ಕಸಿಮಾಡುವಿಕೆ (ಸಸ್ಯಶಾಸ್ತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎರಡು ಬೇರೆ ಬೇರೆ ಸಸ್ಯಗಳ ಭಾಗಗಳನ್ನು ಒಗ್ಗೂಡಿಸಿ ಒಂದಾಗಿ ಬೆಳೆಸುವ ಒಂದು ಕ್ರಮ (ಗ್ರಾಫ್ಟಿಂಗ್). ಅಬೀಜೋತ್ಪಾದನೆಯಂತೆಯೇ ಈ ವಿಧಾನದಿಂದಲೂ ಸಸ್ಯಗಳನ್ನು ವೃದ್ಧಿ ಮಾಡಬಹುದಾದರೂ ಇವೆರಡು ಕ್ರಮಗಳಲ್ಲೂ ಅನೇಕ ವ್ಯತ್ಯಾಸಗಳುಂಟು. (ನೋಡಿ- ಅಬೀಜೋತ್ಪಾದನೆ) ಒಂದು ಸಸ್ಯದ ಭಾಗ ಬೇರು ಬಿಟ್ಟು ಸ್ವಂತವಾಗಿ ಬೆಳೆಯುತ್ತಿರುವ ಸಸ್ಯದ ಕಾಂಡ, ಬೊಡ್ಡೆ ಅಥವಾ ತಾಳು. ಇದನ್ನು ಕಸಿತಾಳು (ಸ್ಟಾಕ್) ಎನ್ನುತ್ತಾರೆ. ಇದರ ಮೇಲೆ ಕೂರಿಸಿ ಸೇರಿಸುವ ಭಾಗ ಸ್ವಂತವಾಗಿ ಬೆಳೆಯುತ್ತಿರುವ ಉತ್ತಮ ಗುಣಗಳುಳ್ಳ ಮತ್ತೊಂದು ಸಸ್ಯದ್ದು. ಈ ಭಾಗ ಕೊಂಬೆ, ಕುಡಿ, ಕೊನೆ, ಕಣ್ಣು ಅಥವಾ ಅಂಟಾಗಿರಬಹುದು. ಈ ಭಾಗವನ್ನು ಕಸಿ ಕೊಂಬೆ (ಸೈಯನ್) ಎನ್ನುತ್ತಾರೆ. ತಾಳು ಮತ್ತು ಕಸಿಕೊಂಬೆ ಸರಿಕೂಡಿದರೆ, ಕಸಿ ಕೊಂಬೆಯಿಂದ ಹೊರಡುವ ರೆಂಬೆ, ಎಲೆ, ಹೂ ಇತ್ಯಾದಿ ಅದರ ತಳಿಯನ್ನೇ ಹೋಲುತ್ತವೆ.  ತಾಳಿನ ಕೆಲಸ ಬೇರುಗಳಿಂದ ನೀರು ಹಾಗೂ ಲವಣಗಳನ್ನು ಕಸಿಕೊಂಬೆಗೆ ಒದಗಿಸುವುದು ಮತ್ತು ಅದಕ್ಕೆ ಆಸರೆಯಾಗಿರುವುದು ಅಷ್ಟೆ. ತಾಳು ಮತ್ತು ಕಸಿಕೊಂಬೆ ಪರಸ್ಪರ ವಿರೋಧವಾಗಿರಬಾರದು ಅಂದರೆ ಬೇರೆ ಬೇರೆ ಜಾತಿಯವಾಗಿರಬಾರದು. ಆದರೆ, ಅಪೂರ್ವವಾಗಿ ಒಂದೇ ಕುಟುಂಬದ ಎರಡು ಜಾತಿಗಳನ್ನು ಕೂಡಿಸುವುದೂ ಉಂಟು.

ಕಸಿ ಕಟ್ಟುವ ಉದ್ದೇಶ ಮತ್ತು ಉಪಯೋಗಗಳು: 1 ಇಷ್ಟಪಟ್ಟ ಲಕ್ಷಣಗಳುಳ್ಳ ಸಸ್ಯಗಳ ಪ್ರಭೇದಗಳನ್ನು ಉಳಿಸಿಡುವುದು ಮತ್ತು ಹೆಚ್ಚಿಸುವುದು. 2 ತುಂಡು ಹಾಕಿಯೋ ಇತರ ಬಗೆಯ ಅಬೀಜೋತ್ಪಾದನ ಕ್ರಮದಿಂದಲೋ ಸಸ್ಯಗಳನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಾಗದಿದ್ದರೆ ಕಸಿಕಟ್ಟಿ ಹಾಗೆ ಮಾಡಿಕೊಳ್ಳಬಹುದು. 3 ಒಂದು ಪ್ರದೇಶದ ಹವೆ ಮತ್ತು ಮಣ್ಣು ಪ್ರತಿಕೂಲವಾಗಿ ಸಸ್ಯದ ತಳಿಗಳು ಚೆನ್ನಾಗಿ ಬೆಳೆಯದಿದ್ದರೆ, ಆ ಪ್ರತಿಕೂಲಗಳನ್ನು ಎದುರಿಸಿ ರೋಗರುಜಿನಗಳಿಗೆ ಈಡಾಗದಂಥ ಸ್ಥಳೀಯ ಬುಡಗಳ ಮೇಲೆ ಈ ತಳಿಗಳನ್ನು ಕಸಿ ಕಟ್ಟಿ ಬೆಳೆಸಿಕೊಳ್ಳಬಹುದು. ಉದಾಹರಣೆಗೆ ಕಿತ್ತಳೆ (ಕೊಡಗು ಅಥವಾ ನಾಗಪುರಿ ಕಿತ್ತಳೆ) ಗಿಡವನ್ನು ಅದರ ಸ್ವಂತ ಬೇರಿನ ತಾಳಿನ ಮೇಲೆಯೇ ಬೆಳೆಯಲು ಬಿಟ್ಟಲ್ಲಿ ಅದು ಡೈ ಬ್ಯಾಕ್ ಎಂಬ ರೋಗಕ್ಕೆ ತುತ್ತಾಗುತ್ತದೆ. ಅದರ ಬದಲು ಗಜನಿಂಬೆ ತಾಳಿನ ಮೇಲೆ ಕಸಿ ಕಟ್ಟಿದಲ್ಲಿ ಪ್ರವರ್ಧಮಾನಕ್ಕೆ ಬರುತ್ತದೆ.  ನಿರ್ಬಲ ತಳಿ ಅಥವಾ ವಂಶಗಳನ್ನು ಬಲವಾದ ತಾಳಿನ ಮೇಲೆ ಕಸಿ ಹಾಕಿದರೆ ಇವು ಕೂಡ ಬಲಗೊಳ್ಳುತ್ತವೆ. 4 ಶೀಘ್ರವಾಗಿ ಫಲ ದೊರಕಿಸಿಕೊಳ್ಳಲು ಕಸಿ ಹಾಕುತ್ತಾರೆ. ಉದಾಹರಣೆಗೆ ಸಪೋಟ; ಇದನ್ನು ಬೀಜದಿಂದಲೇ ಬೆಳೆಸಿದರೆ ಫಲಕ್ಕಾಗಿ ಸುಮಾರು 8-10 ವರ್ಷ ಕಾಯಬೇಕು. ಅದೇ ಕಸಿ ಕಟ್ಟಿದ ಸಪೋಟ 2-3 ವರ್ಷಗಳಲ್ಲಿ ಫಲ ಕೊಡುತ್ತದೆ. 5 ಸಾಮಾನ್ಯವಾಗಿ ತಾಳಿನ ಗುಣ ಕಸಿಕೊಂಬೆಗೂ ಕಸಿಕೊಂಬೆಯ ಗುಣ ತಾಳಿಗೂ ವರ್ಗವಾಗುವುದಿಲ್ಲ. ಎರಡೂ ಒಟ್ಟಿಗೆ ಬೆಳೆದರೂ ತಮ್ಮ ಪ್ರತ್ಯೇಕ ಗುಣಗಳನ್ನೇ ಉಳಿಸಿಕೊಳ್ಳುತ್ತವೆ. ಆದರೆ ಕೆಲವು ಸಸ್ಯಗಳಲ್ಲಿ ತಾಳಿನ ಪ್ರಭಾವ ಕಸಿಕೊಂಬೆಯ ಮೇಲೆ ಕಾಣಬರುವುದುಂಟು. ಉದಾಹರಣೆಗೆ ಗುಜ್ಜು, ಚಿಲಕ ಒಡೆಯುವುದು (ಪ್ರೊಲಿಫೆರೇಶನ್) ಮುಂತಾದುವು. 6 ಕೆಲವು ವೇಳೆ ಗಾಯದಿಂದ ಎರಡಾಗಿರುವ ಸಸ್ಯಭಾಗಗಳನ್ನು ಕಸಿ ಕಟ್ಟಿ ಒಗ್ಗೂಡಿಸಬಹುದು. ಇದನ್ನು ಸೇತುವೆ ಕಸಿ (ಬ್ರಿಜ್ ಗ್ರಾಫ್ಟಿಂಗ್) ಎನ್ನುತ್ತಾರೆ.

ಕಸಿ ಕಟ್ಟುವ ಕ್ರಮಗಳನ್ನು ಸ್ಥೂಲವಾಗಿ ಎರಡು ವಿಧಗಳಾಗಿ ವರ್ಗಮಾಡುತ್ತಾರೆ. ಕಸಿಕೊಂಬೆಯ ಕಸಿ (ಗ್ರಾಫ್ಟಿಂಗ್), ಕಣ್ಣು ಕಸಿ (ಬಡ್ಡಿಂಗ್).