ಅಶೋಕನ ಶಾಸನಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದವು. ಎಲ್ಲರಿಗೂ ಅರ್ಥವಾಗುವಂತೆ ಅತಿ ಸರಳವಾದ ಭಾಷೆಯಲ್ಲಿ ಧರ್ಮೋಪದೇಶವನ್ನು ಕಲ್ಲುಬಂಡೆಗಳ ಮೇಲೂ ಶಿಲಾಸ್ತಂಭಗಳ ಮೇಲೂ ಗವಿಗಳ ಗೋಡೆಯ ಮೇಲೂ ಆತ ಕೆತ್ತಿಸಿದ್ದಾನೆ. ಈ ಶಾಸನಗಳು ಅಶೋಕ ಚಕ್ರವರ್ತಿಯ ಸ್ವಂತ ಮಾತುಗಳಾಗಿ ಪಾಲಿ ಭಾಷೆಯಲ್ಲಿ, ಅತಿ ಪ್ರಧಾನವಾದ ಮತ್ತು ಜನರ ಕಣ್ಣಿಗೆ ಸುಲಭವಾಗಿ ಗೋಚರಿಸುವ ಪ್ರದೇಶಗಳಲ್ಲಿ ಕೆತ್ತಲ್ಪಟ್ಟಿವೆ. ಅವುಗಳಲ್ಲಿ ಧರ್ಮದ ಸ್ವರೂಪವೂ ಜನರ ನಡವಳಿಕೆಗಾಗಿ ನೀತಿನಿಯಮಗಳೂ ಇವೆ. ಈ ಶಾಸನಗಳು ಯಾವ ನಿಯತವಾದ ಕಾಲಮಾನವನ್ನೂ ಸೂಚಿಸದೆ ಅಶೋಕನ ಆಳ್ವಿಕೆಯ ವರ್ಷಗಳ ಗಣನೆಯನ್ನು ಮಾತ್ರ ಹೇಳುತ್ತವೆ. ಭಾರತದ ವಾಯವ್ಯದಲ್ಲಿ ಹಿಂದೂಕುಷ್ ಪರ್ವತದಿಂದ ಹಿಡಿದು ಆಫ್ಘಾನಿಸ್ತಾನದ ಕೆಲವು ಭಾಗಗಳು, ಬಲೂಚಿಸ್ತಾನ, ಸಿಂಧೂದೇಶ-ಇವುಗಳನ್ನೊಳಗೊಂಡು ಪುರ್ವದಲ್ಲಿ ಅಸ್ಸಾಂ ಅಥವಾ ಕಾಮರೂಪದವರೆಗೂ ಹರಡಿರುವ ಉತ್ತರ ಹಿಂದುಸ್ತಾನ ಮತ್ತು ಹಿಮಾಲಯ ಪರ್ವತದಿಂದ ಹಿಡಿದು ಮೈಸೂರು ದೇಶದ ಮೊಳಕಾಲ್ಮೂರುವರೆಗಿರುವ ಪುರ್ವಪಶ್ಚಿಮ ಸಮುದ್ರಗಳ ಮಧ್ಯಪ್ರದೇಶಗಳಲ್ಲಿ ಅಲ್ಲಲ್ಲೇ ಒಟ್ಟೊಟ್ಟಾಗಿ ಅಥವಾ ಬಿಡಿಬಿಡಿಯಾಗಿ ಈ ಶಿಲಾಲೇಖನಗಳು ದೊರೆತಿವೆ. ಕಾಶ್ಮೀರ, ನೇಪಾಲ, ಕರ್ನಾಟಕ ಮೊದಲಾದ ಅವನ ಸೀಮಾಂತ ದೇಶಗಳಲ್ಲಿ ಶಾಸನಗಳು ದೊರೆತಿವೆ. ಇದುವರೆಗೂ ಅಶೋಕ ಬರೆಸಿರುವ ಒಂದು ನೂರ ಐವತ್ತೈದು ಶಿಲಾಲೇಖಗಳನ್ನು ಕಂಡುಹಿಡಿದು ಅವುಗಳನ್ನು ಪ್ರಕಟಿಸಲಾಗಿದೆ. 1956ರಲ್ಲಿ ಮುಂಬಯಿ ಪ್ರಾಂತ್ಯದಲ್ಲಿ ಒಂದು ಶಾಸನ ಸಿಕ್ಕಿತು. 1962ರಲ್ಲಿ ಒಂದು ಹೊಸ ಶಾಸನ ದೊರೆತುದಾಗಿ ವರದಿಯಾಗಿತ್ತು. ಕರ್ನಾಟಕದ ಮಸ್ಕಿ, ಕೊಪ್ಪಳ, ಬ್ರಹ್ಮಗಿರಿ, ಸಿದ್ದಾಪುರ ಮತ್ತು ಜಟಿಂಗರಾಮೇಶ್ವರಗಳಲ್ಲೂ, 1977ರಲ್ಲಿ ಉದೆಗೊಳಂ (ಶಿರಗುಪ್ಪ, ತಾಲ್ಲೂಕು ಬಳ್ಳಾರಿ, ಜಿಲ್ಲೆ) ಮತ್ತು ನಿಟ್ಟೂರಿನಲ್ಲಿ ಎರಡೆರಡು, 1989-90ರಲ್ಲಿ ಸನ್ನತಿಯಲ್ಲಿ ಕಳಿಂದ ಶಾಸನಗಳ ಪ್ರತಿ ಮತ್ತು 13 ಹಾಗೂ 14 ಹಿರಿ ಬಂಡೆ ಶಾಸನಗಳಿವೆ. 1. ಎರಡು ಗೌಣ ಶಿಲಾಶಾಸನಗಳು (ಪ್ರ.ಶ.ಪೂ. 257). ಮೊದಲನೆಯದರಲ್ಲಿ ಅಶೋಕನ ವೈಯಕ್ತಿಕ ಚರಿತ್ರೆಯೂ ಎರಡನೆಯದರಲ್ಲಿ ಧರ್ಮವೂ ಸಂಗ್ರಹವಾಗಿ ಪ್ರಸ್ತಾಪಿಸಲ್ಪಟ್ಟಿವೆ. ಈ ಶಾಸನಗಳು ದೊರಕುವುದು ಸಹಸ್ರಾಂ (ಬಿಹಾರ್), ರೂಪನಾಥ್ (ಮಧ್ಯಪ್ರದೇಶ), ಬೈರಾಟ್ (ರಾಜಪುಟಾಣ), ಬ್ರಹ್ಮಗಿರಿ, ಸಿದ್ಧಾಪುರ, ಜಟಿಂಗರಾಮೇಶ್ವರ (ಚಿತ್ರದುರ್ಗ), ಮಸ್ಕಿ (ರಾಯಚೂರು), ಯೆರ್ರಗುಡಿ (ಕರ್ನೂಲು), ಕೊಪ್ಪಳ (ರಾಯಚೂರು)ಗಳಲ್ಲಿ. ಮಸ್ಕಿಶಾಸನವೊಂದೇ ಅಶೋಕನ ಹೆಸರನ್ನು ಹೇಳುತ್ತದೆ. ಇತರ ಶಾಸನಗಳಲ್ಲಿ ಅವನ ಹೆಸರು ಪ್ರಿಯದರ್ಶಿಯೆಂದೇ ಇದೆ.

2. ಪಂಗೊರರಿಯ ಶಾಸನ : 1975-76ರಲ್ಲಿ ಮಧ್ಯಪ್ರದೇಶದ ನಿಹೋರ್ ಜಿಲ್ಲೆಯ ಪಂಗೊರರಿಯದಲ್ಲಿಯ ಅಶೋಕನ ಜಂಡೆಶಾಸನ. ಇಲ್ಲಿ ಎರಡು ಶಾಸನಗಳಿವೆ. ಇವು ಬ್ರಾಹ್ಮಿಲಿಪಿ ಮತ್ತು ಪ್ರಾಕೃತ ಭಾಷೆಯಲ್ಲಿವೆ. ಮೊದಲನೆಯ ಶಾಸನದಲ್ಲಿ ಮಹಾರಾಜ ಪಿಯದಸಿ (ಪ್ರಿಯದರ್ಶಿ), ಕುಮಾರ (ರಾಜಕುಮಾರ) ಸಂವ. ಮನೆಯ ದೇಸ (ಮಧ್ಯಪ್ರದೇಶ) ದಲ್ಲಿರುವ ಉ(ಬ) ಪುನಿತ ವಿಹಾರಕ್ಕೆ ಯಾತ್ರೆ ಹೋಗುವಾಗ ಧಾರ್ಮಿಕ ಸಂದೇಶವನ್ನು ಮಗನ ಮೂಲಕ ಕಳುಹಿಸುತ್ತಿರುವುದಾಗಿದೆ. ಪ್ರಾರಂಭದಲ್ಲಿ 256 ಎಂಬ ಸಂಖ್ಯೆ ಇದೆ. ಎರಡನೆಯದು ಕಿರುಬಂಡೆಶಾಸನ. ಇದರಲ್ಲಿ ದೇವನಾಂಪಿಯ ಎಂಬ ಉಲ್ಲೇಖವಿದೆ. 3. ಭಾಬ್ರು ಶಾಸನ : ಇಲ್ಲಿ ಬೌದ್ಧ ಗ್ರಂಥಗಳಿಂದ ವಿಪುಲವಾಗಿ ಉದಾಹರಿಸಿರುವುದ ರಿಂದ ಅಶೋಕ ಬೌದ್ಧನಾದನೆಂಬುದಕ್ಕೆ ಆಧಾರವಿದೆ. ಕಾಲ ಲಘು ಶಾಸನಗಳದ್ದೇ. 4. ಹದಿನಾಲ್ಕು ಶಿಲಾಶಾಸನಗಳು : ಇವು ಅಶೋಕನ ರಾಜನೀತಿಯನ್ನೂ ನೀತಿ ಮಾರ್ಗವನ್ನೂ ವಿವರಿಸುತ್ತವೆ. ಕಾಲ ಪ್ರ.ಶ.ಪೂ.257. ಶಾಸನಗಳ ಪ್ರತಿಗಳು ಪೇಷಾವರ್ ಪ್ರಾಂತ್ಯದ ಷಾಬಾಸ್ಗಡಿ, ಮನ್ಸೇರಾ (ವಾಯವ್ಯಗಡಿ), ಕಾಲ್ಸಿ (ಡೆಹ್ರಾಡೂನ್), ಗಿರ್ನಾರ್ (ಸೌರಾಷ್ಟ್ರ), ಸೋಪಾರ (ಮುಂಬಯಿ), ಧೌಳಿ (ಒರಿಸ್ಸ), ಜೌಗಡ (ಗಂಜಾಂ, ಒರಿಸ್ಸ), ಯರ್ರಗುಡಿ (ಆಂಧ್ರ)ಗಳಲ್ಲಿ ಸಿಕ್ಕಿವೆ. 5. ಕಳಿಂಗ ಶಾಸನಗಳು : ಕಳಿಂಗ ಯುದ್ಧವಾದ ಮೇಲೆ ಅಶೋಕ ಅನುಸರಿಸಿದ ಆಡಳಿತವ್ಯವಸ್ಥೆಯನ್ನು ವರ್ಣಿಸುತ್ತವೆ, ಗಡಿ ಪ್ರದೇಶದಲ್ಲಿ ವಾಸಿಸುವ ಜನರನ್ನು ಹೇಗೆ ನೋಡಿಕೊಳ್ಳಬೇಕೆಂದು ಸೂಚಿಸುತ್ತವೆ. ಇಲ್ಲಿನ ಎರಡು ಶಾಸನಗಳು, ಹನ್ನೆರಡು ಮತ್ತು ಹದಿಮೂರನೆಯ ಶಾಸನಗಳ ಆಜ್ಞೆಗಳ ಬದಲಾಗಿ ಕೆತ್ತಲ್ಪಟ್ಟಿವೆ. 6. ಬಿಹಾರ್ ಪ್ರಾಂತ್ಯದಲ್ಲಿರುವ ಬರಾಬರ್ ಬೆಟ್ಟದ ಗಡಿಗಳಲ್ಲಿನವು. ಗಯಾ ಪಟ್ಟಣಕ್ಕೆ 24ಕಿಮೀ ದೂರದಲ್ಲಿವೆ. ಇಲ್ಲಿ ಮೂರು ಶಾಸನಗಳಿವೆ. ಅಶೋಕ ಅಜೀವಿಕ ಸಾಧುಗಳಿಗೆ ದಾನ ಮಾಡಿದ ವಿಷಯವಿದೆ. ಕಾಲ ಪ್ರ.ಶ.ಪೂ. ಸು. 257-250. 7. ತೆರಾಯ್ ಸ್ತಂಭಶಾಸನಗಳು: ನೇಪಾಲದಲ್ಲಿವೆ. ಒಂದು ಬುದ್ಧನ ಜನ್ಮಸ್ಥಳವಾದ ರುಮಿಂಡೈ ಎಂಬಲ್ಲೂ ಮತ್ತೊಂದು ನಿಗ್ಲಿವ ಎಂಬಲ್ಲೂ ಇವೆ. ಕಾಲ ಸುಮಾರು ಪ್ರ.ಶ.ಪೂ. ಸು. 249. ಈ ಶಾಸನಗಳಲ್ಲಿ ಅಶೋಕ ಪ್ರಾಚೀನ ಬುದ್ಧರಿಗೆ ಭಕ್ತಿಯನ್ನು ಸಲ್ಲಿಸಿದ್ದಾನೆ. 8. ಏಳು ಸ್ತಂಭಶಿಲಾಶಾಸನಗಳು: ಕಾಲ ಪ್ರ.ಶ.ಪೂ. ಸು. 243-42. ಇವು ಶಿಲಾಶಾಸನಗಳ ಪರಿಶಿಷ್ಟ ಭಾಗಗಳಂತಿದ್ದು ಹಿಂದಿನ ಶಾಸನಗಳ ಬೋಧನೆಯನ್ನು ಒತ್ತಿ ಹೇಳುತ್ತವೆ. ಅತಿ ಮುಖ್ಯವಾದುವು ದೆಹಲಿ, ಅಲಹಾಬಾದ್, ತೌರಿಯ ಅರಾರಜ್, ಲೌರಿಯ ನಂದನಗಡ ಮತ್ತು ರಾಮಪುರ್ವಗಳಲ್ಲಿ ಇವೆ. ಉಳಿದವು ಇಂದಿನ ಬಿಹಾರದ ಚಂಪಾರಣ್ಯ ಪ್ರದೇಶಗಳಲ್ಲಿವೆ. 9. ನಾಲ್ಕೂ ಚಿಕ್ಕ ಶಿಲಾಸ್ತಂಭಶಾಸನಗಳು: ಕಾಲ ಪ್ರ.ಶ.ಪೂ. ಸು. 