ಕರಿಬಸವಶಾಸ್ತ್ರೀ ಪಿ ಆರ್
ಕರಿಬಸವಶಾಸ್ತ್ರೀ ಪಿ ಆರ್. : 19ನೆಯ ಶತಮಾನದ ಉತ್ತರಾರ್ಧ ಮತ್ತು 20ನೆಯ ಶತಮಾನದ ಪುರ್ವಾರ್ಧದಲ್ಲಿ ಮೈಸೂರಿನಲ್ಲಿ ಆಗಿಹೋದ ಪಂಡಿತರಲ್ಲಿ ಅಗ್ರಗಣ್ಯರು. ಇವರ ತಂದೆ ಪಂಡಿತ ರುದ್ರಪ್ಪ, ತಾಯಿ ನಂಜಮ್ಮ. ಶಾಸ್ತ್ರಿಗಳ ಜನನ ಮೈಸೂರಿನಲ್ಲಿ. ಬೆಟ್ಟದಪುರದ ಬಸವದೇವರು, ಬೆಟರಿ ಬಸವ ಲಿಂಗಪ್ಪನವರು ಬಾಚಳ್ಳಿ ಶ್ರೀಕಂಠಶಾಸ್ತ್ರೀಗಳು-ಇವರುಗಳಲ್ಲಿ ಕನ್ನಡ ಸಂಸ್ಕೃತ ಅಭ್ಯಾಸಮಾಡಿ 20ನೆಯ ವರ್ಷದಲ್ಲಿ ಗಣ್ಯವಿದ್ವಾಂಸರೆನಿಸಿದರು. ಮೈಸೂರು ವೆಸ್ಲಿಯನ್ ಹೈಸ್ಕೂಲಿನಲ್ಲಿ 15 ವರ್ಷ, ಮೈಸೂರು ಮಹಾರಾಜ ಕಾಲೇಜಿನಲ್ಲಿ 30 ವರ್ಷ ಕನ್ನಡ ಪಂಡಿತರಾಗಿ ಕೆಲಸ ಮಾಡಿದರು. ಬೈಬಲ್ ಸಮಿತಿಯ ಸದಸ್ಯರಾಗಿ ರೆವರೆಂಡ್ ಗ್ರೀನ್ಹುಡ್, ಹಾಕಿನ್, ಹೆನ್ ಕಾಸ್ಟಿಕ್, ಗಲಿಫರ್ಡ್, ರೀಡಿರ್ಟ, ಥಾಮ್ಸನ್, ಮಿಸೆಸ್ ಗಲಿಫರ್ಡ್-ಮೊದಲಾದವರಿಗೆ ಕನ್ನಡದ ಬೋಧಕರಾಗಿದ್ದರು. ಖಾಸಗಿಯಾಗಿ ಕೂಡ ಹಲವಾರು ವಿದ್ವಾಂಸರು ಇವರ ಶಿಷ್ಯತ್ವವನ್ನು ವಹಿಸಿ ಉದ್ದಾಮ ಪಂಡಿತರೆನಿಸಿದರು. ಕರ್ಣಾಟಕ ಕವಿಚರಿತೆಯ ರಚನೆಯ ಕಾಲದಲ್ಲಿ ಇವರು ಆರ್. ನರಸಿಂಹಾಚಾರ್ಯರಿಗೆ ನೆರವಾಗಿದ್ದರು. ಮೈಸೂರು ಅರಮನೆಯಲ್ಲಿ ಆಸ್ಥಾನ ವಿದ್ವಾಂಸರಾಗಿದ್ದರು. 1918ರಲ್ಲಿ ಮಹಾರಾಜರ ದರ್ಬಾರಿನಲ್ಲಿ ಇವರಿಗೆ ಕರ್ಣಾಟಕ ಭಾಷಾರತ್ನ ಎಂಬ ಬಿರುದು ಪ್ರಾಪ್ತವಾಯಿತು. ಉದ್ದಾಮ ಪಂಡಿತರಾದ ಕರಿಬಸವಶಾಸ್ತ್ರೀಗಳು ವೀರಶೈವ ಮತ ಪ್ರಕಾಶಕ ಎಂಬ ಮಾಸಪತ್ರಿಕೆಯನ್ನು ಪ್ರಾರಂಭಿಸಿ ಹಲವಾರು ಕನ್ನಡ ಸಂಸ್ಕೃತ ಗ್ರಂಥಗಳನ್ನು ಪ್ರಕಟಿಸಿದರು. ಕ್ರಿಯಾಸಾರ, ಸಿದ್ಧಾಂತ ಶಿಖಾಮಣಿ, ದೀಕ್ಷಾವಿಧಿ, ಮಾಚದೇವ ಮನೋವಿಲಾಸ, ಲಿಂಗಧಾರಿಣ ಚಂದ್ರಿಕಾ, ಅನುಭವಸೂತ್ರ, ವಿವಾಹವಿಧಿ ವೀರಶೈವೋತ್ಕರ್ಷಸಂಗ್ರಹ, ಸಂಸ್ಕೃತ ಬಸವೇಶ ವಿಜಯ ಮೊದಲಾದ ಸಂಸ್ಕೃತ ಗ್ರಂಥಗಳನ್ನೂ ಕನ್ನಡ ಭಾರತ, ಜೈಮಿನಿ ಭಾರತ, ರಾಜಶೇಖರವಿಳಾಸ, ಶಬರಶಂಕರ ವಿಳಾಸ, ಪ್ರಹ್ಲಾದ ಚರಿತ್ರೆ ಮುಂತಾದ ಕನ್ನಡ ಗ್ರಂಥಗಳನ್ನೂ ಸಂಪಾದಿಸಿ ಪ್ರಕಟಿಸಿ ಶಾಸ್ತ್ರೀಗಳು ಮಹೋಪಕಾರ ಮಾಡಿದ್ದಾರೆ; ಇಷ್ಟೇ ಅಲ್ಲದೆ ಭಕ್ತಾಧಿಕ್ಯ ರತ್ನಾವಳಿ, ಅನುಭವಸಾರ, ವ್ಯಾಸೋಕ್ತ ಬಸವಪುರಾಣ, ಶೈವಾದ್ವೈತ ಮಂಜರಿ, ಸಿದ್ಧೇಶ್ವರ ಪುರಾಣ, ನಳಚರಿತ್ರೆ, ವೀರಶೈವ ಪ್ರದೀಪಿಕಾ, ಶಿವಭಕ್ತಿಸಾರ, ತ್ರಿಕಾಂಡ ಅಮರಕೋಶ, ಕರ್ಣಾಟಕ ಬಾಲಬೋಧೆ, ಶಬ್ದರೂಪಾವಳಿ ಮುಂತಾದ ಗ್ರಂಥಗಳನ್ನೂ ಪ್ರಕಟಿಸಿದ್ದಾರೆ. ಇವರು ಸ್ವತಂತ್ರವಾಗಿ ಕನ್ನಡ ಬಸವೇಶವಿಜಯ. ನಯಶತಕ ಎಂಬ ಗ್ರಂಥಗಳನ್ನು ಕನ್ನಡದಲ್ಲಿಯೂ ವೀರಶೈವೋತ್ಕರ್ಷ ಪ್ರದೀಪಿಕಾ ಎಂಬ ಗ್ರಂಥವನ್ನು ಸಂಸ್ಕೃತದಲ್ಲಿಯೂ ಬರೆದು ಪ್ರಕಟಿಸಿದ್ದಾರೆ. ನಾಗವರ್ಮನ ಕಾದಂಬರಿಯಲ್ಲಿ ಗ್ರಂಥಪಾತವಾಗಿದ್ದ ಒಂದು ಕಡೆ ಶ್ರೀ ಶಾಸ್ತ್ರೀಗಳು ಮೂಲ ಕಾವ್ಯಕ್ಕನುಗುಣವಾಗಿ ಹತ್ತಾರು ಪದ್ಯಗಳನ್ನು ಬರೆದುಕೊಟ್ಟಿದ್ದಾರೆ. ಬಸವಪ್ಪಶಾಸ್ತ್ರೀಗಳನ್ನು ಕುರಿತ ಚರಮಗೀತೆಗಳನ್ನು ಬರೆದಿದ್ದಾರೆ. ನಿಜಗುಣ ಶಿವಯೋಗಿಯ ಅನುಭವಸಾರಕ್ಕೆ ಟಪ್ಪಣಿಯನ್ನು ರಚಿಸಿದ್ದಾರೆ. ಕನ್ನಡ ಜೈಮಿನಿ ಭಾರತದ 17 ಅಧ್ಯಾಯಗಳಿಗೆ ಉತ್ತಮ ಟೀಕೆ ಟಿಪ್ಪಣಿ ಬರೆದು ಪ್ರಕಟಿಸಿದ್ದಾರೆ. ಈ ಮಹನೀಯರು ಕನ್ನಡದ ಏಳಿಗೆಗಾಗಿ, ಸಾಹಿತ್ಯದ ಉನ್ನತಿಗಾಗಿ ಮಾಡಿದ ಸೇವೆಯು ಅಪಾರವಾದುದು. ಮೈಸೂರು ಮಹಾರಾಜ ಕಾಲೇಜಿನಲ್ಲಿಯೂ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿಯೂ ಇವರ ಭಾವಚಿತ್ರವನ್ನು ಹಾಕಿ ಇವರ ವಿದ್ವತ್ತನ್ನು ಗೌರವಿಸಲಾಗಿದೆ.