ವಿಷಯಕ್ಕೆ ಹೋಗು

ಕಾಡು ಬೆಳ್ಳುಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಡು ಬೆಳ್ಳುಳ್ಳಿ

ಲಿಲಿಯೇಸೀ ಕುಟುಂಬಕ್ಕೆ ಸೇರಿದ ಸಿಲ ಇಂಡಿಕ ಮತ್ತು ಅರ್ಜಿನಿಯ ಇಂಡಿಕ ಎಂಬ ಶಾಸ್ತ್ರನಾಮವುಳ್ಳ ಎರಡು ಪುಟ್ಟಗಿಡಗಳಿಗಿರುವ ಸಾಮಾನ್ಯ ಹೆಸರು. ಇವಕ್ಕೆ ಕಾಡು ಈರುಳ್ಳಿ, ನಾಯಿ ಉಳ್ಳಿ ಮುಂತಾದ ಹೆಸರುಗಳೂ ಇವೆ. ಇಂಗ್ಲಿಷಿನಲ್ಲಿ ಇಂಡಿಯನ್ ಸ್ಕ್ವಿಲ್ ಎಂದು ಕರೆಯಲಾಗುತ್ತದೆ.[] ಇವೆರಡೂ ಅನೇಕ ಲಕ್ಷಣಗಳಲ್ಲಿ ಸಮಾನವಾಗಿವೆ. ಎರಡೂ ಭಾರತದಾದ್ಯಂತ, ಎಲ್ಲ ಪ್ರದೇಶಗಳಲ್ಲೂ ಬೆಳೆಯುತ್ತವೆ. ಮರಳು ಭೂಮಿಯಲ್ಲಿ ಹೇರಳ.

ಸಸ್ಯವರ್ಣನೆ

[ಬದಲಾಯಿಸಿ]

ಸಿಲ ಇಂಡಿಕ

[ಬದಲಾಯಿಸಿ]

ಸಿಲ ಇಂಡಿಕ ಎಂಬುದು ಬಹಳ ಪುಟ್ಟಗಾತ್ರದ ಮೂಲಿಕೆ ಸಸ್ಯ. ಇದರಲ್ಲಿ ಭೂಮಿಯೊಳಗೇ ಹುದುಗಿರುವ ಕಂದಗೆಡ್ಡೆಯಿದೆ (ಬಲ್ಬ್). ಇದು ನೋಡಲು ಈರುಳ್ಳಿಯಂತೆ ಕಾಣುತ್ತದೆ.[] ಎಲೆಗಳು ಮತ್ತು ಹೂಗೊಂಚಲು ಮಾತ್ರ ನೆಲದಮೇಲೆ ಇರುತ್ತದೆ. ಸಾಮಾನ್ಯವಾಗಿ ಈ ಗಿಡದಲ್ಲಿ ಮಳೆಗಾಲದಲ್ಲಿ ಮಾತ್ರ ಎಲೆ ಮತ್ತು ಹೂಗೊಂಚಲುಗಳು ಹುಟ್ಟುತ್ತವೆ. ಉಳಿದ ಕಾಲಗಳಲ್ಲಿ ಕಂದಗೆಡ್ಡೆ ಮಾತ್ರ ಭೂಮಿಯೊಳಗೆ ಹುದುಗಿರುತ್ತದೆ; ಎಲೆಗಳು ಈಟಿಯಾಕಾರ ಅಥವಾ ಆಯಾತಾಕಾರವಾಗಿವೆ. ಅವುಗಳ ಉದ್ದ ಸುಮಾರು 6"-18". ಇವು ದಪ್ಪವಾಗಿದ್ದು ರಸಭರಿತವಾಗಿವೆ. ಎಲೆಯ ಮೇಲೆ ಅಲ್ಲಲ್ಲೆ ಕಪ್ಪು ಮಚ್ಚೆಗಳಿವೆ. ತುದಿಯಲ್ಲಿ ವಿಶೇಷ ಬಗೆಯ ಮೊಗ್ಗುಗಳು ಹುಟ್ಟುವುದೂ ಉಂಟು. ಇವು ನೆಲಕ್ಕೆ ತಾಗಿದಾಗ ಅಥವಾ ಕಳಚಿಕೊಂಡು ನೆಲಕ್ಕೆ ಬಿದ್ದಾಗ ಮೊಳೆತು ಸ್ವತಂತ್ರ ಸಸಿಗಳಾಗುತ್ತವೆ. ಇದೊಂದು ರೀತಿಯ ಸಂತಾನ ವೃದ್ದಿಯ ಕ್ರಮ. ಎಲೆಗಳು ಹುಟ್ಟುತ್ತಿದ್ದಂತೆಯೇ ಅವುಗಳೊಂದಿಗೇ ಸಸ್ಯದ ಮಧ್ಯಭಾಗದಿಂದ ಅಂತ್ಯಾರಂಭಿ (ರೇಸಿಮೋಸ್) ಮಾದರಿಯ ಹೂಗೊಂಚಲೂ ಹುಟ್ಟುತ್ತದೆ. ಅದರ ಮೇಲೆ ನಕ್ಷತ್ರಗಳಂತೆ ಕಾಣುವ, ಒತ್ತಾಗಿ ಜೋಡಿಸಿರುವ ಕಿರಿಯ ಗಾತ್ರದ ಹೂಗಳಿವೆ. ಒಂದೊಂದು ಹೂವಿನಲ್ಲಿಯೂ 6 ಭಾಗಗಳುಳ್ಳ ಪೆರಿಯಾಂತ್ ವಲಯವೂ 6 ಬಿಡಿ ಕೇಸರಗಳೂ ಮೂರು ಕಾರ್ಪೆಲುಗಳನ್ನೊಳಗೊಂಡ ಉಚ್ಚಸ್ಥಾನದ ಅಂಡಾಶಯವೂ ಇವೆ. ಅಂಡಾಶಯದಲ್ಲಿ 3 ಕೋಣೆಗಳಿವೆ. ಅಂಡಕಗಳ ಸಂಖ್ಯೆ ಪ್ರತಿ ಕೋಣೆಗೂ 1-2 ಅಥವಾ ಹಲವಾರು. ಪೆರಿಯಾಂತಿನ ಬಣ್ಣ ಹಸಿರುಮಿಶ್ರಿತ ಊದಾ. ಫಲ ಸಂಪುಟ ಮಾದರಿಯದು. ಇದರ ಆಕಾರ ಗುಂಡಗೆ ಅಥವಾ ಮೊಟ್ಟೆಯಂತೆ. ಸಿಪ್ಪೆ ತೆಳ್ಳಗೆ ಪೊರೆಯಂತಿದೆ.

ಅರ್ಜಿನಿಯ ಇಂಡಿಕ

[ಬದಲಾಯಿಸಿ]

ಅರ್ಜಿನಿಯ ಇಂಡಿಕ ಎಂಬ ಒಂದು ಬಗೆಯ ಕಾಡು ಬೆಳ್ಳುಳ್ಳಿಯೂ ಹೆಚ್ಚುಕಡಿಮೆ ಸಿಲ ಇಂಡಿಕವನ್ನೇ ಹೋಲುತ್ತದೆ. ಎಲೆಗಳಿಗಿಂತ ಮೊದಲು ಹೂಗೊಂಚಲು ಹುಟ್ಟುವ ಗುಣದಿಂದ ಕಂದುಬಣ್ಣದ ಹೂಗಳಿಂದ ಮತ್ತು ಹೂಗೊಂಚಲಿನಲ್ಲಿ ಹೂಗಳು ದೂರ ದೂರವಾಗಿ ಜೋಡಣೆಗೊಂಡಿರುವುದರಿಂದ ಇದು ಸಿಲ ಇಂಡಿಕದಿಂದ ಭಿನ್ನವಾಗಿದೆ. ಎರಡೂ ಬಗೆಯ ಕಾಡು ಬೆಳ್ಳುಳ್ಳಿಯ ಕಂದಗೆಡ್ಡೆಗಳಲ್ಲಿ ಸಿಲ್ಲೇರೆನ್-ಎ ಮತ್ತು ಸಿಲ್ಲೇರೆನ್-ಬಿ ಎಂಬ ರಾಸಾಯನಿಕ ಘಟಕಗಳು (ಗ್ಲೈಕೊಸೈಡ್ಸ್) ಇವೆ. ಅವುಗಳಲ್ಲಿ ಮೊದಲನೆಯದನ್ನು ಹರಳಿನ ರೂಪದಲ್ಲಿಯೂ ಎರಡನೆಯದನ್ನು ಪುಡಿಯ ರೂಪದಲ್ಲಿಯೂ ಪರಿಷ್ಕರಿಸಬಹುದಾಗಿದೆ.

ಔಷಧೀಯ ಗುಣಗಳು

[ಬದಲಾಯಿಸಿ]

ಕಾಡು ಬೆಳ್ಳುಳ್ಳಿಯ ಎಳೆಯ ಕಂದಗೆಡ್ಡೆಗಳಿಗೆ ಔಷಧೀಯ ಮಹತ್ತ್ವವಿದೆ. ಇವುಗಳ ರಸಕ್ಕೆ ಕಫ ಕತ್ತರಿಸುವ ಹೃದಯದ ಬಡಿತವನ್ನು ಪ್ರಜೋದಿಸುವ, ಜೀರ್ಣಕಾರಕ ಹಾಗೂ ಮೂತ್ರವರ್ಧಕ ಗುಣಗಳಿವೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಬಳಸಿದಾಗ ಈ ರಸ ತೀಕ್ಷ್ಣ ವಿಷಪೂರಿತವೂ ವಾಂತಿಕಾರಕವೂ ವಿರೇಚಕವೂ ಆಗಬಲ್ಲುದು. ಇದನ್ನು ಸಾಮಾನ್ಯವಾಗಿ ಆಸ್ತಮಾ (ದಮ್ಮು), ಜಲೋದರ, ಸಂಧಿವಾತ, ತೊನ್ನು, ಚರ್ಮರೋಗ ಇತ್ಯಾದಿಗಳಿಗೆ ಔಷಧಿಯಾಗಿ ಬಳಸುವುದುಂಟು. ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ, ನೆಗಡಿ, ಶ್ವಾಸನಾಳದ ಊತ, ಗೂರಲು, ಇತ್ಯಾದಿ ದೀರ್ಘಕಾಲದ ರೋಗಗಳಿಗೂ ಹೃದಯಕ್ಕೆ ಸಂಬಂಧಿಸಿದ ಜಲೋದರ ಮುಂತಾದುವುಗಳಲ್ಲಿ ಮೂತ್ರ ವರ್ಧಕವಾಗಿಯೂ ಇದನ್ನು ಬಳಸುವುದುಂಟು. ಚರ್ಮದ ಮೇಲಿನ ಗಂಟು ಅಥವಾ ನಾರುಲಿಗಳನ್ನು ನಾಶಪಡಿಸಲು ಕಂದಗೆಡ್ಡೆಯ ಪುಡಿಯನ್ನು ಲೇಪಿಸುವುದುಂಟು. ಕಾಲಿನಲ್ಲಿ ಆಣಿ, ಒತ್ತುಗಂಟು ಮುಂತಾದುವುಗಳನ್ನು ನಿವಾರಿಸಲು ಗೆಡ್ಡೆಯನ್ನು ಹುರಿದು ಪುಡಿಮಾಡಿ ಬೆಚ್ಚಾರವಾಗಿ (ಪೋಲ್ಟೀಸು) ಬಳಸುವುದುಂಟು. ಕುದುರೆಗಳ ಮೂತ್ರ ರೋಗಕ್ಕೂ, ಹೊಟ್ಟೆ ನೋವಿಗೂ ಇದು ಉಪಯುಕ್ತ.

ಉಲ್ಲೇಖ

[ಬದಲಾಯಿಸಿ]
  1. http://www.flowersofindia.net/catalog/slides/South%20Indian%20Squill.html
  2. https://www.flickr.com/photos/dinesh_valke/4695264099