ಕಲೀಂ

ವಿಕಿಪೀಡಿಯ ಇಂದ
Jump to navigation Jump to search

ಕಲೀಂ : ೧೬೫೧-. ಪಾರ್ಸಿ ಭಾಷೆಯ ಪ್ರಸಿದ್ಧಕವಿ. ಅಬು ತಾಲಿಬ್ ಕಲೀಂ ಹಮದಾನಿ ಇವನ ಪೂರ್ಣ ಹೆಸರು. ಇರಾನಿನ ಪ್ರಮುಖ ಶಿಕ್ಷಣ ಕೇಂದ್ರವಾಗಿದ್ದ ಹಮದಾನಿನಲ್ಲಿ ಜನಿಸಿ, ಅಲ್ಲಿಯೇ ಶಿಕ್ಷಣ ಪಡೆದ. ಹೆಸರು ಅಬುತಾಲಿಬ್ ಆದರೂ ಕಲೀಂ ಎಂಬ ಕಾವ್ಯನಾಮದಿಂದ ಕವನಗಳನ್ನು ರಚಿಸಿದ. ಹೀಗಾಗಿ ಕಾವ್ಯನಾಮವೂ ಅವನ ಹೆಸರಿನೊಂದಿಗೆ ಸೇರಿಕೊಂಡಿತು. ಕಲೀಂ ಪ್ರತಿಭಾವಂತ ಮತ್ತು ಕನಸುಗಾರ, ಅವನ ಕಲ್ಪನಾಶಕ್ತಿಗೆ ಮತ್ತು ವಿಚಾರ ವೈಭವಕ್ಕೆ ಅನೇಕ ಕವನಗಳು ಸಾಕ್ಷಿಯಾಗಿವೆ.

ಭಾರತದಲ್ಲಿ ಮೊಗಲರು ದರ್ಬಾರು ಮಾಡುತ್ತಿದ್ದ ದಿನಗಳವು. ಮೊಗಲರ ದರ್ಬಾರಿನಿಂದ ಆಕರ್ಷಿತನಾದ ಕಲೀಂ ಭಾರತಕ್ಕೆ ಬಂದು ದೆಹಲಿಯಲ್ಲಿ ನೆಲೆಸಿದ. ಕ್ರಮೇಣ ದೊರೆ ಷಾಜಹಾನನ ಪ್ರೀತಿಗೂ ಪಾತ್ರನಾದ. ಆಸ್ಥಾನದಲ್ಲಿದ್ದ ಮಹಾಕವಿ ಕುದ್ಸಿಯ ಅನಂತರ ದೂರೆ ಕಲೀಮನಿಗೆ ಮಹಾಕವಿಪಟ್ಟ ಕಟ್ಟಿ ಗೌರವಿಸಿದ.

ಕಾಶ್ಮೀರ ಮತ್ತು ಇತರ ಪ್ರದೇಶಗಳ ಮೇಲೆ ದೊರೆ ದಾಳಿ ಮಾಡಿದಾಗ ಕಲೀಮನೂ ಜೊತೆಗಿದ್ದು ಷಾಜಹಾನ್ನಾಮಾ ಎಂಬ ಬೃಹತ್ ಕಾವ್ಯವನ್ನು ರಚಿಸಿದ. ಈ ಕಾವ್ಯದಲ್ಲಿ ಷಾಜಹಾನನ ರಾಜ್ಯಭಾರಕ್ರಮವೇ ಮೊದಲಾದ ವಿವರಗಳು ಬಂದಿವೆ.

ಷಾಜಹಾನ ಜಗತ್ ಪ್ರಸಿದ್ಧವಾದ ಮಯೂರ ಸಿಂಹಾಸನವನ್ನು ಮಾಡಿಸಿದಾಗ ಅದರ ಸೌಂದರ್ಯ ಮತ್ತು ವೈಭವಗಳಿಗೆ ಮಾರುಹೋದ ಕಲೀಂ ಅದರ ಮೇಲೆ ಸುಂದರವಾದ ಪದ್ಯ ಬರೆದು, ರಾಜಾಸ್ಥಾನದಲ್ಲಿ ಓದಿದ. ಇದರಿಂದ ಹರ್ಷಗೊಂಡ ದೊರೆ, ಕವಿಗೆ ತುಲಾಭಾರದ ಮಾರ್ಯಾದೆ ಮಾಡಿಸಿ, ಅಷ್ಟೂ ಹಣವನ್ನು ಅವನಿಗೇ ಕೊಟ್ಟುದಲ್ಲದೆ ಮಲಿಕುಶ್ಯುಅರಾ (ಕವಿಗಳ ಸಾಮ್ರಾಟ) ಎಂಬ ಬಿರುದನ್ನೂ ಕೊಟ್ಟು ಗೌರವಿಸಿದನಂತೆ.

ಕಲೀಮನ ಅನೇಕ ಕವನಗಳಲ್ಲಿ ಕಾಶ್ಮೀರ, ಆಗ್ರ ಮೊದಲಾದ ಕವನಗಳು ಪ್ರಸಿದ್ಧವಾಗಿವೆ. ಭಾರತ ಮತ್ತು ಇರಾನ್ ಈ ಎರಡು ದೇಶಗಳಲ್ಲೂ ಕಲೀಂ ಹೆಸರಾಗಿದ್ದಾನೆ. ತುಂಬು ಸಂತೋಷ ಮತ್ತು ನೆಮ್ಮದಿಯಿಂದ ಜೀವನ ನಡೆಸಿದ ಕಲೀಂ ತನ್ನ ಕೊನೆಯ ದಿನಗಳನ್ನು ಕಾಶ್ಮೀರದಲ್ಲಿ ಕಳೆದ. ಶ್ರೀನಗರದ ಕವಿಗಳ ಸ್ಮಶಾನದಲ್ಲಿ ಇವನನ್ನು ಸಮಾಧಿ ಮಾಡಲಾಗಿದೆ. (ಎಂ.ಎಂ.ಎಚ್.)

"https://kn.wikipedia.org/w/index.php?title=ಕಲೀಂ&oldid=675553" ಇಂದ ಪಡೆಯಲ್ಪಟ್ಟಿದೆ