ಕಾರ್ಕಳದ ಗೊಮ್ಮಟೇಶ್ವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾರ್ಕಳದ ಗೊಮ್ಮಟೇಶ್ವರ
ಕಾರ್ಕಳದ ಗೊಮ್ಮಟೇಶ್ವರ

ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಗೊಮ್ಮಟೇಶ್ವರನ ಶಿಲಾ ಮೂರ್ತಿಯ ವಿಗ್ರಹವಿದೆ. ಇದು ಮಂಗಳೂರಿನಿಂದ ೩೨ ಮೈಲು, ಮುಡಬಿದ್ರೆಯಿಂದ ೧೦ ಮೈಲು, ವೇಣೂರಿನಿಂದ ೨೨ ಮೈಲು ದೂರದಲ್ಲಿದೆ. ಇದು ಕರಿಕಲ್ಲಿನ ನೆಲವಾದ್ದರಿಂದ ಕಾರ್ಕಳ ಎಂಬ ಹೆಸರು ಬಂತು. ಇಲ್ಲಿ ಜಗತ್ತಿನಲ್ಲೇ ಎರಡನೇ ಅತೀ ಎತ್ತರದ ಬಾಹುಬಲಿ ಏಕ ಶಿಲಾ ಮೂರ್ತಿಯ ವಿಗ್ರಹವಿದೆ[೧]. ಈ ವಿಗ್ರಹದ ಎತ್ತರ ೪೨ ಅಡಿ. ಕಾರ್ಕಳದ ಬಾಹುಬಲಿ ಮೂರ್ತಿಯನ್ನು ಕೆತ್ತಿದ ಶಿಲ್ಪಿ ಬೀರ ಕಲ್ಕುಡ- ಪ್ರಸ್ತುತ ಕಲ್ಕುಡ ಎಂಬ ನಾಮದೇಯದಿಂದ ದೈವಗಳಾಗಿ ತುಳುನಾಡಿನಲ್ಲಿ ಪೂಜಿಸಲ್ಪಡುತ್ತದೆ. ಇವರ ತಂದೆ ಶಂಬು ಕಲ್ಕುಡ ಶ್ರವಣಬೆಳಗೊಳದ ಗೊಮ್ಮಟ ವಿಗ್ರಹವನ್ನು ಕೆತ್ತಿದ್ದಾರೆ ಎಂದು ತುಳುನಾಡಿನ ಶಾಸನಗಳು ತಿಳಿಸುತ್ತವೆ.

ಕಾರ್ಕಳವನ್ನು ಆಳುತ್ತಿದ್ದ ವೀರಪಾಂಡ್ಯ ಭೈರರಸನು ೧೪೩೨ ರಲ್ಲಿ ಗೊಮ್ಮಟೇಶ್ವರ ಮೂರ್ತಿಯನ್ನು ಸ್ಥಾಪಿಸಿದ ಎಂಬ ಐತಿಹಾಸಿಕ ಉಲ್ಲೇಖವಿದೆ[೨]. ಈ ಮೂರ್ತಿ ನಿರ್ಮಾಣಗೊಂಡು ೫೮೩ ವರ್ಷಗಳು ಕಳೆದಿವೆ.

ಇಲ್ಲಿನ ಏಕಶಿಲಾ ಮೂರ್ತಿಯ ವಿಶೇಷತೆ ಎಂದರೆ ಜೋಲು ಕಿವಿಗಳು, ಗಿಣಿ ಮೂಗು, ಗುಂಗುರು ಕೂದಲು, ಅರೆದೆರೆದ ಕಣ್ಣುಗಳಿಂದ ಕೂಡಿದೆ. ಆಕರ್ಷಣೀಯವಾದ ಈ ಮೂರ್ತಿಯು ಶ್ರವಣಬೆಳಗೊಳ ಮತ್ತು ವೇಣೂರಿನ ಮೂರ್ತಿಯಲ್ಲಿ ಕಂಡು ಬರುವ ಮುಗುಳುನಗೆ ಸೌಂದರ್ಯ ಈ ಮೂರ್ತಿಯಲ್ಲಿಲ್ಲ. ಬದಲಿಗೆ ತಪಸ್ಸಿಗೆ ನಿಂತಂತೆ ಭಾವಪೂರ್ಣವಾಗಿದೆ. ಸತ್ಯ, ಸಂಯಮ, ಅಹಿಂಸೆ, ವೈರಾಗ್ಯ, ತ್ಯಾಗದ ಆದರ್ಶವಾಗಿ ಗೋಮಟೇಶ್ವರ ಮೂರ್ತಿ ಸರ್ವಕಾಲಿಕ ಸಂದೇಶವನ್ನು ಜಗತ್ತಿಗೆ ಸಾರುತ್ತಿದೆ.

ಧಾರ್ಮಿಕ ಆಚರಣೆ, ಮಹಾಮೂರ್ತಿಯ ಸಂರಕ್ಷಣೆ, ಸಾಮಾಜಿಕ ಹಿತ ರಕ್ಷಣೆ, ವಿಶ್ವ ಶಾಂತಿಗೆ ಪ್ರೇರಣೆ ಮುಂತಾದ ಸದುದ್ದೇಶಗಳಿಂದ ಜೈನ ಸಂಪ್ರದಾಯದಂತೆ ಪ್ರತೀ ೧೨ ವರ್ಷಕ್ಕೊಮ್ಮೆ ವಿಗ್ರಹಕ್ಕೆ ಮಹಾಮಸ್ತಕಾಭಿಷೇಕ ನೆರವೇರಿಸುವ ಸಂಪ್ರದಾಯವೂ ನಡೆದು ಬಂದಿದೆ. ಬಾಹುಬಲಿಯು ೧೨ ವರ್ಷ ತಪೋನಿರತರಾಗಿದ್ದರೆಂಬ ಸ್ಮರಣೆಯೂ ಈ ಆಚರಣೆಯ ಹಿಂದಿದೆ.

ಮಹಾಮಸ್ತಕಾಭಿಷೇಕದ ಇತಿಹಾಸ[ಬದಲಾಯಿಸಿ]

ಗೊಮ್ಮಟೇಶ್ವರ ಮೂರ್ತಿ ಪ್ರತಿಷ್ಠಾಪನೆಯಾದ ವರ್ಷ ಅಂದರೆ ೧೪೩೨ ರಿಂದಲೂ ಮಹಾಮಸ್ತಕಾಭಿಷೇಕ ನಡೆಸಲಾಗುತ್ತಿದೆಯೆಂಬ ಪ್ರತೀತಿಯಿದೆ. ಆದರೆ ೨೦ ನೇ ಶತಮಾನಕ್ಕಿಂತ ಹಿಂದಿನ ದಾಖಲೆಗಳು ಲಭ್ಯವಿಲ್ಲ. ಮಾಹಿತಿಯಂತೆ ೧೯೨೧, ೧೯೫೧, ೧೯೫೭, ೧೯೬೨, ೧೯೯೦, ೨೦೦೨ ಹಾಗೂ ೨೦೧೫ ರಲ್ಲಿ ಮಹಾಮಸ್ತಕಾಭಿಷೇಕಗಳು ವಿಜೃಂಭಣೆಯಿಂದ ನಡೆದಿದೆ. ೧೯೭೪ ರಲ್ಲಿ ಭೂ ಮಸೂದೆ ಕಾಯಿದೆ ಪರಿಣಾಮ ಜೈನ ಸಮುದಾಯ ಆರ್ಥಿಕ ಸಂಕಷ್ಟ ಎದುರಿಸಿದ ಪರಿಣಾಮ ಮಹಾಮಸ್ತಕಾಭಿಷೇಕ ನಡೆದಿರಲಿಲ್ಲ.

ಗೊಮಟೇಶ್ವರ ಮೂರ್ತಿ ನಿರ್ಮಾಣ[ಬದಲಾಯಿಸಿ]

