ಕುಂಜಪಕ್ಷಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುಂಜಪಕ್ಷಿಗಳು
Male satin bowerbird
Ptilonorhynchus violaceus
Scientific classification
ಸಾಮ್ರಾಜ್ಯ:
Animalia
ವಿಭಾಗ:
ವರ್ಗ:
ಗಣ:
ಉಪಗಣ:
ಕುಟುಂಬ:
Ptilonorhynchidae

GR Gray, 1841
Genera

Ailuroedus
Amblyornis
Chlamydera
Prionodura
Ptilonorhynchus
Scenopooetes
Sericulus

ಕುಂಜಪಕ್ಷಿ ಪ್ಯಾಸೆರಿಫಾರ್ಮೀಸ್ó ಗಣದ ಟೈಲನೋರಿಂಕಿಡೀ ಕುಟುಂಬಕ್ಕೆ ಸೇರಿದ ಹಕ್ಕಿಗಳಿಗಿರುವ ಸಾಮಾನ್ಯ ಹೆಸರು (ಬೌವರ್ ಬರ್ಡ್). ಗಂಡು ಹಕ್ಕಿ ಹೆಣ್ಣಿನೊಡನೆ ನಡೆಸುವ ಪ್ರಣಯಾಚರಣೆಯ ಅಂಗವಾಗಿ ಸುಂದರವಾದ ಮತ್ತು ಅಕರ್ಷಕವಾದ ಲತಾ ಕುಂಜಗಳನ್ನು ನಿರ್ಮಿಸುವುದರಿಂದ ಇವಕ್ಕೆ ಈ ಹೆಸರು ಬಂದಿದೆ.

ಪ್ರಭೇದಗಳು[ಬದಲಾಯಿಸಿ]

Female satin bowerbird

ಟೈಲನೋರಿಂಕಿಡೀ ಕುಟುಂಬದಲ್ಲಿ ಸುಮಾರು 17 ಪ್ರಭೇದಗಳಿವೆ. ಇವುಗಳಲ್ಲಿ ಮುಖ್ಯವಾದವು ಟೈಲನೋರಿಂಕಸ್ ವಯೊಲೇಸಿಯಸ್ (ಸ್ಯಾಟಿನ್ ಬೌವರ್ ಬರ್ಡ್). ಸೆರಿಕ್ಯುಲಸ್ ಅರಿಯಸ್ (ಗೋಲ್ಟನ್ ಬೌವರ್ ಬರ್ಡ್), ಸೆರಿಕ್ಯುಲಸ್ ಕ್ರೈಸೋಸಿ ಫ್ಯಾಲಸ್ (ರೀಜೆಂಟ್ ಬೌವರ್ ಬರ್ಡ್) ಕ್ಲಾಮಿಡೀರ ಮ್ಯಾಕ್ಯುಲೇಟ (ಸ್ಟಾಟೆಡ್ ಬೌವರ್ ಬರ್ಡ್). ಅಂಬಿಐಯಾರ್ನಿಸ್ ಇನಾರ್ನೇಟಸ್ (ಕ್ರೆಸ್ಟ್‍ಲೆಸ್ ಗಾರ್ಡನರ್) ಮುಂತಾದವು. ಎಲ್ಲ ಪ್ರಭೇದಗಳೂ ಆಸ್ಟ್ರೇಲಿಯ ಮತ್ತು ನ್ಯೂ ಗಿನಿಗಳಲ್ಲಿ ಮಾತ್ರ ಕಾಣಬರುತ್ತವೆ.

ಲಕ್ಷಣಗಳು[ಬದಲಾಯಿಸಿ]

ಎಲ್ಲ ಪ್ರಭೇದಗಳ ಹಕ್ಕಿಗಳೂ ಸುಮಾರು 8”-14” ಉದ್ದವಿರುವ ಮಧ್ಯಮ ಗಾತ್ರದವು. ಹೆಣ್ಣು ಹಕ್ಕಿಗೆ ಆಕರ್ಷಕವಾದ ಬಣ್ಣವಿಲ್ಲ. ಗಂಡುಗಳು ಮಾತ್ರ ಅತ್ಯಂತ ವರ್ಣರಂಜಿತವಾಗಿವೆ. ನೇರಳೆ, ಕೆಂಪು, ಕಿತ್ತಳೆ, ಕಪ್ಪು, ಬಂಗಾರ, ಹಸಿರು ಇತ್ಯಾದಿ ಬಣ್ಣಗಳ ವೈವಿಧ್ಯವಲ್ಲದೆ ತಲೆಯ ಮೇಲೆ ಹಲವಾರು ಬಣ್ಣಗಳ ಕಿರೀಟಗಳಿರುವುದೂ ಉಂಟು. ಈ ಲಕ್ಷಣದಲ್ಲಿ ಕುಂಜಪಕ್ಷಿಗಳು ತಮ್ಮ ಹತ್ತಿರದ ಸಂಬಂಧಿಗಳಾದ ದಿವ್ಯಪಕ್ಷಿಗಳನ್ನು (ಬಡ್ರ್ಸ್ ಅಫ್ ಪ್ಯಾರಡೈಸ್) ಹೋಲುತ್ತವೆ.

ಸಂತಾನೋತ್ಪತ್ತಿ[ಬದಲಾಯಿಸಿ]

Two males displaying to a female masked bowerbird, Sericulus aureus, illustrated by John Gould (1804–1881)

ಕುಂಜಪಕ್ಷಿಗಳ ಗಂಡುಗಳು ತಮ್ಮ ಪ್ರಣಯಕೇಳಿಗಾಗಿ ಸುಂದರವಾದ ಲತಾ ಕುಂಜಗಳನ್ನು ಕಟ್ಟುತ್ತವೆ. ಮತ್ತು ಎಲೆಗಳಿಂದ ನಿರ್ಮಿಸುವ ಕುಂಜಗಳನ್ನು ಮೂಳೆ ಚೂರುಗಳು, ಜರೀಗಿಡಗಳು, ಅರ್ಕಿಡ್‍ಸಸ್ಯಗಳು, ಗರಿಗಳು, ಗಾಜಿನಚೂರುಗಳು, ಹೂಗಳು, ಬಸವನ ಹುಳುವಿನ ಚಿಪ್ಪು, ಹೊಳೆಯುವ ಬಣ್ಣದ ಕಾಯಿಗಳು ಮುಂತಾದುವುಗಳಿಂದ ಅಲಂಕರಿಸುತ್ತವೆ. ಇವನ್ನು ಜೋಡಿಸುವಲ್ಲಿ ಒಪ್ಪ ಓರಣವನ್ನು ಪ್ರದರ್ಶಿಸುತ್ತವೆ. ಕುಂಜವನ್ನು ನಿರ್ಮಿಸುವ ಮೊದಲು ಅದಕ್ಕೆ ಸರಿಯಾದ ಸ್ಥಳವನ್ನು ಅಯ್ದು, ಶುಚಿಗೊಳಿಸಿ, ಸುಮಾರು 4 ಚದರಡಿ ಸ್ಥಳದಲ್ಲಿ ಕಡ್ಡಿಗಳನ್ನು ಹರಡಿ ಅನಂತರ 1 ಆಡಿ ಎತ್ತರದ ಎರಡು ದಪ್ಪ ಕಡ್ಡಿಗಳನ್ನು ಅಚೀಚೆ ಸಿಕ್ಕಿಸಿ ಅದರ ಮೇಲೆಲ್ಲ ಓರೆಯಾಗಿ ಚಾವಣಿಯನ್ನು ನಿರ್ಮಿಸುತ್ತವೆ. ರೀಜೆಂಟ್ ಮತ್ತು ಸ್ಯಾಟಿನ್ ಬೌವರ್ ಹಕ್ಕಿಗಳು ತಮ್ಮ ಜೊಲ್ಲಿನೊಂದಿಗೆ ಸಸ್ಯಜನ್ಯಬಣ್ಣಗಳನ್ನು ಸೇರಿಸಿ ಕುಂಜಗಳಿಗೆ ಬಳಿಯುವುದೂ ಉಂಟು. ಬಣ್ಣ ಬಳಿಯುವಾಗ ಯಾವುದಾದರೂ ಮರದ ತೊಗಟೆಯನ್ನೊ ಎಲೆಗಳ ಕಂತೆಯನ್ನೊ ಕುಂಚದಂತೆ ಉಪಯೋಗಿಸುತ್ತವೆ. ಈ ಎಲ್ಲ ಲಕ್ಷಣಗಳಲ್ಲಿ ಮಾನವನಿಗೂ ಕಡಿಮೆಯಿಲ್ಲದ ಜಾಣ್ಮೆ, ಕೌಶಲವನ್ನು ಪ್ರದರ್ಶಿಸುತ್ತವೆ. ಲತಾಕುಂಜಗಳನ್ನು ನಿರ್ಮಿಸುವುದೊಂದೇ ಅಲ್ಲದೆ ಅವನ್ನು ಅತ್ಯಂತ ಶ್ರದ್ಧೆ, ಉತ್ಸಾಹಗಳಿಂದ ಕಾಯುವುದು, ಬೇರೆ ಯಾವ ಗಂಡುಹಕ್ಕಿಯೂ ಇದರ ಹತ್ತಿರ ಬರದಂತೆ ನೋಡಿಕೊಳ್ಳುವುದು, ಬಾಡಿದ ಎಲೆ ಹೂಗಳನ್ನು ಬದಲಿಸುವುದು ಮುಂತಾದ ಕಾರ್ಯಗಳನ್ನು ನಡೆಸುತ್ತದೆ. ಹೀಗೆ ನಿರ್ಮಿಸುವ ಕುಂಜಗಳು ಒಂದೊಂದು ಪ್ರಭೇದದಲ್ಲೂ ಭಿನ್ನವಾಗಿವೆ. ಈ ಕುಂಜಗಳನ್ನು ಗಂಡು ಹೆಣ್ಣುಗೆಳೆರಡೂ ತಮ್ಮ ಪ್ರಣಯಾಚರಣೆಯ ರಂಗಭೂಮಿಯಾಗಿ ಉಪಯೋಗಿಸುತ್ತವೆ. ಗಂಡು ಹೆಚ್ಚು ಕಡಿಮೆ ಇಂಥ ಗೂಡಿನಬಳಿಯೇ ಯಾವಾಗಲೂ ಇದ್ದು ಬೇರೆ ಗಂಡುಗಳೊಂದಿಗೆ ಜಗಳವಾಡುತ್ತಲೊ ಹೆಣ್ಣು ಹಕ್ಕಿಗಳನ್ನು ಅಕರ್ಷಿಸುವ ಸಲುವಾಗಿ ಕುಣಿಯುತ್ತಲೊ ಕಾಲಕಳೆಯುತ್ತದೆ. ವರ್ಷ ವರ್ಷವೂ ಒಂದೇ ಕುಂಜವನ್ನು ಉಪಯೋಗಿಸುವುದು ವಾಡಿಕೆ. ಅದನ್ನೆ ರಿಪೇರಿಮಾಡುವುದು, ಹೆಚ್ಚಿಸುವುದು ನಡೆದೇ ಇರುತ್ತದೆ. ಇಷ್ಟೆಲ್ಲ ಶ್ರದ್ಧೆ ಉತ್ಸಾಹಗಳಿಂದ ಕುಂಜಗಳನ್ನು ನಿರ್ಮಿಸುವ ಜಾಣ್ಮೆ ಗಂಡುಹಕ್ಕಿಗಿದ್ದರೂ ಈ ಸಾಮರ್ಥ್ಯವನ್ನು ಮೊಟ್ಟಿಯಿಡುವುದಕ್ಕಾಗಿ ಗೂಡುಕಟ್ಟಲು ಉಪಯೋಗಿಸುವುದಿಲ್ಲ. ಮೊಟ್ಟಿಯಿಡುವ ಕಾಲದಲ್ಲಿ ಹೆಣ್ಣು ಹಕ್ಕಿ ಬೇರೆ ಹೋಗಿ ಮರಗಳಮೇಲೆ ಕಡ್ಡಿಗಳನ್ನು ಬಳಸಿಕೊಂಡು ಒರಟಾದ ಗೂಡನ್ನು ನಿರ್ಮಿಸಿ 2-4 ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಗಳ ಮೇಲೆ ಕಾವುಕೂರುವ ಕೆಲಸ, ಮರಿಗಳ ಪಾಲನೆ ಹೆಣ್ಣಿಗೆ ಸೇರಿದ್ದು.

ಆಹಾರ[ಬದಲಾಯಿಸಿ]

ಕುಂಜಪಕ್ಷಿಗಳ ಆಹಾರ ಹಣ್ಣು, ಬೀಜ, ಜೀರುಂಡೆ ಮುಂತಾದವು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: