ಏಷ್ಯ ಮತ್ತು ದೂರ ಪ್ರಾಚ್ಯಗಳ ಆರ್ಥಿಕ ಆಯೋಗ
ಏಷ್ಯ ಮತ್ತು ದೂರ ಪ್ರಾಚ್ಯಗಳ ಆರ್ಥಿಕ ಆಯೋಗ: ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಸಮಿತಿ ಏರ್ಪಡಿಸಿರುವ ನಾಲ್ಕು ಪ್ರಾದೇಶಿಕ ಸಂಸ್ಥೆಗಳಲ್ಲಿ ಒಂದು. ಇದರ ಎಕನಾಮಿಕ್ ಕಮಿಷನ್ ಫಾರ್ ಏಷ್ಯ ಅಂಡ್ ದಿ ಫಾರ್ ಈಸ್ಟ್ ಎಂಬ ಇಂಗ್ಲಿಷ್ ಹೆಸರಿನ ಮುಖ್ಯ ಶಬ್ದಗಳ ಮೊದಲಕ್ಷರಗಳಾದ ಇ.ಸಿ.ಎ.ಎಫ್.ಇ ಎಂಬ ಅಕ್ಷರಗಳನ್ನು ಸೇರಿಸಿ ಇಕಾಫೆ ಎಂದು ಕರೆಯುವುದು ರೂಢಿಯಾಗಿದೆ. ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಸಮಿತಿಯ ಒಂದು ನಿರ್ಣಯದ ಮೇರೆಗೆ ಇದು 1947 ಮಾರ್ಚ್ 28ರಂದು ಅಸ್ತಿತ್ವಕ್ಕೆ ಬಂತು. ಇದರ ಪ್ರಥಮ ಸಭೆ ಅದೇ ವರ್ಷದ ಜೂನಿನಲ್ಲಿ ನಡೆಯಿತು. ಈ ಆಯೋಗದ ಮೂಲಕ ಏಷ್ಯ ಮತ್ತು ದೂರಪ್ರಾಚ್ಯ ಪ್ರದೇಶಗಳ ಶೀಘ್ರಪ್ರಗತಿ ಸಾಧಿಸುವುದೇ ಇದನ್ನು ಸ್ಥಾಪಿಸಿದ ಉದ್ದೇಶ. ಇಕಾಫೆ ಮಂಡಳಿಯ ಕಾರ್ಯಚಟುವಟಿಕೆಗಳ ಭೌಗೋಳಿಕ ವ್ಯಾಪ್ತಿಗೆ ಒಳಪಟ್ಟಿರುವ ಆಫ್ಫಾನಿಸ್ತಾನ, ಬ್ರೂನೈ, ಮಯನ್ಮಾರ್, ಕಾಂಬೋಡಿಯ, ಶ್ರೀಲಂಕ, ಚೀನ, ಮಲಯ, ಹಾಂಗ್ಕಾಂಗ್, ಭಾರತ, ಇಂಡೋನೇಷ್ಯ, ಇರಾನ್, ಜಪಾನ್, ಕೊರಿಯ, ಲಾವೋಸ್, ಮಂಗೋಲಿಯ, ನೇಪಾಲ, ಉತ್ತರ ಬೋರ್ನಿಯೊ, ಪಾಕಿಸ್ತಾನ, ಫಿಲಿಪೀನ್ಸ್, ಸಾರವಾಕ್, ಸಿಂಗಪುರ, ಥೈಲೆಂಡ್ ಮತ್ತು ವಿಯಟ್ನಾಂ.ಇಕಾಫೆ ಮಂಡಳಿಯಲ್ಲಿ 27 ಸದಸ್ಯರಾಷ್ಟ್ರಗಳೂ ಎರಡು ಸಹಸದಸ್ಯ ರಾಷ್ಟ್ರಗಳೂ ಇವೆ (1969). ಆಫ್ಘಾನಿಸ್ತಾನ, ಆಸ್ಟ್ರೇಲಿಯ, ಬರ್ಮ, ಕಾಂಬೋಡಿಯ, ಶ್ರೀಲಂಕ, ಚೀನ, ಫ್ರಾನ್ಸ್, ಭಾರತ, ಇಂಡೋನೇಷ್ಯ, ಇರಾನ್, ಜಪಾನ್, ಕೊರಿಯ ಗಣರಾಜ್ಯ, ಲಾವೋಸ್, ಮಲೇಷಿಯ, ಮಂಗೋಲಿಯ, ನೇಪಾಲ, ನೆದರ್ಲೆಂಡ್ಸ್, ನ್ಯೂ ಜಿûೕಲೆಂಡ್, ಪಾಕಿಸ್ತಾನ, ಫಿಲಿಪೀನ್ಸ್, ಸಿಂಗಪುರ ಥೈಲೆಂಡ್, ಸೋವಿಯತ್ ಒಕ್ಕೂಟ, ಬ್ರಿಟನ್, ಅಮೆರಿಕ ಸಂಯುಕ್ತ ಸಂಸ್ಥಾನ, ಫ್ರಾನ್ಸ್, ಸೋವಿಯತ್ ಒಕ್ಕೂಟ, ನೆದರ್ಲೆಂಡ್ಸ್, ಆಸ್ಟ್ರೇಲಿಯ, ನ್ಯೂ ಝೀಲೆಂಡ್ ಇವು ಏಷ್ಯ ಮತ್ತು ದೂರ ಪ್ರಾಚ್ಯ ಪ್ರದೇಶದ ಹೊರಗಿರುವ ಸದಸ್ಯರಾಷ್ಟ್ರಗಳು. ಈ ರಾಷ್ಟ್ರಗಳಿಂದ ಆರ್ಥಿಕ ಸಹಾಯ ಪಡೆದುಕೊಳ್ಳುವುದು ಆಯೋಗದ ಉದ್ದೇಶ. ಆಯೋಗದ ಸಭೆಗೆ ಈ ಸದಸ್ಯರನ್ನಲ್ಲದೆ ವಿವಿಧ ದೇಶಗಳಿಂದ ಸಮಾಲೋಚಕ ಸದಸ್ಯರನ್ನೂ ಆಹ್ವಾನಿಸುವುದುಂಟು.
ಆಯೋಗದ ಮುಖ್ಯ ಉದ್ದೇಶಗಳು
[ಬದಲಾಯಿಸಿ]- ಇಕಾಫೆ ಪ್ರದೇಶದಲ್ಲಿರುವ ರಾಷ್ಟ್ರಗಳ ಆರ್ಥಿಕ ಗತಿಯನ್ನು ಚುರುಕುಗೊಳಿಸುವುದು. ಆ ರಾಷ್ಟ್ರಗಳಲ್ಲಿ ಎಲ್ಲ ರಂಗಗಳಲ್ಲೂ ಪರಸ್ಪರ ಸಂಪರ್ಕವನ್ನು ವೃದ್ಧಿಗೊಳಿಸುವುದು. ಆ ರಾಷ್ಟ್ರಗಳು ವಿಶ್ವದ ಎಲ್ಲ ರಾಷ್ಟ್ರಗಳೊಡನೆ ಸಹಕಾರ ಬೆಳೆಸುವಂತೆ ನೋಡಿಕೊಳ್ಳುವುದು. ಆ ರಾಷ್ಟ್ರಗಳ ಆರ್ಥಿಕ ಅಭಿವೃದ್ಧಿಯನ್ನು ಚುರುಕುಗೊಳಿಸುವುದು.
- ಆರ್ಥಿಕ ಹಾಗೂ ತಾಂತ್ರಿಕ ವಿಷಯಗಳಿಗೆ ಸಂಬಂಧಪಟ್ಟಂತೆ ಸಂಶೋಧನೆಗಳನ್ನು ನಡೆಸುವುದು ಮತ್ತು ನಿಯೋಜಿಸುವುದು.
- ಆರ್ಥಿಕ, ತಾಂತ್ರಿಕ ವಿಷಯಗಳಿಗೆ ಸಂಬಂಧಪಟ್ಟ ಅಂಕಿ ಅಂಶಗಳನ್ನು ಸಂಗ್ರಹಿಸುವುದು ಮತ್ತು ಅವುಗಳನ್ನು ಪ್ರಕಟಿಸುವುದು.
- ವಿಶ್ವಸಂಸ್ಥೆಯ ತಾಂತ್ರಿಕ ನೆರವಿನ ಯೋಜನೆಯಲ್ಲಿ ಸೇರಿರದ ವಿಷಯಗಳ ಬಗ್ಗೆ ಸದಸ್ಯರಾಷ್ಟ್ರಗಳಿಗೆ ಸಲಹೆ ನೀಡುವುದು.
- ಆರ್ಥಿಕ ಹಾಗೂ ಸಾಮಾಜಿಕ ಸಮಿತಿಯ ಕಾರ್ಯಗಳು ಸಫಲವಾಗುವಂತೆ, ಆರ್ಥಿಕ ಹಾಗೂ ತಾಂತ್ರಿಕ ಕ್ಷೇತ್ರದಲ್ಲಿ ಅದಕ್ಕೆ ಸಹಾಯ ಮಾಡುವುದು.
- ಆರ್ಥಿಕ ಅಭಿವೃದ್ಧಿಯ ಸಾಮಾಜಿಕ ವಿಷಯಗಳಲ್ಲಿ ಸಹಾಯ ಮಾಡುವುದು.
ಒಟ್ಟಿನಲ್ಲಿ ತನ್ನ ಸದಸ್ಯರಾಷ್ಟ್ರಗಳಲ್ಲಿ ಆರ್ಥಿಕ ಅಭಿವೃದ್ಧಿಯನ್ನು ತೀವ್ರಗೊಳಿಸುವುದು ಇಕಾಫೆಯ ಗುರಿ. ಈ ಆಯೋಗ ಇಕಾಫೆ ಕ್ಷೇತ್ರಕ್ಕೆ ಸಂಬಂಧಿಸಿದ್ದಾದರೂ ಇದು ಒಟ್ಟಿನಲ್ಲಿ ಅಂತಾರಾಷ್ಟ್ರೀಯ ಸಹಕಾರವೃದ್ಧಿಗಾಗಿ ಏರ್ಪಟ್ಟಿರುವ ಒಂದು ಸಂಸ್ಥೆ.
ಇದು ಮಾತೃಸಂಸ್ಥೆಯಾದ ಆರ್ಥಿಕ ಮತ್ತು ಸಾಮಾಜಿಕ ಸಮಿತಿಯ (ಎಕನಾಮಿಕ್ ಅಂಡ್ ಸೋಷಿಯಲ್ ಕೌನ್ಸಿಲ್) ಮತ್ತು ವಿಶ್ವಸಂಸ್ಥೆಯ ಮಹಾಸಭೆಯ ನಿರ್ದೇಶಕ್ಕನುಗುಣವಾಗಿ ಕಾರ್ಯ ನಡೆಸುತ್ತದೆ. ಇದರ ಕಾರ್ಯಕ್ರಮ ರೂಪಿತವಾಗುವುದು ವಾರ್ಷಿಕ ಸಭೆಗಳಲ್ಲಿ.
ಆಯೋಗದ ಮುಖ್ಯ ಕಛೇರಿ ಬ್ಯಾಂಗ್ಕಾಕಿನಲ್ಲಿದೆ.ಪ್ರಾರಂಭದ ವರ್ಷಗಳಲ್ಲಿ ವರ್ಷಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಇದರ ಅಧಿವೇಶನಗಳು ನಡೆಯುತ್ತಿದ್ದುವು. ಆದರೆ 1949ರಿಂದೀಚೆಗೆ ಇದು ವರ್ಷಕೊಮ್ಮೆ ಮಾತ್ರ ನಡೆಯುತ್ತದೆ. ಸಭೆ ಸದಸ್ಯರಾಷ್ಟ್ರಗಳಲ್ಲಿ ಎಲ್ಲಾದರೂ ನಡೆಯಬಹುದು. ಈ ಅಧಿವೇಶನಗಳನ್ನು ಏಷ್ಯದ ಆರ್ಥಿಕ ಪಾರ್ಲಿಮೆಂಟ್ ಎಂಬುದಾಗಿ ಹೇಳಲಾಗಿದೆ. ಸದಸ್ಯರಾಷ್ಟ್ರಗಳಿಗೆ ಸಂಬಂಧಪಟ್ಟ ಎಲ್ಲ ಆರ್ಥಿಕ ಸಮಸ್ಯೆಗಳ್ನೂ ಕೂಲಂಕಷವಾಗಿ ಚರ್ಚಿಸುವುದಲ್ಲದೆ ಇವನ್ನು ಯಾವ ರೀತಿಯಲ್ಲಿ ಎದುರಿಸಬೇಕು ಎಂಬುದನ್ನೂ ನಿರ್ಧರಿಸಲಾಗುತ್ತದೆ.
ಇಕಾಫೆ ಆಯೋಗದಲ್ಲಿ ಮೂರು ಖಾಯಂ ಸಮಿತಿಗಳಿವೆ: ಔದ್ಯೋಗಿಕ ಹಾಗೂ ಪ್ರಾಕೃತಿಕ ಸಂಪನ್ಮೂಲಗಳ ಸಮಿತಿ, ವ್ಯಾಪಾರ ಸಮಿತಿ ಹಾಗೂ ಅಂತವಾರ್ಯ್‌ಪಾರ ಮತ್ತು ಸಂಪರ್ಕ ಸಮಿತಿ. ಈ ಸಮಿತಿಗಳು ವರ್ಷಕ್ಕೂಮ್ಮೆ ಕೂಡುತ್ತವೆ. ಅದರಲ್ಲಿ ಮಂಡಳಿಯ ಎಲ್ಲ ಸದಸ್ಯರಾಷ್ಟ್ರಗಳೂ ಸಹಸದಸ್ಯರಾಷ್ಟ್ರಗಳೂ ಭಾಗವಹಿಸುತ್ತವೆ. ನಿರ್ದಿಷ್ಟ ಸಮಸ್ಯೆಗಳನ್ನು ಪರಿಶೀಲಿಸುವುದಕ್ಕೋಸ್ಕರ ರಚಿತವಾಗಿರುವ ಅನೇಕ ಉಪ ಸಂಸ್ಥೆಗಳುಂಟು. ಕ್ರಿಯಾತಂಡಗಳೂ ಚರ್ಚಾಗೋಷ್ಠಿಗಳೂ ಸಮಾಲೋಚಕ ತಂಡಗಳೂ ಅಧ್ಯಯನ ತಂಡಗಳೂ ಆಯೋಗದ ಕಾರ್ಯಗಳ ವಿವಿಧ ಸಮಸ್ಯೆಗಳನ್ನು ಪರಿಶೀಲಿಸುತ್ತವೆ. ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ತಾಂತ್ರಿಕ ಸಹಾಯ ಕಾರ್ಯಮಂಡಳಿಯೊಂದಿಗೆ. (ಬ್ಯೂರೊ ಆಫ್ ಟೆಕ್ನಿಕಲ್ ಆಸಿಸ್ಟೆನ್ಸ್ ಆಪರೇಷನ್ಸ್) ವಿಚಾರ ವಿನಿಮಯ ನಡೆಸುತ್ತದೆ. ಅನೇಕ ರಾಷ್ಟ್ರಗಳ ಸರಕಾರೇತರ ಸಂಸ್ಥೆಗಳಿಂದಲೂ ಆಯೋಗಕ್ಕೆ ದೊರಕುತ್ತಿರುವ ಸಹಾಯ ಅಪಾರ.
ಆಯೋಗದ ಕಾರ್ಯಕ್ರಮಕ್ಕೆ ಮುಖ್ಯವಾಗಿ ಮೂರು ಮುಖಗಳಿವೆ : 1 ಮಾಹಿತಿಯ ಸಂಗ್ರಹಣೆ, ವಿಶ್ಲೇಷಣೆ. 2 ರಾಷ್ಟ್ರಗಳಿಗೆ ಸಂಬಂಧಿಸಿದ ಆರ್ಥಿಕ ಕಾರ್ಯಕ್ರಮಗಳ ಬಗ್ಗೆ ಕಾರ್ಯಾಚರಣೆಯ ನಿರ್ದೇಶನ, 3 ತಾಂತ್ರಿಕ ಮತ್ತು ವಿಶೇಷ ಆರ್ಥಿಕ ನಿಧಿಯ ಯೋಜನೆಯ ಬಗ್ಗೆ ಸಲಹೆ ಸೇವೆಗಳ ನೀಡಿಕೆ. ಅಧ್ಯಯನ ಮತ್ತು ಸಂಶೋಧನೆಗಳಿಂದ ನಿರ್ದಿಷ್ಟ ಕಾರ್ಯಾಚರಣೆಗಳ ಬಗ್ಗೆ ಮಂಡಳಿಯ ಗಮನ ಈಚೆಗೆ ಹರಿದಿದೆ. ಆರ್ಥಿಕ ಅಭಿವೃದ್ಧಿಗಾಗಿ ಯೋಜನೆಗಳು, ಸಂಶೋಧನೆ ಮತ್ತು ಅಂಕಿ-ಅಂಶಗಳು, ವಿದೇಶೀ ವ್ಯಾಪಾರ, ಕೈಗಾರಿಕಾಕ್ಷೇತ್ರ ಮತ್ತು ಪ್ರಾಕೃತಿಕ ಸಂಪನ್ಮೂಲಗಳು, ಸಾರಿಗೆ ಮತ್ತು ಸಂಪರ್ಕ, ಪ್ರವಾಹ ಹತೋಟಿ ಮತ್ತು ಜಲಸಂಪದಭಿವೃದ್ಧಿ, ಕೃಷಿ, ಸಮಾಜಕಲ್ಯಾಣ-ಇವು ಆಯೋಗದ ಗಮನ ಸೆಳೆದಿರುವ ಕೆಲವು ಮುಖ್ಯ ಕ್ಷೇತ್ರಗಳು.
ಆರ್ಥಿಕ ಅಭಿವೃದ್ಧಿಗಾಗಿ ಯೋಜನೆಗಳು: 1959ರ ವರೆಗೆ ಆಯೋಗ ತನ್ನ ರಾಷ್ಟ್ರಗಳಿಗೆ ಯೋಜನೆಗಳನ್ನು ರೂಪಿಸಲು ಅನೇಕ ಬಗೆಯಲ್ಲಿ ಸಹಾಯ ಮಾಡಿತು. ಯೋಜನೆಗಳನ್ನು ಹೆಚ್ಚು ದೃಢವೂ ಪರಿಣಾಮಕಾರಿಯೂ ಆಗುವಂತೆ ಮಾಡಲು 1959 ರಿಂದ ಹೊಸ ಬಗೆಯ ಯತ್ನ ನಡೆದಿದೆ. ಅಭಿವೃದ್ಧಿಯೋಜನೆಗಳ ಸಿದ್ಧಾಂತ ಮತ್ತು ಅನುಷ್ಠಾನಗಳ ಬಗ್ಗೆ ಚರ್ಚೆ ನಡೆಸಲು ಪ್ರತಿವರ್ಷವೂ ತಜ್ಞರು ಸಭೆ ಸೇರುತ್ತಾರೆ. ಮೊದಲನೆಯ ಸಭೆಯ ವರದಿ 1960ರಲ್ಲಿ ಪ್ರಕಟವಾಯಿತು. ಇಂಥ ಉಪಯಕ್ತ ವರದಿಗಳು ಅನಂತರ ಸಹ ಪ್ರಕಟವಾಗುತ್ತ ಬಂದಿವೆ. ಏಷ್ಯದ ಆರ್ಥಿಕ ಯೋಜಕರ ಪ್ರಥಮ ಸಮ್ಮೇಳನ ನಡೆದದ್ದು 1961ರಲ್ಲಿ. 1964ರ ಜನವರಿಯಲ್ಲಿ ಏಷ್ಯನ್ ಆರ್ಥಿಕಾಭಿವೃದ್ಧಿ ಸಂಸ್ಥೆ (ಏಷ್ಯನ್ ಇನ್ಸ್‌ಟಿಟ್ಯೂಟ್ ಫಾರ್ ಎಕನಾಮಿಕ್ ಡೆವೆಲಪ್ಮೆಂಟ್) ಅಸ್ತಿತ್ವಕ್ಕೆ ಬಂತು. ಪರಿಣತ ಯೋಜನಾ ಸಿಬ್ಬಂದಿಗೆ ಇಲ್ಲಿ ತರಬೇತಿ ಕೊಡಲಾಗಿದೆ.
ಸಂಶೋಧನೆ ಮತ್ತು ಅಂಕಿ-ಅಂಶ
[ಬದಲಾಯಿಸಿ]ಏಷ್ಯ ಮತು ದೂರಪ್ರಾಚ್ಯಗಳ ಆರ್ಥಿಕ ಆಯೋಗ ತನ್ನ ಆರಂಭದ ದಿನಗಳಿಂದಲೂ ಸದಸ್ಯರಾಷ್ಟ್ರಗಳಿಗೆ ಸಂಬಂಧಿಸಿದಂತೆ ಉಪಯುಕ್ತ ಅಂಕಿ-ಅಂಶಗಳನ್ನು ಸಂಗ್ರಹಿಸಿ ಪ್ರಕಟಿಸುವ ಕಾರ್ಯದಲ್ಲಿ ತೊಡಗಿದೆ. 1957ರಿಂದ ಏಷ್ಯನ್ ಅಂಕಿ-ಅಂಶ ತಜ್ಞರ ಸಮ್ಮೇಳನಗಳು ಆಗಿಂದಾಗ್ಗೆ ನಡೆಯುತ್ತಿವೆ. ಸದಸ್ಯರಾಷ್ಟ್ರಗಳಲ್ಲಿ ಅಂಕಿ-ಅಂಶ ವಿಧಾನಗಳನ್ನು ಹೆಚ್ಚು ವೈಜ್ಞಾನಿಕವನ್ನಾಗಿ ಮಾಡುವುದು. ಅವುಗಳನ್ನು ಯೋಜನೆಗಳಿಗೆ ಪುರಕವನ್ನಾಗಿ ಮಾಡುವುದು-ಇವು ಈ ಸಮ್ಮೇಳನಗಳ ಗುರಿ. ಜನಸಂಖ್ಯೆ, ಗೃಹವಸತಿ ಮತ್ತು ಕೃಷಿಯ ಬಗ್ಗೆ ಅನೇಕ ಉಪಯುಕ್ತ ಅಂಕಿ-ಅಂಶಗಳನ್ನು ಸಂಗ್ರಹಿಸಲಾಗಿದೆ.
ವಿದೇಶೀ ವ್ಯಾಪಾರ
[ಬದಲಾಯಿಸಿ]ವ್ಯಾಪಾರ ಸಮಿತಿ ಈ ಆಯೋಗದ ಒಂದು ಪ್ರಮುಖ ಅಂಗ. ಸದಸ್ಯರಾಷ್ಟ್ರಗಳ ನಡುವಿನ ವ್ಯಾಪಾರ, ಅದರ ಪ್ರಗತಿ, ಹೊರ ಪ್ರದೇಶದ ವ್ಯಾಪಾರದಿಂದ ಮಂಡಳಿಯ ಮೇಲೆ ಆಗುತ್ತಿರುವ, ಆಗಬಹುದಾದ ಪರಿಣಾಮ-ಇವುಗಳನ್ನು ಕುರಿತು ವಿವೇಚನೆ ನಡೆಸುವುದು ಇದರ ಉದ್ದೇಶ.
ಪ್ರಾದೇಶಿಕ ವ್ಯಾಪಾರ ಒಪ್ಪಂದಗಳಿಂದ (ಉದಾ: ಐರೋಪ್ಯ ಸಾಮಾನ್ಯ ಮಾರುಕಟ್ಟೆ) ಆಯೋಗದ ಸದಸ್ಯರಾಷ್ಟ್ರಗಳ ವ್ಯಾಪಾರದ ಮೇಲಿನ ಪರಿಣಾಮಗಳು, ಆಯಾತ-ನಿರ್ಯಾತ ನಿಯಮಗಳ ಬದಲಾವಣೆಯ ಕಾಯಿದೆಗಳು, ಅಂತಾರಾಷ್ಟ್ರ ವ್ಯಾಪಾರ ಪ್ರದರ್ಶನಗಳ ಸಾಧ್ಯತೆಗಳು, ಜಹಜು ಮತ್ತು ಸಮುದ್ರ ಸಾಗಾಣಿಕೆಯ ಮೇಲೆ ನಿರ್ಧರಿಸಬಹುದಾದ ದರಗಳು, ಸುಂಕನಿರ್ವಹಣೆ, ಪ್ರಾದೇಶಿಕ ವ್ಯಾಪಾರ ಸಹಕಾರ ಸಾಧ್ಯತೆ ಮುಂತಾದವು ವ್ಯಾಪಾರ ಸಮಿತಿಯ ವಾರ್ಷಿಕ ಸಮ್ಮೇಳನಗಳ ಮುಂದೆ ಚರ್ಚಗೆ ಬರುವ ವಿಚಾರಗಳು. ಅಂತಾರಾಷ್ಟ್ರೀಯ ವ್ಯಾಪಾರ ವರ್ಧನ ಸಮ್ಮೇಳನ ಪ್ರತಿವರ್ಷವೂ ನಡೆಯುವು ದುಂಟು. ಸುಂಕನಿಯಮಗಳನ್ನು ಪರಸ್ಪರ ರಾಷ್ಟ್ರಗಳ ಸಡಿಲಗೊಳಿಸಬಹುದಾದ ಸಾಧ್ಯತೆ ಬಗ್ಗೆ ಸುಂಕನಿರ್ವಹಣೆಯ ಕ್ರಿಯಾಮಂಡಲಿ ಅನೇಕ ಶಿಫಾರಸ್ಸುಗಳನ್ನು ಮಾಡಿದೆ. ಇವಲ್ಲದೆ ವಾಣಿಜ್ಯಕ ಪಂಚಾಯತಿ ಪದ್ಧತಿಯ ಪ್ರೋತ್ಸಾಹಕ್ಕಾಗಿ ಒಂದು ಕೇಂದ್ರವನ್ನು ತೆರೆಯಲಾಗಿದೆ. ಅದು ಏಷ್ಯನ್ ರಾಷ್ಟ್ರಗಳ ವ್ಯಾಪಾರದ ಬಗ್ಗೆ ಒಂದು ಒಪ್ಪಂದಕ್ಕೆ ಬರುವುದಕ್ಕೆ ಸಹಾಯ ಮಾಡುತ್ತಿದೆ. 1966ರ ಡಿಸೆಂಬರಿನಲ್ಲಿ ಪ್ರಪ್ರಥಮವಾಗಿ ಥೈಲೆಂಡಿನಲ್ಲಿ ಏಷ್ಯನ್ ಅಂತಾರಾಷ್ಟ್ರೀಯ ವ್ಯಾಪಾರಮೇಳವನ್ನು ನಡೆಸಲಾಯಿತು. ಏಷ್ಯ ಹಾಗೂ ಏಷ್ಯೇತರ ರಾಷ್ಟ್ರಗಳಿಂದ ಸು. 3,000 ರಾಷ್ಟ್ರಗಳು ಈ ಮೇಳದಲ್ಲಿ ಭಾಗವಹಿಸಿದ್ದುವು.
ಕೈಗಾರಿಕೆಯ ಮತ್ತು ಪ್ರಾಕೃತಿಕ ಸಂಪನ್ಮೂಲಗಳು: ಕೈಗಾರಿಕಾ ಕ್ಷೇತ್ರದಲ್ಲಿ ಆಯೋಗದ ಕೆಲಸ ಮುಖ್ಯವಾಗಿ ವಿದ್ಯುಚ್ಛಕ್ತಿ, ಖನಿಜ ಅಭಿವೃದ್ಧಿ, ಎಂಜಿನಿಯರಿಂಗ್, ಸಣ್ಣಪ್ರಮಾಣದ ಕೈಗಾರಿಕೆ, ವಸತಿನಿರ್ಮಾಣ ಇವುಗಳಿಗೆ ಸಂಬಂಧಿಸಿದೆ.
ಏಷ್ಯ ಮತ್ತು ದೂರಪ್ರಾಚ್ಯ ರಾಷ್ಟ್ರಗಳಲ್ಲಿನ ಒಂದು ಪ್ರಮುಖ ಕೊರತೆಯೆಂದರೆ, ವ್ಯವಸ್ಥಿತವಾಗಿ ತಯಾರದ ಕೈಗಾರಿಕಾ ಯೋಜನಾರಾಹಿತ್ಯ ಮತ್ತು ಯಾವ ಯಾವ ಕೈಗಾರಿಕೆಗಳಲ್ಲಿ ಹಣ ನಿವೇಶಿಸಬಹುದು ಮುಂತಾದ ವಿಷಯಗಳ ಬಗ್ಗೆ ಸರಿಯಾದ ಮಾಹಿತಿಯ ಅಭಾವ. ಆದ್ದರಿಂದ ಆಯೋಗ ಪ್ರಾದೇಶಿಕ ಕೈಗಾರಿಕಾ ಸಮಸ್ಯೆಗಳ ಪರೀಶಿಲನೆ ನಡೆಸುತ್ತಿದೆ. ಮಯನ್ಮಾರ್ ಮತ್ತು ಸಿಂಗಪುರಗಳಲ್ಲಿ ಕೈಗಾರಿಕಾ ಸಾಧ್ಯತೆ ಸಮೀಕ್ಷೆ ನಡೆಸಲಾಗಿದೆ. ಕೈಗಾರಿಕಾ ಹಾಗೂ ಪ್ರಕೃತಿ ಸಂಪತ್ತಿನ ಸಮಿತಿಯ ಕೈಕೆಳಗೆ ವಿದ್ಯುಚ್ಛಕ್ತಿ, ಖನಿಜಸಂಪತ್ತು, ಕಬ್ಬಿಣ ಮತ್ತು ಉಕ್ಕು ಇವುಗಳಿಗೆ ಸಂಬಂಧಪಟ್ಟ ಸಮಿತಿಗಳು ಕೆಲಸ ಮಾಡುತ್ತಿವೆ.
ವಿದ್ಯುಚ್ಛಕ್ತಿ
[ಬದಲಾಯಿಸಿ]- ಏಷ್ಯ ಮತ್ತು ದೂರಪ್ರಾಚ್ಯ ಪ್ರದೇಶಗಳ ಪ್ರಗತಿಗೆ ಅತ್ಯಂತ ಮುಖ್ಯವಾದದ್ದು ವಿದ್ಯುಚ್ಛಕ್ತಿ, ಆದ್ದರಿಂದ ಆಯೋಗ ವಿದ್ಯುಚ್ಛಕ್ತಿ ಉತ್ಪನ್ನಕ್ಕೆ ಮೂಲ ಸಂಪತ್ತಾದ ಜಲ, ಕಲ್ಲಿದ್ದಲು ಮತ್ತು ಪರಮಾಣುಶಕ್ತಿ ಸಾಧನಗಳ ಬಗ್ಗೆ ವಿವರವಾದ ಮಾಹಿತಿಯನ್ನು ಸಂಪಾದಿಸಿ ಪ್ರಕಟಿಸುತ್ತಿದೆ. ವಿದ್ಯುಚ್ಛಕ್ತಿ ಬುಲೆಟಿನ್ ಎಂಬ ವಾರ್ಷಿಕ ಪತ್ರಿಕೆಯಲ್ಲಿ ಈ ವಿಷಯಗಳನ್ನು ಪ್ರಕಟಿಸಲಾಗುತ್ತಿದೆ. ವಿದ್ಯುಚ್ಛಕ್ತಿಯ ಸಮಿತಿ ಆಗಿಂದಾಗ್ಗೆ ಸಭೆ ಸೇರಿ ವಿದ್ಯುಚ್ಛಕ್ತಿಗೆ ಸಂಬಂಧಿಸಿದ ವಿಷಯಗಳನ್ನೆಲ್ಲ ಪರಿಶೀಲಿಸುತ್ತದೆ.
