ವಿಷಯಕ್ಕೆ ಹೋಗು

ಕೀಲು ಗೊಂಬೆಯಾಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೀಲುಗೊಂಬೆಯಾಟ[][] ಪ್ರಕಾರ ಇಂದು ಅಸ್ತಿತ್ವದಲ್ಲಿ ಇಲ್ಲವಾಗಿದೆ. ಇದರ ರಂಗ ಮಂಚ ಪೆಟ್ಟಿಗೆಯಾಕಾರವಾಗಿರುತಿತ್ತು. ಪ್ರೇಕ್ಷಕರಿಗೆ ಗೊಂಬೆಗಳು ಮಾತ್ರ ತೋರಿ ಬರುವಂತೆ ಕೀಲುಗಳ ಸಹಾಯದಿಂದ ಕುಣಿಸುತ್ತಿದ್ದರು. ಜನಪದ ಕಥೆಯನ್ನು ವಿಶ್ವಕರ್ಮ ಜನವರ್ಗದ ಕಲಾಕಾರರು ಪ್ರದರ್ಶಿಸುತ್ತಿದ್ದರು. ಇಂದು ಈ ಬಗೆಯ ಗೊಂಬೆಗಳನ್ನು ಮೈಸೂರು ಜಯಲಕ್ಷ್ಮಮ್ಮಣ್ಣಿ ಜಾನಪದ ವಸ್ತುಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾಗಿದೆ.

ಇತಿವೃತ್ತ

[ಬದಲಾಯಿಸಿ]
  • ಈ ಗೊಂಬೆಗಳನ್ನು ಮೈಸೂರು ಜಾನಪದ ಸಂಗ್ರಹಾಲಯಕ್ಕೆ ಸೇರಿಸಿದ ಕೀರ್ತಿ ಪ್ರೊ. ಜೀ.ಶಂ.ಪರಮಶಿವಯ್ಯ ಹಾಗೂ ಸಂಗ್ರಹಾಲಯದ ಕ್ಯುರೇಟರ್ ಆಗಿದ್ದ ಪಿ.ಆರ್.ತಿಪ್ಪೇಸ್ವಾಮಿ ಇವರಿಗೆ ಸಲ್ಲುವುದು. ಮೂಲತಃ ಈ ಪ್ರಕಾರವು ತಿಪಟೂರು ಭಾಗದ ಹೊನ್ನವಳ್ಳಿ ಎಂಬ ಗ್ರಾಮದಲ್ಲಿ ಇತ್ತೆಂಬುದಾಗಿ ತಿಳಿಯಲಾಗಿದೆ. ಕಟ್ಟಿಗೆಯಿಂದ ಮಾಡಿದ ಈ ಗೊಂಬೆಗಳನ್ನು ವಿಶ್ವಕರ್ಮ ಜನವರ್ಗದವರು ಕುಣಿಸುತ್ತಿದ್ದರು. ಗೊಂಬೆಯ ಕೆಳಭಾಗದಲ್ಲಿ ಉದ್ದನೆಯ ಕೊಳವೆ ಅಳವಡಿಸುತ್ತಿದ್ದರು.
  • ಇದರ ಮೂಲಕ ಕೈ-ಕಾಲುಗಳಗೆ ಜೋಡಿಸಿದ ಸೂತ್ರವನ್ನು ಆಡಿಸುವ ತಂತ್ರದ ಮೂಲಕ ಗೊಂಬೆಯಾಟ ಪ್ರದರ್ಶಿಸುತ್ತಿದ್ದರು. ಸಾಮಾನ್ಯವಾಗಿ ಸಂತೆ, ಅಥವಾ ಜಾತ್ರೆಗಳಲ್ಲಿ ಡೇರೆ ಹಾಕಿ ಹಗಲು ವೇಳೆ ಪ್ರದರ್ಶನ ನೀಡುತ್ತಿದ್ದರು. ಟಿಕೇಟು ಪಡೆದು ಗೊಂಬೆಯಾಟವನ್ನು ಜನ ನೋಡುತ್ತಿದ್ದರು. ಈ ಕಲೆಯು ೧೯೩೦ರ ವೇಳೆಗೆ ಕ್ಷೀಣಗೊಂಡಿತ್ತು.
  • ಈ ಪ್ರಕಾರದಲ್ಲಿ 'ಮೃದಂಗ' 'ತಾಳ' ಮತ್ತು 'ಬಿದಿರಿನ ಪಟ್ಟಿಯ ಪೀಪಿ' (ರಾಜಸ್ಥಾನದ ಕಟ್ ಪುತ್ಲಿ ಪ್ರಕಾರದಲ್ಲಿ ಈ ವಾದ್ಯವನ್ನು 'ಬೋಲಿ' ಎಂದು ಕರೆಯಲಾಗಿದೆ) ಉಪಯೋಗಿಸುತ್ತಿದ್ದರು. ಹಾಸ್ಯ ಪಾತ್ರಗಳಲ್ಲಿ ದಾಸಯ್ಯ, ಮಡಿವಾಳ ಗೊಂಬೆಗಳು ಇರುತ್ತಿದ್ದವು. ಮುಖ್ಯ ಪಾತ್ರಗಳಲ್ಲಿ ರಾಜ, ರಾಣಿ, ಹಾಗೂ ಸೈನಿಕರ ಗೊಂಬೆಗಳನ್ನು ಬಳಸುತ್ತಿದ್ದರು. ಇಂದು ಈ ಪ್ರಕಾರವು ಕರ್ನಾಟಕದಲ್ಲಿ ನೋಡಲು ಮೈಸೂರು ವಿಶ್ವವಿದ್ಯಾನಿಲಯದ ಜಾನಪದ ವಸ್ತು ಸಂಗ್ರಹಾಲಯದಲ್ಲಿ ಮಾತ್ರ ದೊರಕುವುದು.

