ಐತಿಹಾಸಿಕ ನಾಟಕ

ವಿಕಿಪೀಡಿಯ ಇಂದ
Jump to navigation Jump to search

ಐತಿಹಾಸಿಕ ನಾಟಕ: ಇತಿಹಾಸದ ವಸ್ತುವನ್ನೇ ಬಳಸಿಕೊಂಡು ಕಟ್ಟಿದ ನಾಟಕ. ಚರಿತ್ರೆಯಲ್ಲಿ ಆಗಿಹೋದ ಗತಕಾಲದ ವ್ಯಕ್ತಿಗಳು ಇತಿಹಾಸಕಾರನ, ಜೀವನಚರಿತ್ರೆ ಬರೆಯುವವನ, ಕಲ್ಪನೆಯನ್ನು ಹೇಗೆ ಕೆರಳಿಸಿದವೋ ಹಾಗೆ ಗ್ರೀಕರ ಕಾಲದಿಂದಲೂ ನಾಟಕಕಾರನ ಪ್ರತಿಭೆಯನ್ನೂ ಸೆಳೆದಿವೆ. ಪ್ರಾಚೀನ ಗ್ರೀಕ್ ನಾಟಕಕಾರರಲ್ಲಿ ಪ್ರಸಿದ್ಧರಾದ ಈಸ್ಕಿಲಸ್, ಯೂರಿಪಿಡೀಸ್ ಮತ್ತು ಸೊಫಕ್ಲೀಸರು ಗ್ರೀಸಿನ ಇತಿಹಾಸ ಮತ್ತು ಐತಿಹ್ಯಗಳಿಂದ ವಸ್ತುವನ್ನಾಯ್ದುಕೊಂಡು ಅದ್ಭುತವಾದ ನಾಟಕಗಳನ್ನು ರಚಿಸಿದ್ದಾರೆ. ಇತಿಹಾಸವೆಂದರೆ ಈಗಿನ ಅರ್ಥದಂತೆ ಚರಿತ್ರೆಯ ನಾಟಕಗಳನ್ನು ರಚಿಸಿದ್ದಾರೆ. ಇತಿಹಾಸವೆಂದರೆ ಈಗಿನ ಅರ್ಥದಂತೆ ಚರಿತ್ರೆಯೇ ಎಂಬ ಭಾವನೆ ಪ್ರಬಲವಾದಂತೆಲ್ಲ ಚಾರಿತ್ರಿಕ ಅಥವಾ ಐತಿಹಾಸಿಕ ನಾಟಕದ ಕಲ್ಪನೆ ಖಚಿತವಾಗತೊಡಗಿತು. ನಾಟಕಕಾರನಿಗಿಂತ ಕಾದಂಬರಿಕಾರನಿಗೆ ಹೆಚ್ಚು ಸ್ವಾತಂತ್ರ್ಯವಿದೆಯೆಂದು ಗಾಲ್ಸ್‌ವರ್ದಿ ಹೇಳಿದ ಮಾತು ಐತಿಹಾಸಿಕ ನಾಟಕ ಬರೆಯುವವನಿಗೆ ಅಷ್ಟಾಗಿ ಅನ್ವಯಿಸುವುದಿಲ್ಲ. ಐತಿಹಾಸಿಕ ನಾಟಕದಲ್ಲಿ ಬರುವ ವಾಸ್ತವಿಕ ಜೀವನದ ವ್ಯಕ್ತಿಗಳು ಪ್ರಧಾನ ಪಾತ್ರವಹಿಸಿ ನಾಟಕಕ್ಕೆ ಆವಶ್ಯಕವಾದ ರೂಪವನ್ನು ನೀಡುತ್ತಾರೆ. ಅನೇಕ ಐತಿಹಾಸಿಕ ನಾಟಕಗಳನ್ನು ನಾಟಕೀಯ ಜೀವನಚರಿತ್ರೆ ಅಥವಾ ಚರಿತ್ರೆಯ ತುಣುಕುಗಳೆಂದು ಕರೆಯಬಹುದು. ಉದಾಹರಣೆಗೆ, ಮಾರ್ಲೊ ಬರೆದ ಟ್ಯಾಂಬರ್ಲೇನ್, ಷೇಕ್ಸ್‌ಪಿಯರನ ಐತಿಹಾಸಿಕ ನಾಟಕಗಳು, ಬರ್ನಾರ್ಡ್ ಷಾನ ಸೇಂಟ್ ಜೋನ್, ಡೊನಾಲ್ಡ್‌ ಕಾರ್ಸ್ವೆಲ್ನ ಚಿಕ್ಕದಾದರೂ ಗಮನಾರ್ಹ ಕೃತಿ ಕೌಂಟ್ ಆಲ್ಬೆನಿ. ಐತಿಹಾಸಿಕ ನಾಟಕದ ತಂತ್ರ ಕಾದಂಬರಿಕಾರನ ತಂತ್ರದಿಂದ ಬೇರೆಯಾದದ್ದು. ಗತಕಾಲದ ಘಟನೆಗಳಲ್ಲಿ ಸುಲಭವಾಗಿ ಎದ್ದು ತೋರುವ ನಾಟಕೀಯ ಅಂಶವನ್ನು ನಾಟಕಕಾರ ನೇರವಾಗಿ ತನ್ನ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತ್ತಾನೆ. ಚರಿತ್ರೆಯಲ್ಲಿ ಬಾಳಿಬದುಕಿದ ಮಾನವ ವ್ಯಕ್ತಿಗಳ ಸ್ವಭಾವ, ಕ್ರಿಯೆಗಳು ಯಾವ ವಾಸ್ತವಿಕ ಘಟನೆಗಳನ್ನು ಸೃಷ್ಟಿಸಿದವೆನ್ನುವುದನ್ನು ಗುರುತಿಸುವುದು ನಾಟಕಕಾರನ ಉದ್ದೇಶ. ಮಧ್ಯಯುಗದ ಉಜ್ಜ್ವಲ ಪ್ರದರ್ಶನಗಳಿಂದ (ಪೇಜೆಂಟ್ರಿ) ವಿಕಾಸವಾದ ನಾಟಕ ಮಾನವಸಹಜ ಭಾವೋದ್ರೇಕವನ್ನೂ ಮೈಗೂಡಿಸಿಕೊಂಡಂತೆ, ಇತಿಹಾಸಕಾರನ ‘ಕ್ರಾನಿಕಲ್’ ನಿರೂಪಣೆಯಲ್ಲಿನ ರಾಗವೈವಿಧ್ಯ, ಉಜ್ಜ್ವಲ ಚಿತ್ರಣದೊಂದಿಗೆ ಬೆರೆತಾಗ, ಈ ವರ್ಣರಂಜಿತ ಐತಿಹಾಸಿಕ ವ್ಯಕ್ತಿಗಳು ನಾಟಕಕಾರನ ವಿಭಾವನೆಯನ್ನು ಪ್ರಬಲವಾಗಿ ಸೆಳೆದುವು. ಈ ವೇಳೆಗೆ ನಿಚ್ಚಳವಾದ ರೂಪ ಪಡೆದಿದ್ದ ನಾಟಕಪ್ರಕಾರ ಚರಿತ್ರೆಯ ಈ ಎಲ್ಲ ನಾಟಕೀಯ ಅಂಶಗಳನ್ನೂ ಅಳವಡಿಸಿಕೊಂಡಿತು. ಮಿಂಚಿನಂತೆ ಸುಳಿಯುವ ದೃಶ್ಯಾವಳಿಗಳ ಮೂಲಕ ಕಥೆಯನ್ನು ನಿರೂಪಿಸುವ ಹಿತಮಿತವಾದ ತಂತ್ರ ಕಥನಕ್ಕೊಂದು ಸಾಂಗತ್ಯವನ್ನು ತಂದುಕೊಟ್ಟಿತು. ಹೀಗೆ ವಿಕಾಸವಾದ, ಮಧ್ಯಯುಗದ ‘ಕ್ರಾನಿಕಲ್’ ನಾಟಕಗಳಿಂದ ಹೀರಿಕೊಂಡ ಅಂಶಗಳನ್ನು ಷೇಕ್ಸ್‌ಪಿಯರ್ ತನ್ನ ಕಲ್ಪನೆ ಹಾಗೂ ಸಮಾಜಪ್ರಜ್ಞೆಯ ಮೂಸೆಯಲ್ಲಿಟ್ಟು ಕರಗಿಸಿ ರಮ್ಯ ಐತಿಹಾಸಿಕ ನಾಟಕಗಳನ್ನು ರಚಿಸಿದ. ಮೂಲದ ‘ಕ್ರಾನಿಕಲ್’ ನಾಟಕಗಳಲ್ಲಿಲ್ಲದ ರಚನಾಕೌಶಲ, ಪಾತ್ರವಿನ್ಯಾಸ, ಇತಿಹಾಸಪ್ರಜ್ಞೆ ಇವನ್ನು ಷೇಕ್ಸ್‌ಪಿಯರ್ ಸಾಧಿಸಿದ. ಐತಿಹಾಸಿಕ ನಾಟಕ ಬರೆಯುವವರಿಗೆ ಅವನು ಒಳ್ಳೆಯ ಮಾರ್ಗದರ್ಶಕನಾಗಿದ್ದಾನೆ.

