ವಿಷಯಕ್ಕೆ ಹೋಗು

ಕಸೂತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಂಗಾರದ ಕಸೂತಿ

ಸಾಮಾನ್ಯವಾಗಿ ಬಟ್ಟೆಯ ಮೇಲೆ, ವಿರಳವಾಗಿ ಚರ್ಮ ಅಥವಾ ಇಂಥ ಇತರ ವಸ್ತುಗಳ ಮೇಲೆ, ಸೂಜಿ ದಾರಗಳಿಂದಲೊ ಅಪರೂಪವಾಗಿ ತಂತಿಯಿಂದಲೊ ಮಾಡಿದ ಅಲಂಕಾರ (ಎಂಬ್ರಾಯ್ಡರಿ). ದಾರ ಅಥವಾ ಮೃದುವಾದ ತಂತಿಗಳಿಂದ ಮಾಡುವ ಇತರ ಕಲೆಗಳಂತೆ ಕಸೂತಿಯೂ ನಾಗರಿಕತೆಯ ಹಾದಿಯುಲ್ಲಿ ಪ್ರಗತಿ ಪರವಾಗಿ ನಡೆದು ಬರುತ್ತಿರುವ ಮಾನವನ ಕಲಾಭಿರುಚಿ ಮತ್ತು ಸೌಂದರ್ಯ ಜಿಜ್ಞಾಸೆಯ ದ್ಯೋತಕಗಳಲ್ಲಿ ಒಂದಾಗಿದೆ. ವಿಭಿನ್ನ ನಾಗರಿಕತೆಗಳ ಜನ ತಮ್ಮ ಸೌಂದರ್ಯಾಭಿರುಚಿಯನ್ನು ತಂತಮ್ಮ ಕಾಲಗಳಿಗನುಗುಣವಾಗಿ ಕಸೂತಿ ಕಲೆಯ ಮೂಲಕ ಅಭಿವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಕಸೂತಿ

ಇತಿಹಾಸ

[ಬದಲಾಯಿಸಿ]

ಮೊಟ್ಟಮೊದಲಿಗೆ ಮನುಷ್ಯನ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಇತರ ಎಲ್ಲ ಕಲೆಗಳಂತೆ ಈ ಕಲೆಯ ಉಗಮವೂ ಆಗಿರಬಹುದು. ಎರಡು ದಾರಗಳ ತುದಿಗಳನ್ನು ಹೇಗೆ ಸೇರಿಸಬಹುದು, ಬಟ್ಟೆ ಹೊಲಿಯಲು ಸೂಜಿಯನ್ನು ಹೇಗೆ ಉಪಯೋಗಿಸಬಹುದು ಇತ್ಯಾದಿ ಪ್ರಯೋಗಗಳಿಂದ ಮನುಷ್ಯನ ಕಲಾಭಿರುಚಿ ಕ್ರಮೇಣ ಹೊಮ್ಮಿರಬಹುದು.

ವಿವಿಧ ಜನಾಂಗಗಳಲ್ಲಿ ಕಸೂತಿ ಕೆಲಸ ವಿವಿಧ ರೀತಿಗಳಲ್ಲಿ ಪ್ರಾರಂಭವಾದುವು. ಉತ್ತರ ಅಮೆರಿಕ[] ಇಂಡಿಯನರು ಗರಿಯಿಂದ ಕುಶಲಕಲೆಗಾರಿಕೆ ಮಾಡುತ್ತಿದ್ದರು. ಆ ಪ್ರಕಾರ ಮೂಲನಿವಾಸಿಗಳು ನಾರುಬಟ್ಟೆಗಳ ಮೇಲೆ ಬಗೆಬಗೆಯಾದ ಚಿತ್ರಗಳನ್ನು ಹೆಣೆಯುತ್ತಿದ್ದರು. ಪ್ರಪಂಚದ ಬೇರೆಬೇರೆ ಭಾಗಗಳಲ್ಲಿ ಆಯಾ ಸಂಸ್ಕೃತಿ ಮತ್ತು ಅಗತ್ಯವಸ್ತುಗಳ ಸೌಲಭ್ಯಗಳನ್ನಾಧರಿಸಿ ಕಸೂತಿ ಕಲೆಯ ವಿವಿಧ ನಮೂನೆಗಳನ್ನು ಕಾಣಬಹುದು.

