ಕಳಿಂಗ ಯುದ್ಧ
ಕಳಿಂಗ ಯುದ್ಧವು ಕ್ರಿ.ಪೂ.261 ರಲ್ಲಿ ಮೌರ್ಯ ಸಾಮ್ರಾಜ್ಯದ ಸಾಮ್ರಾಟ್ ಅಶೋಕನಿಗೂ ಕಳಿಂಗ ದೇಶದ ರಾಜ ಶುದ್ಧಧರ್ಮನಿಗು ನಡೆದ ಯುದ್ಧ. ಇದು ಸಾಮ್ರಾಟ್ ಅಶೋಕನ ಕಿರೀಟಧಾರಣೆಯ ತರುವಾಯದ ಎಂಟನೇ ವರ್ಷದಲ್ಲಿ ನಡೆದ ಗಮನಾರ್ಹವಾದ ಘಟನೆ. ಅಶೋಕನ ಏಕೈಕ ಪ್ರಮುಖ ಯುದ್ಧವಾದ ಈ ಯುದ್ದ, ಅಪಾರ ಸಾವು ನೋವುಗಳಿಗೆ ಕಾರಣವಾಗಿ ಇತಿಹಾಸದಲ್ಲಿಯೇ ಅತ್ಯಂತ ಘೋರವಾದ ಯುದ್ಧಗಳಲ್ಲಿ ಒಂದಾಗಿದೆ. ಅಶೋಕನು ರ್ಕಿ.ಪೂ.೨೬೧ರಲ್ಲಿ ಕಳಿಂಗ ರಾಜ್ಯದ ಮೇಲೆ ದಂಡೆತ್ತಿ ಹೋದನು. ಅಶೋಕನ ೧೩ನೇ ಶಿಲಾಶಾಸನದ ಆಧಾರದ ಮೇಲೆ ಕಳಿಂಗ ರಾಜ್ಯ ಸ್ವತಂತ್ರ್ಯವಾಗಿತ್ತು, ಮೌರ್ಯ ಸಾಮ್ರಾಜ್ಯಕ್ಕೆ ಸೇರಿರಲಿಲ್ಲಾ ಎಂಬುದಾಗಿ ತಿಳಿದು ಬರುತ್ತದೆ. ಕಳಿಂಗದ ಯೋಧರು ತಮ್ಮ ಸ್ವಾತಂತ್ರ್ಯವನ್ನು ಮೌರ್ಯರ ಆಕ್ರಮಣದಿಂದ ಕಾಪಾಡಿಕೊಳ್ಳಲು ವೀರಾವೇಶದಿಂದ ಹೋರಾಡಿದರೂ, ಅಂತಿಮವಾಗಿ ಸಂಖ್ಯೇಯಲ್ಲಿ ಮೀರಿದ್ದ ಅಶೋಕನ ಸೈನ್ಯವೇ ಯುದ್ಧವನ್ನು ಗೆದ್ದಿತು. ಈ ಯುದ್ಧದ ಅಪಾರ ರಕ್ತಪಾತವು ಅಶೋಕನ ಮನಃಪರಿವರ್ತನೆಗೆ ಕಾರಣವಾಗಿ ಅವನನ್ನು ಬೌದ್ಧಧರ್ಮವನ್ನು ಸ್ವೀಕರಿಸುವಂತೆ ಮಾಡಿ ಮುಂದೆ ಅಹಿಂಸೆಯ ಹಾದಿಯಲ್ಲಿ ಸಾಗುವಂತೆ ಮಾಡಿತು.[೧]
ಹಿನ್ನಲೆ
[ಬದಲಾಯಿಸಿ]ಕಳಿಂಗದ ಆಕ್ರಮಣ ರಾಜಕೀಯ ಮತ್ತು ಆರ್ಥಿಕ ಎರಡೂ ಕಾರಣಗಳಿವೆ.ಕಳಿಂಗ ರಾಜ್ಯವು ಪ್ರಸಿದ್ಧ ಮತ್ತು ಶ್ರೀಮಂತ ಪ್ರದೇಶವಾಗಿತ್ತು. ಅದು ಕಲೆಗಳಲ್ಲಿ ನುರಿತ ಜನತೆಯನ್ನು ಒಳಗೊಂಡಿತ್ತು ಎಂದು ಹೇಳಲಾಗುತ್ತದೆ. ಕಳಿಂಗದ ಜನರು ಕಡಲಿನಾಚೆಯ ದೇಶಗಳೊಂದಿಗೆ ವ್ಯಾಪಾರ ಮಾಡಿದವರಲ್ಲಿ ಭಾರತದಲ್ಲಿಯೇ ಮೊದಲನೆಯವರು. ಅಲ್ಲಿನ ಜನತೆ ಮುಕ್ತವಾದ ಸಂಸ್ಕೃತಿ ಮತ್ತು ಸಮಾನ ನಾಗರಿಕ ಸಂಹಿತೆ ಪಾಲಿಸುತ್ತಿದ್ದರು.[೨] ಅಶೋಕನ ತಂದೆ ಬಿಂದುಸಾರನ ಕಾಲದಿಂದಲೂ ಮಗಧ ಮೂಲದ ಮೌರ್ಯ ಸಾಮ್ರಾಜ್ಯವು ಪ್ರಾಂತೀಯ ವಿಸ್ತರಣೆ ನೀತಿ ಅನುಸರಿಸುತ್ತಿತ್ತು. ನಂದರ ಕಾಲದಲ್ಲಿ ಮಗಧದ ಅಧೀನದಲ್ಲಿದ್ದ ಕಳಿಂಗ ಪ್ರದೇಶವು ಮೌರ್ಯರ ಆಳ್ವಿಕೆಯ ಆರಂಭದಲ್ಲಿ ಸ್ವಾತಂತ್ರ್ಯವನ್ನು ಪಡೆಯಿತು.[೩] ಮಗಧದ ಸಾಮ್ರಾಟರಿಗೆ ಇದು ಒಂದು ದೊಡ್ಡ ಹಿನ್ನಡೆ ಎಂದು ಪರಿಗಣಿಸಲಾಗಿತ್ತು. ಇದು ಮೌರ್ಯರು ತಮ್ಮ ರಾಜಕೀಯ ಪ್ರತಿಷ್ಠೆಗೆ ಧಕ್ಕೆಯೆಂದು ಪರಿಗಣಿಸಿದರು. ಅವರಿಗೆ ಕಳಿಂಗದ ಪರಾಧೀನ ಪೂರ್ಣಗೊಳಿಸುವುದು ಕಡ್ಡಾಯವಾಗಿ ತೋರಿತು. ಹೀಗಾಗಿ ಅಶೋಕನು ತನ್ನ ಸಿಂಹಾಸನ ಭದ್ರ ಪಡಿಸಿದ ನಂತರ ಕಳಿಂಗ ರಾಜ್ಯದ ಮೇಲೆ ದಂಡೆತ್ತಿ ಹೋದನು.[೨]
ಯುದ್ಧ
[ಬದಲಾಯಿಸಿ]ಈ ಯುದ್ಧವು ಅಶೋಕನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ ಸುಮಾರು ಕ್ರಿ.ಪೂ. ೨೬೧ರಲ್ಲಿ ಜರುಗಿತು. ಈ ಹಿಂದೆ ಅಶೋಕನ ತಾತನಾದ ಚಂದ್ರಗುಪ್ತ ಮೌರ್ಯನು ಕಳಿಂಗವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದನು, ಆದರೆ ಅವನನ್ನು ಹಿಮ್ಮೆಟ್ಟಿಸಲಾಗಿತ್ತು. ಅಶೋಕನಿಗೂ ಕೇವಲ ಒಂದು ಘೋರ ಯುದ್ಧದ ನಂತರವೇ ವಿಜಯ ದೊರೆಯಿತು.
ಅಶೋಕನದ್ದು ೪ ಲಕ್ಷ ಯೋಧರ ಸೇನೆಯಾದರೆ, ಕಳಿಂಗ ದೇಶದಲ್ಲಿ ೬೦,೦೦೦ ಪದಾತಿಗಳು, ೧೦,೦೦೦ ಅಶ್ವದಳ ಹಾಗು ೭೦೦ ಗಜಸೇನೆಗಳಿತ್ತು.[೪] ಈ ಸಮರದಲ್ಲಿ ಸುಮಾರು ೧,೫೦,೦೦೦ ಕಳಿಂಗದ ಯೋಧರು ಹಾಗೂ ೧,೦೦,೦೦೦ ಅಶೋಕನ ಯೋಧರು ಸಾವನ್ನಪ್ಪಿದರು.[೫][೬] ಇದರ ಪರಿಣಾಮವಾಗಿ ಯುದ್ಧ ಭೂಮಿಯ ಸಮೀಪದಲ್ಲಿ ಹರಿಯುವ ದಯಾ ನದಿಯ ಬಣ್ಣ ಸಾವಿಗೀಡದವರ ರಕ್ತದಿಂದ ಕೆಂಪಾಗಿ ಮಾರ್ಪಟ್ಟಿತು ಎಂದು ಹೇಳಲಾಗುತ್ತದೆ.