ಇತಿಹಾಸದ ವಾಸ್ತವಾಂಶಗಳು ನಾಟಕಕಲೆಯ ಕಲ್ಪನೆಯೊಡನೆ ಯಾವ ಪ್ರಮಾಣದಲ್ಲಿ ಬೆರೆಯಬೇಕೆನ್ನುವುದು ನಾಟಕಕಾರನ ಪ್ರತಿಭೆಯನ್ನೇ ಅನುಸರಿಸುತ್ತದೆ. ಇತಿಹಾಸದ ವ್ಯಕ್ತಿಗಳನ್ನು ಸನ್ನಿವೇಶ ಘಟನೆಗಳನ್ನು ಸಮಕಾಲೀನಪ್ರಜ್ಞೆಯ ಮೂಲಕ ವೀಕ್ಷಿಸಿ, ಭೂತ-ವರ್ತಮಾನ ಕಾಲಗಳಿಗೆ ಸೇತುವೆಯಾಗಿ ನಿರ್ಮಿಸುವ ಕಾರ್ಯವನ್ನು ಈಚಿನ ಹಲವು ಪ್ರತಿಭಾವಂತ ನಾಟಕಕಾರರು ಸೊಗಸಾಗಿ ನೆರವೇರಿಸಿದ್ದಾರೆ. ಆಸ್ಬಾರ್ನ್ ಬರೆದ ಮಾರ್ಟಿನ್ ಲೂಥರ್, ಬ್ರೆಕ್ಟ್‌ನ ಗೆಲಿಲಿಯೊ, ಬಹಳ ಹಿಂದೆಯೇ ಆಧುನಿಕ ಕಾವ್ಯನಾಟಕಕ್ಕೊಂದು (ಪೊಯೆಟಿಕ್ ಡ್ರಾಮ) ರೂಪವಿತ್ತ ಟಿ.ಎಸ್.ಎಲಿಯಟ್ನ ಮರ್ಡರ್ ಇನ್ ದಿ ಕೆಥೆಡ್ರಲ್-ಇವುಗಳಲ್ಲಿ ಆಧುನಿಕ ಐತಿಹಾಸಿಕ ನಾಟಕದ ರೂಪರೇಷೆಗಳನ್ನು ಕಾಣಬಹುದು.

ಗತಕಾಲದ ಒಂದು ಸನ್ನಿವೇಶವನ್ನೊ ಘಟನೆಯನ್ನೊ ಒಬ್ಬನ ಜೀವನದ ಪ್ರಮುಖ ಸಂಗತಿಯನ್ನೊ ತದ್ವತ್ತಾಗಿ ಚಿತ್ರಿಸುವುದು ಐತಿಹಾಸಿಕ ನಾಟಕಗಳ ಮುಖ್ಯ ಉದ್ದೇಶ. ಹಾಗೆ ಮಾಡುವಲ್ಲಿ ಪ್ರಧಾನ ವ್ಯಕ್ತಿಗಳು ಬದಲಾಗದೆ ಹಾಗೆಯೇ ಬಂದರೂ ಪೋಷಕವಾಗಿ ಬರುವ ಅನೇಕ ವಿಷಯಗಳು ಮತ್ತು ಪಾತ್ರಗಳು ಕಾಲ್ಪನಿಕವಾಗಿರಬಹುದು. ಅಲ್ಲದೆ ನಾಟಕಕಾರ ತನ್ನ ಯಾವುದೋ ಒಂದು ಉದ್ದೇಶ ಸಾಧನೆಗಾಗಿ ಐತಿಹಾಸಿಕ ಘಟನೆಯೊಂದನ್ನು ಎತ್ತಿಕೊಂಡಾಗ ಸ್ಥೂಲವಾಗಿ ನಾಟಕ ಇತಿಹಾಸಕ್ಕೆ ಅವಿರುದ್ಧವಾಗಿ ಕಂಡರೂ ಸಂಭಾಷಣೆ, ಸನ್ನಿವೇಶ, ಪಾತ್ರಪೋಷಣೆಗಳೆಲ್ಲ ಕಾಲ್ಪನಿಕವಾಗಿಬಿಡಬಹುದು. ಈ ಎಲ್ಲಕ್ಕೂ ಪ್ರಸಿದ್ಧ ನಾಟಕಗಳಲ್ಲಿ ಉದಾಹರಣೆಗಳು ದೊರೆಯುತ್ತವೆ. (ಎಚ್.ಕೆ.ಆರ್.)

ಸಂಸ್ಕೃತದಲ್ಲಿ ಐತಿಹಾಸಿಕ ನಾಟಕಗಳು[ಬದಲಾಯಿಸಿ]

ಹಿಂದಿನ ಭಾರತೀಯರಿಗೆ ಐತಿಹಾಸಿಕ ಬುದ್ಧಿಯೇ ಇಲ್ಲವೆಂದು ಆಧುನಿಕ ಇತಿಹಾಸಕಾರರ ಆಕ್ಷೇಪಣೆ. ಭಾರತದಲ್ಲಿ ಪ್ರಾಚೀನ ಇತಿಹಾಸದ ಮುಖ್ಯ ಘಟನೆಗಳನ್ನು ಕಾಲನಿರ್ದೇಶ ಸಮೇತವಾಗಿ ಸ್ವೀಕಾರಾರ್ಹವೆನಿಸುವಂತೆ ರಚಿಸಿದ ಬರೆಹಗಳ ಅಭಾವವೇ ಇದಕ್ಕೆ ಮುಖ್ಯ ಆಧಾರ. ಮೊದಲು, ಜನಪ್ರಿಯವೂ ರೋಚಕವೂ ಆದ ರೀತಿಯಲ್ಲಿ ರಾಜರ ಚರಿತ್ರೆಗಳನ್ನು ಕಥಾಕಲ್ಪನೆಗಳೊಂದಿಗೆ ಕೂಡಿಸಿಯೇ ಕಾವ್ಯರಚನೆ ಮಾಡುತ್ತಿದ್ದರು. ಈ ದೃಷ್ಟಿಯಿಂದ ರಾಮಾಯಣ, ಮಹಾಭಾರತ, ಪುರಾಣದಲ್ಲಿ ಬರುವ ರಾಜಚರಿತ್ರೆಗಳು-ಎಲ್ಲವೂ ಇತಿಹಾಸವೆನಿಸುತ್ತಿತ್ತು. ಆದರೆ ಇವುಗಳಲ್ಲಿ ಎಲ್ಲೂ ಕಾಲಗಣನೆಯ ನಿರ್ದೇಶನವೇ ಇಲ್ಲ. ಕೇವಲ ಕಲ್ಪಿತಾಂಶಗಳಿಂದಲೇ ನೇಯ್ದ ಅದ್ಭುತರಮ್ಯ ಚರಿತ್ರೆ ಕಥೆಯೆನಿಸುತ್ತಿತ್ತು ಅಷ್ಟೆ. ಸಂಸ್ಕೃತದ ನಾಟಕಗಳೆಲ್ಲ ಪ್ರಾಯಿಕವಾಗಿ ಈ ಮೂರು ಬಗೆಯ (ಇತಿಹಾಸ, ಪುರಾಣ ಮತ್ತು ಕಥೆ) ಮೂಲವಸ್ತುವನ್ನೇ ಅವಲಂಬಿಸಿರುತ್ತಿದ್ದುವು. ರಾಜ ಸಚಿವಾದಿಗಳ ವೀರ ಇಲ್ಲವೆ ಶೃಂಗಾರಕಾರ್ಯಗಳಿಗೆ ನಾಟಕಗಳಲ್ಲಿ ಪರಮಪ್ರಾಶಸ್ತ್ಯವಿದ್ದರೂ ನಾಟಕಕಾರ ಸಮಕಾಲೀನರನ್ನು ನಾಯಕರನ್ನಾಗಿ ತರುವ ಪರಿಪಾಠ ಹೆಚ್ಚಾಗಿರಲಿಲ್ಲ. ಆದರೂ ಈಗ ಉಪಲಬ್ಧವಾಗಿರುವ ಕೆಲವೊಂದು ನಾಟಕಗಳ ಸಮಕಾಲೀನ ರಾಜವೃತ್ತಾಂತವನ್ನೇ ಒಳಗೊಳ್ಳುವುದರಿಂದ ಭಾರತೀಯರಿಗೆ ಕ್ವಚಿತ್ತಾದರೂ ಐತಿಹಾಸಿಕ ಬುದ್ಧಿಯಿತ್ತೆಂದು ಸಾಧಿಸುವಂತಾಗಿದೆ. ಐತಿಹಾಸಿಕ ನಾಟಕಗಳ ನೂತನ ಪರಂಪರೆಗೆ ಕಾಳಿದಾಸನೇ ಪ್ರವರ್ತಕನೆಂದರೂ ಸಲ್ಲುತ್ತದೆ. ಏಕೆಂದರೆ ಪ್ರಾಚೀನ ಪುರಾಣೇತಿಹಾಸಗಳಲ್ಲಿ ಪ್ರಸಿದ್ಧನಲ್ಲದ ಅಗ್ನಿಮಿತ್ರ ರಾಜನನ್ನು ನಾಯಕನನ್ನಾಗಿ ಮಾಡಿ ಅವನು ಮಾಳವಿಕಾಗ್ನಿಮಿತ್ರವನ್ನು ಬರೆದಿದ್ದಾನೆ. ಕೆಲವು ವಿದ್ವಾಂಸರು ಕಾಳಿದಾಸ ಅಗ್ನಿಮಿತ್ರ ರಾಜನ ಸಮಕಾಲೀನನೆಂಬ ವಾದವನ್ನು ಕೂಡ ಪುರಸ್ಕರಿಸುತ್ತಾರೆ. (ಕುನ್ಹನ್ ರಾಜಾ ಮತ್ತು ವಿ.ರಾಘವನ್ ಮೊದಲಾದವರು) ಈ ರಾಜನ ಶೃಂಗಾರವಿಲಾಸವನ್ನೇ ಸ್ವಾರಸ್ಯಕೇಂದ್ರವೆಂದರೂ ಇದರ ಹಿನ್ನೆಲೆಯಲ್ಲಿ ಸತ್ಯವಾದ ಚಾರಿತ್ರಾಂಶಗಳನ್ನೊಳಗೊಳ್ಳುವ ರಾಜಕೀಯ ಪರಿಸ್ಥಿತಿ ವರ್ಣಿತವಾಗಿದೆ. ಪಾಟಲಿಪುತ್ರದಲ್ಲಿ ರಾಜನಾಗಿರುವ ವೃದ್ಧ ಪುಷ್ಯಮಿತ್ರ; ಅವನ ಪ್ರತಿನಿಧಿಯಾಗಿ ವಿದಿಶಾಪಟ್ಟಣವನ್ನಾಳುತ್ತಿರುವ ಮಗ ಅಗ್ನಿಮಿತ್ರ ; ಕೆಳಗೆ ವಿದರ್ಭದಲ್ಲಿ ರಾಜ್ಯಕ್ಕಾಗಿ ಇಬ್ಬರ ಕಲಹ. ಪಾಟಲಿಪುತ್ರದ ಪುರ್ವ ರಾಜರಾದ ಮೌರ್ಯರ ಸಚಿವನ ಸಹಾಯ ಒಬ್ಬನಿಗೆ; ಅಗ್ನಿಮಿತ್ರನ ಸಹಾಯ ಇನ್ನೊಬ್ಬನಿಗೆ. ಅಗ್ನಿಮಿತ್ರನ ರಾಜ್ಯತಂತ್ರದ ವಿಜಯ. ವಿದರ್ಭರಾಜಪುತ್ರಿಯ ಪಾಣಿಗ್ರಹಣ. ಅತ್ತ ಯವನರಿಂದ ಪುಷ್ಯಮಿತ್ರನ ಯಜ್ಞಾಶ್ವಬಂಧನ. ಅಗ್ನಿಮಿತ್ರನ ಮಗನಾದ ವಸುಮಿತ್ರನಿಗೂ ಯವನರಿಗೂ ಕಾಳಗ. ಯುದ್ಧದಲ್ಲಿ ವಸುಮಿತ್ರನ ವಿಜಯ. ನಮಗೆ ಉಪಲಬ್ಧವಿರುವ ಇತರ ಐತಿಹಾಸಿಕ ಘಟನೆಗಳೊಂದಿಗೆ ಈ ನಾಟಕದಲ್ಲಿ ಪ್ರಥಮತಃ ಉಲ್ಲೇಖಿತವಾಗಿರುವ ಈ ಘಟನೆಗಳು ಕೂಡ ಅವಿರುದ್ಧವಿದ್ದು ಪುರಕವೆನಿಸುವಂತಾಗಿವೆ.

