ವಿಷಯಕ್ಕೆ ಹೋಗು

ಕಾನೂನುಗಳ ಅಸಾಂಗತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿವಿಧ ಸ್ಥಳೀಯ ಸಂಸ್ಥೆಗಳ ರಾಜ್ಯ ರಾಷ್ಟ್ರಗಳ ಅಥವಾ ವಿವಿಧ ವರ್ಗ ಮತ ಪಂಗಡಗಳ ವಿಭಿನ್ನ ಕಾನೂನುಗಳು ಜಾರಿಯಲ್ಲಿರುವುದರ ಫಲವಾಗಿ ಒಬ್ಬ ವ್ಯಕ್ತಿಯ ಹಕ್ಕುಗಳಿಗೆ ಸಂಬಂಧಿಸಿದಂತೆ ಅನ್ವಯಿಸಿ ಬಹುದಾದ ಮತ್ತು ಪರಸ್ಪರ ವಿರುದ್ಧವಾದ ಎರಡು ಅಥವಾ ಹೆಚ್ಚು ನ್ಯಾಯಾಧಿಕಾರಗಳು ಇದ್ದ ಪಕ್ಷದಲ್ಲಿ ಉದ್ಭವಿಸುವ ಸಂದಿಗ್ಧ (ಕಾನ್‍ಫ್ಲಿಕ್ಟ್ ಆಫ್ ಲಾಸ್). ಇಂಥ ಅಸಾಂಗತ್ಯ ಇರುವಂಥ ಮೊಕದ್ದಮೆಗಳಲ್ಲಿ ಅನ್ವಯಿಸಿಬೇಕಾದ ಸೂಕ್ತ ಕಾನೂನು, ಆ ಕಾನೂನಿನ ಅಧಿಕಾರವ್ಯಾಪ್ತಿ, ವಿಚಾರಣೆ ನಡೆಸಲು ಅಧಿಕಾರವುಳ್ಳ ನ್ಯಾಯಾಲಯ ಮುಂತಾದವನ್ನು ನಿರ್ಧರಿಸುವ ಕಾನೂನನ್ನೂ ಇದೇ ಹೆಸರಿನಿಂದ ಕರೆಯುವುದು ವಾಡಿಕೆ. ಅದನ್ನು ಕಾನೂನುಗಳ ಅಸಾಂಗತ್ಯದ ಕಾನೂನು (ಲಾ ಆಫ್ ಕಾನ್‍ಫ್ಲಿಕ್ಟ್ ಆಫ್ ಲಾಸ್) ಎಂದೂ ಕರೆಯುವುದುಂಟು.

ಲಿಖಿತ-ಅಲಿಖಿತ ಕಾನೂನು[ಬದಲಾಯಿಸಿ]

