ಕಂಬದ ಮರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಂಬದ ಮರ : ಅನೋನೇಸೀ ಕುಟುಂಬಕ್ಕೆ ಸೇರಿದ್ದು ಉದ್ಯಾನಪ್ರಾಮುಖ್ಯವನ್ನು ಪಡೆದ ಒಂದು ಸುಂದರವಾದ ಮರ. ಈ ಜಾತಿಯ ವೈಜ್ಞಾನಿಕ ಹೆಸರು ಪಾಲಿಯಾಲ್ತಿಯ. ಇದರಲ್ಲಿ ಸು. ೭೦ ಪ್ರಭೇದಗಳಿವೆ. ಇವುಗಳಲ್ಲಿ ಬಹುಪಾಲು ಉಷ್ಣವಲಯದ ಅದರಲ್ಲೂ ಏಷ್ಯದ ನಿವಾಸಿಗಳು. ಭಾರತದಲ್ಲಿ ಸು. ೧೨ ಪ್ರಭೇದಗಳಿವೆ. ಇವುಗಳಲ್ಲಿ ಪಾಲಿಯಾಲ್ತಿಯ ಲಾಂಜಿಫೋಲಿಯ, ಪಾ.ಸೆರಸಾಯ್ಡಿಸ್, ಪಾ.ಫ್ರೇಗ್ರನ್ಸ್‌ ಮತ್ತು ಪಾ.ಸ್ಯೂಬಿರೋಸಗಳು ಮುಖ್ಯವಾದ ಪ್ರಭೇದಗಳು.

ಕಂಬದ ಮರ (ಪಾ.ಲಾಂಜಿಫೋಲಿಯ) ಸಿಂಹಳದ ಒಳಪ್ರದೇಶಗಳ ಮೂಲವಾಸಿಯೆಂದು ಹೇಳುತ್ತಾರೆ. ಭಾರತದ ಎಲ್ಲ ಪ್ರದೇಶಗಳಲ್ಲೂ ಇದು ಸರ್ವೇಸಾಮಾನ್ಯ. ಸುಂದರವಾಗಿ ತೇರಿನಂತೆ ಇದ್ದು ಸದಾ ಹಸಿರಾಗಿ ಕಂಗೊಳಿಸುವ ಇದನ್ನು ಅಲಂಕಾರಕ್ಕಾಗಿ ಉದ್ಯಾನವನಗಳಲ್ಲೂ ಬೀದಿಯ ಇಕ್ಕೆಲಗಳಲ್ಲಿ ಸಾಲುಮರವಾಗಿಯೂ ಬೆಳೆಸುವರು. ಇದಕ್ಕೆ ಹೆಸ್ಸರೆ, ವುಬ್ಬಿನ ಮುಂತಾದ ಇತರ ಹೆಸರುಗಳೂ ಉಂಟು. ಇದು ನೇರವಾಗಿ ಕೊಂಬೆಗಳಿಲ್ಲದೆ ತೇರಿನಂತೆ ಬೆಳೆಯುವ ಮರ. ಕೆಲವೊಮ್ಮೆ ಪಕ್ಕದಲ್ಲಿ ಇಳಿಬಿದ್ದಿರುವ ರೆಂಬೆಗಳಿರುವುದೂ ಉಂಟು. ತೊಗಟೆ ನಯ, ದಪ್ಪ ಹಾಗೂ ಕಂದು ಬಣ್ಣದ್ದು. ಕಾಂಡದ ಒಳಭಾಗ ಹಗುರವಾಗಿಯೂ ಮೆತ್ತಗೂ ಇರುತ್ತದೆ. ಎಲೆಗಳು ಪರ್ಯಾಯವಾಗಿ ಜೋಡಣೆಗೊಂಡಿವೆ, ಮಿರುಗುವ ಅವುಗಳ ಮೇಲ್ಮೈ, ನಯ, ಹಚ್ಚಹಸಿರು; ಆಕಾರ ಈಟಿಯಂತೆ; ಅಂಚು ಅಲೆಯಲೆಯಾಗಿದೆ. ಹೂಗಳು ಕೊಂಚ ಹಳದಿ ಮಿಶ್ರಿತ ಹಸಿರು ಬಣ್ಣದವು; ದ್ವಿಲಿಂಗಿಗಳು. ಹೂಗೊಂಚಲು ಎಲೆಗಳ ಕಂಕುಳಲ್ಲೊ ರೆಂಬೆಗಳ ತುದಿಯಲ್ಲೊ ಎಲೆಗಳಿಗೆ ಅಭಿಮುಖವಾಗೊ ಅಥವಾ ಎಲೆಗಳ ಕೆಳಗೆ ನೇರವಾಗಿ ಕಾಂಡಕ್ಕೆ ಅಂಟಿಕೊಂಡಂತೆಯೊ ಇರುತ್ತವೆ. ಪುಷ್ಪಪತ್ರಗಳು 3; ಬಿಡಿಬಿಡಿಯಾಗಿವೆ. ದಳಗಳು ೬; ಬಿಡಿ ಹಾಗೂ ಮೂರು ಮೂರರಂತೆ ಎರಡು ಸುತ್ತುಗಳಲ್ಲಿ ಜೋಡಣೆಗೊಂಡಿವೆ. ಕೇಸರಗಳು ಹಲವಾರು; ಬೆಣೆಯಂತೆ ಆಕಾರವುಳ್ಳವು. ಅಂಡಾಶಯ ಉಚ್ಚಸ್ಥಾನದ್ದು; ಅನೇಕ ಕಾರ್ಪೆಲುಗಳನ್ನೊಳಗೊಂಡಿದೆ. ಕಾರ್ಪೆಲುಗಳು ಬಿಡಿಬಿಡಿಯಾಗಿವೆ. ಒಂದೊಂದರಲ್ಲೂ ಒಂದು ಅಂಡಕೋಶ, ಉದ್ದನೆಯ ಶಲಾಕೆ, ಇವೆ. ಅಂಡಕಗಳ ಸಂಖ್ಯೆ ೧-೨. ಫಲ ಹಲವಾರು ಅಂಡಾಶಯಗಳಿಂದ ಬೆಳೆದ ಸಾಮೂಹಿಕ ಮಾದರಿಯದು. ಒಂದೊಂದು ಅಂಡಾಶಯ ದಲ್ಲೂ ಒಂದೊಂದೇ ಬೀಜವಿದೆ. ಕಾಯಿಗಳ ಬಣ್ಣ ಊದಾ; ಆಕಾರ ಗುಂಡಗೆ.

ಕಂಬದ ಮರ ತೇವಪುರಿತ ಹಾಗೂ ಬೆಚ್ಚನೆಯ ಪ್ರದೇಶಗಳಲ್ಲಿ ಹುಲಸಾಗಿ ಬೆಳೆಯುತ್ತದೆ. ಬೀಜಗಳ ಮುಖಾಂತರ ಇದನ್ನು ವೃದ್ಧಿ ಮಾಡಬಹುದು. ಮರಗಳನ್ನು ಬೆಳೆಸುವ ಸ್ಥಳಗಳಲ್ಲೆ ನೇರವಾಗಿ ಬೀಜ ಬಿತ್ತಿ ಸಸಿ ಮಾಡಬಹುದು. ಅಥವಾ ಕುಂಡಗಳಲ್ಲೊ ಬುಟ್ಟಿಗಳಲ್ಲೊ ಬೀಜ ಬಿತ್ತಿ ಸಸಿಗಳನ್ನು ಪಡೆದು ಸ್ಥಳಾಂತರಿಸಬಹುದು. ಬೀಜಗಳ ಮೊಳೆಯುವ ಸಾಮಥರ್ಯ್‌ ಒಂದೇ ಋತುಮಾನ ಮಾತ್ರ ಇರುವುದರಿಂದ ಆ ವರ್ಷದ ಜುಲೈ ಅಥವಾ ಆಗಸ್ಟ್‌ ತಿಂಗಳಿನಲ್ಲಷ್ಟೆ ಬಿತ್ತಬೇಕು.

ಕಂಬದ ಮರದ ಚೌಬೀನೆ ಕೊಂಚ ಹಳದಿ ಅಥವಾ ಬಿಳುಪು. ಮೃದು, ಹಗುರ ಹಾಗೂ ಮೆತುವಾಗಿದೆ, ಇದನ್ನು ಪೆಟ್ಟಿಗೆ, ಪೀಪಾಯಿ, ಆಸರೆಗಂಬ, ಗಾಡಿಪಟ್ಟಿ ಮೊದಲಾದುವನ್ನು ಮಾಡಲು ಬಳಸುತ್ತಾರೆ. ಅಲ್ಲದೆ ಪೆನ್ಸಿಲ್ ಮತ್ತು ಬೆಂಕಿ ಕಡ್ಡಿಗಳನ್ನೂ ಇದರಿಂದ ತಯಾರಿಸಬಹುದು. ಹಿಂದಿನ ಕಾಲದಲ್ಲಿ ಹಡಗುಗಳ ಪಟಸ್ತಂಭಗಳನ್ನು ಮಾಡಲೂ ಈ ಮರವನ್ನು ಉಪಯೋಗಿಸುತ್ತಿದ್ದರು. ಹಣ್ಣುಗಳನ್ನು ಅನಾವೃಷ್ಟಿ ಕಾಲದಲ್ಲಿ ತಿನ್ನುವ ರೂಢಿಯಿದೆ. ಎಲೆಗಳು ಸ್ವಲ್ಪಮಟ್ಟಿಗೆ ಸುವಾಸನಾಯುಕ್ತವಾಗಿರುವುದರಿಂದ ಅಲಂಕಾರಕ್ಕಾಗಿಯೂ ಉಪಯೋಗಿಸುವುದುಂಟು. ಭಾರತದ ಕೆಲವೆಡೆಗಳಲ್ಲಿ ಈ ಮರದ ತೊಗಟೆಯ ಕಷಾಯವನ್ನು ಜ್ವರಶಮನಕಾರಕವಾಗಿ ಬಳಸುವುದೂ ಇದೆ. ಕೆಲವು ಸಾರಿ ಅಶೋಕವೃಕ್ಷದ ತೊಗಟೆಯ ಬದಲಾಗಿ ಅಥವಾ ಅದರೊಂದಿಗೆ ಕಲಬೆರಕೆ ಮಾಡಿ ಇದನ್ನು ಉಪಯೋಗಿಸುತ್ತಾರೆ. ಇವೆರಡೂ ತೊಗಟೆಗಳಲ್ಲಿ ಬರಿಗಣ್ಣಿಗೇ ಕಾಣಿಸುವ ವ್ಯತ್ಯಾಸಗಳಿರುವುದರಿಂದಲೂ ಇವುಗಳ ಪುಡಿಗಳು ರಾಸಾಯನಿಕ ಗುಣ ಮತ್ತು ಕಿರಣಸ್ಫುರಣ (ಫ್ಲೂರಸೆನ್ಸ್‌) ಕ್ರಿಯೆಯಲ್ಲಿ ಬೇರೆಬೇರೆಯಾಗಿರುವುದರಿಂದಲೂ ಇವನ್ನು ಸುಲಭವಾಗಿ ಗುರುತಿಸಬಹುದು. ತೊಗಟೆಯ ಸಾರ ಹೃದಯದ ಬಡಿತವನ್ನು ಕುಗ್ಗಿಸುವ, ರಕ್ತದ ಒತ್ತಡವನ್ನು ಕಡಿಮೆ ಮಾಡುವ, ಉಸಿರಾಟವನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ.

ಈ ಜಾತಿಯ ಇನ್ನೊಂದು ಪ್ರಭೇದವಾದ ಪಾ.ಸೆರಸಾಯ್ಡಿಸ್ ಎಂಬುದು ಸು.೧೫ಮೀ ಎತ್ತರಕ್ಕೆ ಬೆಳೆಯುವ ಮರ. ಬಿಹಾರ, ಒರಿಸ್ಸ, ಅಸ್ಸಾಂ ಹಾಗೂ ಕೇರಳಗಳಲ್ಲಿ ಹೇರಳವಾಗಿ ಬೆಳೆಯುತ್ತದೆ. ಬಹಳಮಟ್ಟಿಗೆ ಪಾ.ಲಾಂಜಿ ಪೋಲಿಯ ಪ್ರಭೇದವನ್ನು ಹೋಲುವ ಇದಕ್ಕೆ ನೆಟ್ಟಲಿಂಗಮರ ಅಥವಾ ಸಣ್ಣ ಹೆಸ್ಸರೆ ಎಂಬ ಹೆಸರುಗಳೂ ಇವೆ. ಇದರ ಎಲೆ, ಹೂ ಮುಂತಾದುವು ಕಂಬದ ಮರದಂತೆಯೇ ಇವೆ. ತೊಗಟೆ ಮಾತ್ರ ಕಪ್ಪು ಅಥವಾ ಬೂದಿ ಬಣ್ಣದ್ದು, ತೆಳುವಾಗಿ ಒರಟಾಗಿದೆ. ಚೌಬೀನೆ, ಆಲಿವ್-ಬೂದಿ ಬಣ್ಣದ್ದು, ಕೊಂಚ ಗಡುಸು, ಹಾಗೂ ಭಾರ; ಸರಿಯಾಗಿ ಹದಗೊಳಿಸದಿದ್ದಲ್ಲಿ ಕೊಂಚಕಾಲದ ಮೇಲೆ ಉದ್ದವಾದ, ಆಳವಾದ ಬಿರುಕುಗಳುಂಟಾಗುತ್ತವೆ. ಆದರೆ ಗರಗಸದಿಂದ ಕೊಯ್ಯಲೂ ಮೆರುಗುಗಳನ್ನು ಮಾಡಲೂ ಉಪಯೋಗಿಸುತ್ತಾರೆ. ಅಲ್ಲದೆ ಇದು ಒಳ್ಳೆಯ ಉರುವಲು ಕೂಡ ಹೌದು.

ಪಾಲಿಯಾಲ್ತಿಯದ ಮತ್ತೊಂದು ಪ್ರಭೇದ ಪಾ.ಫ್ರೇಗ್ರನ್ಸ್‌ ಎಂಬುದು ಪಶ್ಚಿಮ ಘಟ್ಟಗಳ ಸದಾ ಹಸುರಿನ ಕಾಡುಗಳಲ್ಲಿ ಕಾಣಬರುತ್ತದೆ. ಈ ಗಿಡ ಸು. 25 ಮೀ. ಎತ್ತರಕ್ಕೆ ಬೆಳೆಯುತ್ತದೆ. ಇದಕ್ಕೆ ಕನ್ನಡದಲ್ಲಿ ಗೌರಿ ಅಥವಾ ಹಬ್ಬೆ ಮರ ಎಂಬ ಹೆಸರುಗಳಿವೆ. ಇದರ ಚೌಬೀನೆ ಬೂದಿಮಿಶ್ರಿತ ಬಿಳುಪು, ಮೃದು ಮತ್ತು ಹಗುರ. ಆದರೆ ಬಹುಕಾಲ ಬಾಳಿಕೆ ಬರುವಂಥದ್ದಲ್ಲ. ಇದನ್ನು ತಾತ್ಕಾಲಿಕ ಕಟ್ಟಣೆಗಳು, ಪೀಠೋಪಕರಣ, ಬೆಂಕಿಪೆಟ್ಟಿಗೆ, ಪೆಟ್ಟಿಗೆಗಳು ಮುಂತಾದುವನ್ನು ಮಾಡುವುದಕ್ಕೆ ಉಪಯೋಗಿಸುತ್ತಾರೆ. ಏರೋಪ್ಲೇನುಗಳ ರೆಕ್ಕೆ, ಟೆನ್ನಿಸ್ ಮತ್ತು ಬ್ಯಾಡ್ಮಿಂಟನ್ ಬ್ಯಾಟುಗಳು, ಫೋಟೋ ಕಟ್ಟುಗಳು, ಬಿಲಿಯರ್ಡ್ ಕೋಲುಗಳು, ಪ್ಲೈವುಡ್ ಮುಂತಾದುವುಗಳ ತಯಾರಿಕೆಯಲ್ಲಿ ಇದನ್ನು ಬಳಸಬಹುದಾಗಿದೆ. ಪಾಲಿಯಾಲ್ತಿಯ ಸ್ಯೂಬಿರೋಸ ಎಂಬುದು ಭಾರತಾದ್ಯಂತ ಕಾಣಬರುವ ಇನ್ನೊಂದು ಪ್ರಭೇದ. ದೊಡ್ಡ ಪೊದೆಯಂತೆಯೋ ಸಣ್ಣ ಮರವಾಗಿಯೋ ಬೆಳೆಯುವ ಇದರ ಚೌಬೀನೆಯನ್ನು ಮರಗೆಲಸಗಳಲ್ಲಿ, ಪಟಸ್ತಂಭಗಳ ಹಾಗೂ ದೋಣಿಗಳ ದೂಲಗಳ ತಯಾರಿಕೆಯಲ್ಲಿ ಉಪಯೋಗಿಸುವುದುಂಟು. ಹಣ್ಣುಗಳನ್ನು ತಿನ್ನಬಹುದು. ಹೊಸದಾಗಿ ಅಗೆದು ತೆಗೆದ ಬೇರುಗಳಿಂದ ತಯಾರಿಸಿದ ಕಷಾಯವನ್ನು ಫಿಲಿಪೀನ್ಸ್‌ ದ್ವೀಪವಾಸಿಗಳು ಗರ್ಭಪಾತಕ್ಕಾಗಿ ಬಳಸುತ್ತಾರೆಂದು ಹೇಳಲಾಗಿದೆ. ಈ ಮರ ಒಂದು ಬಗೆಯ ಅರಗುಕೀಟಕ್ಕೆ ಆಶ್ರಯವಾಗಿದೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಕಂಬದ_ಮರ&oldid=858538" ಇಂದ ಪಡೆಯಲ್ಪಟ್ಟಿದೆ