ಕಥಾವಳಿ

ವಿಕಿಪೀಡಿಯ ಇಂದ
Jump to navigation Jump to search

ಕಥಾವಳಿ : ಉತ್ತಮ ಕಥಾ ಸಾಹಿತ್ಯವನ್ನೊದಗಿಸಲು ಪ್ರಾರಂಭವಾದ ಮಾಸಪತ್ರಿಕೆ. ಓಲೇಟಿ ವಿ. ಗುಪ್ತರ ಒಡೆತನದಲ್ಲಿ ಡಿ.ಎಸ್. ರಾಮಕೃಷ್ಣರಾಯರ ಶ್ರದ್ಧೆ, ದುಡಿಮೆಗಳಿಂದ ಕಥಾವಳಿ ಸರ್ವಾಂಗ ಸುಂದರವಾಗಿ ಜುಲೈ ೧೯೩೮ರಲ್ಲಿ ಬೆಂಗಳೂರು ಅಕ್ಕಿಪೇಟೆಯ ಮೋಹನ್ ಪ್ರೆಸ್ ಎಂಬ ಸಣ್ಣ ಮುದ್ರಣಾಲಯದಲ್ಲಿ ಜನ್ಮತಾಳಿ, ಕೆಲವೇ ವರ್ಷಗಳಲ್ಲಿ ಕರ್ಣಾಟಕದ ಪ್ರಸಿದ್ಧ ಮಾಸಪತ್ರಿಕೆಯಾಯಿತು. ಅದು ಪ್ರಾರಂಭವಾದ ಕಾಲ ಅದರ ಪ್ರಗತಿಗೆ ಅನುಕೂಲವಾಗಿಯೇ ಇತ್ತು. ಸಿ.ಕೆ.ವೆಂಕಟರಾಮಯ್ಯ, ಮಾಸ್ತಿ ವೆಂಕಟೇಶ ಐಯ್ಯಂಗಾರ್, ಆನಂದ ಮೊದಲಾದ ಪ್ರಸಿದ್ಧರು ಆಧುನಿಕ ಸಣ್ಣ ಕಥೆಗಳ ವೈಶಿಷ್ಟ್ಯವನ್ನು ಪರಿಚಯ ಮಾಡಿಕೊಟ್ಟು, ಜನತೆಯ ಆಸಕ್ತಿಯನ್ನು ಹೆಚ್ಚಿಸಿದ್ದರು. ಕೆಲವು ಕಾಲ ಅ.ನ. ಕೃಷ್ಣರಾಯರ ಸಂಪಾದಕತ್ವದಲ್ಲಿದ್ದ ಕಥಾಂಜಲಿ ಮಾಸಪತ್ರಿಕೆ ಪ್ರಜಾಮತ ಪತ್ರಿಕೆಯ ಬಿ.ಎನ್. ಗುಪ್ತರ ಮಾಲೀಕತ್ವದಲ್ಲಿ ಆಗತಾನೆ ಮತ್ತೆ ಬೆಳಕಿಗೆ ಬಂದಿತ್ತು.

ಕಥಾವಳಿ ಪ್ರಾರಂಭದಲ್ಲಿ ಕ್ರೌನ್ 1/4 ಆಕಾರದಲ್ಲಿದ್ದು 1943ರಿಂದ ಕ್ರೌನ್ 1/8 ಆಕಾರದಲ್ಲಿ ಪ್ರಕಟವಾಯಿತು. ಅದರ ಬಿಡಿ ಪ್ರತಿ 4 ಆಣೆಯಿಂದ 6 ಆಣೆಯವರೆಗೂ ಹೆಚ್ಚಾಗಿ, ವಾರ್ಷಿಕ ಚಂದಾ 5 ರೂಪಾಯಿಗಳಾದುವು. ಪ್ರಾರಂಭದಲ್ಲಿ ಪ್ರಕಟವಾಗುತ್ತಿದ್ದ ಪ್ರತಿಗಳ ಸಂಖ್ಯೆ 1,000; ಪತ್ರಿಕೆ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ (1951ರಲ್ಲಿ) ಪ್ರಕಟವಾಗುತ್ತಿದ್ದ ಪ್ರತಿಗಳು 7,000. ಮನೋರಂಜನೆಯೇ ಕಥಾವಳಿಯ ಮುಖ್ಯ ಗುರಿ. ಸಣ್ಣಕಥೆ, ಕವಿತೆ, ಹರಟೆ, ಏಕಾಂಕ ನಾಟಕ, ಹಾಸ್ಯ. ವ್ಯಕ್ತಿಚಿತ್ರಗಳಿಗೆ ಕಥಾವಳಿ ಮೀಸಲು. ಜೀವಿತದಲ್ಲಿನ ವಿನೋದ, ಸ್ವಾರಸ್ಯ ವಿಚಾರ, ವಿಚಿತ್ರ ಅನುಭವ, ವಿಶೇಷ ಪ್ರಸಂಗ ಇವುಗಳೆಲ್ಲ ಹಿತಮಿತವಾಗಿ, ಸಾಹಿತ್ಯ ರೂಪದಲ್ಲಿ ಈ ಪತ್ರಿಕೆಯ ಕಾರ್ಡಿನಲ್ಲಿ ಕಥೆಗಳು ಎಂಬ ವಿಭಾಗದಲ್ಲಿ ಬರುತ್ತಿದ್ದುವು. ಈ ಅಂಕಣ ಬೇಗ ಓದುಗರ ಮನ ಸೆಳೆದಿತ್ತು.

ಕಥಾವಳಿಯ ಸಂಪಾದಕ ಮಂಡಲಿಯಲ್ಲಿ ಜಿ. ವರದರಾಜರಾವ್ ಹಾಗೂ ನಗುವನಂದ ಮಾಸಪತ್ರಿಕೆಯಲ್ಲಿ 1933ರಿಂದ ಹಾಸ್ಯಲೇಖನಗಳನ್ನು ಬರೆಯುತ್ತಿದ್ದ ವಿ. ಜಿ. ಕೃಷ್ಣಮೂರ್ತಿ ಅವರು ಬಹುಕಾಲವಿದ್ದು ಅದರ ಪ್ರಕಟಣೆಯ ಬಗ್ಗೆ ಉಪಯುಕ್ತ ಸಲಹೆಗಳನ್ನು ಕೊಡುತ್ತಿದ್ದರು. ಕಥಾವಳಿ ಉಚ್ಚಸ್ಥಾನದಲ್ಲಿದ್ದಾಗ ಅದರಲ್ಲಿ ಸಣ್ಣ ಕಥೆಗಳಲ್ಲದೆ ಮಕ್ಕಳ ಬಳಗ, ವನಿತಾವಿಭಾಗ, ಸಂಶೋಧನ ಸಮಸ್ಯೆ, ಸಾಹಸವಾಹಿನಿ, ನಗೆಮಿಂಚು, ಸಾಹಿತ್ಯ ಭಂಡಾರ, ಚಲನಚಿತ್ರ, ರಾಶಿ ಭವಿಷ್ಯ ಮೊದಲಾದ ವಿಭಾಗಗಳಿದ್ದುವು. ಉಡುಪಿಯ ಗಿರಿಬಾಲೆ ವನಿತಾ ವಿಭಾಗವನ್ನು ನೋಡಿಕೊಳ್ಳುತ್ತಿದ್ದರು. ಮಕ್ಕಳ ಬಳಗ, ಬಿ. ಆರ್. ಎಂ. ಸ್ವಾಮಿಯವರ ನೆರವಿನಿಂದ ಮಕ್ಕಳಿಗೆ ಪ್ರಿಯವಾಗಿತ್ತು. ಕಥೆಗಳನ್ನು ಸಮಸ್ಯೆಯ ರೂಪದಲ್ಲಿ ಕೊಟ್ಟು, ಸಾರಸ್ಯವಾದ ಘಟ್ಟದಲ್ಲಿ ನಿಲ್ಲಿಸಿ, ಮುಂದಿನ ಸಂಚಿಕೆಗಾಗಿ ಕಾಯುವಂತೆ ವಾಚಕರ ಉತ್ಸಾಹವನ್ನು ಕೆರಳಿಸುವ ವಿಧಾನವನ್ನು ಕಥಾವಳಿ ಪ್ರಾರಂಭಿಸಿತು. ಇದಲ್ಲದೆ ಸಾಹಸವಾಹಿನಿ ವಿಭಾಗದಲ್ಲಿ ಸಾಹಸದ ಕಥೆಗಳು ಅವಿಚ್ಛಿನ್ನವಾಗಿ ಪ್ರಕಟವಾಗುತ್ತಿದ್ದುವು.

ಕಥಾವಳಿಯ ವಿಶೇಷ ಆಕರ್ಷಣೆ ಪ್ರತಿವರ್ಷ ಜುಲೈ ತಿಂಗಳಲ್ಲಿ ಹೊರಡುತ್ತಿದ್ದ ಅದರ ವಾರ್ಷಿಕ ಸಂಚಿಕೆ. 250 ಪುಟಗಳಿಗೂ ಮಿಕ್ಕಿದ್ದು, ಕ್ರೌನ್ 1/8 ಆಕಾರದಲ್ಲಿದ್ದ ಈ ವಾರ್ಷಿಕ ಸಂಚಿಕೆಯಲ್ಲಿ ವಾಚಕರ ಪ್ರಶ್ನೆಗಳಿಗೆ ಸ್ವಾರಸ್ಯವಾದ ಉತ್ತರಗಳು ಬರುತ್ತಿದ್ದುವು. ಈ ವಿಶೇಷ ಸಂಚಿಕೆಗಾಗಿ ಏರ್ಪಡಿಸುತ್ತಿದ್ದ ವಾರ್ಷಿಕ ಕಥಾಸ್ಪರ್ಧೆಯಲ್ಲಿ ಉತ್ತಮ ಕಥೆಗಳಿಗೆ ಬಹುಮಾನ ನೀಡುವ ಪದ್ಧತಿ ಇತ್ತು. ಕಥಾವಳಿಯ 12ನೆಯ ವಾರ್ಷಿಕ ಕಥಾಸ್ಪರ್ಧೆಯಲ್ಲಿ (1950) ಪ್ರಥಮ ಬಹುಮಾನ ಗಳಿಸಿದ ಸಣ್ಣ ಕಥೆ ಸಮಸ್ಯೆಯ ಮಗು ಅದರ ಲೇಖಕಿ ತ್ರಿವೇಣಿಯವರ ಕಾದಂಬರಿ ಕ್ಷೇತ್ರದಲ್ಲಿನ ಉಜ್ವಲ ಭವಿಷ್ಯವನ್ನು ಸಾರಿತು. ಕಥಾವಳಿಯ ಲೇಖಕವರ್ಗಕ್ಕೆ ಸೇರಿದ್ದವರೆಂದರೆ ಎಸ್.ವಿ. ಪರಮೇಶ್ವರಭಟ್ಟ, ಬಸವರಾಜ ಕಟ್ಟೀಮನಿ, ಗೋಪಾಲ ಕೃಷ್ಣ ಅಡಿಗ, ಜಿ.ಪಿ.ರಾಜರತ್ನಂ, ಜಿ. ವರದರಾಜರಾವ್, ಬಿ. ಪುಟ್ಟಸ್ವಾಮಯ್ಯ, ಎಂ.ವಿ. ಸೀತಾರಾಮಯ್ಯ, ಗೊರೂರು ರಾಮಸ್ವಾಮಿ ಐಯಂಗಾರ್, ವಿ.ಜಿ.ಕೃಷ್ಣಮೂರ್ತಿ, ಕೈವಾರ ರಾಜರಾವ್, ಕೃಷ್ಣಮೂರ್ತಿ ಪುರಾಣಿಕ, ಮತಿಘಟ್ಟ ಕೃಷ್ಣಮೂರ್ತಿ, ಇನಾಂದಾರ್, ಕಾಂತರಾಜಯ್ಯ, ಗಿರಿಬಾಲೆ, ಅಮ್ಮೆಂಬಳ ಶಂಕರ ನಾರಾಯಣ ನಾವಡ, ನವಗಿರಿನಂದ, ಕೆ. ಗೋಪಾಲಕೃಷ್ಣರಾವ್, ಎನ್. ಸೂರಪ್ಪ, ನಾಡಿಗೇರ ಕೃಷ್ಣರಾಯ, ಆರ್. ಎಸ್. ರಾಮರಾವ್ ಮೊದಲಾದ ನಾಡಿನ ಸುಪ್ರಸಿದ್ಧ ಸಾಹಿತಿಗಳು. ಅಚ್ಚುಮೊಳೆಗಳನ್ನು ಬಳಸಿ ಸಾಧಾರಣವಾದ ಟ್ರೆಡಲ್ ಮಂತ್ರದಲ್ಲಿ ಅಚ್ಚುಕಟ್ಟಾದ ಮುದ್ರಣ ಕಥಾವಳಿಯ ಒಂದು ವೈಶಿಷ್ಟ್ಯ.

ಸು. 20 ವರ್ಷ ಸೇವೆ ಸಲ್ಲಿಸಿದ ಕಥಾವಳಿ 1958ರವರೆಗೂ ಅಸ್ತಿತ್ವದಲ್ಲಿದ್ದು ತರುವಾಯ ನಿಂತುಹೋಯಿತು.

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಕಥಾವಳಿ&oldid=712268" ಇಂದ ಪಡೆಯಲ್ಪಟ್ಟಿದೆ