ವಿಶ್ವದಲ್ಲಿ ಇಂದು ಅನೇಕ ರಾಷ್ಟ್ರಗಳಿವೆ. ಇವುಗಳಲ್ಲಿ ಒಂದೊಂದಕ್ಕೂ ತನ್ನದೇ ಆದ ಲಿಖಿತ-ಅಲಿಖಿತ ಕಾನೂನುಗಳಿವೆ, ನ್ಯಾಯಾಲಯಗಳಿವೆ. ಇವಕ್ಕೆಲ್ಲ ಮೇಲೆ ವಿಶ್ವಸರ್ಕಾರ ಯಾವುದೂ ಇಲ್ಲ. ಎಲ್ಲ ರಾಷ್ಟ್ರಗಳಿಗೂ ಸಮಾನವಾಗಿ ಕಡ್ಡಾಯವಾಗಿ ಅನ್ವಯಿಸುವಂಥ ಕಾನೂನುಗಳಿರಲಾರವು. ಆದ್ದರಿಂದ ಒಂದಕ್ಕಿಂತ ಹೆಚ್ಚು ರಾಷ್ಟ್ರಗಳಿಗೆ ಸಂಬಂಧಿಸಿದ ಯಾವುದಾದರೂ ವ್ಯಾಜ್ಯ ಬಂದಾಗ ಅದಕ್ಕೆ ಕಕ್ಷಿಗಳಾದವರಿಗೆ ಯಾವ ರಾಷ್ಟ್ರದ ಕಾನೂನು ಅನ್ವಯವಾಗಬೇಕು-ಎಂಬುದನ್ನು ನಿರ್ಣಯಿಸಬೇಕಾಗುತ್ತದೆ. ಇಂಥ ಸಂಧರ್ಭಗಳಲ್ಲಿ ಅನುಸರಿಬೇಕಾದ ನ್ಯಾಯದ ವಿವೇಚನೆಯನ್ನು ಐರೋಪ್ಯ ರಾಷ್ಟ್ರಗಳಲ್ಲಿ ಖಾಸಗಿ ಅಂತರ ರಾಷ್ಟ್ರೀಯ ಕಾನೂನು (ಪ್ರೈವೇಟ್ ಇಂಟರ್ ನ್ಯಾಷನಲ್ ಲಾ) ಎಂದು ಕರೆಯುವುದು ವಾಡಿಕೆಯಾಗಿದೆ. ಕಾನೂನುಗಳ ಅಸಾಂಗತ್ಯವೆಂಬುದಕ್ಕೆ ಪರ್ಯಾಯವಾಗಿ ಇದು ಅಲ್ಲಿ ಬಳಕೆಯಲ್ಲುಂಟು.ಹಲವಾರು ರಾಜ್ಯಗಳನ್ನೊಳಗೊಂಡ-ಸಂಯುಕ್ತ ಮಾದರಿಯ-ರಾಷ್ಟ್ರಗಳಲ್ಲೂ ವಿಭಿನ್ನ ಕಾನೂನುಗಳು ಇರುತ್ತವೆ. ಭಾರತ, ಕೆನಡ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನ ಉದಾಹರಣೆಗಳು. ಒಂದು ರಾಜ್ಯದಲ್ಲಿರುವ ಕಾನೂನುಗಳಿಗಿಂತ ಭಿನ್ನವಾದ ಕಾನೂನುಗಳು ಇನ್ನೊಂದು ರಾಜ್ಯದಲ್ಲಿರಬಹುದು. ಒಂದೇ ದೇಶದ ಎರಡು ರಾಜ್ಯಗಳಲ್ಲಿರುವ ಪ್ರಜೆಗಳ ನಡುವೆ ವಿವಾದ ಉದ್ಬವಿಸಿದಾಗ ಆ ವಿವಾದಕ್ಕೆ ಸಂಬಂಧಿಸಿದಂತೆ ಆ ಎರಡು ರಾಜ್ಯಗಳಲ್ಲಿ ಬೇರೆ ಬೇರೆ ಕಾನೂನುಗಳಿದ್ದರೆ ಆಗ ಅದು ಯಾವ ನ್ಯಾಯಾಲಯದ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿದ್ದು ಎಂಬುದೂ ಯಾವ ಕಾನೂನಿನ ಪ್ರಕಾರ ತೀರ್ಪು ನೀಡಬೇಕು ಎಂಬುದೂ ಜಿಜ್ಞಾಸೆಗೆ ಒಳಪಡುವುದು ಸಹಜ. ಸಂಯುಕ್ತ ಮಾದರಿಯದಲ್ಲದ-ಏಕಾತ್ಮಕವಾದ (ಯೂನಿಟರಿ) ರಾಜ್ಯ ವ್ಯವಸ್ಥೆಯಲ್ಲೂ ಒಂದೊಂದು ಪ್ರದೇಶದಲ್ಲಿ ಒಂದೊಂದು ಬಗೆಯ ಕಾನೂನುಗಳಿರುವುದು ಸಾಧ್ಯ. ಬ್ರಿಟನಿನಲ್ಲಿ ಇಂಗ್ಲೆಂಡ್, ಸ್ಕಾಟ್ಲೆಂಡ್, ಉತ್ತರ ಐರ್ಲೆಂಡ್ ಮುಂತಾದವುಗಳಲ್ಲಿ ವಿಭಿನ್ನ ಕಾನೂನುಗಳಿರುವುದನ್ನು ಕಾಣಬಹುದು.[೧]

ದೇಶದ ಕಾನೂನು[ಬದಲಾಯಿಸಿ]

ಒಂದು ದೇಶಕ್ಕೆ ವಸಾಹತುಗಳಿದ್ದ ಪಕ್ಷದಲ್ಲಿ ಅವುಗಳ ಕಾನೂನುಗಳೂ ಆಳುವ ದೇಶದ ಕಾನೂನುಗಳೂ ಸಾಮಾನ್ಯವಾಗಿ ಒಂದೇ ರೀತಿಯವಾಗಿರುವುದಿಲ್ಲ. ಆಳುವ, ಆಳಿಸಿಕೊಳ್ಳುವ ದೇಶಗಳ ವ್ಯಕ್ತಿಗಳ ನಡುವಣ ವ್ಯವಹಾರಗಳಲ್ಲಿ ಉದ್ಭವಿಸುವ ವ್ಯಾಜ್ಯಗಳಲ್ಲಿ ಯಾವ ಕಾನೂನಿನನ್ವಯ ತೀರ್ಪು ನೀಡಬೇಕೆಂಬ ಬಗ್ಗೆ ಇತ್ಯರ್ಥ ಮಾಡಲು ಸೂಕ್ತ ತೋರುಗಂಬಗಳು ಇರುವುದು ಅವಶ್ಯವಾಗಬಹುದು.

