ಐಸಾಕ್ ಅಸಿಮೋವ್
ಐಸಾಕ್ ಅಸಿಮೋವ್ ಆಂಗ್ಲ ಭಾಷೆಯ ಹೆಸರಾಂತ ಸಾಹಿತಿ. ಇವರನ್ನು ಆರ್ಥರ್ ಸಿ ಕ್ಲಾರ್ಕ್ ಮತ್ತು ರಾಬರ್ಟ್ ಎ ಹೈಲೈನ್ ರವರೊಡನೆ ವೈಜ್ಞಾನಿಕ ಕಾದಂಬರಿ ಕ್ಷೇತ್ರದ ಮಹಾರಥಿಗಳೆಂದು (ಗ್ರ್ಯಾಂಡ್ ಮಾಸ್ಟರ್) ಪರಿಗಣಿಸಲಾಗಿದೆ. ಸುಮಾರು ೫೦೦ ಪುಸ್ತಕಗಳು ಮತ್ತು ೯,೦೦೦ ಪತ್ರ ಮತ್ತು ಅಂಚೆ ಕಾರ್ಡ್ ಗಳನ್ನೊಳಗೊಂಡ ಅವರ ಲೇಖನ ವ್ಯವಸಾಯ ಸುಸಮೃದ್ಧ - ಈ ಉತ್ಪತ್ತಿಯ ವ್ಯಾಪ್ತಿಯು ವೈಜ್ಞಾನಿಕ ಕಾದಂಬರಿಗಳು, ಜನಪ್ರಿಯ ವಿಜ್ಞಾನ, ಪಠ್ಯಪುಸ್ತಕಗಳು, ಸಾಹಿತ್ಯ ವಿಮರ್ಶೆಗಳೇ ಮೊದಲಾದ ವೈವಿಧ್ಯಮಯ ವಿಷಯಗಳನ್ನೊಳಗೊಂಡಿದ್ದಿತು. ಅವರು ಅಮೆರಿಕದ ಬಾಸ್ಟನ್ ವಿಶ್ವವಿದ್ಯಾಲಯದಲ್ಲಿ ಜೈವರಾಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿರುತ್ತಾರೆ. ಲಘುಗ್ರಹ (ಆಸ್ಟರಾಯ್ಡ್) ೫೦೨೦ ಅಸಿಮೋವ್ ಅನ್ನು, ಅಸಿಮೋವ್ ಸೈನ್ಸ್ ಫಿಕ್ಷನ್ ಎಂಬ ನಿಯತಕಾಲಿಕೆಯನ್ನು, ನ್ಯೂಯಾರ್ಕಿನ ಬ್ರುಕ್ಲಿನ್ ನಲ್ಲಿನ ಒಂದು ಪ್ರಾಥಮಿಕ ಶಾಲೆಯನ್ನು, ಅಸಿಮೋವ್ ಸಾಹಿತ್ಯ ಪುರಸ್ಕಾರಗಳನ್ನು ಅವರ ಗೌರವಸ್ಮೃತಿಯಲ್ಲಿ ಹೆಸರಿಸಲಾಗಿದೆ.
ಜೀವನ
[ಬದಲಾಯಿಸಿ]ಅಸಿಮೋವ್ ರವರು ಹಿಂದಿನ ಬೆಲರೂಸಿಯನ್ ಸೋವಿಯತ್ ಸಮಾಜವಾದಿ ಒಕ್ಕೂಟದಲ್ಲಿ ೧೯೧೯ ಮತ್ತು ೧೯೨೦ರಲ್ಲಿ (ನಿಖರ ದಿನಾಂಕವು ತಿಳಿದು ಬಂದಿಲ್ಲ) ಜೂಡಾ ಮತ್ತು ಆನ ಬರ್ಮನ್ ಎಂಬ ಯಹೂದ್ಯ ದಂಪತಿಗಳಿಗೆ ಜನಿಸಿದರು. ಅವರು ಮೂರು ವರ್ಷದವರಾಗಿದ್ದಾಗ ಅವರ ತಂದೆತಾಯಿ ಅಮೆರಿಕಕ್ಕೆ ವಲಸೆ ಬಂದರು ಮತ್ತು ನ್ಯೂಯಾರ್ಕ್ ನಗರದ ಬ್ರುಕ್ಲಿನ್ ಎಂಬ ಪ್ರದೇಶದಲ್ಲಿ ವಾಸಮಾಡಿದರು.
