ಕೀಟಭಕ್ಷಕ ಕೀಟಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇತರ ಜಾತಿಯ ಸಣ್ಣ ಕೀಟಗಳನ್ನು ತಿಂದು ಜೀವಿಸುವ ಕೀಟಗಳು. ಇವು ಸಾಧಾರಣವಾಗಿ ಚಟುವಟಿಕೆಯುಳ್ಳವು. ಹೆಚ್ಚು ಕಾಲಾವಧಿ ಬೇಕಾಗುವ ಜೀವನ ಚರಿತ್ರೆ ಇವುಗಳ ವೈಶಿಷ್ಟ್ಯ. ಎಲ್ಲ ಕೀಟ ಗಣಗಳಲ್ಲಿಯೂ ಕೀಟಭಕ್ಷಕ ಕೀಟಗಳುಂಟು. ಕೆಲವು ಇತರ ಜೀವಂತ ಕೀಟಗಳನ್ನು ತಿಂದು ಜೀವಿಸುತ್ತವೆ. ಮತ್ತೆ ಕೆಲವಕ್ಕೆ ಸತ್ತ ಪ್ರಾಣಿಗಳು ಅಥವಾ ಕೊಳೆತ ಸಸ್ಯಗಳೇ ಮುಖ್ಯ ಆಹಾರ. ಕೀಟಭಕ್ಷಕ ಕೀಟಗಳಲ್ಲಿ ಈ ಕೆಳಕಂಡವು ಮುಖ್ಯವಾದವು: ಓಡೊನೇಟ ಗಣದ ಕೊಡತಿಕೀಟಗಳು, ನ್ಯೂರಾಪ್ಟಿರ ಗಣದ ಸಸ್ಯ ಹೇನು ಸಿಂಹಗಳು, ಕೋಲಿಯಾಪ್ಟಿರ ಗಣದ ನೆಲದುಂಬಿಗಳು, ಡಿಪ್ಟಿರ ಗಣದ ಹೂನೊಣಗಳು, ಮ್ಯಾಂಟಾಯ್ಡಿಯ ಗಣದ ಒಂಟೆಹುಳು ಅಥವ ಮಳ್ಳಿ, ಹೈಮೆನಾಪ್ಟಿರ ಗಣದ ಕಣಜಗಳು ಮತ್ತು ಅಸಿಲಿಡೀ ಗಣದ ದರೋಡೆ ನೊಣಗಳು.

ಕೀಟಭಕ್ಷಕ ಕೀಟಗಳು[ಬದಲಾಯಿಸಿ]

