ಕಸ್ತೂರಿ ಜಾಲಿ

ವಿಕಿಪೀಡಿಯ ಇಂದ
Jump to navigation Jump to search
ಕಸ್ತೂರಿ ಜಾಲಿ

ಸುಗಂಧಯುಕ್ತ ಹೂಗಳಿಗಾಗಿ ಪ್ರಸಿದ್ಧವಾಗಿರುವ ಒಂದು ಜಾತಿಯ ಪೊದೆ ಸಸ್ಯ ಅಥವಾ ಮರ (ಕ್ಯಾಸಿ ಫ್ಲವರ್). ಲೆಗ್ಯುಮಿನೋಸೀ ಕುಟುಂಬದ ಮೈಮೋಸೀ ಉಪಕುಟುಂಬಕ್ಕೆ ಸೇರಿದೆ. ಇದರ ವೈಜ್ಞಾನಿಕ ನಾಮ ಅಕೇಸಿಯ ಫಾರ್ನೇಸಿಯಾನ.[೧]

ಕಸ್ತೂರಿ ಜಾಲಿ ಬೆಳೆಯುವ ಪ್ರದೇಶಗಳು[ಬದಲಾಯಿಸಿ]

ಮೂಲತಃ ದಕ್ಷಿಣ ಅಮೆರಿಕದ ನಿವಾಸಿಯಾದ ಇದು ಈಗ ಭಾರತ, ಸಿಂಹಳ ಮತ್ತು ಬರ್ಮ ದೇಶಗಳಲ್ಲೆಲ್ಲ ಬೆಳೆಯುತ್ತಿದೆ. ನದಿದಂಡೆಯ ಮರಳಿನಲ್ಲಿ, ಪಂಜಾಬಿನ ಒಣಹವೆಯ ಮೈದಾನ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಕೆಲವೆಡೆ ಇದನ್ನು ಉದ್ಯಾನಗಳಲ್ಲಿ ಅಲಂಕಾರಕ್ಕಾಗಿ ಬೆಳೆಸುವುದೂ ಉಂಟು.

ಲಕ್ಷಣಗಳು[ಬದಲಾಯಿಸಿ]

ಸುಮಾರು ಹದಿನೈದು ಅಡಿಗಳಷ್ಟು ಎತ್ತರಕ್ಕೆ ಬೆಳೆಯುವ ಮುಳ್ಳು ಮರ ಇದು. ಎಲೆಗಳು ಸಂಯುಕ್ತ ಮಾದರಿಯವು. ಒಂದೊಂದರಲ್ಲೂ ಒಂದು ಪತ್ರಕಾಂಡವೂ (ರೇಕಿಸ್) ಅದರ ಎರಡೂ ಕಡೆ ಮೂರರಿಂದ ಎಂಟು ಜೊತೆ ಉಪವರ್ಣಗಳೂ ಈ ಉಪವರ್ಣಗಳಲ್ಲಿ ಒಂದೊಂದರಲ್ಲೂ ಹತ್ತರಿಂದ ಇಪ್ಪತ್ತೈದು ಜೊತೆ ಕಿರುಎಲೆಗಳೂ ಇವೆ. ಬುಡದಲ್ಲಿ ಮುಳ್ಳುಗಳಾಗಿ ಮಾರ್ಪಾಡಾದ ವೃಂತಪರ್ಣಗಳಿವೆ (ಸ್ಟಿಪ್ಯೂಲುಗಳು). ಹೂಗಳು ಚಂಡುಮಂಜರಿ ಮಾದರಿಯ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೂಗೊಂಚಲುಗಳು ಎಲೆಗಳ ಕಕ್ಷಗಳಲ್ಲಿ (ಆಕ್ಸಿಲ್) ಒಂಟೊಂಟಿಯಾಗಿ ಮೂಡುತ್ತವೆ. ಒಮ್ಮೊಮ್ಮೆ ಎರಡು ಅಥವಾ ಮೂರು ಹೂಗೊಂಚಲುಗಳು ಒಂದೇ ಕಕ್ಷದಲ್ಲಿ ಹುಟ್ಟುವುದೂ ಉಂಟು. ಹೂಗಳು ಬಹಳ ಸುವಾಸನೆಯುಳ್ಳವಾಗಿವೆ; ಇವುಗಳ ಬಣ್ಣ ಹಳದಿ. ಮರಕ್ಕೆ ಮೂರು ವರ್ಷ ವಯಸ್ಸಾದ ಅನಂತರ ಹೂಗಳು ಅರಳಲಾರಂಭಿಸುತ್ತವೆ. ಹೂ ಬಿಡುವ ಕಾಲ ನವೆಂಬರಿನಿಂದ ಮಾರ್ಚ್.

ಉಪಯೋಗಗಳು[ಬದಲಾಯಿಸಿ]

ಕಸ್ತೂರಿ ಜಾಲಿಯ ಹೂಗಳಿಂದ ಕ್ಯಾಸಿ ಎನ್ನುವ ಸುಗಂಧವನ್ನು ತಯಾರಿಸುತ್ತಾರೆ. ಹೂಗಳನ್ನು ನೀರಿನಲ್ಲಿ ನೆನೆಸಿ ಮೆತುಮಾಡಿ ಕರಗಿಸಿದ ಕೋಕೋ ಬೆಣ್ಣೆಯಲ್ಲೋ ಕೊಬ್ಬರಿ ಎಣ್ಣೆಯಲ್ಲೋ ಹಲವಾರು ಗಂಟೆಗಳ ಕಾಲ ನೆನೆಹಾಕುತ್ತಾರೆ. ಇದರಿಂದ ಹೂವಿನಲ್ಲಿರುವ ಸುಗಂಧ ಬೇರ್ಪಟ್ಟು ಕೊಬ್ಬಿನಲ್ಲಿ ಕರಗುತ್ತದೆ. ಈ ರೀತಿ ಹಲವಾರು ಬಾರಿ ಮಾಡಿದ ಮೇಲೆ ಬರುವ ಸುಗಂಧಪೂರಿತ ಕೊಬ್ಬನ್ನು ಕರಗಿಸಿ, ಸೋಸಿ, ತಂಪುಗೊಳಿಸುತ್ತಾರೆ. ಹೀಗೆ ಪಡೆಯಲಾಗುವ ವಸ್ತುವೇ ಸುಗಂಧಾಂಜನ (ಪೊಮೇಡ್). ಕ್ಯಾಸಿ ಸುಗಂಧವನ್ನು ಶುದ್ಧರೂಪದಲ್ಲಿ ಪಡೆಯುವುದಕ್ಕೆಂದು, ಸುಗಂಧಾಂಜನವನ್ನು ಆಲ್ಕೊಹಾಲಿನಲ್ಲಿ ಬೆರೆಸಿ (3-4) ವಾರಗಳ ವರೆಗೂ (250) ಸೆಂ. ಉಷ್ಣತೆಯಲ್ಲಿ ಇಡುತ್ತಾರೆ. ಆಗ ಸುಗಂಧವೆಲ್ಲ ಆಲ್ಕೊಹಾಲಿಗೆ ವರ್ಗಾಯಿಸಲ್ಪಡುತ್ತದೆ. ಅನಂತರ ಆಲ್ಕೊಹಾಲನ್ನು ಬಟ್ಟಿಯಿಳಿಸಿ ಬೇರ್ಪಡಿಸುತ್ತಾರೆ. ಆಗ ಶುದ್ಧವಾದ ಆಲಿವ್ ಹಸಿರು ಬಣ್ಣದ ಸುಗಂಧ ದೊರೆಯುತ್ತದೆ. ಗಾಳಿ ಬೆಳಕುಗಳಿಗೆ ತೆರೆದಿಟ್ಟರೆ ಇದು ಬೇಗ ಹಾಳಾಗುವುದರಿಂದ ಅವಕ್ಕೆ ಸೋಂಕದಂತೆ ಇದನ್ನು ಶೇಖರಿಸಿಡಬೇಕು. ಬಹಳ ಮಧುರ ವಾಸನೆಯುಳ್ಳ ಈ ಸುಗಂಧದ್ರವ್ಯವನ್ನು ಸುಗಂಧಾಂಜನ, ಉಡುಪುಗಳೊಂದಿಗೆ ಇಡಲಾಗುವ ಸುಗಂಧ ಚೀಲ (ಸ್ಯಾಚೆಟ್) ಮುಂತಾದವುಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಇದಲ್ಲದೆ ಕಸ್ತೂರಿಜಾಲಿಯ ತೊಗಟೆ, ಎಲೆ, ಕಾಯಿಗಳಲ್ಲಿ ಔಷಧೀಯ ಗುಣಗಳಿವೆ.[೨] ಇವನ್ನು ಪ್ರತಿಬಂಧಕವಾಗಿಯೂ ಕೆಲವು ಬಗೆಯ ಮೇಹರೋಗ ನಿವಾರಣೆಗೂ ಉಪಯೋಗಿಸುತ್ತಾರೆ. ತೊಗಟೆಯಲ್ಲಿ ಟ್ಯಾನಿನ್ ಎಂಬ ವಸ್ತುವಿದೆ. ಆದ್ದರಿಂದ ತೊಗಟೆಯನ್ನು ಚರ್ಮ ಹದಮಾಡಲೂ ಬಳಸುವುದುಂಟು. ಮರದಿಂದ ದೊರೆಯುವ ಅಂಟನ್ನು ಸಿಹಿತಿಂಡಿ ತಯಾರಿಕೆಯಲ್ಲಿ ಬಳಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. http://plants.usda.gov/core/profile?symbol=VAFA
  2. https://hort.purdue.edu/newcrop/duke_energy/Acacia_farnesiana.html