ಕರಹಾಡ್ ತಾಮ್ರಶಾಸನ

ವಿಕಿಪೀಡಿಯ ಇಂದ
Jump to navigation Jump to search

ಕರಹಾಡ್ ತಾಮ್ರಶಾಸನ : ಮಹಾರಾಷ್ಟ್ರಸತಾರಾ ಜಿಲ್ಲೆಯ ಕರಹಾಡಿನಲ್ಲಿ ದೊರಕಿದ ಒಂದು ತಾಮ್ರಶಾಸನ. ಇದು ಮೂರು ತಾಮ್ರಫಲಕಗಳನ್ನೊಳಗೊಂಡಿದೆ. ಫಲಕಗಳ ಉದ್ದಗಲಗಳು ಅನುಕ್ರಮವಾಗಿ ಸು. 34 ಸೆಂ ಮೀ. ಮತ್ತು 22.5 ಸೆಂ ಮೀ. ಶಾಸನದ ಬರೆಹ ಒಂದು ಮತ್ತು ಮೂರನೆಯ ಫಲಕಗಳ ಒಂದು ಪಕ್ಕದಲ್ಲಿಯೂ ಎರಡನೆಯ ಫಲಕದ ಎರಡೂ ಪಕ್ಕಗಳಲ್ಲಿಯೂ ಇದೆ. ಅಕ್ಷರಗಳೂ ಸ್ಪಷ್ಟವಾಗಿವೆ. ಈ ಶಾಸನ 10ನೆಯ ಶತಮಾನದ ನಾಗರಿ ಲಿಪಿಯಲ್ಲಿದೆ. ಇದರ ಭಾಷೆ ಸಂಸ್ಕೃತ. ಶಾಸನದ ಪಾಠ ಗದ್ಯಪದ್ಯ ಮಿಶ್ರಿತವಾಗಿದೆ. 939-66ರ ವರೆಗೆ ಕರ್ನಾಟಕವನ್ನಾಳಿದ ರಾಷ್ಟ್ರಕೂಟ 3ನೆಯ ಕೃಷ್ಣನ ಆಳ್ವಿಕೆಯಲ್ಲಿ ಈ ಶಾಸನವನ್ನು ಹೊರಡಿಸಲಾಯಿತು. ಇದರ ತೇದಿ, ಶಕನೃಪಕಾಲಾತೀತ ಸಂವತ್ಸರದ 880ನೆಯ ವರ್ಷದ ಫಾಲ್ಗುಣ ಬಹುಳ ತ್ರಯೋದಶಿ, ಬುಧವಾರ (959 ಮಾರ್ಚ್ 9). ಶಾಸನದ ಪ್ರಾರಂಭದಲ್ಲಿ ಮುರಾರಿ (ವಿಷ್ಣು), ತ್ರಿಪುರವಿಜಯಿ (ಶಿವ) ಮತ್ತು ಕುಮುದಿನೀನಾಥ (ಚಂದ್ರ) ಇವರ ಸ್ತುತಿಗಳಿದ್ದು, ಅನಂತರ 3ನೆಯ ಕೃಷ್ಣನವರೆಗಿನ ರಾಷ್ಟ್ರಕೂಟರ ವಂಶಾವಳಿ ಕಾಣಸಿಗುತ್ತದೆ. ಈ ವಂಶ ದೈತ್ಯರನ್ನು ಸಂಹರಿಸಿದ ಕೃಷ್ಣನ ಯದುವಂಶವೆಂದು ಪ್ರಸಿದ್ಧವಾಯಿತೆಂದೂ ಈ ವಂಶದ ಅರಸರು ಶ್ರೇಷ್ಠ (ತುಂಗ) ಯಶಸ್ಸನ್ನು ಗಳಿಸಿ ತುಂಗ ಎಂಬ ಅಭಿಧೇಯವನ್ನು ಪಡೆದಿದ್ದರೆಂದೂ ಶಾಸನ ತಿಳಿಸುತ್ತದೆ. ಅರಸರ ಪೀಳಿಗೆಯನ್ನೀಯುತ್ತ, ಚಳುಕ್ಯರನ್ನು (ಬಾದಾಮಿಯವರು) ಉನ್ಮೂಲಗೊಳಿಸಿದ ದಂತಿದುರ್ಗ, (ಎಲ್ಲೋರದ) ಕೈಲಾಸ ದೇವಾಲಯವನ್ನು ಕಟ್ಟಿಸಿದ ಅವನ ಕಕ್ಕ ಕೃಷ್ಣರಾಜ (1ನೆಯ ಕೃಷ್ಣ) ಅವನ ಮಗ ಗೋವಿಂದರಾಜ (2ನೆಯ ಗೋವಿಂದ), ಅವನ ತಮ್ಮ ಕಲಿವಲ್ಲಭನೆಂದು ಹೆಸರಾದ ನಿರುಪಮ (ಧ್ರುವ), ಅವನ ಮಗ ಜಗತ್ತುಂಗ (3ನೆಯ ಗೋವಿಂದ), ಮಾನ್ಯಖೇಟವನ್ನು (ಇಂದಿನ ಮಳಖೇಡ ಗುಲ್ಬರ್ಗಾ ಜಿಲ್ಲೆ) ಸ್ಥಾಪಿಸಿದ ಹಾಗೂ ಚಳುಕ್ಯರನ್ನು ವಿಧ್ವಂಸಗೊಳಿಸಿದ ಅವನ ಮಗ ನೃಪತುಂಗ (1ನೆಯ ಅಮೋಘವರ್ಷ), ಗೂರ್ಜರ, ಲಾಟ, ಗೆಂಡ, ಅಂಗ, ಕಳಿಂಗ, ಗಂಗ ಹಾಗೂ ಮಗಧ ಅರಸರ ಮೇಲೆ ಒಂದಿಲ್ಲೊಂದು ರೀತಿಯಲ್ಲಿ ಜಯಗಳಿಸಿದ ಅವನ ಮಗ ಕೃಷ್ಣರಾಜ (2ನೆಯ ಕೃಷ್ಣ), ಅವನ ಮಗ (2ನೆಯ) ಜಗತ್ತುಂಗ, ಅವನ ಮಗ ಇಂದ್ರರಾಜ (3ನೆಯ ಇಂದ್ರ), ಅವನ ಮಗ (2ನೆಯ) ಅಮೋಘವರ್ಷ ಹಾಗೂ ಅವನ ತಮ್ಮ ಗೋವಿಂದರಾಜ (4ನೆಯ ಗೋವಿಂದ), ರಟ್ಟಕುಲದ ಮಹತ್ತ್ವ ಹಾಗೂ ಸಾರ್ವಭೌಮತ್ವಕ್ಕೆ ಮಾಂಡಲಿಕರೆಲ್ಲರೂ ತಲೆಬಾಗುವಂತೆ ಮಾಡಿದ. (2ನೆಯ) ಜಗತ್ತುಂಗನ ಮಗ (3ನೆಯ) ಅಮೋಘವರ್ಷ ಹಾಗೂ ಯುವರಾಜನಾಗಿದ್ದಾಗಲೇ ಜಗತ್ತಿನ ಒಡೆಯನೆನಿಸಿಕೊಂಡ ಅವನ ಮಗ ಕೃಷ್ಣರಾಜ (ಈ ಶಾಸನವನ್ನು ಹೊರಡಿಸಿದ ಮೂರನೆಯ ಕೃಷ್ಣ) ಇವರನ್ನು ಉಲ್ಲೇಖಿಸುತ್ತದೆ. ಇವನು ತನ್ನ ತಾಯಿ ಮತ್ತು ಪತ್ನಿ ಇವರಿಗೆ ಹಿರಿಯನಾದ ಸಹಸ್ರಾರ್ಜುನನನ್ನು ಜಯಿಸಿದನೆಂದೂ ಶ್ರೀವಲ್ಲಭನಂತಿದ್ದ ಇವನು (3ನೆಯ ಕೃಷ್ಣನು) ಮಧುಕೈಟಭರಂತಿದ್ದ ದಂತಿಗ ಹಾಗೂ ವಪ್ಪುಗರನ್ನು ಸಂಹರಿಸಿದನೆಂದೂ ರಾಚಮಲ್ಲನನ್ನು ಕಿತ್ತೊಗೆದು ಭೂತಾರ್ಯನನ್ನು ಗಂಗಸಿಂಹಾಸನದ ಮೇಲೆ ಕೂರಿಸಿದನೆಂದೂ ಪಲ್ಲವ ಅಣ್ಣಿಗನನ್ನು ಸೋಲಿಸಿದನೆಂದೂ ಇವನ ದಕ್ಷಿಣ ವಿಜಯವನ್ನು ಪರಿಗಣಿಸಿದ ಗೂರ್ಜರನು, ಕಾಲಿಂಜರ ಹಾಗೂ ಚಿತ್ರ ಕೂಟಗಳನ್ನು ಜಯಿಸುವ ಆಸೆಯನ್ನು ತಾನಾಗಿಯೇ ಬಿಟ್ಟನೆಂದು ಈತ ತನ್ನ ತಂದೆಯ ಆಜ್ಞೆಗೆ ವಿಧೇಯನಾಗಿದ್ದರೂ ಪುರ್ವ ಪಶ್ಚಿಮ ಸಮುದ್ರ ಹಾಗೂ ಹಿಮಾಲಯ-ಸಿಂಹಳಗಳ ಮಧ್ಯದ ಮಾಂಡಲಿಕರೆಲ್ಲರೂ ಇವನಿಗೆ ಭಯದಿಂದ ತಲೆಬಾಗಿದ್ದರೆಂದೂ ತಂದೆ ಕಾಲವಶವಾದ ಅನಂತರ ಸಿಂಹಾಸನವನ್ನೇರಿದ ಈತ ಮಾಂಡಲಿಕರೆಲ್ಲರನ್ನೂ ತನ್ನ ರಾಜನೀತಿಗನುಗುಣವಾಗಿ ಪುನಃ ವ್ಯವಸ್ಥಿತಗೊಳಿಸಿದನೆಂದೂ ಶಾಸನವು ತಿಳಿಸುತ್ತದೆ. ದಕ್ಷಿಣದಿಗ್ವಿಜಯವನ್ನು ಬಂಯಸಿದ ಇವನು, ಚೋಳರನ್ನು ನಿರ್ಮೂಲಗೊಳಿಸಿ ಅವರ ರಾಜ್ಯವನ್ನು ತನ್ನ ಅನುಯಾಯಿಗಳ ಆಧಿಪತ್ಯಕ್ಕೊಳಪಡಿಸಿ, ಚೇರನ್ಮ (ಚೇರ), ಪಾಂಡ್ಯ ಹಾಗೂ ಸಿಂಹಳ ಮೊದಲಾದ ದೇಶಗಳ ಅರಸರನ್ನು ತನಗೆ ವಿಧೇಯರನ್ನಾಗಿ ಮಾಡಿ, ರಾಮೇಶ್ವರದಲ್ಲಿ ತನ್ನ ಕೀರ್ತಿಸ್ತಂಭವನ್ನು ಸ್ಥಾಪಿಸಿದನೆಂದು ಶಾಸನ ಹೇಳುತ್ತದೆ. ಈತ ಪರಮಭಟ್ಠಾರಕ-ಮಹಾರಾಜಾಧಿರಾಜ-ಪರಮೇಶ್ವರ-ಶ್ರೀಮದಮೋಘವರ್ಷದೇವ (ತನ್ನ ತಂದೆ)-ಪಾದನುಧ್ಯಾತನಾಗಿದ್ದನೆಂದೂ ಪರಮಭಟ್ಟಾರಕ, ಮಹಾರಾಜಾಧಿರಾಜ, ಪರಮೇಶ್ವರ, ಪೃಥ್ವೀವಲ್ಲಭ ಮುಂತಾದ ಬಿರುದುಗಳನ್ನೂ ಅಕಾಲವರ್ಷ, ವಲ್ಲಭನರೇಂದ್ರ ಮುಂತಾದ ಅಂಕಿತಗಳನ್ನೂ ಹೊಂದಿದ್ದನೆಂದೂ ಶಾಸನ ವ್ಯಕ್ತಪಡಿಸುತ್ತದೆ. ತನ್ನ ರಾಜ್ಯದ ದಕ್ಷಿಣಭಾಗದಲ್ಲಿರುವ ಮೇಲ್ಪಾಟಿಯಲ್ಲಿ (ಇಂದಿನ ಮೇಲ್ಪಾಡಿ, ಉತ್ತರ ಆರ್ಕಾಟ್ ಜಿಲ್ಲೆ) ಬೀಡುಬಿಟ್ಟಾಗ ಕಾಲಪ್ರಿಯ, ಗಂಡಮಾರ್ತಾಂಡ ಕೃಷ್ಣೇಶ್ವರ ಮೊದಲಾದ ದೇವಾಲಯವನ್ನು ಕಟ್ಟಿಸಿ (ಮೇಲೆ ಉಲ್ಲಿಖಿತವಾದ ತೇದಿಯಂದು), ಕರಹಾಟ ಪ್ರಾಂತ್ಯದಲ್ಲಿ (ಈಗಿನ ಕರಹಾಡದ ಸುತ್ತಮುತ್ತಲಿನ ಪ್ರದೇಶ) ಕಲ್ಲಿ ಹನ್ನೆರಡಕ್ಕೆ (ಈಗಿನ ಕಲ್ಲಿ ಎಂಬ ಹಳ್ಳಿಯ ಸುತ್ತಮುತ್ತಲಿನ ಹಳ್ಳಿಗಳು) ಸಂಬಂಧಿಸಿದ ಕಂಕೆಂ (ಈಗಿನ ಕಂಕಿ-ಇವೆಲ್ಲ ಕರ್ಹಾಡದ ಸಮೀಪದಲ್ಲಿವೆ) ಎಂಬ ಗ್ರಾಮವನ್ನು, ತಪಸ್ವಿಗಳ ಆಸನ ಹಾಗೂ ಆಚ್ಛಾದನೆಯ ಉದ್ದೇಶಕ್ಕಾಗಿ, ತಾನು (ಕೃಷ್ಣನು) ಕಾರ್ಲೆಯಂದು (ಕಾರ್ತಿಕ ಹುಣ್ಣಿಮೆ) ಸಂಕಲ್ಪಮಾಡಿದಂತೆ, ಶಾಸಶಿವನ ಶಿಷ್ಯನೂ ಮಹಾತಪಸ್ವಿಯೂ ಕರಹಾಟದಲ್ಲಿರುವ ವಲ್ಕಲೇಶ್ವರ (ದೇವಸ್ಥಾನ)ದ ಸ್ಥಾನಾಧಿಪತಿಯೂ ಆದ ಗಗನಶಿವನೆಂಬವನಿಗೆ ದಾನವಾಗಿತ್ತುದಾಗಿಯೂ ಆತ (ಗಗನಶಿವ) ಈ ಗ್ರಾಮವನ್ನು ಉಪಭೋಗಿಸುವುದಕ್ಕೆ ಯಾರೂ ಆತಂಕಮಾಡಬಾರದಾಗಿಯೂ ಆಜ್ಞೆ ವಿಧಿಸಿ, ತನ್ನ ಎಲ್ಲ ಮಾಂಡಲಿಕರಿಗೂ ವಿಶಿಷ್ಟಜನರಿಗೂ ಇದರ ಬಗ್ಗೆ ಸೂಕ್ತ ಆದೇಶವನ್ನಿತ್ತು ದಾಗಿಯೂ ಶಾಸನವು ತಿಳಿಸುತ್ತದೆ. ಶಾಸನದ ಕೊನೆಯಲ್ಲಿ ದಾನದ ರಕ್ಷಣೆ ಹಾಗೂ ಆಶೀರ್ವಚನಗಳನ್ನು ಕುರಿತ ಶ್ಲೋಕಗಳಿವೆ. ಪ್ರಕೃತ ಶಾಸನ ರಾಷ್ಟ್ರಕೂಟದ ಇತಿಹಾಸದ ದೃಷ್ಟಿಯಿಂದ ಅತ್ಯಂತ ಮಹತ್ತ್ವದ್ದಾಗಿದೆ. ಚೋಳರನ್ನು ಕೃಷ್ಣ ಸೋಲಿಸಿದ ಮತ್ತು ಇವನ ಪರಾಕ್ರಮದ ಬಗ್ಗೆ ಬೇರೆ ಶಾಸನಗಳ ಆಧಾರವಿದೆ. ವಂಶಾವಳಿಯನ್ನೀಯುವಾಗ ಮುಖ್ಯ ಅರಸರನ್ನು ಮಾತ್ರ ಶಾಸನವು ಉಲ್ಲೇಖಿಸುತ್ತಿದ್ದು, ಈ ವಂಶಪರಂಪರೆ ನಿಜವೆಂಬುದು ಇನ್ನೂ ಅನೇಕ ಶಾಸನಗಳಿಂದ ಪ್ರಮಾಣಸಿದ್ಧವಾಗಿದೆ. 3ನೆಯ ಕೃಷ್ಣನ ತಾಯಿ ಮತ್ತು ಅವನ ಪತ್ನಿ ಚೇದಿ ಮನೆತನ ದವರಾದುದರಿಂದ, ಅವರಿಗೆ ಹಿರಿಯನೆಂದು ಶಾಸನದಲ್ಲಿ ಉಕ್ತನಾದ ಸಹಸ್ರಾರ್ಜುನನೂ ಅದೇ ಮನೆತನದವನಿರಬೇಕೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಉಲ್ಲೇಖಿತರಾದ ಇನ್ನುಳಿದ ಮುಖ್ಯರಲ್ಲಿ, ರಾಚಮಲ್ಲ ಹಾಗೂ ಭೂತಾರ್ಯರು ಗಂಗಮನೆತನದ ರಾಚಮಲ್ಲ ಹಾಗೂ 2ನೆಯ ಬೂತುಗರ, ಪಲ್ಲವ ಅಣ್ಣಿಗನೆಂಬಾತ ನೊಳಂಬಪಲ್ಲವ ಮನೆತನದ ನನ್ನಿಗನ ಮಗನೆಂದೂ ದಂತಿಗ ಮತ್ತು ವಪ್ಪುಗರೂ ಇದೇ ಮನೆತನದವರಾಗಿರಬೇಕೆಂದೂ ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ.