ವಿಷಯಕ್ಕೆ ಹೋಗು

ಕಂಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ




ಕಂಕರ್ (ಸುಣ್ಣದ ಕಲ್ಲು) ವಿವಿಧ ಗಾತ್ರದ ಉಂಡೆಗಳ ರೂಪದಲ್ಲಿರುವ ಸುಣ್ಣಶಿಲೆಯ ಒಂದು ಬಗೆ. ಕಂಕರೆ ಎಂದೂ ಕರೆಯುವುದುಂಟು. ಭಾರತದಂಥ ಉಷ್ಣವಲಯ ಪ್ರದೇಶಗಳಲ್ಲಿ ಕೆಲವೆಡೆ ದೊರೆಯುತ್ತದೆ. ಇದು ಕ್ಯಾಲ್ಸಿಯಂ ಫೆಲ್ಡ್‌ಸ್ಪಾರ್ ಮತ್ತು ಇತರ ಸುಣ್ಣದ ಸಿಲಿಕೇಟ್ ಖನಿಜಗಳ ರಾಸಾಯನಿಕ ಬದಲಾವಣೆಯಿಂದಲೂ ಆಮ್ಲಗ್ರಾನೈಟಿನಿಂದ ಹಿಡಿದು ಪ್ರತ್ಯಾಮ್ಲ ಒಡ್ಡುಗಳವರೆಗೆ ಇರುವ ವಿವಿಧ ಶಿಲೆಗಳ ರಾಸಾಯನಿಕಶಿಥಿಲಿಕೆಯಿಂದಲೂ ಉಂಟಾಗಿ ಭೂಮಟ್ಟದಲ್ಲಿಯೂ ನೆಲದ ಮಣ್ಣಿನಲ್ಲಿಯೂ ಉಂಡೆಗಳಂತೆ ಶೇಖರಗೊಳ್ಳುತ್ತದೆ. ಉಂಡೆಗಳ ಗಾತ್ರ 5-8 ಸೆಂಮೀ. ಸುಣ್ಣಶಿಲೆಯಂತೆ ಇದು ಬದ್ಧವಾದ ಶಿಲಾಸ್ತರಗಳಾಗುವುದಿಲ್ಲ.ಭೂಮಿಯೊಳಗಡೆ ಇಂಗಾಲದ ಡೈ ಆಕ್ಸೈಡಿನಿಂದ ಒಡಗೂಡಿದ ಅಂತರ್ಜಲ (ಊ2ಔ + ಅಔ2) ಶಿಲಾಸ್ತರಗಳ ಬಿರುಕುಗಳ ಮೂಲಕ ಹರಿಯುವಾಗ ಅವುಗಳಲ್ಲಿರುವ ಕ್ಯಾಲ್ಸಿಯಂ ಆಕ್ಸೈಡ್ ನೀರಿನಲ್ಲಿರುವ ಇಂಗಾಲಾಮ್ಲದೊಡನೆ ಸೇರಿ ಕ್ಯಾಲ್ಸಿಯಂ ಕಾರ್ಬೊನೇಟ್ (ಅಚಿಅಔ3) ಆಗಿ ಭೂಮಿಯ ಮೇಲ್ಭಾಗದಲ್ಲಿ ಕಣ ರೂಪವಾಗಿಯೂ ಗಂಟುಗಳಂತೆಯೂ ಸಂಗ್ರಹವಾಗುತ್ತದೆ. ಶುದ್ಧವಾದ ಸುಣ್ಣಶಿಲೆಯಲ್ಲಿ 95%-98% ಭಾಗದಷ್ಟು ಕ್ಯಾಲ್ಸಿಯಂ ಕಾರ್ಬೊನೇಟ್ ಇರುತ್ತದೆ. ಗ್ರಾನೈಟ್ ನೈಸ್ ಶಿಲೆಗಳಿಂದ, ಉತ್ಪತ್ತಿಯಾದ ಸುಣ್ಣಶಿಲೆಯ ಸಕ್ಯಾಲ್ಸಿಯಂ ಕಾರ್ಬೊನೇಟ್ ೮೦%-೮೫% ಭಾಗಕ್ಕಿಂತ ಹೆಚ್ಚಾಗಿರುವುದಿಲ್ಲ.