ಕೀಟಭಕ್ಷಕ ಕೀಟಗಳು ಮನುಷ್ಯ ಬೆಳೆಯುವ ಸಸ್ಯಗಳನ್ನು ನಾಶಮಾಡುವ ಕೀಟಗಳನ್ನು ತಿಂದು ಅವನಿಗೆ ಸಹಕಾರಿಗಳಾಗಿವೆ. ಕೊಡತಿಕೀಟಗಳು ಹಾರುವಾಗಲೆ ತಮಗಿಂತ ಸಣ್ಣಗಾತ್ರದ ಇತರ ಕೀಟಗಳನ್ನು ಹಿಡಿದು ತಿನ್ನುತ್ತವೆ. ನೊಣಗಳು ಮತ್ತು ಸೊಳ್ಳೆಗಳು ಇವುಗಳ ಅಚ್ಚುಮೆಚ್ಚಿನ ಉಣಿಸು. ಒಂದು ಕೊಡತಿಕೀಟ ಎರಡು ಘಂಟೆಗಳ ಅವಧಿಯಲ್ಲಿ ಸುಮಾರು ನಲವತ್ತು ನೊಣಗಳನ್ನೂ, ಕೆಲವು ನಿಮಿಷಗಳಲ್ಲಿ ನೂರಾರು ಸೊಳ್ಳೆಗಳನ್ನೂ ತಿನ್ನುತ್ತವೆಯೆಂದು ಅಂದಾಜಿದೆ. ನೆಲದುಂಬಿಗಳು (ಗ್ರೌಂಡ್ ಬೀಟಲ್ಸ್) ರೈತನ ಅತ್ಯುತ್ತಮ ಸ್ನೇಹಿತರೆಂದು ಹೆಸರುಗಳಿಸಿವೆ. ವಯಸ್ಕ ಕೀಟಗಳು ಮತ್ತು ಇವುಗಳ ಮರಿಗಳು ಮಾನವನಿಗೆ ವಿವಿಧ ರೀತಿಯಲ್ಲಿ ಕೆಡುಕು ಮಾಡುವ ಕೀಟಗಳು ಮತ್ತು ಜಮೀನುಗಳಲ್ಲಿರುವ ದುಂಬಿಗಳು ಮೊದಲಾದುದನ್ನು ತಿಂದು ಜೀವಿಸುತ್ತವೆ. ಮರಿಹುಳು ಕಂಬಳಿಹುಳುವನ್ನು ಹೋಲುತ್ತವೆ. ಮರಿಹುಳುಗಳ ದೇಹ ಉದ್ದವಾಗಿಯೂ ತೆಳುವಾಗಿಯೂ ಸ್ವಲ್ಪಮಟ್ಟಿಗೆ ಚಪ್ಪಟೆಯಾಗಿಯೂ ಇದೆ. ಬಾಲ ಚೂಪಾಗಿದ್ದು ಅದರ ತುದಿಯಲ್ಲಿ ಎರಡು ತೆಳುವಾದ ಮತ್ತು ಚೂಪಾದ ಮುಳ್ಳಿನಂಥ ರಚನೆಗಳಿರುತ್ತವೆ. ಇವು ಹಗಲು ವೇಳೆಯಲ್ಲಿ ಕಲ್ಲುಸಂದಿ. ತೊಗಟೆ, ಕೊಳೆಯುತ್ತಿರುವ ಮರಗಳಲ್ಲಿ ಹುದುಗಿದ್ದು ರಾತ್ರಿ ವೇಳೆಯಲ್ಲಿ ಬೇಟೆಯಾಡುತ್ತವೆ.[೧]

ಒಡತಿ ಜೀರುಂಡೆಗಳು[ಬದಲಾಯಿಸಿ]

ಒಡತಿ ಜೀರುಂಡೆಗಳು (ಲೇಡಿ ಬರ್ಡ್ ಬೀಟಲ್ಸ್) ಪ್ರೌಢಕೀಟಗಳು ಮತ್ತು ಮರಿಗಳು ವಿನಾಶಕಾರಿಗಳಾದ ಹುರುಪೆ ಕೀಟಗಳು, ಸಸ್ಯಹೇನುಗಳು ಮತ್ತು ಇತರ ಮೃದುದೇಹದ ಕೀಟಗಳನ್ನೂ ಅವುಗಳ ಮೊಟ್ಟೆಗಳನ್ನೂ ತಿನ್ನುವುದರಿಂದ ಉಪಯುಕ್ತವಾದವು. ಮರಿಹುಳುಗಳ ದೇಹ ಕಪ್ಪಗಿದ್ದು ಕೆಲವು ವೇಳೆ ಅದರ ಮೇಲೆ ಹಳದಿ ಅಥವಾ ನೀಲಿಬಣ್ಣದ ಚುಕ್ಕೆಗಳಿರುತ್ತವೆ. ಸಸ್ಯಗಳ ಕಾಂಡ ಮತ್ತು ಎಲೆಗಳ ಮೇಲೆ ಆಹಾರಕ್ಕಾಗಿ ತೆವಳುತ್ತವೆ. ಮರಿಹುಳುಗಳು ಆಹಾರ ಸಿಕ್ಕುವ ಸ್ಥಳದಲ್ಲಿ ಕೋಶಾವಸ್ಧೆಯನ್ನು ಕಳೆಯುವುವು.