ಅಪ್ರತಿಮ ತ್ಯಾಗದ ಪ್ರತೀಕವಾಗಿ ಮುಗಿಲೆತ್ತರಕ್ಕೆ ದಿಗಂಬರನಾಗಿ ನಿಂತು ವಿಶ್ವಕ್ಕೆ ಶಾಂತಿ ಸಾರುವ ಬಾಹುಬಲಿ ಮೂರ್ತಿ ಕಾರ್ಕಳದಲ್ಲಿ ನೆಲೆಯಾದುದೇ ಅವಿಸ್ಮರಣೀಯ ಕಥನ. ೧೪೧೬ ರಲ್ಲಿ ಕಾರ್ಕಳವನ್ನಾಳುತ್ತಿದ್ದ ಭೈರರಸನ ಒಡೆಯನಾದ ಪುತ್ರನಾದ ವೀರಪಾಂಡ್ಯ ಭೈರರಸನು ಯಾತ್ರೆಗಾಗಿ ಉತ್ತರ ಪ್ರದೇಶಕ್ಕೆ ತೆರಳುತ್ತಾನೆ[೩]. ಹಿಂದಿರುಗಿ ಬರುತ್ತಿದ್ದ ಸಂದರ್ಭದಲ್ಲಿ ಶ್ರವಣಬೆಳಗೊಳದಲ್ಲಿ ಗೊಮಟೇಶ್ವರ ಮೂರ್ತಿ ಕಂಡು ಪುಳಕಿತನಾಗಿ ತನ್ನ ರಾಜಧಾನಿಯಾದ ಕಾರ್ಕಳದಲ್ಲೂ ಪ್ರತಿಷ್ಟಾಪಿಸುವ ಸಂಕಲ್ಪ ಹೊಂದುತ್ತಾನೆ. ೧೪೩೨ರಲ್ಲಿ ವೀರಪಾಂಡ್ಯನು ಪಟ್ಟಕ್ಕೇರುತ್ತಿದ್ದಂತೆ ತಾನು ಸಂಕಲ್ಪಿಸಿದಂತೆ ಉತ್ತಮ ಶಿಲ್ಪಿಗಳಿಂದ, ಈಗಿರುವ ಆನೆಕೆರೆಯಿಂದ ಅನತಿ ದೂರದಲ್ಲಿರುವ ಗೊಮಟೇಶ್ವರ ಬೆಟ್ಟದಲ್ಲಿ ಈ ಮೂರ್ತಿಯನ್ನು ಪ್ರತಿಷ್ಟಾಪಿಸುತ್ತಾನೆ. ಇದು ಬೇರೆ ಕಡೆಯಿಂದ ತಂದು ನಿಲ್ಲಿಸಿದ ವಿಗ್ರಹ. ಅರಸನಿಗೆ ತನ್ನ ಅರಮನೆಯ ಬಲಭಾಗದಲ್ಲಿರುವ ಗಿರಿಯು ಕೈಲಾಸ ಗಿರಿಯಂತೆ ಗೋಚರಿಸಿತು. ಗುರುಗಳಾದ ಲಲಿತಕೀರ್ತಿ ಭಟ್ಟಾರಕರೊಡನೆ ಆ ಗಿರಿಗೆ ಅಭಿಮುಖವಾಗಿ ನೋಡಿದಾಗ ಆತನಿಗೆ ಅಲ್ಲಿ ವಜ್ರಶಿಲೆಯೊಂದು ಕಾಣಸಿಕ್ಕಿತು. ಅದರಿಂದಲೇ ಈ ಗೊಮಟೇಶ್ವರ ಮೂರ್ತಿಯನ್ನು ನಿರ್ಮಿಸಲು ಉದ್ದೇಶಿಸಿ ತಾನು ತಂದಿದ್ದ ಅಷ್ಟಮಂಗಲ ದ್ರವ್ಯದಿಂದ ಆ ಶಿಲೆಯನ್ನು ಪೂಜಿಸಿ, ಅರಸನು ತನ್ನರಮನೆಗೆ ಹಿಂದಿರುಗುತ್ತಾನೆ.

ನಂತರ ಸ್ಥಳೀಯ ಶ್ರೇಷ್ಟ ಶಿಲ್ಪಿಗಳಿಂದ ಬಾಹುಬಲಿ ಮೂರ್ತಿಯನ್ನು ಕಟೆದು ನಿಲ್ಲಿಸುತ್ತಾನೆ. ಆದರೆ ಸಹಸ್ರ ಟನ್ ತೂಕದ ಬರೋಬ್ಬರಿ ೫೦ ಅಡಿಗಳಿಗೂ(ತಳಭಾಗ ಸಹಿತ) ಮಿಕ್ಕಿದ ಬೃಹತ್ ಏಕಶಿಲಾ ವಿಗ್ರಹವನ್ನು ಕಟೆದು ಕರಿಕಲ್ಲ ದಿಬ್ಬಕ್ಕೆ ಕೊಂಡೊಯ್ದು ನಿಲ್ಲಿಸಿದ ಸಾಧನೆ ಇಂದಿಗೂ ಊಹೆಗೆ ನಿಲುಕದ ಸಾಹಸವಾಗಿದೆ. ಅಂದು ಹತ್ತು ಸಾವಿರ ಜನ ಸೇರಿ ಹತ್ತು ಗಾಲಿಯ ಬಂಡಿಯಲ್ಲಿ ಗೊಮ್ಮಟ ವಿಗ್ರಹವನ್ನಿರಿಸಿ ಆನೆಗಳ ನೆರವಿನಿಂದ ಬೆಟ್ಟದ ಮೇಲೆ ಎಳೆದೊಯ್ದರು. ಬೆಟ್ಟದ ತುದಿಯಲ್ಲಿ ಶಿಲ್ಪಾಕೃತಿಗೆ ಅಂತಿಮ ಸ್ಪರ್ಶದ ಬಳಿಕ ಸಾವಿರ ರಾಟೆಗಳನ್ನು ಹಾಕಿಸಿ ಸುಮಾರು ಇಪ್ಪತ್ತೈದು ಸಾವಿರ ಜನರ ಸಹಾಯದಿಂದ ಈ ವಿಗ್ರಹವನ್ನು ಪ್ರತಿಷ್ಟಾಪಿಸಿದನು ಎಂದು ಚರಿತ್ರೆ ಹೇಳುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. https://www.udupilive.in/city-guide/karkala-in-udupi
  2. https://www.wikiwand.com/en/Gommateshwara_statue,_Karkala#CITEREFZimmer1953
  3. http://www.karkalagommateshwara.com/history.php