243-32. ಪ್ರತಿಗಳು ಅಲಹಾಬಾದ್, ಸಾಂಚಿ ಮತ್ತು ಸಾರಾನಾಥ್ ಪ್ರದೇಶಗಳಲ್ಲಿವೆ. ಸಾವಿರಾರು ವರ್ಷಗಳಿಂದಲೂ ಅಶೋಕನ ಧರ್ಮಸಂದೇಶಗಳು ಶಿಲೆಯಲ್ಲಿ ಅಚ್ಚಳಿಯದಂತೆ ನಿಂತಿವೆ. ಇವುಗಳಲ್ಲಿ ಮುಖ್ಯವಾಗಿ ಅಶೋಕ ಕಳಿಂಗದ ಯುದ್ಧವಾದ ಮೇಲೆ ಅನುಭವಿಸಿದ ದುಃಖವೂ ಪಶ್ಚಾತ್ತಾಪವೂ ವರ್ಣಿತವಾಗಿವೆ. ಕೆಲವು ಶಾಸನಗಳು ಸ್ಥಳೀಯ ಅಧಿಕಾರಿಗಳಿಗೆ ಬುದ್ಧಿವಾದ ರೂಪವಾಗಿ ಕರ್ತವ್ಯಪರಿಪಾಲನೆಯನ್ನು ತಿಳಿಸುತ್ತವೆ. ಆದಷ್ಟು ಹೆಚ್ಚು ಶಾಸನಗಳನ್ನು ಕೊರೆಯಿಸಬೇಕೆಂದು ಅಶೋಕನೇ ಆಜ್ಞೆ ಮಾಡಿದ್ದಾನೆ. ತನ್ನ ಮಾತುಗಳನ್ನು ಸರಿಯಾಗಿ ಎಲ್ಲಿ ಲಿಪಿಕಾರರು ಕೊರೆಯುವುದಿಲ್ಲವೋ ಎಂಬ ಶಂಕೆಯನ್ನೂ ವ್ಯಕ್ತಪಡಿಸಿದ್ದಾನೆ. 7ನೆಯ ಧರ್ಮಶಾಸನದಲ್ಲಿ ಧರ್ಮವು ಸೂರ್ಯಚಂದ್ರರಿರುವವರೆಗೂ ಶಾಶ್ವತವಾಗಿರಲೆಂದು ಹಾರೈಸಿದ್ದಾನೆ. 4ನೆಯ ಶಿಲಾಶಾಸನದಲ್ಲಿ ಮುಂದಿನ ಪೀಳಿಗೆಗೂ ಧರ್ಮದ ಆವಶ್ಯಕತೆ ಇದೆಯೆಂಬುದನ್ನು ಒತ್ತಿ ಹೇಳಿದ್ದಾನೆ. ನೆರೆಹೊರೆಯ ರಾಷ್ಟ್ರಗಳಲ್ಲೂ ಗಡಿನಾಡಿನ ಜನರಲ್ಲೂ ಐಕ್ಯ, ಶಾಂತಿಗಳನ್ನು ಘೋಷಿಸಿದ್ದಾನೆ. ಚಿಕ್ಕ ಶಿಲಾಶಾಸನಗಳಲ್ಲಿ ಸ್ವತಂತ್ರ ರಾಷ್ಟ್ರದ ಜನರೂ ಧರ್ಮಾಚರಣೆಯನ್ನು ಮಾಡಬೇಕೆಂದು ಹೇಳಿದ್ದಾನೆ. 13ನೆಯ ಶಾಸನದಲ್ಲಿ ಗೆದ್ದ ರಾಜ್ಯದ ಜನರಿಗೆ ಅಭಯವನ್ನು ಇತ್ತಿದ್ದಾನೆ. 12ನೆಯ ಶಾಸನದಲ್ಲಿ ಮತಸಹಿಷ್ಣುತೆಯನ್ನು ಸಾರಿ ಸಾರಾನಾಥ್ ಶಾಸನದಲ್ಲಿ ಭಿಕ್ಷುಗಳು ಪಕ್ಷಛಿದ್ರತೆಯನ್ನು ಬೆಳೆಸಬಾರದೆಂದು ಬುದ್ಧಿ ಹೇಳಿದ್ದಾನೆ. ಕೌಶಾಂಬಿ ಶಾಸನದಲ್ಲಿ ಮಹಾಮಾತ್ರರಿಗೆ ಚಕ್ರವರ್ತಿಯ ಬುದ್ಧಿವಾದವಿದೆ. ಭಾಬ್ರು ಶಾಸನದಲ್ಲಿ ವಿನಯಪಿಟಕದಿಂದ ಭಿಕ್ಷು ಭಿಕ್ಷುಣಿಯರಿಗೆ ಉಪದೇಶವಿದೆ. ಮಾದರಿಗಾಗಿ ಅಶೋಕನ ಒಂದು ಶಿಲಾಶಾಸನದ ಪುರ್ಣ ಅನುವಾದವನ್ನು ಇಲ್ಲಿ ಕೊಡಲಾಗಿದೆ. ಅಭಿಷಿಕ್ತನಾಗಿ ಎಂಟು ವರ್ಷಗಳಾದಾಗ ದೇವಾನಾಂಪ್ರಿಯ ಪ್ರಿಯದರ್ಶಿ ರಾಜ ಕಲಿಂಗವನ್ನು ಜಯಿಸಿದ. ಶತಸಹಸ್ರ ಜನರು ಅಲ್ಲಿ ಹತರಾದರು. ಈಗ ಕಲಿಂಗರು ಕೈವಶರಾದ ಅನಂತರ ದೇವಾನಾಂಪ್ರಿಯನ ಧರ್ಮಪಾಲನೆ ಧರ್ಮಕಾಮತೆ ಹಾಗೂ ಧರ್ಮಾನುಶಾಸ್ತ್ತಿ ತೀವ್ರವಾದುವು. ಕಲಿಂಗವನ್ನು ಜಯಿಸಿದ್ದಕ್ಕಾಗಿ ದೇವಾನಾಂಪ್ರಿಯ ಶೋಕಿಸುತ್ತಾನೆ. ಏಕೆಂದರೆ ಅದುವರೆಗೂ ಜಯಿಸದೆ ಇದ್ದ ಒಂದು ದೇಶವನ್ನು ಜಯಿಸುವಾಗ ಅಲ್ಲಿ ವಧೆಯೂ ಮರಣವೂ ಸೆರೆಯೂ ನಡೆಯುವುದರಿಂದ ದೇವಾನಾಂಪ್ರಿಯನಿಗೆ ಬಹಳ ವೇದನೆ ಉಂಟಾಗಿದೆ. ಅಲ್ಲದೆ, ಹಿರಿಯರ ಶುಶ್ರೂಷೆ ಮಾತಾಪಿತೃಗಳ ಶುಶ್ರೂಷೆ ಗುರುಶುಶ್ರೂಷೆ ಮಿತ್ರರು ಇಷ್ಟರು ಜ್ಞಾತಿಗಳು ದಾಸರು ಭೃತ್ಯರು ಇವರಲ್ಲಿ ಸಂಪ್ರತಿಪತ್ತಿ ದೃಢಭಕ್ತಿ ಮುಂತಾದುವುಗಳಿಂದ ಕೂಡಿ, ಅಲ್ಲಿ ವಾಸವಾಗಿದ್ದ ಬ್ರಾಹ್ಮಣರಿಗಾಗಲಿ ಶ್ರಮಣರಿಗಾಗಲಿ ಇತರ ಧರ್ಮದವರಿಗಾಗಲಿ ಗೃಹಸ್ಥರಿಗಾಗಲಿ ಗಾಯ ನೋವು ಸಾವು ನಂಟರಿಷ್ಟರ ಅಗಲಿಕೆ ಇವು ಸಂಭವಿಸುವುದರಿಂದ ದೇವಾನಾಂಪ್ರಿಯನಿಗೆ ಇನ್ನೂ ಹೆಚ್ಚಿನ ವೇದನೆ ಉಂಟಾಗಿದೆ. ಅಥವಾ ತಾವು ನೆಮ್ಮದಿಯಿಂದಿದ್ದರೂ ತಾವು ತುಂಬಾ ಸ್ನೇಹದಿಂದ ಪ್ರೀತಿಸುವ ಇಷ್ಟಮಿತ್ರರು, ಪರಿಚಿತರು, ನಂಟರು ಇವರಿಗೆ ಅಪಘಾತಗಳಾದರೆ ಅಂತಹವರು ಆ ಅಪಘಾತ ತಮಗಾದಂತೆಯೇ ಪರಿತಪಿಸುವರು. ಹೀಗೆ, ಆದ ಕಷ್ಟಗಳಲ್ಲಿ ಸರ್ವ ಮನುಷ್ಯರೂ ಭಾಗಿಗಳಾದರೂ ದೇವಾನಾಂಪ್ರಿಯನ ಪಾಲು ಹೆಚ್ಚಿನದು. ಯವನರ ಜನಪದವನ್ನು ಬಿಟ್ಟರೆ, ಬ್ರಾಹ್ಮಣ ಶ್ರಮಣರಿಲ್ಲದ ಜನಪದವೇ ಇಲ್ಲ. ಯಾವುದಾದರೊಂದು ಮತದಲ್ಲಿ ಶ್ರದ್ಧೆ ಇಲ್ಲದ ಮನುಷ್ಯರು ಎಲ್ಲಿಯೂ ಇಲ್ಲ. ಆದ್ದರಿಂದ, ಕಲಿಂಗ ದೇಶದಲ್ಲಿ ಹತರಾದ, ಗಾಯಗೊಂಡ ಜನರ ನೂರರಲ್ಲೊಂದು ಭಾಗವಾಗಲಿ ಸಾವಿರದಲ್ಲೊಂದು ಭಾಗವಾಗಲಿ ಈಗ ಅದೇ ಕಷ್ಟಕ್ಕೊಳಗಾದರೆ ದೇವಾನಾಂಪ್ರಿಯನಿಗೆ ವೇದನೆ ಉಂಟಾಗುತ್ತದೆ. ಯಾರಾದರೂ ಅಪಕಾರ ಮಾಡಿದರೂ ಕೂಡ ಕ್ಷಮ್ಯವಾದದ್ದನ್ನೆಲ್ಲ ಕ್ಷಮಿಸತಕ್ಕದ್ದೆಂದು ದೇವಾನಾಂಪ್ರಿಯನು ಭಾವಿಸುವನು. ಈಗ ತಾನು ಜಯಿಸಿರುವ ಅಟವೀಜನ ಕೂಡ ತನ್ನಂತೆ ನಡೆಯಲು ತನ್ನಂತೆಯೇ ವಿಚಾರಮಾಡಲು ಅವನು ಪ್ರೇರಿಸುವನು. ಹೀಗೆ ದೇವಾನಾಂಪ್ರಿಯ ಅನುತಾಪ ಪಡುತ್ತಿದ್ದರೂ ಅವನು ಪ್ರಭಾವಶಾಲಿಯಾದ್ದರಿಂದ ಅವರು ತಮ್ಮ ತಪ್ಪುಗಳಿಗೆ ನಾಚಿ ನಡೆಯಲಿ; ತಪ್ಪು ಮಾಡಿ ಅವರು ಹತರಾಗದಿರಲಿ. ದೇವಾನಾಂಪ್ರಿಯ ಸರ್ವಭೂತಗಳಿಗೂ ಅಕ್ಷತಿಯನ್ನೂ ಸಂಯಮವನ್ನೂ ಸಮಚರ್ಯೆ ಯನ್ನೂ ಮಾರ್ದವವನ್ನೂ ಇಚ್ಛಿಸುತ್ತಾನೆ.ದೇವಾನಾಂಪ್ರಿಯ ಧರ್ಮವಿಜಯವನ್ನೇ ಮುಖ್ಯವಾದ ವಿಜಯವೆಂದು ಭಾವಿಸುತ್ತಾನೆ. ಇಲ್ಲಿಯೂ ಎಲ್ಲ ಹಂತಗಳಲ್ಲಿಯೂ ಆರುನೂರು ಯೋಜನಗಳವರೆಗೂ, ಅಂತಿಯೋಕ ಎಂಬ ಯವನರಾಜ, ಆ ಅಂತಿಯೋಕನ ಆಚೆ ನಾಲ್ಕು ರಾಜರು-ತುರಮಾಯ(ಟಾಲಮಿ), ಅಂತಿಕಿನಿ (ಆಂಟೆಗೊನಸ್), ಮಕ (ಮಗಸ್), ಅಲಿಕಸುದ(ಅಲೆಕ್ಸಾಂಡರ್) ಕೆಳಗೆ ಚೋಳ ಪಾಂಡ್ಯ ತಾಮ್ರವರ್ಣಿತನಕ ದೇವಾನಾಂಪ್ರಿಯನಿಗೆ ಈ ಧರ್ಮವಿಜಯ ಮತ್ತೆ ಮತ್ತೆ ದೊರೆತಿದೆ. ಹಾಗೆಯೇ ಇಲ್ಲಿ ರಾಜವಿಷಯದಲ್ಲೂ ಯವನ ಕಾಂಭೋಜರಲ್ಲೂ ನಭಕ ನಾಭ ಪಂಕ್ತಿಯರಲ್ಲೂ ಭೋಜಪಿಟಿನಿಕರಲ್ಲೂ ಆಂಧ್ರಪುಳಿಂದರಲ್ಲೂ ದೇವಾನಾಂಪ್ರಿಯನ ಧರ್ಮಾನುಶಾಸ್ತಿಯನ್ನು ಅನುಸರಿಸುವರು. ದೇವಾನಾಂಪ್ರಿಯನ ದೂತರು ಹೋಗದ ಕಡೆಗಳಲ್ಲಿ ಕೂಡ ಜನರು ದೇವಾನಾಂಪ್ರಿಯನ ಧರ್ಮವೃತ್ತವನ್ನೂ ವಿಧಾನವನ್ನೂ ಧರ್ಮಾನುಶಾಸ್ತಿಯನ್ನೂ ಕೇಳಿ ಅದನ್ನನುಸರಿಸುತ್ತಿರುವರು; ಮುಂದೆಯೂ ಅನುಸರಿಸುವರು. ಇದರಿಂದ ಎಲ್ಲ ಕಡೆಗಳಲ್ಲೂ ವಿಜಯ ದೊರೆತಿದೆ. ಈ ವಿಜಯದಿಂದ ಎಲ್ಲ ಕಡೆಗಳಲ್ಲೂ ಪ್ರೀತಿ ಉಂಟಾಗಿದೆ. ಧರ್ಮವಿಜಯದಿಂದ ಪ್ರೀತಿ ಲಭಿಸುತ್ತದೆ. ಹಾಗೆ ಲಭಿಸಿದ ಪ್ರೀತಿ ಸ್ವಲ್ಪವಾದರೂ ಕೂಡ, ಪರದಲ್ಲಿ ಅದರಿಂದ ಮಹತ್ತಾದ ಫಲವುಂಟೆಂದು ದೇವಾನಾಂಪ್ರಿಯ ತಿಳಿದಿರುವನು. ಇದಕ್ಕಾಗಿಯೇ ಈ ಧರ್ಮಲಿಪಿಯನ್ನು ಬರೆಸಿರುವುದು : ನನ್ನ ಪುತ್ರರೂ ಪ್ರಪೌತ್ರರೂ ಹೊಸ ವಿಜಯವನ್ನು ಗಳಿಸಬೇಕೆಂದು ಯೋಚಿಸಿದಿರಲಿ. ಒಂದು ವೇಳೆ ಅವರಿಗೆ ಹೊಸ ವಿಜಯ ರುಚಿಕರವಾಗಿ ಕಂಡುಬಂದರೂ ಅವರಿಗೆ ಕ್ಷಮೆಯೂ ಲಘುವಾದ ದಂಡನೆಗಳನ್ನು ಕೊಡುವ ಯೋಚನೆಯೂ ರುಚಿಸಲಿ. ಧರ್ಮವಿಜಯವೇ ವಿಜಯವೆಂದು ಅವರು ತಿಳಿಯಲಿ. ಇಹಲೋಕಕ್ಕೂ ಪರಲೋಕಕ್ಕೂ ಅದೇ. ಉಳಿದವುಗಳಲ್ಲಿ ಆಸೆಯನ್ನು ತೊರೆದು ಅವರು ಧರ್ಮರತಿಯನ್ನೇ ಬೆಳೆಸಲಿ. ಇಹ ಲೋಕಕ್ಕೂ ಪರಲೋಕಕ್ಕೂ ಅದೇ!

ಅಶೋಕನ ಶಾಸನಗಳ ಲಿಪಿ[ಬದಲಾಯಿಸಿ]

ಶಾಸನಗಳೆಲ್ಲ ಬ್ರಾಹ್ಮೀ ಮತ್ತು ಖರೋಷ್ಠಿ ಲಿಪಿಗಳಲ್ಲಿವೆ. ಬ್ರಾಹ್ಮೀ ಬರೆಹವನ್ನು ಎಡಗಡೆಯಿಂದ ಬಲಗಡೆಗೂ ಖರೋಷ್ಠಿಯನ್ನು ಈಗಿನ ಉರ್ದು ಭಾಷೆಯಂತೆ ಬಲದಿಂದ ಎಡಕ್ಕೂ ಓದಬೇಕು. ಷಾಭಾಷ್ಗಡಿಯಲ್ಲಿರುವ ಹದಿನಾಲ್ಕು ಶಾಸನಗಳು, ಮನ್ಸೇರಾದಲ್ಲಿರುವ ಒಂದು ಶಾಸನ-ಒಟ್ಟು ಹದಿನೈದು ಶಾಸನಗಳು ಖರೋಷ್ಠಿಲಿಪಿಯಲ್ಲಿವೆ. ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಶಾಸನದ ಕೊನೆಯ ಪಂಕ್ತಿ ಖರೋಷ್ಠಿಯಲ್ಲಿದೆ. 1928-29ರಲ್ಲಿ ರಾವ್ ಬಹದ್ದೂರ್ ದಯಾರಾಮ್ ಸಾಹನಿಯವರು ಪ್ರಕಟಿಸಿರುವ ಶಾಸನದಲ್ಲಿ ಎಂಟು ಪಂಕ್ತಿಗಳು ಖರೋಷ್ಠಿಯಲ್ಲೂ ಉಳಿದ ಹದಿನೈದು ಬ್ರಾಹ್ಮೀ ಲಿಪಿಯಲ್ಲೂ ಇವೆ. ಈ ಲಿಪಿಗಳ ಮೂಲ ಸರಿಯಾಗಿ ತಿಳಿದುಬಂದಿಲ್ಲ. ಈಗ ಭಾರತದಲ್ಲಿ ಪ್ರಚಾರವಿರುವ ಎಲ್ಲ ಪ್ರಾಂತ್ಯಗಳ ಭಾಷೆಗಳ ಲಿಪಿಗಳಿಗೆಲ್ಲ ಬ್ರಾಹ್ಮೀಲಿಪಿಯೇ ಆಧಾರವೆಂದು ನಿಷ್ಕರ್ಷಿಸಿರುವರು. ಸಿಂಧೂನದೀ ತೀರದ ಹರಪ್ಪ ಮಹೆಂಜೊದಾರೋ ಪ್ರದೇಶಗಳಲ್ಲಿ ಸಿಕ್ಕಿರುವ ಮುದ್ರಿಕೆಗಳ ಲ್ಲಿರುವ ಚಿತ್ರಲಿಪಿಗೂ ಬ್ರಾಹ್ಮೀ ಖರೋಷ್ಠಿ ಲಿಪಿಗಳಿಗೂ ನಡುವಣ (2000 ವರ್ಷಗಳು) ಸಂಬಂಧ ತಿಳಿಸುವ ಯಾವ ಬರೆವಣಿಗೆಯೂ ದೊರೆತಿಲ್ಲ. ಲಿಪಿ ಶಬ್ದ ಪ್ರಯೋಗವನ್ನು ಪಾಣಿನಿ ಪ್ರ.ಶ.ಪೂ. 5ನೆಯ ಶತಮಾನದಲ್ಲಿ ಮಾಡಿದ್ದಾನೆ. ಇದು ಪಾರ್ಸಿ ಭಾಷೆಯಿಂದ ಹುಟ್ಟಿದುದೆಂದು ಬೇಲಿ ಎಂಬ ವಿದ್ವಾಂಸ ಅಭಿಪ್ರಾಯ ಪಡುತ್ತಾನೆ. ಭಾರತದಲ್ಲಿ ಬರೆವಣಿಗೆ ಬೌದ್ಧರ ಕಾಲದಿಂದಲೇ ಪ್ರಚಾರವಾಯಿತೆಂದು ಹೇಳಬಹುದು. ಪ್ರ.ಶ.ಪೂ. 5ನೆಯ ಶತಮಾನದ ಶೀಲಸುತ್ತ ಎಂಬ ಬೌದ್ಧ ಗ್ರಂಥದಲ್ಲಿ ಅಕ್ಖರಿಕ ಎಂಬ ಮಕ್ಕಳ ಆಟದ ವಿಷಯವಿದೆ. ಬುದ್ಧ ಚಿಕ್ಕವನಾಗಿದ್ದಾಗಲೇ ಬರೆವಣಿಗೆ ಕಲಿತನೆಂದು ಲಲಿತವಿಸ್ತಾರ ಎಂಬ ಗ್ರಂಥದಲ್ಲಿ ಹೇಳಿದೆ. ಈ ಗ್ರಂಥದಲ್ಲಿಯೇ ಬ್ರಾಹ್ಮೀಲಿಪಿಯ 64 ಪ್ರಭೇದಗಳು ಹೇಳಲ್ಪಟ್ಟಿವೆ. ಆದರೆ ಅಶೋಕನ ಬ್ರಾಹ್ಮೀಲಿಪಿಯಲ್ಲಿ ಔತ್ತರೇಯ, ದಾಕ್ಷಿಣಾತ್ಯ ಎಂಬ ಭೇದಗಳು ಮಾತ್ರ ಕಾಣುತ್ತವೆ.

ಶಾಸನಗಳ ಭಾಷೆ[ಬದಲಾಯಿಸಿ]

ಬ್ರಾಹ್ಮೀ ಮತ್ತು ಖರೋಷ್ಠಿ ಲಿಪಿಗಳ ಭಾಷೆ ಪ್ರಾಕೃತ. ಈ ಕಾಲದಲ್ಲಿ ಹುಟ್ಟಿದ ಜೈನ, ಬೌದ್ಧ ಮತ ಗ್ರಂಥಗಳೆಲ್ಲ ಪ್ರಾಕೃತ ಭಾಷೆಯಲ್ಲೇ ಇವೆ. ಅಶೋಕನ ಶಾಸನದ ಭಾಷೆಯನ್ನು ಅರ್ಧಮಾಗಧಿ ಎಂದು ಕರೆಯುವರು. ಭಾರತದ ಎಲ್ಲ ಕಡೆಯಲ್ಲೂ ಪ್ರ.ಶ.ಪೂ. 6ನೆಯ ಶತಮಾನದಿಂದ 3ನೆಯ ಶತಮಾನದವರೆಗೆ ಪ್ರಾಕೃತ ಭಾಷೆ ವ್ಯವಹಾರದಲ್ಲಿತ್ತೆಂದು ಆ ಕಾಲಗಳಲ್ಲಿನ ಶಾಸನಗಳಿಂದ ತಿಳಿಯಬಹುದಾಗಿದೆ. ಈ ಶಾಸನಗಳನ್ನು ಓದಿ ಅರ್ಥವಿವರಣೆ ಕೊಟ್ಟ ಯಶಸ್ಸು ಜೇಮ್ಸ್ ಪ್ರಿನ್ಸೆಪ್ ಎಂಬ ವಿದ್ವಾಂಸನಿಗೆ ಸಲ್ಲತಕ್ಕದ್ದು. ದೇಶದ ನಾನಾ ಭಾಗಗಳಲ್ಲಿ ದೊರೆತ ಅಶೋಕನ ಶಾಸನಗಳ ಪ್ರತಿಯಿಟ್ಟುಕೊಂಡು ಅವುಗಳಲ್ಲಿ ಬರುವ ಒಂದೇ ವಿಧವಾದ ಚಿಹ್ನೆಗಳನ್ನು ಬೇರೆ ಬರೆದು ಅವುಗಳಿಗೆ ಶಬ್ದಸ್ವರೂಪ ಕೊಟ್ಟು ಕೆಲವು ಶಾಸನಗಳನ್ನು ಪ್ರಕಟಿಸಿದ ಮೇಲೆ ಅದೇ ಮಾರ್ಗವನ್ನನುಸರಿಸಿ ಪಾಶ್ಚಾತ್ಯ ಮತ್ತು ಭಾರತೀಯ ವಿದ್ವಾಂಸರು ಆಯಾ ಪ್ರಾಂತ್ಯಗಳಲ್ಲಿ ದೊರೆತ ಶಾಸನಗಳನ್ನು ಓದಿ ಪ್ರಕಟಿಸಿದರು. ಮೈಸೂರು ರಾಜ್ಯದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕು ಸಿದ್ದಾಪುರದ ಸಮೀಪದಲ್ಲೇ ಇರುವ ಎಮ್ಮೆತಮ್ಮನ ಗುಂಡು ಎಂದು ಕರೆಯುವ ಬಂಡೆಯ ಶಾಸನ, ಅದಕ್ಕೆ ಮೂರು ಮೈಲಿ ದೂರದಲ್ಲಿರುವ ಜಟಿಂಗ ರಾಮೇಶ್ವರ ಬೆಟ್ಟದ ಮೇಲಿನ ಶಾಸನ, ಒಟ್ಟು ಮೂರು ಅಶೋಕನ ಶಾಸನಗಳನ್ನು ಬಿ. ಎಲ್. ರೈಸ್ ಎಫಿಗ್ರಾಫಿಯ ಕರ್ನಾಟಕ ಎಂಬ ಕನ್ನಡ ಶಾಸನಗಳ ಗ್ರಂಥದಲ್ಲಿ ಪ್ರಕಟಿಸಿದ್ದಾರೆ. ಅಶೋಕನ ಶಾಸನಗಳು ಮೊದಮೊದಲು ರಾಯಲ್ ಏಷ್ಯಾಟಿಕ್ ಸೊಸೈಟಿಯ ಬಂಗಾಳ, ಮುಂಬಯಿ, ಲಂಡನ್ ಶಾಖೆಗಳ ಮಾಸಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅನಂತರ ಇಂಡಿಯನ್ ಆ್ಯಂಟಿಕ್ವೆರಿ, ಎಫಿಗ್ರಾಫಿಯ ಇಂಡಿಕ, ಎಫಿಗ್ರಾಫಿಯ ಕರ್ನಾಟಿಕ ಮೊದಲಾದ ಗ್ರಂಥಗಳಲ್ಲಿ ಈ ಶಾಸನಗಳನ್ನು ಓದಿ ಟೀಕೆ ಟಿಪ್ಪಣಿಗಳನ್ನು ಮಾಡಿ ಪ್ರಕಟಿಸಿದ್ದಾರೆ. 1922ರವರೆಗೆ ಸಂಗ್ರಹಿಸಿದ ಅಶೋಕನ ಶಾಸನಗಳನ್ನೆಲ್ಲ ಸಂಗ್ರಹಿಸಿ ಹುಲ್ಷ್‌ ಎಫಿಗ್ರಾಫಿಯ ಇಂಡಿಕದ ಮೊದಲನೆಯ ಸಂಪುಟದಲ್ಲಿ ಶಾಸನಗಳ ಮೂಲ ರೂಪ, ಅದರ ಇಂಗ್ಲಿಷ್ ಭಾಷಾಂತರ, ಲಿಪಿ, ಭಾಷೆ ಮೊದಲಾದ ವಿಷಯಗಳನ್ನೆಲ್ಲ ವಿಮರ್ಶಾಪುರ್ವಕವಾಗಿ ವಿವರಿಸಿ ಒಂದು ದೊಡ್ಡ ಉದ್ಗ್ರಂಥವನ್ನು ಪ್ರಕಟಿಸಿದ್ದಾರೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: