ಕಾಶ್ಮೀರ ಶೈವ ಪಂಥ

ವಿವಿಧ ಹಿಂದೂ ತತ್ವಶಾಸ್ತ್ರಗಳಲ್ಲಿ, ಕಾಶ್ಮೀರ ಶೈವ ಪಂಥವು ತ್ರಿಕ ಮತ್ತು ಅದರ ತತ್ವಶಾಸ್ತ್ರೀಯ ಅಭಿವ್ಯಕ್ತಿಯಾದ ಪ್ರತ್ಯಭಿಜ್ಞಾವನ್ನು ಒಳಗೊಂಡಿರುವ ಶೈವ ಪಂಥದ ಒಂದು ಪರಂಪರೆ. ಅದನ್ನು ವಿವಿಧ ವಿದ್ವಾಂಸರು ಅದ್ವೈತವಾದಿ ಆದರ್ಶವಾದ (ಪರಿಪೂರ್ಣ ಆದರ್ಶವಾದ, ಆಸ್ತಿಕ ಏಕತತ್ವವಾದ, ವಾಸ್ತವಿಕ ಆದರ್ಶವಾದ, ಅಜ್ಞೇಯ ಭೌತಿಕವಾದ ಅಥವಾ ಮೂರ್ತ ಏಕತತ್ವವಾದ) ಎಂದು ವರ್ಗೀಕರಿಸಿದ್ದಾರೆ. ಕಾಶ್ಮೀರ ಶೈವ ಪಂಥವನ್ನು ಅದ್ವೈತ ಸಿದ್ಧಾಂತದಿಂದ ಪ್ರತ್ಯೇಕಿಸುವುದು ತತ್ವಶಾಸ್ತ್ರೀಯವಾಗಿ ಮುಖ್ಯವಾಗಿದೆ ಏಕೆಂದರೆ ಎರಡೂ ಸಾರ್ವತ್ರಿಕ ಪ್ರಜ್ಞೆಗೆ ಆದ್ಯತೆಯನ್ನು ನೀಡುವ ದ್ವಂದ್ವವಿಲ್ಲದ ತತ್ವಶಾಸ್ತ್ರಗಳಾಗಿವೆ.
ಕಾಶ್ಮೀರ ಶೈವದರ್ಶನ
[ಬದಲಾಯಿಸಿ]
ಕಾಶ್ಮೀರ ಕ್ರಿಸ್ತಪೂರ್ವದಲ್ಲೇ ವಿದ್ಯಾವಂತರಿಗೂ ಧರ್ಮಕ್ಕೂ ಅಶ್ರಯವಾಗಿ ಶಾರದಾಪೀಠವೆಂದು ಹೆಸರು ಪಡೆದಿತ್ತು: ಅಶೋಕನ ಕಾಲದಿಂದಲೂ ಬೌದ್ಧಮತಕ್ಕೆ ಅಶ್ರಯಸ್ಥಾನವಾಗಿತ್ತು. ಕನಿಷ್ಕ ಮೊದಲಾದ ರಾಜರಿಂದ ಪ್ರೋತ್ಸಾಹ ಹೊಂದಿದ ನಾಗಾರ್ಜುನ ಮೊದಲಾದ ಬೌದ್ಧಪಂಡಿತರಿಂದ ಬೌದ್ಧಮತ ತತ್ತ್ವಗಳು ಅಲ್ಲಿ ವಿಶೇಷ ಪ್ರಚಾರದಲ್ಲಿದ್ದುವು. ಪಾಣನೀಯ ವ್ಯಾಕರಣವೂ ಪತಂಜಲಿಯ ಮಹಾಭಾಷ್ಯವೂ ವಿಶೇಷವಾಗಿ ಅಲ್ಲಿ ಪ್ರಚಾರದಲ್ಲಿದ್ದುವು.ಸಾಂಖ್ಯರ ತತ್ತ್ವಗಳು ಶಾಕ್ತಾದ್ವೈತ ವಾದಗಳೂ ಹರಡಿದ್ದುವು. ಶಂಕರಾಚಾರ್ಯರು ಕಾಶ್ಮೀರಕ್ಕೆ ಹೋಗಿದಾಗಿನಿಂದ [ಕೇವಲಾದ್ವೈತ]] ತತ್ತ್ವಕ್ಕೆ ಹೆಚ್ಚು ಮನ್ನಣೆ ದೊರೆಯಿತು. ಹೀಗೆ ಬಗೆಬಗೆಯ ದಾರ್ಶನಿಕ ಪಂಥಗಳಿಗೆ ಕೇಂದ್ರಸ್ಥಾನವಾಗಿದ್ದ ಕಾಶ್ಮೀರದಲ್ಲಿ ಕ್ರಿ.ಶ. 9ನೆಯ ಶತಮಾನದಲ್ಲಿ ಕಾಶ್ಮೀರ ಶೈವ ಧರ್ಮದ ಪುನರುತ್ಥಾನವಾಯಿತು. ಮುಂದೆ ಬೆಳೆದುಬಂದ ಶೈವ ಸಂಪ್ರದಾಯದಲ್ಲಿ ಮೇಲಿನ ಎಲ್ಲ ದೃಷ್ಟಿಗಳ ಸಮನ್ವಯವನ್ನೂ ಕಾಣಬಹುದು. ಮುಖ್ಯವಾಗಿ ಈ ಶೈವಧರ್ಮ ಅದ್ವೈತ ತತ್ತ್ವವನ್ನಾಧರಿಸಿದ್ದು. ಇದು ಕೇವಲ ಯುಕ್ತಿವಾದವಲ್ಲ ; ಬರೀ ಶಾಸ್ತ್ರಗ್ರಂಥಗಳನ್ನೇ ಆಶ್ರಯಿಸಿದುದಲ್ಲ ; ಇದಕ್ಕೆ 64 ಶೈವಾಗಮಗಳೇ ಮುಖ್ಯ ಆಧಾರ ಗ್ರಂಥಗಳು. ಇಷ್ಟಾದರೂ ಈ ಧರ್ಮ ಅನೇಕ ಸಾಧಕರ ಸಾಧನೆಯಿಂದುಂಟಾದ ಅನುಭವಸಿದ್ಧವಾದ ವಿಷಯಗಳಿಂದ ಕೂಡಿದ ಸಮನ್ವಯ ಪಂಥ. ಈ ಸಂಪ್ರದಾಯದಲ್ಲಿ ಯಜ್ಞಯಾಗಾದಿಗಳಿಗೆ ಸ್ಥಾನವಿಲ್ಲ. ಜಾತಿಭೇದಗಳ ನಿರ್ಬಂಧವಿಲ್ಲ. ಯಾರೂ ಬೇಕಾದರೂ ಈ ಧರ್ಮವನ್ನನುಸರಿಸಿ ಮೋಕ್ಷಮಾರ್ಗವನ್ನವಲಂಬಿಸಬಹುದು. ವಿಶ್ವಭ್ರಾತೃತ್ವವೇ ಇದರ ಗುರಿ.
ಸ್ವತಂತ್ರ ಧರ್ಮ
[ಬದಲಾಯಿಸಿ]ಈ ಶೈವಧರ್ಮವನ್ನು ಸ್ವತಂತ್ರವಾದವೆಂದು ಹೇಳುತ್ತಾರೆ. ಏಕೆಂದರೆ ಇಲ್ಲಿ ಪರಶಿವನಿಗೆ ಪೂರ್ಣ ಸ್ವಾತಂತ್ರವಿದೆ. ಪತಿ, ಪಶು, ಪಾಶ ಎಂಬ ಮೂರು ತತ್ತ್ವಗಳನ್ನೊಳಗೊಂಡಿರುವದರಿಂದಲೂ ಭೇದ, ಭೇದಾಭೇದ, ಅಭೇದ ದೃಷ್ಟಿಗಳನ್ನು ಸಮನ್ವಯಗೊಳಿಸಿರುವುದರಿಂದಲೂ ಈ ಮತವನ್ನು ತ್ರಿಕಶಾಸ್ತ್ರವೆಂದೂ ಕರೆಯುತ್ತಾರೆ. ಶಿವ-ಶಕ್ತಿ ಪ್ರಸಾದದಿಂದ ರೂಪುಗೊಂಡು ವಿಶ್ವ ವ್ಯವಹರಿಸುತ್ತಿರುತ್ತದೆ. ಶಿವನ ಉನ್ಮೇಷದಿಂದ ವಿಶ್ವದ ಸೃಷ್ಟಿ ಮತ್ತು ವೈಭವವೆಲ್ಲ ನಡೆಯುತ್ತಿರುವುದರಿಂದ ಇದಕ್ಕೆ ಸ್ಪಂದ ಶಾಸ್ತ್ರವೆಂಬ ಹೆಸರು ಬಂತು. ಇದಕ್ಕೆ ಪ್ರತ್ಯಭಿಕ್ಷಾದರ್ಶನವೆಂಬ ಮತ್ತೊಂದು ಹೆಸರುಂಟು. ಜೀವಾತ್ಮ ತತ್ತ್ವತಃ ಸ್ವಯಂಪ್ರಕಾಶಮಾನನಾಗಿ ಶಿವನೇ ಆಗಿದ್ದಾನೆ. ಅಜ್ಞಾನದಿಂದ ಸ್ವರೂಪಜ್ಞಾನ ಇವನಿಗೆ ಇಲ್ಲದೆ ಹೋಗಿದೆ. ಆ ಶಿವನೇ ತಾನೆಂದು ಮಲಾವೃತನಾದ ಜೀವ ತನ್ನ ಸಹಜ ಸ್ವರೂಪವನ್ನು ಗುರುತಿಸುವುದೇ ಪ್ರತ್ಯಯಭಿಜ್ಞಾಶಾಸ್ತ್ರದ ಉದ್ದೇಶ.
