ವೀರಪಾಂಡ್ಯ ಕಟ್ಟಬೊಮ್ಮನ್
ವೀರಪಾಂಡ್ಯ ಕಟ್ಟಬೊಮ್ಮನ್ | |
---|---|
ಜನನ | ಪಾಂಚಾಲಕುರಿಚ್ಚಿ, ಮದ್ರಾಸ್ ಪ್ರಾಂತ್ಯ, ಬ್ರಿಟಿಷ್ ಭಾರತ(ಈಗಿನ ತಮಿಳುನಾಡಿನ ತೂತುಕುಡಿ ಜಿಲ್ಲೆ) | ೨ ಫೆಬ್ರವರಿ ೧೭೬೦
ಮರಣ | 16 October 1799 ತಮಿಳುನಾಡಿನ ಕಾಯಾಥಾರ್ | (aged 39)
ರಾಷ್ಟ್ರೀಯತೆ | ಭಾರತೀಯ |
ಚಳುವಳಿ | ಭಾರತೀಯ ಸ್ವಾತಂತ್ರ್ಯ ಹೋರಾಟ |
ವೀರಪಾಂಡ್ಯ ಕಟ್ಟಬೊಮ್ಮನ್(Tamil:வீரபாண்டிய கட்டபொம்மன்) ೧೮ ನೇ ಶತಮಾನದಲ್ಲಿ ತಮಿಳುನಾಡಿನ ತೂತುಕುಡಿ ಜಿಲ್ಲೆಯ ಪಾಂಚಾಲಕುರಿಚ್ಚಿ ಎಂಬ ಗ್ರಾಮದ ದಳವಾಯಿ ಹಾಗೂ ಪಾಳೇಗಾರನಾಗಿದ್ದ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿಸ್ತರಣಾವಾದ, ಆಕ್ರಮಣ ಮತ್ತು ದಬ್ಬಾಳಿಕೆಯ ವಿರುದ್ಧ ತಿರುಗಿಬಿದ್ದವರಲ್ಲಿ ಮೊದಲಿಗನ ಸ್ಥಾನದಲ್ಲಿ ನಿಲ್ಲುವ ಕಟ್ಟಬೊಮ್ಮನ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರ. ಭಾರತದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆಯುವ ಸುಮಾರು ೬೦ ವರ್ಷಗಳಿಗೂ ಮುಂಚೆಯೇ ಬ್ರಿಟೀಷರ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ತಿರುಗಿ ಬಿದ್ದು ಬ್ರಿಟಿಷರಿಗೆ ಸೆರೆಯಾಗಿ ತಮಿಳು ನೆಲದಲ್ಲಿ ಹುತಾತ್ಮನಾದ ಕಟ್ಟಬೊಮ್ಮನ್ ಬಹಳಷ್ಟು ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಪೂರ್ತಿಯ ಸೆಲೆ[೧].
ಹಿನ್ನೆಲೆ
[ಬದಲಾಯಿಸಿ]ತಮಿಳುನಾಡಿನ ಈಗಿನ ತೂತುಕುಡಿ ಜಿಲ್ಲೆಯ ಪಾಂಚಾಲಕುರಿಚ್ಚಿ ಎಂಬ ಸ್ಥಳದಲ್ಲಿ ಜಗವೀರ ಕಟ್ಟಬೊಮ್ಮನ್ ಹಾಗು ಆರ್ಮುಗಟ್ಟಮ್ಮಾಳ್ ದಂಪತಿಗಳಿಗೆ ಮೊದಲ ಮಗನಾದ ವೀರಪಾಂಡ್ಯ ಕಟ್ಟಬೊಮ್ಮನ್ ಜನವರಿ ೩, ೧೭೬೦ ರಂದು ಜನಿಸಿದ. ಕಟ್ಟಬೊಮ್ಮನ್ ಗೆ ಇಬ್ಬರು ತಮ್ಮಂದಿರಿದ್ದರು, ಮೊದಲನೆಯವನು ದಳವಾಯಿ ಕುಮಾರಸ್ವಾಮಿ ಹಾಗೂ ಎರಡನೆಯವನು ದೊರೆಸಿಂಗಂ. ಫೆಬ್ರವರಿ ೨, ೧೭೯೦ ರಲ್ಲಿ ಪಾಂಚಾಲಕುರಿಚ್ಚಿಯ ಅಧಿಪತ್ಯವಹಿಸಿಕೊಳ್ಳುವ ಕಟ್ಟಬೊಮ್ಮನ್ ಅಂದಿನಿಂದ ಪಾಳೇಗಾರನಾಗುತ್ತಾನೆ.
