ಕಲ್ಲೋಳಿ
ಕಲ್ಲೊಳ್ಳಿ | |
---|---|
ಪಟ್ಟಣ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಬೆಳಗಾವಿ |
ತಾಲೂಕು | ಗೋಕಾಕ |
Population (2011) | |
• Total | ೧೫,೦೮೦ [೧] |
Languages | |
• Official | Kannada |
Time zone | UTC+5:30 (IST) |
PIN | 591224 |
Website | www.kallollitown.mrc.gov.in |
ಕಲ್ಲೋಳಿ ಇದು ಭಾರತ ದೇಶದ, ಕರ್ನಾಟಕ ರಾಜ್ಯದ, ಬೆಳಗಾವಿ ಜಿಲ್ಲೆ ಯ, ಮೂಡಲಗಿ ತಾಲೂಕಿನ ಒಂದು ಪಟ್ಟಣ.ಘಟಪ್ರಭಾ ನದಿಯ ಉಪನದಿಗಳಲ್ಲಿ ಒಂದಾದ ಇಂದ್ರವೇಣಿ ನದಿ ದಂಡೆ ಮೇಲಿದೆ.ಗೋಕಾಕದಿಂದ ೧೧ಕಿಮೀ ದೂರದಲ್ಲಿದೆ. ಸೌಂದತ್ತಿ ರಟ್ಟರ ಶಾಸನದಲ್ಲಿ ಇದನ್ನು ಸಿಂಧನಕಲ್ಲೋಳೆ ಎಂದು ಕರೆಯಲಾಗಿದೆ. ಈ ಪಟ್ಟಣದಲ್ಲಿ ದೇವಾಲಯಗಳ ಸಂಖ್ಯೆ ಅಧಿಕವಾಗಿರುವುದರಿಂದ ಹಾಗೂ ಜಾಗೃತ ದೈವ ಹನುಮಾನ ಮಂದಿರ ಪ್ರಸಿದ್ಧಿ ಪಡೆದಿದ್ದರಿಂದ "ದೇವರ ಕಲ್ಲೋಳಿ" ಎಂದೂ ಸಹ ಕರೆಯುತ್ತಾರೆ. ರವೀಂದ್ರ ಸೋರಗಾಂವಿ ಇಲ್ಲಿ ಮುಖ್ಯವಾಗಿ ಕಲ್ಲೋಳಪ್ಪನ ಗುಡಿ ಸುಪ್ರಸಿದ್ಧವಾಗಿದೆ. ಈ ಗ್ರಾಮದಲ್ಲಿ ರಾಮಲಿಂಗೇಶ್ವರ, ಕಲ್ಮೇಶ್ವರ, ಮಲ್ಲಮ್ಮ, ದ್ಯಾಮವ್ವ, ದುರ್ಗವ್ವ,ಬೀರಪ್ಪ, ಸಿದ್ಧಾರೂಢ ಮತ್ತು ಸದಾಶಿವ ಮುಂತಾದ ದೇವಾಲಯಗಳಿವೆ. ಕಲ್ಲೋಳಪ್ಪನ ಭವ್ಯ ಗುಡಿ ವಿಶೇಷವಾಗಿದೆ. ಈ ದೇವಾಲಯದ ಎದುರಿಗಿನ ಆವರಣದಲ್ಲಿ ಎರಡು ಕೈ ಜೋಡಿಸಿ ನಿಂತ ಕಾಟಮುತ್ತಪ್ಪನ ಮೂರ್ತಿಗಳಿವೆ. ಇಲ್ಲಿನ ಪಾರ್ಶ್ವನಾಥ ಜಿನಾಲಯವನ್ನು ಸು.೧೨೦೦ರಲ್ಲಿ ಹಗರ್ತಗೆ ನಾಡಿನ ರಟ್ಟ ಅರಸರ ಸಂಬಂಧಿ ಕಟ್ಟಿಸಿದ ಬಗ್ಗೆ ಶಾಸನವಿದೆ.
ರಾಮಲಿಂಗೇಶ್ವರ ದೇವಾಲಯ ಕಲ್ಯಾಣ ಚಾಳುಕ್ಯರ ಶೈಲಿಯಲ್ಲಿದ್ದು ಗರ್ಭಗೃಹ, ಅರ್ಧಮಂಟಪ, ನವರಂಗ ಮತ್ತು ಮುಖಮಂಟಪಗಳನ್ನು ಹೊಂದಿದೆ. ಗರ್ಭಗೃಹದ ಮೇಲೆ ಕದಂಬನಾಗರ ಶೈಲಿಯ ಶಿಖರವಿದ್ದು, ಇದನ್ನು ಭಾಗಶಃ ಜೀರ್ಣೋದ್ಧಾರ ಮಾಡಲಾಗಿದೆ. ನವರಂಗದಲ್ಲಿಯ ಕಂಬಗಳ ಕೆತ್ತನೆಯಲ್ಲಿ ನಯಗಾರಿಕೆಯಿದೆ. ಸುಖನಾಸಿಯನ್ನು ಜೀರ್ಣೋದ್ಧಾರದ ಕಾಲಕ್ಕೆ ಮೇಲ್ಚಾವಣಿಯಲ್ಲಿ ಇರಿಸಲಾಗಿದೆ. ಅದರ ಮೇಲೆ ಕುಳಿತ ಭಂಗಿಯಲ್ಲಿರುವ ಶಿವನ ಮೂರ್ತಿಯನ್ನು ಕೆತ್ತಲಾಗಿದೆ. ಮುಖ್ಯ ಮಂಟಪ ವಿಸ್ತಾರವಾದ ಪ್ರಾಂಗಣವನ್ನು ಹೊಂದಿದೆ. ಅದರ ಸುತ್ತ ಕಕ್ಷಾಸನವಿದೆ. ವಿಜಯನಗರ ಶೈಲಿಯಲ್ಲಿರುವ ಕಲ್ಮೇಶ್ವರ ದೇವಾಲಯದಲ್ಲಿ ಗರ್ಭಗೃಹ ಮತ್ತು ನವರಂಗಗಳಿವೆ. ನವರಂಗದ ಛಾವಣಿ ಭಾಗಶಃ ಬಿದ್ದುಹೋಗಿದೆ. ಹೊಸ್ತಿಲು ಹುಣ್ಣಿಮೆಯಲ್ಲಿ ಮಾರುತಿಯ (ಕಲ್ಲೋಳಪ್ಪನ) ಜಾತ್ರೆ ಎರಡು ವಾರಗಳವರೆಗೆ ನಡೆಯುತ್ತದೆ.