ಬೆಳವಣಿಗೆ
[ಬದಲಾಯಿಸಿ]
ವಸುಗುಪ್ತನೆಂಬ ಸಿದ್ಧಪುರುಷ (825) ಮಹದೇವಗಿರಿಯಲ್ಲಿ ತನಗೆ ಗೋಚರವಾದ ಶಿವಸೂತ್ರಗಳನ್ನು ಸಂಗ್ರಹಿಸಿ ಶೈವಾಗಮಗಳನ್ನನುಸರಿಸಿ ಸೂತ್ರದ ತತ್ವಾರ್ಥಗಳನ್ನು ಶಿಷ್ಯರಿಗೆ ಉಪದೇಶ ಮಾಡಿದ. ಮುಖ್ಯವಾಗಿ ಪರತತ್ತ್ವ ಸಾಕ್ಷಾತ್ಕಾರಕ್ಕೆ ಅಧಿಕಾರ ಭೇದವನ್ನನುಸರಿಸಿ ಶಾಂಭವ, ಶಾಕ್ತ, ಆಣವ ಎಂಬ ಮೂರು ಸಾಧನ ಮಾರ್ಗಗಳನ್ನೀತ ತೋರಿಸಿದ್ದಾನೆ. ಈತನ ಶಿಷ್ಯ ಭಟ್ಟಕಲ್ಲಟ ಯುಕ್ತಿವಾದದಿಂದ ಶಿವಸೂತ್ರಗಳನ್ನು ಇತರ ಮತಗಳ ಅನುವಾದದೊಂದಿಗೆ ಸಮರ್ಥಿಸಿ ಸ್ಪಂದಕಾರಿಕೆಗಳನ್ನು ಬರೆದ. ಸೋಮಾನಂದ ಕ್ರಮಬದ್ಧವಾಗಿ ಕಾರಣವಾದವನ್ನು ಮುಂದಿಟ್ಟುಕೊಂಡು ಪರತತ್ತ್ವವನ್ನು ವಿಚಾರ ಮಾಡಿದ್ದಾನೆ. ಈತ ಭರ್ತೃಹರಿಯೆ ವಾಕ್ಯಪದೀಯದಲ್ಲಿ ಹೇಳಿರುವ ಪಶ್ಯಂತಿ ಮಾಧ್ಯಮಾ ವೈಖರಿ ಎಂಬ ವಾಗ್ದೇವಿಯ ಮೂರು ಭೇದಗಳಿಗಿಂತ ಇವೆಲ್ಲಕ್ಕೂ ಹಿನ್ನೆಲೆಯಾಗಿರುವ ಪರಾ ಎಂಬ ಮೂಲಸ್ವರೂಪವನ್ನು ಎತ್ತಿಹಿಡಿದಿದ್ದಾನೆ. ಸೋಮನಂದನ ಶಿಷ್ಯನಾದ ಉತ್ಪಲಚಾರ್ಯ ಈಶ್ವರಪ್ರತ್ಯಭಿಜ್ಞಾಕಾರಿಕೆಗಳನ್ನು ಬರಿದು ಶಿವಾದ್ವೈತ ತತ್ತ್ವಕ್ಕೆ ವಿರುದ್ದವಾಗಿದ್ದ ಬೌದ್ದರ ಆಕ್ಷೇಪಣೆಗಳನ್ನು ಎದುರಿಸಿದ. ಈತನ ಅನಂತರ ಬಂದ ಅಭಿನಗುಪ್ತ (ಕ್ರಿ.ಶ. 960) ಸರ್ವಂಕಷ ಪ್ರಜ್ಞಯುಳ್ಳಾತ ; ಆಧ್ಯಾತ್ಮಿಕ ವಿಕಾಸವನ್ನು ಪಡೆದವ. ಈತ ಶೈವಾಗಮಗಳ ಮೇಲೆ ವ್ಯಾಖ್ಯಾನ ಬರೆದು ಸ್ವತಂತ್ರವಾಗಿ ತಂತ್ರಾಲೋಕವೆಂಬ ಉದ್ಗ್ರಂಥಗಳನ್ನು ರಚಿಸಿ ಅವುಗಳಲ್ಲಿ ಆಗಮಿಕವಾದ ಅನುಭವ, ದೈವವಾದ, ಸಂಸ್ಕಾರಗಳು, ಮಾನಸಿಕ ಮತ್ತು ದಾರ್ಶನಿಕ ವಿಷಯಗಳನ್ನು ವಿಶದೀಕರಿಸಿರುತ್ತಾನೆ. ಈತ ಆನಂದವರ್ಧನನ ಅಲಂಕಾರಶಾಸ್ತ್ರಕ್ಕೆ ಲೋಚನ ಎಂಬ ವ್ಯಾಖ್ಯಾನವನ್ನು ಬರೆದಿದ್ದಾನೆ. ಭರತನ ನಾಟ್ಯಶಾಸ್ತ್ರಕ್ಕೆ ಮೇಲೆ ಅಭಿನವಭಾರತಿ ಎಂಬ ವ್ಯಾಖ್ಯೆಯನ್ನು ಬರೆದು ನಾಟ್ಯದಲ್ಲಿ ರಸದ ಸ್ವರೂಪವೇನೆಂಬುದನ್ನು ನಿರೂಪಿಸಿದ್ದಾನೆ; ಕೊನೆಯದಾಗಿ ಉತ್ಪಲಾಚಾರ್ಯರ ಈಶ್ವರಪ್ರತ್ಯಭಿಜ್ಞಾಕಾರಿಕೆಗೆ ವ್ಯಾಖ್ಯಾನವನ್ನೂ ಟೀಕೆಯನ್ನೂ ಬರೆದಿದ್ದಾನೆ. ಈತನ ಶಿಷ್ಯನಾದ ಕ್ಷೇಮರಾಜ ಪ್ರತ್ಯಾಭಿಜ್ಞಾಹೃದಯ ಶಿವಸೂತ್ರವಿಮರ್ಶಿನಿ ಮೊದಲಾದ ಅನೇಕ ಗ್ರಂಥಗಳನ್ನು ಬರೆದು ಕಾಶ್ಮೀರ ಶೈವತತ್ತ್ವಗಳನ್ನು ವಿಶೇಷವಾಗಿ ಪ್ರಚಾರ ಮಾಡಿದ್ದಾನೆ.
ಮಹೇಶ್ವರ-ವಿಶ್ವಚಿತ್ತ
[ಬದಲಾಯಿಸಿ]ಕಾಶ್ಮೀರ ಶೈವ ಸಿದ್ಧಾಂತದಲ್ಲಿ ವಿಶ್ವದ ಪ್ರವೃತ್ತಿಯನ್ನು ವಿಶದವಾಗಿ ಅರಿಯಲು ಎರಡು ಮುಖ್ಯ ವಿಷಯಗಳನ್ನು ತಿಳಿಯಬೇಕು. ಮೊದಲನೆಯದು ವಿಶ್ವಚಿತ್ತ; ಎರಡನೆಯದು ವ್ಯಕ್ತಿಯ ಮನಸ್ಸು. ವ್ಯಕ್ತಿಯ ಮನಸ್ಸು ವಿಶ್ವಚಿತ್ತದಿಂದ ಬೇರೆಯಲ್ಲ. ಅದು ಹೊರಗಿನ ಪದಾರ್ಥಗಳನ್ನು ಗ್ರಹಿಸುತ್ತದೆ; ಹಿಂದಿನ ಅನುಭವಗಳಿಂದುಂಟಾದ ಸಂಸ್ಕಾರಗಳ ಮೂಲಕ ಅವನ್ನು ತನ್ನಲ್ಲಿಟ್ಟುಕೊಳ್ಳುತ್ತದೆ. ಹಾಗೆಯೇ ಹಿಂದಿನ ವೃತ್ತಿಗಳಿಗೂ ಹೊರಗಿನಿಂದ ಬರುವ ವೃತ್ತಿಗಳಿಗೂ ಅದು ಆಶ್ರಯವಾಗಿದೆ. ಪ್ರತ್ಯಕ್ಷವಾಗಿ ನಾವು ಒಂದು ಪದಾರ್ಥವನ್ನು ಗ್ರಹಿಸುವುದೂ ಹಿಂದಿನ ವೃತ್ತಿಗಳನ್ನು ನೆನೆಯುವುದೂ ಮುಂದೆ ಬರುವುವುಗಳನ್ನು ಊಹಿಸುವುದೂ ಈ ಆಶ್ರಯದಲ್ಲಿಯೇ. ಹೊರಗಿನಿಂದ ಬರುವ ಪ್ರೇರಣಾತ್ಮಕವಾದ ಎಲ್ಲ ವೃತ್ತಿಗಳೂ ನಿರ್ಮಲವಾದ ಕನ್ನಡಿಯ ಮೇಲೆ ಇಟ್ಟ ಪದಾರ್ಥದಂತೆ ವಿಶದವಾಗಿ ತಿಳಿಯುತ್ತವೆ. ಕನ್ನಡಿಯ ದುಷ್ಟಾಂತದಲ್ಲಿ ನಾವು ಒಂದು ಅಂಶವನ್ನು ಗಮನಿಸಬೇಕು: ಕನ್ನಡಿ ಒಂದು ಪದಾರ್ಥವನ್ನು ಪ್ರತಿಬಿಂಬಿಸಿದರೆ ತನ್ನ ಅಸ್ತಿತ್ವವನ್ನೂ ನೈರ್ಮಲ್ಯವನ್ನೂ ಕಳೆದುಕೊಳ್ಳದೆ ಆ ಪದಾರ್ಥವನ್ನು ಸ್ವಚ್ಚವಾಗಿ ತೋರಿಸುತ್ತದೆ. ಆದರೆ ಕನ್ನಡಿ ಪ್ರತಿಬಿಂಬಿಸುವುದಕ್ಕೆ ಹೊರಗಿನ ಬೆಳಕು ಬೇಕು. ಮನಸ್ಸು ಸ್ವಯಂ ಪ್ರಕಾಶವಾಗಿರುವುದರಿಂದ ಹೊರಗಿನ ಬೆಳಕಿನ ಸಹಾಯವಿಲ್ಲದೆ ವೃತ್ತಿಗಳನ್ನು ಗ್ರಹಿಸಬಲ್ಲುದು, ಪ್ರಕಾಶ ಪಡಿಸಬಲ್ಲುದು, ಆ ವೃತ್ತಿಗಳಿಂದ ಬೇರೆಯಾಗಿರುವಂತೆಯೂ ಇರಬಲ್ಲುದು. ಆದುದರಿಂದ ಚಿತ್ತವೃತ್ತಿಯ ಈ ಗುಣವನ್ನು ಪ್ರಕಾಶ ಎನ್ನುತ್ತೇವೆ. ಇಷ್ಟೇ ಅಲ್ಲದೆ ಮನಸ್ಸಿಗೆ ಇನ್ನೊಂದು ಗುಣವುಂಟು. ಅದು ತನ್ನ ಆಸ್ತಿತ್ವ್ತವನ್ನೂ ನೈರ್ಮಲ್ಯವನ್ನೂ ತಿಳಿಯುವ ಸಾಮಥ್ರ್ಯವುಳ್ಳದ್ದಾಗಿದೆ. ಅದು ಸ್ವತಂತ್ರವಾಗಿ ಬೇರೆ ಬೇರೆ ವೃತ್ತಿಗಳನ್ನು ಸಮೀಕರಣ ಮಾಡಬಲ್ಲದು. ಹಾಗೆಯೇ ಬಂದ ವೃತ್ತಿಗಳನ್ನು ತನ್ನಲ್ಲಿ ಉಳಿಸಿಕೊಳ್ಳಬಲ್ಲದು. ಹೀಗೆ ನಿಲ್ಲಿಸಿಕೊಂಡಿರುವ ವೃತ್ತಿಗಳನ್ನು ಸಮಯ ಬಂದಾಗ ನೆನೆದು ಹಿಂದಿನ ಸ್ಥ್ದಿತಿಯನ್ನು ತಂದುಕೊಳ್ಳಬಲ್ಲದು. ವೃತ್ತಿಗಳನ್ನು ಸೇರಿಸಿ ಹೊಸದಾಗಿ ಒಂದು ಸೃಷ್ಟಿಯನ್ನದು ಮಾಡುತ್ತದೆ. ಮನಸ್ಸಿನ ಈ ಗುಣವನ್ನು ಪಾರಿಭಾಷಿಕವಾಗಿ ವಿಮರ್ಶೆ ಎನ್ನುತ್ತೇವೆ. ಇದು ಮಾನವನ ಮನಸ್ಸಿನ ವಿಶಿಷ್ಟ ಸ್ವರೂಪ. ಅವನ ಮನಸ್ಸು ಸ್ವಯಂಪ್ರಕಾಶವಾಗಿಯೂ ಚೈತನ್ಯಸ್ವರೂಪವಾಗಿಯೂ ಚೈತನ್ಯಾಶ್ರಯವಾಗಿಯೂ ಇದೆ. ಕಾಶ್ಮೀರಶೈವ ಸಿದ್ಧಾಂತದಂತೆ ವಿಮರ್ಶೆ ಚೈತನ್ಯಸ್ವರೂಪವೂ ಚೈತನ್ಯರೂಪವೂ ಚೈತನ್ಯಾಶ್ರಯವೂ ಆಗಿದೆ. ಅದ್ವೈತ ವೇದಾಂತಿಗಳು ಹೇಳುವಂತೆ ಬ್ಯಹ್ಮ ಶಾಂತ, ನಿಷ್ಕ್ರಿಯ ಮತ್ತು ನಿರ್ಗುಣ. ಹೀಗಿರುವುದರಿಂದ ಅಲ್ಲಿ ಯಾವ ಕ್ರಿಯೆಗೂ ವಿಮರ್ಶೆಗೂ ಅವಕಾಶವಿಲ್ಲ. ಬ್ರಹ್ಮ ಚಿನ್ಮಾತ್ರ. ಚೈತನ್ಯಕ್ಕಾಶ್ರಯವಾದರೆ ಕ್ರಿಯಾತ್ಮಕವಾಗುತ್ತದೆ. ಕ್ರಿಯಾತ್ಮಕವಾದರೆ ಶಾಂತಿಗೆ ಭಂಗ ಬರುತ್ತದೆ. ಬ್ರಹ್ಮ ನಿರ್ವಿಕಲ್ಪನಾಗಿರುವುದರಿಂದ ಚೈತನ್ಯಾಶ್ರಯನಲ್ಲ. ಶಿವಾದ್ವೈತ ಸಿದ್ಧಾಂತದಲ್ಲಾದರೋ ಪರತತ್ತ್ವ ಸ್ವಯಂ ಪ್ರಕಾಶ. ಚೈತನ್ಯಸ್ವರೂಪ ಮತ್ತು ಚೈತನ್ಯಾಶ್ರಯವಾಗಿದೆ. ಎಲ್ಲಿ ಅದ್ವೈತ ವೇದಾಂತಿಗಳಿಗೂ ಕಾಶ್ಮೀರ ಶೈವದವರಿಗೂ ಇರುವ ಭೇದವನ್ನು ಕಾಣಬಹುದು. ವಿಶ್ವಚಿತ್ತ ಕ್ರಿಯಾತ್ಮಕವಾಗಿ ವಿಶ್ವದ ಎಲ್ಲ ವಿಷಯಗಳನ್ನಾ ಮುಂದುವರಿಸುತ್ತದೆ. ಅಧ್ಯಾತ್ಮ ದೃಷ್ಟಿಯಿಂದ ನೋಡಿದರೆ ಈ ವಿಶ್ವಚಿತ್ತ ಸ್ವಯಂಚೈತನ್ಯರೂಪಿಯಾಗಿ ಪರತತ್ತ್ವದ ಇಚ್ಚಾಶಕ್ತಿಯೇ ಆಗಿದೆ. ಇದು ಸ್ವತಂತ್ರವಾದ ಭಾವನಾ ಮತ್ತು ಕ್ರಿಯೆಯಿಂದ ಕೂಡಿದೆ. ಇದನ್ನೇ ಪಾರಿಭಾಷಿಕವಾಗಿ ಮಹೇಶ್ವರ ಎನ್ನುವುದು. ಪ್ರತ್ಯಾಭಿಜ್ಞಾ; ಪರಶಿವ ವಿಶ್ವಸೃಷ್ಟಿಯನ್ನು ಮಾಡುವಾಗ ತನ್ನಲ್ಲಿರುವ ಅನಂತ ಶಕ್ತಿಗಳನ್ನು ಪ್ರಸಾರ ಮಾಡುತ್ತಾನೆ. ಆ ಶಕ್ತಿಗಳ ಪ್ರಸಾರ ಮಾಡುತ್ತಾನೆ. ಆ ಶಕ್ತಿಗಳ ಪ್ರಸಾರವೇ ಈ ವಿಶ್ವ. ಪರಶಿವನಿಗೆ ಜ್ಞಾನಶಕ್ತಿ ಕ್ರಿಯಾಶಕ್ತಿಗಳಿಗಿರುವಂತೆಯೇ ಸ್ಮೃತಿಶಕ್ತಿ ಅಪೋಹನ ಶಕ್ತಿಗಳೂ ಇವೆ. ಆ ಅಪೋಹನ ಶಕ್ತಿಯ ವಿಲಾಸವೇ ಈ ಸ್ಥೂಲ ಪ್ರಪಂಚ ಮತ್ತು ಜೀವ ಭಾವ. ಸರ್ವಶಕ್ತನಾಶದ ಪರಶಿವ ಸ್ಥೂಲ ಪ್ರಪಂಚವನ್ನೂ ಜೀವಭಾವವನ್ನೂ ತನ್ನ ಶಕ್ತಿ ಸಂಕೋಚದ (ಮಾಯಾ ವಿಮೋಚನೀಶಕ್ತಿ) ಮೂಲಕ ಹೊರಹೊಮ್ಮಿಸುತ್ತಾನೆ. ಮರಳಿ ತನ್ನ ದೃಕ್ಕ್ರಿಯಾಶಕ್ತಿಗಳ ಆವಿಷ್ಕರಣದಿಂದಲೇ ಸಹಜಾವಸ್ಥೆಯನ್ನು ಪಡೆಯುತ್ತಾನೆ. ಇದನ್ನು ಲೀಲೆ, ಮಾಯೆ, ಆಭಾಸ ಎನ್ನುವ ಪದಗಳಿಂದ ಬೇರೆ ಬೇರೆ ದೃಷ್ಟಿಯಿಂದ ವಿವೇಚಿಸುತ್ತಾರೆ. ಅಪೋಹನ ಶಕ್ತಿಯಿಂದುಂಟಾಗಿರುವ ಸಂಕೋಚವನ್ನು ತನ್ನ ಶಕ್ತಿಸ್ಫುರಣದಿಂದಲೇ ಗುರುತಿಸಿ ತನ್ನ ಸಹಜಾವಸ್ಥೆಯನ್ನು ಪಡಿಯುವಿಕೆಯೇ ಪ್ರತ್ಯಭಿಜ್ಞ ಎನ್ನಿಸುವುದು.
ನಚೇದಂತಃ ಕೃತಾನಂತೋ ವಿಶ್ವರೂಪೋ ಮಹೇಶ್ವರಃ
ಸ್ವಾದೇಕಃ ಚಿದ್ವಪುಃ ಜ್ಞಾನಸ್ಮøತ್ಯಪೋಹನ ಶಕ್ತಿಮಾನ್ ||
ಕಿಂತು ಮೋಹವಶಾದಸ್ಮಿನ್ ದೃಷ್ಟೇಪ್ಯನುಪಲಕ್ಷಿತೆ |
ಶಕ್ತ್ಯಾವಿಷ್ಕರನೇಯಂ ಪ್ರತ್ಯಭಿಜ್ಞೋಪದಿಶ್ಯತೆ ||
(ಈಶ್ವರ ಪ್ರತ್ಯಾಭಿಜ್ಞಾ)
ಪರತತ್ತ್ವ ವಿವೇಚನೆ
[ಬದಲಾಯಿಸಿ]ಪರಶಿವನ್ನು ಪರಾಸಂವಿತ್ ಎಂದು ಕರೆಯುತ್ತಾರೆ. ಪರಶಿವನೇ ಮುಖ್ಯತ್ತ್ವ. ಆತ ಸರ್ವಸ್ವತಂತ್ರ.. ಸರ್ವಕ್ಕೂ ಕಾರಣ. ತನ್ನ ಶಕ್ತಿಯ ಪ್ರಸಾರದಿಂದ ಎಲ್ಲವನ್ನೂ ಸೃಷ್ಟಿಸುವವ. ಚಿದಾನಂದಘನ ತನ್ನ ಪ್ರಶಾಂತ ಸ್ಥಿತಿಯಲ್ಲಿ ವಿಶ್ವೋತ್ತೀರ್ಣ ಅಥವಾ ವಿಶ್ವಾತೀತನೆನಿಸಿಕೊಳ್ಳುತ್ತಾನೆ. ಹಾಗೆಯೇ ಚರಾಚರಾತ್ಮಕ ಪ್ರಪಂಚಕ್ಕೆ ಸರ್ವವಿಧಕಾರಣನಾಗಿ ವಿಶ್ವಾತ್ಮಕ ಅಥವಾ ವಿಶ್ವಮಯನಾಗಿದ್ದಾನೆ. ಆತ ಪ್ರಕಾಶ ವಿಮರ್ಶಮಯ. ಪ್ರಕಾಶವೆಂದರೆ ಭೇದವನ್ನಂಗೀಕರಿಸಿ ಪದಾರ್ಥರೂಪವಾಗಿ ವ್ಯಕ್ತವಾಗುವ ಶಕ್ತಿಪ್ರಸಾರ. ವಿಮರ್ಶವೆಂದರೆ ಭೇದಾಭೇದಗಳನ್ನು ತನ್ನಲ್ಲಿಯೇ ಸ್ಫುರಿಸಿಕೊಳ್ಳವ ಸ್ವರೂಪ ಪರಾಮರ್ಶ. ನಿತ್ಯನಾದ ಪರಶಿವ ಸತ್, ಚಿತ್, ಆನಂದ, ಇಚ್ಚಾ, ಜ್ಞಾನ, ಕ್ರಿಯಾ ಶಕ್ತಿಗಳಿಂದ ಕೂಡಿರುವನು. ಇವುಗಳಲ್ಲಿ ಸತ್ ಚಿತ್ ಆನಂದ ಇವುಗಳು ಸ್ವರೂಪಕ್ಕೆ ಸಂಬಂಧಪಟ್ಟವು; ಇಚ್ಚಾ ಜ್ಞಾನಕ್ರಿಯಾ ಶಕ್ತಿಗಳಿಂದ ಸೃಷ್ಟಿ ಸ್ಥಿತಿ ಪ್ರಳಯಗಳು ನಡೆಯುತ್ತವೆ. ಆ ಪರಶಿವನು ಸರ್ವಾಧಾರನಾಗಿಯೂ ಸರ್ವೇಶ್ವರನಾಗಿಯೂ ಸರ್ವವ್ಯಾಪಿಯಾಗಿಯೂ ವಿರಾಜಿಸುತ್ತಾನೆ. ಪರಶಿವ ಸೃಷ್ಟಿ, ಸ್ಥಿತಿ, ಸಂಹಾರ, ತಿರೋಧಾನ, ಅನುಗ್ರಹ ಎಂಬ ಪಂಚಕೃತ್ಯಗಳನ್ನು ನಡೆಸುತ್ತಾನೆ. ತಿರೋಧಾನವೆಂದರೆ ತನ್ನ ನಿಜಸ್ವರೂಪವನ್ನು ಮರೆಯಿಸುವುದು. ಅನುಗ್ರಹವೆಂದರೆ ಈಶ್ವರನ ಕೃಪೆಯಿಂದ ಸ್ವರೂಪ ಜ್ಞಾನ ಪ್ರಾಪ್ತಿ. ಸರ್ವಶಕ್ತನಾದ ಶಿವ ತನ್ನಲ್ಲಿಯೇ ಸೂಕ್ಷ್ಮವಾಗಿ ಅಡಗಿದ್ದ ವಿಶ್ವವನ್ನು ಹೊರಹೊಮ್ಮಿಸುತ್ತಾನೆ. ಪರಶಿವನಿಗೆ ಜ್ಷಾನಶಕ್ತಿ ಕ್ರಿಯಾಶಕ್ತಿಗಳಿರುವಂತೆ ಸ್ಮøತಿ ಅಪೋಹನ ಶಕ್ತಿಗಳೂ ಇವೆ. ಈ ಅಪೋಹನ ಶಕ್ತಿಯಿಂದ ಗ್ರಾಹ್ಯ ಗ್ರಾಹಕಗಳಾಗಿ ಆತ ವ್ಯಕ್ತಪಡಿಸಿಕೊಳ್ಳುತ್ತಾನೆ. ಗ್ರಾಹ್ಯವಾದದ್ದು ವಿಶ್ವ. ಗ್ರಾಹಕ ಜೀವಾತ್ಮ. ಪರಶಿವ ಶಕ್ತಿಸಂಕೋಚದಿಂದ (ಮಾಯಾವಿಮೋಹಿನೀಶಕ್ತಿ) ಜೀವಭಾವವನ್ನು ತಾಳುತ್ತಾನೆ. ಹೀಗೆ ಸಂಕೋಚನಗೋಳಿಸುವುವು ಪಂಚ ಕುಂಚುಕಗಳು ಮತ್ತು ಮೂರು ಮಲಗಳು. ಮರಳಿ ದೃಕ್ಕ್ರಿಯಾಶಕ್ತಿಗಳ ಆವಿಷ್ಕರಣದಿಂದ ಸಂಕೋಚನದಿಂದ ಬಿಡುಗಡೆ ಹೊಂದಿ ಸಹಜಾವಸ್ಥೆಯನ್ನು ಪಡೆಯುತ್ತಾನೆ. ಈ ರೀತಿ ಆ ಶಿವನೇ ನಾನು ಎಂಬ ಗುರಿಯನ್ನು ಸಾಧಿಸಲು ಸಹಾಯಮಾಡುವ ದರ್ಶನ ಪ್ರತ್ಯಭಿಜ್ಞಾ ದರ್ಶನ. ವಿಶ್ವೋತ್ತೀರ್ಣನಾದ ಪರಶಿವ ತನ್ನ ಲೀಲೆಯಿಂದ ವಿಶ್ವಾತ್ಮಕನಾಗಿ ಪರಿಣಮಿಸುವಾಗ 36 ತತ್ತ್ವಗಳ ರೂಪವನ್ನು ತಾಳುವನು. ಅಂದರೆ ಈ ವಿಶ್ವ 36 ತತ್ತ್ವಗಳಿಂದ ಕೂಡಿದೆ. ಇದರಿಂದ ಸೃಷ್ಟಿಯ ಎಲ್ಲ ಭೇದಗಳೂ ಸತ್ಯವಾದವುಗಳಾಗಿವೆ. ಈ ತತ್ತ್ವಗಳು ಶುದ್ಧಾಧ್ವಗಳೆಂದೂ ಅಶುದ್ಧಾಧ್ವಗಳೆಂದೂ ಎರಡು ಬಗೆಯಾಗಿವೆ. ಶಿವ, ಶಕ್ತಿ, ಸದಾಶಿವ, ಈಶ್ವರ, ಶುದ್ಧ ವಿದ್ಯಾ-ಇವು ಶುದ್ಧಾಧ್ವಗಳು. ಇವುಗಳಲ್ಲಿ ಶಿವತತ್ತ್ವ ಶುದ್ಧ ಚಿದ್ರೂಪವಾದದ್ದು. ಶಕ್ತಿತತ್ತ್ವದಲ್ಲಿ ಇಚ್ಚಾ ಜ್ಞಾನ ಕ್ರಿಯಾ ಶಕ್ತಿಗಳ ಸ್ಫುರಣ. ಇನ್ನುಳಿದ ಸದಾಶಿವ, ಈಶ್ವರ, ಶುದ್ಧವಿದ್ಯಾತತ್ತ್ವಗಳಲ್ಲಿ ಗ್ರಾಹ್ಯ ಗ್ರಾಹಕಗಳ (ಅಹಂ ಇದಂ) ನಿಷ್ಪತ್ತೆ. ಅಶುದ್ಧಾಧ್ವಗಳಲ್ಲಿ ಮೊದಲನೆಯ ತತ್ತ್ವ ಮಾಯಾ. ಇದು ಕೆಳಗಿನ 20 ತತ್ತ್ವಗಳನ್ನೊಳಗೊಂಡಿರುತ್ತದೆ. ಇಲ್ಲಿ ಮಾಯೆಯೆಂಬುದಕ್ಕೆ ಮಿಥ್ಯೆಯೆಂಬರ್ಥವಲ್ಲ. ಮಾಯೆ ಎಂಬುದು ಪರಮೇಶ್ವರನ ಶಕ್ತಿ. ಇದು ಭೇದಜ್ಞಾನವನ್ನು ಹುಟ್ಟಿಸುತ್ತದೆ. ಇದರ ಪ್ರಭಾವದಿಂದಲೇ ಮೊದಲು ಸ್ವರೂಪಾಭಿನ್ನವಾಗಿದ್ದ ಚಿತ್ ಆನಂದ ಇಚ್ಚಾ ಜ್ಞಾನ ಕ್ರಿಯಾಶಕ್ತಿಗಳು ಸಂಕೋಚವಾಗಿ ನಿಯತಿ, ಕಾಲ, ರಾಗ, ವಿದ್ಯಾ, ಕಲಾರೂಪದಿಂದ ಪಂಚಕಂಚುಕಗಳಾಗಿ ಪರಿಣಮಿಸುತ್ತವೆ. ಮಿಕ್ಕ 25 ತತ್ತ್ವಗಳು ಸಾಂಖ್ಯರು ಅಂಗೀಕರಿಸಿರುವವುಗಳೇ ಆಗಿವೆ. ಪುರುಷ ಈ ಕೆಳಗಿನ ವಿಭಾಗದಲ್ಲಿ ಮಾಯೆ ಮತ್ತು ಪಂಚ ಕಂಚುಕಗಳಿಂದ ಕೂಡಿದವನಾಗಿರುತ್ತಾನೆ. ಇವನಿಗೆ ಸತ್ತ್ವ ರಜಸ್ಸು ತಪಸ್ಸುಗಳ ಪ್ರಭಾವದಿಂದ ಕೂಡಿದ ಇಂದ್ರಿಯಗಳನ್ನು ಮತ್ತು ಅಂತಃಕರಣಗಳನ್ನು ಒದಗಿಸುವುದೇ ಪ್ರಕೃತಿ. ಪ್ರಕೃತಿಯಿಂದ ಕೆಳಗೆ ಮಹತ್ತು ಮತ್ತು ಅಂತಃಕರಣಗಳನ್ನು ಒದಗಿಸುವುದೇ ಪ್ರಕೃತಿ. ಪ್ರಕೃತಿಯಿಂದ ಕೆಳಗೆ ಮಹತ್ತು ಮತ್ತು ಅಹಂಕಾರ. ಅಧ್ಯವಸಾಯಕ್ಕೆ ಕಾರಣವಾಗಿರುವುದು ಮಹತ್ತು. ಅಹಂಕಾರ ತತ್ತ್ವದಿಂದ ಹುಟ್ಟುವ ತತ್ತ್ವಗಳೆಂದರೆ ಮನಸ್ಸು, ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು ಪಂಚತನ್ಮಾತ್ರಗಳು ಮತ್ತು ಪಂಚಭೂತಗಳು. ಜ್ಞಾನೇಂದ್ರಿಯ ಕರ್ಮೇಂದ್ರಿಯಗಳು, ಪಂಚತನ್ಮಾತ್ರಗಳು ಮಾತ್ರ ಪಂಚಭೂತಗಳು. ಜ್ಞಾನೇಂದ್ರಿಯ ಕರ್ಮೇಂದ್ರಿಯಗಳ ಮೂಲಕ ಉಂಟಾಗುವ ಎಲ್ಲ ಜ್ಞಾನಗಳಿಗೂ ಆಕರವಾಗಿರುವುದು ಮನಸ್ಸು. ಮಾಯೆ ಜೀವನಜ್ಞಾನ ಸಂಕೋಚಕ್ಕೆ ಸಾಕ್ಷಾತ್ಕಾರಣವಾಗಿಯೂ ದೇಹ ಇಂದ್ರಿಯಾದಿಗಳ ಮೂಲಕ ಪರಂಪರಾಕಾರಣವಾಗಿಯೂ ಇದೆ. ಈ ತತ್ತ್ವವಿಮರ್ಶನೆ ವ್ಯವಹಾರದಲ್ಲಿ ಶಾಂತಿಯನ್ನೂ ಆಂತರಂಗಿಕವಾಗಿ ಜ್ಞಾನವಿಕಾಸವನ್ನೂ ಉಂಟುಮಾಡುತ್ತದೆ. ಸಪ್ತಪ್ರಮಾತೃಗಳು: ಈ ವಿಶ್ವವೆಲ್ಲ ಶಿವಾಭಿನ್ನವಾದದ್ದು. ಗ್ರಾಹ್ಯವರ್ಗವಾದ ವಿಶ್ವವನ್ನು 36 ತತ್ತ್ವಗಳಾಗಿ ವಿಭಾಗ ಮಾಡಿರುವ ಹಾಗೆ ಗ್ರಾಹಕವಾದ ಜೀವನನ್ನು ಸಪ್ತಪ್ರಮಾತೃಗಳೆಂದು ವಿಭಾಗಿಸಿರುತ್ತಾರೆ. ಪರಶಿವ ತನ್ನ ಅಖ್ಯಾತಿಯಿಂದ ಬದ್ಧಜೀವದಶೆಯನ್ನು ಪಡೆಯುವಾಗ ಶಿವ, ಮಂತ್ರ-ಮಹೇಶ್ವರ, ಮಂತ್ರೇಶ್ವರ ಮಂತ್ರ ವಿಜ್ಞಾನಾಕಲ, ಪ್ರಳಯಾಕಲ, ಸಕಲ ಎಂಬ ಏಳು ಅಂತಸ್ತುಗಳಾಗಿ ಅಭಿವ್ಯಕ್ತನಾಗಿದ್ದಾನೆ. ಇದು ಅವರೋಹಣಕ್ರಮ. ಬದ್ಧಜೀವ ಶಿವತ್ವವನ್ನು ಪಡೆಯುವುದಕ್ಕೆ ಆರೋಹಣ ಕ್ರಮದಿಂದ ಸ್ವಸ್ವರೂಪಾಭಿವ್ಯಕ್ತಿಯನ್ನು ಹೊಂದಬೇಕು. ಈ ಅವತರಣ ಕ್ರಮದಲ್ಲಿ ಮೊದಲನೆಯ ಪ್ರಮಾತೃ ಶಿವತತ್ತ್ವ. ಇದು ಪರಿಪೂರ್ಣ. ಇಲ್ಲಿ ಯಾವ ಮಲಗಳೂ ಇಲ್ಲ. ಎರಡನೆಯದಾದ ಮಂತ್ರ-ಮಹೇಶ್ವರ ದೆಸೆಯಲ್ಲಿ ಗ್ರಾಹ್ಯಗ್ರಾಹಕಗಳು ಅಸ್ಫುಟವಾಗಿರುವುವು. ಇಲ್ಲಿ ಸ್ವಾತಂತ್ರವನ್ನು ಮರೆಯಿಸುವ ಆಣವಮಲ ಆರಂಭವಾಗುತ್ತದೆ. ಮೂರನೆಯ ಪ್ರಮಾತೃ ಮಂತ್ರೇಶ್ವರ. ಇಲ್ಲಿ ನಾನು, ಇದು (ಅಹಂ, ಇದಂ)-ಎಂಬ ಭೇದಭಾವ ರೂಪುಗೊಳ್ಳುತ್ತದೆ. ನಾಲ್ಕನೆಯ ಪ್ರಮಾತೃ ಮಂತ್ರ. ಇಲ್ಲಿ ಮೇಲಿನ ಎರಡಂಶಗಳಲ್ಲಿ ಇದು ಪ್ರಧಾನವಾಗಿರುತ್ತದೆ. ಇಲ್ಲಿಗೆ ಗ್ರಾಹ್ಯಗ್ರಾಹಕ ಭಾವ ಪರಿಪೂರ್ಣವಾಗಿರುತ್ತದೆ. ಐದನೆಯ ಪ್ರಮಾತೃ ವಿಜ್ಞಾನಾಕಲ. ಇಲ್ಲಿ ಜೀವಾತ್ಮರು ಪರಸ್ಪರ ಭಿನ್ನರೆಂದೂ ತಮ್ಮ ಸ್ವರೂಪಶಕ್ತಿ ಸಂಕೋಚವನ್ನು ಪಡೆದಿರುವುದೆಂದೂ ಅನುಭವಕ್ಕೆ ಬರುತ್ತದೆ. ಆರನೆಯ ಪ್ರಮಾತೃ ಪ್ರಳಯಾಕಲ. ಈ ಸ್ಥಿತಿಯಲ್ಲಿ ಜೀವಾತ್ಮ ಪಂಚಕಂಚುಕಗಳಿಗೆ ಒಳಗಾಗಿ ನಿಜಸ್ವರೂಪವನ್ನು ಮರೆತಿರುತ್ತಾನೆ. ಏಳನೆಯ ಪ್ರಮಾತೃ ಸಕಲ. ಲೋಕದಲ್ಲಿ ಬದುಕಿರುವ ಪ್ರಾಣಿಗಳೆಲ್ಲ ಸಕಲರು. ಈ ಸಪ್ತ ಪ್ರಮಾತೃ ಆಣವ ಮಾಯೀಯ ಕಾರ್ಮ ಮಲಗಳಿಂದಲೂ ಪ್ರಳಯಾಕಾಲ ಪ್ರಮಾತೃ ಆಣವ ಮಯೀಯ ಮಲಗಳಿಂದಲೂ ವಿಜ್ಞಾನಾಕಲ ಪ್ರಮಾತೃ ಆಣವ ಮಲದಿಂದಲೂ ಕೂಡಿರುವರು. ಉಳಿದ ಮಂತ್ರ, ಮಂತ್ರೇಶ್ವರ, ಮಂತ್ರಮಹೇಶ್ವರರು ಸೂಕ್ಷ್ಮ ರೂಪದಿಂದ ಕೇವಲ ಆಣವಮಲ ಒಂದರಿಂದಲೇ ಇರುವರು. ಯಾವ ಮಾನವರಿಗೆ ಶಾಸ್ತ್ರಾಭ್ಯಾಸದಿಂದಲೂ ಆಧ್ಯಾತ್ಮವಿಕಾಸವೇರ್ಪಡುವುದೋ ಅವರಿಗೆ ಈ ಸಪ್ತ ಪ್ರಮಾತೃಗಳ ಸ್ಥಿತಿಗಳು ವಿಶದವಾಗಿ ಗೋಚರಿಸುತ್ತವೆ. ಅವರವರ ಈ ಸಪ್ತ ಪ್ರಮಾತೃಗಳ ಸ್ಥಿತಿಗಳು ವಿಶದವಾಗಿ ಗೋಚರಿಸುತ್ತವೆ. ಅವರವರ ಪರಿಪಾಕಕ್ಕನುಸಾರವಾಗಿ ಜೀವಾತ್ಮ ಏಳು ಮೆಟ್ಟಲುಗಳನ್ನು ದಾಟಿ ಪರಶಿವನೇ ಆಗುತ್ತಾನೆ. ಜೀವಾತ್ಮ ತಾನು ಸ್ವತಂತ್ರನಾಗಿ ಚಿದ್ರೂಪಿಯಾಗಿದ್ದರೂ ಮೂರು ಮಲಗಳಿಂದಲೂ ಪಂಚಕಂಚುಕಗಳಿಂದಲೂ ಬಂಧಿಸಲ್ಪಟ್ಟವನಾಗಿ ಅಖ್ಯಾತಿಯಿಂದ ತನ್ನ ಸ್ವರೂಪವನ್ನು ಮರೆತಿದ್ದಾನೆ. ಮೊದಲನೆಯ ಆಣವ ಮಲದಿಂದ ತನ್ನ ಸ್ವಾತಂತ್ರ್ಯವನ್ನು ಮರೆತಿದ್ದಾನೆ. ಎರಡನೆಯ ಮಾಯೀಯ ಮಲದಿಂದ ಇವನ ಅನಂತಶಕ್ತಿಗಳು ಸಂಕುಚಿತವಾಗಿವೆ. ಮೂರನೆಯ ಕಾರ್ಮ ಮಲದಿಂದ ಶುಭಾ ಶುಭ ಕರ್ಮಗಳನ್ನಾಚರಿಸುತ್ತಾನೆ. ಇವುಗಳಿಂದ ಉಚ್ಚನೀಚ ಜನ್ಮಗಳನ್ನು ಪಡೆಯುತ್ತಾನೆ. ಹೀಗೆ ಶಕ್ತಿಸಂಕೋಚದಿಂದ ಬಂಧನಕ್ಕೆ ಒಳಗಾಗಿದ್ದಾನೆ. ಮರಳಿ ಶಕ್ತಿವಿಕಾಸವಾದರೆ ಸ್ವಸ್ವರೂಪಾವಿರ್ಭಾವವಾಗುತ್ತದೆ (ಶಕ್ತಿದರಿದ್ರಃ ಸಂಸಾರಿ ಶಕ್ತಿವಿಕಾಸೇ ಶಿವಃ). ಜೀವನಲ್ಲಿ ಶಿವತ್ವ ಸಿದ್ಧವಾಗಬೇಕಾದರೆ ಸಂಕೋಚ ನಿವೃತ್ತಿ ಮಾಡುವ ಸಾಧನಾಭ್ಯಾಸಗಳನ್ನು ಮಾಡಬೇಕಾಗುತ್ತದೆ. ಈ ಸಂಪ್ರದಾಯದಲ್ಲಿ ಬಂಧನದಿಂದ ಬಿಡುಗಡೆ ಹೊಂದುವುದಕ್ಕೆ ಮುಖ್ಯವಾಗಿ ನಾಲ್ಕು ಉಪಾಯಗಳನ್ನು ಸೂಚಿಸಿರುತ್ತಾರೆ.
ಉಪಾಯಗಳು
[ಬದಲಾಯಿಸಿ]ಯಾವ ಸಾಧಕನಿಗೆ ತೀವ್ರ ಪರಿಪಾಕ ಉಂಟಾಗಿರುತ್ತದೆಯೋ ಅವನಿಗೆ ಗುರು 'ನೀನು ಶಿವನೆ ಆಗಿದ್ದೀಯೆ' ಎಂಬ ಉಪದೇಶ ಮಾಡಿದರೆ ಸಾಕು. ಒಡನೆಯೇ ಆತ ತನ್ನ ಸ್ವರೂಪವನ್ನು ಗುರುತಿಸುತ್ತಾನೆ. ಅನಂತರ ಆತ ಬದುಕಿದ್ದರೊ ಜೀವನ್ಮುಕ್ಮವಾಗಿರುತ್ತಾನೆ. ಇದಕ್ಕೆ ಅನುಪಾಯವೆಂದು ಹೆಸರು. ಇಷ್ಟು ಪರಿಪಾಕವಿಲ್ಲದವರು ಎರಡನೆಯ ಅಂತಸ್ತಿನವರು. ಇವರಿಗೆ ಉಪದೇಶ ಮತ್ತು ಸಾಧನಾಭ್ಯಾಸಗಳು ಬೇಕು. ಇವರು ತಮ್ಮ ಭಾವನಾಬಲದಿಂದ 'ನಾನೇ ಶಿವ, ವಿಶ್ವವೆಲ್ಲ ನನ್ನಿಂದಲೇ ಹೊರಹೊಮ್ಮಿದೆ. ಈ ವಿಶ್ವ ನನ್ನಿಂದ ಬೇರೆಯಲ್ಲ' ಎಂಬ ಎಡೆಬಿಡದ ಭಾವನೆಯಿಂದ ಗ್ರಾಹ್ಯ ಗ್ರಾಹಕ ವಿಷಯಗಳಲ್ಲಿ ಅಭೇದ ವ್ಯಾಪ್ತಿಯನ್ನು ಹೊಂದಿ ಸಿದ್ಧಿಯನ್ನು ಪಡೆಯುತ್ತಾನೆ. ಇದಕ್ಕೆ ಶಾಂಭವೋಪಾಯವೆಂದು ಹೆಸರು. ಕೇವಲ ಭಾವನಾಬಲದಿಂದಲೇ ಮುಂದುವರಿಯಲು ಶಕ್ತಿಯಿಲ್ಲದವರು 36 ತತ್ತ್ವಗಳನ್ನು ಅನುಸಂಧಾನ ಮಾಡಬೇಕು. ಜಾಗ್ರತ್ ಸ್ವಪ್ನ ಸುಷುಪ್ತಿ ತುರಿಯಾ ಸ್ಥಿತಿಗಳನ್ನು ವಿವೇಚಿಸಬೇಕು. ಮಂತ್ರ ಜಪ ಧ್ಯಾನ ಮೊದಲಾದ ಸಾಧನಾಭ್ಯಾಸಗಳನ್ನು ನಡೆಸಬೇಕು. ಇದಕ್ಕೆ ಶಾಕ್ತೋಪಾಯವೆಂದು ಹೆಸರು. ಶಾಕ್ತೋಪಾಯವನ್ನು ಒಡನೆಯೇ ಅನುಸರಿಸಲು ಸಾಧ್ಯವಿಲ್ಲದವರು 4ನೆಯ ಅಂತಸ್ತಿನವರು. ಈ ಸಾಧಕರು ಆಸನ ಪ್ರಣಾಯಾಮಗಳಿಂದ ಶರೀರವನ್ನು ಸ್ಥಿರಪಡಿಸಿ ಕೊಳ್ಳಬೇಕು. ಪ್ರತ್ಯಾಹಾರ ಧಾರಣಗಳಿಂದ ಮನೋನಿಗ್ರಹವನ್ನು ಸಂಪಾದಿಸಬೇಕು. ಅನಂತರ ಶಾಕ್ತ್ರೋಪಾಯ ಕ್ರಮಗಳನ್ನೇ ಅನುಸರಿಸಿ ಕ್ರಮಕ್ರಮವಾಗಿ ಆಧ್ಯಾತ್ಮ ವಿಕಾಸವನ್ನು ಸಂಪಾದಿಸಬೇಕು. ಇದಕ್ಕೆ ಆಣವೋಪಾಯವೆಂದು ಹೆಸರು. ಅಧಿಕಾರಭೇದವನ್ನನುಸರಿಸಿ ಈ ನಾಲ್ಕು ಉಪಾಯಗಳನ್ನು ಶಾಸ್ತ್ರಜ್ಞರು ಸೂಚಿಸಿರುತ್ತಾರೆ.
ಶಕ್ತಿಪಾತ ಅಥವಾ ಶಿವಾನುಗ್ರಹ
[ಬದಲಾಯಿಸಿ]ಜೀವಿಗಳ ಸುಖ ದುಃಖಗಳು ತಾರತಮ್ಯ ಭಾವಗಳಿಂದ ಕೂಡಿರುವ ಮಲ ಮತ್ತು ಕರ್ಮಗಳ ಫಲಸ್ವರೂಪಗಳು. ಶಿವ ಕರ್ಮಗಳ ಪರಿಮಿತಿಗನುಸಾರವಾಗಿ ಫಲಗಳನ್ನು ಕೊಡುತ್ತಾನೆ. ಜೀವರುಗಳಿಗನ್ವಯಿಸುವ ಸೃಷ್ಟಿ ಸ್ಥಿತಿ ಪ್ರಳಯಗಳು ಕರ್ಮಸಾಪೇಕ್ಷವಾಗಿ ನಡೆಯುತ್ತವೆ. ಅರ್ಹರಾಗಿ ಸಿದ್ಧತೆಯನ್ನು ಪಡೆದಿರುವವರಲ್ಲಿ ಪಂಚಕೃತ್ಯಗಳಲ್ಲೊಂದಾದ ಅನುಗ್ರಹವನ್ನು ಅಂದರೆ ಶಕ್ತಿಪಾತವನ್ನು ಶಿವ ವಿನಿಯೋಗಿಸುತ್ತಾನೆ. ಸಿದ್ಧತೆ ಕರ್ಮಾಚರಣೆಯಿಂದಾಗುತ್ತದೆ. ದೀಕ್ಷೆ, ಯೋಗ, ಜಪ ಧ್ಯಾನ ಮೊದಲಾದವು ಜ್ಞಾನವಿಕಾಸಕ್ಕೆ ಕಾರಣವಾದ ಕರ್ಮಗಳು. ದಾನ ಹೋಮ ಯಜ್ಞ ಮೊದಲಾದವು ಅಭ್ಯುದಯಕ್ಕೆ ಕಾರಣವಾಗಿರುವ ಕಾಮ್ಯಕರ್ಮಗಳು. ಈ ಎರಡು ಬಗೆಯ ಕರ್ಮರಾಶಿಗೂ ಫಲಗಳನ್ನು ಕೊಡುವಾತ ಶಿವನೇ. ಜ್ಞಾನವಿಕಾಸವನ್ನುಂಟು ಮಾಡುವ ಕರ್ಮಗಳಿಗೆ ಸ್ವತಂತ್ರವಾಗಿ ಮಲ ಮತ್ತು ಕರ್ಮಗಳ ಅಪೇಕ್ಷೆಯಿಲ್ಲದೆ ಶಿವ ಫಲವನ್ನು ಕೊಡುತ್ತಾನೆ-ಇದೇ ಶಿವಾನುಗ್ರಹ ಅಥವಾ ಶಕ್ತಿಪಾತ. ಜ್ಞಾನವಿಕಾಸಕ್ಕೆ ಕಾರಣವಾಗಿರುವ ಕರ್ಮಾಚರಣೆಯಿಂದ ಪ್ರಾತಿಭಜ್ಞಾನ (ಸ್ವರೂಪಜ್ಞಾನ) ವಿಕಸಿಸುತ್ತದೆ. ಈ ಪ್ರಾತಿಭಜ್ಞಾನದಿಂದ ಈ ಬಂಧನ ತನ್ನ ಸ್ವರೂಪಕ್ಕೆ ಸೇರಿಲ್ಲವೆಂದು ವ್ಯಕ್ತಿ ತಿಳಿಯುತ್ತಾನೆ. ಆಗ ಶಿವನ ಅನುಗ್ರಹಕ್ಕೆ ಪಾತ್ರನಾಗುತ್ತಾನೆ. ಇಂಥ ಸತ್ಪಾತ್ರಕ್ಕೆ ಶಕ್ತಿಪಾತ ಉಂಟಾಗುತ್ತದೆ. ಪ್ರತ್ಯಭಿಜ್ಞಾದರ್ಶನ ಕೇವಲ ಶಿವಾಗಮಗಳಿಂದ ಹೊರಹೊಮ್ಮಿರುವ ವಿಶಿಷ್ಟಮಾರ್ಗ. ಈ ಸಂಪ್ರದಾಯದಲ್ಲಿ ಪರಶಿವ ಒಬ್ಬನೇ ಪರತತ್ತ್ವವಾಗಿರುವುದರಿಂದ ಅದ್ವೈತ ದೃಷ್ಟಿ ಸ್ಥಿರವಾಗಿದೆ. ಪರಶಿವ ವಿಶ್ವಾತ್ಮಕನಾಗಿ ಜೀವಾತ್ಮ ಮತ್ತು ವಿಶ್ವ-ಈ ರೂಪಗಳಿಂದ ಅಭಿವ್ಯಕ್ತನಾಗಿರುವುದರಿಂದ ದ್ವೈತಭಾವನೆಯನ್ನು ಅಂಗೀಕರಿಸಲಾಗಿದೆ. ಸ್ವತಂತ್ರನಾಗಿ ವಿಶ್ವೊತ್ತೀರ್ಣವಾಗಿ ಅಭಿನ್ನವಾಗಿಯೂ ವಿಶ್ವಾತ್ಮಕವಾಗಿ ಅನೇಕ ಭೇದಗಳನ್ನು ಒಳಗೊಂಡಿರುವುದರಿಂದಲೂ ಇಲ್ಲಿ ಭೇದಾಭೇದ ದೃಷ್ಟಿ ಸತ್ಯವಾಗಿದೆ. ಕೊನೆಯದಾಗಿ ಎಲ್ಲವೂ ಪರಶಿವನಲ್ಲಿಯೇ ಲಯವಾಗುವುದರಿಂದ ಎಲ್ಲ ದೃಷ್ಟಿಗಳೂ ಇಲ್ಲಿ ಸಮನ್ವಯವಾಗಿವೆ. ಆತ್ಮಪ್ರಕಾಶಶಕ್ತಿ ಉನ್ಮೀಲನವಾಗುವುದಕ್ಕೆ ಪ್ರತ್ಯಭಿಜ್ಞಾನದರ್ಶನ ಒಂದು ಉತ್ತಮ ಸಾಧನವಾಗಿದೆ.
ಸಾಹಿತ್ಯಗಳು
[ಬದಲಾಯಿಸಿ]ಕಾಶ್ಮೀರ ಶೈವ ದರ್ಶನಕ್ಕೆ ಸಂಬಂಧಪಟ್ಟ ಸಾಹಿತ್ಯ ವಿಪುಲವಾಗಿದೆ. ಗುರುವಿನಿಂದ ಶಿಷ್ಯನಿಗೆ ಪರಂಪರೆಯಾಗಿ ಬಂದದ್ದು ಆಗಮಶಾಸ್ತ್ರ. ಆಗಮಕ್ಕೆ ಸೇರಿದ ಮುಖ್ಯವಾದ ತಂತ್ರಗಳೆಂದರೆ ಮಾಲಿನೀವಿಜಯ, ಸ್ವಚ್ಚಂದ, ಮೃಗೇಂದೃ, ಮಾತಂಗ, ನೇತ್ರ, ನೈಶ್ವಾನ ಸ್ವಯಂಭು, ರುದ್ರಯಾಮಳ (ಕ್ರಿ.ಶ. 8ನೆಯ ಶತಮಾನ)-ಇವು ದ್ವೈತದ ಕಡೆ ಒಲವು ಇದ್ದುದರಿಂದ ಶಿವ ಇದನ್ನು ತಡೆಗಟ್ಟಲು ವಸುಗುಪ್ತನಿಗೆ ಶಿವ-ಸೂತ್ರಗಳನ್ನು ಪ್ರಕಾಶಪಡಿಸಿದ. ವಸುಗುಪ್ತ (ಕ್ರಿ.ಶ. 850-900) ಶಿವಸೂತ್ರದ ವಿವರಣೆಯ ರೂಪದಲ್ಲಿ ಸ್ಪಂದಸೂತ್ರವನ್ನು ರಚಿಸಿದ. ಇವನ ಶಿಷ್ಯನಾದ ಕಲ್ಲಟ ಸ್ಪಂದಸೂತ್ರಗಳ ಮೇಲೆ ಒಂದು ವೃತ್ತಿಯನ್ನು ರಚಿಸಿದ. ಈತ ರಚಿಸಿದ ಭಾಷ್ಯಗಳಲ್ಲಿ ತತ್ತ್ವಾರ್ಥಚಿಂತಾಮಣಿ, ಮಧುವಾಹಿನಿಗಳು ಖಿಲವಾಗಿವೆ. ಭಾಸ್ಕರ ಬರೆದ ಶಿವಸೂತ್ರವಾರ್ತಿಕದಲ್ಲಿ ಕಲ್ಲಟನ ಭಾಷ್ಯ ಉಳಿದಿದೆ. ಸ್ಪಂದಭಾಗವನ್ನು ಬೆಳೆಸಿದವರಲ್ಲಿ ಮುಖ್ಯರಾದವರು ಇಬ್ಬರು: ಸ್ಪಂದಪ್ರದೀಪಿಕೆಯನ್ನು ಬರೆದ ಉತ್ಪಲವೈಷ್ಣವ ಮತ್ತು ಸ್ಪಂದವಿವೃತ್ತಿ, ಮಾತಂಗತಂತ್ರ ಮತ್ತು ಭಗವದ್ಗೀತೆಗಳ ಮೇಲೆ ಭಾಷ್ಯವನ್ನು ಬರೆದ ರಮಾಕಾಂತ (ಕ್ರಿ.ಶ. 900-920). ಪ್ರತ್ಯಭಿಜ್ಞಾದರ್ಶನದ ಸ್ಥಾಪಕನಾದ ಸೋಮಾನಂದ (ಕ್ರಿ.ಶ.850-900) ಶಿವದೃಷ್ಟಿಯನ್ನು ರಚಿಸಿ ಅದರ ಮೇಲೆ ಒಂದು ವೃತ್ತಿಯನ್ನು ಬರೆದ. ಇವನ ಶಿಷ್ಯನಾದ ಉತ್ಪಲಾಚಾರ್ಯ ಪ್ರತ್ಯಭಿಜ್ಞಾಸೂತ್ರವನ್ನೂ ರಚಿಸಿದ. ಇವನ ಶಿಷ್ಯನಾದ ಉತ್ಪಲಾಚಾರ್ಯ ಪ್ರತುಭಿಜ್ಞಾಸೂತ್ರವನ್ನೂ ರಚಿಸಿದ. ಇವನ ಮಗ ಲಕ್ಷ್ಮಣನ (ಕ್ರ.ಶ. 850-1000) ಶಿಷ್ಯನಾದ ಅಭಿನವಗುಪ್ತ (ಕ್ರಿ.ಶ. 993-1015) ಮಾಲಿನೀ ವಿಜಯವಾರ್ತಿಕ, ಪರಾತ್ರಿಂಶಿಕಾ ಲಘುವೃತ್ತಿ, ತಂತ್ರಾಲೋಕ, ತಂತ್ರಸಾರ, ಪರಮಾರ್ಥಸಾರ-ಮುಂತಾದ ಗ್ರಂಥಗಳನ್ನು ರಚಿಸಿದ. ಇವನ ಶಿಷ್ಯನಾದ ವಿಮರ್ಶಿನಿ, ಪ್ರತ್ಯಭಿಜ್ಞಾಹೃದಯ, ಸ್ಪಂದಸಂದೋಹ, ಸ್ಪಂದ ನಿರ್ಣಯಗಳನ್ನು ರಚಿಸಿದ. ಇವನ ಶಿಷ್ಯನಾದ ಕ್ಷೇಮರಾಜ (11ನೆಯ ಶತಮಾನ) ಶಿವಸೂತ್ರ ವೃತ್ತಿ, ಶಿವಸೂತ್ರವಿಮರ್ಶಿನಿ, ಪ್ರತ್ಯಭಿಜ್ಞಾಹೃದಯ, ಸ್ಪಂದಸಂದೋಹ, ಸ್ಪಂದ ನಿರ್ಣಯಗಳನ್ನು ರಚಿಸಿದ. ಇವನ ಅನಂತರ ಯೋಗರಾಜ (ಕ್ರಿ.ಶ. 12ನೆಯ ಶತಮಾನ) ಪರಮಾರ್ಥಸಾರಭಾಷ್ಯವನ್ನೂ ಜಯರಥ (ಕ್ರಿ.ಶ. 18ನೆಯ ಶತಮಾನ) ತಂತ್ರಾಲೋಕಭಾಷ್ಯವನ್ನೂ ಶಿವೋಪಾಧ್ಯಾಯ (ಕ್ರಿ.ಶ. 18ನೆಯ ಶತಮಾನ) ವಿಜ್ಞಾನ ಭೈರವ ತಂತ್ರಗಳನ್ನೂ ರಚಿಸಿದರು. ಈಚೆಗೆ ಇಂಗ್ಲಿಷಿನಲ್ಲಿ ಕರ್ಟ್ ಎಫ್. ಲೀಡೆಕರ್ ನ ಪ್ರತ್ಯಭಿಜ್ಞಾಹೃದಯ (1938) ಜೆ. ಸಿ. ಚಟರ್ಜಿಯವರ ಕಾಶ್ಮೀರೀ ಶೈವ ಧರ್ಮ (1914) ಮತ್ತು ಕೆ. ಸಿ. ಪಾಂಡೆ ಅವರ ಅಭಿನವಗುಪ್ತ (1935) ಎಂಬುವು ರಚಿತವಾಗಿವೆ. ಕನ್ನಡದಲ್ಲಿ ಜೆ. ರುದ್ರಪ್ಪನವರು ಪ್ರತ್ಯಭಿಜ್ಞಾಹೃದಯ ಕನ್ನಡ ಅನುವಾದ, ಕಾಶ್ಮೀರ ಶಿವಾದ್ವೈತ ಸಿದ್ಧಾಂತ ಸ್ವರೂಪ (1953), ಶಿವಸೂತ್ರಗಳ ಕನ್ನಡ ಅನುವಾದ, ಮತ್ತು ಕಾಶ್ಮೀರ ಶೈವತತ್ತ್ವಗಳ ಪರಿಚಯ (1958) ಎಂಬ ಗ್ರಂಥಗಳನ್ನು ಪ್ರಕಟಿಸಿದ್ದಾರೆ.
ನೋಡಿ
[ಬದಲಾಯಿಸಿ]ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- David Peter Lawrence (2005) Kashmiri Shaiva Philosophy, Internet Encyclopedia of Philosophy
- Piyaray L. Raina, Kashmir Shaivism versus Vedanta – A Synopsis
