನಿತ್ತರು.ಭಟ್ಟರು ಅನುಷ್ಠಾನವಂತರಾದರೂ ಸಂತಾನವಾಗದ ಕಾರಣ ಜ್ಯೋತಿಷಿಗಳನ್ನು ಕೇಳಿದಾಗ ಕೋಳ್ಯೂರಿನ ಮನೆದೇವರಾದ ಶ್ರೀಶಂಕರನಾರಾಯಣನಿಗೆ ಮೊರೆಹೋಗುವಂತೆ ಸಲಹೆ ನೀಡಿದರು.ಅದರಂತೆ ಭಟ್ಟರು ಉಗ್ರತಪಗೈದರು.ಕನಸಲ್ಲಿ ಕಂಡ ದೇವರು ವರಬೇಡುವಂತೆ ಕೇಳಿದಾಗ ಭಟ್ಟರು "ನನಗೆ ಸಂತಾನವಾಗಲಿ,ನನ್ನ ಸಂತತಿಯವರೆಲ್ಲಾ ನಿನ್ನನ್ನು ಚಿರಕಾಲ ಆರಾಧಿಸುವಂತಾಗಲಿ.ಹಾಗಾಗಿ ನೀನು ನನ್ನೊಂದಿಗೆ ನಮ್ಮ ಮನೆಗೆ ಬರಬೇಕು" ಎಂದಾಗ ತಥಾಸ್ತು ಎಂದು ವರವನ್ನಿತ್ತ ದೇವರು ತಾನು ಮಾತ್ರ ಅಲ್ಲಿಗೆ ಬರಲು ಒಪ್ಪಲಿಲ್ಲ.ಬದಲಾಗಿ ಕೇರಳದ ಕೊಲ್ಲಂ ಬಳಿ ಇರುವ ತನ್ನ ಪರಮಭಕ್ತನೊಬ್ಬನು ಆರಾಧಿಸುತ್ತಿರುವ ತನ್ನ ಪರಿಪೂರ್ಣ ಸಾನ್ನಿಧ್ಯವಿರುವ ಪಂಚಲೋಹದ ವಿಗ್ರಹವನ್ನು ಆತನಿಂದ ಪಡೆದು ಮನೆಯಲ್ಲಿಟ್ಟು ಪೂಜಿಸಬೇಕೆಂದು ಅನುಗ್ರಹವಾಯಿತು.ಆ ಭಕ್ತನಿಗೂ ಸ್ವಪ್ನದಲ್ಲೇ ದೇವರಿಂದ ಪ್ರೇರಣೆಯಾಯಿತು.ಗಂಗಾಧರಭಟ್ಟರು ಬರುತ್ತಿದ್ದಂತೆಯೇ ಅದನ್ನು ಆತ ಅರ್ಪಣೆಮಾಡಿದ.ಕುಂಟಿಕಾನದ ಮನೆಗೆ ತಂದು ನಿತ್ಯಪೂಜೆಗಳನ್ನು ಮಾಡಿ ಸಂತಾನಪ್ರಾಪ್ತಿಯಾಗಿ ಸಂಸಾರ ಸುಖವಾಗಿ ಸಾಗಿತು.ಆದರೆ ಅವರ ಮಗ ನಿಷ್ಠಾವಂತನಾಗದೆ ಅನುಷ್ಠಾನಹೀನನಾಗಿ ಮನೆಯಲ್ಲಿ ದುರಿತಗಳಾಯಿತು.ತಜ್ನರನ್ನು ಕೇಳಿದಾಗ ದೇವರಿಗೆ ಪ್ರತ್ಯೇಕ ಗುಡಿಯನ್ನೇ ನಿರ್ಮಿಸಬೇಕೆಂದು ಅಪ್ಪಣೆಯಾಯಿತು.ಅಂತೆಯೇ ಮೇಷಮಾಸದ ಆರಿದ್ರಾ ನಕ್ಷತ್ರದ ದಿನ ಶ್ರೀಶಂಕರನಾರಯಣನ ವಿಗ್ರಹ ಪ್ರತ್ಯೇಕ ಆಲಯದಲ್ಲಿ ಪ್ರತಿಷ್ಠಾಪನೆಗೊಂಡಿತು.ಅಂದಿನಿಂದ ಇಂದಿನವರೆಗೂ ಕುಂಟಿಕಾನದಲ್ಲಿ ಅದೇ ದಿನ ವಾರ್ಷಿಕೋತ್ಸವ,ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಅವಿಚ್ಛಿನ್ನವಾಗಿ ನಡೆದುಕೊಂಡು ಬರುತ್ತಿದೆ.

ಧಾರ್ಮಿಕ ಕಾರ್ಯಕ್ರಮಗಳು

[ಬದಲಾಯಿಸಿ]

ಕೋಳ್ಯೂರು ಶಂಕರನಾರಾಯಣ ದೇವರ ಅನುಗ್ರಹ,ಆಶಯದಿಂದಲೇ ಉದ್ಭವಿಸಿದ ಕುಂಟಿಕಾನಮಠದಲ್ಲಿ ಆ ದೇವರ ಮಧುರ ಸ್ಮರಣೆಗಾಗಿ ವರ್ಷಂಪ್ರತಿ ಧನುರ್ಮಾಸದ ೧೮ಕ್ಕೆ ಕೋಳ್ಯೂರಿನ ಮಂಡಲಪೂಜೆಯ ದಿನವೇ ಇಲ್ಲಿಯೂ ಸಹ ಶತರುದ್ರಾಭಿಷೇಕ ಸಹಿತ ವಿಶೇಷ ಅರ್ಚನೆಗಳು ಮಠದ ಮನೆಯವರಿಂದ ನಡೆದುಕೊಂಡು ಬರುತ್ತಿದೆ.ವೃಶ್ಚಿಕ ಮಾಸದ ಎಲ್ಲಾ ಸೋಮವಾರಗಳಲ್ಲಿಯೂ ನಡೆಯತಕ್ಕ ವಿಶೇಷ ಪೂಜೆಗಳನ್ನು ಇಲ್ಲಿ ೧-ಮಠದ ವರ್ಗ,೨-ಕೈಲಂಕಜೆ ವರ್ಗ,೩-ಕುಂಟಿಕಾನ ವರ್ಗ,೪-ಅಂಬಟೆಗಯ ವರ್ಗ ಎಂಬ ನಾಲ್ಕು ವರ್ಗದವರೂ ನಡೆಸಿಕೊಂಡು ಬರುತ್ತಿದ್ದಾರೆ. ಇನ್ನು ಪ್ರತೀವರ್ಷ ವಾರ್ಷಿಕೋತ್ಸವದಂದು ಅಯನೋತ್ಸವ,ಹರಕೆಸೇವೆ,ಭೂತಕೋಲ,ಯಕ್ಷಗಾನ ಹಾಗು ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದುಕೊಂಡು ಬರುತ್ತಿದೆ.

ವರದಾ ಜಲಾಭಿಷೇಕ

[ಬದಲಾಯಿಸಿ]

ಗತಕಾಲದಿಂದಲೂ ದೇವಾಲಯದ ಎದುರು ಭಾಗ ಹರಿಯುತ್ತಿರುವ ವರದಾನದಿಯ ನೀರೇ ದೇವರಿಗೆ ಪ್ರಿಯವಾಗಿ ಅಭಿಷೇಕವಾಗುತ್ತಿದೆ.ಈ ನದಿಯು ಮುಂಡೋಳು ಶ್ರೀದುರ್ಗಾಪರಮೇಶ್ವರೀ ದೇವಿಯ ಸನ್ನಿಧಿಯಲ್ಲಿ ಹುಟ್ಟಿ ಹರಿಯುತ್ತಾ ತನ್ನ ತೀರದಲ್ಲಿರುವ ಕೃಷೀಕ್ಷೇತ್ರಗಳಿಗೆ ನಿರುಣಿಸಿ ಸಮೃದ್ಧಿಗೊಳಿಸುತ್ತಾ ಹಲವಾರು ಪುಣ್ಯಕ್ಷೇತ್ರಗಳನ್ನು ಹಾದು ಅಂತಿಮವಾಗಿ ಸಿರಾಕ್ಷೇತ್ರದ ಮಹಲಿಂಗೇಶ್ವರನ ಸನ್ನಿಧಿಯಲ್ಲಿ ಸಾಗರವನ್ನು ಸೇರುತ್ತದೆ.ಬೇಸಿಗೆಯಲ್ಲಿ ದೇವಸ್ಥಾನದ ಎದುರು ವರದಾ ನದಿಗೆ ಒಡ್ಡನ್ನು ಹಾಕಿದಾಗ ಒಡ್ಡಿನ ಮೇಲ್ಭಾಗ ತುಂಬಿ ಉಕ್ಕುವ ನೀರು ಸುಂದರ ಜಲಪಾತವಾಗುತ್ತದೆ! ನದಿಯ ತಟದಲ್ಲಿ ಎತ್ತರದಲ್ಲಿರುವ ದೇವಾಲಯವನ್ನು ತಲುಪಲು ಹದಿನೆಂಟು ಮೆಟ್ಟಿಲುಗಳನ್ನೇರುವಾಗ ಶಬರೀಮಲೆಯ ನೆನಪಾಗಿ ಹರಿಹರಾಲಯಗಳ ಸಾಮ್ಯತೆ ಗೋಚರವಾಗುತ್ತದೆ.

ಅನ್ನಪೂರ್ಣೆಶ್ವರಿ

[ಬದಲಾಯಿಸಿ]

೧೯೭೫ರಲ್ಲಿ ನಡೆಸಿದ ಅಷ್ಟಮಂಗಲಪ್ರೆಶ್ನೆಯಯಿಂದಲೇ ಗೊತ್ತಾಗಿದ್ದು ಗರ್ಭಗುಡಿಯಲ್ಲಿ ದೇವರ ಪಕ್ಕ ಅನ್ನಪೂರ್ಣೇಶ್ವರಿಯೂ ಇದ್ದಳೆಂದು.ಶತಮಾನಗಳ ಹಿಂದೆ ಮಂತ್ರವಾದಿಗಳಾಗಿದ್ದ ಮಠದ ಮನೆಯವರೊಬ್ಬರು ಸಾನಿಧ್ಯಪೂರ್ಣ ಅನ್ನಪೂರ್ಣೆಯ ವಿಗ್ರಹವನ್ನು ಸಂಪಾದಿಸಿ ಪೀಠದಲ್ಲಿರಿಸಿ ಸ್ವಾಮಿಯಪೂಜೆಯ ಜೊತೆಗೆ ನಿತ್ಯ ದೇವಿಯಪೂಜೆಯನ್ನೂ ರಹಸ್ಯವಾಗಿ ನಡೆಸಿಕೊಂಡು ಬಂದಿದ್ದರು.ಇದರ ಅರಿವಿರದ ಕುಟುಂಬದವರು ಸುಬ್ರಹ್ಮಣ್ಯಸ್ವಾಮಿಯ ವಿಗ್ರಹವೆಂದು ಭಾವಿಸಿ ಅದಕ್ಕೂ ಪೂಜೆ ಮಾಡುತ್ತಿದ್ದರು.ಈಗ ನೋಡಿದರೆ ಅದು ಅನ್ನಪೂರ್ಣೆ! ಹಾಗಾಗಿ ನಿತ್ಯಪೂಜೆಯೊಡನೆ ನವರಾತ್ರಿಯಲ್ಲೂ ದೇವಿಗೆ ವಿಶೇಷ ಅರ್ಚನೆ.