ದೇಶದ ವಿಭಜನೆ[ಬದಲಾಯಿಸಿ]

ಒಂದೇ ದೇಶ ವಿಭಜನೆಗೊಂಡಾಗಲೂ ಪ್ರತ್ಯೇಕವಾದ ನ್ಯಾಯವ್ಯವಸ್ಥೆಗಳು ಕ್ರಮೇಣ ಬೆಳೆಯುತ್ತವೆ. ಪೂರ್ವ-ಪಶ್ಚಿಮ ಜರ್ಮನಿಗಳು, ಉತ್ತರ ದಕ್ಷಿಣ ಕೊರಿಯ ಮತ್ತು ವಿಯೆಟ್ನಾಂಗಳು, ಭಾರತ-ಪಾಕಿಸ್ತಾನ-ಇವು ಉದಾಹರಣೆಗಳು. ಹಲವು ವಿಭಾಗಗಳನ್ನು ಸೇರಿಸಿ ಒಂದು ದೇಶವನ್ನು ಸ್ಥಾಪಸಿದಾಗ, ಒಂದು ದೇಶಕ್ಕೆ ಇನ್ನೊಂದು ವಿಭಾಗವನ್ನು ಸೇರಿಸಿದಾಗ ಆ ವಿಭಾಗಗಳಲ್ಲಿ ಏಕಕಾಲದಲ್ಲಿ ಕಾನೂನುಗಳು ಏಕೀಭವಿಸುವುದು ಸಾಧ್ಯವಿಲ್ಲ. ಅದು ಸಾಧಿಸುವ ವರೆಗೂ ಆ ವಿಭಾಗಗಳಿಗೆ ಸಂಬಂಧಿಸಿದಂತೆ ನ್ಯಾಯವಿತರಣೆ ಮಾಡುವಾಗ ತೊಡಕುಗಳು ಉದ್ಭವಿಸುವುದು ಸಹಜ. ಜರ್ಮನಿಗೆ ಸೇರಿದ್ದ ಆಲ್ಸೇಸ್-ಲೊರೇನನ್ನು 1920ರಲ್ಲಿ ಫ್ರಾನ್ಸಿಗೆ ಸೇರಿಸಿದಾಗ ಅಲ್ಲಿ ಕೆಲಕಾಲ ಜರ್ಮನ್ ಕಾನೂನುಗಳೇ ಜಾರಿಯಲ್ಲಿದ್ದುವು. ಹಲವು ಐರೋಪ್ಯ ರಾಷ್ಟ್ರಗಳಿಗೆ ಸೇರಿದ ಭಾಗಗಳನ್ನು ಒಂದುಗೂಡಿಸಿ ಸ್ಥಾಪಿಸಲಾಗಿದ್ದ ಪೋಲೆಂಡಿನಲ್ಲಿ ಏಕರೀತಿಯಾದ ನ್ಯಾಯವ್ಯವಸ್ಥೆಯನ್ನು ಸಾಧಿಸಲು ಹಲವು ವರ್ಷಗಳೇ ಬೇಕಾದವು.

ಕುಲಧರ್ಮ ಭಿನ್ನತೆ[ಬದಲಾಯಿಸಿ]

ಒಂದು ದೇಶದಲ್ಲಿ ವಾಸಿಸುವ ಪ್ರಜೆಗಳ ಕುಲಧರ್ಮ ಭಿನ್ನತೆಗಳಿಂದಾಗಿಯೂ ಕಾನೂನುಗಳಲ್ಲಿ ಅಸಾಂಗತ್ಯ ಏರ್ಪಡಬಹುದು. ಆಸ್ತಿಯ ಹಕ್ಕುಗಳಿಗೆ ಸಂಬಂಧಿಸಿದಂತೆ ಹಿಂದೂ, ಮುಸ್ಲಿಂ, ಪಾರ್ಸಿ ಮತ್ತು ಬೌದ್ಧರ ಕಾನೂನುಗಳು ಭಿನ್ನವಾದಂಥವು, ಹಿಂದೂಗಳಲ್ಲೇ ಮಿತಾಕ್ಷರ ಮತ್ತು ದಾಯಭಾಗ ಪದ್ಧತಿಗಳು ಪರಸ್ಪರ ಭಿನ್ನವಾಗಿವೆ. ಲೆಬನನ್ ಮತ್ತು ಇಸ್ರೇಲ್‍ಗಳಲ್ಲಿ ಮುಸ್ಲಿಂ ಮತ್ತು ಯೆಹೂದ್ಯರ ಮತ್ತು ವಿವಿಧ ಕ್ರೈಸ್ತರ ನ್ಯಾಯಗಳು ಏಕರೀತಿಯಾಗಿಲ್ಲ. ಕೆನಡ, ಅಮೆರಿಕ ಮುಂತಾದ ದೇಶಗಳಲ್ಲಿ ಐರೋಪ್ಯರು ವಲಸೆ ಹೋಗುವ ಮುನ್ನ ಇದ್ದ ಮೂಲವಾಸಿಗಳಿಗೆ ಅವರವರವೇ ಆದ ಗುಂಪುಗಳ ಕಾನೂನುಗಳಿವೆ.ವಿಶ್ವಾದ್ಯಂತ ಏಕರೀತಿಯ ನಾಗರಿಕತೆಯೂ ಜೀವನ ವಿಧಾನಗಳೂ ಹಬ್ಬತ್ತಿರುವ ಈ ಯುಗದಲ್ಲಿ ಅನೇಕ ಆಧುನಿಕ ರಾಷ್ಟ್ರಗಳ ಕಾನೂನುಗಳು ಹಲವಾರು ಸಮಾನ ಲಕ್ಷಣಗಳನ್ನೇ ತಳೆಯುತ್ತಿವೆ. ಆದರೂ ಆಯಾ ರಾಷ್ಟ್ರಗಳಲ್ಲಿಯ ಜನಜೀವನ ವಿಕಾಸದ ಪರಿಣಾಮವಾಗಿ ಅವವಕ್ಕೇ ಸರಿಯೆನಿಸಿದ ಕೆಲವು ವೈಶಿಷ್ಟ್ಯಗಳೂ ಉಂಟು. ಸ್ವಂತ ಹಕ್ಕಿಗೆ ಸಂಬಂಧಿಸಿದಂತೆ ಎರಡು ರಾಷ್ಟ್ರಗಳ ವ್ಯಕ್ತಿಗಳ ಅಥವಾ ಕಕ್ಷಿಗಳ ನಡುವೆ ವ್ಯಾಜ್ಯ ಸಂಭವಿಸಿದಾಗ ಇಂಥ ವೈಶಿಷ್ಟ್ಯಗಳಿಂದಾಗಿ ನ್ಯಾಯವಿತರಣೆ ಕ್ಲಿಷ್ಟವೆನಿಸಬಹುದು. ಆಯಾ ಸನ್ನಿವೇಶಗಳಿಗೆ ತಕ್ಕಂತೆ ಅನುಸರಿಸಬೇಕಾದ ಸೂಕ್ತ ಕಾನೂನು ಯಾವುದೆಂಬುದರ ನಿರ್ಧಾರವೇ ಕಾನೂನುಗಳ ಅಸಾಂಗತ್ಯದ ಕಾನೂನಿನ ಉದ್ದೇಶ. ಪ್ರತಿ ಒಂದು ವಿಶಿಷ್ಟ ಸಂದರ್ಭದಲ್ಲಿ ಯಾವ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯೆಷ್ಟು, ಯಾವ ಪಂಗಡದ ಅಥವಾ ಕುಲದ, ಮತದ ಅಥವಾ ರಾಜ್ಯಗಳ ಕಾನೂನುಗಳು ಎಷ್ಟರಮಟ್ಟಿಗೆ ಅನ್ವಯಾರ್ಹ-ಎಂಬುದನ್ನೆಲ್ಲ ವಿಚಾರಿಸುವುದೂ ಅವಶ್ಯ. ಹೀಗೆ, ಅಧಿಕಾರ ವ್ಯಾಪ್ತಿ, ಅನ್ಯದೇಶಗಳಲ್ಲಿ ನೀಡಲಾದ ನ್ಯಾಯ ನಿರ್ಣಯದ ಅನ್ವಯದ ಇತಿಮಿತಿ, ಅನುಸರಿಸಬೇಕಾದ ಕಾನೂನಿನ ಆಯ್ಕೆ-ಇವು ಮುಖ್ಯವಾಗಿ ಪರಿಗಣಿಸಬೇಕಾದ ಅಂಶಗಳು.

ಅಸಾಂಗತ್ಯಗಳ ಸ್ವರೂಪ[ಬದಲಾಯಿಸಿ]