ವಾಙ್ಮಯ
[ಬದಲಾಯಿಸಿ]ಅಸಿಮೋವ್ ರವರ ಲೇಖನ ಶೈಲಿ ಸರಳ ಮತ್ತು ಜಾಟಿಲ್ಯರಹಿತವಾದುದು. ಅವರು ತಮ್ಮ ವೈಜ್ಞಾನಿಕ ಕಾದಂಬರಿಗಳಲ್ಲಿ ಅನೇಕ ಕಾಲ್ಪನಿಕ ವೈಜ್ಞಾನಿಕ ನಿಯಮಗಳು ಅಥವಾ ಪ್ರಮೇಯಗಳನ್ನು ಪ್ರಸ್ತಾಪಿಸಿರುವರು - ಇವುಗಳಲ್ಲಿ ಪ್ರಮುಖವಾದ ಕೆಲವುಗಳೆಂದರೆ - ಯಂತ್ರಶಾಸ್ತ್ರದ(ರೋಬಾಟಿಕ್ಸ್) ಮೂರು ನಿಯಮಗಳು, ಪಾಸಿಟ್ರಾನ್, ಮಾನಸಿಕ-ಇತಿಹಾಸಶಾಸ್ತ್ರ (ಸೈಕೋಹಿಸ್ಟರಿ). ಸ್ವತಃ ಅಸಿಮೋವ್ ರವರೇ ಯಂತ್ರಶಾಸ್ತ್ರದ ಮೂರು ನಿಯಮಗಳು ಮತ್ತು ಪ್ರತಿಷ್ಠಾನ (ಫೌಂಡೇಷನ್) ಕಾದಂಬರಿಗಳನ್ನು ತಮ್ಮ ಗಣನೀಯ ಕೊಡುಗೆಗಳೆಂದು ಪರಿಗಣಿಸುತ್ತಾರೆ. ವೈಜ್ಞಾನಿಕ ಕಾಲ್ಪನಿಕ ಸಾಹಿತ್ಯಕ್ಕೆ ಮೀಸಲಾದ ಹ್ಯೂಗೋ ಮತ್ತು ನೆಬ್ಯುಲ ಪುರಸ್ಕಾರಗಳನ್ನು ಹಲವುಬಾರಿ ಪಡೆದುಕೊಳ್ಳುವುದಲ್ಲದೆ, ನೆಬ್ಯುಲ ಗ್ರ್ಯಾಂಡ್ ಮಾಸ್ಟರ್ ಪುರಸ್ಕಾರವನ್ನು ಜೀವಮಾನ ಸಾಧನೆಗಳಿಗಾಗಿ ಪಡೆದುಕೊಂಡರು. ಅವರ ಕೆಲವು ಪುಸ್ತಕಗಳನ್ನು ಕೆಳಗೆ ಪಟ್ಟಿಮಾಡಲಾಗಿರುವುದು:
- ಪ್ರತಿಷ್ಠಾನ ಸರಣಿ ಕಾದಂಬರಿಗಳು - ಪ್ರತಿಷ್ಠಾನಕ್ಕೆ ಪೂರ್ವರಂಗ, ಪ್ರತಿಷ್ಠಾನ, ದ್ವಿತೀಯ ಪ್ರತಿಷ್ಠಾನ, ಪ್ರತಿಷ್ಠಾನ ಮತ್ತು ಸಾಮ್ರಾಜ್ಯ, ಪ್ರತಿಷ್ಠಾನ ಮತ್ತು ಪೃಥ್ವಿ, ಪ್ರತಿಷ್ಠಾನದ ಅಂಚು (ಹ್ಯೂಗೋ ಪುರಸ್ಕೃತ), ಮುಂದೊಯ್ಯಿ ಪ್ರತಿಷ್ಠಾನವನು
- ರೋಬಾಟ್ ಸರಣಿ ಕಾದಂಬರಿಗಳು - ಉಕ್ಕಿನ ಗುಹೆಗಳು, ನಗ್ನ ಸೂರ್ಯ, ಪ್ರಾತಃಕಾಲಿಕ ರೋಬಾಟ್ ಗಳು, ರೋಬಾಟ್ ಗಳು ಮತ್ತು ಸಾಮ್ರಾಜ್ಯ
- ತಾವೇ ಸ್ವಯಂ ದೇವತೆಗಳು (ಹ್ಯೂಗೋ ಮತ್ತು ನೆಬ್ಯುಲ ಪುರಸ್ಕೃತ ಕಾದಂಬರಿ)
- ಇಮ್ಮಡಿ ಶತಾಯುಷ್ಕ (ಹ್ಯೂಗೋ ಮತ್ತು ನೆಬ್ಯುಲ ಪುರಸ್ಕೃತ ಚಿಕ್ಕ ಕಾದಂಬರಿ)
- ಅಸಿಮೋವ್ ರವರ ಶೇಕ್ಸ್ ಪಿಯರ್ ಕೃತಿ ಮಾರ್ಗದರ್ಶಿ
- ಅಸಿಮೋವ್ ರವರ ಬೈಬಲ್ ಕೃತಿ ಮಾರ್ಗದರ್ಶಿ