ಕಂಸ
| ಕಂಸ | |
|---|---|
Krishna slays Kamsa | |
| Information | |
| ಕುಟುಂಬ | Ugrasena (father) Padmavati (mother) |
| ಗಂಡ/ಹೆಂಡತಿ | Asti and Prapti (daughters of Jarasandha) |
| ಸಂಬಂಧಿಕರು |
|
| Royal house | Yaduvamsha |
ಹಿಂದೂ ಧರ್ಮದಲ್ಲಿ, ಕಂಸನು ದೇವಕಿಯ ಸಹೋದರ, ಮತ್ತು ಮಥುರಾವನ್ನು ರಾಜಧಾನಿಯಾಗಿ ಹೊಂದಿದ್ದ ವೃಷ್ಣಿ ರಾಜ್ಯದ ಕ್ರೂರ ರಾಜ. ಅವನನ್ನು ಮುಂಚಿನ ಮೂಲಗಳಲ್ಲಿ ಮಾನವ ಮತ್ತು ಪುರಾಣಗಳಲ್ಲಿ ಒಬ್ಬ ಅಸುರನೆಂದು ವರ್ಣಿಸಲಾಗಿದೆ. ಅವನ ತಂದೆ ರಾಜ ಉಗ್ರಸೇನ ಮತ್ತು ತಾಯಿ ರಾಣಿ ಪದ್ಮಾವತಿ.
ಕೃಷ್ಣದ್ವೇಷಿ
[ಬದಲಾಯಿಸಿ]ಕೃಷ್ಣವೈರಿಗಳಲ್ಲಿ ಒಬ್ಬ. ಇವನ ಜನನವೇ ಕಾಲನೇಮಿಯೆಂಬ ರಾಕ್ಷಸನ ಅಂಶದಿಂದ. ಹಾಗಾಗಿ ದುಷ್ಟಗುಣಗಳು ಮೊದಲಿನಿಂದಲೂ ಇವನಲ್ಲಿ ಬೆಳೆದುಬಂದುವು. ಪ್ರಾಯಕ್ಕೆ ಬಂದಮೇಲೆ ತಂಗಿಯನ್ನು ಸೆರೆಯಲ್ಲಿಟ್ಟು ತಾನೇ ಮಧುರೆಗೆ ರಾಜನಾದ. ಜರಾಸಂಧನ ಮಕ್ಕಳಾದ ಅಸ್ತಿ ಮತ್ತು ಪ್ರಾಸ್ತಿಯರು ಈತನ ಹೆಂಡಿರು. ತಂಗಿಯಾದ ದೇವಕಿಯನ್ನು ವಾಸುದೇವನಿಗೆ ಕೊಟ್ಟು ವಿಜೃಂಭಣೆಯಿಂದ ಮದುವೆ ಮಾಡಿದ. ಅವಳ ಎಂಟನೆಯ ಗರ್ಭದ ಮಗು ತನ್ನನ್ನು ಕೊಲ್ಲುತ್ತದೆ ಎಂದ ಅಶರೀರವಾಣಿಯ ಮಾತು ಕೇಳಿ ವ್ಯಗ್ರನಾದ. ತಂಗಿಯನ್ನೂ ಭಾವ ವಾಸುದೇವನನ್ನೂ ಸೆರೆಯಲ್ಲಿಟ್ಟ ಅವರ ಸಂತಾನವನ್ನು ಕುಡಿಯಲ್ಲೇ ಕತ್ತರಿಸ ಬಯಸಿ ದೇವಕಿಗೆ ಹುಟ್ಟಿದ ಆರು ಮಕ್ಕಳನ್ನೂ ಕೊಂದ. ದೇವತೆಗಳ ಹಂಚಿಕೆಯಂತೆ ಏಳನೆಯ ಗರ್ಭ ನಂದಗೋಪನ ಮಡದಿ ರೋಹಿಣಿಯ ಬಳಿ ಬಲರಾಮನಾಗಿ ಬೆಳೆಯಿತು. ಎಂಟನೆಯ ಗರ್ಭದಲ್ಲಿ ಶ್ರೀಕೃಷ್ಣ ಹುಟ್ಟಿದ. ಒಡನೆಯೇ ದೇವದೇವನ ನಿರ್ದೇಶನಾನುಸಾರ ವಾಸುದೇವ ಮಗುವನ್ನು ಗೋಪನ ಮನೆಗೆ ಕೊಂಡೊಯ್ದು ಅಲ್ಲಿ ಆಗತಾನೇ ಜನಿಸಿದ್ದ ಹೆಣ್ಣುಮಗುವನ್ನು ತಂದ. ಎಂಟನೆಯ ಮಗು ಹುಟ್ಟಿತೆಂದು ತಿಳಿದ ಕಂಸ ಅದನ್ನು ಕೊಲ್ಲಲು ಪ್ರಯತ್ನಿಸಿದ. ಆದರೆ ಮಾಯೆಯ ಅಂಶವಾದ ಆ ಮಗು ಕೈಯಿಂದ ಹಾರಿ ಆಕಾಶಕ್ಕೆ ಚಿಮ್ಮಿ ಅವನ ಮೃತ್ಯು ನಂದಗೋಕುಲದಲ್ಲಿ ಬೆಳೆಯುತ್ತಿರುವ ಅಂಶವನ್ನು ಘೋಷಿಸಿ ಮಾಯವಾಯಿತು. ಕಂಸ ಕೃಷ್ಣನನ್ನು ಕೊಲ್ಲಲು ಪರಿಪರಿಯ ಯತ್ನಗಳನ್ನು ಮಾಡಿದ.ಪೂತನಿ, ಶಕಟ, ಧೇನುಕ, ಯಮಳಾರ್ಜುನ, ಕೇಶಿ, ತೃಣಾವರ್ತ ಮುಂತಾದ ರಾಕ್ಷಸರನ್ನು ಆ ಕೆಲಸಕ್ಕಾಗಿ ಕಳುಹಿಸಿದ. ಆದರೆ ಅವನ ದುಷ್ಟಯೋಚನೆಗಳೆಲ್ಲ ವಿಫಲವಾದುವು. ಅವರೆಲ್ಲ ಕೃಷ್ಣನಿಂದ ಹತರಾದರು. ಆಮೇಲೆ ಆಕ್ರೂರನನ್ನು ಕಳಿಸಿ ಬಿಲ್ಲುಹಬ್ಬದ ನೆಪದಲ್ಲಿ ಕೃಷ್ಣಬಲರಾಮರನ್ನು ಮಧುರೆಗೆ ಕರೆಸಿದ. ಅವರು ಸಂತೋಷದಿಂದ ಬಂದವರೇ ಕಂಸನ ದುಷ್ಟತನಕ್ಕೆ ಮಂಗಳ ಹಾಡಿದರು. ಚಾಣೂರ ಮುಷ್ಟಿಕರೆಂಬ ಮಲ್ಲರನ್ನೂ ಕುವಲಯಾಪೀಡವೆಂಬ ಆನೆಯನ್ನೂ ಕೊಂದರು. ಕೊನೆಗೆ ಕೃಷ್ಣನ ಮುಷ್ಟಿಯಲ್ಲಿ ಕಂಸ ಹತನಾದ.
ಗ್ರಂಥಗಳಲ್ಲಿರುವ ಉಲ್ಲೇಖಗಳು
[ಬದಲಾಯಿಸಿ]ಕಂಸನ ವಿಚಾರ ಭಾಗವತ, ಹರಿವಂಶ, ಮಹಾಭಾರತಗಳಲ್ಲಿ ಬರುತ್ತದೆ. ಕನ್ನಡದ ಪ್ರಸಿದ್ಧಕವಿ ಚಾಟುವಿಠಲನಾಥನ ಷಟ್ಪದೀರೂಪದ ಭಾಗವತ ಕಾವ್ಯದಲ್ಲಿಯೂ ರುದ್ರಭಟ್ಟನ ಜಗನ್ನಾಥವಿಜಯದಲ್ಲೂ ಅವನ ಪಾತ್ರ ಚಿತ್ರಿತವಾಗಿದೆ. ಪ್ರಚಲಿತವಾದ ಈ ಕೃತಿಗಳಲ್ಲಿ ಬರುವ ಕಥೆಗೂ ಮೂಲ ಭಾಗವತದಲ್ಲಿ ಬರುವ ಕಥೆಗೂ ಇರುವ ಎರಡು ಮುಖ್ಯ ವ್ಯತ್ಯಾಸಗಳನ್ನು ನೋಡಬೇಕು. ಭಾಗವತದಲ್ಲಿ ಕಂಸ ತಂಗಿಯ ಮೇಲೆ ತುಂಬ ಪ್ರೀತಿವಿಶ್ವಾಸಗಳುಳ್ಳವನು. ಅಶರೀರವಾಣಿಯ ಮಾತು ಕೇಳಿ ಕುಪಿತನಾಗಿ ತಂಗಿಯನ್ನು ಕೊಲ್ಲಲು ಹೋಗುತ್ತಾನೆ, ನಿಜ. ಆದರೆ ದೇವಕಿಯ ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳನ್ನೆಲ್ಲ ಅವನಿಗೆ ಒಪ್ಪಿಸಿಬಿಡುವುದಾಗಿ ವಸುದೇವನೇ ತಿಳಿಸಿದಾಗ ಅದಕ್ಕೆ ಒಪ್ಪಿ ಅವರನ್ನು ಬಂಧನದಲ್ಲಿಡುತ್ತಾನೆ. ಮೊದಲ ಮಗು ಹುಟ್ಟಿದೊಡನೆ ವಸುದೇವ ಅದನ್ನು ತಂದು ಕಂಸನ ಕೈಗಿತ್ತಾಗ ಅವನಿಗೆ ಸಂತೋಷವಾಗುತ್ತದೆ. ಆಡಿದ ಮಾತನ್ನು ಉಳಿಸಿಕೊಂಡ ಸತ್ಯಸಂಧ ನೀನು ಎಂದು ವಸುದೇವನನ್ನು ಬಾಯಿತುಂಬ ಹೊಗಳಿ ನಿಮ್ಮ ಎಂಟನೆಯ ಮಗು ನನ್ನ ಮೃತ್ಯುವಾದ್ದರಿಂದ ಅನ್ಯಾಯವಾಗಿ ಇವುಗಳನ್ನು ಏಕೆ ಕೊಲ್ಲಲಿ ಎಂದು ಹಿಂದಕ್ಕೆ ಕೊಟ್ಟುಬಿಡುತ್ತಾನೆ. ಹಾಗೆಯೇ ಎಂಟನೆಯ ಶಿಶು ಆಕಾಶಕ್ಕೆ ಹಾರಿ ನಿನ್ನ ಶತ್ರು ಬೇರೆಕಡೆ ಬೆಳೆಯುತ್ತಿದ್ದಾನೆ ಎಂದು ತಿಳಿಸಿದಾಗಲೂ ಕಂಸ ಕ್ಷಣಕಾಲ ದಿಗ್ಭ್ರಮೆಗೊಳ್ಳುತ್ತಾನೆ. ವಿಧಿಯ ಕೈವಾಡ ಅವನಿಗೆ ಅಚ್ಚರಿಯುಂಟುಮಾಡುತ್ತದೆ. ಒಡನೆಯೇ ವಿವೇಕ ಮುಂದಾಗಿ ಅವನು ವಸುದೇವನನ್ನು ಕುರಿತು ಇನ್ನು ನಿಮ್ಮನ್ನು ಹಿಂಸಿಸಿ ಉಪಯೋಗವೇನು, ಸ್ವಾರ್ಥದಿಂದ ಅವಿವೇಕಿಯಾಗಿ ಸ್ನೇಹಬಾಂಧವ್ಯಗಳನ್ನು ತ್ಯಜಿಸಿ ನಾನು ಪಾಪಿಯಾದೆ. ಸ್ವಂತ ತಂಗಿಯನ್ನೇ ಬಳಲಿಸಿದೆ. ನೀವು ನನ್ನನ್ನು ಕ್ಷಮಿಸಿರಿ ಎಂದು ಪಶ್ಚಾತ್ತಾಪದಿಂದ ಕೇಳಿಕೊಳ್ಳುತ್ತಾನೆ. ಅವರನ್ನು ಸೆರೆಯಿಂದ ಬಿಡಿಸುತ್ತಾನೆ. ಹೀಗೆ ಎರಡು ಬಗೆಯ ಕಂಸನ ಚಿತ್ರ ನಮಗೆ ದೊರೆಯುತ್ತದೆ. ವಾಸ್ತವವಾಗಿ ಕಂಸ ಖಳನಲ್ಲ. ಆದರೆ ಮೃತ್ಯುಭೀತಿ, ಸ್ವಾರ್ಥ ಅವನನ್ನು ದುಷ್ಟತನಕ್ಕೆ ಚೋದಿಸುತ್ತದೆ. ವಿಧಿವಶನಾಗಿ, ದುರ್ಮಂತ್ರಿಗಳ ಪ್ರಚೋದನೆಗೆ ಸಿಕ್ಕಿ ಕಂಸ ದುಷ್ಟನಾಗುತ್ತಾನೆ.