ಬ್ರಿಟೀಷರ ವಿರುದ್ಧ ಹೋರಾಟ
[ಬದಲಾಯಿಸಿ]ಭಾರತ ನೆಲದಲ್ಲಿ ಪರಕೀಯರಿಂದ ನಡೆಯುತ್ತಿದ್ದ ಗುಂಡಿನ ಮೊರೆತಗಳು, ದಾಳಿಗಳು, ಧಾಂದಲೆಗಳು, ದಬ್ಬಾಳಿಕೆಗಳು ಕಟ್ಟಬೊಮ್ಮನ್ ನಿದ್ದೆಗೆಡಿಸಿದ್ದವು. ನಮ್ಮ ನೆಲದಲ್ಲಿ ನಾವು ಸ್ವಾತಂತ್ರ್ಯರಾಗಿರಲು ಬ್ರಿಟೀಷರ ಅಪ್ಪಣೆ ಸಲ್ಲದು ಎಂಬ ನಿಲುವಿಗೆ ಬಂದಿದ್ದ ಕಟ್ಟಬೊಮ್ಮನ್ ಪ್ರಥಮ ಬಾರಿಗೆ ಬಹಿರಂಗವಾಗಿ ಬ್ರಿಟಿಷ್ ಚಕ್ರಾಧಿಪತ್ಯವನ್ನು ವಿರೋಧಿಸಿದ್ದ. ಬ್ರಿಟೀಷರ ಚಕ್ರಾಧಿಪತ್ಯ ಹೇರುವಿಕೆಯನ್ನು ಖಂಡತುಂಡವಾಗಿ ಖಂಡಿಸಿದ ಕಟ್ಟಬೊಮ್ಮನ್ ಏಕತ್ರವಾಗಿ ಬ್ರಿಟೀಷರ ವಿರುದ್ಧ ಸೆಟೆದು ನಿಂತ.
ಮರಣ
[ಬದಲಾಯಿಸಿ]೧೭೯೯ ರ ಅಕ್ಟೋಬರ್ ೧ ರಂದು ಪುದುಕೊಟ್ಟೈ ಸಂಸ್ಥಾನದ ರಾಜ ವಿಜಯ ರಘುನಾಥ ತೊಂಡೈಮಂ ಕಟ್ಟಬೊಮ್ಮನ್ ಗೆ ದ್ರೋಹವೆಸಗಿ ಬ್ರಿಟಿಷರಿಗೆ ಹಿಡಿದು ಕೊಡಲು ಸಹಕರಿಸಿದನು. ಬ್ರಿಟೀಷರ ವಿರುದ್ಧ ಕುದಿಯುತ್ತಿದ್ದ ಕಟ್ಟಬೊಮ್ಮನ್ ನನ್ನು ಕಾಯಾಥಾರ್ ನಲ್ಲಿ ಬಂಧಿಸಲಾಯಿತು. ಅದೇ ವರ್ಷದ ಅಕ್ಟೋಬರ್ ೧೬ ರ ವರೆವಿಗೂ ಕಟ್ಟಬೊಮ್ಮನ್ ಅನ್ನು ವಿಚಾರಣೆಗೆ ಒಳಪಡಿಸಿ ನಂತರ ಸಾರ್ವಜನಿಕವಾಗಿ ಗಲ್ಲಿಗೇರುವಂತೆ ಶಿಕ್ಷೆ ನೀಡಲಾಯಿತು. ಅಪ್ರತಿಮ ವೀರ, ತಮಿಳು ನೆಲದಲ್ಲಿ ಸ್ವಾತಂತ್ರ್ಯ ಕಿಡಿ ಹೊತ್ತಿಸಿದ ಕಟ್ಟಬೊಮ್ಮನ್ ನನ್ನು ಅದೇ ದಿನ ಕಾಯಾಥಾರ್ ನಲ್ಲಿ ನೇಣಿಗೇರಿಸಲಾಯಿತು.
ಕಟ್ಟಬೊಮ್ಮನ್ ನೆನಪು
[ಬದಲಾಯಿಸಿ]- ಇಂದಿಗೂ ಅಗಲಿದ ಅಪ್ರತಿಮ ಸ್ವಾತಂತ್ರ್ಯ ಸೇನಾನಿಯ ಜ್ಞಾಪಕಾರ್ಥವಾಗಿ ಪಾಂಚಾಲಕುರಿಚ್ಚಿಯಲ್ಲಿ ವೀರಪಾಂಡ್ಯನ್ ಕಟ್ಟಬೊಮ್ಮನ್ ಪರ್ವವನ್ನು ಆಚರಿಸಲಾಗುತ್ತದೆ.
- ೧೯೭೪ ರಲ್ಲಿ ತಮಿಳುನಾಡು ಸರ್ಕಾರ ಕಾಯಾಥಾರ್ ನಲ್ಲಿನ ಕಟ್ಟಬೊಮ್ಮನ್ ಸಮಾಧಿ ಸ್ಥಳವನ್ನು ಅಭಿವೃದ್ಧಿ ಪಡಿಸಿದೆ.
- ಇನ್ನುಳಿದಂತೆ ಪಾಂಚಾಲಕುರಿಚ್ಚಿಯ ಕೋಟೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಐತಿಹಾಸಿಕ ಸಂರಕ್ಷಿತ ಸ್ಥಳವೆಂದು ಘೋಷಿಸಿದೆ.
- ಜೂನ್ ೧೮, ೨೦೧೫ರಲ್ಲಿ ತಮಿಳುನಾಡಿನ ವೆಲ್ಲಿಂಗ್ಟನ್ನಲ್ಲಿ ಕಟ್ಟಬೊಮ್ಮನ್ ನ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ.
- ಕಟ್ಟಬೊಮ್ಮನ್ ಪ್ರಾಣತ್ಯಾಗದ ನೆನಪಿಗಾಗಿ ಭಾರತೀಯ ಅಂಚೆ ಇಲಾಖೆ ಕಟ್ಟಬೊಮ್ಮನ್ ನ ಸ್ಟ್ಯಾಂಪ್ ಗಳನ್ನೂ ಅಕ್ಟೋಬರ್ ೧೬, ೧೯೯೯ರಂದು ಬಿಡುಗಡೆ ಮಾಡಿದೆ.
- ವಿಜಯನಾರಾಯಣಂನ ಭಾರತೀಯ ಜಲಸೇನೆಯ ಸಂವಹನ ಕೇಂದ್ರವನ್ನು ಐ ಎನ್ ಎಸ್ ಕಟ್ಟಬೊಮ್ಮನ್ ಎಂದು ಕಟ್ಟಬೊಮ್ಮನ್ ಗೌರವಾರ್ಥ ನಾಮಕರಣ ಮಾಡಲಾಗಿದೆ.
- ೧೯೯೭ ರ ವರೆವಿಗೂ ತಮಿಳುನಾಡಿನ ತಿರುವನೆಲ್ಲಿ ಸಾರಿಗೆ ವಿಭಾಗವನ್ನು ಕಟ್ಟಬೊಮ್ಮನ್ ಸಾರಿಗೆ ಸಂಸ್ಥೆ ಎಂದೇ ಕರೆಯಲಾಗುತ್ತಿತ್ತು.
- ವೀರಪಾಂಡ್ಯನ್ ಕಟ್ಟಬೊಮ್ಮನ್ ಸಾಂಸ್ಕೃತಿಕ ಸಂಘ ವೂ ತಮಿಳುನಾಡಿನಲ್ಲಿ ಅಸ್ತಿತ್ವದಲ್ಲಿದೆ.
- ೧೯೫೯ ರಲ್ಲಿ ತಮಿಳಿನ ಖ್ಯಾತ ನಟ ಶಿವಾಜಿ ಗಣೇಶನ್ ಕಟ್ಟಬೊಮ್ಮನ್ ಪಾತ್ರದಲ್ಲಿ ನಟಿಸಿದ ಕಟ್ಟಬೊಮ್ಮನ್ ಜೀವನಾಧಾರಿತ ಚಲನಚಿತ್ರವೂ ಬಿಡುಗಡೆಯಾಗಿದೆ.
ಆಕರಗಳು
[ಬದಲಾಯಿಸಿ]• ಕಟ್ಟಬೊಮ್ಮನ್ ಸ್ಮಾರಕ ಉದ್ಹಾಟಿಸಿದ ಜಯಲಲಿತಾ ದಿ ಹಿಂದೂ ಪತ್ರಿಕೆಯ ಇಂಗ್ಲಿಷ್ ಆವೃತ್ತಿ
• ಕಟ್ಟಬೊಮ್ಮನ್ ಪರ್ವ ಆಚರಣೆ, ದಿ ಹಿಂದೂ ಪತ್ರಿಕೆಯ ವರದಿ Archived 2007-10-01 ವೇಬ್ಯಾಕ್ ಮೆಷಿನ್ ನಲ್ಲಿ.