ಕಾರಲು ರೋಗ
ಪ್ಲಾಟಿಹೆಲ್ಮಿಂತಿಸ್ ವಿಭಾಗದ ಟ್ರೆಮಟೋಡ ವರ್ಗಕ್ಕೆ ಸೇರಿದ ಫೆಸಿಯೊಲ ಹೆಪ್ಯಾಟಿಕ ಮತ್ತು ಫೆಸಿಯೊಲ ಜೈಗಾಂಟಿಕ ಎಂಬ ಎರಡು ಪರಾವಲಂಬಿ ಜೀವಿಗಳಿಂದ ಕುರಿ, ದನ ಮುಂತಾದ ಸಾಕುಪ್ರಾಣಿಗಳಲ್ಲಿ ಉಂಟಾಗುವ ರೋಗ (ಲಿವರ್ ರಾಟ್). ಮೊಲ, ಹಂದಿ, ಕುದುರೆ, ಜಿಂಕೆ ಮುಂತಾದ ಪ್ರಾಣಿಗಳಿಗೂ[೧] ಈ ರೋಗ ಬರುವುದಲ್ಲದೆ ರೋಗಪೀಡಿತ ದನದ ಮತ್ತು ಕುರಿಯ ಮಾಂಸ ತಿಂದ ಮನುಷ್ಯರಲ್ಲೂ ಇದು ಕಾಣಿಸುವುದುಂಟು.
ವಿಧಗಳು
[ಬದಲಾಯಿಸಿ]ಇದರಲ್ಲಿ ಎರಡು ವಿಧಗಳುಂಟು. ಪಿತ್ತಜನಕಾಂಗವನ್ನೆಲ್ಲ ಗುಂಪುಗುಂಪಾಗಿ ಅಧಿಕ ಸಂಖ್ಯೆಗಳಲ್ಲಿ ಆಕ್ರಮಿಸುವ ಎಳೆಯ ಹುಳುಗಳಿಂದ ಉಂಟಾಗುವ ತೀವ್ರ ಸ್ವರೂಪದ ಕಾಯಿಲೆ (ನಿಜವಾದ ಯಕೃತ್ ಕೊಳೆ) ಮತ್ತು ಪಿತ್ತನಾಳಗಳಲ್ಲಿ (ಬೈಲ್ ಡಕ್ಟ್ಸ್) ದೀರ್ಘಕಾಲ ವಾಸಮಾಡಿಕೊಂಡಿರುವ ದೊಡ್ಡ ಹುಳುಗಳಿಂದ ಉತ್ಪತ್ತಿಯಾಗುವ ಚಿರಸ್ವರೂಪದ (ಕ್ರಾನಿಕ್ ಫಾರಮ್) ಕಾಯಿಲೆ. ಮಧ್ಯವರ್ತಿಯಾಗಿ ಆಸರೆಯಾಗಿರುವ ಕೆಲವು ಬಗೆಯ ಶಂಖು ಹುಳು ಅಥವಾ ಬಸವನ ಹುಳುಗಳು (ಲಿಮ್ನಿಯ, ಪ್ಲೆನಾರ್ಬಿಸ್ ಮೆಲೇನಿಯ ಮತ್ತು ವಿವಿಪೇರ ಜಾತಿಯ ಬಸವನ ಹುಳು) ವಾಸವಾಗಿರುವ ಜೌಗು ಪ್ರದೇಶಗಳಲ್ಲಿ ಮೇಯುವ ದನ ಕುರಿಗಳಲ್ಲಿ ಈ ಕಾಯಿಲೆ ಕಂಡುಬರುತ್ತದೆ.
ಜೀವನಚರಿತ್ರೆಯಲ್ಲಿನ ಮುಖ್ಯ ವಿವರಗಳು
[ಬದಲಾಯಿಸಿ]ಕಾರಲುರೋಗವನ್ನುಂಟುಮಾಡುವ ಹುಳು ತನ್ನ ವಿಚಿತ್ರ ಬಗೆಯ ಜೀವನ ಚಕ್ರದ ಮೊದಲನೆಯ ಘಟ್ಟವನ್ನು ಮುಖ್ಯ ಆಶ್ರಯದಾತ ಪ್ರಾಣಿಯಾದ ಕುರಿಯ ಪಿತ್ತಜನಕಾಂಗದಲ್ಲೂ ಎರಡನೆಯ ಘಟ್ಟವನ್ನು ಮಧ್ಯವರ್ತಿ ಆಶ್ರಯದಾತ ಪ್ರಾಣಿಯಾದ ಬಸವನ ಹುಳುವಿನ ದೇಹದಲ್ಲೂ ಸಾಗಿಸುತ್ತದೆ. ಅದರ ಜೀವನ ಚರಿತ್ರೆಯ ಮುಖ್ಯ ಅಂಶಗಳು ಈ ರೀತಿ ಇವೆ: ಜಾಡ್ಯ ತಗುಲಿದ ಪ್ರಾಣಿಯ ಶರೀರದಿಂದ ಮಲದೊಂದಿಗೆ ಹೊರಬಂದ ಕಾರಲು ಹುಳುವಿನ ಮೊಟ್ಟೆಗಳು ಸುಮಾರು 9 ದಿವಸಗಳಲ್ಲಿ ಮಿರಸಿಡಿಯಂ ಎಂಬ ಹೆಸರಿನ ಮರಿಗಳಾಗುತ್ತವೆ. ಸನ್ನಿವೇಶಗಳು ಅನುಕೂಲವಾಗಿಲ್ಲದ ಸಂದರ್ಭಗಳಲ್ಲಿ ಮೊಟ್ಟೆಗಳು 5-6 ತಿಂಗಳಿಗೂ ಮಿಗಿಲಾಗಿ ಜೀವಂತವಾಗಿದ್ದು ಸುಸಮಯ ದೊರಕಿದ ಅನಂತರ ಮರಿಗಳನ್ನು ಉತ್ಪತ್ತಿ ಮಾಡಬಹುದು. ಪ್ರಥಮಾವಸ್ಥೆಯ ಈ ಮಿರಸಿಡಿಯಂ ಎಂಬ ಮರಿಗಳು ಮಧ್ಯವರ್ತಿ ಆಸರೆಯಾದ ಬಸವನ ಹುಳುವಿನ ದೇಹವನ್ನು ಹೊಕ್ಕು 6-7ವಾರಗಳ ಅನಂತರ ಸರ್ಕೆರಿಯ ಎಂಬ ದ್ವಿತೀಯಾವಸ್ಥೆಯ ಮರಿಗಳಾಗಿ ರೂಪಾಂತರಗೊಂಡು ಬಸವನ ಹುಳುವಿನ ದೇಹದಿಂದ ಹೊರಬಂದು ಸಸ್ಯಗಳ ಮೇಲೆ ನೆಲೆಗೊಂಡು ಕೋಶಾವಸ್ಥೆಯನ್ನು ತಲುಪುತ್ತವೆ. ಇಂಥ ಸ್ಥಳಗಳಲ್ಲಿ ಮುಖ್ಯ ಆಶ್ರಯದಾತ ಪ್ರಾಣಿಗಳಾದ ಕುರಿ ದನ ಮುಂತಾದುವು ಹುಲ್ಲು ಮೇಯುವಾಗ ಅವುಗಳ ದೇಹವನ್ನು ಪ್ರವೇಶಿಸಿ ತಮ್ಮ ಪರಾವಲಂಬನ ಜೀವನವನ್ನು ಪ್ರಾರಂಭಿಸುತ್ತವೆ. ಕೋಶಾವಸ್ಥೆಯಲ್ಲಿ ಒಂದು ವರ್ಷವಾದರೂ ಇರಬಲ್ಲವು. ಮುಖ್ಯ ಆಸರೆಯಾದ ಪ್ರಾಣಿಯ ಸಣ್ಣ ಕರುಳನ್ನು ತಲಪಿದ ಎಳೆಯ ಕಾರಲು ಹುಳುಗಳು ಕರುಳಿನ ಗೋಡೆಯನ್ನು ಭೇದಿಸಿ ಹೊಟ್ಟೆಯಲ್ಲಿ ಕೆಲವು ದಿವಸಗಳನ್ನು ಕಳೆದು ಅನಂತರ ಪಿತ್ತಜನಕಾಂಗವನ್ನು ಆಕ್ರಮಿಸುತ್ತವೆ. ಅಲ್ಲಿ 5-6 ವಾರಗಳ ಬೆಳೆವಣಿಗೆಯನ್ನು ಸಾಗಿಸಿ 3-4 ಮಿಮೀ.ಗಳಷ್ಟು ಉದ್ದವಾಗಿ ಅನಂತರ ಪಿತ್ತನಾಳವನ್ನು ಸೇರಿ ಅಲ್ಲಿ ಪ್ರೌಢಾವಸ್ಥೆಗೆ ಬರುತ್ತವೆ. ಪ್ರೌಢಾವಸ್ಥೆಗೆ ಬಂದ ಕೆಲವು ದಿವಸಗಳಲ್ಲೇ ಮೊಟ್ಟೆಯಿಡಲು ಆರಂಭಿಸುತ್ತವೆ. ಜಾಡ್ಯ ಸೋಕಿದ ಕಾಲದಿಂದ 11ರಿಂದ 13 ವಾರಗಳಲ್ಲಿ ರೋಗಪೀಡಿತ ಪ್ರಾಣಿಯ ಮಲದಲ್ಲಿ ಕಾರಲು ಹುಳುವಿನ ಮೊಟ್ಟೆಗಳು ಕಾಣಬರುತ್ತವೆ; ಈ ರೀತಿ ಮಲದಲ್ಲಿ ಮೊಟ್ಟೆಗಳು ಕಾಣಿಸಿಕೊಳ್ಳುವುದು ಇದಕ್ಕೆ 11 ರಿಂದ 13 ವಾರಗಳ ಹಿಂದೆ ಸೇರಿದ ಜಾಡ್ಯವನ್ನು ಸೂಚಿಸುತ್ತದೆ.