ತ್ರಿಕೂಟಾಚಲ ಇಲ್ಲಿನ ಇನ್ನೊಂದು ಸ್ಮಾರಕ. ಮಧ್ಯದ ಗರ್ಭಗೃಹದಲ್ಲಿ ಶಾಂತಿನಾಥನ ಮೂರ್ತಿ, ಎಡಗಡೆಯ ಗರ್ಭಗೃಹದಲ್ಲಿ ಚಂದ್ರನಾಥ ಮತ್ತು ಬಲಗಡೆಯ ಗರ್ಭಗೃಹದಲ್ಲಿ ಸುಪಾಶರ್ವ್ನಾಥನ ಮೂರ್ತಿಗಳಿವೆ. ಈ ಮೂರೂ ಗರ್ಭಗೃಹಗಳು ನಕ್ಷತ್ರಾಕಾರದ ಜಗಲಿ ಹೊಂದಿದ್ದು ಮಧ್ಯದ ಗರ್ಭಗೃಹದ ಮೇಲಿನ ಶಿಖರವು ಕದಂಬ ನಾಗರ ಶೈಲಿಯನ್ನು ಹೊಂದಿದೆ. ನವರಂಗದ ಕಂಬಗಳು ನುಣುಪಾದ ಕೆತ್ತನೆಯಿಂದ ಕೂಡಿದೆ. ನವರಂಗದ ಛಾವಣಿಯಲ್ಲಿ ಕೆಳಮುಖ ಮಾಡಿದ ಕಮಲವು ಲೋಲಕದಂತಿದ್ದು ಅದರಲ್ಲಿ ಹಲವಾರು ಸಸ್ಯ ನಕ್ಷೆಗಳನ್ನು ಕೆತ್ತಲಾಗಿದೆ. ಇಲ್ಲಿ ಜೈನ ಸರಸ್ವತಿಮೂರ್ತಿ ಮತ್ತು ನೇಮಿನಾಥನ ಮೂರ್ತಿಗಳಿವೆ. ಮುಖಮಂಟಪ ಕಕ್ಷಾಸನವನ್ನು ಹೊಂದಿದ್ದು, ಹೊರಬದಿಯ ಗೋಡೆಯ ಮೇಲೆ ಸಸ್ಯಾಲಂಕಾರ ಮತ್ತು ಹೊರಬದಿಗೆ ಭೂಮಿತಿ ನಕ್ಷೆಗಳನ್ನು ಕೆತ್ತಲಾಗಿದೆ. ಮುಖಮಂಟಪದ ಗೋಡೆಯ ಮೇಲಿರುವ ಶಿಲಾಶಾಸನದಲ್ಲಿ ಈ ಗ್ರಾಮವು ಕೂರುಂಬೆಟ್ಟ ಕಂಪಣದಲ್ಲಿರುವ ಸಿಂಧನ ಕಲ್ಲೋಳೆ ಎಂದೂ ಪಾರ್ಶ್ವ ಜಿನಾಲಯವನ್ನು ಕಟ್ಟಿಸಿದವನು ಹಗರಟೆಗೆ ನಾಡಿನ ಚಂದ್ರಿಕಾದೇವಿಯ ಸೋದರನ ಮಗನೆಂದೂ ಹೇಳಿದೆ. ಈ ಚಂದ್ರಿಕಾದೇವಿ ರಟ್ಟದೊರೆ ಲಕ್ಷ್ಮೀದೇವನ ಹೆಂಡತಿ, ೪ನೆಯ ಕಾರ್ತವೀರ್ಯನ ತಾಯಿ. ಕಾರ್ತವೀರ್ಯ ೧೨೦೪ರಲ್ಲಿ ೨೦೦೦ ಕಮ್ಮ ಭೂಮಿಯನ್ನು ಈ ದೇವಾಲಯಕ್ಕೆ ದಾನ ನೀಡಿದ. ಈ ಪ್ರದೇಶ ವಾಣಿಜ್ಯ ಕೇಂದ್ರವಾಗಿತ್ತೆಂದು ಶಾಸನದಲ್ಲಿ ಹೇಳಿದೆ. ಪಾರ್ಶ್ವನಾಥ ಪುರಾಣವನ್ನು ಬರೆದ ಕವಿ ಪಾರ್ಶ್ವ ಪಂಡಿತ ಈ ಶಾಸನದ ಕರ್ತೃ.
ಕಲ್ಲೋಳಿಯ ಶ್ರೀ ಆಂಜನೇಯ
[ಬದಲಾಯಿಸಿ]ಸಮರ್ಥ ರಾಮದಾಸರ ಕಾಲದಲ್ಲಿ ಕಲ್ಲೋಳಿಯಲ್ಲಿ ಈ ಹನುಮಪ್ಪನ ಗುಡಿ ನಿರ್ಮಾಣಗೊಂಡಿತಂತೆ. ರಾಮದಾಸರು ಮೂಲತಃ ಮಹಾರಾಷ್ಟ್ರದಿಂದ ಬಂದವರಾಗಿದ್ದರಿಂದ, ಈಗಲೂ ಸಹ ಈ ದೇವಾಲಯಕ್ಕೆ ಪುಣೆ, ಕರಾಡ ಸೇರಿದಂತೆ ಮಹಾರಾಷ್ಟ್ರದ ಹಲವು ಜಿಲ್ಲೆಗಳಿಂದ ಭಕ್ತರು ದೇವರ ದರ್ಶನಕ್ಕೆ ಆಗಮಿಸುತ್ತಾರೆ. ಈ ದೇಗುಲದಲ್ಲಿ ಹನುಮಂತ ದೇವರ ಆಳೆತ್ತರದ ಭವ್ಯ ಮೂರ್ತಿ ಆಕರ್ಷಣಿಯವಾಗಿದೆ. ಉತ್ತರ ಭಾರತ ಶೈಲಿಯ ಕಲೆಯಲ್ಲಿ ಕಂಗೊಳಿಸುತ್ತಿದೆ, ಈ ಮಾರುತಿ. ಇದು ಮಹಾರಾಷ್ಟ್ರ, ಕರ್ನಾಟಕ, ಗೋವಾ ರಾಜ್ಯಗಳ ಅನೇಕ ಭಕ್ತರ ಮನೆ ದೇವರಾಗಿದೆ.
ಅದೊಮ್ಮೆ, ರಾಮದಾಸರ ಕನಸಲ್ಲಿ ಬಂದ ಮಾರುತಿ, ನನ್ನವಿಗ್ರಹವನ್ನು ಇಂಥ ಜಾಗದಲ್ಲೇ ಪ್ರತಿಷ್ಠಾಪಿಸಬೇಕು ಎಂದು ಸೂಚಿಸಿದರಂತೆ. ಈ ಹಿನ್ನೆಲೆಯಲ್ಲಿ ಕಲ್ಲೊಳ್ಳಿಯಲ್ಲಿ ಹನುಮಂತನ ದೇವಾಲಯ ನಿರ್ಮಾಣವಾಯಿತು ಎನ್ನುತ್ತದೆ ಇತಿಹಾಸ. ರಾಮದಾಸರು, ಗರ್ಭ ಗುಡಿಯ ಬಲಭಾಗದಲ್ಲಿ ಉಗ್ರ ಸ್ವರೂಪಿಣಿ ಲಕ್ಷಿ$¾à ದೇವಿ(ಚೌಡೇಶ್ವರಿ), ಎಡಭಾಗದಲ್ಲಿ ವಿಘ್ನನಿವಾರಕ ಗಣಪತಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ. ಜಾಗೃತ ಹನುಮಪ್ಪನ ಗರ್ಭಗುಡಿಯ ಎದುರು ಚತುರ್ಗಜಗಳ ಭವ್ಯ ಹಾಗೂ ಎತ್ತರವಾದ ದೀಪಸ್ತಂಭ ಮನಮೋಹಕವಾಗಿದೆ. ಮಾರುತಿ ದೇವಲದ ತೀರ್ಥಜಲ ಅತ್ಯಂತ ಪವಿತ್ರವಾಗಿದೆ ಎಂದು ನಂಬಲಾಗಿದೆ. ಋಷಿ ಮುನಿಗಳು ಮಂತ್ರ ಸಿದ್ಧಿ ಮಾಡಿ ಸ್ಥಾಪಿಸಲ್ಟಪ್ಪ ನಾಲ್ಕು ಅಡಿ ಎತ್ತರದ ಲಿಂಗವಿದೆ. ಲಿಂಗದ ತೀರ್ಥಜಲವನ್ನು ಇಂದಿಗೂ ಸಹ ಹಾವು, ಚೇಳು, ನಾಯಿ ಕಚ್ಚಿದರೆ ನಂಜು ನಿವಾರಕ ತೀರ್ಥವಾಗಿ (ಪ್ರತಿ ಗುರುವಾರ, ಭಾನುವಾರ)ವಿತರಿಸುತ್ತಾರೆ. ಗುಡಿಗೆ ಬೃಹತ್ ಗ್ರಾತ್ರದ ದ್ವಾರವಿದ್ದು, ಅದರೊಳಗೆ ಚಿಕ್ಕ ದಿಡ್ಡಿ ಬಾಗಿಲಿದೆ. ಅದರ ಮುಂದೆ ಬೊರ್ಗಲ್ ಇದೆ. ದಿಡ್ಡಿ ಬಾಗಿಲಿನಿಂದ ಒಳಗೆ ಪ್ರವೇಶಿಸಿ, ಬೊರ್ಗಲ್ಗೆ ಬೆನ್ನುತಾಗಿದರೆ ಬೆನ್ನು, ಸೊಂಟ ನೋವು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಅಲ್ಲದೇ, ಹನುಮಪ್ಪ ದೇವರ ಬೃಹತ್ ಪಾದುಕೆಗಳಿವೆ. ಅವುಗಳನ್ನು ತಲೆ, ಬೆನ್ನಿನ ಮೇಲೆ ಇಟ್ಟುಕೊಂಡು ಆಶೀರ್ವಾದ ಪಡೆದರೆ ಹಲವು ರೋಗ ನಿವಾರಣೆ ಯಾಗುತ್ತದೆ ಎಂಬ ನಂಬಿಕೆಯೂ ಈ ಭಾಗದ ಭಕ್ತ ಜನರಲ್ಲಿದೆ.
ಸಂಭ್ರಮದ ಕಾರ್ತಿಕೋತ್ಸವ
ಕಲ್ಲೋಳಿ ಹನುಮಪ್ಪನ ಕಾರ್ತಿಕೋತ್ಸವ, ಪಲ್ಲಕ್ಕಿ ಉತ್ಸವ, ಜಾತ್ರಾ ಮಹೋತ್ಸವು ಪ್ರತಿವರ್ಷ ಡಿಸೆಂಬರ್ ತಿಂಗಳ ಕಾರ್ತಿಕ ಮಾಸದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರಗುತ್ತದೆ.
ಶಿಕ್ಷಣ ಸಂಸ್ಥೆಗಳು
[ಬದಲಾಯಿಸಿ]ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆ
ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆ ಪಟ್ಟಣದ ಪ್ರಸಿದ್ಧ ಶೈಕ್ಷಣಿಕ ಸಂಸ್ಥೆಯಾಗಿದೆ. ಇದರ ಅಂಗ ಸಂಸ್ಥೆಗಳು ಶಿ.ಬ.ಪಾಟೀಲ ಪೂರ್ವ ಪ್ರಾಥಮಿಕ- ಪ್ರಾಥಮಿಕ ಶಾಲೆ, ಶ್ರೀ ರಾಮಲಿಂಗೇಶ್ವರ ಪ್ರೌಢ ಶಾಲೆ, ಶ್ರೀ ರಾಮಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆ, ಎನ್.ಆರ್.ಪಾಟೀಲ ಪದವಿ ಪೂರ್ವ ಕಾಲೇಜು, ಶ್ರೀ ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜುಗಳು.
ಉಲ್ಲೇಖಗಳು
[ಬದಲಾಯಿಸಿ]
- Pages with non-numeric formatnum arguments
- Orphaned articles from ಡಿಸೆಂಬರ್ ೨೦೧೫
- All orphaned articles
- Short description is different from Wikidata
- Pages using infobox settlement with bad settlement type
- Pages using infobox settlement with unknown parameters
- Pages using infobox settlement with no map
- Pages using infobox settlement with no coordinates
- ಬೆಳಗಾವಿ ಜಿಲ್ಲೆ
- ಗೋಕಾಕ ತಾಲ್ಲೂಕು
- ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