ಇದೇ ರೀತಿ, ವಿಶಾಖದತ್ತನ (ಸು.600) ಮುದ್ರಾರಾಕ್ಷಸ ನಾಟಕದ ಮೂಲ ಅಚ್ಚು ಕಥಾಸಾಹಿತ್ಯದಿಂದ ಬಂದುದಾದರೂ ಅಲ್ಲಿ ಜೀವಂತವಾಗಿ ಕಣ್ಣುಮುಂದೆ ಸುಳಿಯುವ ಪರ್ವತರಾಜ, ಅಮಾತ್ಯರಾಕ್ಷಸ, ಮಲಯಕೇತು ಮುಂತಾದ ಪಾತ್ರಗಳು ನಾಟಕಕಾರನ ಐತಿಹಾಸಿಕ ಪ್ರಜ್ಞೆಗೆ ಮಾನದಂಡಗಳಂತಿವೆ.

ಇದೇ ಕವಿಯ ದೇವೀಚಂದ್ರಗುಪ್ತವೆಂಬ ನಾಟಕದ ತುಣುಕುಗಳು ಭೋಜನ ಶೃಂಗಾರಪ್ರಕಾಶ ಮುಂತಾದ ಲಕ್ಷಣಗ್ರಂಥಗಳಲ್ಲಿ ಉದಾಹೃತವಾಗಿವೆ. ಗುಪ್ತ ಸಾಮ್ರಾಟ್ ಎರಡನೆಯ ಚಂದ್ರಗುಪ್ತನ ಹಿರಿಯಣ್ಣ ರಾಮಗುಪ್ತ, ಅವನ ರಾಣಿ ಧ್ರುವದೇವಿ. ಶಕರೊಡನೆ ಯುದ್ಧದಲ್ಲಿ ಸೋತ ರಾಮಗುಪ್ತ ವಿಷಮಘಳಿಗೆಯಲ್ಲಿ ತನ್ನ ರಾಣಿಯನ್ನೇ ಶಕರಾಜನಿಗೆ ಒಪ್ಪಿಸುವ ಅವಮಾನಕರ ಒಪ್ಪಂದ ಮಾಡಿಕೊಳ್ಳುತ್ತಾನೆ. ಇದನ್ನು ಸಹಿಸಲಾರದ ಚಂದ್ರಗುಪ್ತ ರಾಣಿಯ ವೇಷದಲ್ಲಿ ಶಕರಾಜನ ಅಂತಃಪುರಕ್ಕೆ ಸೇರಿ ಅವನನ್ನು ಕೊಂದು ಹಿಂದಿರುಗಿ ಅಣ್ಣ ಸತ್ತಮೇಲೆ ತಾನೇ ಧ್ರುವದೇವಿಯನ್ನು ಮದುವೆಯಾಗುತ್ತಾನೆ. ಆಕೆಯೇ ಕುಮಾರಗುಪ್ತನ ತಾಯಾಗುತ್ತಾಳೆ. ಇಷ್ಟೆಲ್ಲ ಐತಿಹಾಸಿಕ ಸಂಗತಿಗಳನ್ನು ಈ ನಾಟಕದ ತುಣುಕುಗಳು ಮೊತ್ತ ಮೊದಲಿಗೆ ನಮ್ಮ ಗಮನಕ್ಕೆ ತರುತ್ತವೆ.

ಹೀಗೆಯೇ ಇತಿಹಾಸಕಾರನ ಗಮನವನ್ನು ಸೆಳೆವ ಮತ್ತೊಂದು ನಾಟಕ ಈ ಶತಮಾನದಲ್ಲಿಯೇ ಮೊದಲು ಅಚ್ಚಾಯಿತು: ಕೌಮುದೇಮಹೋತ್ಸವವೆಂದು ಅದರ ಹೆಸರನ್ನು ಊಹಿಸಲಾಗಿದೆ. ಬರೆದಾಕೆ ವಿಬ್ಜೆಕಾ ಎಂದಿರಬಹುದೆನ್ನುತ್ತಾರೆ. ಅದರಲ್ಲಿ ರಾಜ್ಯಭ್ರಷ್ಟನಾದ ಕಲ್ಯಾಣವರ್ಮನೆಂಬಾತ ಹೇಗೆ ಪುರ್ವಮಂತ್ರಿಯಾದ ಮಂತ್ರಗುಪ್ತನ ಹಂಚಿಕೆಗಳಿಂದ ಮರಳಿ ತನ್ನ ರಾಜ್ಯವನ್ನು ಪಡೆದನೆಂಬ ಕಥೆ ಬರುತ್ತದೆ. ಮಗಧರಾಜನ ಸೇನಾಧಿಪತಿಯಾಗಿದ್ದ ಚಂಡಸೇನ ಮ್ಲೇಚ್ಛರಾದ ಲಿಚ್ಛವಿಗಳೊಡನೆ ಕೂಡಿಕೊಂಡು ಪಾಟಲಿಪುತ್ರವನ್ನು ಮುತ್ತಿ, ತನ್ನ ಪ್ರಭು ಸುಂದರವರ್ಮನನ್ನು ಕೊಂದು, ಮಗ ಕಲ್ಯಾಣವರ್ಮನನ್ನು ಓಡಿಸಿ, ತಾನೇ ರಾಜನಾದುದನ್ನು ಈ ನಾಟಕ ತಿಳಿಸುತ್ತದೆ. ಇತರ ಶೃಂಗಾರ ನಾಟಕಗಳಂತೆ ನಾಯಕ ಕಲ್ಯಾಣವರ್ಮನಿಗೆ ಶೂರಸೇನರಾಜನ ಮಗಳಾದ ಕೀರ್ತಿಸೇನೆಯೆಂಬ ಕನ್ಯಾರತ್ನ ಪ್ರಾಪ್ತಿಯನ್ನು ವರ್ಣಿಸುತ್ತದೆ. ಈ ಮಗಧರಾಜ್ಯ ಚರಿತ್ರೆ ನಮಗೆ ಅನ್ಯತ್ರ ಉಪಲಬ್ಧವಿಲ್ಲ. ಮಾಳವಿಕಾಗ್ನಿಮಿತ್ರ ಮತ್ತು ರತ್ನಾವಳೀ ನಾಟಕಗಳ ಮಾದರಿಯಲ್ಲಿ ಬರೆಯಲಾಗಿರುವ ಬಿಲ್ಹಣಕವಿಯ (11ನೆಯ ಶತಮಾನ) ಕರ್ಣಸುಂದರೀ ಎಂಬ ನಾಟಕ ಸಮಕಾಲೀನನಾದ ಅಣಹಿಲವಾಡದ ಕರ್ಣದೇವನೃಪನನ್ನು ಕುರಿತಿದ್ದರೂ ಅದರಲ್ಲಿ ಶೃಂಗಾರವಸ್ತು ಹೆಚ್ಚು; ಐತಿಹಾಸಿಕ ವಸ್ತು ಕಡಿಮೆ. ಹೀಗೆಯೇ ಮೃಚ್ಛಕಟಿಕ ಮುಂತಾದ ಪ್ರಕರಣಗಳಲ್ಲಿ ಆರ್ಯಕ ಪಾಲಕರ ಘರ್ಷಣೆಯೇ ಮುಂತಾದ ರಾಜಕೀಯ ವೃತ್ತಾಂತಗಳು ಬರುವುದುಂಟು. ಸಂಸ್ಕೃತದಲ್ಲಿ ಐತಿಹಾಸಿಕ ನಾಟಕಗಳ ಪರಂಪರೆ ಒಂದುಂಟೆಂದು ಹೇಳಲು ಮೇಲಿನ ಈ ಕೆಲವು ನಿದರ್ಶನಗಳು ಸಾಕು. (ಕೆ.ಕೆ.)

ಕನ್ನಡದಲ್ಲಿ ಐತಿಹಾಸಿಕ ನಾಟಕಗಳು[ಬದಲಾಯಿಸಿ]

ಕನ್ನಡ ಸಾಹಿತ್ಯದಲ್ಲಿ ಐತಿಹಾಸಿಕ ನಾಟಕಗಳು ಹೇಳಿಕೊಳ್ಳುವಷ್ಟಿಲ್ಲವಾದರೂ ಈ ಪ್ರಕಾರ ಕನ್ನಡಕ್ಕೆ ಹೊಸದೇನೂ ಅಲ್ಲ. ರಾಮಾಯಣ ಮಹಾಭಾರತಗಳನ್ನು ಅವಲಂಬಿಸಿದ ಸಂಸ್ಕೃತ ನಾಟಕಗಳು ಕನ್ನಡಕ್ಕೆ ಬಂದಾಗಲೇ ಕನ್ನಡದಲ್ಲಿ ಐತಿಹಾಸಿಕ ನಾಟಕಗಳ ಜನನವೂ ಆಯಿತೆನ್ನಬಹುದು. ಸಾಮಾನ್ಯವಾಗಿ ಈ ನಾಟಕಗಳೆಲ್ಲ ರೂಪಾಂತರಗಳು ಇಲ್ಲವೇ ಭಾಷಾಂತರಗಳು. ಹೀಗೆ ಉಪಲಬ್ಧವಾದ ಮೊದಲ ಕನ್ನಡ ನಾಟಕ ಮಿತ್ರವಿಂದಾ ಗೋವಿಂದ; ಸಂಸ್ಕೃತ ರತ್ನಾವಳಿಯ ಭಾಷಾಂತರ. ಇದರ ಕರ್ತೃ ಮೈಸೂರರಸ ಚಿಕ್ಕದೇವರಾಜ ಒಡೆಯರ ಆಸ್ಥಾನಕವಿ ಸಿಂಗರಾರ್ಯ. ಈ ನಾಟಕದಲ್ಲಿ ಇತಿಹಾಸದ ಅಂಶಕ್ಕಿಂತ ಕಲ್ಪನಾಂಶವೇ ಹೆಚ್ಚು.

ಅನಂತರ ನಮ್ಮ ದೃಷ್ಟಿಗೆ ಬರುವವರು ಬಸವಪ್ಪಶಾಸ್ತ್ರಿಗಳು. ಶಾಕುಂತಲ, ವಿಕ್ರಮೋರ್ವಶೀಯ, ರತ್ನಾವಳಿ, ಉತ್ತರರಾಮಚರಿತ್ರೆ, ಮಾಲತೀಮಾಧವ, ಚಂಡಕೌಶಿಕ ನಾಟಕಗಳ ಭಾಷಾಂತರಗಳನ್ನೂ ಷೇಕ್ಸ್‌ಪಿಯರನ ಒಥೆಲೋವನ್ನು ಅನುಸರಿಸಿ ಶೂರಸೇನ ಚರಿತ್ರೆಯನ್ನೂ ಇವರು ರಚಿಸಿದ್ದಾರೆ. ಭಾಷಾಂತರ ಕಲೆಯನ್ನು ರಮ್ಯವಾಗಿ ಕರಗತಮಾಡಿಕೊಂಡವರಲ್ಲಿ ಶ್ರೇಷ್ಠರಿವರು. ಇವರ ಹಿಂದೆಯೇ ಬೆಳ್ಳಾವೆ ನರಹರಿಶಾಸ್ತ್ರಿ, ಚುರಮುರಿ ಶೇಷಗಿರಿರಾವ್ ಮತ್ತು ಬಿ. ಕೃಷ್ಣಪ್ಪ-ಇವರು ಬೆಳಕಿಗೆ ಬಂದರು.

ಚಂಡಕೌಶಿಕ ನಾಟಕದ ನಾಲ್ಕು ಅಂಕಗಳು ಮಾತ್ರ ಭಾಷಾಂತರವಾಗಿದ್ದಾಗ ಅವರೊಡನೆ ಆ ಕಾರ್ಯದಲ್ಲಿ ಸರಿತೂಗಿ ಉಳಿದ ಭಾಗವನ್ನು ಮುಗಿಸಿದವರು ಅಳಸಿಂಗರಾಚಾರ್ಯರು. ಭಾಸನ ಸ್ವಪ್ನವಾಸದತ್ತ ಮತ್ತು ಪಂಚರಾತ್ರಗಳನ್ನು ಇವರು ಕನ್ನಡಿಸಿದರು. ಪಂಚರಾತ್ರವನ್ನು ಇವರಲ್ಲದೆ ಕೆ.ಆರ್.ರಾಮಸ್ವಾಮಿ, ಪಾನ್ಯಂ ಸುಂದರಶಾಸ್ತ್ರಿ ಮತ್ತು ಎನ್.ಎಸ್.ನಾರಾಯಣಶಾಸ್ತ್ರಿಗಳೂ ಅನುವಾದಿಸಿದ್ದಾರೆ.

ಪ್ರತಿಮಾ ನಾಟಕ ಮೈಸೂರು ಸೀತಾರಾಮಶಾಸ್ತ್ರೀಗಳಿಂದ, ಉಳಿದ ಭಾಸನಾಟಕಗಳು ಎಲ್.ಗುಂಡಪ್ಪನವರಿಂದ ಭಾಷಾಂತರವಾಗಿವೆ. ಶ್ರೀಹರ್ಷನ ನಾಗಾನಂದವನ್ನು ಮೈಸೂರಿನ ಅನಂತನಾರಾಯಣ ಶಾಸ್ತ್ರಿಗಳೂ, ಶೂದ್ರಕನ ಮೃಚ್ಛಕಟಿಕವನ್ನು ಗರಣಿ ವೈ.ಕೃಷ್ಣಾಚಾರ್ಯರೂ, ಧೋಂಡೋ ನರಸಿಂಹ ಮುಳಬಾಗಿಲ ಅವರೂ, ನಂಜನಗೂಡು ಸುಬ್ಬಾಶಾಸ್ತ್ರಿಗಳೂ, ಭಟ್ಟನಾರಾಯಣನ ವೇಣೀಸಂಹಾರವನ್ನು ಜಯರಾಮಾಚಾರ್ಯರೂ, ಕಾಳಿದಾಸನ ಮಾಲವಿಕಾಗ್ನಿಮಿತ್ರವನ್ನು ಶ್ರೀಕಂಠಶಾಸ್ತ್ರೀಗಳೂ ಧಾರವಾಡದ ನಾ.ಗು.ಕರಗುದರಿ ಅವರೂ, ವಿಶಾಖದತ್ತನ ಮುದ್ರಾರಾಕ್ಷಸವನ್ನು ಎಂ.ರಾಮಶೇಷಶಾಸ್ತ್ರಿಗಳೂ ರಾಕ್ಷಸನ ಮುದ್ರಿಕೆ ಎಂಬ ಹೆಸರಿನಿಂದ, ತೀ.ನಂ.ಶ್ರೀಕಂಠಯ್ಯ ಅವರೂ ಅನುವಾದಿಸಿದ್ದಾರೆ.

ಷೇಕ್ಸ್‌ಪಿಯರನ ಮ್ಯಾಕ್ಬೆತ್ ಅನ್ನು ಎಂ.ಎಲ್.ಶ್ರೀಕಂಠೇಶಗೌಡ ಮತ್ತು ಡಿ.ವಿ.ಗುಂಡಪ್ಪ-ಇವರು ಭಾಷಾಂತರಿಸಿದ್ದಾರೆ. ಮಿಡ್ಸಮ್ಮರ್ ನೈಟ್ಸ್‌ ಡ್ರೀಮ್ ಅನ್ನು ಶ್ರೀಕಂಠೇಶಗೌಡರು ಪ್ರಮೀಳಾರ್ಜುನೀಯವೆಂದೂ ಕೆರೂರು ವಾಸುದೇವಾಚಾರ್ಯರು ಪಾತ್ರಗಳ ಹೆಸರು ಹೊರತು ಉಳಿದುದನ್ನು ಸಂಪುರ್ಣವಾಗಿಯೂ ಪರಿವರ್ತಿಸಿದ್ದಾರೆ. ಕೆರೂರರ ಭಾಷಾಂತರವನ್ನು ಇಪ್ಪತ್ತನೆಯ ಶತಮಾನದ ಆದಿಭಾಗದಲ್ಲೇ ಬಂದ ಶ್ರೇಷ್ಠನಾಟಕಗಳಲ್ಲೊಂದೆಂದು ಪರಿಗಣಿಸಲಾಯಿತು. ಇದೇ ಸಾಲಿನಲ್ಲಿ ಕುವೆಂಪು ಅವರ ಬಿರುಗಾಳಿ (ಟೆಂಪೆಸ್ಟ್‌) ಬಿ.ಎಂ.ಶ್ರೀ. ಅವರ ಪಾರಸೀಕರು ಬರುತ್ತವೆ.

ಸೋಸಲೆ ಗರಳಪುರಿ ಶಾಸ್ತ್ರಿಗಳು ಲಾರೆನ್ಸ್‌ ಹೌಸ್ಮನನ ಸಾಕ್ರಟೀಸನ ಕೊನೆಯ ದಿನಗಳು, ಇಬ್ಸೆನನ ಆರ್ಯಕ ಮತ್ತು ಸೂತ್ರದ ಬೊಂಬೆಗಳನ್ನು ತಂದಿತ್ತರು. ಸಿ.ಆನಂದರಾಯರು ರಾಮವರ್ಮ-ಲೀಲಾವತಿ (ರೋಮಿಯೊ ಅಂಡ್ ಜೂಲಿಯೆಟ್) ಮತ್ತು ಹ್ಯಾಮ್ಲೆಟ್ ಅನುವಾದಿಸಿದರು. ಜಾನ್ ಮೇಸ್ಫೀಲ್ಡನ ಟ್ರಯಲ್ ಆಫ್ ಜೀಸಸ್ ಅನ್ನು ದೇವುಡು ನರಸಿಂಹಶಾಸ್ತ್ರಿಗಳು ವಿಚಾರಣೆ ಎಂಬ ಹೆಸರಿನಲ್ಲಿ ತಂದರು. ಮಧುಸೂದನದತ್ತರ ಬಂಗಾಳಿ ನಾಟಕ ಕೃಷ್ಣಾಕುಮಾರಿಯನ್ನು ಬೆನಗಲ್ ರಾಮರಾಯರು ಪರಿವರ್ತಿಸಿದರು; ದ್ವಿಜೇಂದ್ರಲಾಲ್ ರಾಯ್ರ ಪುನರ್ಜನ್ಮ, ಮೇವಾಡಪತನ, ಷಹಜಹಾನ್ ನಾಟಕಗಳೂ ಕನ್ನಡಕ್ಕೆ ಬಂದಿವೆ. ಪೌರಾಣಿಕ-ಐತಿಹಾಸಿಕಗಳನ್ನೂ ಐತಿಹಾಸಿಕಗಳೆಂದುಕೊಂಡು ನಾಟಕ ರಚಿಸಿದವರಲ್ಲಿ ಅಗ್ರಗಣ್ಯರಾದವರು ಮೂವರು-ಉತ್ತರ ಕರ್ನಾಟಕದ ಬಾಳಾಚಾರ್ಯ ಸಕ್ಕರಿ (ಶಾಂತಕವಿ), ಮೈಸೂರಿನ ಬೆಳ್ಳಾವೆ ನರಹರಿಶಾಸ್ತ್ರಿ ಮತ್ತು ನಂಜನಗೂಡು ಶ್ರೀಕಂಠಶಾಸ್ತ್ರ್ರಿ. ಜಿ.ಪಿ.ರಾಜರತ್ನಂ ರಚಿಸಿರುವ ಗಂಡುಗೊಡಲಿ ಪೌರಾಣಿಕ-ಐತಿಹಾಸಿಕ ನಾಟಕಗಳಲ್ಲಿ ಉನ್ನತಮಟ್ಟದ್ದು.

ಸದಾಶಿವರಾವ್ ಗರುಡರು ಎಚ್ಚಮನಾಯಕವನ್ನೂ ಕೆರೂರು ವಾಸುದೇವಾಚಾರ್ಯರು ನಳ-ದಮಯಂತಿಯನ್ನೂ ಬರೆದಿದ್ದಾರೆ. ಪುರಂದರದಾಸ, ಮೀರಾಬಾಯಿ, ಭದ್ರಾಚಲ ರಾಮದಾಸ್ ಇತ್ಯಾದಿ ಭಗವದ್ಭಕ್ತರನ್ನು ಕುರಿತ ನಾಟಕಗಳೂ ವಿಪುಲವಾಗಿ ಬಂದಿವೆ. ಬಿ.ಪುಟ್ಟಸ್ವಾಮಯ್ಯನವರು ಗೌತಮಬುದ್ಧ, ಷಹಜಹಾನ್ ಮುಂತಾದುವನ್ನು ಹೃದಯಂಗಮವಾಗಿ ಬರೆದಿದ್ದಾರೆ.

ಬಿ.ಎಂ.ಶ್ರೀ. ಅವರ ಜಾಡಿನಲ್ಲೇ ನಡೆದ ಕೆ.ವಿ.ರಾಘವಾಚಾರ್ಯರು ಗ್ರೀಕ್ ಮೂಲದಿಂದಲೇ ಅಂತಿಗೊನೆಯನ್ನು ಭಾಷಾಂತರಿಸಿ ನಾಟಕರತ್ನವೊಂದನ್ನು ಇತ್ತಿದ್ದಾರೆ. ಕುವೆಂಪು ಅವರು ಮಹಾರಾತ್ರಿಯಲ್ಲಿ ಸಿದ್ಧಾರ್ಥನ ರಾಜ್ಯತ್ಯಾಗವನ್ನು ಬಣ್ಣಿಸಿದ್ದಾರೆ. ಸಣ್ಣ ಕಥೆಯ ಶ್ರೀನಿವಾಸರು ಒಂಬತ್ತು ನಾಟಕಗಳನ್ನು ರಚಿಸಿದ್ದಾರೆ. ತಿರುಪಾಣಿ, ಯಶೋಧರಾಗಳು ಚಾರಿತ್ರಿಕ ವಸ್ತುಗಳನ್ನು ಒಳಗೊಂಡಿದ್ದರೂ ಚಿರಕಾವ್ಯಗಳ ಗುಂಪಿಗೆ ಸೇರುತ್ತವೆ. ಶಾಂತಾ, ಸಾವಿತ್ರಿ, ಉಷಾ ಇವು ಪೌರಾಣಿಕ-ಐತಿಹಾಸಿಕಗಳೆಂದರೆ ಸಲ್ಲುತ್ತದೆ. ಅಚ್ಚ ಐತಿಹಾಸಿಕಗಳೆಂದು ಕಾಕನಕೋಟೆ, ತಾಳೀಕೋಟೆ, ಶಿವಛತ್ರಪತಿ ನಾಟಕಗಳನ್ನು ಹೆಸರಿಸಬಹುದು. ಕಾಕನಕೋಟೆ ಶುದ್ಧ ಚಾರಿತ್ರಿಕರೂಪಕವಾಗಿದ್ದು, ಗದ್ಯ ಮತ್ತು ಪದ್ಯದಿಂದ ಕೂಡಿ ಮನೋಜ್ಞವಾಗಿದೆ. ಉಳಿದೆರಡು ಸಂಪುರ್ಣವಾಗಿ ಗದ್ಯನಾಟಕಗಳು. ವಸ್ತುವಿನಲ್ಲಿ, ಶೈಲಿಯಲ್ಲಿ ವೈವಿಧ್ಯವಿದ್ದು, ವಾಚಕರ ಮತ್ತು ಪ್ರೇಕ್ಷಕರ ಮನವನ್ನು ಇವು ಹಿಡಿದು ನಿಲ್ಲಿಸುತ್ತವೆ. ಪೌರಾಣಿಕವೆನಿಸಿಕೊಳ್ಳುವಷ್ಟು ಪ್ರಾಚೀನವಲ್ಲದ್ದೂ ಆಧುನಿಕ-ಐತಿಹಾಸಿಕವೆನ್ನುವಷ್ಟು ಈಚಿನದೂ ಅಲ್ಲದ್ದು ಶ್ರೀನಿವಾಸರ ಯಶೋಧರಾ. ಸಿದ್ಧಾರ್ಥ ಬುದ್ಧನಾದ ಮೇಲೆ ಮೊಟ್ಟಮೊದಲಿಗೆ ಕಪಿಲವಸ್ತುವಿನಲ್ಲಿ ತನ್ನ ಪುರ್ವಾಶ್ರಮದ ಹೆಂಡತಿಯಾದ ಯಶೋಧರೆಯನ್ನು ಹೇಗೆ ಕಂಡುಕೊಂಡನೆಂಬ ವಿಷಯವೇ ಇದರ ವಸ್ತು. ಯಶೋಧರೆಯ ಪಾತ್ರ ಇಲ್ಲಿ ವಿನೂತನವಾಗಿ ಚಿತ್ರಿತವಾಗಿದೆ.

ಮೈಸೂರಿನ ಪ್ರಾಚೀನ ಚರಿತ್ರೆಯನ್ನೇ ವಸ್ತುವನ್ನಾಗಿ ಆರಿಸಿಕೊಂಡು ಹಲವಾರು ನಾಟಕರಚನೆ ಮಾಡಿದವರಲ್ಲಿ ಮೊದಲಿಗರೆಂದರೆ-ಸಂಸ ಎಂಬ ಕಾವ್ಯನಾಮದ ಎ.ಎನ್. ಸಾಮಿ ವೆಂಕಟಾದ್ರಿ (1898-1939). ಇವರು ಇಪ್ಪತ್ತಮೂರು ನಾಟಕಗಳನ್ನು ಬರೆದಿದ್ದಾರಾದರೂ ಎಲ್ಲವೂ ಉಪಲಬ್ಧವಿಲ್ಲ. ಬಿರುದೆಂತೆಂಬರ ಗಂಡ, ಸುಗುಣಗಂಭೀರ, ವಿಗಡವಿಕ್ರಮರಾಯ-ಇವು ಮೊದಲು ಬೆಳಕು ಕಂಡ ಮೂರು ನಾಟಕಗಳು. ಅನಂತರ ಬೆಟ್ಟದ ಅರಸು, ವಿಜಯನರಸಿಂಹ, ಮಂತ್ರಶಕ್ತಿ-ಇವು ದೊರಕಿದವು. ಇವು ಆರೂ ಅನಘರ್ಯ್‌ ರತ್ನಗಳು. ರಾಜ ಒಡೆಯರ ಅಣ್ಣ ಬೆಟ್ಟದ ಚಾಮರಾಜರ ಬಂಗಾರದವಳ ಮಗ ಬೆಟ್ಟದ ಅರಸು ರಾಜ ಒಡೆಯರ ಮರಣಕ್ಕೆ ಮುಂಚೆ ದಳವಾಯಿಯಾಗಿ ನೇಮಕವಾದವನು. ಅನಂತರ ಪಟ್ಟಕ್ಕೆ ಬಂದ ಚಾಮರಾಜ ಒಡೆಯರ ಕಾಲದಲ್ಲೂ ದಳವಾಯಿಯಾಗಿದ್ದು, ನಿಷ್ಠೆಯಿಂದ ಸೇವೆ ಸಲ್ಲಿಸಿದ. ಅದಕ್ಕೆ ಅವನಿಗಾದ ಪ್ರತಿಫಲ ಸೆರೆಯವಾಸ, ಕಣ್ಣುಗಳಿಗೆ ಭಾಂಡಕರ್ಪುರದ ಕಟ್ಟು; ನಿಸ್ಸೀಮ ರಾಜಭಕ್ತ ರಾಜದ್ರೋಹಿಯೆನಿಸಿ ತಾನೆಸಗದಿದ್ದ ದ್ರೋಹ ಕಪಟಗಳಿಗೆ ಬಲಿಯಾದ. ಇವನಾದ ಮೇಲೆ ಮೂರನೆಯ ದಳವಾಯಿಯಾಗಿ ವಿಗಡವಿಕ್ರಮರಾಯ ಬಂದ. ತನ್ನ ಕುಟಿಲ ಕ್ರೂರತನದಿಂದ ಎಲ್ಲರನ್ನೂ ಬದಿಗೊತ್ತಿ ರಾಜ್ಯಾಡಳಿತವನ್ನು ತಾನೇ ವಹಿಸಿಕೊಂಡ, ಈ ಬೆಟ್ಟದ ಅರಸು ನಾಟಕ ನಾಯಕ ಬಿದ್ದುದನ್ನೂ ವಿಕ್ರಮನ ಅಭ್ಯುದಯವನ್ನೂ ಚಿತ್ರಿಸುತ್ತದೆ. ಉಳಿದ ಐದು ನಾಟಕಗಳಂತೆ ಹಲವಾರು ಪಾರಿಭಾಷಿಕ ಪದಪ್ರಯೋಗದಿಂದ ಹಳೆಯ ಕಾಲದ ಅರಸೊತ್ತಿಗೆಯ ಆವರಣವನ್ನು ಕಲ್ಪಿಸಿ ಓದುಗರನ್ನು ಆ ಕಾಲಕ್ಕೆ ಕರೆದೊಯ್ಯುವ ಕೆಲಸವನ್ನು ನಾಟಕಕಾರ ಸಮರ್ಥವಾಗಿ ನಿರ್ವಹಿಸಿದ್ದಾನೆ. ವಿಜಯನಾರಸಿಂಹ ನಾಟಕದ ನಾಯಕ ರಣಧೀರ ಕಂಠೀರವ ನರಸರಾಜ. ರಾಜ್ಯದೊಳಗೂ ಹೊರಗೂ ತನ್ನ ಶಕ್ತಿ ಧೋರಣೆಗಳಿಗೆ ಹೆದರಿದ್ದ ವಿರೋಧಶಕ್ತಿಗಳನ್ನು ತನ್ನ ಆಪ್ತ ಆಯುಧವಾದ ವಿಜಯನಾರಸಿಂಹ ಖಡ್ಗದ ಸಹಾಯದಿಂದ, ಅಸಮಸಾಹಸದಿಂದ ಅಡಗಿಸಿ, ವಿಜಯಿಯಾಗಿ ಮೈಸೂರಿನ ಮಲ್ಲರ ಕೀರ್ತಿ ಮೆರಸುತ್ತಾನೆ. ಬೆಟ್ಟದ ಅರಸು ನಾಟಕದಲ್ಲಿ ರಾಜ್ಯದ ಕಾರುಬಾರು ವಹಿಸಿಕೊಂಡು ದರ್ಪದಿಂದ ಕ್ರೌರ್ಯದಿಂದ ರಾಜ್ಯಾಡಳಿತ ನಡೆಸುತ್ತಿದ್ದ ದಳವಾಯಿ ವಿಕ್ರಮರಾಯ, ತನ್ನಿಷ್ಟದಂತೆ ನಡೆಯಲೊಪ್ಪದಿದ್ದ ಮಹಾರಾಜ ಇಮ್ಮಡಿ ರಾಜಒಡೆಯರಿಗೇ ವಿಷವುಡಿಸಿ, ಕೊಲ್ಲಿಸಿ, ಕಂಠೀರವ ನರಸರಾಜನನ್ನು ಕರೆಸಿ ಸಿಂಹಾಸನದ ಮೇಲೆ ಕೂಡಿಸಿ ಅವನನ್ನು ತನ್ನ ಕೈಗೊಂಬೆಯಾಗಿ ಮಾಡಿಕೊಳ್ಳುವ ಉದ್ದೇಶಪಟ್ಟು ತನ್ನ ವಿಗಡತನದ ವಿಜೃಂಭಣೆಗೆ ತೊಡಗುತ್ತಾನೆ. ಅಷ್ಟರಲೇ ಗೂಢಚಾರರಿಂದ ತನ್ನ ಬಗ್ಗೆ ರಣಧೀರನ ಮನೋಗತವೆಂತೆಂಬು ದನ್ನು ಹಠಾತ್ತನೆ ಕಂಡುಕೊಂಡ ವಿಕ್ರಮರಾಯ ತಾನಾಗಿ ಬಹುಮರ್ಯಾದೆಯಿಂದ ರಣಧೀರನನ್ನು ಕರೆಸಿ ಅರಮನೆಯಲ್ಲಿ ಬಂಧಿಯಾಗಿರಿಸುತ್ತಾನೆ. ರಣಧೀರನ ಗೆಳೆಯರು ನಿರೀಶನ ನಾಯಕತ್ವದಲ್ಲಿ ರಣಧೀರನನ್ನು ಸೆರೆಯಿಂದ ಬಿಡಿಸಬೇಕೆನ್ನುವಷ್ಟರಲ್ಲಿ ಅರಮನೆಯ ಸೇವಕರಾದ ಚೆನ್ನ ಮತ್ತು ರಂಗರು ರಾಜಮನೆತನದ ಮೇಲಿನ ಭಕ್ತಿಯಿಂದ ಪ್ರಭಾವಿತರಾಗಿ ವಿಕ್ರಮನ ವಿಗಡತನಕ್ಕೆ ರೋಸಿ ಅವನೊಬ್ಬನೇ ಸಿಕ್ಕಿದಾಗ ಅವನ ರುಂಡ ಹಾರಿಸುತ್ತಾರೆ. ಕಂಠೀರವನಿಗೆ ಪಟ್ಟಾಭಿಷೇಕವಾಗುತ್ತದೆ. ಸರ್ವಾಧಿಕಾರದ ಸವಿಗಂಡು ನರರಾಕ್ಷಸನಾದ ವಿಕ್ರಮನ ದ್ರೋಹದ ದುಷ್ಟಶಕ್ತಿಯನ್ನು ಹತ್ತಿಕ್ಕಲು ರಣಧೀರನ ರಾಜಭಕ್ತಿ, ನಿರೀಶನ ಸ್ನೇಹಶಕ್ತಿ, ರಾಜಮಾತೆಯ ಮತ್ತು ಪೌರರ ಪ್ರತೀಕಾರಶಕ್ತಿ-ಇವಿಷ್ಟೂ ಒಗ್ಗೂಡಬೇಕಾಗುತ್ತದೆ. ವಿಕ್ರಮನ ವಿಗಡತನ ಇಲ್ಲಿ ಪ್ರಮುಖವಾಗಿದ್ದು ಸುತ್ತಬರುವ ಪಾತ್ರಗಳೆಲ್ಲ ಜೀವಕಳೆಯಿಂದ ತುಂಬಿ ಒಬ್ಬೊಬ್ಬರ ಒಂದೊಂದು ಮಾತು, ಚಲನೆ, ಕೊನೆಗೆ ಮಾತಿನ ನಡುವೆ ಅನಿವಾರ್ಯವಾಗಿ ಬರುವ ಮೌನ ಕೂಡ ನಾಟಕವನ್ನು ಜೀವಂತವಾಗಿಸಿವೆ. ಸಂಸರ ಶೈಲಿ ಗಂಡುಶೈಲಿ. ಚಾರಿತ್ರಿಕ ಕಾಲಕ್ಕೆ ತಕ್ಕ ಗದ್ಯಬಂಧವನ್ನು ರೂಪಿಸಬಲ್ಲದ್ದು. ಬೆಟ್ಟದ ಅರಸು ನಾಟಕದಿಂದ ಆರಂಭವಾದ ಮೂರು ನಾಟಕಗಳ ಚಕ್ರ ವಿಜಯನಾರಸಿಂಹವನ್ನು ದಾಟಿ ವಿಗಡವಿಕ್ರಮರಾಯದಲ್ಲಿ ಕೊನೆಯಾಗುತ್ತದೆ. ಮಂತ್ರಶಕ್ತಿ ಎಂಬ ನಾಟಕ ಕಂಠೀರವ ನರಸರಾಜರ ಶಕ್ತಿತ್ರಯದಲ್ಲಿ ಒಂದಾದ ಮಂತ್ರಶಕ್ತಿಯನ್ನು ವಿಜೃಂಭಿಸುತ್ತದೆ. ‘ಬಿರುದೆಂತೆಂಬರ ಗಂಡ’ ಮೈಸೂರಿನ ರಾಜಮನೆತನಕ್ಕೆ ಸೇರಿದ ಇಮ್ಮಡಿ ತಿಮ್ಮರಾಜ ಒಡೆಯರನ್ನು ಕುರಿತ ಏಕಾಂಕ ನಾಟಕ. ‘ಸುಗುಣಗಂಭೀರ’ ಬೋಳಚಾಮರಾಜರ ಕಾಲದಲ್ಲಿ ನಡೆದ ಘಟನೆಯನ್ನು ವಸ್ತುವಾಗಿ ಉಳ್ಳದ್ದು. ಕಳಕಳಿಸುವ ಪಾತ್ರಗಳಿಂದ ತುಂಬಿ, ವೀರರಸಪ್ರಧಾನವಾದ ಈ ನಾಟಕ ಕರುಣೆಯ ಝರಿಯನ್ನು ಹರಿಸುತ್ತ ಮನೋಜ್ಞವಾಗಿದೆ. ಐತಿಹಾಸಿಕ ವಸ್ತುಗಳನ್ನು ಆಧರಿಸಿ ನಾಟಕ ರಚಿಸಿದ ಸಂಸರ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕು. ಅವರು ವಸ್ತುವನ್ನು ಬಳಸಿರುವ ರೀತಿ, ಭಾಷೆಯ ಶೈಲಿ, ರಚನಾತಂತ್ರ ಅದ್ಭುತ.

ಎಂ.ಆರ್. ಶ್ರೀನಿವಾಸಮೂರ್ತಿ ಅವರ ಕಂಠೀರವ ವಿಜಯ ಎಂಬ ನಾಟಕ ಜಗಜಟ್ಟಿ ನರಸರಾಜ ಒಡೆಯರು ತಿರುಚಿನಾಪಳ್ಳಿಯ ಜಟ್ಟಿಯನ್ನು ಮಲ್ಲಕಾಳಗದಲ್ಲಿ ಗೆದ್ದು ಮೈಸೂರಿನ ಹಿರಿಮೆಯನ್ನು ಸ್ಥಾಪಿಸಿದ ಕಥೆ. ಅಭಿನಯಯೋಗ್ಯವಾಗಿ ಸರಳವಾಗಿದೆ. ಎಂ.ಆರ್.ಶ್ರೀ. ಅವರ ಎರಡನೆಯ ಐತಿಹಾಸಿಕ ನಾಟಕ ಧರ್ಮದುರಂತ ನಾಲ್ಕನೆಯ ಮೈಸೂರು ಯುದ್ಧದ ಟಿಪ್ಪುವಿನ ಕಾಲದ ಕಥೆ. ರಾಮರಾಯ ಮಹಮದೀಯನಾದದ್ದು, ಅವನ ಹೆಂಡತಿ ಲಲಿತೆ ಮತ್ತು ಆಯಷೆಯರು ಅವನ ಮೇಲಿನ ನಿವಾರ್ಯ್‌ಜಪ್ರೇಮದಿಂದಲೇ ಪ್ರಾಣತ್ಯಾಗಮಾಡಿದ್ದು-ಈ ವಸ್ತುವನ್ನು ಒಳಗೊಂಡ ಈ ನಾಟಕ ಚೇತೋಹಾರಿಯಾಗಿದೆ.

ಶ್ರೀನಿವಾಸರ ತಾಳೀಕೋಟೆ ಎಂಬ ರೂಪಕ ವಿಜಯನಗರದ ರಾಮರಾಯ, ಆಯಷೆ, ರುಸ್ತುಂ, ತಿರುಮಲಾಂಬ-ಮುಂತಾದ ಚಾರಿತ್ರಿಕ ವ್ಯಕ್ತಿಗಳನ್ನೊಳಗೊಂಡಿದೆ. ಪಾತ್ರಗಳ ಸ್ವಭಾವನಿರೂಪಣೆ, ಗುಪ್ತಪ್ರೇಮದ ಫಲವಾಗಿ ರಾಮರಾಯ ತನ್ನ ಮಗನಾದ ರುಸ್ತುಮನಿಂದಲೇ ಅಪರಿಹಾರ್ಯವಾಗಿ ಕೊಲೆಯಾದುದು ಮುಂತಾದ ಸನ್ನಿವೇಶಗಳ ಸಮರ್ಥ ಚಿತ್ರಣದಿಂದ ನಾಟಕ ಅಗ್ರಸ್ಥಾನ ಪಡೆದಿದೆ. ಇಲ್ಲಿ ವಿಧಿ ತನ್ನ ಆಟ ಹೂಡಿ ಘಟನೆಗಳನ್ನು ನಡೆಸುವುದರಿಂದ ಕೊಲೆಗಡುಕ ರುಸ್ತುಮನಲ್ಲೂ ಅನುಕಂಪ ಹುಟ್ಟುವುದು ಅನಿವಾರ್ಯ. ಜೊತೆಗೆ ಮತಸಂಬಂಧವಾದ ಯುದ್ಧ ಒದಗಿತೆಂದರೆ ವಿಜಯನಗರದಂಥ ಮಹಾಸಾಮ್ರಾಜ್ಯವನ್ನೂ ಮುಳುಗಿಸುವಷ್ಟು ಭೀಕರವಾಗಿ ಪರಿಣಮಿಸುತ್ತದೆನ್ನುವುದೂ ಇಲ್ಲಿ ಚಿತ್ರಿತವಾಗಿದೆ. ಭರತಖಂಡ ಅನ್ಯಮತೀಯರ ಪದಾಘಾತಕ್ಕೆ ಸಿಕ್ಕಿ ಶತಚೂರ್ಣವಾಗುವುದರಲ್ಲಿದ್ದಾಗ ಭಾರತದಲ್ಲಿ ಹಿಂದೂಧರ್ಮವನ್ನು ಉದ್ಧಾರಮಾಡಲೆಂದು ಕಾರಣ ಪುರುಷನಂತೆ ಜನಿಸಿದವ ಶಿವಾಜಿ. ಈ ಮಹಾಪುರುಷ, ನಾಡನ್ನೂ ಧವರ್iವನ್ನೂ ಉದ್ಧರಿಸಿದ ಈ ಗಹನವಸ್ತುವನ್ನು ಆಧಾರವಾಗಿ ಉಳ್ಳದ್ದು ಶ್ರೀನಿವಾಸರ ಶಿವಛತ್ರಪತಿ. ಚರಿತ್ರೆಯಲ್ಲಿ ವೀರರಸವೇ ಮೂರ್ತಿವೆತ್ತಂತಿರುವ ಶಿವಾಜಿ ಇಲ್ಲಿ ವೇದಾಂತಿಯೂ ಆಗಿದ್ದಾನೆ.

ಕಂಠೀರವ ನರಸರಾಜರ ಆಳ್ವಿಕೆಯಲ್ಲಿ ಕಾಡುಕುರುಬರ ದೊರೆಗೆ ಸಂದಾಯ ಮಾಡಬೇಕಾಗಿದ್ದ ಕಪ್ಪಕಾಣಿಕೆಗಳ ವಿಷಯದಲ್ಲಿ ಅವರಿಗೂ ಹೆಗ್ಗಡದೇವನಕೋಟೆಯ ಹೆಗ್ಗಡೆಗೂ ವಿವಾದ ಉಂಟಾಗಿ, ಕುರುಬರ ಮುಖಂಡ ಕಾಚ ಮಹಾರಾಜರನ್ನೇ ಕಂಡು ಅವರ ಮನ ಒಲಿಸಿಕೊಂಡು ತನ್ನ ಜನಾಂಗಕ್ಕೆ ಒದಗಿದ್ದ ಕಷ್ಟ ನಿವಾರಿಸಿಕೊಂಡ ವಸ್ತುವನ್ನು ಆಧರಿಸಿ ಬರೆದ ನಾಟಕ ಕಾಕನಕೋಟೆ. ಕಾಡುಜನರ ನಿಜಜೀವನ, ಊರ ಜನರ ನಿಜಜೀವನ, ಇವೆರಡನ್ನೂ ಇಲ್ಲಿ ಹದವಾಗಿ ಜೋಡಿಸಿ ಚಿತ್ರಿಸುವ ಸಾಧನವಾಗಿದ್ದಾನೆ, ಕಾಚ. ಐತಿಹಾಸಿಕ ನಾಟಕ ರಚನೆಯಲ್ಲಿ ಹಿರಿಯ ಸ್ಥಾನ ಕುವೆಂಪು ಅವರ ರಕ್ತಾಕ್ಷಿಗೆ ಸಲ್ಲುತ್ತದೆ. ಬಿದನೂರು ನಾಯಕನ ಮರಣ, ಆತನ ರಾಣಿಯ ದುರ್ನಡತೆ, ಪರಿಣಾಮವಾಗಿ ಆ ರಾಜ್ಯ ಹೈದರಾಲಿಯ ಪಾಲು ಆದದ್ದು-ಈ ಚಾರಿತ್ರಿಕ ವಸ್ತುವನ್ನು ಆಧರಿಸಿ ರಚಿತವಾದುದೀ ನಾಟಕ. ಷೇಕ್ಸ್‌ಪಿಯರ್ ನಾಟಕಗಳಿಂದ ಪ್ರಭಾವಿತರಾದ ಕುವೆಂಪು ಅವರು ಈ ನಾಟಕದಲ್ಲಿ ತಮ್ಮದೇ ಆದ ವೈಶಿಷ್ಟ್ಯವನ್ನು ಆರ್ಜಿಸಿದ್ದಾರೆ. ಇಲ್ಲಿನ ಸಂವಿಧಾನಕೌಶಲ, ಪಾತ್ರಸೃಷ್ಟಿಗಳು ಅನ್ಯಾದೃಶ. ಇದೊಂದು ಶ್ಲಾಘ್ಯವಾದ ಸ್ವತಂತ್ರ ಐತಿಹಾಸಿಕ ನಾಟಕ, ಕನ್ನಡ ನಾಟಕಲೋಕಕ್ಕೊಂದು ಕಲಶ.

ವಿಜಯನಗರದ ಇತಿಹಾಸವನ್ನೇ ಕಥಾವಸ್ತುವನ್ನಾಗಿ ಉಪಯೋಗಿಸಿಕೊಂಡು, ರಂ.ಶ್ರೀ. ಮುಗಳಿಯವರು ವಿಜಯಸಾಮ್ರಾಜ್ಯ, ಸೇವಾಪ್ರದೀಪಗಳನ್ನು ರಚಿಸಿದ್ದಾರೆ. ವಿಜಯನಗರದ ಸಾಮ್ರಾಜ್ಯ 1336-1346ರ ವರೆಗೆ ಹತ್ತು ವರ್ಷ ತಳವೂರಿದ ಕ್ರಮವನ್ನು ವಿಜಯನಗರ ಸಾಮ್ರಾಜ್ಯದಲ್ಲೂ ವಿಜಯನಗರದ ಮೊದಲ ದೇವರಾಯ ಅರಸು ಮುದಗಲ್ಲಿನ ಪೆರ್ತಳ ಎಂಬ ಒಕ್ಕಲು ಮಗಳನ್ನು ಮೋಹಿಸಿ ಮದುವೆಯಾಗಲು ಮಾಡಿದ ಪ್ರಯತ್ನವನ್ನು ಸೇವಾಪ್ರದೀಪದಲ್ಲೂ ವಸ್ತುವಾಗಿ ಬಳಸಿದೆ. ಮುಗಳಿಯವರು ಸೂಕ್ಷ್ಮವಿಮರ್ಶಾತ್ಮಕ ದೃಷ್ಟಿಯಿಂದ ತಮಗೆ ಕಂಡ ಸತ್ಯವನ್ನು ಈ ನಾಟಕಗಳಲ್ಲಿ ಪ್ರತಿಪಾದಿಸಿದ್ದಾರೆ. ಹಿಂದೂ ಮಹಮ್ಮದೀಯರ ಸಂಬಂಧ ಪ್ರಯೋಜನಕಾರಿಯಾಗಿ ಪರಿಣಮಿಸಬೇಕೇ ಹೊರತು ಜನಜೀವನಕ್ಕೆ ಕಂಟಕವಾಗಬಾರದೆಂಬ ಸೂಚನೆ ವಿಜಯಸಾಮ್ರಾಜ್ಯದಲ್ಲಿದೆ.

ರತ್ನ ಸಿಂಹಾಸನ ಎಂ.ನರಸಿಂಹಮೂರ್ತಿಯವರ ಐತಿಹಾಸಿಕ ನಾಟಕ, ಭಾಷಾಭಿಮಾನ, ದೇಶಾಭಿಮಾನಗಳಿಗೆ ಬೆಲೆ ಕೊಟ್ಟು ಒಂದು ಜನಾಂಗವನ್ನೇ ಎಚ್ಚರಿಸಿ ಕಾರ್ಯೋನ್ಮುಖರಾಗುವಂತೆ ಮಾಡಬೇಕೆನ್ನುವ ಪ್ರಯತ್ನವನ್ನೂ ಇಲ್ಲಿ ಕಾಣುತ್ತೇವೆ. ರಾಜ ಒಡೆಯರ ರಾಜ್ಯಸ್ಥಾಪನೆ ಇಲ್ಲಿನ ನಾಟಕದ ವಸ್ತು. ರಾಜ ಒಡೆಯರು ಪಟ್ಟಕ್ಕೆ ಬಂದುದು ಬೆಟ್ಟದ ಚಾಮರಾಜರಿಗೆ ಅಸಮಾಧಾನಕರವಾಗಿದ್ದರೂ ಕಾರುಗಹಳ್ಳಿ ಪಾಳೆಯಗಾರನ ಮುತ್ತಿಗೆಯಿಂದಾಗಿ ಅಣ್ಣತಮ್ಮ ಇಬ್ಬರೂ ಒಟ್ಟುಗೂಡಿ ಮೈಸೂರು ರಾಜ್ಯವನ್ನು ಭದ್ರಪಡಿಸಿ ವಿಸ್ತರಿಸಿದರು. ಈ ವಸ್ತು ಒಳ್ಳೆಯ ಐತಿಹಾಸಿಕ ನಾಟಕವೊಂದರ ರಚನೆಗೆ ಕಾರಣವಾಗಿರುವುದರಿಂದ ಗಮನಾರ್ಹವಾಗಿದೆ.

ವೀರರಸ ಪ್ರಧಾನವಾಗಿದ್ದು ದೇಶಭಕ್ತಿ, ನಾಡಭಕ್ತಿಗಳನ್ನು ದೇದೀಪ್ಯಮಾನವಾಗಿಸುವ ನಾಟಕಗಳೆಂದರೆ-ಎಚ್ಚಮನಾಯಕ, ವೀರರಾಣಿ ಕಿತ್ತೂರು ರುದ್ರಮ್ಮ, ಇವೆರಡೂ ಉತ್ತರ ಕರ್ನಾಟಕದಲ್ಲಿ ಮನೆಮಾತಾಗಿವೆ. ಇವುಗಳ ಕರ್ತೃ ಅಭಿನಯದಲ್ಲಿ ಎತ್ತಿದಕೈ ಎನಿಸಿದ ಸದಾಶಿವರಾವ್ ಗರುಡ್. ವಿಶಾಖದತ್ತನ ಮುದ್ರಾರಾಕ್ಷಸದ ಮೂರು ಅನುವಾದಗಳು ಕನ್ನಡಕ್ಕೆ ಬಂದಿವೆ. ಗಂಡು ಹೆಣ್ಣಿನ ಪ್ರೇಮ ದ್ವೇಷಮಾತ್ಸರ್ಯಗಳ ಮಹಾಬೆಂಕಿಯನ್ನು ಹೊತ್ತಿಸಿ ಇಡೀ ಭರತಖಂಡವನ್ನೇ ಹೇಗೆ ಪರಕೀಯರ ದಾಳಿಗೆ ಪದೇ ಪದೇ ಒಡ್ಡಿತು ಎಂಬ ದುರಂತವಸ್ತುವುಳ್ಳದ್ದು ಪೃಥ್ವೀರಾಜ-ಸಂಯುಕ್ತೆಯರ ಪ್ರಣಯ ಕಥೆ. ಎಂ.ಗೋವಿಂದರೆಡ್ಡಿಯವರು ಈ ವಸ್ತುವನ್ನು ಆಧರಿಸಿ ಪೃಥ್ವೀಸಂಯುಕ್ತೆ ಎಂಬ ನಾಟಕ ರಚಿಸಿದ್ದಾರೆ. ಪ್ರತಾಪಗಡ ಜೋಧಪುರಗಳ ನಡುವೆ ನಡೆದ ವ್ಯವಹಾರವೊಂದು ಕಥಾವಸ್ತುವಾಗುಳ್ಳ ಐದುಅಂಕಗಳ ನಾಟಕ ಬೆಳ್ಳೆಭುಜಂಗರಾಯರ ಉದ್ಧಾರ. ತೆಲುಗಿನಿಂದ ಕನ್ನಡಕ್ಕೆ ಬಂದಿರುವ ವಿ.ಬ. ಈಶ್ವರರಾಯರ ತಿಷ್ಯರಕ್ಷಿತೆ ಎಂಬುದು ಅಶೋಕನ ಮೂರನೆಯ ಪತ್ನಿ ಮಗ ಕುನಾಲನೊಡನೆ ನಡೆಸಿದ ಪ್ರೇಮ ವ್ಯವಹಾರ ಕುರಿತಾದದ್ದು.

ಡಿ.ವಿ.ಜಿ. ರಚಿಸಿರುವ ವಿದ್ಯಾರಣ್ಯವಿಜಯ ಉತ್ತಮ ಕಥಾವಸ್ತು ಮತ್ತು ಉತ್ತಮ ಶೈಲಿಗಳಿಂದಾಗಿ ಕನ್ನಡದ ಶ್ರೇಷ್ಠ ನಾಟಕಗಳಲ್ಲೊಂದೆನಿಸಿದೆ. ಈಚೆಗೆ ಸಮೇತನಹಳ್ಳಿ ರಾಮರಾಯರು ತಲಕಾಡುಗೊಂಡ ಎಂಬ ಐತಿಹಾಸಿಕ ನಾಟಕವನ್ನು ಇತ್ತಿದ್ದಾರೆ. ಹೊಸ ದೃಷ್ಟಿ, ಹೊಸ ತಂತ್ರ, ಹೊಸ ಶೈಲಿಗಳಿಗಾಗಿ ಶ್ರೀರಂಗರ ಪುಲಿಕೇಶಿ ಎಂಬ ನಾಟಕವನ್ನೂ ಗಿರೀಶ್ ಕಾರ್ನಾಡರ ತುಘಲಕ್ ನಾಟಕವನ್ನೂ ಹೆಸರಿಸಬಹುದು. (ಬಿ.ಎಸ್.ಆರ್.ಆರ್.)

ಉಲ್ಲೇಖಗಳು[ಬದಲಾಯಿಸಿ]