ರೋಗಲಕ್ಷಣಗಳು
[ಬದಲಾಯಿಸಿ]ತೀವ್ರ ಸ್ವರೂಪದ ರೋಗ
[ಬದಲಾಯಿಸಿ]ಕುರಿಗಳಲ್ಲಿ ಈ ಕಾಯಿಲೆ ದಷ್ಟಪುಷ್ಟವಾಗಿರುವ ಪ್ರಾಣಿಗಳಲ್ಲಿ ಕಾಣಿಸಿಕೊಂಡು ಕೇವಲ ಕೆಲವೇ ದಿವಸಗಳ ರೋಗದಿಂದಲೇ ಮರಣ ಸಂಭವಿಸಬಹುದು. ಜಾಡ್ಯ ತಗುಲಿದ ಪ್ರಾಣಿಗಳು ಮಂದೆಯನ್ನು ಬಿಟ್ಟು ಬೇರೆ ನಿಂತು ಚಲಿಸಲು ಇಷ್ಟಪಡದೇ ಇರುತ್ತವೆ. ಹೊಟ್ಟೆ ಉಬ್ಬರಿಸಿಕೊಂಡು ಮುಟ್ಟಿದರೆ ನೋವುಂಟಾಗುತ್ತದೆ. ದನಗಳಲ್ಲಿ ಈ ಕಾಯಿಲೆ ಎಳೆಯ ಕರುಗಳಿಗೂ ಅಂಟುತ್ತದೆ. ಹಸಿವಿಲ್ಲದಿರುವಿಕೆ, ಮಂಕಾಗಿರುವಿಕೆ, ಗಂಟಲು ಊತ, ಹೊಟ್ಟೆಯುಬ್ಬರ ಮತ್ತು ನೋವು-ಇವು ಕಾಯಿಲೆಯ ಲಕ್ಷಣಗಳು. ಕೆಲವೇ ದಿವಸಗಳಲ್ಲಿ ಕರುಗಳು ಸತ್ತು ಹೋಗುತ್ತವೆ.
ಚಿರಸ್ವರೂಪದ ರೋಗ
[ಬದಲಾಯಿಸಿ]ಕುರಿಗಳಲ್ಲಿ ಈ ರೀತಿಯ ಜಾಡ್ಯದ ಮೊದಲ ಚಿಹ್ನೆಯೆಂದರೆ ಮಂದೆಯನ್ನು ಮುಂದೋಡಿಸಿದಾಗ ಕೆಲವು ಕುರಿಗಳು ಹಿಂದೆ ಉಳಿಯುವುದು. ಇವನ್ನು ಹಿಡಿದು ಪರೀಕ್ಷಿಸಿದಲ್ಲಿ ರಕ್ತಹೀನತೆಯ ಲಕ್ಷಣಗಳು ಎದ್ದು ಕಾಣುತ್ತವೆ. ಕಾಯಿಲೆ ಮುಂದುವರಿದಂತೆ ಪ್ರಾಣಿಯ ದೇಹ ಒಣಗುತ್ತ ಬರುವುದು ಚೆನ್ನಾಗಿ ಕಾಣುತ್ತದೆ. ಗಂಟಲ ಮತ್ತು ಹೊಟ್ಟೆಯ ಕೆಳಭಾಗಗಳಲ್ಲಿ ನೀರು ತುಂಬಿಕೊಂಡು ಊದಿಕೊಳ್ಳಬಹುದು. ದನಗಳಲ್ಲಿ ರಕ್ತಹೀನತೆ, ಭೇದಿ ಮತ್ತು ಕೃಶವಾಗಿ ಕಾಣುವ ದೇಹ ಇವು ಮುಖ್ಯವಾಗಿ ಗೋಚರವಾಗುವ ಸಾಮಾನ್ಯ ಲಕ್ಷಣಗಳು. ಗಂಟಲಿನ ಊತವೂ ಉಂಟಾಗಬಹುದು. ಇಂಥ ರೋಗವುಳ್ಳ ಕುರಿ ಮತ್ತು ದನಗಳ ಮಲವನ್ನು ಪರೀಕ್ಷಿಸಿದಾಗ ಕಾರಲು ಹುಳುವಿನ ಮೊಟ್ಟೆಗಳನ್ನು ಕಾಣಬಹುದು. ಇದು ಕಾಯಿಲೆಯನ್ನು ಗುರುತಿಸಲು ಬಹಳ ಸಹಕಾರಿಯಾದುದು.