ವ್ಯಕ್ತಿಹಕ್ಕುಗಳಿಗೆ ಸಂಬಂಧಿಸಿದಂತೆ ಉದ್ಭವಿಸುವ ಅಸಾಂಗತ್ಯಗಳ ಸ್ವರೂಪವನ್ನು ವಿವರಿಸಲು ಕೆಲವು ರಾಜ್ಯಗಳನ್ನು ಉದಾಹರಣೆಯಾಗಿ ಕೊಡಬಹುದು. 1865ರಲ್ಲಿ ಲಂಡನಿನ ಪ್ರಿವಿ ಕೌನ್ಸಿಲ್ ಮುಂದೆ ಬಂದ ಒಂದು ವ್ಯಾಜ್ಯ ಇಂಗ್ಲೆಂಡ್, ಈಜಿಪ್ಟ್, ಮತ್ತು ಮಾರಿಷಸ್-ಈ ಮೂರು ದೇಶಗಳ ಕಾನೂನುಗಳ ವಿಭಿನ್ನತೆಗೆ ಸಂಬಂಧಿಸಿದ್ದು. ಒಬ್ಬಾತ ಮಾರಿಷಸಿನಲ್ಲಿದ್ದ ತನ್ನ ಸರಕನ್ನು ಇಂಗ್ಲೆಂಡಿಗೆ ಸಾಗಿಸಬೇಕೆಂದು ಸೌತಾಂಪ್ಟನಿನಲ್ಲಿ ನೌಕಾಸಾರಿಗೆ ಕಂಪನಿಗೆ ಹಣ ಕೊಟ್ಟ. ಆ ಕರಾರಿನಂತೆ ಹಡಗು ಆತನ ಸರಕನ್ನು ಭರಾಯಿಸಿಕೊಂಡು ಇಂಗ್ಲೆಂಡಿನ ಕಡೆಗೆ ಯಾನ ಮಾಡುತ್ತಿದ್ದಾಗ ಈಜಿಪ್ಟಿನಲ್ಲಿ ಅದು ಕಳೆದುಹೋಯಿತು. ಮಾರ್ಗಮಧ್ಯದಲ್ಲಿ ಸರಕು ಕಳೆದುಹೋದರೆ ಅದಕ್ಕೆ ಸಾರಿಗೆ ಕಂಪನಿ ಹೊಣೆಯಲ್ಲವೆಂಬುದು ಇಂಗ್ಲೆಂಡಿನ ಕಾನೂನು. ಆ ನಷ್ಟಕ್ಕೆ ಸಾರಿಗೆ ಕಂಪನಿ ಹೊಣೆಯೆಂಬುದು ಮಾರಿಷಸಿನ ಕಾನೂನಿನ ವಿಧಿ. ಸಾರಿಗೆ ಕಂಪನಿಯಿಂದ ಸರಕಿನ ಮಾಲೀಕ ಪರಿಹಾರ ಪಡೆಯಬಹುದೆಂದು ಒಂದು ಕಾನೂನು ಹೇಳಿದರೆ ಅದು ಸಾಧ್ಯವಿಲ್ಲವೆಂದು ಇನ್ನೊಂದು ಹೇಳುತ್ತದೆ. ಇದು ಆ ವ್ಯಾಜ್ಯ ಸಂಬಂಧವಾಗಿ ಉದ್ಭವಿಸಿದ್ದ ಅಸಾಂಗತ್ಯ. ಇನ್ನೊಂದು ಉದಾಹರಣೆ ಬರ್ಮ ದೇಶದಲ್ಲಿ ನೆಲಸಿದ್ದ ಇಬ್ಬರು ಭಾರತೀಯರ ನಡುವಣ ವ್ಯಾಜ್ಯಕ್ಕೆ ಸಂಬಂಧಿಸಿದ್ದು. ಅವರಲ್ಲಿ ಒಬ್ಬ ಇನ್ನೊಬ್ಬನಿಂದ 1941ಕ್ಕಿಂತ ಮೊದಲು ಸಾಲ ತೆಗೆದುಕೊಂಡಿದ್ದ. ಅನಂತರ ಅವರಿಬ್ಬರೂ ಭಾರತಕ್ಕೆ ವಾಪಸಾಗಿ ಅಲ್ಲೇ ನೆಲಸಿದರು. ತನಗೆ ಬರಬೇಕಾಗಿದ್ದ ಹಣಕ್ಕಾಗಿ ಸಾಲಿಗ ಭಾರತದ ನ್ಯಾಯಾಲಯದಲ್ಲಿ ದಾವ ಹೂಡಿದ. 1941 ರಿಂದ 1947ರ ವರೆಗೆ ಸಾಲದ ಮೇಲೆ ಬೆಳೆದಿದ್ದ ಬಡ್ಡಿಯನ್ನು ವಜಾ ಮಾಡುವ ಕಾಯಿದೆಯೊಂದನ್ನು ಬರ್ಮದ ಸರ್ಕಾರ ಜಾರಿಗೆ ತಂದಿದ್ದುದರಿಂದ ಆ ಕಾಲಕ್ಕೆ ಬಡ್ಡಿ ಕೊಡಬೇಕಾಗಿಲ್ಲವೆಂಬುದು ಋಣಿಯವಾದವಾಗಿತ್ತು. ಆದರೆ ಭಾರತದ ಕಾನೂನಿನಲ್ಲಿ ಅಂಥ ಯಾವ ವಿಧಿಯೂ ಇರಲಿಲ್ಲ. ಇಲ್ಲಿ ವಾದಗ್ರಸ್ತವಾಗಿದ್ದ ಮುಖ್ಯ ಅಂಶವೆಂದರೆ ಈ ವ್ಯಾಜ್ಯದ ಇತ್ಯರ್ಥಕ್ಕೆ ಅನ್ವಯಿಸಬೇಕಾಗಿದ್ದ ಕಾನೂನು. ವ್ಯವಹಾರ ನಡೆದಿದ್ದದ್ದು ಬರ್ಮದಲ್ಲಿ ; ಕಕ್ಷಿಗಳು ಅಲ್ಲಿದ್ದಾಗ. ಆದರೆ ಅವರು ಭಾರತೀಯ ಪ್ರಜೆಗಳು. ವ್ಯಾಜ್ಯ ನಡೆದಾಗ ಅವರು ವಾಸವಾಗಿದ್ದದ್ದು ಭಾರತದಲ್ಲಿ. ಈ ವಿವಾದವನ್ನು ವಿಚಾರಿಸಿದ ಮದ್ರಾಸಿನ ಉಚ್ಚ ನ್ಯಾಯಾಲಯ ಇದಕ್ಕೆ ಭಾರತದ ಕಾನೂನೇ ಅನ್ವಯವಾಗುವುದೆಂದು ತೀರ್ಮಾನಿಸಿ ಅದರಂತೆ ತೀರ್ಪು ನೀಡಿತು (1954).