ಹೂ ನೊಣಗಳು (ಹಾವರ್ ಅಥವಾ ಫ್ಲವರ್ ಫ್ಲೈಸ್)[ಬದಲಾಯಿಸಿ]

ಇವುಗಳ ಮರಿಗಳು ಅತಿಮುಖ್ಯ ಕೀಟಭಕ್ಷಕಗಳು. ಈ ಮರಿಹುಳುಗಳು ಸಸ್ಯಹೇನುಗಳನ್ನು ಹಿಡಿದು ಅವುಗಳ ಸತ್ತ್ವವನ್ನು ಹೀರಿ ಹೊರಚರ್ಮವನ್ನು ಬಿಸುಡುತ್ತವೆ. ಬಟಾಣಿ ಸಸ್ಯಗಳನ್ನು ನಾಶ ಪಡಿಸುವ ಲಕ್ಷಾಂತರ ಸಸ್ಯಹೇನುಗಳನ್ನು ಹೆಚ್ಚುಕಡಿಮೆ ಮಿನಿಟಿಗೆ ಒಂದರಂತೆ ನಾಶ ಮಾಡುತ್ತವೆ. ಇವುಗಳ ವಯಸ್ಕ ಕೀಟಗಳು ಕೀಟಭಕ್ಷಕಗಳಲ್ಲ.

ಒಂಟೆಹುಳು[ಬದಲಾಯಿಸಿ]

ನೊಣ, ಮಿಡತೆ, ಚಿಟ್ಟೆ ಮತ್ತು ಇತರ ಜಾತಿಯ ಕೀಟಗಳನ್ನು ತಿನ್ನುತ್ತದೆ. ಇದು ಸಾಧಾರಣವಾಗಿ ಉಷ್ಣವಲಯವಾಸಿ. ಭಾರತದಲ್ಲಿ ಸುಮಾರು 100ಕ್ಕೂ ಹೆಚ್ಚು ಪ್ರಬೇಧಗಳಿವೆ.

 ಕಣಜ[ಬದಲಾಯಿಸಿ]

ಕಣಜಗಳೂ ಕೀಟಾಹಾರಿಗಳೇ. ಸಸ್ಯಗಳನ್ನು ನಾಶಪಡಿಸುವ ಕಂಬಳಿ ಹುಳುಗಳನ್ನು ಹುಡುಕಿ ತಿನ್ನುವುದರಿಂದ ಅತಿ ಸಹಾಯಕವಾಗಿವೆ. ಕೊಂದ ನೂರಾರು ಸಣ್ಣ ಕಂಬಳಿ ಹುಳುಗಳನ್ನು ತಾವು ಮಣ್ಣಿನಿಂದ ಕಟ್ಟಿದ ತಮ್ಮ ಗೂಡುಗಳಲ್ಲಿ ಶೇಖರಿಸಿ ತಮ್ಮ ಮರಿಗಳಿಗೆ ಆಹಾರವನ್ನಾಗಿ ಒದಗಿಸುತ್ತವೆ. ದರೋಡೆ ನೊಣಗಳೆಲ್ಲವೂ (ರಾಬರ್ ಫ್ಲೈಸ್) ಕೀಟಭಕ್ಷಕಗಳು. ಇವು ಇತರ ಸಣ್ಣ ಎರೆ ಕೀಟಗಳ ಮೇಲೆ ಬಿದ್ದು ದಾಳಿ ಮಾಡಿ ಕೊಲ್ಲುವುದರಿಂದ ಇವಕ್ಕೆ ಈ ಹೆಸರು ಬಂದಿದೆ. ಇವುಗಳ ಮರಿಗಳು ಗೊಬ್ಬರದ ಗುಂಡಿಗಳಲ್ಲಿಯೂ ಕೊಳೆತು ನಾರುವ ಮಣ್ಣಿನಲ್ಲಿಯೂ ಜೀವಿಸಿದ್ದು ಇತರ ಜಾತಿಯ ಕೀಟಗಳ ಮರಿಗಳನ್ನು ನಾಶಪಡಿಸುತ್ತವೆ. ಭೂಮಿಯಲ್ಲಿ ಜೀವಿಸುವ ದುಂಬಿಗಳ ಮರಿಗಳು ಇವುಗಳ ಅಚ್ಚುಮೆಚ್ಚಿನ ಆಹಾರ.[೨]

ಉಲ್ಲೇಖಗಳು[ಬದಲಾಯಿಸಿ]