ಕರ್ನಾಟಕ ನಂದಿನಿ

ವಿಕಿಪೀಡಿಯ ಇಂದ
Jump to navigation Jump to search

ಕರ್ನಾಟಕ ನಂದಿನಿ : ಮಹಿಳೆಯರ ಶಿಕ್ಷಣ, ಅವರಲ್ಲಿ ಧರ್ಮನೀತಿಗಳ ಬೆಳೆವಣಿಗೆ, ಸೌಜನ್ಯಾಭಿವೃದ್ಧಿ ಇವುಗಳಿಗಾಗಿಯೇ ಮೀಸಲಾಗಿದ್ದ, ಮಹಿಳೆಯೊಬ್ಬರಿಂದ ಸಂಪಾದಿತವಾಗಿ ಪ್ರಕಟವಾಗುತ್ತಿದ್ದ ಪತ್ರಿಕೆ. ಪತ್ರಿಕಾ ಪ್ರಪಂಚದಲ್ಲಿ ಸಾಹಿತ್ಯ ಲೋಕದಲ್ಲಿ ಮಹಿಳೆಯರ ಸಾಹಸದ ಗುರುತಾಗಿ ಅದು ಕಂಗೊಳಿಸಿತು. ಮೂರು ವರ್ಷಗಳ ಕಾಲ ಈ ಪತ್ರಿಕೆ ಪ್ರಕಟವಾಗುತ್ತಿದ್ದು ಅನಂತರ ನಿಂತರೂ ಪತ್ರಿಕಾ ಪ್ರಪಂಚದಲ್ಲೂ ಸಾಹಿತ್ಯ ಸಂವರ್ಧನೆಯಲ್ಲೂ ಅದು ತಕ್ಕಮಟ್ಟಿಗೆ ಸೇವೆ ಸಲ್ಲಿಸಿತು.

ಮೈಸೂರಿನ ಬಳಿಯ ನಂಜನಗೂಡಿನಲ್ಲಿ ಸತೀಹಿತೈಷಿಣೀ ಗ್ರಂಥಮಾಲೆತಿರುಮಲಾಂಬಾ 1916ರ ಅಕ್ಟೋಬರಿನಲ್ಲಿ ಈ ಪತ್ರಿಕೆಯನ್ನು ಪ್ರಾರಂಭಿಸಿದರು. ಅವರು 1913ರಲ್ಲಿ ಪ್ರಾರಂಭಿಸಿದ ಸತೀ ಹಿತೈಷಿಣೀ ಗ್ರಂಥಮಾಲೆಯಲ್ಲಿ ಪ್ರಕಟವಾದ ಸಾಹಿತ್ಯ ಕೃತಿಗಳಿಗೆ ದೊರೆತ ಪ್ರೋತ್ಸಾಹವೇ ಇದಕ್ಕೆ ಪ್ರೇರಣೆ. ಆದರೆ ಆರ್ಥಿಕ ತೊಂದರೆಯಿಂದಾಗಿ ಅವರು ಈ ಪತ್ರಿಕೆಯನ್ನು ನಿಲ್ಲಿಸಬೇಕಾಯಿತು (1920). ಇದರ ಚಂದಾದಾರರ ಸಂಖ್ಯೆ ಆಗ ಸುಮಾರು 300. ಆದರೆ ಕರ್ನಾಟಕದ ಹೊರಗಿನ ಮುಂಬಯಿ, ಕಲ್ಕತ್ತ, ಆಗ್ರ ಮೊದಲಾದ ಸ್ಥಳಗಳಲ್ಲೂ ಇದರ ಪ್ರಸಾರ ಸಾಕಷ್ಟಿತ್ತು. ಮಂಗಳೂರಿನಲ್ಲಿ ವಿಶೇಷವಾದ ಪ್ರಸಾರವಿತ್ತು.

ಪತ್ರಿಕೆ ನಂಜನಗೂಡಿನಿಂದ ಪ್ರಕಟವಾಗುತ್ತಿದ್ದರೂ ಮುದ್ರಣವಾಗುತ್ತಿದ್ದುದು ಧಾರವಾಡದ ಕೃಷ್ಣ ಮುದ್ರಣಾಲಯದಲ್ಲಿ. ಈ ಮುದ್ರಣಾಲಯದೊಂದಿಗೆ ಲೋಕಮಾನ್ಯ ತಿಲಕರ ಸಂಬಂಧವಿದ್ದುದರಿಂದ ಪತ್ರಿಕೆಯ ಮುದ್ರಣಕ್ಕೆ ಸರ್ಕಾರ ಪ್ರತಿಬಂಧಕ ಹೇರಬಯಸಿದಾಗ, ತಮ್ಮ ಪತ್ರಿಕೆಯಲ್ಲಿ ರಾಜಕೀಯ ವಿಚಾರಗಳನ್ನು ಪ್ರಕಟಿಸುವುದಿಲ್ಲವೆಂದು ಬರೆದುಕೊಟ್ಟು ಪ್ರಕಟಣೆಗೆ ಅನುಮತಿ ಪಡೆಯಬೇಕಾಯಿತು. ಮೊದಲ ಪುಟ ಕವನದಿಂದ ಪ್ರಾರಂಭವಾಗುತ್ತಿತ್ತು. ಸಾಮಾನ್ಯವಾಗಿ ಇದು ದೇವತಾ ಪ್ರಾರ್ಥನೆಯಾಗಿರುತ್ತಿತ್ತು. ಶ್ರೀಪಾದರೇಣು ಅವರ ಕವಿತೆಗಳೇ ಹೆಚ್ಚು. ಮೊದಲ ಪುಟದ ಪಕ್ಕದಲ್ಲಿ ರನ್ನಗನ್ನಡಿಯಲ್ಲಿ ಪರಿಚಯ ಮಾಡಿಸುತ್ತಿದ್ದ ಪ್ರಸಿದ್ಧ ವ್ಯಕ್ತಿಗಳ ಚಿತ್ರ ಪ್ರಕಟಿಸುತ್ತಿದ್ದರು. ಮುಖಪುಟದಲ್ಲಿ ‘ವಂದೇ ತ್ವಾ ಭೂದೇವಿ ಆರ್ಯ ಮಾತರಂ’ ಎಂಬ ವಾಕ್ಯವಿರುತ್ತಿತ್ತು. ಕ್ರೌನ್ ಅಷ್ಟಪತ್ರದ 52 ಪುಟಗಳಿಂದ ಕೂಡಿದ್ದ ಪತ್ರಿಕೆಯ ಬಿಡಿ ಪ್ರತಿಯ ಬೆಲೆ 2ಳಿ ಆಣೆ: ವಾರ್ಷಿಕ ಚಂದಾ 1ಳಿ ರೂ ಅಂಚೆ ವೆಚ್ಚ ಸೇರಿ.


ಸ್ತ್ರೀ ಶಿಕ್ಷಣ, ಸ್ತ್ರೀ ಸುಧಾರಣೆ, ಸ್ತ್ರೀ ನೀತಿ, ಭಕ್ತಿ ಮುಂತಾದ, ಸ್ತ್ರೀಯರಿಗೆ ಸಂಬಂಧಿಸಿದ, ಅನೇಕ ಲೇಖನಗಳೂ ಧಾರಾವಾಹಿಯಾಗಿ ಐತಿಹಾಸಿಕ ಕಾದಂಬರಿಗಳೂ ಪ್ರಬಂಧಗಳೂ ಆಧ್ಯಾತ್ಮಿಕ ಲೇಖನಗಳೂ ಪ್ರಕಟವಾಗುತ್ತಿದ್ದುವು. ವಿವಾಹ ವಯಸ್ಸನ್ನು ಏರಿಸುವುದರ ಆವಶ್ಯಕತೆಯನ್ನು ಕುರಿತು ಪ್ರಕಟವಾದ ಒಂದು ಲೇಖನ ಉತ್ತಮವಾದದ್ದು. ಪ್ರಬಂಧ ಸ್ಪರ್ಧೆಯನ್ನೂ ಏರ್ಪಡಿಸಲಾಗುತ್ತಿತ್ತು. ಮಹಿಳೆಯರು ಪತ್ರಿಕೆ ಹೊರಡಿಸಬಾರದು ಎಂದು ಹೇಳಿ ಹಲವರು ಈ ಪತ್ರಿಕೆಯನ್ನು ನಿಲ್ಲಿಸಲು ಯತ್ನಿಸಿದಾಗ ಶುಭೋದಯದಲ್ಲಿ ಇವರ ಪರವಾಗಿ ಶ್ರೀ ಶೇಷ ಪಾರಿಶ್ವಾಡರು ಲೇಖನ ಬರೆದು ಬೆಂಬಲ ನೀಡಿದರು. ಈ ಪತ್ರಿಕೆಯ ಲೇಖಕರಿಗೆ ಅಲ್ಪಸ್ವಲ್ಪವಾದರೂ ಗೌರವಧನ ನೀಡಲಾಗುತಿತ್ತು.

ಕರ್ನಾಟಕ ನಂದಿನಿಯಲ್ಲಿ ತಿರುಮಲಾಂಬ ಅವರು ಪ್ರಕಟಿಸಿದ ಲೇಖನಗಳು ಇಂದಿಗೂ ಪ್ರಸ್ತುತ. ಇಂದಿನ ಮಹಿಳಾ ಪತ್ರಿಕೆಗಳನ್ನು ನೋಡಿದಾಗ ಅಲ್ಲಿ ಆಭರಣಗಳು, ಉಡುಗೆ ತೊಡುಗೆ, ಅಲಂಕರಣ ಸಾಮಗ್ರಿಗಳಿಗೆ ನೀಡುವ ಪ್ರಾಧಾನ್ಯತೆ ನೋಡಿದಾಗ, ಕರ್ನಾಟಕ ನಂದಿನಿಯಲ್ಲಿ ಬರೆದ ‘ಒಡವೆಗಳಿಗಾಗಿ ನೀವು ಹಣವನ್ನು ವೆಚ್ಚ ಮಾಡ ಬೇಕೆ?’ ಎಂಬ ಲೇಖನ ಗಮನಾರ್ಹ. ಬಂಗಾರದ ಬೆಲೆ ಇಳಿದ ಸಮಯದಲ್ಲಿ ಚಿನ್ನ ಕೊಳ್ಳುವ ಸಂಭ್ರಮದಲ್ಲಿದ್ದ ಮಹಿಳೆಯರು, ಪುರಷರಿಗೆ ಮಾರ್ಗದರ್ಶನ ನೀಡುವ ಲೇಖನ; “ನೀವು ನಿಮ್ಮ ಹೆಣ್ಣು ಮಕ್ಕಳಿಗೆ ಒಳ್ಳೆಯ ಒಡವೆ ಮಾಡಿಸುವುದಕ್ಕೆ ಕೆಲವು ಕಾಸುಗಳನ್ನು, ಕೆಲವು ರೂಪಾಯಿಗಳನ್ನು ತೆಗೆದಿಟ್ಟಿರಬಹುದಲ್ಲವೆ? ಈ ಹಣವನ್ನು ವೆಚ್ಚ ಮಾಡಿ ನಿಮ್ಮ ಮಗಳಿಗೆ ಚೆನ್ನಾಗಿ ವಿದ್ಯೆ ಕಲಿಸಿದ್ದರೆ, ಮುಂದೆ ಅದರಿಂದ ಎಷ್ಟು ಲಾಭವುಂಟೆಂಬುದನ್ನು ಯೋಚಿಸಿ ನೋಡಿರಿ. ಒಂದು ವೇಳೆ ನೀವು ನಿಮ್ಮ ಮಗಳಿಗೆ ಆಭರಣಗಳ ರೂಪವಾಗಿ ಸ್ವಲ್ಪ ಆಸ್ತಿ ಮಾಡಿಟ್ಟರೆ ಅವಳ ಗಂಡನು ತನ್ನ ಆಸ್ತಿಯನ್ನು ಹಾಳು ಮಾಡಿಕೊಂಡರೂ ಅವಳ ಕುಟುಂಬದ ಜೀವನಕ್ಕೆ ಅನುಕೂಲವಾಗಬಹುದೆಂದು ಯೋಚಿಸಬಹುದು. ಆದರೆ ಒಡವೆಗಳ ರೂಪವಾಗಿ ನೀವು ಆಸ್ತಿ ಮಾಡಿ ಕೊಡುವುದರಿಂದ ಮತ್ತಷ್ಟು ಅಪಾಯವೇ ಹೊರತು ಪ್ರಯೋಜನವಿಲ್ಲ. ಏಕೆಂದರೆ ತನ್ನ ಆಸ್ತಿಯನ್ನೆಲ್ಲಾ ಹಾಳು ಮಾಡಿಕೊಳ್ಳುವಷ್ಟು ಅವಿವೇಕಿಯಾದ ಗಂಡ, ಹೆಂಡತಿಯ ಒಡವೆಗಳನ್ನು ಹಾಳು ಮಾಡದೆ ಬಿಡುವನೆ?’ ಆದುದರಿಂದ ನೀವು ನಿಮ್ಮ ಮಕ್ಕಳಿಗೆ ಒಡವೆಗಳನ್ನು ಮಾಡುವುದರ ಬದಲು ಷೇರುಗಳನ್ನು, ಕ್ಯಾಷ್ಸರ್ಟಿಫಿಕೇಟ್ಗಳನ್ನು ಅವರ ಹೆಸರಿನಲ್ಲಿ ತೆಗೆದು ಅವರಿಗೆ ಆಸ್ತಿಮಾಡಿಕೊಡಿ” ಎಂದು ಸಲಹೆ ಮಾಡಿದ್ದಾರೆ (ಕರ್ನಾಟಕ ನಂದಿನಿ 1920 ಮಾರ್ಚ್ ಸಂಚಿಕೆ).

ತಿರುಮಲಾಂಬ ‘ಕರ್ನಾಟಕ ನಂದಿನಿ’ ಮಾಸಪತ್ರಿಕೆ ಪ್ರಕಟಿಸಿ ಸಾಕಷ್ಟು ಕೈಸುಟ್ಟುಕೊಂಡರೂ ಧೃತಿಗೆಡಲಿಲ್ಲ. ‘ಸನ್ಮಾರ್ಗದರ್ಶನಿ’ ಎಂಬ ತಿಳಿಗನ್ನಡ ನುಡಿಯ ಮಾಸ ಪತ್ರಿಕೆಯನ್ನು 1922ರಲ್ಲಿ ಆರಂಭಿಸಿದರು. ಅದು 1925ರವರೆಗೂ ನಡೆಯಿತು.

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: