ಕಂದ
ಕಂದಪದ್ಯ ಅಥವಾ ಕಂದ ಕನ್ನಡ ಸಾಹಿತ್ಯದ ವಿಶಿಷ್ಟ ಪ್ರಕಾರದ ಛಂದಸ್ಸಾಗಿದೆ. ಕನ್ನಡದ ಅನೇಕ ಕವಿಗಳು ವಿಪುಲವಾಗಿ ಇದನ್ನು ಬಳಸಿಕೊಂಡಿದ್ದಾರೆ. ಇದು ಚತುರ್ಮಾತ್ರಾಗಣಗಳ ಗತಿಯಲ್ಲಿ ಬರುವ ಪ್ರಕಾರವಾಗಿದೆ. ಇದರಲ್ಲಿ ಮೊದಲ ಸಾಲಿನಲ್ಲಿ ಮೂರು ಗಣಗಳೂ ಎರಡನೇ ಸಾಲಿನಲ್ಲಿ ಐದು ಗಣಗಳೂ ಪುನಃ ಮೂರನೇ ಸಾಲಿನಲ್ಲಿ ಮೂರು ಗಣಗಳೂ ನಾಲ್ಕನೇ ಸಾಲಿನಲ್ಲಿ ಐದು ಗಣಗಳೂ ಇರುತ್ತವೆ. ಎಲ್ಲಾ ಗಣಗಳು ನಾಲ್ಕು ಮಾತ್ರೆಗಳಿಗೆ ವಿಭಾಗಿಸಲ್ಪಟ್ಟಿರುತ್ತವೆ. ಅದನ್ನು ಹೀಗೆ ತೋರಿಸಬಹುದು.
- 4+4+4=12
- 4+4+4+4+4=20
- 4+4+4=12
- 4+4+4+4+4 =20
ಕಂದ ಪದ್ಯ
[ಬದಲಾಯಿಸಿ]ಒಡೆಯಲ ಜಾಂಡಂ ಕುಲಗಿರಿ ಕಡೆಯಲ್ ಪಿಲಿಯಲ್ಕೆ ಧಾತ್ರಿ ದಿವಿಜರ್ ನಡುಗ ಲ್ಕೊಡರಿಸು ವಿನಂಜ ಟಾಸುರ ಹಿಡಿಂಬ ಬಕವೈ ರಿಸಿಂಹ ನಾದಂ ಗೆಯ್ದಂ ಒಡೆಯಲ |ಜಾಂಡಂ | ಕುಲಗಿರಿ | U U _ | U U_|U _ U|UU_| U U_| ಕೆಡೆಯಲ್| ಪಿಳಿಯ|ಲ್ಕೆ ಧಾತ್ರಿ|ದಿವಿಜರ್| ನಡುಗ-| U U U U| U _U | _ U U| ಲ್ಕೊಡರಿಸು |ವಿನಂ ಜ | ಟಾಸುರ| U _ U| UU_|U_U | _ _|__| ಹಿಡಿಂಬ | ಬಕವೈ|ರಿ ಸಿಂಹ|ನಾದಂ| ಗೆಯ್ದಂ||
ಈ ಪದ್ಯ ರಚನೆಯ ಕುರಿತ ವಿಡಿಯೋ ಹಾಗೂ ವಿವರಗಳನ್ನು ಪದ್ಯಪಾನ ಜಾಲದಲ್ಲಿಯೂ ನೋಡಬಹುದು. ಕಂದಪದ್ಯ ರಚನೆಗೆ ಪ್ರಯತ್ನಿಸಲು ಕೂಡ ಈ ವಿಡಿಯೋ ಸಹಕಾರಿಯಾಗಿದೆ. == ಕಂದ1 : ಒಂದು ಮಾತ್ರಾವೃತ್ತ. ಕನ್ನಡ ಮತ್ತು ತೆಲುಗು ಚಂಪುಕಾವ್ಯಗಳಲ್ಲಿ ಇದರ ಬಳಕೆ ವಿಶೇಷವಾಗಿ ಕಾಣುತ್ತದೆ. ಕನ್ನಡದಲ್ಲಿಯಂತೂ ಕಂದವನ್ನೇ ಮುಖ್ಯ ಛಂದಸ್ಸಾಗಿಟ್ಟುಕೊಂಡು ರಚಿಸಿರುವ ಕೃತಿಗಳೇ ಇವೆ. ಲಕ್ಷಣಗ್ರಂಥಗಳ ಸೂತ್ರಗಳು ಸಾಮಾನ್ಯವಾಗಿ ಕಂದದಲ್ಲಿಯೇ ಕಟ್ಟಿದವಾಗಿವೆ. ಉದಾಹರಣೆಗೆ, ಜನ್ನಕವಿಯ ಯಶೋಧರ ಚರಿತೆ (ಪ್ರ.ಶ.1209), ಕೇಶಿರಾಜನ ಶಬ್ದಮಣಿದರ್ಪಣ (ಪ್ರ.ಶ. ಸು. 1260) ಇಂಥವನ್ನು ಹೇಳಬಹುದು. ಹೀಗೆ ಕನ್ನಡ ಕವಿಗಳಿಗೆ ಕಂದ ಅಚ್ಚುಮೆಚ್ಚಿನ ಛಂದಸ್ಸು, ಕಂದಂಗಳಮೃತ ಲತಿಕಾ| ಕಂದಂಗಳ್|.... ಕಂದಂಗಳ್ ವಾಗ್ವನಿತೆಯ| ಕಂದಂಗಳ್...ಎಂದು ಮುಂತಾಗಿ ಹರಿಹರ, ಸುರಂಗಕವಿ ಮೊದಲಾದ ಒಬ್ಬಿಬ್ಬರು ಕವಿಗಳು ತಮ್ಮ ಮೆಚ್ಚಿಗೆಯನ್ನು ವ್ಯಕ್ತವಾಗಿಯೇ ತಿಳಿಸಿದ್ದಾರೆ. ಕನ್ನಡದಲ್ಲಿ ಕಂದದ ಬಳಕೆಗೆ ದೀರ್ಘವಾದ ಇತಿಹಾಸವಿದೆ. ಪ್ರಾಚೀನ ಕನ್ನಡ ಶಾಸನಗಳಲ್ಲಿಯೇ ಅದು ತಲೆದೋರಿದೆ. ಕವಿರಾಜಮಾರ್ಗದಲ್ಲಿಯ (ಪ್ರ.ಶ.ಸು.850) ಸೂತ್ರೋದಾಹರಣೆಗಳಲ್ಲಿ ಅದು ವಿಪುಲವಾಗಿ ಬಳಕೆಯಾಗಿದೆ. ಅದರ ಬಂಧದ ಸೊಗಸು ನೆನೆಯತಕ್ಕದ್ದಾಗಿದೆ. ಅಲ್ಲಿಂದೀಚೆಗೆ ಪಂಪ ಮೊದಲಾದ ಕನ್ನಡ ಚಂಪು ಕವಿಗಳು ತಮ್ಮ ಕೃತಿಗಳಲ್ಲಿ ಕಂದವನ್ನು ಇತರ ವೃತ್ತಜಾತಿಗಳಿಗಿಂತ ಪ್ರಾಯಃ ಹೆಚ್ಚಾಗಿಯೇ ಎನ್ನುವಂತೆ ಹೇರಳವಾಗಿ ಬಳಸಿದ್ದಾರೆ. ಕವಿರಾಜ ಮಾರ್ಗದ ಕರ್ತೃವೂ ಪಂಪ, ಜನ್ನ, ಷಡಕ್ಷರಿ ಈ ಮೊದಲಾದ ಕೆಲವರೂ ಕಂದಪದ್ಯವನ್ನು ಸೊಗಸಾಗಿ ಬರೆಯಬಲ್ಲವರೆಂದು ಹೆಸರಾಗಿದ್ದಾರೆ. ಅದು ಹಳಗನ್ನಡ ಸಾಹಿತ್ಯದ ಜೀವಾಳವಾದ ಛಂದಸ್ಸು. ಅದರ ಲಕ್ಷಣದಲ್ಲಿ, ನಡುಗನ್ನಡದ ಕಾಲದಿಂದೀಚೆಗೆ ಆಗಾಗ ಶೈಥಿಲ್ಯಗಳು ತಲೆದೋರದಿದ್ದರೂ ಇಂದಿಗೂ ಅದರ ರಚನೆ ನಿಂತಿಲ್ಲ.
ಕಂದಪದ್ಯ ಸಂಸ್ಕೃತದ ಮಾತ್ರಾವೃತ್ತಗಳಲ್ಲಿ ದ್ವಿಪದಿಯಾದ ಆರ್ಯಾ ಅಥವಾ ಪ್ರಾಕೃತದ ಮಾತ್ರಾವೃತ್ತಗಳಲ್ಲಿ ದ್ವಿಪದಿಯಾದ ಗಾಥಾ ಎಂಬ ವೃತ್ತಜಾತಿಯ ವರ್ಗಕ್ಕೆ ಸೇರಿದ್ದಾಗಿದೆ. ಆರ್ಯೆಯ ಸಾಮಾನ್ಯಲಕ್ಷಣ ಹೀಗೆ: ಎರಡು ಅರ್ಧಗಳು; ಪುರ್ವಾರ್ಧದಲ್ಲಿ 7 ಚತುರ್ಮಾತ್ರಾಗಣ + 1 ಗುರು (= 30 ಮಾತ್ರೆ); ಉತ್ತರಾರ್ಧದಲ್ಲಿ 5 ಚತುರ್ಮಾತ್ರಾಗಣ+1 ಲಘು+1 ಚತುರ್ಮಾತ್ರಾಗಣ+1 ಗುರು (=27 ಮಾತ್ರೆ); ಎರಡೂ ಅರ್ಧಗಳ ವಿಷಮಸ್ಥಾನಗಳಲ್ಲಿ ಮಧ್ಯಗುರುವಿನ ಗಣ(ಜಗಣ) ಬರಕೂಡದು; ಪುರ್ವಾರ್ಧದಲ್ಲಿ 6ನೆಯ ಗಣಸ್ಥಾನದಲ್ಲಿ ತಪ್ಪದೆ ಮಧ್ಯ ಗುರುವಿನ ಗಣ (ಜಗಣ) ಅಥವಾ ಸರ್ವಲಘುವಿನ ಗಣ ಬಂದಿರಬೇಕು; ಸರ್ವ ಲಘುವಿನ ಗಣವಾಗಿದ್ದ ಪಕ್ಷದಲ್ಲಿ 2ನೆಯ ಲಘುವಿಂದ ಹೊಸಪದ ಆರಂಭವಾಗಿರಬೇಕು; ಆದರೆ ಪುರ್ವಾರ್ಧದ 7ನೆಯ ಗಣ ಅಥವಾ ಉತ್ತರಾರ್ಧದ 5ನೆಯ ಗಣ ಇವು ಸರ್ವಲಘು ರೀತಿಯದಾಗಿದ್ದರೆ 1ನೆಯ ಲಘುವಿಂದಲೇ ಹೊಸಪದ ಆರಂಭವಾಗಬೇಕು. ಚತುರ್ಮಾತ್ರಾಗಣಗಳ ಕಟ್ಟು ಕೆಡಬಾರದು. ಗಾಥಾದ ಲಕ್ಷಣವೂ ಇದೇ ರೀತಿಯಾಗಿರುತ್ತದೆ. ಆರ್ಯಾ ಮತ್ತು ಗಾಥಾ ಎರಡರಲ್ಲಿಯೂ ಲಕ್ಷಣದ ಚೌಕಟ್ಟನ್ನು ಹೀಗೆಯೇ ಉಳಿಸಿಕೊಂಡು ಮಾತ್ರಾಸಂಖ್ಯೆಯಲ್ಲಿ ಮಾತ್ರ ಅದಲು ಬದಲು ಮಾಡಿಕೊಳ್ಳುವುದರ ಮೂಲಕ, ಅಲ್ಪಸ್ವಲ್ಪ ವ್ಯತ್ಯಾಸವನ್ನು ಮಾಡಿಕೊಳ್ಳುವುದರ ಮೂಲಕ, ಕೆಲವು ಪ್ರಭೇದಗಳನ್ನು ಕಲ್ಪಿಸಿಕೊಂಡಿದೆ. ಆರ್ಯಾದಲ್ಲಿ:- ಗೀತಿ 30, 30; ಉದ್ಗೀತಿ 27, 30; ಉಪಗೀತಿ 27, 27; ಆರ್ಯಾಗೀತಿ-32, 32 ಇತ್ಯಾದಿ. ಹೀಗೆಯೇ ಗಾಥಾದಲ್ಲಿ ಕೂಡ.
ಸಂಸ್ಕೃತದ ಆರ್ಯಾಪ್ರಭೇದಗಳಲ್ಲಿ ಆರ್ಯಾಗೀತಿ ಎಂಬುದೂ ಪ್ರಾಕೃತ ಗಾಥಾ ಪ್ರಭೇದಗಳಲ್ಲಿ ಸ್ಕಂಧಕ ಎಂಬುದೂ ಕನ್ನಡ ತೆಲುಗುಗಳ ಕಂದವನ್ನು ಹತ್ತಿರದಿಂದ ಹೋಲತಕ್ಕವಾಗಿವೆ. ಆದುದರಿಂದ ಅವುಗಳ ಸ್ವರೂಪವನ್ನು ಸ್ವಲ್ಪ ಗಮನಿಸಬೇಕಾಗುತ್ತದೆ. ಸಂಸ್ಕೃತದಲ್ಲಿ ಆರ್ಯಾಗೀತಿ ಎಂದು ಹೇಳಿರುವುದನ್ನೇ ಪ್ರಾಕೃತದಲ್ಲಿ ಸ್ಕಂಧಕ ಎಂದಿರುತ್ತದೆ. ಭರತಪಿಂಗಲಾದ್ಯರು ಆರ್ಯಾಗೀತಿಯ ಲಕ್ಷಣವನ್ನೂ ಸ್ವಯಂಭು ಹೇಮಚಂದ್ರಾದ್ಯರು ಸ್ಕಂಧಕದ ಲಕ್ಷಣವನ್ನೂ ನಿರೂಪಿಸಿದ್ದಾರೆ. ಅವುಗಳ ಲಕ್ಷಣ ಒಂದೇ. ಅದು ಹೀಗೆ: ಎರಡು ಅರ್ಧಗಳು; ಪ್ರತಿಯರ್ಧದಲ್ಲಿಯೂ 8 ಚತುರ್ಮಾತ್ರಾಗಣಗಳಿರುತ್ತವೆ. ಎರಡೂ ಅರ್ಧಗಳ 6ನೆಯ ಗಣಸ್ಥಾನದಲ್ಲಿ ತಪ್ಪದೆ ಮಧ್ಯಗುರುವಿನ ಗಣವೋ (ಜಗಣ) ಸರ್ವಲಘುವಿನ ಗಣವೋ ಬಂದಿರುತ್ತದೆ. (ಸುಲ್ಹಣ ಮೊದಲಾದ ಕೆಲವರು ಆರ್ಯೆಯನ್ನೆ 2 ಮಾತ್ರೆಗಳಿಂದ ಬೆಳೆಸಿದ್ದು ಎಂಬುದಾಗಿ ಹೇಳಿರುವುದುಂಟು. ಆಗ ಮಾತ್ರಾ ಸಂಖ್ಯೆ ಕ್ರಮವಾಗಿ 32, 29 ಆಗುವುದು. ಆದರೆ 32 ಮಾತ್ರೆಗಳ 2 ಸಮಾರ್ಧಗಳಾಗಿ ತಿಳಿಯುವುದೇ ಸಾಮಾನ್ಯ).
ಆರ್ಯಾ ಅಥವಾ ಗಾಥಾಭೇದವಾದ, ಎರಡು ಸಮಾರ್ಧಗಳನ್ನುಳ್ಳ, ಗೀತಿಯ (30,30) ಎರಡೂ ಅರ್ಧಗಳ ಕೊನೆಯ ಗುರುವಿಗೆ ಇನ್ನೊಂದು ಗುರುವನ್ನು ಸೇರಿಸಿ ಒಂದು ಚತುರ್ಮಾತ್ರಾಗಣವನ್ನಾಗಿ ಮಾಡಿಕೊಂಡದ್ದು (32,32) ಆರ್ಯಾಗೀತಿ ಅಥವಾ ಸ್ಕಂಧಕಯೆನಿಸಿದಂತೆ ತೋರುತ್ತದೆ. ಆರ್ಯೆ(ಗಾಥೆಯ) ಗೀತಿಯಾದಾಗ ಆರ್ಯೆಯ (ಗಾಥೆಯ) ಪುರ್ವಾರ್ಧದ ಲಕ್ಷಣ ಗೀತಿಯ ಪುರ್ವಾರ್ಧ ಉತ್ತರಾರ್ಧಗಳಿಗೂ ಅನ್ವಯಿಸಿದಂತೆ, ಗೀತಿ ಆರ್ಯಾಗೀತಿಯಾದಾಗ (ಸ್ಕಂಧಕವಾದಾಗ) ಗೀತಿಯ ಲಕ್ಷಣ ಆರ್ಯಾಗೀತಿಗೂ (ಸ್ಕಂಧಕಕ್ಕೂ) ಅನ್ವಯಿಸಿತೆಂದು ಸಹಜವಾಗಿಯೇ ತಿಳಿಯಬಹುದು. ಮುಖ್ಯವಾಗಿ ಸೂತ್ರಕಾರರೂ ವ್ಯಾಖ್ಯಾನಕಾರರೂ ಆರ್ಯಾಗೀತೆ (ಸ್ಕಂಧಕ) ಪ್ರತಿಯರ್ಧದಲ್ಲಿ 8 ಚತುರ್ಮಾತ್ರಾಗಣಗಳಿಂದ ಕೂಡಿದ್ದು, ಅದರ 6ನೆಯ ಗಣ ಸ್ಥಾನದಲ್ಲೆಲ್ಲ ಮಧ್ಯಗುರುವಿನ ಗಣ (ಜಗಣ) ಅಥವಾ ಸರ್ವ ಲಘುವಿನ ಗಣ ಬರತಕ್ಕದ್ದು ಎಂಬುದನ್ನು ಒತ್ತಿ ಹೇಳಿದ್ದಾರೆ. ಆರ್ಯಾದ ಅಥವಾ ಗಾಥಾದ (ಗೀತಿಯ) 7ನೆಯ ಗಣದ ಲಕ್ಷಣಾಂಶವನ್ನು ಎತ್ತಿರುವಂತೆ ತೋರುವುದಿಲ್ಲ. ಆದರೆ ಎರಡೂ ಅರ್ಧಗಳ 6 ಮತ್ತು 7ನೆಯ ಗಣಗಳು ಸರ್ವ ಲಘುವಿನ ಗಣಗಳಾದಾಗ ಪಾಲಿತವಾಗಬೇಕಾದ ನಿಯಮವನ್ನು ಕೂಡ ಆರ್ಯಾ ಗೀತಿಗೆ (ಸ್ಕಂಧಕಕ್ಕೆ) ಅವರು ಒಪ್ಪಿದ್ದಾರೆಂಬುದು ಗ್ರಹಿಸಬಹುದು.
ಮೊದಲು ಪ್ರಾಯಃ ಸಂಸ್ಕೃತದಲ್ಲಿ ಆರ್ಯಾಪ್ರಭೇದವಾಗಿ ಆರ್ಯಾಗೀತಿ ಕಾಣಿಸಿಕೊಂಡಿರಬೇಕು. ಅದೇ ಅನಂತರದಲ್ಲಿ ಪ್ರಾಕೃತಕ್ಕೆ ಸ್ಕಂಧಕವೆಂಬ ಹೆಸರಿಂದ ಗಾಥಾ ಪ್ರಭೇದಗಳ ಸಾಲಿಗೆ ಸ್ವೀಕೃತವಾಗಿರಬೇಕು. ಆರ್ಯಾಗೀತಿಯ ಲಕ್ಷಣವನ್ನು ಭರತ, ಪಿಂಗಲ ಮೊದಲಾದ ಪ್ರಾಚೀನರು ಹೇಳಿರುವುದು ಈ ಭಾವನೆಗೆ ಅವಕಾಶಕೊಡುತ್ತದೆ. ಆದರೆ ಈ ಪೌರ್ವಾಪರ್ಯವನ್ನು ಹೀಗೆಯೇ ಸರಿ ಎನ್ನುವುದು ಕಷ್ಟ. ಈಗ ಆರ್ಯಾಗೀತಿಗೂ ಸ್ಕಂಧಕಕ್ಕೂ ಒಂದೊಂದು ಉದಾಹರಣೆಯನ್ನು ನೋಡಬಹುದು.
1 ಆರ್ಯಾಗೀತಿಗೆ :
ಅಜಮಜ| ರಮಮರ| ಮೇಕಂ| ಪ್ರತ್ಯ | ಕ್ಚೈತ| -
ನ್ಯಮೀಶ್ವ | ರಂ ಬ್ರ| ಹ್ಮಪರಮ್ ||
ಆತ್ಮಾ | ನಂ ಭಾ| ವಯತೋ| ಭವಮು| ಕ್ತಿಃಸ್ಯಾ |
ದಿತೀಯ | ಮಾರ್ಯಾ| ಗೀತಿಃ || (ಪಿಂಗಲ ಛಂದಶ್ಶಾಸ್ತ್ರ)
2 ಸ್ಕಂಧಕಕ್ಕೆ :
ಚಲಿಅಂ | ಚ ವಾಣ | ರವಲಂ|
ಚಲಿಏ | ತಮ್ಮಿಚ | ಲಕೇಸ | ರಸಡು | ಜ್ಜೋಅಮ್ ||
ಗಹಿಅದಿ| ಸಾಪರಿ|ಣಾಹಂ|
ವಊಹ | ಜಾಲಂ |ವ.ದಿಣಅ | ರಸ್ಸ ಪು |ರನ್ತಮ್ || (ಪ್ರವರಸೇನನ ಸೇತುಬಂಧ)
ಈ ಮೇಲಿನ ವಿವೇಚನೆಯ ಬೆಳಕಿನಲ್ಲಿ ಈಗ ಕಂದಪದ್ಯದ ಸ್ವರೂಪವನ್ನು ಪರಿಶೀಲಿಸುವುದು ಸುಲಭ. ಕನ್ನಡದಲ್ಲಿ ಕಂದದ ಲಕ್ಷಣವನ್ನು ಮೊದಲು ನಾಗವರ್ಮನ ಛಂದೋಂಬುಧಿಯಲ್ಲಿ; (ಪ್ರ.ಶ.ಸು.990) ಅದರ ಚತುರ್ಥಾಧಿಕಾರದಲ್ಲಿ ಕಾಣುತ್ತೇವೆ. ಆರ್ಯಾ ಮತ್ತು ಅದರ ಕೆಲವು ಪ್ರಭೇದಗಳ ಲಕ್ಷಣವನ್ನು ಅಲ್ಲಿಯೇ ಹೇಳಿದ್ದರೂ ಕಂದಕ್ಕೆ ಅವುಗಳೊಡನೆ ಇರುವ ಸಂಬಂಧವನ್ನು ಉಚಿತವಾದ ಕ್ರಮದಲ್ಲಿ ಸ್ಪಷ್ಟವಾಗಿ ತೋರಿಸಿಲ್ಲ. ಆತನು ಕೊಡುವ ಕಂದಪದ್ಯದ ಲಕ್ಷಣ: 4 ಪಾದಗಳು; ಇವುಗಳಲ್ಲಿ ಕ್ರಮವಾಗಿ 3,5,3,5 ಗಣಗಳಿರುತ್ತವೆ. ಹಾಗೂ 12, 20, 12, 20 ಮಾತ್ರೆಗಳು ಬರುತ್ತವೆ (4-5). ಹಿಂದೆ ಆರ್ಯಾದಿಗಳಿಗೆ ಹೇಳಿದ ಸಾಮಾನ್ಯ ಲಕ್ಷಣಗಳನ್ನು ಇಲ್ಲಿಗೆ ಅನ್ವಯಿಸಿಕೊಳ್ಳಬೇಕು ಎಂಬುದು ಆತನ ನಿರೂಪಣೆಯ ಕ್ರಮವನ್ನು ನೋಡಿದರೆ ತಿಳಿಯುತ್ತದೆ. ಕಂದದ ಗಣಗಳು ಕೂಡ ಚತುರ್ಮಾತ್ರೆಗಳಿಂದಾದವು. ಆ ಗಣಗಳು ‰‰-, -‰‰,--, ‰-‰, ‰‰‰‰ ಎಂಬ ಐದು ತೆರನಾದವು. ಈ ಐದು ಗಣಗಳಲ್ಲಿ ‰-‰ ಎಂಬುದು ವಿಷಮಸ್ಥಾನಗಳಲ್ಲಿ ಬರಕೂಡದು. ಇವು ಹಾಗೆ ಅನ್ವಯವಾಗತಕ್ಕ ಲಕ್ಷಣಗಳು. ಇನ್ನು 6ನೆಯ ಗಣಸ್ಥಾನದಲ್ಲಿ ಮಧ್ಯಗುರುವಿನ ಅಥವಾ ಸರ್ವಲಘುವಿನ ರೀತಿಯ ಚತುರ್ಮಾತ್ರಾ ಗಣ ತಪ್ಪದೆ ಬಂದಿರಬೇಕು ಎಂಬುದನ್ನೂ ಸರ್ವಲಘುವಿನ ಗಣವಾಗಿದ್ದ ಪಕ್ಷದಲ್ಲಿ 2ನೆಯ ಲಘುವಿಂದ ಹೊಸಪದ ಆರಂಭವಾಗಿರಬೇಕು ಎಂಬುದನ್ನೂ ವ್ಯಕ್ತವಾಗಿ ಹೇಳದಿದ್ದರೂ ಲಕ್ಷಣಗಳನ್ನು ನೋಡಿ ತಿಳಿದುಕೊಳ್ಳಬೇಕು.
ಕಂದದ ಈ ನಿಯಮಗಳು ಈ ಮೊದಲು ನೋಡಿದ ಆರ್ಯಾಗೀತಿ ಅಥವಾ ಸ್ಕಂಧಕದ ನಿಯಮಗಳಿಗೆ ಅನುಸಾರವಾಗಿಯೇ ಇವೆ. ಕಂದದ ಮೂಲ ಆರ್ಯಾಗೀತಿಯೋ ಸ್ಕಂಧಕವೋ ಆಗಿರಬೇಕೆಂದು ತಿಳಿಯುವುದಕ್ಕೆ ಇದರಿಂದ ಅವಕಾಶವಾಗುತ್ತದೆ. ಪಾದಸಂಖ್ಯೆಯನ್ನು ಕಂದದಲ್ಲಿ ನಾಲ್ಕು ಎಂದು ನಾಗವರ್ಮ ಹೇಳಿರುವುದು ಒಂದು ತೋರಿಕೆಯ ವ್ಯತ್ಯಾಸ. ಆರ್ಯಾಗೀತಿ, ಸ್ಕಂಧಕಗಳು ದ್ವಿಪದಿಗಳಾದ ಮಾತ್ರಾವೃತ್ತಗಳು, ಆದರೆ ಅವುಗಳಲ್ಲಿಯೂ ಆ ವರ್ಗದ ಇತರ ಪ್ರಭೇದಗಳಲ್ಲಿಯೂ ಪ್ರತಿಯರ್ಧದಲ್ಲಿಯೂ 12ನೆಯ ಮಾತ್ರೆಯಾದ ನಂತರ ಯತಿ ಬರುವುದನ್ನು ನಿದರ್ಶನಗಳ ಪರಿಶೀಲನೆಯಿಂದ ಕಾಣುತ್ತೇವೆ ಎನ್ನುವುದರಿಂದಲೂ ಪಥ್ಯಾರ್ಯಾ ಮೊದಲಾದ ಕಡೆ ಅದನ್ನು ವ್ಯಕ್ತವಾಗಿಯೇ ಹೇಳಿರುವುದರಿಂದಲೂ ಪ್ರತಿಯರ್ಧವನ್ನೂ ಎರಡು ಭಾಗಗಳಾಗಿ ಗಣಿಸುವುದು ಸಹಜವೇ ಆಗಿದೆ. ಕನ್ನಡದಲ್ಲಿ ದ್ವಿತೀಯಾಕ್ಷರ ಪ್ರಾಸದ ಬಳಕೆಯಿಂದಾಗಿ ಕಂದ 4 ಸಾಲುಗಳಾಗಿಯೇ ರೂಪುಗೊಂಡಿದೆ.
ಇದನ್ನು ಗಮನಿಸಿ ಕಂದದ ಲಕ್ಷಣವನ್ನು ಹೀಗೆ ಹೇಳಬಹುದು; 4 ಪಾದಗಳು, ಇವುಗಳಲ್ಲಿ 1, 2ನೆಯ ಪಾದಗಳಂತೆಯೇ 3,4ನೆಯ ಪಾದಗಳಿರುತ್ತವೆ. 1,2ನೆಯ ಪಾದಗಳಲ್ಲಿ ಕ್ರಮವಾಗಿ 3,5ರ ಹಾಗೆ ಒಟ್ಟು 8 ಚತುರ್ಮಾತ್ರಾಗಣಗಳು (12+20=32); 3,4ನೆಯ ಪಾದಗಳಲ್ಲಿಯೂ ಹೀಗೆಯೇ (12+20=32). ಚತುರ್ಮಾತ್ರಾ ಗಣಗಳ ಕಟ್ಟು ಕೆಡಬಾರದು. ಪ್ರಥಮಾರ್ಧದ ಹಾಗೂ ದ್ವಿತೀಯಾರ್ಧದ 8ನೆಯ ಗಣಸ್ಥಾನದ ಅಂತ್ಯದಲ್ಲಿ ಗುರು ತಪ್ಪದೆ ಬಂದಿರಬೇಕು; ಈ ಎರಡೂ ಅರ್ಧಗಳ ವಿಷಮ ಸ್ಥಾನಗಳಲ್ಲಿ ಮಧ್ಯ ಗುರುವಿನ ಗಣ (ಜಗಣ) ಬರಬಾರದು. ಆದರೆ ಅವುಗಳ 6ನೆಯ ಗಣಸ್ಥಾನದಲ್ಲಿ ಮಧ್ಯ ಗುರುವಿನ ಗಣ (ಜಗಣ)ವಾಗಲಿ ಸರ್ವ ಲಘುವಿನ ಗಣವಾಗಲಿ ತಪ್ಪದೆ ಬಂದಿರಬೇಕು. ಸರ್ವಲಘುವಿನ ಗಣವಾಗಿದ್ದ ಪಕ್ಷದಲ್ಲಿ, ಹಾಗೆಯೇ ಮಧ್ಯಗುರುವಿನ ಗಣ ಎಂದರೆ ಜಗಣವಾಗಿದ್ದ ಪಕ್ಷದಲ್ಲಿಯೂ ಮೊದಲನೆಯ ಹ್ರಸ್ವದ ಮುಂದೆ ಯತಿಯಿರಬೇಕು. 7ನೆಯ ಗಣ ಸರ್ವಲಘುವಿನ ಗಣವಾಗಿದ್ದಲ್ಲಿ ಮೊದಲನೆಯ ಹ್ರಸ್ವದಿಂದಲೇ ಹೊಸಪದ ಮೊದಲಾಗಬೇಕು. ಕನ್ನಡ ಸಾಹಿತ್ಯದಲ್ಲಿ ಪ್ರಾಚೀನ ಕವಿಗಳು ಬಲುಮಟ್ಟಿಗೆ ಈ ನಿಯಮಕ್ಕೆ ಅನುಗುಣವಾಗಿಯೇ ಕಂದಗಳನ್ನು ರಚಿಸಿದ್ದಾರೆ. ಕನ್ನಡದಲ್ಲಿ ಯತಿ ನಿಯಮ ಐಚ್ಛಿಕವಾದುದು ಎಂದು ತಿಳಿದಿರುವುದರಿಂದ ಯತಿಯನ್ನು ನಿಯುತವಾಗಿ ಪಾಲಿಸುವ ವಿಷಯದಲ್ಲಿ ಅಲ್ಲಲ್ಲಿ ಅಪವಾದಗಳು ಕಾಣಿಸಿಕೊಂಡಿರುವುದುಂಟು. ಹಾಗೆಯೇ ಈಚಿನ ಕಾಲದ ಕವಿಗಳು ಚತುರ್ಮಾತ್ರಾಗಣ ನಿಯಮಕ್ಕೆ ಸರಿಯಾಗಿ ¯ಕ್ಷ್ಯಕೊಡದೆ, 8ನೆಯ ಗಣದ ಕೊನೆಗೆ ಗುರುವನ್ನು ತರದೆ, ಸಾಮಾನ್ಯ ನಿಯಮವನ್ನು ಮೀರಿರುವುದೂ ಉಂಟು. ಆದರೆ ಒಟ್ಟಿನಲ್ಲಿ ಕಂದದಲ್ಲಿ ಗಣನಿಯಮ ಯತಿ ನಿಯಮಗಳ ಪಾಲನೆ ಬಲುಮಟ್ಟಿಗೆ ಸರಿಯಾಗಿಯೇ ಆಗಿದೆಯೆಂಬುದನ್ನು ನಿದರ್ಶನಗಳ ಪರಿಶೀಲನೆಯಿಂದ ತಿಳಿಯಬಹುದು.
ಲಕ್ಷಣಾನ್ವಿತವಾದ ಕಂದಕ್ಕೆ ಉದಾಹರಣೆ :
- ಕಾವೇ | ರಿಯಿಂದ | ಮಾ ಗೋ |
- ದಾವರಿ | ವರಮಿ |ರ್ಪ. ನಾಡ | ದಾ ಕ | ನ್ನಡದೊಳ್
- ಭಾವಿಸಿ | ದ ಜನಪ | ದಂ ವಸು|
- ಧಾವಳ | ಯವಿಲೀ | ನ. ವಿಶದ | ವಿಷಯವಿಶೇಷಂ||
(ಕವಿರಾಜಮಾರ್ಗ 1-36)
ಕಂದಪದ್ಯ ಸಂಸ್ಕೃತದ ಆರ್ಯಾಗೀತಿಯ ಅಥವಾ ಪ್ರಾಕೃತದ ಸ್ಕಂಧಕ ಮೂಲಕವಾಗಿ ಬಂದಿದೆಯೆಂದು ಅವುಗಳ ತುಲನಾತ್ಮಕ ಪರಿಶೀಲನೆಯಿಂದ ಸಿದ್ಧಪಡುವುದು. ಆದರೆ ಅದು ಆರ್ಯಾಗೀತಿಯ ಮೂಲಕವಾಗಿ ಬಂತೇ ಸ್ಕಂಧಕದ ಮೂಲವಾಗಿ ಬಂತೇ ಎಂಬುದನ್ನು ಖಚಿತವಾಗಿ ನಿರ್ಣಯಿಸುವುದು ಕಷ್ಟ. ಅರ್ಯಾ ವರ್ಗವನ್ನು ಪ್ರಾಕೃತದಲ್ಲಿ ಸ್ಕಂಧಕಜಾತಿಯೆಂದೇ ತಿಳಿದಿರುವುದುಂಟು (ಸ್ವಯಂಭೂಚ್ಛಂದಃ). ಕನ್ನಡದಲ್ಲಿಯೂ ನಾಗವರ್ಮ ಹೀಗೆಯೇ ಮಾಡಿದಂತೆ ತೋರುತ್ತದೆ. ವಾಕಾಟಕ ಪ್ರವರಸೇನ IIನ (ಪ್ರ.ಶ.ಸು.410-40) ಸೇತುಬಂಧ ಪುರ್ತಿಯಾಗಿ ಸ್ಕಂಧಕದಲ್ಲಿ ರಚಿತವಾಗಿರುವ ಪ್ರಾಕೃತಕಾವ್ಯ. ಇಲ್ಲಿಯ ಸ್ಕಂಧಕಗಳು ನಿಯಮಬದ್ಧವಾಗಿವೆ. ಕನ್ನಡ ಭಾಷೆಗೆ ಪ್ರಾಕೃತಭಾಷೆ ಸಾಹಿತ್ಯಗಳ ಸಂಪರ್ಕವಾದ ಆರಂಭಕಾಲದಲ್ಲಿ ಪ್ರಾಕೃತಕಾವ್ಯದ ಸ್ಕಂಧಕದ ಛಂದಸ್ಸು ಕಂದವಾಗಿ ಕನ್ನಡಕ್ಕೆ ಪ್ರವೇಶಿಸಿ, ಈ ಭಾಷೆಗೆ ಹೊಂದಿಕೊಂಡಿತೆಂದು ತೋರುತ್ತದೆ. ಕಂದ ಎಂಬ ಹೆಸರು ಕೂಡ ಸ್ಕಂಧಕದ ಪ್ರಾಕೃತ ರೂಪಗಳಲ್ಲಿ ಒಂದರಿಂದ ನಿಷ್ಪನ್ನವಾಗಿರುವಂತೆ ಕಾಣುವುದು (ಖಂಧಕಂ, ಖಂಧಅ, ಖಂಧಯ ಎಂಬವು ಸ್ಕಂಧಕದ ಪ್ರಾಕೃತರೂಪಗಳು; ಖಂಧಅ-ಖಂದ-ಕಂದ ಎಂದು ಆಗಿರುವುದು ಸಾಧ್ಯ) ಈ ರೀತಿ ತಿಳಿಯುವುದಕ್ಕೆ ಅವಕಾಶಕೊಡುತ್ತವೆ.
ಕನ್ನಡದಲ್ಲಿ ಉತ್ತಮ ಕಂದಗಳಿಗೆ ಶಾಸನಗಳಲ್ಲಿಯೂ ಕವಿರಾಜಮಾರ್ಗದಲ್ಲಿಯೂ ಹೇರಳವಾದ ನಿದರ್ಶನಗಳು ಸಿಗುತ್ತವೆ. ಪಂಪ, ರನ್ನ, ಪೊನ್ನ, ಕಾದಂಬರಿಯ ನಾಗವರ್ಮ, ನಾಗಚಂದ್ರ, ನಯಸೇನ ಮೊದಲಾದ ಕವಿಗಳು ಇದನ್ನು ತಮ್ಮ ಕಾವ್ಯಗಳಲ್ಲಿ ವಿಪುಲವಾಗಿ ಬಳಸಿಕೊಂಡಿದ್ದಾರೆ. ವ್ಯಾಕರಣಕಾರರಾದ ನಾಗವರ್ಮ ಮತ್ತು ಕೇಶಿರಾಜರು ಸೂತ್ರಗಳನ್ನು ಶುದ್ಧ ಕಂದಛಂದಸ್ಸಿನಲ್ಲಿ ರಚಿಸಿದ್ದಾರೆ. ಜನ್ನನಂತೂ ತನ್ನ ಯಶೋಧರ ಚರಿತೆಯೆಂಬ ಕಾವ್ಯವನ್ನು ಕಂದದಲ್ಲೇ ನಿರ್ವಹಿಸಿರುವುದು ಗಮನಾರ್ಹವಾದ ಸಂಗತಿ. ಈಚೆಗೆ ಬಸವಪ್ಪ ಶಾಸ್ತ್ರಿಗಳು. ಡಿ.ವಿ.ಜಿ. ಮೊದಲಾದ ಆಧುನಿಕರಲ್ಲೂ ಉತ್ತಮ ಕಂದರಚನೆ ಕಂಡುಬರುತ್ತದೆ. ಈಚೆಗೆ ನವ್ಯ ಕಾವ್ಯ ಸೃಷ್ಟಿಯಾಗತೊಡಗಿದ ಮೇಲೆ ಕಂದ ಸ್ವಲ್ಪ ಹಿಂದೆ ಬಿದ್ದಿದೆಯೆನ್ನಬೇಕು. (ಟಿ.ವಿ.ವಿ.)