ಪರಿಣಾಮ
[ಬದಲಾಯಿಸಿ]ಯುದ್ಧದ ನಂತರ ಸಂಪೂರ್ಣ ಕಳಿಂಗವನ್ನು ಸಂಪೂರ್ಣ ಲೂಟಿ ಮತ್ತು ನಾಶ ಮಾಡಲಾಯಿತು. ಯುದ್ಧವು ಸುಮಾರು ೧ ಲಕ್ಷ ಜನರ ಸಾವು ಮತ್ತು ಒಂದೂವರೆ ಲಕ್ಷ ಜನರ ಗಡಿಪಾರಾಗಲು ಕಾರಣವಾಯಿತು. ಈ ಕ್ರೌರ್ಯದಿಂದ ನೊಂದ ಅಶೋಕನು ಯುದ್ಧದ ಬಗೆಗಿನ ತನ್ನ ನಿಲುವನ್ನು ಬದಲಾಯಿಸಿ ಮುಂದೆಂದೂ ಸಾಮ್ರಾಜ್ಯ ವಿಸ್ತರಣೆಗಾಗಿ ಯುದ್ಧವನ್ನು ಮಾಡದಿರಲು ಪಣ ತೊಟ್ಟನು. ನಂತರ ಬೌದ್ಧಧರ್ಮ ಸ್ವೀಕರಿಸಿ ತನ್ನ ಅಧಿಕಾರವನ್ನೆಲ್ಲ ಈ ಹೊಸಧರ್ಮದ ಪ್ರಚಾರಕ್ಕಾಗಿ ಬಳಸಿದನು.
ಕಳಿಂಗ ಯುದ್ಧದ ಬಗೆಗಿನ ಅಶೋಕನ ಪ್ರತಿಕ್ರಿಯೆಯನ್ನು ಅವನ ಹದಿಮೂರನೆ ಶಾಸನದಲ್ಲಿ ದಾಖಲಿಸಲಾಗಿದೆ. ಕಳಿಂಗವನ್ನು ವಶಪಡಿಸಿದ ನಂತರ ಅಶೋಕನು ಸೇನಾ ವಿಸ್ತರಣೆಯನ್ನು ನಿಲ್ಲಿಸಿ, ಮುಂದಿನ ೪೦ ವರ್ಷಗಳಿಗೂ ಹೆಚ್ಚು ಕಾಲ ಶಾಂತಿ, ಸೌಹಾರ್ದತೆ ಮತ್ತು ಸಮೃದ್ಧಿಯಿಂದ ತನ್ನ ಸಾಮ್ರಾಜ್ಯವನ್ನು ಆಳಿದನು.
ಶಿಲಾ ಶಾಸನ ೧೩ "ದೇವರುಗಳಿಗೆ ಪ್ರಿಯನಾದ, ರಾಜ ಪ್ರಿದರ್ಶಿ, ಕಳಿಂಗ ದೇಶವನ್ನು ಕಿರೀಟಧಾರಣೆಯ ತರುವಾಯದ ಎಂಟನೇ ವರ್ಷದಲ್ಲಿ ವಶಪಡಿಸಿದನು. ಸುಮಾರು ಒಂದೂವರೆ ಲಕ್ಷ ಜನರ ಗಡಿಪಾರಾದರು, ೧ ಲಕ್ಷಕ್ಕು ಹೆಚ್ಚು ಜನರು ಸಾವನ್ನಪಿದರು(ನಾನಾ ಕಾರಣಗಳಿಂದ). ಕಳಿಂಗರನ್ನು ವಶಪಡಿಸಿಕೊಂಡ ನಂತರ ದೇವರುಗಳಿಗೆ ಪ್ರಿಯನಾದವನು, ತನ್ನಲ್ಲಿ ಧರ್ಮದೆಡೆಗೆ, ಧರ್ಮದ ಪ್ರೇಮದೆಡೆಗೆ ಮತ್ತು ಧರ್ಮದಲ್ಲಿ ಪಾಠದೆಡೆಗೆ ಬಲವಾದ ಓರೆಯನ್ನು ಕಂಡನು. ಈಗ ದೇವರುಗಳಿಗೆ ಪ್ರಿಯನಾದವನು ಕಳಿಂಗವನ್ನು ವಶಪಡಿಸಿಕೊಂಡಿದ್ದಕ್ಕೆ ತೀವ್ರ ಪಶ್ಚಾತ್ತಾಪ ಪಡುತ್ತಿದ್ದಾನೆ"[೬]
ಉಲ್ಲೇಖಗಳು
[ಬದಲಾಯಿಸಿ]- ↑ "ಒಡಿಶಾದ ಇತಿಹಾಸ". Archived from the original on 2013-04-12. Retrieved 2015-09-22.
- ↑ ೨.೦ ೨.೧ Military History of Orissa. Cosmo Publications, New Delhi, p10 ISBN 81-7020-282-5
- ↑ Raychaudhuri, H. C.; Mukherjee, B. N. 1996. Political History of Ancient India: From the Accession of Parikshit to the Extinction of the Gupta Dynasty. Oxford University Press, pp. 204-209, pp. 270-271
- ↑ Pliny the Elder (77 AD), Natural History VI, 22.1, quoting Megasthenes (3rd century BC), Indika, Fragm. LVI.
- ↑ Radhakumud Mookerji (1988). Chandragupta Maurya and His Times. Motilal Banarsidass Publ. ISBN 81-208-0405-8.
- ↑ ೬.೦ ೬.೧ S. Dhammika, ಅಶೋಕನ ಶಾಸನಗಳು, Kandy, Buddhist Publications Society (1994) ISBN ISBN 955-24-0104-6 (on line)