ಒನಿಕೊಫೊರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒನಿಕೊಫೊರ: ಸಂಧಿಪದಿಗಳ ವಂಶದ ಒಂದು ವರ್ಗ. ಇದರಲ್ಲಿ ಸು.7 ಜಾತಿಗಳಿದ್ದರೂ ಅವೆಲ್ಲವೂ ಒಂದನ್ನೊಂದು ಬಹಳಮಟ್ಟಿಗೆ ಹೋಲುವುದರಿಂದ ಎಲ್ಲವನ್ನೂ ಒಂದೇ ಜಾತಿಯೆಂದು ಭಾವಿಸುವುದು ಉಂಟು. ಅದೇ ಪೆರಿಪೇಟಸ್ ಜಾತಿ. ಇದರಲ್ಲಿ ಹಲವಾರು ಪ್ರಭೇದಗಳಿವೆ. ಈ ಜಾತಿಗೆ ಸಕ್ರಮ (ಸಿಸ್ಟಮ್ಯಾಟಿಕ್) ಪ್ರಾಣಿವಿಜ್ಞಾನದಲ್ಲಿ ಒಂದು ಮುಖ್ಯಸ್ಥಾನ ಇದೆ.

೧೮೨೬ರಲ್ಲಿ ಇವನ್ನು ಗಿಲ್ಡಿಂಗ್ ಎಂಬಾತ ಮೊದಲಬಾರಿಗೆ ಸಂಗ್ರಹಿಸಿದ. ಇತರ ಸಂಧಿಪದಿಗಳಿಗಿಂತ ಹೆಚ್ಚಾಗಿ ಇವು ಶಂಖವಿಲ್ಲದ ಬಸವನ ಹುಳುವನ್ನು (ಸ್ಲಗ್) ಹೋಲುವುದರಿಂದ ಇವನ್ನು ಮೃದ್ವಂಗಿಗಳಿರಬಹುದೆಂದು ಊಹಿಸಿದ. ಇವುಗಳಲ್ಲಿ ಸಂಧಿಪದಿ ವಂಶದ ಗುಣಲಕ್ಷಣಗಳನ್ನು ಕಂಡುಹಿಡಿದ ಕೀರ್ತಿ ಮೋಸ್ಲೆಗೆ ಸಲ್ಲುತ್ತದೆ.

ಸೀಮಿತ ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತವೆ. 1 ನಿಯೊ ಪೆರಿಪೇಟಿಸ್-ವೆಸ್ಟ್‌ ಇಂಡೀಸ್ ಮತ್ತು ಅಮೆರಿಕ, ಮೆಕ್ಸಿಕೋದಿಂದ ಹಿಡಿದು ರಯೋ ಡಿ ಜನಿರೋ ದವರೆಗೆ ಹರಡಿರುವ 29 ಪ್ರಭೇದಗಳು. 2 ಕಾಂಗೊ ಪೆರಿಪೇಟಸ್-ಪಶ್ಚಿಮ ಆಫ್ರಿಕದ ಕಾಂಗೋದ ಒಂದು ಪ್ರಭೇದ. 3 ಇಯೋ ಪೆರಿಪೇಟಸ್-ಮಲಯದಲ್ಲಿರುವ ಪ್ರಭೇದಗಳು. 4 ಕೇಪೋಪೆರಿಪೇಟಸ್-ನೇಟಾಲಿನಿಂದ ಕೇಪ್ಟೌನಿನವರೆಗಿನ 7 ಪ್ರಭೇದಗಳು. 5 ಮೆಲಾನೋ ಪೆರಿಪೇಟಸ್-ಮೆಲನೇಷ್ಯದಲ್ಲಿನ ಒಂದು ಪ್ರಭೇದ. 6 ಆಸ್ಟ್ರೋ ಪೆರಿಪೇಟಸ್-ಆಸ್ಟ್ರೇಲಿಯ, ನ್ಯೂಜಿ಼ಲೆಂಡ್ ಮತ್ತು ಟಾಸ್ಮೇನಿಯಗಳಲ್ಲಿರುವಂಥದು. 7 ಚಿಲಿಯೋ ಪೆರಿಪೇಟಸ್-ಚಿಲಿಯಲ್ಲಿನ ಒಂದು ಪ್ರಭೇದ. 8 ಟಿಫ್ಲೋಪೆರಿಪೇಟಸ್-ಭಾರತದ ಹಿಮಾಲಯದ ತಪ್ಪಲಲ್ಲಿರುವ ಒಂದು ಪ್ರಭೇದ.

ಇವು ಬಂಡೆ, ಎಲೆ ಅಥವಾ ತೊಗಟೆಗಳ ಕೆಳಗೆ ವಾಸಿಸುತ್ತವೆ. ಇವು ಬೆಳಕನ್ನು ಇಚ್ಚಿಸುವುದಿಲ್ಲವೆಂದು ತೋರುತ್ತದೆ. ಇವು ನಿಶಾಚರಿಗಳು. ಆದ್ದರಿಂದ ಇವು ಆಹಾರಕ್ಕೂ ರಾತ್ರಿಯಲ್ಲೇ ಹೊರಬರುತ್ತವೆ.

ಒನಿಕೊಫೊರ ಒಂದು ವಿಶಿಷ್ಟವರ್ಗ. ಕಾರಣ, ಇದು ವಲಯವಂತಗಳಿಗೂ ಸಂಧಿಪದಿಗಳಿಗೂ ನಡುವೆ ಬೆಸೆಯುವ ಕೊಂಡಿಯಂತಿದೆ. ಸರಳವಾದ ಒಂದು ಜೊತೆ ದವಡೆಗಳು, ಪಸರಿಸಿದ ಶ್ವಾಸದ್ವಾರಗಳು, ಜನನೇಂದ್ರಿಯಗಳ ಸ್ಥಾನ, ಮೃದುವಾದ ಚರ್ಮದ ರಚನೆ ಮತ್ತು ಖಂಡಗಳ ಸಾಮರಸ್ಯ-ಇವು ಒನಿಕೊಫೊರ ವರ್ಗದ ಹಲವು ವಿಶಿಷ್ಟ ಲಕ್ಷಣಗಳು. ಮೇಲ್ಭಾಗದಲ್ಲಿರುವ ಕೊಳವೆಯಂಥ, ಪೆರಿಕಾರ್ಡಿಯಮಿನೊಂದಿಗೆ ಸಂಪರ್ಕವುಳ್ಳ ಹೃದಯವೂ ಜೀರ್ಣಾಂಗಗಳ ಸುತ್ತಲಿರುವ ಹಿಮೋಸೀಲಿಕ್ ದೇಹಾವಕಾಶವೂ ಶ್ವಾಸಾಂಗಗಳಾಗಿ ವರ್ತಿಸುವ ಟ್ರೇಕಿಯಲ್ ನಾಳಗಳೂ ಉಪಾಂಗಗಳಾಗಿ ಮಾರ್ಪಟ್ಟಿರುವ ದವಡೆಗಳೂ ಸಂಧಿಪದಿಗಳ ಗುಣಲಕ್ಷಣಗಳನ್ನು ಪ್ರತಿನಿಧಿಸುತ್ತವೆ. ಸ್ನಾಯುಭರಿತ ಮೈಚರ್ಮ, ಟೊಳ್ಳಾದ ಕಾಲುಗಳು, ಎರಡನೆಯ ಖಂಡದ ಹಿಂದೆ ಇರುವ ಜೊತೆ ಮೂತ್ರಜನಕಾಂಗಗಳು ಮತ್ತು ಜನನೇಂದ್ರಿಯದಲ್ಲಿ ಕಾಣುವ ಶಿಲಕೆಗಳು ಇವು ಒನಿಕೊಫೊರದ ವಲಯವಂತಗಳ ಗುಣವಿಶೇಷಗಳನ್ನು ಸೂಚಿಸುತ್ತವೆ.

ಪೆರಿಪೇಟಸ್ ಸುಂದರವಾದ ಬಣ್ಣಗಳುಳ್ಳ ಪ್ರಾಣಿ. ನೋಡುವುದಕ್ಕೆ ಕಂಬಳಿ ಹುಳುವಿನಂತೆ ಕಾಣುತ್ತದೆ. ಆದರೆ ಇದಕ್ಕೆ ಅನೇಕ ಪಾದ ಹಾಗೂ ಉಪಾಂಗಗಳಿವೆ. ಚರ್ಮದಲ್ಲಿ ಅನೇಕ ಮಡಿಕೆಗಳಿರುವುದರಿಂದ ಇದರ ಖಂಡಗಳು ಎಣಿಕೆಗೆ ಸಿಗುವುದಿಲ್ಲ. ಚರ್ಮ ಮೃದುವಾಗಿ ಮೇಲ್ಭಾಗದಲ್ಲಿ ಸುಂದರವಾದ ಬಣ್ಣಗಳಿವೆ. ಪ್ರಾಣಿಯ ಉದ್ದಕ್ಕೂ ಬೆನ್ನಿನ ಮಧ್ಯದಲ್ಲಿ ಒಂದು ಹೊಳಪಾದ ರೇಖೆ ಇದೆ. ತಲೆಯೇ ದೇಹದ ಮೊದಲನೆಯ ಖಂಡ. ಇದು ದೇಹದ ಉಳಿದ ಖಂಡಗಳಂತೆಯೇ ಮೇಲ್ನೋಟಕ್ಕೆ ಕಂಡರೂ ಮೂರು ಜೊತೆ ಉಪಾಂಗಗಳಿರುವುದರಿಂದ ಇದನ್ನು ಇತರ ಖಂಡಗಳಿಂದ ಸುಲಭವಾಗಿ ಗುರುತಿಸಬಹುದು. ಇದರಲ್ಲಿ ಒಂದು ಜೊತೆ ಸ್ಪರ್ಶಾಂಗಗಳೂ ಸ್ಲೈಂ ಗ್ರಂಥಿಗಳೊಡನೆ ಸಂಪರ್ಕವಿರುವ ಒಂದು ಜೊತೆ ಓರಲ್ ಪ್ಯಾಪಿಲೆಗಳೂ ಎರಡು ದವಡೆಗಳಿರುವ ಅಧೋಮುಖವಾಗಿ ತಿರುಗಿರುವ ಬಾಯೂ ಇವೆ. ಪಕ್ಕಗಳಲ್ಲಿ ಹೊಳೆಯುವ ಹರಳಿನಂಥ ಎರಡು ಕಣ್ಣುಗಳಿವೆ. ದವಡೆಗಳು ಬೇಟೆಯನ್ನು ಅರಿಯುವುದರಲ್ಲಿ ಸಹಾಯ ಮಾಡುತ್ತವೆ. ಗ್ರಹಣಾ ಶಕ್ತಿಯುಳ್ಳ ಸಣ್ಣ ಕೋಡುಗಳಂಥ ಸ್ಪರ್ಶಾಂಗಗಳು ಬೇಟೆಯನ್ನು ಗುರುತಿಸುವ ಅಂಗಗಳು. ಅಲ್ಲದೆ ಈ ಜೀವಿಯ ಚಲನೆಯನ್ನು ಅವು ನಿಯಂತ್ರಿಸುವಂತೆ ತೋರುತ್ತದೆ. ಈ ಅಂಗಗಳು ವಸ್ತುವನ್ನು ಸ್ಪರ್ಶಿಸದೆಯೇ ಅದನ್ನು ಗುರುತಿಸಬಲ್ಲಷ್ಟು ಚುರುಕಾಗಿರುತ್ತವೆ. ಪೆರಿಪೇಟಸ್ಸನ್ನು ಸ್ವಲ್ಪ ಕೆಣಕಿದರೆ ಸಾಕು, ತನ್ನ ಓರಲ್ ಪ್ಯಾಪಿಲೆಗಳ ಮುಖಾಂತರ ಸ್ಲೈಂ ಗ್ರಂಥಿಗಳಲ್ಲಿ ತಯಾರಾದ ಒಂದು ಬಗೆಯ ಅಂಟುದ್ರವವನ್ನು ಸ್ರವಿಸುತ್ತದೆ. ದೇಹದುದ್ದಕ್ಕೂ ಹಲವಾರು ಜೊತೆ ಕಾಲುಗಳಿವೆ. ಕಾಲುಗಳ ಸಂಖ್ಯೆಯಲ್ಲಿ ಒಂದು ಪ್ರಭೇದದಿಂದ ಇನ್ನೊಂದು ಪ್ರಭೇದಕ್ಕೆ ವ್ಯತ್ಯಾಸವಿದೆ. ಪೆರಿಪೇಟಸ್ ಕೆಪೆನ್ಸಿಸಿನಲ್ಲಿ 17 ಜೊತೆ ಕಾಲುಗಳೂ ಇವೆ. ಇನ್ನು ಕೆಲವು ಪ್ರಭೇದಗಳಲ್ಲಿ 29-43 ಜೊತೆಗಳವರೆಗೂ ಇರುವುದುಂಟು. ಕಾಲುಗಳು ದೇಹಕ್ಕೆ ಅಂಟಿರುವ ಭಾಗದಲ್ಲೆ, ಪ್ರತಿಯೊಂದು ಖಂಡದಲ್ಲೂ ಒಂದೊಂದು ಜೊತೆ ವಿಸರ್ಜನಾಂಗಗಳಾದ ನೆಫ್ರೀಡಿಯಾಗಳೂ ಇವೆ. ಕೆಲವು ಪ್ರಭೇದಗಳಲ್ಲಿ ಗಂಡುಗಳಲ್ಲಿ ಕ್ರೂರಲ್ ಗ್ರಂಥಿಗಳೆಂಬ ವಿಶಿಷ್ಟ ಬಗೆಯ ಗ್ರಂಥಿಗಳಿವೆ. ಇವು ಮಾರ್ಪಾಟಾದ ವಿಸರ್ಜನಾಂಗಗಳು. ದೇಹದ ಕೊನೆಯಲ್ಲಿ ಮಲದ್ವಾರವೂ ಕೊನೆಯ ಜೊತೆ ಕಾಲುಗಳ ಮಧ್ಯೆ ಜನನೇಂದ್ರಿಯವೂ ಇವೆ.

ಪೆರಿಪೇಟಸ್ ಮಾಂಸಾಹಾರಿ. ಕೀಟಗಳು, ಗೆದ್ದಲು ಹುಳುಗಳು ಇದರ ಆಹಾರ. ಇದರ ಬೇಟೆಯ ಕ್ರಮ ವಿಚಿತ್ರವಾಗಿದೆ. ಬಾಯಿಯಿಂದ ಅಂಟುದ್ರವ ಹೊರಬರುತ್ತದಷ್ಟೆ. ಹೀಗೆ ಹೊರಬಂದ ದ್ರವ ಕ್ಷಣಮಾತ್ರದಲ್ಲಿ ದಾರದ ಎಳೆಯಂತಾಗುತ್ತದೆ. ಇಂಥ ಎಳೆಗಳ ಜಾಲವೊಂದು ಏರ್ಪಟ್ಟು ಬೇಟೆ ಈ ಜಾಲದಲ್ಲಿ ಸೆರೆಯಾಗುತ್ತದೆ.

ದೇಹದುದ್ದಕ್ಕೂ ಹೀಮೋಸೀಲ್ ಎಂಬ ದೇಹಾವಕಾಶವಿದೆ. ಅದು ಸ್ನಾಯುಗಳಿಂದ ಮಧ್ಯದಲ್ಲಿ ಒಂದು ಅಕ್ಕಪಕ್ಕದಲ್ಲಿ ಎರಡು ಹೀಗೆ 3 ಕೋಣೆಗಳಾಗಿ ವಿಭಾಗವಾಗಿದೆ. ಮಧ್ಯದ ಕೋಣೆಯಲ್ಲಿ ಜೀರ್ಣಾಂಗವೂ ಜನನಾಂಗಗಳೂ ಸ್ಲೈಂ ಗ್ರಂಥಿಗಳೂ ಇವೆ. ಪಾಶರ್ವ್‌ದಲ್ಲಿನ

ಕೋಣೆಗಳಲ್ಲಿ ನರವ್ಯೂಹವೂ ನೆಫ್ರೀಡಿಯಾಗಳೂ ಇವೆ. ಜೀರ್ಣಾಂಗವು ಬಾಯಿಯಿಂದ ಮಲದ್ವಾರದವರೆಗೂ ಒಂದು ಸರಳ ಕೊಳವೆಯಂತಿದ್ದರೂ ಬಾಯಂಗಳ, ಫ್ಯಾರಿಂಕ್ಸ್‌, ಜಠರ ಮತ್ತು ಕರುಳುಗಳೆಂದು ವಿಭಾಗಿಸಬಹುದಾಗಿದೆ. ಬಾಯಂಗಳದಲ್ಲಿ ಒಂದು ಜೊತೆ ಲಾಲಾ ಗ್ರಂಥಗಳಿವೆ. ರಕ್ತಚಲನಾಂಗದ ರಚನೆ ಸಂಧಿಪದಿಗಳಲ್ಲಿರುವಂತೆಯೇ ಇದೆ. ಕೊಳವೆಯಂತಿರುವ ಹೃದಯವನ್ನು ಪೆರಿಕಾರ್ಡಿಯಮ್ ಆವರಿಸಿಕೊಂಡಿದೆ. ಖಚಿತವಾದ ರಕ್ತನಾಳಗಳಿಲ್ಲ. ಒಂದೊಂದು ಖಂಡದಲ್ಲೂ ಎರಡೆರಡು ರಂಧ್ರಗಳಿರುವ ಹೃದಯವೇ ರಕ್ತಪರಿಚಲನೆಯ ಏಕೈಕ ನಿರ್ದಿಷ್ಟ ಅವಕಾಶವಾಗಿದೆ.

ಇತರ ಸಂಧಿಪದಿಗಳಲ್ಲಿರುವಂತೆ ಪೆರಿಪೇಟಸ್ಸಿನಲ್ಲೂ ಶ್ವಾಸನಾಳಗಳು ಉಸಿರಾಡುವ ಅಂಗಗಳಾಗಿದ್ದರೂ ಅವುಗಳ ರಚನೆಯಲ್ಲಿ ಕೆಲವು ವೈಚಿತ್ರ್ಯಗಳು ಕಂಡುಬರುತ್ತವೆ. ಚರ್ಮದ ಮೇಲೆ ಇರುವ ಕೆಲವು ಕುಳಿಗಳಿಂದ ಗುಂಪಾಗಿ ಶ್ವಾಸನಾಳಗಳು ಹೊರಟು ಒಳಕ್ಕೆ ಸಾಗಿ ವಿವಿಧ ಅಂಗಗಳಿಗೆ ಸಂಬಂಧವನ್ನು ಕಲ್ಪಿಸುತ್ತವೆ. ಕುಳಿಗಳ ಮಧ್ಯೆ ಒಂದೊಂದು ಶ್ವಾಸದ್ವಾರವಿದ್ದು ಅದರ ಮುಖಾಂತರ ಉಸಿರಾಟ ಸಾಗುತ್ತದೆ. ಪೆರಿಪೇಟಸ್ಸಿನ ಮಿದುಳು ಬಲು ಸರಳವಾಗಿದೆ. ಕೇವಲ ಅನ್ನನಾಳದ ಮೇಲಿನ ಎರಡು ನರಗ್ರಂಥಿಗಳೇ ಈ ಮಿದುಳು. ಇದರಿಂದ ಒಂದು ಜೊತೆ ಉದರ ಭಾಗದ ನರಹುರಿಗಳು ಹೊರಡುತ್ತವೆ. ಇವು ದೇಹದುದ್ದಕ್ಕೂ ಹರಡಿದ್ದು ಹೀಮೋಸೀಲಿಕ್ ದೇಹಾವಕಾಶದ ಪಾರ್ಶ್ವ ಕೋಣೆಗಳಲ್ಲಿ ಇರುತ್ತವೆ. ಮಿದುಳಿನಿಂದ ಚರ್ಮಕ್ಕೂ ಕಣ್ಣುಗಳಿಗೂ ಮತ್ತು ನರಹುರಿಗಳಿಂದ ದೇಹದ ಇತರ ಭಾಗಗಳಿಗೂ ನರಗಳು ಹೊರಡುತ್ತವೆ. ಪೆರಿಪೇಟಸ್ಸಿನಲ್ಲಿ ಲಿಂಗಭೇದವಿದೆ. ಗಂಡಿನಲ್ಲಿ ಒಂದು ಜೊತೆ ಕೊಳೆವೆಯಂತಿರುವ ವೃಷಣಗಳಿವೆ. ಅವುಗಳಿಂದ ಹೊರಡುವ ಎರಡು ನಾಳಗಳು ಕೊಂಚ ದೂರ ದೇಹಾವಕಾಶದಲ್ಲೇ ಸಾಗಿ ಒಂದುಗೂಡಿ ಕೊನೆಯ ಜೊತೆ ಕಾಲುಗಳ ಮಧ್ಯೆ ಇರುವ ಜನನೇಂದ್ರಿಯದ ಮೂಲಕ ಹೊರಕ್ಕೆ ತೆರೆಯುತ್ತವೆ. ಹೆಣ್ಣುಹುಳುವಿನಲ್ಲಿ ಒಂದು ಜೊತೆ ಅಂಡಾಶಯಗಳಿವೆ. ಅವೂ ಕೂಡ ಕೊಳವೆಯಂತಿದ್ದು ಎರಡು ಗರ್ಭಾಶಯಗಳನ್ನು ಹೊಂದಿವೆ. ಗರ್ಭಾಶಯಗಳೆರಡೂ ಒಂದುಗೂಡಿ ಒಂದೇ ಕೊಳವೆಯಾಗಿ ಕೊನೆಯ ಜೊತೆ ಕಾಲುಗಳ ಮಧ್ಯದಲ್ಲಿನ ಜನನೇಂದ್ರಿಯದ ಮುಖಾಂತರ ಹೊರದೆರೆಯುತ್ತವೆ. ಗರ್ಭಾಂಕುರತೆ ದೇಹದ ಒಳಗೇ ನಡೆಯುವುದೆಂದು ತಿಳಿದಿದ್ದರೂ ವೀರ್ಯಾಣುಗಳು ಅಂಡಾಶಯವನ್ನು ಹೇಗೆ ತಲಪುತ್ತವೆ ಎಂಬುದೇ ತಿಳಿದುಬಂದಿಲ್ಲ. ಆಸ್ಟ್ರೇಲಿಯದಲ್ಲಿನ ಕೆಲವು ಪ್ರಭೇದಗಳು ಮೊಟ್ಟೆಗಳ ಮೂಲಕ ಮರಿ ಮಾಡಿದರೂ ಎಲ್ಲವೂ ನೇರವಾಗಿ ಮರಿಗಳಿಗೇ ಜನ್ಮವೀಯುತ್ತವೆ.

ಹೀಗೆ ಸಂಧಿಪದಿಗಳ ಮತ್ತು ವಲಯವಂತಗಳ ಹಲವಾರು ಗುಣಗಳನ್ನು ಹೊಂದಿರುವ ಪೆರಿಪೇಟಸ್ ತನ್ನ ದೇಹದ ಹೊರರಚನೆ ಹಾಗೂ ಒಳರಚನೆಗಳಲ್ಲಿ ಅನೇಕ ವೈಶಿಷ್ಟ್ಯಗಳನ್ನು ತೋರಿಸುತ್ತದೆ.

ವೆಲ್ವೆಟ್ಟಿನಂತೆ ಮೃದುವಾದ ಚರ್ಮ, ರಂಗುರಂಗಿನ ಮೇಲ್ಮೈ, ಎರಡು ರತ್ನಗಳನ್ನು ತಲೆಯ ಎರಡು ಕಡೆಯಲ್ಲೂ ನಿಸರ್ಗವೇ ಹುದುಗಿಸಿಟ್ಟಂತೆ ಕಾಣುವ ಕಣ್ಣುಗಳು-ಇವು ಈ ಪ್ರಾಣಿಯನ್ನು ಸಾಟಿಯಿಲ್ಲದ ಸೌಂದರ್ಯದ ಖನಿಯಂತೆ ಮಾಡಿವೆ ಎಂದು ಪ್ರೊ, ಸೆಜ್ವಿಕ್ ಇದನ್ನು ಮುಕ್ತಕಂಠದಿಂದ ಹೊಗಳಿದ್ದಾನೆ. (ಎಂ.ಎಸ್.ಎಚ್.)