ಮರಣಾನಂತರ ಪರೀಕ್ಷೆ
[ಬದಲಾಯಿಸಿ]ತೀವ್ರ ಸ್ವರೂಪದ ಕಾಯಿಲೆಯಿಂದ ಸತ್ತ ಪ್ರಾಣಿಯ ಹೊಟ್ಟೆಯಲ್ಲಿ ರಕ್ತವರ್ಣದ ದ್ರವ ಇದ್ದು, ಪಿತ್ತಜನಕಾಂಗ ಬಾತುಕೊಂಡು ರಕ್ತಸ್ರಾವವಾಗಿರುವುದನ್ನು ತೋರಿಸುತ್ತದೆ. ಈ ಪಿತ್ತಜನಕಾಂಗವನ್ನು ಕತ್ತರಿಸಿ, ಹಿಂಡಿ, ನೀರಿನಿಂದ ತೊಳೆಯಬೇಕು. ಇದರಿಂದ ಪಿತ್ತಜನಕಾಂಗದ ರಸದೊಂದಿಗೆ ಎಳೆಯ ಕಾರಲು ಹುಳುಗಳು ಹೊರಬರುತ್ತವೆ. ಅನಂತರ ರಸವನ್ನು ತಂಗುವುದಕ್ಕೆ ಬಿಟ್ಟರೆ ಹುಳುಗಳು ನಿಧಾನವಾಗಿ ರಸದಿಂದ ಬೇರ್ಪಡುತ್ತವೆ.
ಚಿರಸ್ವರೂಪದ ಕಾಯಿಲೆಯಲ್ಲಿ ಗಂಟಲು ಮತ್ತು ಹೊಟ್ಟೆಯಲ್ಲಿ ನೀರು ತುಂಬಿಕೊಂಡಿರುತ್ತದೆ. ಪಿತ್ತಜನಕಾಂಗ ಕ್ಷೀಣಗೊಂಡಿರುವುದಲ್ಲದೆ ಕೊಳೆತಿರುತ್ತದೆ. ಪಿತ್ತನಾಳಗಳು ವಿಶೇಷವಾಗಿ ದೊಡ್ಡದಾಗಿ ಅವುಗಳ ಗೋಡೆಗಳು ದಪ್ಪವಾಗಿರುತ್ತವೆ. ಅನೇಕ ವೇಳೆ ಪಿತ್ತನಾಳ ಮತ್ತು ಪಿತ್ತಕೋಶಗಳಲ್ಲಿ ದೊಡ್ಡ ಕಾರಲು ಹುಳುಗಳನ್ನು ಕಾಣಬಹುದು.
ಚಿಕಿತ್ಸಾಕ್ರಮ
[ಬದಲಾಯಿಸಿ]ಕುರಿಗಳಿಗೆ ಕಾರ್ಬನ್ ಟೆಟ್ರಕ್ಲೋರೈಡನ್ನು ಜಿಲಾಟಿನ್ ಕೋಶದಲ್ಲಿ ತುಂಬಿಕೊಡುವುದು ಅತ್ಯುತ್ತಮವಾದ ಚಿಕಿತ್ಸಾ ಕ್ರಮ.[೨] ಕಾರಲು ಹುಳುವಿನ ಜಾಡ್ಯ ಒಂದು ಮಂದೆಯಲ್ಲಿನ ಕೆಲವು ಕುರಿಗಳಲ್ಲಿ ಇರುವ ಲಕ್ಷಣಗಳು ಕಂಡರೆ ಉಳಿದ ಕುರಿಗಳಲ್ಲೂ ಇದು ಗುಪ್ತವಾಗಿರುವ ಸೂಚಕವಾದುದರಿಂದ ಎಲ್ಲ ಕುರಿಗಳಿಗೂ ಚಿಕಿತ್ಸೆಯನ್ನು ಕೈಗೊಳ್ಳುವುದು ಸೂಕ್ತವಾದ ಕ್ರಮ. ಕೇವಲ ಪ್ರೌಢಾವಸ್ಥೆಯ ಕಾರಲು ಹುಳುಗಳು ಮಾತ್ರವೇ ಈ ಔಷಧಪ್ರಯೋಗದಿಂದ ನಾಶಗೊಳ್ಳುವುದರಿಂದ ಚಿಕಿತ್ಸೆಯನ್ನು ಒಂದು ತಿಂಗಳ ಅನಂತರ ಮತ್ತೊಮ್ಮೆ ಮಾಡಬೇಕು.
ದನಗಳಿಗೆ ಕಾರ್ಬನ್ ಟೆಟ್ರಕ್ಲೋರೈಡ್ ಪ್ರಯೋಗ ಸುರಕ್ಷಿತವಲ್ಲ. ಹೆಕ್ಸಕ್ಲೋರೆಥೇನ್ ಎಂಬ ಮದ್ದನ್ನು ದೇಹದ ತೂಕದ 100 ಪೌಂ.ಗೆ 10 ಗ್ರಾಂನಂತೆ ಒಟ್ಟು ಪ್ರಮಾಣ 60 ಗ್ರಾಂಗೆ ಮೀರದಂತೆ ನೀರಿನೊಂದಿಗೆ ಬೆರೆಸಿ ಒಮ್ಮೆ ಕುಡಿಸುವುದು ಸಾಧಾರಣವಾದ ಕ್ರಮ. ಒಟ್ಟು ಮಂದೆಯನ್ನೆಲ್ಲ ಚಿಕಿತ್ಸೆಗೆ ಒಳಪಡಿಸುವ ಮುನ್ನ 2-3 ದಿನಗಳ ಮೇಲೆ (ಮುಖ್ಯವಾಗಿ ಔಷಧಿಯನ್ನು ತಡೆದುಕೊಳ್ಳುವ ಶಕ್ತಿ ಅತ್ಯಂತ ಕಡಿಮೆಯಾಗುಳ್ಳ ದನಗಳ ಮೇಲೆ) ಪ್ರಯೋಗ ನಡೆಸುವುದು ಒಳ್ಳೆಯದು.
ಹತೋಟಿ ಕ್ರಮ
[ಬದಲಾಯಿಸಿ]ಕುರಿ, ಕರುಗಳು ಮತ್ತು ಒಂದು ವರ್ಷ ಪ್ರಾಯದ ದನಗಳನ್ನು ನೀರಿನ ಅಂಚುಗಳಲ್ಲಿ ಅಥವಾ ಯಾವಾಗಲೂ ಜೌಗಾಗಿರುವ ಹುಲ್ಲುಗಾವಲುಗಳಲ್ಲಿ ಮೇಯಲು ಬಿಡಬಾರದು. ನಿಂತಿರುವ ನೀರನ್ನು ಹರಿದು ಹೋಗುವಂತೆ ಮಾಡುವುದು, ನೀರಿನ ಹಳ್ಳ, ಹೊಂಡಗಳನ್ನು ಶುದ್ಧೀಕರಣ ಮಾಡುವುದು ಮತ್ತು ಕಾವಲುಗಳಿಗೆ ಮೈಲುತುತ್ತನ್ನು ಉಪಯೋಗಿಸುವುದು ಮುಂತಾದ ಕ್ರಮಗಳ ಮೂಲಕ ಬಸವನ ಹುಳುಗಳನ್ನು ನಿರ್ಮೂಲ ಮಾಡಲು ಯತ್ನಿಸಬೇಕು ಎಕರೆಯೊಂದಕ್ಕೆ 28 ಪೌಂಡುಗಳಂತೆ ಒಂದು ಭಾಗ ಮೈಲುತುತ್ತನ್ನು 4 ಭಾಗ ಮರಳಿನೊಂದಿಗೆ ಬೆರೆಸಿದ ಮಿಶ್ರಣವನ್ನು ಕೈಯಿಂದ ಎರಚುವುದು ಬಸವನ ಹುಳುವಿನ ನಿವಾರಣೆಗೆ ಉತ್ತಮ ಮಾರ್ಗ.