ಕಿಕ್ಕೇರಿ ಕೃಷ್ಣಮೂರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಜಾನಪದ, ಸುಗಮ ಸಂಗೀತ, ರಂಗಭೂಮಿ ಮುಂತಾದ ಸಾಂಸ್ಕೃತಿಕ ಸಂಘಟನೆಗಳ ರೂವಾರಿ, ಗಾಯಕ ಕೃಷ್ಣಮೂರ್ತಿಯವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಕಿಕ್ಕೇರಿ. ತಂದೆ ಬಿ.ಎಸ್. ನಾರಾಯಣ ಭಟ್, ತಾಯಿ ರುಕ್ಮಿಣಮ್ಮ. ಓದಿದ್ದು ವಾಣಿಜ್ಯ ಡಿಪ್ಲೊಮ. ಬಿ.ಕಾಂ. ಪದವಿಯ ಜೊತೆಗೆ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಪದವಿ.

ಶಾಲಾ ಕಾಲೇಜು ದಿನಗಳಿಂದಲೂ ಹಾಡಿನ ಬಗ್ಗೆ ಮೂಡಿದ ವಿಶೇಷ ಒಲವು, ಹಲವಾರು ವರ್ಷ ಜಾನಪದ ತಜ್ಞ ಎಸ್.ಕೆ. ಕರೀಂ ಖಾನರ ಸಹವರ್ತಿ. ಕರೀಂಖಾನರ ಸಾಹಿತ್ಯಕ್ಕೆ ಸಂಗೀತ ನೀಡಿ ಮೊಟ್ಟಮೊದಲ ಧ್ವನಿಸುರಳಿಯನ್ನು ಹೊರತಂದ ಹೆಗ್ಗಳಿಕೆ. ಆಕಾಶವಾಣಿ, ದೂರದರ್ಶನದಲ್ಲಿ ಮನ್ನಣೆ ಪಡೆದ ಗಾಯಕರಾಗಿ ನಡೆಸಿಕೊಟ್ಟ ಕಾರ್ಯಕ್ರಮಗಳು ಹಲವಾರು. ದಸರಾ ಸಾಂಸ್ಕೃತಿಕ ಉತ್ಸವ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಹಂಪಿ ಉತ್ಸವ, ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ಮುಂತಾದ ಉತ್ಸವಗಳಲ್ಲಿ ನಡೆಸಿಕೊಟ್ಟ ಪ್ರಮುಖ ಕಾರ್ಯಕ್ರಮಗಳು.

ರಂಗಭೂಮಿ ನಟರಾಗಿ, ನಿರ್ದೇಶಕರಾಗಿ, ಗಾಯಕರಾಗಿಯೂ ಸಲ್ಲಿಸಿದ ಸೇವೆ. ಮೈಲಿಗಲ್ಲುಗಳು, ವೇದ ಸುಳ್ಳಾದರೂ ಗಾದೆ ಸುಳ್ಳಾಗದು, ಸಂಬಂಧಮಾಲೆ, ಗಲಿಬಿಲಿ ಕಲ್ಲೇಶಿ ಮುಂತಾದ ಧಾರಾವಾಹಿಗಳ ನಟ, ಎಲ್ಲರೂ ನಮ್ಮವ್ರೇ, ಸಮಕ್ಷಮ, ಅಂತರ ನಿರಂತರ ನಾಟಕಗಳಿಗೆ, ದೂರದರ್ಶನ ಧಾರಾವಾಹಿಗಳಿಗೆ ನೀಡಿದ ಸಂಗೀತ.

ಸುಗಮ ಸಂಗೀತದ ಸರ್ವತೋಮುಖ ಬೆಳವಣಿಗೆಗಾಗಿ ಪ್ರಾರಂಭಿಸಿದ್ದು ‘ಆದರ್ಶ ಸುಗಮ ಸಂಗೀತ ಅಕಾಡಮಿ ಟ್ರಸ್ಟ್’. ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ತರಬೇತಿ. ಉಚಿತ ವಾದ್ಯ ಪರಿಕರಗಳ ಕೊಡುಗೆ ಟ್ರಸ್ಟ್‌ನ ಪ್ರಮುಖ ಕಾರ್ಯಗಳಲ್ಲೊಂದು. ವಿದ್ಯಾರ್ಥಿಗಳ ಸುಪ್ತ ಪ್ರತಿಭಾ ಪ್ರದರ್ಶನಕ್ಕೆ ರೂಪಿಸಿದ ‘ನವಸುಮ-ವನಸುಮ’ ವೇದಿಕೆ.

ಪ್ರಶಸ್ತಿ ಗೌರವಗಳು[ಬದಲಾಯಿಸಿ]

 • ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ
 • ಗಾಯನಶ್ರೀ ಪ್ರಶಸ್ತಿ
 • ಪಿ. ಕಾಳಿಂಗರಾವ್ ಪ್ರಶಸ್ತಿ
 • ಕರ್ನಾಟಕ ಚೇತನ ಪ್ರಶಸ್ತಿ
 • ವಿಶ್ವಮಾನವ ಪ್ರಶಸ್ತಿ
 • ಗೌತಮ ಪ್ರಶಸ್ತಿ
 • ರಾಜ್ಯೋತ್ಸವ ಪ್ರಶಸ್ತಿ
 • ಭೂಪಾಲ್‌ನ ಅಖಿಲ ಭಾರತ ಭಾಷಾ ಸಮ್ಮೇಳನದ ರಾಷ್ಟ್ರೀಯ ಸಾಹಿತ್ಯಶ್ರೀ ಪ್ರಶಸ್ತಿ
 • ಸುಗಮ ಸಂಗೀತ ರತ್ನ
 • ಗಾನಕಲಾ ರತ್ನ
 • ಪ್ರಜಾಸೇವಾ ರತ್ನ
 • ಸುಗಮ ಸಂಗೀತ ಸಂಘಟಕ ಮುಂತಾದ ಬಿರುದು ಗೌರವಗಳು.

ಉಲ್ಲೇಖಗಳು[ಬದಲಾಯಿಸಿ]