ಭಾರತದಲ್ಲಿ : ಭಾರತದಲ್ಲಿ ಈ ಕಲೆಗೆ ಸಂಬಂಧಿಸಿದ ದೀರ್ಘವಾದ ಇತಿಹಾಸವನ್ನೇ ಕಾಣಬಹುದು. ಮೊಹೆಂಜೊದಾರೊದಲ್ಲಿ ಕ್ರಿ.ಪೂ. 3000 ದ್ದೆನ್ನಲಾದ ಕಂಚಿನ ಸೂಜಿಗಳನ್ನು ಬಹುಶಃ ಕಸೂತಿಗಾಗಿಯೇ ಉಪಯೋಗಿಸುತ್ತಿದ್ದಿರಬಹುದು. ಸಿಂಧೂನದಿಯ ನಾಗರಿಕತೆ ಹಾಗೂ ತತ್ಕಾಲೀನ ನಾಗರಿಕತೆಗಳ ಶೋಧನೆಯಲ್ಲಿ ಸಿಕ್ಕಿರುವ ಅನೇಕ ಉಡುಪುಗಳಲ್ಲಿ ಉತ್ಕೃಷ್ಟವಾದ ಕಸೂತಿಯ ನಮೂನೆಗಳಿವೆ. ಪ್ರಾಚೀನ ಭಾರತದ ಹಳ್ಳಿಹಳ್ಳಿಯಲ್ಲೂ ಈ ಕಲೆ ಪ್ರಚಲಿತವಾಗಿತ್ತು. ವಿವಿಧ ಪ್ರಾಂತ್ಯಗಳ ಜನ ವಿವಿಧ ರೀತಿಯ ಕಸೂತಿ ಮಾದರಿಗಳಿಗೆ ಮನಸೋತಿದ್ದರು. ಚಿಕ್ಕಚಿಕ್ಕ ಕನ್ನಡಿಗಳನ್ನು ಅಳವಡಿಸಿ ತಂತಿಯಾಕಾರದ ವಸ್ತುಗಳಿಂದ ಕಸೂತಿ ಮಾಡುತ್ತಿದ್ದ ಕಚ್ ಮತ್ತು ಕಾಠಿಯಾವಾಡಗಳಲ್ಲಿ ದೊರಕಿರುವ ಮಾದರಿಗಳು ಕಣ್ಣು ಸೆಳೆಯುವಂಥವಾಗಿದ್ದುವು. ಹದಿನಾರನೆಯ ಶತಮಾನದಿಂದೀಚೆಗೆ ಪರ್ಷಿಯನ್ನರ ಪ್ರಭಾವ ಭಾರತದ ಕಲೆ ಮತ್ತು ಜನಜೀವನದ ಮೇಲೆ ಬಿದ್ದಿತು. ಕಸೂತಿ ಕಲೆಯೂ ಈ ಪ್ರಭಾವಕ್ಕೆಹೊರತಾದುದೇನಾಗಿರಲಿಲ್ಲ. ಕಚ್ ಮತ್ತು ಕಾಠಿಯಾವಾಡದ ಕಸೂತಿಗಳಲ್ಲೂ ಇದು ಎದ್ದುಕಾಣುತ್ತದೆ.

