ಓಕಿನಾವ

ವಿಕಿಪೀಡಿಯ ಇಂದ
Jump to navigation Jump to search
ಓಕಿನಾವ

ಓಕಿನಾವ: ಜಪಾನಿನ ದಕ್ಷಿಣಕೊನೆಯಲ್ಲಿರುವ ರ್ಯುಕ್ಯುರೆಟ್ಟೊ ದ್ವೀಪ ಸಮುದಾಯದ ಅತಿ ದೊಡ್ಡ ದ್ವೀಪ. ಹಳೆಯ ಶಿಲೆಗಳ ಮೇಲೆ ಜ್ವಾಲಾಮುಖಿಯ ಭಸ್ಮಸಂಚಯನದಿಂದಾಗಿ ಈ ದ್ವೀಪ ಮೈತಳೆದಿದೆ. ಇದರ ಸುತ್ತಣ ದ್ವೀಪಗಳಲ್ಲಿ ಕೆಲವು ಹವಳದಿಂದಾದವು. ಕೆಲವಕ್ಕೆ ಹವಳದ ಅಂಚುಗಳಿವೆ. ಈ ದ್ವೀಪ ಸಾಮಾನ್ಯವಾಗಿ ಸಮಮಟ್ಟದ ಇಳಿಜಾರುಗಳಿಂದ ಕೂಡಿದೆ. ಆದರೆ ಇದರ ಉತ್ತರ ಭಾಗದಲ್ಲಿ ಏರುಪೇರುಗಳಿವೆ. ದಕ್ಷಿಣಭಾಗ ಮೈದಾನ. ದ್ವೀಪದ ಜನಸಂಖ್ಯೆಯ ಬಹುಪಾಲು ವಾಸಿಸುವುದು ಈ ಪ್ರದೇಶದಲ್ಲೇ. ಉಪೋಷ್ಣವಲಯದ ವಾಯುಗುಣ ಇದೆ. ಮಳೆ ವಿಪರೀತ, ಆಗಾಗ ಚೀನ ಸಮುದ್ರದಲ್ಲಿ ತಲೆದೋರುವ ಚಂಡಮಾರುತಕ್ಕೂ ಈ ದ್ವೀಪ ಬಲಿಯಾಗುವುದುಂಟು, ಬತ್ತ, ಕಪ್ಪುಸಕ್ಕರೆ, ಬಾಳೆಹಣ್ಣು, ಸಿಹಿಗೆಣಸು ಇವು ಇಲ್ಲಿಯ ಪ್ರಮುಖ ಕೃಷಿ ಉತ್ಪನ್ನಗಳು, ಪೈನಾಪಲ್ ಇನ್ನೊಂದು ಮುಖ್ಯ ಉತ್ಪನ್ನ. ಇದನ್ನು ಡಬ್ಬಿಗಳಲ್ಲಿ ತುಂಬಿ ರಫ್ತು ಮಾಡುತ್ತಾರೆ. ಮೀನುಗಾರಿಕೆ ಹಳೆಯ ಪ್ರಮುಖ ಉದ್ಯಮ. ಅರಗಿನ ಹಾಗೂ ಮಣ್ಣಿನ ವಸ್ತುಗಳನ್ನು ಮಾಡುವ ಕೈಗಾರಿಕೆ ಹಿಂದಿನಿಂದಲೂ ಬಂದದ್ದು. ತಿಮಿಂಗಿಲದ ವಸ್ತು ಹಾಗೂ ಗಂಧಕದ ಶುದ್ಧೀಕರಣ ಉದ್ಯಮಗಳು ಈಚೆಗೆ ಬೆಳೆಯುತ್ತಿವೆ.[೧]

ಎರಡನೆಯ ಮಹಾಯುದ್ಧಕ್ಕೆ ಮುಂಚೆ ಈ ದ್ವೀಪಸಮುದಾಯ ಜಪಾನಿನ ಒಂದು ಪ್ರಾಂತ್ಯವಾಗಿತ್ತು. ಎರಡನೆಯ ಮಹಾಯುದ್ಧದ ಸಮಯದಲ್ಲಿ ನಡೆದ ಅಮೆರಿಕ ಸಂಯುಕ್ತ ಸಂಸ್ಥಾನ ಹಾಗೂ ಜಪಾನ್ಗಳ ನಡುವಣ ಉಗ್ರಕದನದ ರುದ್ರಭೂಮಿಯಾಗಿತ್ತು. ಜಪಾನನ್ನು ಗೆಲ್ಲುವ ಯೋಜನೆಯ ಮೊದಲ ಹೆಜ್ಜೆಯಾಗಿ ಅಮೆರಿಕನ್ನರು ಇದನ್ನು ೧೯೪೫ರಲ್ಲಿ ಆಕ್ರಮಿಸಿದರು. ಯುದ್ಧದ ಅನಂತರ ಅಮೆರಿಕದ ಆಡಳಿತಕ್ಕೆ ಇದು ಒಳಪಟ್ಟಿತ್ತು. ಸೈನ್ಯಾಡಳಿತವಿದ್ದರೂ ೨೯ ಸದಸ್ಯರ ವಿಧಾನಸಭೆಯಿದ್ದು, ಕಾರ್ಯಾಂಗದ ಮುಖ್ಯಸ್ಥನನ್ನು ಅದೇ ನೇಮಿಸುತ್ತಿತ್ತು. ೧೯೬೬ರಲ್ಲಿ ಕಾರ್ಯಾಂಗದ ಮುಖ್ಯಸ್ಥನನ್ನೂ ಆ ಸಭೆಯೇ ನೇಮಿಸುವಂತಾಯಿತು. ಈ ರೀತಿ ಸ್ವತಂತ್ರರ್ಯುಕ್ಯು ಸರ್ಕಾರ ಸ್ಥಾಪಿತವಾಯಿತು. ನಾಹಾ ಇದರ ರಾಜಧಾನಿ, ಶುರಿ ಇನ್ನೊಂದು ಪ್ರಮುಖ ಪಟ್ಟಣ. [೨]

ಫೋಟೋ ಗ್ಯಾಲರಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಓಕಿನಾವ&oldid=784985" ಇಂದ ಪಡೆಯಲ್ಪಟ್ಟಿದೆ