ವಿಷಯಕ್ಕೆ ಹೋಗು

ಕರ್ಣಕುಂಡಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ಣಕುಂಡಲ ಬಾಲ್ಸಾಮಿನೇಸೀ ಕುಟುಂಬಕ್ಕೆ ಸೇರಿದ ಒಂದು ವಾರ್ಷಿಕ ಸಸ್ಯ. ಇದರ ವೈಜ್ಞಾನಿಕ ಹೆಸರು ಇಂಪೇಷಿಯೆನ್ಸ್‌ಮಿನ. ಇದನ್ನು ಗೌರಿಹೂಗಿಡ, ಬಸವನ ಪಾದ ಇತ್ಯಾದಿ ಹೆಸರುಗಳಿಂದಲೂ ಕರೆಯಲಾಗುತ್ತದೆ. ವರ್ಣರಂಜಿತ ಹೂ ಬಿಡುವ ಇದು ಸಾಮಾನ್ಯವಾಗಿ ಉದ್ಯಾನ, ಕೈತೋಟಗಳಲ್ಲಿ ಮನೆಯ ಆವರಣಗಳಲ್ಲಿ ಬೆಳೆಸಲು ಯೋಗ್ಯವಾದ ಗಿಡ. ಇದನ್ನು ಕುಂಡಗಳಲ್ಲಿಯೂ ಹೂ ಮಡಿಗಳಲ್ಲಿಯೂ ಬೆಳೆಸಬಹುದು. ಇದರ ಹೂಗಳು ಪುಜೆಗೆ ಶ್ರೇಷ್ಠವಾದವೆಂದು ನಂಬಿಕೆ. ಹೆಣ್ಣುಮಕ್ಕಳು ಮುಡಿಯುವುದು ಕಡಿಮೆ. ಇದರಲ್ಲಿ ಬಿಳಿ, ಕೆಂಪು, ಕಿತ್ತಳೆ, ಗುಲಾಬಿ, ನೇರಳೆ ಇತ್ಯಾದಿ ಬಣ್ಣಗಳ ಹೂ ಬಿಡುವ, ದಳಗಳ ಮೇಲೆ ಚುಕ್ಕೆಗಳಿರುವ ಹೂವುಳ್ಳ, ಒಂಟಿ ಸುತ್ತಿನ ಅಥವಾ ಹಲವಾರು ಸುತ್ತಿನ ಹೂಗಳು ಹೆಚ್ಚು ಸುಂದರವೂ ಆಕರ್ಷಕವೂ ಆಗಿವೆ.

ತ್ಯಾರಣ ಹೂವು
ಕರ್ಣಕುಂಡಲ ಗಿಡದ ಹೂವು
ಹೂವು ಮತ್ತು ಕಾಯಿಗಳು

ಬೀಜದಿಂದಲೇ ಈ ಸಸ್ಯ ಸುಲಭವಾಗಿ ವೃದ್ಧಿಯಾಗುತ್ತದೆ. ಇದು ಮಳೆಗಾಲದಲ್ಲಿ ಚೆನ್ನಾಗಿ ಬೆಳೆಯಬಲ್ಲುದು. ಚಳಿಗಾಲದಲ್ಲಿ ಇದಕ್ಕೆ ಬೂಷ್ಟು ರೋಗದ ಕಾಟ ಹೆಚ್ಚು. ಮೊದಲು ನರ್ಸರಿಯಲ್ಲಿ ಬೀಜ ಹಾಕಿ ಸಸಿಗಳನ್ನು ಉತ್ಪಾದಿಸಿ ಅನಂತರ ಹೂವಿನ ಮಡಿಗಳಲ್ಲಿ ಸ್ಥಳಾಂತರಿಸಬೇಕು. 6"-8" ಅಂತರವಿರುವಂತೆ ಸಸಿಗಳನ್ನು ನೆಡಬೇಕು. ಇದು ಸಾಮಾನ್ಯವಾಗಿ ಯಾವ ಬಗೆಯ ಭೂಮಿಯಲ್ಲಾದರೂ ಬೆಳೆಯುತ್ತದೆ. ಆದರೆ ಸಾಕಷ್ಟು ಕೊಳೆತ ಗೊಬ್ಬರ ಹಾಕಿ ನೀರುಣಿಸಿದರೆ ಗಿಡ ಹುಲುಸಾಗಿ ಬೆಳೆಯುತ್ತದೆ. ಗೊಬ್ಬರ ಅತಿಯಾದರೆ, ಎಲೆಗಳೇ ಹೆಚ್ಚಿ ಹೂ ಕಡಿಮೆ ಆಗಬಹುದು. ಸ್ಥಳಾಂತರಿಸಿದ 40-50 ದಿವಸಗಳಲ್ಲಿ ಹೂ ಬಿಡುತ್ತದೆ. ಕಾಯಿಯಾಗುವ ಮೊದಲೇ ಹೂಗಳನ್ನು ತೆಗೆದು ಹಾಕುತ್ತಿದ್ದರೆ ದೀರ್ಘಕಾಲ ಹೂ ಬಿಡುತ್ತದೆ. ಹೂ ಬಿಟ್ಟಾಗ ಎಲೆಗಳ ಸಂಖ್ಯೆಯನ್ನು ಕಡಿಮೆ ಮಾಡಿದರೆ. ಹೂಗಳ ಪ್ರಾಮುಖ್ಯ ಹಾಗೂ ಸೌಂದರ್ಯ ಎದ್ದು ಕಾಣುತ್ತದೆ.

ಇದು ಸುಮಾರು 12 ಇಂಚು-15 ಇಂಚು ಎತ್ತರಕ್ಕೆ ಬೆಳೆಯುವ ಮೂಲಿಕೆಸಸ್ಯ (ಹರ್ಬ್). ಕಾಂಡ ಮತ್ತು ಶಾಖೆಗಳನ್ನು ಬೆಳಕಿಗೆ ಎದುರಾಗಿ ಹಿಡಿದಾಗ, ಒಳಗಿರುವ ನಾಳಗಳು (ನೀರ್ನಾಳ ಮತ್ತು ಆಹಾರನಾಳ) ದಪ್ಪ ಗೆರೆಗಳಂತೆ ಎದ್ದು ಕಾಣುತ್ತವೆ. ಒಂದು ಚಿಕ್ಕ ಗಿಡವನ್ನು ಬೇರು ಸಹಿತ ಕಿತ್ತು ಬಣ್ಣದ ದ್ರಾವಣದಲ್ಲಿ (ಇಯಸೀನ್ ದ್ರಾವಣ) ಕೆಲಹೊತ್ತು ಇಟ್ಟರೆ, ನಾಳಗಳೊಳಕ್ಕೆ ದ್ರಾವಣ ಪ್ರವಹಿಸಿ ನಾಳಗಳು ಕೆಂಪಾಗಿ ಇನ್ನಷ್ಟು ಎದ್ದು ಕಾಣುತ್ತವೆ. ಎಲೆಗಳು ಸರಳ. ಇವು ಕಾಂಡದ ಮೇಲೆ ವಿವಿಧ ರೀತಿಯಲ್ಲಿ ಜೋಡಣೆಯಾಗಿವೆ. ಸಾಮಾನ್ಯವಾಗಿ ವೃಂತಪತ್ರಗಳಿಲ್ಲ. ಕೆಲವೊಮ್ಮೆ ವೃಂತಪತ್ರ ಗ್ರಂಥಿಗಳಿರಿತ್ತವೆ. ಹೂಗಳು ಅಸಮ; ವಿಪರ್ಯಸ್ತ ಮತ್ತು ಆಕರ್ಷಕವಾಗಿದ್ದು, ಎಲೆಗಳ ಕಂಕುಳಲ್ಲಿ (ಆಕ್ಸಿಲ್) ಒಂಟೊಂಟಿಯಾಗಿ ಹುಟ್ಟುತ್ತವೆ. ಆದರೆ ಕೆಲವೊಮ್ಮೆ ಅಪವಾದವಾಗಿ, ಚಿಕ್ಕ ಗೊನೆಯಂತಿರುವ ಮಧ್ಯಾರಂಭಿ ಹೂಗೊಂಚಲುಗಳಲ್ಲೂ ಹುಟ್ಟುವುದುಂಟು. ಪುಷ್ಟಪತ್ರಗಳ ಸಂಖ್ಯೆ 3, ಒಮ್ಮೊಮ್ಮೆ 5; ವರ್ಣಮಯ; ಮುಂಭಾಗದಲ್ಲಿನ 2 ಪತ್ರಗಳು ಕಿರಿದಾಗಿವೆ. ಪಾಶರ್ವ್‌ ಬದಿಯಲ್ಲಿನ 2 ಪತ್ರಗಳು ಚಿಕ್ಕವೂ ಚಪ್ಟಟೆಯೂ ಆಗಿದ್ದು ಸಾಮಾನ್ಯವಾಗಿ ಹಸಿರಾಗಿವೆ. ಇಡೀ ಹೂವೇ ತಿರುವುಮುರುವಾಗಿರುವುದರಿಂದ ತುಟಿಯಂತಿರುವ ಹಿಂದಿನ ಭಾಗದ ಪುಷ್ಪಪತ್ರ ಮುಂಭಾಗಕ್ಕೆ ಬಂದಂತಿರುತ್ತದೆ. ಇದು ದೊಡ್ಡದಾಗಿದ್ದು, ದಳದಂತೆ ಕಾಣುತ್ತದೆ. ಅಲ್ಲದೆ ಇದಕ್ಕೆ ಒಂದು ಪೊಳ್ಳಾದ ಹಾಗೂ ಬಾಗಿದ ಸೊಂಡಿಲಿನಂಥ (ಸ್ಪರ್) ರಚನೆಯಿದೆ. ಪುಷ್ಪದಳಗಳು 3 ಅಥವಾ 5; ಮುಂದಿನ ದಳ ಪತಾಕೆಯಂತಿದ್ದು (ಸ್ಟಾಂಡರ್ಡ್) ಹೂ ತಿರುವುಮುರುವಾಗಿರುವುದರಿಂದ ಹೂವಿನ ಹಿಂಬದಿಗೆ ಬರುತ್ತದೆ. ಮೊಗ್ಗಿನಲ್ಲಿ ಈ ದಳ ಅತ್ಯಂತ ಹೊರಭಾಗದಲ್ಲಿರುತ್ತದೆ. ರೆಕ್ಕೆಯಂಥ ಪಾಶರ್ವ್‌ದಳಗಳು 2 ಭಾಗಗಳಾಗಿ ಸೀಳಿವೆ. ಕೆಲವು ಬಾರಿ ಎರಡೂ ಕೂಡಿಕೊಂಡಿರುವುದು ಉಂಟು. ಕೇಸರಗಳು 5, ಕೇಸರದಂಡ ಅಗಲವಾಗಿಯೂ ಚಿಕ್ಕದಾಗಿಯೂ ಇದೆ. ಪರಾಗಕೋಶಗಳು ಒಂದಕ್ಕೊಂದು ಕೂಡಿಕೊಂಡಿವೆ. ಅಂಡಾಶಯ ಉಚ್ಚಸ್ಥಾನದ್ದು; ಆಯತಾಕಾರವಾಗಿದೆ. ಇದರಲ್ಲಿ 5 ಕೋಣೆಗಳಿವೆ. ಒಂದೊಂದು ಕೋಣೆಯಲ್ಲಿಯೂ ಅಸಂಖ್ಯಾತ ಅಂಡಕಗಳಿದ್ದು ಇವು ಸಾಲಾಗಿ ಜೋಡಣೆಗೊಂಡಿರುತ್ತವೆ. ಶಲಾಕೆ ಇಲ್ಲ. ಶಲಾಕಾಗ್ರ ಅಂಡಾಶಯದ ಮೇಲೇ ಇದೆ. ಅದರಲ್ಲಿ 5 ಮೂಲೆಗಳಿವೆ. ಫಲ ಒಡೆಯುವ ಮಾದರಿಯದು. ಅದು ಸಂಪುಟ (ಕ್ಯಾಪ್ಸುಲ್) ಜಾತಿಗೆ ಸೇರಿದೆ. ಇದರ ಕೋಶ ಸ್ಫುಟನ ಶಕ್ತಿ ಮತ್ತು ಬೀಜಗಳ ಬಿಡುಗಡೆಯ ರೀತಿ ಗಮನಾರ್ಹವೆನಿಸಿದೆ. ಅಂಡಕೋಶದಲ್ಲಿ 5 ವಿಭಾಗಗಳಿದ್ದು ಅವು ಅಂಡಕಾಧಾರ ದಂಥ ಅಕ್ಷದಿಂದ ಸ್ಥಿತಿಸ್ಥಾಪಕ ಗುಣವುಳ್ಳ ರಬ್ಬರಿನಂತೆ ಹಿಡಿದು ಸ್ಫೋಟಗೊಳ್ಳುತ್ತವೆ. ಬೀಜಗಳು ನುಣುಪು ಇಲ್ಲವೆ ಒರಟು, ಹೊಳಪು ಇಲ್ಲವೆ ರೋಮಮಯವಾಗಿರುತ್ತವೆ. ಇಂಪೇಷಿಯೆನ್ಝ್‌ ಬಾಲ್ಸಾಮಿನ ಪ್ರಭೇದವೊಂದೇ ಅಲ್ಲದೆ ಇದೇ ಜಾತಿಗೆ ಸೇರಿದ ಸುಮಾರು 115 ಬೇರೆ ಪ್ರಭೇದಗಳುಂಟು. ಇವು ಹೆಚ್ಚಾಗಿ ಏಷ್ಯ ಮತ್ತು ಆಫ್ರಿಕಗಳ ಉಷ್ಣ ಪ್ರದೇಶಗಳಲ್ಲಿ ಬೆಳೆಯುತ್ತವೆ. ಭಾರತದಲ್ಲಿ ಸುಮಾರು 70ಕ್ಕೂ ಹೆಚ್ಚು ಪ್ರಭೇದಗಳಿವೆಯೆಂದು ತಿಳಿದಿದೆ. ಇವುಗಳಲ್ಲಿ ಕೆಲವು ಸ್ವಾಭಾವಿಕವಾಗಿ ಬೆಳೆಯುವ ಕಾಡುಪ್ರಭೇದಗಳು; ಇನ್ನು ಕೆಲವು ಉದ್ಯಾನದಲ್ಲಿ ಪ್ರಾಮುಖ್ಯ ಪಡೆದವು. ಉದ್ಯಾನಗಳಲ್ಲಿ ಬೆಳೆಸುವ ಕೆಲವು ಮುಖ್ಯ ಪ್ರಭೇದವನ್ನು ಕೆಳಗೆ ಉಲ್ಲೇಖಿಸಿದೆ. ಇಂಪೇಷಿಯೆನ್ಝ್‌ ಸುಲಾನಿ ಮತ್ತು ಇಂಪೇಷಿಯೆನ್ಝ್‌ ಹೋಲ್ಸ್ಟೈ - ಇವು ಬಹುವಾರ್ಷಿಕ ರಸಭರಿತ ಸಸ್ಯಗಳು. ಇವನ್ನು ಸ್ವಲ್ಪ ನೆರಳಿರುವ ಪ್ರದೇಶಗಳಲ್ಲಿ ಬೆಳೆಸಬಹುದು. ಇವಲ್ಲದೆ ಇಂಪೇಷಿಯೆನ್ಝ್‌ ಹಾಕರಿ, ಇಂ. ಆಲಿವರೈ, ಇಂ. ಹುಕರಿಯಾನ ಮತ್ತು ಇಂ. ಮಲಬಾರಿಕಮ್-ಇವನ್ನು ರಾಕರಿ ಮತ್ತು ತೂಗುಬುಟ್ಟಿಗಳಲ್ಲಿ ಬೆಳೆಸಬಹುದು, ಇವನ್ನು ಗಿಣ್ಣುಗಳಿಂದ ವೃದ್ಧಿಮಾಡಬಹುದು. ಇವುಗಳ ಹೂಗಳ ಬಣ್ಣ ಹಳದಿ. ಈ ಪ್ರಭೇದಗಳ ಸಾಮಾನ್ಯ ಜಾತಿಯ ವಿವರಗಳಿಗೆ (ನೋಡಿ- ಇಂಪೇಷಿಯೆನ್ಝ್‌). (ಎಂ.ಎಸ್.ಎಸ್.ಆರ್.;ಕೆ.)