ಕಲ್ಲೋಳಿ

ವಿಕಿಪೀಡಿಯ ಇಂದ
Jump to navigation Jump to search
ಕಲ್ಲೊಳ್ಳಿ
ಪಟ್ಟಣ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಬೆಳಗಾವಿ
ತಾಲೂಕುಗೋಕಾಕ
Population
 (2011)
 • Total೧೫,೦೮೦[೧]
Languages
 • OfficialKannada
Time zoneUTC+5:30 (IST)
PIN
591224
Websitewww.kallollitown.mrc.gov.in

ಕಲ್ಲೋಳಿ ಇದು ಭಾರತ ದೇಶದ, ಕರ್ನಾಟಕ ರಾಜ್ಯದ, ಬೆಳಗಾವಿ ಜಿಲ್ಲೆ ಯ, ಗೋಕಾಕ ತಾಲೂಕಿನ ಒಂದು ಪಟ್ಟಣ.ಘಟಪ್ರಭಾ ನದಿಯ ಉಪನದಿಗಳಲ್ಲಿ ಒಂದಾದ ಇಂದ್ರವೇಣಿ ನದಿ ದಂಡೆ ಮೇಲಿದೆ.ಗೋಕಾಕದಿಂದ ೧೧ಕಿಮೀ ದೂರದಲ್ಲಿದೆ. ಸೌಂದತ್ತಿ ರಟ್ಟರ ಶಾಸನದಲ್ಲಿ ಇದನ್ನು ಸಿಂಧನಕಲ್ಲೋಳೆ ಎಂದು ಕರೆಯಲಾಗಿದೆ. ಈ ಪಟ್ಟಣದಲ್ಲಿ ದೇವಾಲಯಗಳ ಸಂಖ್ಯೆ ಅಧಿಕವಾಗಿರುವುದರಿಂದ ಹಾಗೂ ಜಾಗೃತ ದೈವ ಹನುಮಾನ ಮಂದಿರ ಪ್ರಸಿದ್ಧಿ ಪಡೆದಿದ್ದರಿಂದ "ದೇವರ ಕಲ್ಲೋಳಿ" ಎಂದೂ ಸಹ ಕರೆಯುತ್ತಾರೆ.

ಇಲ್ಲಿ ಮುಖ್ಯವಾಗಿ ಕಲ್ಲೋಳಪ್ಪನ ಗುಡಿ ಸುಪ್ರಸಿದ್ಧವಾಗಿದೆ. ಈ ಗ್ರಾಮದಲ್ಲಿ ರಾಮಲಿಂಗೇಶ್ವರ, ಕಲ್ಮೇಶ್ವರ, ಮಲ್ಲಮ್ಮ, ದ್ಯಾಮವ್ವ, ದುರ್ಗವ್ವ, ಬೀರಪ್,ಪ ಸಿದ್ಧಾರೂಢ ಮತ್ತು ಸದಾಶಿವ ದೇವಾಲಯಗಳಿವೆ. ಕಲ್ಲೋಳಪ್ಪನ ಭವ್ಯ ಗುಡಿ ವಿಶೇಷವಾಗಿದೆ. ಈ ದೇವಾಲಯದ ಎದುರಿಗಿನ ಆವರಣದಲ್ಲಿ ಎರಡು ಕೈ ಜೋಡಿಸಿ ನಿಂತ ಕಾಟಮುತ್ತಪ್ಪನ ಮೂರ್ತಿಗಳಿವೆ. ಇಲ್ಲಿನ ಪಾರ್ಶ್ವನಾಥ ಜಿನಾಲಯವನ್ನು ಸು.೧೨೦೦ರಲ್ಲಿ ಹಗರ್ತಗೆ ನಾಡಿನ ರಟ್ಟ ಅರಸರ ಸಂಬಂಧಿ ಕಟ್ಟಿಸಿದ ಬಗ್ಗೆ ಶಾಸನವಿದೆ.

ರಾಮಲಿಂಗೇಶ್ವರ ದೇವಾಲಯ ಕಲ್ಯಾಣ ಚಾಳುಕ್ಯರ ಶೈಲಿಯಲ್ಲಿದ್ದು ಗರ್ಭಗೃಹ, ಅರ್ಧಮಂಟಪ, ನವರಂಗ ಮತ್ತು ಮುಖಮಂಟಪಗಳನ್ನು ಹೊಂದಿದೆ. ಗರ್ಭಗೃಹದ ಮೇಲೆ ಕದಂಬನಾಗರ ಶೈಲಿಯ ಶಿಖರವಿದ್ದು, ಇದನ್ನು ಭಾಗಶಃ ಜೀರ್ಣೋದ್ಧಾರ ಮಾಡಲಾಗಿದೆ. ನವರಂಗದಲ್ಲಿಯ ಕಂಬಗಳ ಕೆತ್ತನೆಯಲ್ಲಿ ನಯಗಾರಿಕೆಯಿದೆ. ಸುಖನಾಸಿಯನ್ನು ಜೀರ್ಣೋದ್ಧಾರದ ಕಾಲಕ್ಕೆ ಮೇಲ್ಚಾವಣಿಯಲ್ಲಿ ಇರಿಸಲಾಗಿದೆ. ಅದರ ಮೇಲೆ ಕುಳಿತ ಭಂಗಿಯಲ್ಲಿರುವ ಶಿವನ ಮೂರ್ತಿಯನ್ನು ಕೆತ್ತಲಾಗಿದೆ. ಮುಖ್ಯ ಮಂಟಪ ವಿಸ್ತಾರವಾದ ಪ್ರಾಂಗಣವನ್ನು ಹೊಂದಿದೆ. ಅದರ ಸುತ್ತ ಕಕ್ಷಾಸನವಿದೆ. ವಿಜಯನಗರ ಶೈಲಿಯಲ್ಲಿರುವ ಕಲ್ಮೇಶ್ವರ ದೇವಾಲಯದಲ್ಲಿ ಗರ್ಭಗೃಹ ಮತ್ತು ನವರಂಗಗಳಿವೆ. ನವರಂಗದ ಛಾವಣಿ ಭಾಗಶಃ ಬಿದ್ದುಹೋಗಿದೆ. ಹೊಸ್ತಿಲು ಹುಣ್ಣಿಮೆಯಲ್ಲಿ ಮಾರುತಿಯ (ಕಲ್ಲೋಳಪ್ಪನ) ಜಾತ್ರೆ ಎರಡು ವಾರಗಳವರೆಗೆ ನಡೆಯುತ್ತದೆ.

ತ್ರಿಕೂಟಾಚಲ ಇಲ್ಲಿನ ಇನ್ನೊಂದು ಸ್ಮಾರಕ. ಮಧ್ಯದ ಗರ್ಭಗೃಹದಲ್ಲಿ ಶಾಂತಿನಾಥನ ಮೂರ್ತಿ, ಎಡಗಡೆಯ ಗರ್ಭಗೃಹದಲ್ಲಿ ಚಂದ್ರನಾಥ ಮತ್ತು ಬಲಗಡೆಯ ಗರ್ಭಗೃಹದಲ್ಲಿ ಸುಪಾಶರ್ವ್‌ನಾಥನ ಮೂರ್ತಿಗಳಿವೆ. ಈ ಮೂರೂ ಗರ್ಭಗೃಹಗಳು ನಕ್ಷತ್ರಾಕಾರದ ಜಗಲಿ ಹೊಂದಿದ್ದು ಮಧ್ಯದ ಗರ್ಭಗೃಹದ ಮೇಲಿನ ಶಿಖರವು ಕದಂಬ ನಾಗರ ಶೈಲಿಯನ್ನು ಹೊಂದಿದೆ. ನವರಂಗದ ಕಂಬಗಳು ನುಣುಪಾದ ಕೆತ್ತನೆಯಿಂದ ಕೂಡಿದೆ. ನವರಂಗದ ಛಾವಣಿಯಲ್ಲಿ ಕೆಳಮುಖ ಮಾಡಿದ ಕಮಲವು ಲೋಲಕದಂತಿದ್ದು ಅದರಲ್ಲಿ ಹಲವಾರು ಸಸ್ಯ ನಕ್ಷೆಗಳನ್ನು ಕೆತ್ತಲಾಗಿದೆ. ಇಲ್ಲಿ ಜೈನ ಸರಸ್ವತಿಮೂರ್ತಿ ಮತ್ತು ನೇಮಿನಾಥನ ಮೂರ್ತಿಗಳಿವೆ. ಮುಖಮಂಟಪ ಕಕ್ಷÁಸನವನ್ನು ಹೊಂದಿದ್ದು, ಹೊರಬದಿಯ ಗೋಡೆಯ ಮೇಲೆ ಸಸ್ಯಾಲಂಕಾರ ಮತ್ತು ಹೊರಬದಿಗೆ ಭೂಮಿತಿ ನಕ್ಷೆಗಳನ್ನು ಕೆತ್ತಲಾಗಿದೆ. ಮುಖಮಂಟಪದ ಗೋಡೆಯ ಮೇಲಿರುವ ಶಿಲಾಶಾಸನದಲ್ಲಿ ಈ ಗ್ರಾಮವು ಕೂರುಂಬೆಟ್ಟ ಕಂಪಣದಲ್ಲಿರುವ ಸಿಂಧನ ಕಲ್ಲೋಳೆ ಎಂದೂ ಪಾರ್ಶ್ವ ಜಿನಾಲಯವನ್ನು ಕಟ್ಟಿಸಿದವನು ಹಗರಟೆಗೆ ನಾಡಿನ ಚಂದ್ರಿಕಾದೇವಿಯ ಸೋದರನ ಮಗನೆಂದೂ ಹೇಳಿದೆ. ಈ ಚಂದ್ರಿಕಾದೇವಿ ರಟ್ಟದೊರೆ ಲಕ್ಷ್ಮೀದೇವನ ಹೆಂಡತಿ, ೪ನೆಯ ಕಾರ್ತವೀರ್ಯನ ತಾಯಿ. ಕಾರ್ತವೀರ್ಯ ೧೨೦೪ರಲ್ಲಿ ೨೦೦೦ ಕಮ್ಮ ಭೂಮಿಯನ್ನು ಈ ದೇವಾಲಯಕ್ಕೆ ದಾನ ನೀಡಿದ. ಈ ಪ್ರದೇಶ ವಾಣಿಜ್ಯ ಕೇಂದ್ರವಾಗಿತ್ತೆಂದು ಶಾಸನದಲ್ಲಿ ಹೇಳಿದೆ. ಪಾರ್ಶ್ವನಾಥ ಪುರಾಣವನ್ನು ಬರೆದ ಕವಿ ಪಾರ್ಶ್ವ ಪಂಡಿತ ಈ ಶಾಸನದ ಕರ್ತೃ.

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಕಲ್ಲೋಳಿ&oldid=760145" ಇಂದ ಪಡೆಯಲ್ಪಟ್ಟಿದೆ