ಕನಕಾಚಲಪತಿ ದೇವಾಲಯ
ಕನಕಾಚಲಪತಿ ದೇವಾಲಯ | |
---|---|
Hindu Temple | |
ದೇಶ | India |
ರಾಜ್ಯ | ಕರ್ನಾಟಕ |
ಜಿಲ್ಲೆ | ಕೊಪ್ಪಳ |
Languages | |
• Official | ಕನ್ನಡ |
Time zone | UTC+5:30 (IST) |
PIN | 583283 |
ಹತ್ತಿರದ ನಗರ | ಗಂಗಾವತಿ |
ಕನಕಗಿರಿ ಕರ್ನಾಟಕದ ಸುಪ್ರಸಿದ್ದ ಹಾಗೂ ಇತಿಹಾಸ ಪ್ರಸಿದ್ಧ ಪವಿತ್ರ ಪುಣ್ಯಸ್ಥಳ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಕನಕಗಿರಿ ವಿಜಯನಗರ ಸಂಸ್ಥಾನದ ರಾಜಧಾನಿಯಾಗಿದ್ದ ಹಂಪಿಗೆ ಸನಿಹದಲ್ಲೇ ಇದೆ. ಕಾಲಿದ್ದವರಿಗೆ ಹಂಪೆ, ಕಣ್ಣಿದ್ದವರಿಗೆ ಕನಕಗಿರಿ ಎಂಬ ಮಾತು ಈ ಭಾಗದಲ್ಲಿ ಜನಜನಿತ.[೧]
ಐತಿಹ್ಯ
[ಬದಲಾಯಿಸಿ]ಕನಕಗಿರಿಗೆ ಈ ಹೆಸರು ಬಂದ ಬಗ್ಗೆ ಒಂದು ಕಥೆ ಇದೆ. ಗಿರಿ ಎಂದರೆ ಬೆಟ್ಟ ಇಲ್ಲಿರುವ ಬೆಟ್ಟದಲ್ಲಿ ಕನಕಮುನಿಗಳು ತಪವನ್ನಾಚರಿಸಿ, ಇಲ್ಲಿ ಸುವರ್ಣ ಮಳೆ ಸುರಿಸಿದರೆಂದು, ಬೆಟ್ಟದ ಮೇಲೆ ಚಿನ್ನ ಅರ್ಥಾತ್ ಕನಕವೃಷ್ಟಿಯಾದ ಕಾರಣ ಈ ಗಿರಿಗೆ ಕನಕಗಿರಿ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ. ಸ್ಕಾಂದ ಪುರಾಣದ ತುಂಗಾಮಹಾತ್ಮೆಯಲ್ಲಿ ಕೂಡ ಕನಕಗಿರಿಯ ಸ್ಥಳವರ್ಣನೆ ಇದೆ ಕನಕಾಚಲಪತಿಯ ಅಷ್ಟೋತ್ತರವೂ ಇದೆ. ಪುರಂದರದಾಸರು, ವಿಜಯದಾಸರು, ಜಗನ್ನಾಥ ದಾಸರು ಈ ದೇವರ ಬಗ್ಗೆ ಹಲವು ಕೀರ್ತನೆಗಳನ್ನು ರಚಿಸಿದ್ದಾರೆ.[೨].ಈ ಗಿರಿ ಪ್ರದೇಶದಲ್ಲಿ ಪುಷ್ಪ, ಜಯಂತಿ, ಗುಪ್ತಗಾಮಿನಿಯಾದ ಗೋಪಿಕಾ ನದಿಗಳು ಹರಿಯುವ ಕಾರಣ ಇದು ಪುಣ್ಯ ಕ್ಷೇತ್ರವೆನಿಸಿದೆ.
ಇತಿಹಾಸ
[ಬದಲಾಯಿಸಿ]ಇತಿಹಾಸ ತಜ್ಞರ ಪ್ರಕಾರ ಮೌರ್ಯ ದೊರೆ ಅಶೋಕ ಚಕ್ರವರ್ತಿ ಕನಕಗಿರಿಯನ್ನು ದಕ್ಷಿಣ ಭಾರತದ ತನ್ನ ರಾಜಧಾನಿ ಮಾಡಿಕೊಂಡಿದ್ದನೆಂದೂ ಅಭಿಪ್ರಾಯಪಡುತ್ತಾರೆ. 2ನೇ ಶತಮಾನದ ಗ್ರೀಕ್ ಭೂಗೋಳ ಶಾಸ್ತ್ರಜ್ಞ ಟಾಲಮಿ ಉಲ್ಲೇಖಿಸಿರುವ ಕಲ್ಲಿಗೇರಿಸ್ ಎಂಬ ಸ್ಥಳವೇ ಕನಕಗಿರಿ ಇರಬೇಕು ಎಂದೂ ಇತಿಹಾಸ ತಜ್ಞರು ಹೇಳುತ್ತಾರೆ.
ಶಾತವಾಹನರು, ಕದಂಬರು, ಬಾದಾಮಿ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು, ಕಳಚೂರ್ಯರು, ವಿಜಯನಗರದ ಅರಸರು, ಮರಾಠರು ಹಾಗೂ ಮೈಸೂರು ಹುಲಿ ಟಿಪ್ಪೂ ಸುಲ್ತಾನ್ ಆಳಿದ ಈ ನಾಡು ವಿಜಯನಗರದರಸರ ಪಾಳೆಯಗಾರ ಗುಜ್ಜಲ ವಂಶಸ್ಥರಿಂದ ಆಳಲ್ಪಟ್ಟಿದೆ. ಇತಿಹಾಸ ಪ್ರಸಿದ್ಧ ಕುಮಾರರಾಮನ ತಾಯಿ ಹರಿಯಾಲ ದೇವಿ ಈ ಗುಜ್ಜಲ ವಂಶಕ್ಕೆ ಸೇರಿದವಳೆಂದೂ ಇತಿಹಾಸಕಾರರು ಊಹಿಸುತ್ತಾರೆ. ಈ ಊರಿನ ಗ್ರಾಮದೇವತೆ ಉಡುಚುಲಮ್ಮ ಅಂದರೆ ರೋಗ ನಿರೋದಕ ದೇವತೆ ಎಂದೂ ಹೇಳಲಾಗಿದೆ.
ನಿರ್ಮಾಣ
[ಬದಲಾಯಿಸಿ]ಗುಜ್ಜರ ವಂಶದ ಮೊದಲ ದೊರೆ ಪರಸಪ್ಪ ನಾಯಕ (1436-1510)ನ ಕನಸಿನಲ್ಲಿ ಕಾಣಿಸಿಕೊಂಡು ತಿರುಪತಿ ಗಿರಿವಾಸ ಶ್ರೀವೆಂಕಟೇಶ ಕನಕಗಿರಿಯಲ್ಲಿ ಸಾಲಿಗ್ರಾಮ ರೂಪದಲ್ಲಿ ಲಕ್ಷ್ಮೀನರಸಿಂಹನಾಗಿ ತಾನು ನೆಲೆಸಿ ಭಕ್ತರ ಬೇಡಿಕೆ ಈಡೇರಿಸುವುದಾಗಿ ತಿಳಿಸಿದನಂತೆ. ಈ ವಿಷಯವನ್ನು ಆತ ತನ್ನ ಸಾಮ್ರಾಟ ವಿಜಯನಗರದ ಅಧಿಪತಿ ಪ್ರೌಢದೇವರಾಯನಿಗೆ ನಿವೇದಿಸಿಕೊಂಡನಂತೆ. ಆಗ ವಿಜಯನಗರದ ಅರಸರು 12ಗ್ರಾಮಗಳನ್ನು ಆತನಿಗೆ ಉಂಬಳಿ ನೀಡಿ, ಪಾಳೆಯ ಪಟ್ಟ ಕಟ್ಟಿ ಕನಕಾಚಲಪತಿಗೆ ನಿತ್ಯ ಪೂಜೆ ನಡೆಸಲು ಆದೇಶಿಸಿದರು.
ಇದುವೇ ದೇವಾಲಯದ ಸ್ಥಾಪನೆಗೆ ಕಾರಣವಾಯ್ತು. ನಂತರದ ದಿನಗಳಲ್ಲಿ ಸ್ವಾಮಿಯ ಮಹಿಮೆ ಅರಿತ ವಿಜಯನಗರದ ದೊರೆಗಳಾದ ಸಾಳ್ವ ನರಸಿಂಹ, ಶ್ರೀಕೃಷ್ಣದೇವರಾಯರು, ಅಚ್ಚ್ಯುತರಾಯರು ಕನಕಾಚಲಪತಿಯ ಭಕ್ತರಾದರೆಂದು ಇತಿಹಾಸ ಹೇಳುತ್ತದೆ. ಕನಕಗಿರಿಯ ನಾಯಕರಿಗೂ, ಚಿತ್ರದುರ್ಗದ ಪಾಳೆಯಗಾರ ನಡುವೆ ಸ್ನೇಹ ಸಂಬಂಧವಿತ್ತೆಂದು, ಈ ಎರಡೂ ವಂಶಗಳ ನಡುವೆ ವೈವಾಹಿಕ ಸಂಬಂಧವಿತ್ತೆಂದೂ ತಿಳಿದುಬರುತ್ತದೆ.
ವಾಸ್ತುಶಿಲ್ಪ
[ಬದಲಾಯಿಸಿ]ಇಲ್ಲಿರುವ ಸುಂದರ ಹಾಗೂ ಪುರಾತನ ದೇವಾಲಯ ನಯನ ಮನೋಹರವಾಗಿದೆ. ಇಲ್ಲಿರುವ ಕಂಬಗಳಲ್ಲಿ ದಶಾವತಾರದ ಕೆತ್ತನೆಗಳಿವೆ. ಮಧ್ಯರಂಗ ಮಂಟಪದ ಮೇಲ್ಭಾಗದಲ್ಲಿ ಉಮಾಮಹೇಶ್ವರರ ವಿವಾಹದ ಹಾಗೂ ಸೀತಾರಾಮ ಕಲ್ಯಾಣ, ಶ್ರೀರಾಮ ಪಟ್ಟಾಭಿಷೇಕದ ಹಾಗೂ ಮತ್ತಿತರ ಅಪರೂಪದ ಮಧ್ಯಕಾಲೀನ ವರ್ಣ ಶಿಲ್ಪಗಳಿವೆ. ಪಂಚಕಳಶಗಳಿರುವ ದೇವಾಲಯ ಮನಮೋಹಕ.
ಪ್ರೇಕ್ಷಣೀಯ ಸ್ಥಳಗಳು
[ಬದಲಾಯಿಸಿ]ಕನಕಗಿರಿಯಲ್ಲಿ ಮಧ್ಯಕಾಲೀನ ಕರ್ನಾಟಕದ ವಾಸ್ತುಶಿಲ್ಪದಂತೆ ನಿರ್ಮಿಸಲಾದ ವೆಂಕಟಪತಿ ಬಾವಿ ಅಥವಾ ಜಲಕ್ರೀಡಾ ಭವನವಿದೆ. ಸುಂದರವಾದ ಶಿಲ್ಪಕಲೆಯಿಂದ ಕೂಡಿದ ಮಂಟಪಗಳು, ಉಪ್ಪರಿಗೆಗಳಿವೆ. ಭಿತ್ತಿಗಳಲ್ಲಿ ಮಿಥುನ ಶಿಲ್ಪಗಳು, ಶೃಂಗಾರ ಶಿಲ್ಪಗಳಿವೆ. ಇಲ್ಲಿರುವ ಕಮಾನುಗಳಲ್ಲಿ ನವಾಬರ ಕಾಲದ ವಾಸ್ತು ಶಿಲ್ಪಗಳೂ ಕಾಣಸಿಗುತ್ತವೆ. ಗಜಾಸುರನನ್ನು ಕೊಲ್ಲುತ್ತಿರುವ ನಟರಾಜ, ಹಂಪಿಯ ಕಲ್ಲಿನರಥವನ್ನು ನೆನಪಿಸುವ ಅಪೂರ್ಣವಾದ ಕಲ್ಲಿನರಥವೂ ಇಲ್ಲಿದೆ. ತಿರುಪತಿಯ ಕಲ್ಯಾಣಿಯನ್ನು ಹೋಲುವ ಪುಷ್ಕರಣಿ, ನರಸಿಂಹತೀರ್ಥ ಅದರ ಬಳಿಯೇ ಇರುವ ಸೂರ್ಯನಾರಾಯಣ ದೇವಾಲಯ ನೋಡಬೇಕಾದ ಸ್ಥಳಗಳು.
ಜಾತ್ರೆ
[ಬದಲಾಯಿಸಿ]ಪ್ರತಿವರ್ಷ ಫಾಲ್ಗುಣ ಮಾಸದಲ್ಲಿ (ಮಾರ್ಚ್) ಕನಕಾಚಲಪತಿಗೆ ತಿರುಪತಿಯ ವೆಂಕಟೇಶನಿಗೆ ನಡೆಯುವ ರೀತಿಯಲ್ಲೇ ವೈಭವದ ಬ್ರಹ್ಮರಥೋತ್ಸವ ನಡೆಯುತ್ತದೆ. 1905ರಲ್ಲಿ ನಿರ್ಮಿಸಲಾದ ಬೃಹತ್ ರಥದಲ್ಲಿ ಮಹಾಭಾರತ, ರಾಮಾಯಣದ ಕಥಾನಕಗಳ ಕೆತ್ತನೆ ಇದೆ.
ಜಾತ್ರೆಯ ಕಾಲದಲ್ಲಿ ಅಂಕುರಾರ್ಪಣ, ಧ್ವಜಾರೋಹಣ, ಕಲ್ಯಾಣೋತ್ಸವ, ಬಲಿ, ಬ್ರಹ್ಮರಥೋತ್ಸವ, ಶೇಷೋತ್ಸವ, ಗರುಡೋತ್ಸವ, ಉಯ್ಯಾಲೋತ್ಸವ, ಗಜೋತ್ಸವ, ಶಯನೋತ್ಸವ, ವಸಂತೋತ್ಸವ ಮೊದಲಾದ ಧಾರ್ಮಿಕ ವಿಧಿಗಳು ಜರುಗುತ್ತವೆ.
ಉಲ್ಲೇಖಗಳು
[ಬದಲಾಯಿಸಿ]- ↑ "Protected Monuments in Karnataka". Archaeological Survey of India, Government of India. Indira Gandhi National Center for the Arts accessdate 4 June 2015.
- ↑ "Koppal". Karnataka.com accessdate 4 June 2015.