ರೋಮನ್ ಕೆಥೊಲಿಕ್ ಕ್ರೈಸ್ತ[ಬದಲಾಯಿಸಿ]

ಅಸಾಂಗತ್ಯದ ಮತ್ತೊಂದು ಉದಾಹರಣೆ ಭಿನ್ನಮತೀಯರಿಗೆ ಅನ್ವಯಿಸುವ ಕಾನೂನಿಗೆ ಸಂಬಂಧಿಸಿದ್ದು. ಮೊದಲು ಹಿಂದೂ ಆಗಿದ್ದು ರೋಮನ್ ಕೆಥೊಲಿಕ್ ಕ್ರೈಸ್ತನಾಗಿ ಮತಾಂತರ ಹೊಂದಿದ್ದವನೊಬ್ಬನ ಇಬ್ಬರು ಮಕ್ಕಳು ನಡೆಸುತ್ತಿದ್ದ ಪಾಲುದಾರಿಕೆಯನ್ನು ಅಣ್ಣನ ಮರಣಾನಂತರ ತಮ್ಮನೇ ಸ್ವಲ್ಪಕಾಲ ಮುಂದುವರಿಸಿಕೊಂಡು ಹೋಗುತ್ತಿದ್ದು, ಕೊನೆಗೆ ತಮಗೆ ಹಿಂದೂ ಅವಿಭಕ್ತ ಕುಟುಂಬದ ಕಾನೂನು ಅನ್ವಯವಾಗತಕ್ಕದ್ದೆಂದೂ ಅದಕ್ಕೆ ತಾನೇ ಯಜಮಾನ ಅಥವಾ ಕರ್ತನೆಂದು ಮಿತಾಕ್ಷರ ನ್ಯಾಯದ ಪ್ರಕಾರ ಅತ್ತಿಗೆಗೆ ಆಸ್ತಿಯಲ್ಲಿ ಹಕ್ಕಿಲ್ಲವೆಂದೂ ವಾದಿಸಿದ. ವ್ಯಾಜ್ಯ ಪ್ರಿವಿಕೌನ್ಸಿಲ್ ವರೆಗೂ ಹೋಯಿತು. ಕ್ರೈಸ್ತನಾಗಿ ಮತಾಂತರ ಹೊಂದಿದ ಹಿಂದೂ ಇಚ್ಛೆಪಟ್ಟಲ್ಲಿ ಹಿಂದೂ ಕಾನೂನನ್ನೇ ಅನ್ವಯಿಸಿಕೊಳ್ಳಬಹುದು-ಎಂಬುದಾಗಿ ಅದು ಅಭಿಪ್ರಾಯಪಟ್ಟಿತಾದರೂ ಈ ವ್ಯಾಜ್ಯದಲ್ಲಿ ಕ್ರೈಸ್ತರಿಗೆ ಅನ್ವಯವಾಗುವ ಕಾಯಿದೆಯನ್ನೇ ಅನ್ವಯಿಸಬೇಕೆಂದು ಅದರ ತೀರ್ಪಾಗಿತ್ತು.ಮೇಲೆ ಕೊಟ್ಟಿರುವ ಉದಾಹರಣೆಗಳಲ್ಲಿ ಮೊದಲನೆಯದರಲ್ಲಿ ಒಪ್ಪಂದ ಆದದ್ದು ಒಂದು ಕಡೆ ಮತ್ತು ಸರಕು ನಷ್ಟವಾದದ್ದು ಇನ್ನೊಂದು ಕಡೆಯಾದರೂ ವ್ಯಾಜ್ಯಕ್ಕೆ ಕಾರಣ ಎಲ್ಲಿ ಉಂಟಾಯಿತು ಎಂಬುದನ್ನು ಅವಲಂಬಿಸಿ ಅಲ್ಲಿಯ ಕಾನೂನನ್ನು ಅನ್ವಯಿಸಬೇಕಾಯಿತು. ಎರಡನೆಯ ವ್ಯಾಜ್ಯದ ಕಕ್ಷಿಗಳು ಒಪ್ಪಂದ ಮಾಡಿಕೊಂಡಾಗ ಬರ್ಮದಲ್ಲಿ ನೆಲೆಸಿದ್ದರೂ ವ್ಯಾಜ್ಯ ದಾಖಲು ಮಾಡಿದಾಗ ಭಾರತದಲ್ಲಿ ನೆಲೆಸಿದ್ದರಿಂದ ಅವರಿಗೆ ಭಾರತದ ಕಾನೂನನ್ನೇ ಅನ್ವಯಿಸಬೇಕೆಂದು ಇತ್ಯರ್ಥವಾಯಿತು.