ಕರ್ನಾಟಕ ರಾಜ್ಯದಲ್ಲಿ ಸುಣ್ಣಶಿಲೆ ನಿಕ್ಷೇಪಗಳು ವಿಸ್ತಾರವಾಗಿ ಹರಡಿವೆ. ಬಿಜಾಪುರ ಜಿಲ್ಲೆಯ ಮಲಪ್ರಭಾ ನದಿಯ ಎಡದಂಡೆ, ಧಾರವಾಡ ಜಿಲ್ಲೆಯ ಗದಗ್ ತಾಲ್ಲೂಕು ಮತ್ತು ಹಿರೇಕೆರೂರು ತಾಲ್ಲೂಕಿನ ಅಣಜಿ, ಗುಡ್ಡದ ಮಾದಾಪುರ, ನಾಗವಂದ, ಮೈದೂರ್, ಕಾಮಲಾಪುರ ಮತ್ತು ಚಟ್ಣಹಳ್ಳಿ (ಇಲ್ಲಿನ ನಿಕ್ಷೇಪ ಸು. ೫ಲಕ್ಷ ಟನ್ನುಗಳಷ್ಟು ಆಗಬಹುದು). ಬೆಳಗಾಂವಿ ಜಿಲ್ಲೆಯ ಹುಕ್ಕೇರಿ, ಬೈಲಹೊಂಗಲು ಮತ್ತು ಅಥಣಿ ತಾಲ್ಲೂಕುಗಳು (ಇಲ್ಲಿನ ನಿಕ್ಷೇಪ ಸು. ೩ಲಕ್ಷ ಟನ್ನುಗಳಷ್ಟು ಆಗಬಹುದು) ಇತ್ಯಾದಿ ಸ್ಥಳಗಳು ಇಂಥ ನಿಕ್ಷೇಪಗಳಿರುವ ಪ್ರದೇಶಗಳು. ಬೈಲಹೊಂಗಲ ಮತ್ತು ಅಥಣಿ ನಿಕ್ಷೇಪಗಳು ಅತ್ಯುತ್ಕೃಷ್ಟವಾದವು ಸಾಕಷ್ಟು ಪ್ರಮಾಣದಲ್ಲಿ ಇಲ್ಲಿ ಸುಣ್ಣಶಿಲೆ ದೊರೆಯುತ್ತದೆ. ಚಿಕ್ಕಮಗಳೂರು, ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿಯೂ ಕಂಕರ್ ಸಿಕ್ಕುವುದು. ತುಮಕೂರಿನ ಓಬಳಾಪುರದ ಬಳಿ ಮತ್ತು ಮೈಸೂರು ತಾಲ್ಲೂಕಿನಲ್ಲಿ ಅತಿ ವಿಪುಲವಾಗಿ ದೊರೆಯುವ ಕಂಕರನ್ನು ಅಧಿಕ ಪ್ರಮಾಣದಲ್ಲಿ ತೆಗೆದು ಪರಸ್ಥಳಗಳಿಗೆ ರವಾನಿಸುತ್ತಾರೆ. ಇದರ ಗುಣಮಟ್ಟ ಉತ್ತಮವಾಗಿದೆ. ಇದರಿಂದ ಅನೇಕ ರಾಸಾಯನಿಕ ವಸ್ತುಗಳನ್ನು ಮುಖ್ಯವಾಗಿ ಕ್ಯಾಲ್ಸಿಯಂ ಅಸಿಟೇಟನ್ನು ತಯಾರಿಸಬಹುದು.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಕಂಕರ್&oldid=1081374" ಇಂದ ಪಡೆಯಲ್ಪಟ್ಟಿದೆ