ವಿಷಯಕ್ಕೆ ಹೋಗು

ಕಾಕಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾಕಲ್

ಎರಡು ಹೋಳುಗಳಿಂದ ಕೂಡಿದ ಚಿಪ್ಪುಳ್ಳ ಕಾರ್ಡಿಯಂ ಎಂಬ ಶಾಸ್ತ್ರೀಯ ನಾಮದ ಸಾಗರವಾಸಿ ಮೃದ್ವಂಗಿ.[] ಹೃದಯ ಚಿಪ್ಪಿನ ಹುಳು ಎಂದು ಕರೆಯುವುದಿದೆ. ಇದು ಯೂಲಾಮೆಲಿಬ್ರಾಂಕಿಯ ಗಣದ ಕಾರ್ಡಿಡೀ ಕುಟುಂಬಕ್ಕೆ ಸೇರಿದೆ[].

ಲಕ್ಷಣಗಳು

[ಬದಲಾಯಿಸಿ]

ಚಿಪ್ಪಿನ ಹೋಳುಗಳಲ್ಲಿ ಪ್ರಮುಖವಾದ ಅಂಬೋಗಳು ಮತ್ತು ಹೋಳುಗಳ ಹೊರಮೈ ಮೇಲೆ ವಿಕಿರಣಗೋಳ್ಳುವ ದೆಬ್ಬೆಗಳು (ರಿಬ್ಸ್) ಇರುವುದು ಇವುಗಳ ವಿಶೇಷ ಲಕ್ಷಣ. ಅಲ್ಲದೆ ಎರಡು ಚಿಪ್ಪಿನ ಹೋಳುಗಳು ಮುಚ್ಚಿಕೊಂಡಾಗ ಹೃದಯದಾಕಾರವಾಗಿ ಕಾಣುವುದರಿಂದ ಈ ಮೃದ್ವಂಗಿಗಳಿಗೆ ಹೃದಯ ಚಿಪ್ಪಿನ ಹುಳುಗಳೆಂದೂ ಇಂಗ್ಲಿಷಿನಲ್ಲಿ ಸಾಮಾನ್ಯವಾಗಿ ಕಾಕಲ್ ಎಂದೂ ಹೆಸರು ಬಂದಿದೆ. ಪ್ರಪಂಚದ ಎಲ್ಲ ಸಾಗರಗಳಲ್ಲೂ ಕಾಣಬರುವ ಇವುಗಳಲ್ಲಿ ಸುಮಾರು 53 ಜಾತಿಗಳೂ 250 ಪ್ರಭೇದಗಳೂ ಇವೆ. ಉಷ್ಣವಲಯದಲ್ಲಿ ಇವುಗಳ ಸಂಖ್ಯೆ ಹೆಚ್ಚು. ಸಾಮಾನ್ಯವಾಗಿ ಉಬ್ಬರವಿಳಿತಗಳ ನಡುವಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರೂ ಕೆಲವು 1,800' ಆಳದ ವರೆಗೂ ವ್ಯಾಪಿಸಿರುತ್ತವೆ. ಸಾಮಾನ್ಯವಾಗಿ ಮರಳು ಅಥವಾ ಮಣ್ಣಿನಲ್ಲಿ 3 ಸೆಂ.ಮೀ. ಆಳದವರೆಗೆ ತಮ್ಮ ಪಾದದ ಸಹಾಯದಿಂದ ಬಿಲ ತೋಡಿ ಹುದುಗಿರುತ್ತವೆ. ಅಲ್ಲದೆ ಹಾಗೆಯೇ ಮಣ್ಣಿನಲ್ಲಿ ನೆಲ ಉಳುವ ರೀತಿಯಲ್ಲಿ ಚಲಿಸುತ್ತವೆ.

ಮ್ಯಾಂಟಲ್‍ಪಾಲಿಗಳು ದೇಹದ ಹಿಂಭಾಗದಲ್ಲಿ ಪರಸ್ಪರ ಕೂಡಿಕೊಂಡು ಎರಡು ಚಿಕ್ಕ ಜಲನಾಲೆಗಳಾಗಿ ರೂಪಗೊಂಡಿವೆ. ಒಂದು ನಾಲೆಯ ದ್ವಾರದ ಮೂಲಕ ಪ್ರಾಣಿಗೆ ಬೇಕಾದ ಸೂಕ್ಷ್ಚಜೀವಿಯನ್ನು ಒಳಗೊಂಡ ನೀರಿನ ಪ್ರವಾಹ ದೇಹವನ್ನು ಪ್ರವೇಶಿಸುತ್ತದೆ. ಮತ್ತೊಂದರಿಂದ ತ್ಯಾಜ್ಯವಸ್ತುಗಳಿಂದ ಕೂಡಿದ ನೀರಿನ ಪ್ರವಾಹ ದೇಹದಿಂದ ಹೊರಕ್ಕೆ ಬರುತ್ತದೆ. ಪಾದದ ಇಕ್ಕೆಡೆಗಳಲ್ಲಿ ಮತ್ತು ಹಿಂಭಾಗದಲ್ಲಿ ಶ್ವಸನಕಾರ್ಯದಲ್ಲಿ ನೆರವಾಗುವ ಎರಡು ಕಿವಿರುಗಳಿವೆ.

ಕಾಕಲ್ ಪ್ರಾಣಿಗಳಲ್ಲಿ ಗಂಡು, ಹೆಣ್ಣು ಎಂಬ ಲಿಂಗಭೇದವಿದೆ. ಅಂಡಾಣು ಮತ್ತು ಶುಕ್ರಾಣು ಪ್ರಾಣಿಗಳ ದೇಹದಿಂದ ಹೊರಬಂದು ಪರಸ್ಪರ ಕೂಡಿ ಯುಗ್ಮಾಣುವಾಗುತ್ತದೆ. ಇದರಿಂದ ಕೆಲವು ಕಾಲಾನಂತರ ಚಲನಸಾಮಥ್ರ್ಯವುಳ್ಳ ಚಿಕ್ಕ ಡಿಂಭಗಳು ಹೊರಬರುತ್ತವೆ. ಇವು ಸ್ವತಂತ್ರವಾಗಿ ಕೆಲಕಾಲ ಈಜಿ ಕಾಯಪರಿವರ್ತನೆ ಹೊಂದಿ ಕೊನೆಗೆ ನೀರಿನ ತಳಕ್ಕೆ ಹೋಗಿ ದೊಡ್ಡದಾಗುತ್ತವೆ.

ಕಾಕಲ್ ನ ಚಿಪ್ಪು

[ಬದಲಾಯಿಸಿ]

ಪ್ರಾಣಿಯ ದೇಹವನ್ನು ಎರಡು ಸಮರೂಪದ ಚಿಪ್ಪುಗಳು ಆವರಿಸಿವೆ. ಚಿಪ್ಪುಗಳು ಲಿಗಮೆಂಟು ಮತ್ತು ಕೀಲುಹಲ್ಲುಗಳ (ಹಿಂಜ್ ಟೀತ್) ಸಹಾಯದಿಂದ ಬಂಧಿತವಾಗಿವೆ. ಚಿಪ್ಪುಗಳನ್ನು ಮುಚ್ಚುವುದಕ್ಕೆ ತೆಗೆಯುವುದಕ್ಕೆ ಸಹಾಯಕವಾಗಿ ದೇಹದಲ್ಲಿ ಅಡ್ಡಲಾಗಿ ಅಳವಡಿಸಿರುವ ಎರಡು ಪ್ರಬಲವಾದ ಸ್ನಾಯುಗಳಿವೆ. ಪಾದ ಸ್ನಾಯುಮಯವಾಗಿದ್ದು ತುದಿಯಲ್ಲಿ ಸ್ವಲ್ಪಮಟ್ಟಿಗೆ ಚೂಪಾಗಿದೆ. ಅಲ್ಲದೆ ಮಧ್ಯಭಾಗದಲ್ಲಿ ಮಂಡಿಯಂತೆ ಕೊಂಚ ಬಾಗಿದೆ. ಇದರ ಸಹಾಯದಿಂದ ಕಾಕಲ್ ಮರಳಿನ ಮೇಲೆ ನೆಗೆಯಬಲ್ಲುದು.

ಚಿಪ್ಪುಗಳು ಸಾಮಾನ್ಯವಾಗಿ ಕಂದು, ಹಳದಿ, ಕೆಂಪು ಮೊದಲಾದ ಮೋಹಕ ಬಣ್ಣಗಳಿಂದ ಕೂಡಿದ್ದು ವರ್ಣರಂಜಿತವಾಗಿವೆ. ಅಲ್ಲದೆ ಮೇಲೆಲ್ಲ ಸುಪುಷ್ಟವಾದ ಕೆತ್ತನೆಯಂಥ ರಚನೆಯೂ ಉಂಟು.

ಉಪಯೋಗಗಳು

[ಬದಲಾಯಿಸಿ]

ಯೂರೋಪಿನ ಪಶ್ಚಿಮ ತೀರದ ಜನರು ಕಾರ್ಡಿಯಂ ಮತ್ತು ಸೆರಾಸ್ಪೊಡರ್ಮ ಎಡ್ಯೂಲ್ ಎಂಬ ಹೃದಯ ಚಿಪ್ಪುಹುಳುಗಳನ್ನು ಆಹಾರವಾಗಿ ಉಪಯೋಗಿಸುತ್ತಾರೆ. ಕಾರ್ಡಿಯಂ ಪ್ರಭೇದ ಥೇಮ್ಸ್‍ನದೀ ಮುಖಜಭೂಮಿಯಲ್ಲಿ ಹೇರಳವಾಗಿ ಕಂಡುಬರುತ್ತದೆ. ಬೆಸ್ತರು ಈ ಹುಳುಗಳನ್ನು ಬರಿಗೈಯಿಂದಲೇ ಬೇಟೆಯಾಡುವುದುಂಟು. ಆದರೆ ಸಾಮಾನ್ಯವಾಗಿ ಪಿಕಾಸಿ, ಗುದ್ದಲಿ ಮೊದಲಾದ ಉಪಕರಣಗಳನ್ನು ಉಪಯೋಗಿಸಿ ಅಗೆದು ಇವನ್ನು ಸಂಗ್ರಹಿಸುತ್ತಾರೆ. ಮಾರುಕಟ್ಟೆಗೆ ಸಾಗಿಸುವ ಮೊದಲು ಇವನ್ನು ಬಿಸಿ ನೀರಿನಲ್ಲಿ ಅದ್ದಿ ಚೆನ್ನಾಗಿ ತೊಳೆಯುತ್ತಾರೆ. ಇವುಗಳಲ್ಲಿರಬಹುದಾದ ಟೈಫಾಯ್ಡ್ ಬ್ಯಾಕ್ಟೀರಿಯಗಳನ್ನು ಕೊಲ್ಲುವ ಮುನ್ನೆಚ್ಚರಿಕೆಯ ಕ್ರಮ ಇದು. ಈ ಪ್ರಾಣಿಗಳನ್ನು ಉಪ್ಪು ಅಥವಾ ವಿನಿಗರ್‍ಗಳಲ್ಲಿ ನೆನೆಹಾಕಿ ಡಬ್ಬಗಳಲ್ಲಿಟ್ಟು ಸಂರಕ್ಷಿಸುವುದೂ ಉಂಟು. ಇವು ಕೇವಲ ಮಾನವನ ಆಹಾರ ಮಾತ್ರವಲ್ಲದೆ ಸಮುದ್ರದಲ್ಲಿ ವಾಸಿಸುವ ಮೀನು, ಪಕ್ಷಿ, ನಕ್ಷತ್ರಮೀನುಗಳ ಆಹಾರವೂ ಆಗಿವೆ.

ಆಸ್ಟ್ರೇಲಿಯದ ಗ್ಲೈಸಿಮೆರಿಡೀ ಕುಟುಂಬಕ್ಕೆ ಸೇರಿದ ಒಂದು ಬಗೆಯ ಚಿಪ್ಪುಹುಳುಗಳನ್ನು ನಾಯಿ ಹ್ಲದಯ ಚಿಪ್ಪುಹುಳು (ಡಾಗ್ ಕಾಕಲ್)[] ಎಂದು ಕರೆಯುವುದುಂಟು. ಇದು ಹೊರನೋಟಕ್ಕೆ ನಿಜವಾದ ಹೃದಯ ಚಿಪ್ಪು ಹುಳುಗಳನ್ನೇ ಹೋಲುತ್ತದೆ. ಇದನ್ನು ಅಲ್ಲಿಯ ಮೂಲನಿವಾಸಿಗಳು ತಿನ್ನುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. http://www.marinespecies.org/aphia.php?p=taxdetails&id=14633
  2. "ಆರ್ಕೈವ್ ನಕಲು". Archived from the original on 2012-03-04. Retrieved 2016-10-21.
  3. http://link.springer.com/article/10.1007%2Fs002170050527


"https://kn.wikipedia.org/w/index.php?title=ಕಾಕಲ್&oldid=1250045" ಇಂದ ಪಡೆಯಲ್ಪಟ್ಟಿದೆ