ಋಗ್ವೇದದಲ್ಲಿ ಬರುವ ಹಿರಣ್ಯಪೇಶಸ್ ಎಂಬ ಶಬ್ದವನ್ನಾಧರಿಸಿ, ಆ ಕಾಲದಲ್ಲೂ ಭಾರತದಲ್ಲಿ ಚಿನ್ನದ ಕಸೂತಿಯಿತ್ತೆಂಬ ನಿರ್ಣಯಕ್ಕೆ ಬರಬಹುದು. ಕ್ರಿ.ಪೂ. 6ನೆಯ ಶತಮಾನದಲ್ಲಿಯ ಭಾರತದ ವಾಣಿಜ್ಯವಸ್ತುಗಳ ಪೈಕಿ ಕಸೂತಿ ಮಾಡಿದ ವಸ್ತ್ರಗಳೂ ಇತರ ಪದಾರ್ಥಗಳೂ ವಿದೇಶದಲ್ಲಿ ಬಹಳವಾಗಿ ಜನಪ್ರಿಯವಾಗಿದ್ದುವೆಂಬ ಅಂಶ ವಿದಿತವಾಗುತ್ತದೆ. ಕ್ರಿ.ಪೂ. 320ರ ಸುಮಾರಿನಲ್ಲಿ ಭಾರತಕ್ಕೆ ಭೇಟಿಕೊಟ್ಟ ಮೆಗಾಸ್ತೆನೀಸ್ ಭಾರತದಲ್ಲಿಯ ಕಸೂತಿಯಲ್ಲಿ ಅನೇಕ ರೀತಿಯ ಚಿನ್ನದ ಎಳೆಗಳನ್ನೂ ರತ್ನಗಳನ್ನೂ ಉಪಯೋಗಿಸುತ್ತಿದ್ದರು ಎಂದು ಹೇಳಿದ್ದಾನೆ. ಗುಪ್ತರ ಕಾಲ ಭಾರತದ ಸುವರ್ಣಯುಗವೆಂದೆನಿಸಿಕೊಂಡಿದೆಯಲ್ಲದೆ, ಆ ಕಾಲದಲ್ಲಿದ್ದ ಅಪ್ರತಿಮ ಕಸೂತಿಕಲೆಯ ಬಣ್ಣನೆ ಕಾಳಿದಾಸನ ಕಾವ್ಯಗಳಲ್ಲಿ ಅಲ್ಲಲ್ಲಿ ಮೂಡಿಬರುತ್ತದೆ. ಬಾಣಭಟ್ಟನ ರಚನೆಗಳಲ್ಲೂ ಭಾರತದ ಗತಕಲಾವೈಭವವನ್ನು ಹಾಡಿ ಹೊಗಳಲಾಗಿದೆ. ಮೊಗಲರ ಕಾಲದಲ್ಲೂ ಕಸೂತಿಕಲೆಗೆ ಸಾಕಷ್ಟು ಪ್ರೋತ್ಸಾಹವಿತ್ತು. 17 ನೆಯ ಮತ್ತು 18 ನೆಯ ಶತಮಾನಗಳಲ್ಲಿ ಕಸೂತಿ ಮಾಡಿದ ಉತ್ತಮ ವಸ್ತ್ರಗಳು ಭಾರತದಿಂದ ವಿದೇಶಗಳಿಗೆ ಭಾರಿ ಪ್ರಮಾಣದಲ್ಲಿ ಹೋಗುತ್ತಿದ್ದುವು. ಯೂರೋಪ್ ಮತ್ತು ಪಶ್ಚಿಮ ಏಷ್ಯಗಳಲ್ಲಿ ಭಾರತದ ವಸ್ತುಗಳಿಗೆ ಬಹಳವಾಗಿ ಬೇಡಿಕೆಯಿತ್ತು.

ವಿಧಗಳು

[ಬದಲಾಯಿಸಿ]

ಭಾರತದ ಹಳ್ಳಿಗಳಲ್ಲೂ ಈ ಕಲೆ ವಿಶೇಷವಾಗಿತ್ತು. ಪಂಜಾಬಿನ ಹೂ ಕಸೂತಿಯೂ ಸಿಂಧುದೇಶ, ಕಚ್ ಮತ್ತು ಕಾಠಿಯಾವಾಡಗಳ ಸರಪಳಿಯ ಮತ್ತು ಗಾಜಿನ ಕಸೂತಿಯೂ ಬಂಗಾಳದ ಕಾಂಥೆ ಮಾದರಿಯೂ ಭಾರತದ ಜಾನಪದ ಕೊಡುಗೆಗಳು, ಲಖನೌವಿನ ಚಿಕನ್‍ಕಾರಿ ಮಾದರಿ ಮತ್ತು ದೆಹಲಿ, ಕಾಶಿ, ಆಗ್ರ, ಸೂರತ್ ಮತ್ತು ಹೈದರಾಬಾದ್‍ಗಳಲ್ಲಿಯ ಕಾರ್‍ಚೋಟಿ ಕಸೂತಿ ಶ್ರೀಮಂತರ ಕಲಾಭಿರುಚಿಯ ನಿದರ್ಶನಗಳಾಗಿದ್ದುವು. ಇವುಗಳಲ್ಲಿ ದಕ್ಷತೆ ಮತ್ತು ನೈಪುಣ್ಯ ಬಹಳವಾಗಿದ್ದು ಹಳ್ಳಿಗರ ಹಾಗೂ ವನವಾಸಿಗಳ ಕಸೂತಿಯಲ್ಲಿ ಸೌಂದರ್ಯಾಭಿವ್ಯಕ್ತಿ ಬಹಳ ಸರಳವಾಗಿತ್ತು.

ಭಾರತದ ಕಸೂತಿಯ ಮೇಲೆ ವಿದೇಶೀಯರ ಪ್ರಭಾವವೂ ಅಲ್ಪವಲ್ಲ. ಕಾಶ್ಮೀರದ ಕಸೂತಿ[] ಟಿಬೆಟಿನ ಮೂಲಕ ಚೀನದ ಕಸೂತಿಯಿಂದ ಪ್ರಭಾವಿತವಾಯಿತು. ಇದೇ ರೀತಿಯಲ್ಲಿ ಪಂಜಾಬಿನ ಹೂ ಕಸೂತಿ ಬಲೂಚಿಸ್ತಾನದಿಂದ ಪ್ರಭಾವಿತವಾದುದಾಗಿಯೂ ಸಿಂಧೂದೇಶ ಕಚ್ ಕಾಠಿಯಾವಾಡಗಳ ಶೈಲಿಗಳು ಸ್ಪೇನ್ ಜರ್ಮನಿಗಳಿಂದ ಪ್ರಭಾವಗೊಂಡಿರುವುದಾಗಿಯೂ ತೋರುತ್ತದೆ. ಕರ್ಣಾಟಕ ಮತ್ತು ಬಿಹಾರಗಳ ಕಸೂತಿಯ ಮೇಲೆ ಸ್ಲಾವ್ ದೇಶಗಳ ಕಸೂತಿಯ ಪ್ರಭಾವವಿರುವುದಾಗಿ ಕಂಡುಬರುತ್ತದೆ. ಮೊಗಲರ ಕಾಲದಿಂದ ಮೊದಲುಗೊಂಡು ಇರಾನಿನ ಪ್ರಭಾವ ಭಾರತದ ಕಸೂತಿಕಲೆಯ ಮೇಲೆ ಬೀಳುತ್ತಲೇ ಇದೆ. ಆದರೆ, ಈ ಎಲ್ಲ ಶೈಲಿಗಳನ್ನೂ ಒಟ್ಟಾಗಿ ಮೈಗೂಡಿಸಿಕೊಂಡು ಭಾರತ ತನ್ನದೇ ಆದ ವಿಶಿಷ್ಟ ರೀತಿಯ ಶೈಲಿಗಳನ್ನು ರೂಪಿಸಿಕೊಂಡಿರುವುದನ್ನು ಗಮನಿಸಬೇಕು.