ಅಸಾಂಗತ್ಯದ ಇತ್ಯರ್ಥ ಸೂತ್ರಗಳು[ಬದಲಾಯಿಸಿ]

ಕಾನೂನುಗಳ ಅಸಾಂಗತ್ಯ ಸಂಭವಿಸಿದಾಗ ನ್ಯಾಯಾಲಯ ಎರಡು ಮುಖ್ಯ ವಿಷಯಗಳನ್ನು ಗಮನಿಸಬೇಕು. ಒಂದನೆಯದು: ಈ ನ್ಯಾಯವನ್ನು ತೀರ್ಮಾನ ಮಾಡುವ ಅಧಿಕಾರ ನ್ಯಾಯಾಲಯಕ್ಕೆ ಇದೆಯೆ? ಇದ್ದರೆ, ಎರಡನೆಯದು: ಯಾವ ಕಾನೂನನ್ನು ಅನ್ವಯಿಸಿ ಈ ವ್ಯಾಜ್ಯವನ್ನು ಇತ್ಯರ್ಥಪಡಿಸಬೇಕು. ಮೊದಲು ನ್ಯಾಯಾಲಯ ಈ ಎರಡು ಪ್ರಶ್ನೆಗಳನ್ನು ರೂಪಿಸಿ, ಅವುಗಳಿಗೆ ಉತ್ತರ ಕೊಟ್ಟು ಮುಂದುವರಿಯಬೇಕು. ವ್ಯಾಜ್ಯಕಾರಣ ತನ್ನಹದ್ದಿನಲ್ಲಿ ಉಂಟಾಗಿದ್ದರೆ. ನಿಸ್ಸಂದೇಹವಾಗಿ ಆ ನ್ಯಾಯಾಲಯಕ್ಕೆ ವ್ಯಾಜ್ಯವಿಚಾರಣೆ ಮಾಡುವ ಅಧಿಕಾರವಿದೆ. ಹಾಗಾದರೆ ಯಾವ ಶಾಸನಕ್ಕೆ ಅನುಸಾರವಾಗಿ ಪರಿಹಾರ ನೀಡಬೇಕು ? ಒಂದು ದೇಶದ ನ್ಯಾಯಾಲಯಗಳು ಆ ದೇಶದ ಕಾನೂನನ್ನೇ ಅನ್ವಯಿಸಬೇಕು. ಇದು ಮೂಲಭೂತ ತತ್ತ್ವ. ಆದರೂ ಕೆಲವೊಂದು ಸಂದರ್ಭಗಳಲ್ಲಿ ಅನ್ಯ ದೇಶದಲ್ಲಿಯ ಕಾನೂನನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಡಿಕೊಂಡ ಒಪ್ಪಂದವನ್ನು ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ಅದರ ಬಗ್ಗೆ ತನ್ನ ದೇಶದ ಕಾನೂನಿನ ಪ್ರಕಾರ ತೀರ್ಪು ನೀಡುವುದೂ ಕಕ್ಷಿ ಪ್ರತಿಕಕ್ಷಿಗಳನ್ನು ಅವರು ನಿರೀಕ್ಷಿಸಿದಿದ್ದ ಬಾಧ್ಯತೆಗಳಿಂದ ಬಂಧಿಸುವುದೂ ಅನ್ಯಾಯವಾಗುತ್ತದೆ. ಕಾನೂನುಗಳ ಅಸಾಂಗತ್ಯ ತಲೆ ದೋರಿದ ಸಂದರ್ಭಗಳಲ್ಲಿ ಅನುಸರಿಸಲಾಗುವ ಸೂತ್ರಗಳನ್ನು ಸ್ಥೂಲವಾಗಿ ಹೀಗೆ ಹೇಳಬಹುದು: ವಿವಾಹ ಸಂಬಂಧವಾದ ವ್ಯಾಜ್ಯಗಳನ್ನು ಆ ಪ್ರಜೆಗಳು ಯಾವ ಕಾನೂನಿಗೆ ಬದ್ಧರೋ ಆ ಕಾನೂನಿಗೆ ಅನುಸಾರವಾಗಿಯೇ ಸಾಮಾನ್ಯವಾಗಿ ಇತ್ಯರ್ಥಪಡಿಸಬೇಕು. ಭೂಮಿ ಮುಂತಾದ ಸ್ಥಿರ ಸ್ವತ್ತಿಗೆ ಸಂಬಂಧಿಸಿದ ವ್ಯಾಜ್ಯವಾದರೆ. ಆ ಸ್ವತ್ತು ಇರುವೆಡೆ ಯಾವ ಕಾನೂನು ಜಾರಿಯಲ್ಲಿದೆಯೋ ಅದನ್ನೇ ಅನುಸರಿಸಬೇಕು. ಮೂರನೆಯದಾಗಿ, ಖಾಸಗಿ ತಕ್ಸೀರುಗಳ (ಟಾಟ್ರ್ಸ್) ವಿಚಾರಣೆಯಲ್ಲಿ ಸರ್ವಸಾಧಾರಣವಾಗಿ ಅಪಕೃತ್ಯ ಎಲ್ಲಿ ನಡೆಯತೋ ಆ ನೆಲದಕಾಯಿದೆಗಳನ್ನು ಅನ್ವಯಿಸಬೇಕು. ಇದನ್ನು ನಿರ್ಧರಿಸುವುದು ಕಷ್ಟ. ಯಾವುದೋ ದೇಶದಲ್ಲಿ ಕುಳಿತು, ಅಲ್ಲಿರುವ ಪ್ರಬಲ ರೇಡಿಯೋ ಕೇಂದ್ರದ ಮೂಲಕ ಮಾನಹಾನಿಕಾರಕ ಸಂಗತಿಗಳನ್ನು ಪ್ರಚಾರ ಮಾಡಿದರೆ, ಅದು ಎಲ್ಲೆಲ್ಲೂ ಕೇಳಿಬರುತ್ತದೆ. ಆಗ ಆ ಅಪಕೃತ್ಯ ಎಲ್ಲಿ ನಡೆಯಿತೆಂದು ಹೇಳುವುದು ಕಷ್ಟ. ನಾಲ್ಕನೆಯದಾಗಿ, ಒಪ್ಪಂದಗಳಿಗೆ ಸಂಬಂಧಿಸಿದಾಗ. ಒಪ್ಪಂದ ಮಾಡಿ ಕೊಂಡವರ ಉದ್ದೇಶಕ್ಕೆ ಅನುಗುಣವಾಗಿ, ಒಪ್ಪಂದ ಮಾಡಿಕೊಂಡ ಜಾಗದಲ್ಲಿ ಜಾರಿಯಲ್ಲಿರುವ ಅಥವಾ ಒಪ್ಪಂದವನ್ನು ಮುರಿದ ಜಾಗದಲ್ಲಿ ಜಾರಿಯಲ್ಲಿರುವ ಕಾನೂನಿನ ಪ್ರಕಾರ ವ್ಯಾಜ್ಯಗಳ ಇತ್ಯರ್ಥವಾಗಬೇಕು. ಒಪ್ಪಂದವನ್ನು ಎಲ್ಲಿಯೇ ಮಾಡಿಕೊಳ್ಳಲಿ, ಆ ಒಪ್ಪಂದವನ್ನು ಎಲ್ಲಿ ಈಡೇರಿಸಬೇಕೋ ಅಲ್ಲಿಯ ಕಾನೂನು ಅನ್ವಯಿಸಬೇಕೆಂದು ಕಕ್ಷಿಗಳು ಒಪ್ಪಂದ ಮಾಡಿಕೊಳ್ಳಬಹುದು. ಆಗ ನ್ಯಾಯಾಲಯ ಆ ಒಪ್ಪಂದವನ್ನು ಮಾನ್ಯ ಮಾಡಲೇಬೇಕು. ಹಾಗೆಯೇ ಒಪ್ಪಂದ ಮಾಡಿಕೊಳ್ಳುವಾಗ ಒಪ್ಪಂದಕ್ಕೆ ಸಂಬಂಧಿಸಿದ ವಸ್ತು ಎಲ್ಲಿದೆಯೋ ಆ ದೇಶದ ಕಾನೂನು ಅನ್ವಯಿಸಬೇಕಾಗುತ್ತದೆ. ಐದನೆಯದಾಗಿ, ಪರದೇಶದ ಕಾನೂನು ತಮ್ಮ ದೇಶದ ಕಾನೂನುಗಳಿಗೆ ವಿರುದ್ಧವಾಗಿಲ್ಲದಿದ್ದಲ್ಲಿ, ಭಂಗತರದಿದ್ದಲ್ಲಿ ಅಂಥ ಪರದೇಶದ ಕಾನೂನನ್ನು ಅನ್ವಯಿಸಿ ನ್ಯಾಯ ಇತ್ಯರ್ಥ ಮಾಡುವುದರಲ್ಲಿ ಯಾವ ಅನ್ಯಾಯವೂ ಇಲ್ಲ.ಇವು ಕೆಲವು ಸ್ಥೂಲ ಸೂತ್ರಗಳು ಮಾತ್ರ. ಸರ್ವಸಂದರ್ಭಗಳಿಗೂ ಅನ್ವಯಿಸುವ ಸೂತ್ರಗಳನ್ನು ರೂಪಿಸುವುದು ಸಾಧ್ಯವಿಲ್ಲ.

ಉಲ್ಲೇಖಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: