ಕರ್ನಾಟಕದ ಕ್ರೈಸ್ತ ಜಾನಪದ
ಅನ್ನಮ್ಮ ಬೆಟ್ಟದ ಶಿಲುಬೆಯಾತ್ರೆ
[ಬದಲಾಯಿಸಿ]ಬೆಂಗಳೂರಿನ ಹೊರವಲಯದ ಉತ್ತರಹಳ್ಳಿಯ ಬಳಿ ಇರುವ ಅನ್ನಮ್ಮ ಬೆಟ್ಟದಲ್ಲಿ ಪ್ರತಿ ತಪಸ್ಸುಕಾಲದ ಐದನೇ ಭಾನುವಾರ ಶಿಲುಬೆಯಾತ್ರೆ ನಡೆಯುತ್ತದೆ. ಸುಮಾರು ೨೦೦ ವರ್ಷಗಳಿಗೆ ಮುನ್ನ ಈ ಬೆಟ್ಟದ ತಪ್ಪಲಿನಲ್ಲಿದ್ದ ಸಾಧ್ವಿ ಹೆಣ್ಣುಮಗಳೊಬ್ಬಳು ಕಾಮುಕ ಸೈನಿಕರಿಂದ ತಪ್ಪಸಿಕೊಳ್ಳಲು ಓಡುತ್ತಾ ಸಾಗಿ ಕೊನೆಗೆ ಬೆಟ್ಟದ ಮೇಲಿನಿಂದ ಹಾರಿ ಪ್ರಾಣಾರ್ಪಣೆ ಮಾಡಿದಳೆಂದೂ ಕೊನೆಗೆ ಅದೇ ಸೈನಿಕರು ಆಕೆಯ ಸಚ್ಚಾರಿತ್ರ್ಯವನ್ನು ಮೆಚ್ಚಿ ಮಣ್ಣು ಮಾಡಿದರೆಂದೂ ಐತಿಹ್ಯವಿದೆ. ಬೆಟ್ಟದ ಬುಡದಲ್ಲಿರುವ ಏಕೈಕ ಕ್ರೈಸ್ತ ಸಮಾಧಿಗೆ ಭಕ್ತರು ವಿಶೇಷವಾಗಿ ಹೆಣ್ಣುಮಕ್ಕಳು ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಸಮಾಧಿಯ ಮಣ್ಣನ್ನು ಜನ ಪೂಜ್ಯಭಾವದಿಂದ ತಮ್ಮ ನೆತ್ತಿಯ ಮೇಲೆ ಹಾಕಿಕೊಳ್ಳುತ್ತಾರೆ. ತಪಸ್ಸುಕಾಲದ ಐದನೇ ಭಾನುವಾರ ಇಲ್ಲಿ ದೊಡ್ಡ ಜಾತ್ರೆಯೇ ನೆರೆಯುತ್ತದೆ. ಜನ ವಾಹನಗಳಲ್ಲೂ ಕಾಲ್ನಡಿಗೆಯಲ್ಲೂ ಇಲ್ಲಿಗೆ ಧಾವಿಸುತ್ತಾರೆ. ಬೆಂಗಳೂರು ನಗರಸಾರಿಗೆಯು ಅಂದು ವಿಶೇಷ ಬಸ್ ವ್ಯವಸ್ಥೆಯನ್ನೂ ಮಾಡುತ್ತದೆ.
ಕೋಲಾಟ
[ಬದಲಾಯಿಸಿ]ಹಬ್ಬದ ದಿನಗಳಲ್ಲಿ, ಸುಗ್ಗಿಯ ದಿನಗಳಲ್ಲಿ ಹಾಗೂ ಇತರ ಸಂತಸದ ಕ್ಷಣಗಳಲ್ಲಿ ನಮ್ಮ ಗ್ರಾಮೀಣ ಜನಪದರು ಕೋಲಾಟವಾಡುತ್ತಾ ನಮ್ಮ ಕ್ರೈಸ್ತ ಪರಂಪರೆಯನ್ನು ಜೀವಂತವಾಗಿರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇಂದು ಕೋಲಾಟ ಬೀಸೋಪದ ಸೋಬಾನೆ ಪದಗಳು ಕ್ರಮೇಣ ನಶಿಸಿಹೋಗುತ್ತಿದ್ದು ಅವುಗಳನ್ನು ದಾಖಲಿಸುವ ಕಾರ್ಯ ಭರದಿಂದ ಆಗಬೇಕಿದೆ.
ಹೆರೋದ ರಾಯನಿಂದ
ಹೆರೋದ ರಾಯನಿಂದ ಬಂದ ನಿರೂಪದ ಮೇರೆಗೆ
ದಾವಿದ ಮಗನಾದ ಜೋಸೆಫ್ ತನ್ನ ಪತ್ನಿಯೊಂದಿಗೆ
ಬೆತ್ಲೆಹೇಂ ಗ್ರಾಮಕ್ಕೆ ಇಬ್ಬರೂ ಚಿತ್ತೈಸಿ ಬಂದರು
ಮನೆಗಳು ಸಿಕ್ಕದೆ ದನಗಳ ಕೊಟ್ಟಿಗೆ ಮಧ್ಯದಲ್ಲಿದ್ದರು
ಡಿಸೆಂಬರ್ ತಿಂಗಳು ಇಪ್ಪತ್ತೈದನೇ ದಿನದಲ್ಲಿ
ಮಧ್ಯರಾತ್ರಿ ಕನ್ಯಾಮರಿಯಮ್ಮ ಮಗನು ಹುಟ್ಟಿದನು
ಆಕಾಶದಿಂದಲಿ ಇಳಿದ ದೇವತೆದೊರೆಗಳು
ಕುರಿಗಳ ಕಾಯುವ ಗೊಲ್ಲರಿಗೆ ಕೊಟ್ಟರು ಸುದ್ದಿಯನು
ಗೊಲ್ಲರೋಡಿಬಂದು ಹೇಳಿದ ಕೊಟ್ಟಿಗೆಯೊಳಗೋಗಿ
ಹುಲ್ಲಿನ ಮೇಲೆ ಮಲಗಿರುವ ಬಾಲರನು ನೋಡಿ
ಇವತ್ತು ದಿನದಲ್ಲಿ ಸ್ವಾಮಿ ರಕ್ಷಣೆ ಉಂಟಾಯ್ತು
ಆದಾಮರಿಗೆ ಆಳಿದ ಕೊಟ್ಟ ವಾಗ್ದತ್ತ ನಿಜವಾಯ್ತು
ಹೆರೋದ ರಾಯನಿಂದ ಬಂದ ನಿರೂಪದ ಮೇರೆಗೆ
ದಾವಿದ ಮಗನಾದ ಜೋಸೆಫ್ ತನ್ನ ಪತ್ನಿಯೊಂದಿಗೆ
ರಾಯರು ಬಂದ ನಡೆಗಳ ಚಂದ
ರಾಯರು ಬಂದ ನಡೆಗಳ ಚಂದ ನೋಡುತಲಿದ್ದೆ ಕಾಣಮ್ಮ
ಜೋತಿಷ್ಯ ರಾಯರ ಬೆಡಗ ಕಂಡು ಬೆರಗಾಗೋದರು ಕಾಣಮ್ಮ
ಬೆತ್ಲೆಹೇಮ್ ಬೋರೆಯ ಕೆಳಗೆ ಬೆಳ್ಳಿ ಮೂಡಿತು ಕಾಣಮ್ಮ
ಬೆಳ್ಳಿ ಮೂಡಿದ ಬೆಳಕ ಕಂಡು ಬೆರಗಾಗೋದರು ಕಾಣಮ್ಮ
ಗಾಡಿ ರಥಗಳ ಹೂಡುತ ಮುಂದಕ್ಕೆ ಗಾಡಿ ನಡೆಸ್ವರು ಕಾಣಮ್ಮ
ನಮ್ಮ ಊರ ನಡೆಸ್ವರು ಕಾಣಮ್ಮ
ನಜರೇತ್ ಮರಿಯಾ ಜೂದರ ದೊರೆಯ ಕೇಳುತ ಬರುತ್ತಾರೆ ಕಾಣಮ್ಮ
ನೆರೇದ ಸುದ್ಧಿ ಹೆರೋದ ಕೇಳಿ ಎದೆ ಬಡಿದುದ್ದನ್ನು ಕಾಣಮ್ಮ
ಕೂಗಿ ಕರೆದುದ್ದನ್ನು ಕಾಣಮ್ಮ
ದಿಕ್ಕುದಿಕ್ಕಿನ ರಾಯರು ಬಂದು ತಕ್ಕೈಸಿಕೊಂಡರು ಕಾಣಮ್ಮ
ಕೋಲನ್ನ ಕೋಲೆ
ಕೋಲನ್ನ ಕೋಲೆ ಕೋಲನ್ನ ಕೋಲೆ
ಕೋಲು ದೇವರತಾಯಿ ಮಗನಿಗೆ
ಗ್ಯಾನ ಪರಸಂಗ ಆಲಿಸಿ ಕೇಳಿದರೆ
ಮಾಡಿದ ಪಾಪ ಪರಿಹಾರ
ದಂಡೆಯ ತಾರೊ
ದಂಡೆಯ ತಾರೋ ದಂಡಿಗಳ ಸ್ವಾಮಿ
ದಂಡೆಯ ಮುತ್ತಿನ ಚೆಂಡುಗಳ
ದಂಡೆಗೂ ದುಂಡಿಗೂ ದುಂಡಾಟ ಬಿದ್ದಾಗ
ದಂಡೆಯ ತಾರೋ ದಂಡಿಗಳ
ಕಡ್ಲೆಯ ಗಿಡಮುರಿದು ಕೊಡ್ಲಿಯ ಕಾವಾದೊ
ಕಡೆದಾವು ಏಳು ಹಲಗ್ಯಾದೊ
ಕಡೆದಾವು ಏಳು ಹಲಗ್ಯಾದೊ ಜೋಸೆಫರ
ಮಠದ ಬಾಗಿಲಿಗೆ ನೆಲುವಾದೊ
ಉದ್ದೀನ ಗಿಡ ಮುರಿದು ಗುದ್ದಲಿ ಕಾವಾದೊ
ತಿದ್ದಿದವೇಳು ಹಲಗ್ಯಾದೊ
ತಿದ್ದಿದವೇಳು ಹಲಗ್ಯಾದೊ ಜೋಸೆಫರ
ಮಠದ ಕಿಟಕಿಗೆ ಮರವಾದೊ
ಶೆಟ್ಟಳ್ಳಿ ಮಠಕೆ ಹತ್ತೆಂಟು ಬಾಗಿಲು
ನಂದಿ ಕಂಬೇಳು ಪಠವೇಳು
ನಂದಿ ಕಂಬೇಳು ಪಠವೇಳು ಜೋಸೆಫರ
ಕಾವಲಿಗ್ಯಾರು ಇರುವರು
ಚೆಂದಾ ನೋಡಿರೇ
ಚೆಂದ ನೋಡಿರೇ ನೀವು ಚೆಂದ ನೋಡಿರೇ
ಚೆಂದ ಜೋಸೆಫರು ಮಠದಲ್ಲಿ ಕೂತಿರ | ಚೆಂದ . . .
ಬಾಲರ ಹಿಡಕಂದು ಲೋಲಾಗಿ ನಿಂತಿರ
ಬಡಗಿ ಜೋಸೆಫರ ಬೆಡಗಿನ ಮಠದಲ್ಲಿ | ಚೆಂದ . . .
ಮಕ್ಕಳ ಹರಸುವ ಲಾಲನೆ ಮಾಡುವ
ಬಡವರ ಪಾಲಕ ಬಡಗಿ ಜೋಸೆಫರ | ಚೆಂದ . . .
ಚಿತ್ರಕಲ್ಲುದುರ್ಗದ ತಾಯೇ
ಚಿತ್ರಕಲ್ಲುದುರ್ಗದ ತಾಯೇ ಚಿತ್ರ ವಿಚಿತ್ರದೊಳ್ ತಾಯೇ
ಮರ್ತ್ಯರ ಕೈಬಿಡಬೇಡಿ ತಾಯೇ ಸತ್ಯವ ಮಾಡು ನಮ್ಮ ತಾಯೇ
ನಿಮ್ಮ ನಂಬಿ ಬೇಡಿದರೆ ನಮ್ಮನೆಂದೂ ಕೈಬಿಡಲಿಲ್ಲ
ನಮ್ಮ ಆರೈಕೆ ಕೈಗೊಂಡು ನೀವು ನಮ್ಮನೆಂದೂ ಕೈಬಿಡಲಿಲ್ಲ
ನಿಮ್ಮ ನಂಬಿ ಬೇಡಿದರೆ ನಮ್ಮನೆಂದೂ ಕೈಬಿಡಲಿಲ್ಲ
ಕಷ್ಟ ನಷ್ಟದೊಳು ನರಳುವ ನಮಗೆ ಇಷ್ಟ ವರವ ನೀಡಿ ತಾಯೇ
ದೃಷ್ಟಿಯಿಟ್ಟು ಕಾಪಾಡಿ ತಾಯೇ ಅಷ್ಟ ಭಾಗ್ಯವ ಕರುಣಿಸು ತಾಯೇ
ತ್ರಿಪದಿಗಳು
[ಬದಲಾಯಿಸಿ]ಸುವ್ವಿ ಆಲೂರು ಸುವ್ವಿ ಬೇಲೂರು
ಸುವ್ವಿ ಸರ್ವೇಸ್ವರನ ಕಣಿಗಾಲೆ | ಏರಿಮ್ಯಾಲೆ
ಹೂವ ಮಾರುವರ ದನಿ ಚೆಂದ
ಮೋಕ್ಷದ ಆದೀಲಿ ಕಲ್ಲಿಲ್ಲ ಮುಳ್ಳಿಲ್ಲ
ಸಾಸಿವೆಯಷ್ಟೂ ಮರಳಿಲ್ಲ | ದೇವರತಾಯಿ
ಸಾಸಿ ಮೋಕ್ಷಕೆ ಕರಕೊಳ್ಳಿ
ಎತ್ತಬಾರದ ಗಂಟೆ ಎದೆಯ ಮ್ಯಾಗಲ ಶಿಲುಬೆ
ಎತ್ತ ಹೋಗಿದ್ರಿ ಮರಿಯವ್ವ | ನಿಮ್ಮ ಮಗ
ಭಾರದ ಶಿಲುಬೆಲಿ ಒರಗವರೆ
ಚಿತ್ರಕಲ್ಲು ದುರ್ಗದ ಮಾತೆ
[ಬದಲಾಯಿಸಿ]ಯೇಸುಕ್ರಿಸ್ತನನ್ನು ತೋಳಲ್ಲಿ ಹಿಡಿದ ವಾತ್ಸಲ್ಯಮಯಿ ತಾಯಿಯಾಗಿ ಕಂಡುಬರುತ್ತಾಳೆ ಚಿತ್ರಕಲ್ಲುಮಾತೆ ಅರ್ಥಾತ್ ಮರಿಯಾಮಾತೆ. ಬಿದಿಗೆ ಚಂದ್ರನ ಮೇಲೆ ವಿರಾಜಮಾನರಾಗಿರುವ ಮರಿಯಾಮಾತೆಯು ನಿರಾಭರಣಳಾಗಿ ನಿರ್ಮಲವದನಳಾಗಿ ಕಂಗೊಳಿ ಸುತ್ತಿದ್ದಾಳೆ. ಅವಳ ಒಂದು ಕೈಯಲ್ಲಿ ಪುಟ್ಟಬಾಲಕ ಯೇಸು ಕುಳಿತು ಹಸನ್ಮುಖನಾಗಿ ನೋಡುತ್ತಿದ್ದಾನೆ. ಮರಿಯಳ ಮೊಗದಲ್ಲಿ ವಾತ್ಸಲ್ಯ ದಯಾರ್ದ್ರತೆಗಳು ಎದ್ದುಕಾಣುತ್ತವೆ. ಬಹುಶಃ ಹೈದರಾಲಿಯ ಸೇನೆಯಲ್ಲಿದ್ದ ಕ್ರೈಸ್ತ ತುಕಡಿಯೊಂದರ ದೈವವಾಗಿದ್ದ ಈ ಎರಡು ಅಡಿ ಎತ್ತರದ ಮರದ ಪ್ರತಿಮೆ ಆ ಸೇನೆಯೊಂದಿಗೇ ರಣರಂಗಗಳನ್ನು ಸುತ್ತುತಿದ್ದುದು ಟಿಪ್ಪುವಿನ ಕಾಲದಲ್ಲಿ ಕ್ರೈಸ್ತ ತುಕಡಿಯ ಬರಖಾಸ್ತಿನೊಂದಿಗೆ ನೆಲೆ ಕಳೆದುಕೊಂಡಿತು. ಬ್ರಿಟಿಷ್ ಪಡೆಗಳು ಶ್ರೀರಂಗಪಟ್ಟಣದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ದಾರಿಯಲ್ಲಿ ಸಿಗುವ ಕ್ರೈಸ್ತ ನೆಲೆಗಳಲ್ಲಿ ತಂಗುತ್ತಾ ಬರಹುದು ಎಂಬ ಆತಂಕದಲ್ಲಿ ಟಿಪ್ಪುಸುಲ್ತಾನನು ಚಿಕ್ಕರಸಿನಕೆರೆ, ಪಾಲಳ್ಳಿ, ಗಂಜಾಂ, ಕಿರಂಗೂರು ಮುಂತಾದ ಊರುಗಳಲ್ಲಿನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಘಟನೆಗೆ ಪೂರಕ ವಾಗುವ ದೇವಾಲಯ(ಚರ್ಚ್)ಗಳನ್ನು ಹಾಳುಗೆಡವಿದ್ದ. ಇದರಿಂದ ಕ್ರೈಸ್ತರಲ್ಲಿ ಜೀವಭಯ ಹುಟ್ಟಿ ಕೈಗೆ ಸಿಕ್ಕ ವಸ್ತುಗಳನ್ನು ತೆಗೆದುಕೊಂಡು ಸುರಕ್ಷಿತ ನೆಲೆಗಳಿಗೆ ಓಡಿಹೋಗಿರಬಹುದೆನ್ನಿಸುತ್ತದೆ. ಅಂಥ ಸುರಕ್ಷಿತ ತಾಣ ಹಾರೋಬೆಲೆ ಎಂಬ ಊರಿನಲ್ಲಿ ಇಂದಿಗೂ ಸಿಪಾಯಿ ಜೋಸೆಫ್, ಪಟ್ಟಣದ ಚೌರಪ್ಪ, ಗಂಜಾಂ ಚೌರಣ್ಣ, ಪಾಲಳ್ಳಿ ಜೋಸೆಫ್ ಹೆಸರಿನ ಮನೆತನಗಳನ್ನು ಕಾಣಬಹುದಾಗಿದೆ. ಬಹುಶಃ ಈ ಜನರೊಂದಿಗೇ ಬಂದು ಇಲ್ಲಿ ನೆಲೆನಿಂತ ಚಿತ್ರಕಲ್ಲುಮಾತೆಯ ಪ್ರತಿಮೆ ಇಂದಿಗೂ ಕನ್ನಡ ಕ್ರೈಸ್ತರ ಜಾನಪದ ದೈವವಾಗಿ ಜನರನ್ನು ಪೊರೆಯುತ್ತಿದೆ. ಹಿರಿಯ ತಲೆಗಳು ಇಂದಿಗೂ ದೇವಾಲಯದಲ್ಲಿರುವ ಚಿತ್ರಕಲ್ಲುಮಾತೆಯ ಪ್ರತಿಮೆಯ ಮುಂದೆ ಮೊಣಕಾಲೂರಿ ಪ್ರಾರ್ಥನೆ ಸಲ್ಲಿಸುತ್ತಾರೆ. ವರ್ಷಕ್ಕೊಂದು ಸಾರಿ ಈ ಚಿತ್ರಕಲ್ಲುಮಾತೆಯ ಪ್ರತಿಮೆಯನ್ನು ಹೊರತಂದು ತೇರಿನಲ್ಲಿ ಕೂರಿಸಿ ಊರಲ್ಲೆಲ್ಲಾ ಮೆರವಣಿಗೆ ಸಾಗುತ್ತಾರೆ. ಆ ಸಂದರ್ಭದಲ್ಲಿ ಕೋಲಾಟವನ್ನೂ ಆಡುತ್ತಾರೆ.
ಲಾಲಿಪದ
[ಬದಲಾಯಿಸಿ]ದೂರಿ ದೂರಿ ದುಂಡಲಮ್ಮ
ಕೇರಿ ನಮಕ್ಕಳ ಕೆಣಕಲಮ್ಮ
ಎಲ್ಲಿ ಕಂಡಿರೆ ನಮ್ಮ ಕಂದನ್ನ
ಕಂಡೆವು ಕ್ಯಾದಿಗಿ ವನದಲ್ಲಿ
ಆನೆ ಕೊಟ್ಟರು ಬರುವಲ್ಲಾ
ಕುದುರಿ ಕೊಟ್ಟರು ಬರುವಲ್ಲ
ಸೋದರಮಾವನ ಮಗಳನ್ನ ಕೊಟ್ಟರೆ
ಓಡೋಡಿ ಬಂದು ಜಾರಿ ಜಾರಿ ಬಿದ್ದ
ಹಾರೋಬೆಲೆ ಮಹಿಮೆ
[ಬದಲಾಯಿಸಿ]ಹಾರೋಬೆಲೆ ಮಹಿಮೆ ಎಂಬ ನಾಟಕ ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮವು ಪುರಾತನ ಕ್ರೈಸ್ತ ಕೇಂದ್ರವಾಗಿದ್ದು "ಮಹಿಮೆ" ಎಂಬ ನಾಟಕ ಪ್ರದರ್ಶನದಿಂದ ಪ್ರಖ್ಯಾತವಾಗಿದೆ. ೧೯೦೬ರಿಂದಲೂ ನಿರಂತರವಾಗಿ ಪ್ರತಿ ವರ್ಷ ಶುಭಶುಕ್ರವಾರ, ಪವಿತ್ರ ಶನಿವಾರಗಳಂದು ಪ್ರದರ್ಶಿತವಾಗುತ್ತಿರುವ ಈ ನಾಟಕವನ್ನು ಪ್ರಾರಂಭಿಸಿದವರು ಸ್ವಾಮಿ ಲಾಜರ್ ಅವರು. ಇವರು ೧೯೦೦ರಿಂದ ೧೯೨೫ರವರೆಗಿನ ಅವಧಿಯಲ್ಲಿ ಸೋಮನಹಳ್ಳಿ, ಕಾನಕಾನಹಳ್ಳಿ, ಬೆಟ್ಟಹಲಸೂರು, ಮಾರ್ಟಳ್ಳಿ, ಕೌದಳ್ಳಿ, ಪರಸೇಗೌಡನಪಾಳ್ಯ, ಕೊಳ್ಳೆಗಾಲ, ಶಿವಸಮುದ್ರಗಳನ್ನು ಸಂಧಿಸುತ್ತಾ ವರ್ಷದಲ್ಲಿ ಮೂರು ತಿಂಗಳು ಹಾರೋಬೆಲೆಯಲ್ಲಿ ಉಳಿಯುತ್ತಿದ್ದರು. ೧೩-೦೪-೧೯೦೬ ಶುಭಶುಕ್ರವಾರದಂದು ಪ್ರಥಮಭಾರಿಗೆ ಪಂಜಿನ ಬೆಳಕಿನಲ್ಲಿ 'ಯೇಸುಸ್ವಾಮಿಯ ಪಾಡುಗಳ ನಾಟಕ'ವನ್ನು ಪ್ರಯೋಗಿಸಿದರು. ಹೀಗೆ ಆರು ಮಂದಿ ಪಾತ್ರಧಾರಿಗಳಿಂದ ಆಡಲಾದ ಯೇಸುಕ್ರಿಸ್ತನ ನಾಟಕವನ್ನು ಇಂದು ಹಿರಿಯ ಕಿರಿಯರೆನ್ನದೆ ೬೦ ಪಾತ್ರಧಾರಿಗಳು ಎರಡು ಇಡೀ ರಾತ್ರಿ ಅಭಿನಯಿಸುತ್ತಾರೆ. ಶುಭಶುಕ್ರವಾರ ರಾತ್ರಿ ಪೂಜ್ಯ ಪಾಡುಗಳ ಕುರಿತಂತೆ (ಸಭಾವಂದನೆಯಿಂದ ಪ್ರಾರಂಭವಾಗಿ, ಯೇಸುಸ್ವಾಮಿ ಪವಾಡ ಮೆರೆಯುವ ದೃಶ್ಯದಿಂದ ಮುಂದುವರಿದು, ಯೇಸುವಿನ ಸಮಾಧಿಗೆ ಮುದ್ರೆಹಾಕಿ ಪಹರೆ ನೇಮಿಸುವ ತನಕ ೧ರಿಂದ ೧೭ ದೃಶ್ಯಗಳು), ಪವಿತ್ರಶನಿವಾರದ ರಾತ್ರಿ ಯೇಸು ಪುನರುತ್ಥಾನದ ಕುರಿತಂತೆ(೧೮ರಿಂದ ೨೪ದೃಶ್ಯಗಳು ಕೊನೆಗೆ ಮಂಗಳ) ಹಾಗೂ ಪಾಸ್ಖ ಭಾನುವಾರದ ರಾತ್ರಿ ಯಾವುದಾದರೂ ಧಾರ್ಮಿಕ ಚರಿತ್ರೆಯ ಕುರಿತಂತೆ ನಾಟಕಗಳು ಪ್ರಯೋಗವಾಗುತ್ತವೆ.
ಮರಿಯಾಪುರದ ನಾಟಕ
[ಬದಲಾಯಿಸಿ]ಬೆಂಗಳೂರು ಕನಕಪುರ ರಸ್ತೆಯಲ್ಲಿ ನಗರದಿಂದ ೨೪ ಕಿಲೋಮೀಟರು ದೂರದ ಬನ್ನೇರುಘಟ್ಟದ ತಪ್ಪಲಿನಲ್ಲಿರುವ ತಟ್ಟುಗುಪ್ಪೆಯೆಂಬ ಬೇಚಿರಾಕ್ ಗ್ರಾಮವೇ ಇಂದಿನ ಮರಿಯಾಪುರ. ಹತ್ತೊಂಬತ್ತನೇ ಶತಮಾನದ ಕೊನೆಯ ಭಾಗದಲ್ಲಿ ಸಂಭವಿಸಿದ ಭೀಕರ ಕ್ಷಾಮ ಮತ್ತು ಪ್ಲೇಗಿನಲ್ಲಿ ಬದುಕುಳಿದ ಸುಮಾರು ೬೦೦ ಅನಾಥ ಮಕ್ಕಳಿಗಾಗಿ ಕಟ್ಟಲಾದ ಈ ಗ್ರಾಮದ ರೂವಾರಿ ಸ್ವಾಮಿ ಫಿಲಿಪ್ ಸಿಝನ್ ಎಂಬ ಫ್ರೆಂಚ್ ಪಾದ್ರಿ. ಇವರ ಸ್ಮರಣಾರ್ಥವಾಗಿ ೧೯೯೬ ರಿಂದ ಇಲ್ಲಿ ಧ್ವನಿ ಬೆಳಕಿನ ಬಯಲು ರಂಗಪ್ರದರ್ಶನ ನಡೆಯುತ್ತಿದೆ. ೧೯೯೪ರಿಂದ ೨೦೦೫ರವರೆಗೆ ಇಲ್ಲಿ ಕಾರ್ಯಭಾರ ನಡೆಸಿದ ಸ್ವಾಮಿ ಎ ತೋಮಾಸ್ ಅವರ ಅವಿರತ ಶ್ರಮದ ಫಲವಾಗಿ ಈ ನಾಟಕ ಪ್ರದರ್ಶನ ಕಾಣುತ್ತಿದೆ.