ಪಂಜಾಬಿ ಕಸೂತಿ

ಕಾಲ, ದೇಶ ಹಾಗೂ ಪ್ರಭಾವಗಳಿಗನುಗುಣವಾಗಿ ಭಾರತದಲ್ಲಿಯ ವಿವಿಧ ಪ್ರಾಂತ್ಯಗಳಲ್ಲಿ ಕಸೂತಿಯ ವಿವಿಧ ನಮೂನೆಗಳಿವೆ. ಕಾಶ್ಮೀರದ ಕಸೂತಿಯಲ್ಲಿ ಸೋಜನಕಾರಿ, ಗಬ್ಬಾ ಮತ್ತು ಸರಪಳಿ ಕಸೂತಿಗಳು ಮುಖ್ಯವಾದವು. ಕಾಶ್ಮೀರದ ಶಾಲುಗಳ ಮೇಲೆ ಕಂಡುಬರುವ ಹೂಬಳ್ಳಿಗಳು, ಪಕ್ಷಿಗಳು ಮತ್ತು ಮನುಷ್ಯಾಕೃತಿಗಳು ಬಹು ಸೂಕ್ಷ್ಮವಾಗಿ ಮಾಡಿದ ಸೋಜನಕಾರಿ ಮಾದರಿಗಳು. ಬಣ್ಣಬಣ್ಣದ ಪರದೆಗಳು, ಪೀಠೋಪಕರಣಗಳು ಮತ್ತು ಹಾಸಿಗೆ ಬಟ್ಟೆಗಳ ಮೇಲೆ ಗಬ್ಬಾ ಮಾದರಿಯ ಕಸೂತಿಯನ್ನು ಬಳಸಲಾಗುತ್ತದೆ. ಪಂಜಾಬಿನ ಹೂ ಕಸೂತಿಯಲ್ಲಿ ಹತ್ತಿಯ ಬಟ್ಟೆಗಳು ಮತ್ತು ಹೊದಿಕೆಗಳ ಮೇಲೆ ಹೂವಿರುವ ಬಳ್ಳಿಗಳನ್ನು ಹೊಲಿಯುತ್ತಾರೆ. ಈ ಕೆಲಸವನ್ನು ಜಾಟರು ವಿಶೇಷವಾಗಿ ಮಾಡುತ್ತಾರೆ. ಇವುಗಳಲ್ಲೂ ಮೂರು ವಿಧಾನಗಳಿವೆ: ಫುಲ್‍ಕಾರಿ ಮಾದರಿಯಲ್ಲಿ ಬಳ್ಳಿಗಳು ದೂರದೂರವಾಗಿರುತ್ತವೆ ; ಬಾಗ್ ಮಾದರಿಯಲ್ಲಿ ಎಲ್ಲ ಸ್ಥಳವನ್ನೂ ಜ್ಯಾಮಿತಿಯ ಆಕಾರಗಳಿಂದ ತುಂಬಲಾಗುತ್ತದೆ ; ಚೋಪ್ ಮಾದರಿಯಲ್ಲಿ ಅಂಚಿನಲ್ಲೇ ಕೆಲಸ ಮಾಡಲಾಗುತ್ತದೆ. ಪಂಜಾಬಿನಲ್ಲಿ ಫುಲ್‍ಕಾರಿ ಕಸೂತಿ ಕಲೆ ತಾಯಿಯಿಂದ ಮಗಳಿಗೆ ಪರಂಪರೆಯಾಗಿ ಮುಂದುವರಿಯುತ್ತದೆ. ಕಚ್ ಮತ್ತು ಕಾಠಿಯಾವಾಡಗಳ ಶೈಲಿಗಳಲ್ಲಿ ವ್ಯತ್ಯಾಸ ಕಂಡುಹಿಡಿಯುವುದು ಸ್ವಲ್ಪ ಕಷ್ಟ. ಹಳ್ಳಿಗಳಲ್ಲಿ ಸಾಮಾನ್ಯವಾಗಿರುವ ಈ ಕಲೆಯನ್ನು ಕನಬಿ ಅಥವಾ ಭರತ್ ಎಂದು ಕರೆಯಲಾಗುತ್ತದೆ. ಸಾಟಿನ್, ರೇಷ್ಮೆ ಮತ್ತು ಹತ್ತಿ ಬಟ್ಟೆಗಳ ಮೇಲೆ ಈ ಕಸೂತಿಯನ್ನು ಮಾಡಿ ಕನ್ನಡಿಯ ಚೂರುಗಳನ್ನು ತುಂಬುತ್ತಾರೆ. ಬಿಳಿ, ಕೇಸರಿ, ಕಪ್ಪು ಅಥವಾ ಕೆಂಪು ಹಿನ್ನಲೆಗಳಲ್ಲಿ ಇವು ನಯನಮನೋಹರವಾಗಿ ಕಾಣುತ್ತವೆ. ಕಾಠಿಯಾವಾಡದ ಶೈಲಿ ಕಚ್ಚಿನ ಶೈಲಿಗಿಂತ ಅಧಿಕ ಸ್ಥೂಲವಾದುದು. ಉತ್ತರಪ್ರದೇಶದಲ್ಲಿ ಚಿಕನ್‍ಕಾರಿ ಎಂದು ಕರೆಯುವ ಕಸೂತಿ ಕಲೆ ಲಖನೌ, ರಾಮಪುರ ಮತ್ತು ಬನಾರಸ್‍ಗಳಲ್ಲಿ ಅಧಿಕವಾಗಿದೆ. ಇಲ್ಲಿ ಅಂಗಿ, ಟೋಪಿ, ಲಂಗ, ಸೀರೆಗಳೇ ಮೊದಲಾದವುಗಳ ಮೇಲೆ ಬಹಳವಾಗಿ ಬಿಳಿಯ ದಾರದಿಂದ ಕಸೂತಿ ಮಾಡುತ್ತಾರೆ. ಮಣಿಪುರದ ಸ್ತ್ರೀಯರು ಮಾಡುವ ರೇಷ್ಮೆ ಕಸೂತಿ ತುಂಬ ಆಕರ್ಷಕವಾಗಿರುತ್ತದೆ.

ಶಾಮಿಯಾನ, ಕುದುರೆ ಆನೆಗಳ ಮೇಲಿನ ವಸ್ತ್ರಗಳು, ಉಡುಪು, ಪಾದರಕ್ಷೆ ಮೊದಲಾದ ವಸ್ತುಗಳ ಮೇಲೆ ಕಾರ್‍ಚೋಟಿ ಶೈಲಿಯಲ್ಲಿ ಕಲಾಬತು, ಸಲ್‍ಮಾ, ಬಾದ್‍ಲಾ ಮೊದಲಾದವುಗಳ ಕಸೂತಿ ಮಾಡುತ್ತಾರೆ. ಕಾರ್‍ಚೋಟ ಕೆಲಸ ಮುಖ್ಯವಾಗಿ ದೆಹಲಿ, ಲಖನೌ, ಹೈದರಾಬಾದ್, ಬನಾರಸ್ (ವಾರಣಾಸಿ), ಪಾಟಲೀಪುತ್ರ, ಮತ್ತು ಸೂರತ್‍ಗಳಲ್ಲಿ ಪ್ರಚುರವಾಗಿದೆ.

ಇವೇ ಅಲ್ಲದೆ ಬಂಗಾಳದ ಕಾಂಥಾ, ಬಿಹಾರದ ದೋಮುಹಾ ಮುಂತಾದ ಶೈಲಿಗಳು ಮತ್ತು ಬಿಹಾರ, ಒರಿಸ್ಸ ಮುಂತಾದ ರಾಜ್ಯಗಳಲ್ಲಿಯ ಜಾಳಿಗೆ ಕಸೂತಿ (ಆಪ್ಲಿಕೇ) ಮಹತ್ವಪೂರ್ಣವಾದವು.


ಪಂಜಾಬಿನ ಸ್ತ್ರೀಯರು ಸಾಮಾನ್ಯವಾಗಿ ಧರಿಸುತ್ತಿದ್ದ ಫುಲ್‍ಕಾರಿ ಕಸೂತಿಗಳಲ್ಲಿ ಮೊಗಲರ ಪ್ರಭಾವ ಬೀಳುವ ಮೊದಲು ಈ ಕಲೆಯ ಮಾದರಿ ಹೇಗಿತ್ತೆಂಬುದನ್ನು ಕಾಣಬಹುದು. ಇವುಗಳಿಗೆ ವಿಶಿಷ್ಟ ಜ್ಯಾಮಿತಿಯ ಆಕಾರಗಳಿರುತ್ತಿದ್ದವು. ಫುಲ್‍ಕಾರಿ ಕಸೂತಿಯನ್ನು ಎಳೆತುಂಬುವ ಹೊಲಿಗೆಗಳಿಗಾಗಿ ಉಪಯೋಗಿಸುತ್ತಿದ್ದರು. ಇವುಗಳಲ್ಲಿ ಹೊಲಿಗೆಗಳು ಬಹಳ ಚಿಕ್ಕವಾಗಿದ್ದು, ಹತ್ತಿರಹತ್ತಿರವಿರುತ್ತಿದ್ದುವು ; ಹೊಲಿಗೆಯ ಮನೆಗಳನ್ನೋ ಸಾಲುಗಳನ್ನೋ ಎಣಿಕೆ ಮಾಡಿ ಅವುಗಳ ನಿರ್ದುಷ್ಟತೆಯನ್ನು ಪರೀಕ್ಷಿಸಲಾಗುತ್ತಿತ್ತು. ಅಮೆರಿಕನ್ ಮತ್ತು ಐರೋಪ್ಯ ಮಾದರಿಗಳನ್ನು ಅನುಸರಿಸಿ ಒಂದು ರೀತಿಯ ಕತ್ತರಿ ಹೊಲಿಗೆ ಕೂಡ ಪ್ರಚಲಿತವಾಗಿತ್ತು. ಇವುಗಳಲ್ಲಿ ಜಮದಾನಿ, ಚಿಕನ್ ಮತ್ತು ಕಸೀದಾ ಮಾದರಿಗಳು ಪ್ರಮುಖವಾಗಿದ್ದವು. ಕಸೀದಾ ಮಾದರಿಯಲ್ಲಿ ಚಿನ್ನದ ಬಣ್ಣದ ರೇಷ್ಮೆಯನ್ನು ಎಳೆತುಂಬಲೂ ಸಾಟಿನ್ ಹೊಲಿಗೆಗಳಿಗಾಗಿಯೂ ಉಪಯೋಗಿಸುತ್ತಿದ್ದರು. ಸಾಂಪ್ರದಾಯಿಕ ಸಮಾರಂಭಗಳಲ್ಲಿ ಚಿನ್ನಬೆಳ್ಳಿಗಳಿಂದ ಕಸೂತಿ ಮಾಡಲಾದ ವಸ್ತ್ರಗಳನ್ನು ಬಹುತೇಕ ಉಪಯೋಗಿಸುತ್ತಿದ್ದರು. ಜೊತೆಗೆ ಮಖಮಲ್ಲು ಮೊದಲಾದ ವಸ್ತ್ರಗಳನ್ನು ಉಪಯೋಗಿಸಿದಾಗ ಅವುಗಳ ಸೌಂದರ್ಯ ಇನ್ನೂ ಹೆಚ್ಚುತ್ತಿತ್ತು.

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2009-02-06. Retrieved 2016-10-21.
  2. http://www.baapar.com/blog/types-of-kashmiri-embroidery/


"https://kn.wikipedia.org/w/index.php?title=ಕಸೂತಿ&oldid=1060617" ಇಂದ ಪಡೆಯಲ್ಪಟ್ಟಿದೆ