ಕೀಲುಗೊಂಬೆಯಾಟ ತಂತ್ರ ಮತ್ತು ಪ್ರಯೋಗ

[ಬದಲಾಯಿಸಿ]
  • ಕರ್ನಾಟಕ ಗಡಿ ಭಾಗದಲ್ಲಿ ಹೊಂದಿಕೊಂಡಿರುವ ಕಾಸರಗೋಡು ಭಾಗದಲ್ಲಿ ಶ್ರೀ ಗೋಪಾಲ ಕೃಷ್ಣ ಯಕ್ಷಗಾನ ಬೊಂಬೆಯಾಟ ತಂಡವಿದೆ, ಈ ಗೊಂಬೆಯಾಟದ ಸ್ಥಾಪಕರು ದಿ.ಕೆ.ವೆಂಕಟಕೃಷ್ಣಯ್ಯ, ಪ್ರಸ್ತುತ ಇವರ ಪುತ್ರ ರಮೇಶ ಕೆ.ವಿ. ೧೯೮೧ರಲ್ಲಿ ಈ ತಂಡ ತನ್ನ ಮೊದಲ ಪ್ರಯೋಗವನ್ನು ನೀಡಿದ್ದು ಸಲಾಕಿ ಗೊಂಬೆಯಾಟ ಎಂದು ಕರೆಯುವ ಶೈಲಿಯು ಇವರದಾಗಿತ್ತು.
  • ಈ ಗೊಂಬೆಯಾಟದವರು ತಿಳಿಸುವಂತೆ ಗೊಂಬೆಗಳು ತೆಂಕು ಶೈಲಿಯ ಆಕಾರ ಹಾಗೂ ಪ್ರಭಾವ ಹೊಂದಿದ್ದರೂ ಕುಣಿಸುವಲ್ಲಿ ಈ ಗೊಂಬೆಗಳಿಗೆ ಸೂತ್ರಗಳಿಲ್ಲ, ಗೊಂಬೆಯ ಕೆಳ ಭಾಗದಲ್ಲಿ ಉದ್ದನೆಯ ಸಲಾಕಿಗೆ ಗೊಂಬೆಯನ್ನು ತೂರಿಸಿ ಅಟ್ಟದ ಕೆಳಭಾಗದಿಂದ ಕೈಗಳಲ್ಲಿ ಹಿಡಿದ ಗೊಂಬೆಗಳನ್ನು ಮೇಲೆತ್ತಿ ತೋರಿಸುವ ತಂತ್ರಗಾರಿಕೆಯನ್ನು ಕರ್ನಾಟಕದಲ್ಲಿ ಮೊದಲಬಾರಿಗೆ ಬಳಸಿದ ಕೀರ್ತಿ ಈ ತಂಡದ ಕಲಾವಿದರಿಗೆ ಸೇರುವುದು.
  • ಕರ್ನಾಟಕ ಹಾಗೂ ಕೇರಳಕ್ಕೆ ಈ ತಂತ್ರಗಾರಿಕೆ ಹೊಸತು ಎನಿಸಿದರೂ ಈ ಬಗೆಯ ತಂತ್ರಗಾರಿಕೆಯನ್ನು ಮೈಸೂರು ತಿಪಟೂರು ಭಾಗದಲ್ಲಿ ಪ್ರಚಲಿತವಿದ್ದ ಕೀಲುಗೊಂಬೆಯಾಟ ಮಾದರಿಯನ್ನು ಹೋಲುವುದು. ಈ ಶೈಲಿಯ ಗೊಂಬೆಯಾಟ ಇಂದಿಗೂ ಪಶ್ಚಿಮ ಬಂಗಾಲದಲ್ಲಿ ಅತ್ಯಂತ ಖ್ಯಾತಿ ಪಡೆದಿದೆ, ಈ ಪ್ರಕಾರವನ್ನು ಡಾಂಗೆರ ಪುತುಲ್ (ದಂಡದ ಮೂಲಕ ಕುಣಿಸುವ ಗೊಂಬೆ) ಎಂದು ಕರೆಯಲಾಗಿದೆ.
  • ಕರ್ನಾಟಕದಲ್ಲಿ ಸೂತ್ರದ ಗೊಂಬೆಯಾಟ ಪ್ರಸಿದ್ಧಿ ಪಡೆದಂತೆ ಉತ್ತರ ಭಾರತದ ಭಾಗದಲ್ಲಿ ಡಾಂಗೆರ ಪುತುಲ್ ಅತ್ಯಂತ ಜನಪ್ರಿಯತೆಯನ್ನು ಪಡೆದಿರುವ ಗೊಂಬೆಯಾಟ ಮಾಧ್ಯಮವಾಗಿದೆ. ಈ ಶೈಲಿಯನ್ನು ಆಧರಿಸಿ ಕೊಲ್ಕತ್ತಾದ ಶ್ರೀ ಸುರೇಶ ದತ್ತಾ ಇವರು ಅಲ್ಲಾವುದ್ದೀನ್ ಅದ್ಭುತ ಕಥೆ ಒಂದು ಸಾವಿರಕ್ಕೂ ಮಿಗಿಲಾಗಿ ಪ್ರದರ್ಶನ ನೀಡಿ ರಾಷ್ಟ್ರೀಯ ಅಂತರ್ರಾಷ್ಟ್ರೀಯ ಖ್ಯಾತಿಯನ್ನು ಗಳಿಸಿರುವರು.
  • ಈ ಒಂದು ಮಾದರಿಯ ತಂತ್ರಗಾರಿಕೆ ಕರ್ನಾಟಕದಲ್ಲಿ ೧೯೩೦ರ ದಶಕದಲ್ಲಿ ಇತ್ತೆಂಬುದು ಇಂದು ಇತಿಹಾಸದ ಕೋಶದಲ್ಲಿ ಸೇರ್ಪಡೆಯಾದ ವಿಷಯವಾಗಿದೆ. ೨೦೦೩-ರ ತನಕ ಕಾಸರಗೋಡು ಶ್ರೀ ಗೋಪಾಲ ಕೃಷ್ಣ ಯಕ್ಷಗಾನ ಬೊಂಬೆಯಾಟ ತಂಡ ಕೀಲು ಗೊಂಬೆಯಾಟ ಮಾದರಿಯ ತಂತ್ರವನ್ನು ಅಳವಡಿಸಿ ಪ್ರದರ್ಶನ ನೀಡುತ್ತಿದ್ದರು. ಇತ್ತೀಚಿಗೆ ಈ ಶೈಲಿಯು ಬಹಳಷ್ಟು ಶ್ರಮದಾಯಕವಾದುದೆಂದು ತಿಳಿದು ಪುನ: ಸೂತ್ರದ ಸಹಾಯದಿಂದ ಕುಣಿಸುವ ತಂತ್ರವನ್ನು ಅಳವಡಿಸಿಕೊಂಡು ತಮ್ಮ ಪ್ರದರ್ಶನ ಗಳನ್ನು ನೀಡಿ ಜನ ಮೆಚ್ಚುಗೆ ಪಡೆದಿರುವರು.

ಗ್ರಂಥ ಮೂಲ

[ಬದಲಾಯಿಸಿ]
  • ಎಸ್. ಎ.ಕೃಷ್ಣಯ್ಯ ೧೯೮೮, ಕರ್ನಾಟಕ ಪೊಪೆಟ್ರಿ (Karnataka Puppetry) ಪ್ರ:ಪ್ರಾದೇಶಿಕ ಜಾನಪದ ರಂಗ ಕಲೆಗಳ ಅಧ್ಯಯನ ಕೇಂದ್ರ ಎಂ.ಜಿ.ಎಂ. ಕಾಲೇಜು ಆವರಣ-ಉಡುಪಿ ೫೭೬ ೧೦೨

ಗ್ಯಾಲರಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. http://kannadajaanapadaparishat.blogspot.in/2016_05_01_archive.html
  2. https://kn.wikipedia.org/wiki/%E0%B2%B5%E0%B2%B0%E0%B3%8D%E0%B2%97:%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95%E0%B2%A6_%E0%B2%9C%E0%B2%BE%E0%B2%A8%E0%B2%AA%E0%B2%A6