ವಿಷಯಕ್ಕೆ ಹೋಗು

ಕಪ್ಪೆ ಅರಭಟ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಪ್ಪೆ ಅರಭಟ್ಟನ ಶಾಸನ

ಕಪ್ಪೆ ಅರೆಭಟ್ಟ ೭ನೇ ಶತಮಾನದ ಒಬ್ಬ ಚಾಲುಕ್ಯ ಯೋಧ. ಈತನ ಬಗ್ಗೆ ಬಾದಾಮಿಯ ಒಂದು ಬಂಡೆಗಲ್ಲಿನ ಮೇಲೆ ರಚಿತವಾದ ಶಾಸನ ಐತಿಹಾಸಿಕ ಮೌಲ್ಯವನ್ನು ಹೊಂದಿದೆ. ಅರಭಟ್ಟ ಮಹಾಪುರುಷನ ಸ್ತುತಿಪರ ಪದ್ಯಗಳು ಈ ಶಾಸನದಲ್ಲಿ ದೊರೆಯುತ್ತವೆ. ಏಳನೆಯ ಶತಮಾನದ ಹಳಗನ್ನಡ ಲಿಪಿಯಲ್ಲಿ ರಚಿತವಾಗಿದೆ. ಈ ಶಾಸನ ಕಪ್ಪೆ ಅರಭಟ್ಟನ ಬಗ್ಗೆ ರಚಿತವಾಗಿರುವುದರಿಂದ ಅವನ ಹೆಸರಿನಿಂದಲೇ ಈ ಶಾಸನವನ್ನು ಗುರುತಿಸುತ್ತಾರೆ. ಈ ಶಾಸನದಲ್ಲಿ ಕನ್ನಡದ ಮೊಟ್ಟಮೊದಲ ತ್ರಿಪದಿಗಳು ದೊರೆಯುತ್ತವೆ.[]

ಇತಿವೃತ್ತ

[ಬದಲಾಯಿಸಿ]
  • ಸುಮಾರು ಏಳನೆಯ ಶತಮಾನದ ‘ಕಪ್ಪೆ ಅರಭಟ್ಟನ ಬಾದಾಮಿಯ ಶಾಸನ’ ವು ಅನೇಕ ದೃಷ್ಟಿಗಳಿಂದ ಮಹತ್ವದ್ದಾಗಿದೆ. ಶಾಸನದ ಭಾಷೆ ಹಳಗನ್ನಡ; ಮೊದಲ ಶ್ಲೋಕ ಸಂಸ್ಕೃತದಲ್ಲಿದೆ. ಉಳಿದದ್ದು ‘ತ್ರಿಪದಿ’ಯಲ್ಲಿದೆ. ‘ಕನ್ನಡ ಛಂದಸ್ಸಿನ ತಾಯಿ ಬೇರು’ ಎನ್ನುತ್ತಾರಲ್ಲ, ಪ್ರೊ. ರಂ. ಶ್ರೀ ಮುಗಳಿ ಅವರು, ಆ ತ್ರಿಪದಿಯ ಮಟ್ಟಿನ ಮೊಟ್ಟ ಮೊದಲನೆಯ ರೂಪವು ಅದರಲ್ಲಿದೆ. ‘ಒಬ್ಬ ಕನ್ನಡ ವೀರನ ಆವೇಶಯುತವಾದ ಸ್ವಭಾವಚಿತ್ರವು ಅಲ್ಲಿದೆ.
  • ಅದರಲ್ಲಿ ಭಾವ ಭಾಷೆಗಳ ಯೋಗ್ಯ ಮಿಲನವುಳ್ಳ ಸ್ವಯಂ ಪೂರ್ಣವಾದ ಭಾವಗೀತೆಯ ಸತ್ವವೂ ತುಂಬಿದೆ.’ (ನೋಡಿ, ‘ಕನ್ನಡ ಸಾಹಿತ್ಯ ಚರಿತ್ರೆ ಪುಟ 11-12). ‘ತ್ರಿಪದಿ’ಯ ಮಾತು ಬಂತು. ಅದರ ಬಗ್ಗೆ ಆಮೇಲೆ ವಿವೇಚಿಸೊಣ. ಈಗ ಬಾದಾಮಿಯ ಶಾಸನದ ಕಡೆ ತಿರುಗೋಣ.[]

‘ಅಪಕೀರ್ತಿಗಿಂತ ಮರಣವೇ ಲೇಸು’ ಎಂದು ಬಗೆಯುತ್ತಿದ್ದ ಕಪ್ಪೆ ಅರಭಟ್ಟನೆಂಬ ಸಾಧುಪುರುಷನ ಕೀರ್ತಿಯನ್ನು ಕನ್ನಡದಲ್ಲಿ ತ್ರಿಪದಿಗಳಲ್ಲಿ ಹೊಗಳುವ, ವೀರಗಲ್ಲಿನ ರೂಪದ ಪ್ರಾಚೀನ ಸ್ಮಾರಕ ಈ ತಟ್ಟುಕೊಟಿ ಬಾದಾಮಿ ಶಾಸನ. ಆ ‘ಬಾದಾಮಿ ಶಾಸನ’ ಏನು? ಕಲ್ಲಿನ ಮೇಲೆ ಕೆತ್ತಿದ, ಹತ್ತು ಸಾಲಿನ ಆ ಶಾಸನದ ಮೂಲಪಾಠ, ಹೀಗಿದೆ (ಆಕರ: ಇಂಡಿಯನ್‌ ಆಂಟಿಕ್ವೆರಿ 10: 61; ಶಾಸನ ಪದ್ಯಮಂಜರಿ, 4, ಪುಟ 2; ‘ಕರ್ಣಾಟಕ ಪರಂಪರೆ’, ಸಂಪುಟ 1, ಪುಟ 222; 266; ‘ಬಾದಾಮಿ ಶಾಸನ’ ಚಿತ್ರಕ್ಕೆ, ಅನುಬಂಧ-2ನ್ನು ನೋಡಿ): ಕಪ್ಪೆ ಅರಭಟ್ಟನ್‌ ಶಿಷ್ಟಜನಪ್ರಿಯನ್‌ ಕಷ್ಟಜನವರ್ಜಿತನ್‌ ಕಲಿಯುಗ ವಿಪರೀತನ್‌ ವರನ್ತೇಜಸ್ವಿನೋಮೃತ್ಯುರ್ನತುಮಾನಾವಖಂಡನಂ ಮೃತ್ಯುಸ್ತತ್ಕ್ಷಣಿಕೋ ದುಃಖಮ್ಮಾನಭಂಗಂ ದಿನೇದಿನೇ ಸಾಧುಗೆ ಸಾಧು ಮಾಧುರ್ಯನ್ಗೆ ಮಾಧುರ್ಯ್ಯಂ ಬಾಧಿಪ್ಪ ಕಲಿಗೆ ಕಲಿಯುಗವಿಪರೀತನ್ಮಾಧವನೀತನ್‌ ಪೆರನಲ್ಲ ಒಳ್ಳಿತ್ತ ಕೆಯ್ವಾರಾರ್ಪೊಲ್ಲದುಮದರಂತೆ ಬಲ್ಲಿತ್ತು ಕಲಿಗೆ ವಿಪರೀತಾಪುರಾಕೃತಮಿಲ್ಲಿ ಸಂದಿಕ್ಕುಮದು ಬನ್ದು ಕಟ್ಟಿದ ಸಿಂಘಮನ್ಕೆಟ್ಟೊದೆನೆಮಗೆನ್ದು ಬಿಟ್ಟವೋಲ್ಕಕಲಿಗೆವಿ ಪರೀತಂಗಹಿತರ್ಕ್ಕಳ್ಕೆಟ್ಟರ್ಮ್ಮೇಣ್ಸತ್ತರವಿಚಾರಂ (ಆರನೆಯ ಸಾಲಿನಲ್ಲಿ ‘ಪೆರನಲ್ಲ’ ಮತ್ತು ಏಳನೆಯ ಸಾಲಿನಲ್ಲಿ ‘ಅದರಂತೆ’ ಎಂಬ ಕಡೆ, ಈಗಿನ ‘ರ’ ಬದಲು ಮೂಲದಲ್ಲಿ ಶಕಟರೇಫ ಇದೆ. ಲಿಪಿ ಏಳನೆಯ ಶತಮಾನದ ಕನ್ನಡದಲ್ಲಿದೆ.)

ಶಾಸನದ ಸುಲಭ ಪಾಠ

[ಬದಲಾಯಿಸಿ]

ಈ ಶಾಸನದ ಸುಲಭಪಾಠ ಐದು ಪದ್ಯಗಳಲ್ಲಿ ಹೀಗಿದೆ:

ಕಪ್ಪೆ ಅರಭಟ್ಟನ್‌ ಶಿಷ್ಟಜನಪ್ರಿಯನ್‌ ಕಷ್ಟಜನವರ್ಜಿತನ್‌ ಕಲಿಯುಗ ವಿಪರೀತನ್‌।।1।।
ವರನ್‌ ತೇಜಸ್ವಿನೋ ಮೃತ್ಯುರ್‌ ನ ತು ಮಾನ-ಅವಖಂಡನಂ|
ಮೃತ್ಯುಸ್‌ ತತ್ಕ್ಷಣಿಕೋ ದುಃಖಮ್‌ ಮಾನಭಂಗಂ ದಿನೇದಿನೇ।।2।।
ಸಾಧುಗೆ ಸಾಧು ಮಾಧುರ್ಯನ್ಗೆ ಮಾಧುರ್ಯಂ ಬಾಧಿಪ್ಪ ಕಲಿಗೆ।
ಕಲಿಯುಗವಿಪರೀತನ್‌ ಮಾಧವನ್‌ ಈತನ್‌ ಪೆರನಲ್ಲ।।3।।
ಒಳ್ಳಿತ್ತ ಕೆಯ್ವಾರಾರ್‌ ಪೊಲ್ಲದುಮ್‌ ಅದರಂತೆ ಬಲ್ಲಿತ್ತು ಕಲಿಗೆ।
ವಿಪರೀತಾ ಪುರಾಕೃತಮ್‌ ಇಲ್ಲಿ ಸಂದಿಕ್ಕುಮ್‌ ಅದು ಬಂದು।।4।।
ಕಟ್ಟಿದ ಸಿಂಘಮನ್‌ ಕೆಟ್ಟೊದೆನ್‌ ಎಮಗೆಂದು ಬಿಟ್ಟವೋಲ್‌ ಕಲಿಗೆ।
ವಿಪರೀತಂಗ್‌ ಅಹಿತರ್ಕ್ಕಳ್‌।।5।।[]

ಶಾಸನದ ಭಾವಾರ್ಥ

[ಬದಲಾಯಿಸಿ]

ಬಾದಾಮಿ ಶಾಸನದ ಕನ್ನಡ ಹಳಗನ್ನಡವಾದರೂ, ಅದು ಬೇಗ ಅರ್ಥವಾಗದಷ್ಟು ಕಷ್ಟಪದಗಳಿಂದ ಕೂಡಿದ್ದೇನಲ್ಲ. ಆ ಪದ್ಯಗಳ ಅರ್ಥವನ್ನು ಸ್ಥೂಲವಾಗಿ ಹೀಗೆ ಹೇಳಬಹುದು: ‘ಈ ಕಪ್ಪೆ ಅರಭಟ್ಟ ಎಂಬುವನು ತನ್ನನ್ನು ಆಶ್ರಯಿಸಿದ ಎಲ್ಲ ಒಳ್ಳೆಯ ಜನರ ಪ್ರೀತಿಪಾತ್ರನು; ಕೆಟ್ಟ ಕೆಲಸ ಮಾಡುವ ತನಗೆ ಆಗದ ಜನರನ್ನು ಕೊನೆಗಾಣಿಸುವ, ಕಲಿಯುಗಕ್ಕೇ ವಿಪರೀತನೆನಿಸುವಷ್ಟು ಧೀರನು, ಇವನು! ।।1।। ‘ತೇಜಸ್ವಿಗಳಾದವರಿಗೆ ಶ್ರೇಷ್ಠವಾದುದು ಯಾವುದು? (ವೀರ)ಮರಣವೇ ಹೊರತು ಮಾನಭಂಗವಲ್ಲ ; ಏಕೆಂದರೆ, ಮೃತ್ಯು ತತ್ಕಾಲಕ್ಕೆ ಕ್ಷಣಿಕವಾದ ದುಃಖವನ್ನು ತಂದೊಡ್ಡಬಹುದು, ಆದರೆ, ಮಾನಭಂಗ? ಅದು ಅನುದಿನವೂ ದುಃಖವನ್ನು ತರುತ್ತಲೇ ಇರುತ್ತದೆ! ।।2।। ‘ಇವನು ಒಳ್ಳೆಯವರಿಗೆ ಒಳ್ಳೆಯವನು, ಸಾಧುವಾದ ಮನುಷ್ಯ; ಮಧುರವಾದ ನಡತೆಯುಳ್ಳ ಸದಾಚಾರದವನಿಗೆ ಮಾಧುರ್ಯದ ಮನುಷ್ಯ; ಬಾಧಿಸುವ ಕಲಿಗೆ (ಅಂದರೆ, ಶೂರನಿಗೆ) ಇವನು ವಿಪರೀತನಾದ ಕಲಿಯುಗ. ಇವನು ವಿಷ್ಣುವೇ ಹೊರತು ಬೇರೆಯಲ್ಲ ।।3।। ‘ಒಳ್ಳೆಯದನ್ನು ಮಾಡುವವರಿಗೂ ಕೆಡಕನ್ನು ಮಾಡುವವರಿಗೂ ಅವರವರಿಗೆ ಇವನು ಅದನ್ನೇ ಇನ್ನೂ ಹೆಚ್ಚಾಗಿ ಮಾಡುತ್ತಾನೆ. ಇವನು ಕಲಿಗೆ ವಿಪರೀತನು. ಹಿಂದಿನ ಜನ್ಮದಲ್ಲಿ ಜನರು ಏನು ಮಾಡಿದ್ದರೋ ಅವರವರ ಕರ್ಮಾನುಸಾರ ಆ ಫಲವನ್ನು ಅವರು ಇವನಿಂದ ಪಡೆಯುತ್ತಾರೆ।।4।। ‘ಕಟ್ಟಿದ ಸಿಂಹವನ್ನು ಬಿಟ್ಟರೆ ಏನು ಕೆಟ್ಟುಹೋಯ್ತು- ಎಂದು ಅದನ್ನು ಬಿಟ್ಟಂತೆ ಈಗ ಆಗಿದೆ. ಈ ಸಿಂಹಸ್ವರೂಪನಾದ, ಕಲಿಗೆ ವಿಪರೀತನಾಗಿರುವ ಇವನ ಕೈಗೆ ಸಿಕ್ಕಿ ಶತ್ರುಗಳು ಕೆಟ್ಟರು ಅಥವಾ ಸತ್ತರು. ಇದು ಅವರವರ ಅವಿಚಾರದ ಫಲ ।।5।।’

ವಿವರಣೆ: ಕಪ್ಪೆ ಅರೆಭಟ್ಟನು ಜನಾನುರಾಯಾಗಿ, ಜನರ ಕಷ್ಟಕಾಲದಲ್ಲಿ ನೆರವಾಗುತ್ತಿದ್ದನು. ಆಪದ್ಭಾಂದವನಂತದ್ದ ಈತ ಒಳ್ಳೆಯವರಿಗೆ ಒಳ್ಳೆಯವನಾಗಿ, ಆತ್ಮೀಯರಿಗೆ ಪ್ರೀತಿಪಾತ್ರನಾದವನಾಗಿ, ತೊಂದರೆ ಕೊಡುವವರಿಗೆ ಸಿಂಹಸ್ವಪ್ನವಾಗಿದ್ದನು. ಮಹಾಭಾರತದಲ್ಲಿ ಕೃಷ್ಣ ಹೇಗೆ ದುಷ್ಟ ಶಿಕ್ಷೆ, ಶಿಷ್ಟ ರಕ್ಷೆ ಮಾಡಿದ್ದನೋ ಆ ರೀತಿಯಲ್ಲಿ ಈತನಿದ್ದನು.[] []

ಉಲ್ಲೇಖ

[ಬದಲಾಯಿಸಿ]
  1. arasimhia, A. N. (1941), A Grammar of the Oldest Kanarese Inscriptions (including a study of the Sanskrit and Prakrit loan words, Originally published: Mysore: University of Mysore. Pp. 375. Reprinted in 2007: Read Books. Pp. 416, ISBN 1-4067-6568-6
  2. Sahitya Akademi (1988), Encyclopaedia of Indian literature - vol 2, New Delhi: Sahitya Akademi, ISBN 81-260-1194-7
  3. ಆಕರ: ಇಂಡಿಯನ್‌ ಆಂಟಿಕ್ವೆರಿ 10: 61; ಶಾಸನ ಪದ್ಯಮಂಜರಿ, 4, ಪುಟ 2; ‘ಕರ್ಣಾಟಕ ಪರಂಪರೆ’, ಸಂಪುಟ 1, ಪುಟ 222; 266; ‘ಬಾದಾಮಿ ಶಾಸನ’
  4. Kamath, Suryanath U. (2001), A Concise History of Karnataka from pre-historic times to the present, Bangalore: Jupiter books, MCC (Reprinted 2002)
  5. http://www.classicalkannada.org/DataBase/KannwordHTMLS/CLASSICAL%20KANNADA%20INSCRIPTIONS%20HTML/BADAMI%20INSCRIPTION%20HTML.htm