ಏಷ್ಯನ್ ರಾಷ್ಟ್ರಗಳಲ್ಲಿ ಕೈಗಾರಿಕೆ ಅಭಿವೃದ್ಧಿಯನ್ನು ತೀವ್ರಗೊಳಿಸುವ ಉದ್ದೇಶದಿಂದ 1966 ಮಾರ್ಚ್ನಲ್ಲಿ ಸ್ಥಾಪಿತವಾದ ಏಷ್ಯನ್ ಕೈಗಾರಿಕಾಭಿವೃದ್ಧಿ ಸಮಿತಿ ಮತ್ತು ಕೈಗಾರಿಕೀಕರಣ ಸಮ್ಮೇಳನ ಖಾಯಂ ವಿಭಾಗಗಳು.
ಪ್ರಾದೇಶಿಕ ಕೈಗಾರಿಕಾಭಿವೃದ್ಧಿ ಮತ್ತು ಯೋಜನಾ ಕೇಂದ್ರ ಸ್ಥಾಪಿತವಾದದ್ದು 1965ರ ಜನವರಿಯಲ್ಲಿ. ಸದಸ್ಯರಾಷ್ಟ್ರಗಳಲ್ಲಿ ರಾಷ್ಟ್ರೀಯ ಕೈಗಾರಿಕಾ ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದ ವಿಷಯಗಳನ್ನು ಸಂಗ್ರಹಿಸುವುದು ಮತ್ತು ಮಾಹಿತಿಯನ್ನು ಪ್ರಕಟಿಸುವುದು, ಸಹಕಾರ ಸಾಧ್ಯವಿರುವ ಕೈಗಾರಿಕಾ ಕ್ಷೇತ್ರಗಳನ್ನು ಗುರುತಿಸುವುದು-ಮುಂತಾದ ನಾನಾ ವಿಚಾರಗಳಲ್ಲಿ ಇದರ ಪರಿಣತರು ಸೇವೆ ಸಲ್ಲಿಸುತ್ತಿದ್ದಾರೆ.
ಗ್ರಾಮಾಂತರ ಪ್ರದೇಶಗಳ ವಿದ್ಯುಚ್ಛಕ್ತಿ ಆವಶ್ಯಕತೆಗಳನ್ನು ಆಯೋಗ ಮನಗಂಡಿದೆ. ಈ ಬಗ್ಗೆ ಅದು ವಿವರವಾದ ಅಧ್ಯಯನ ನಡೆಸಿ ಮಾಹಿತಿಯನ್ನು ಪ್ರಕಟಿಸಿದೆ. ಗ್ರಾಮಾಂತರ ವಿದ್ಯುಚ್ಛಕ್ತಿ ಸರಬರಾಯಿಯ ವಿಷಯದಲ್ಲಿ ಪರಿಣತರ ತಂಡವೊಂದು ರಚಿತವಾಗಿದೆ.
ಸದಸ್ಯರಾಷ್ಟ್ರಗಳ ಕೋರಿಕೆಯ ಮೇರೆಗೆ ಅವುಗಳಿಗೆ ಭೇಟಿ ನೀಡಿ ಸಲಹೆ ನೀಡುವುದು ಈ ತಂಡದವರ ಕಾರ್ಯಭಾರ.
ಖನಿಜ ಸಂಪತ್ತಿನ ಅಭಿವೃದ್ಧಿ
[ಬದಲಾಯಿಸಿ]ಆಯೋಗದ ಭೂವಿಜ್ಞಾನ ಕಾರ್ಯತಂಡ 1954ರಲ್ಲಿ ತನ್ನ ಕೆಲಸ ಪ್ರಾರಂಭಿಸಿ, ಈ ಪ್ರದೇಶದ ಭೂವೈಜ್ಞಾನಿಕ ಪಟಗಳ ಕೆಲಸ ಮುಗಿಸಿದೆ. ಈ ಕ್ಷೇತ್ರದ ಪ್ರತಿಯೊಂದು ರಾಷ್ಟ್ರಕ್ಕೂ ಭೂವೈಜ್ಞಾನಿಕ ಹಾಗೂ ಖನಿಜ ಸಾಧನೆಗಳ ಪಟಗಳನ್ನು ತಯಾರಿಸಲಾಗಿದೆ. ಭಾರತದ ಭೂವೈಜ್ಞಾನಿಕ ಸರ್ವೆಯ ನಿರ್ದೇಶಕರು ಪ್ರಾದೇಶಿಕ ಭೂವೈಜ್ಞಾನಿಕ ಪಟಗಳ ಸಮನ್ವಯಾಧಿಕಾರಿಯಾಗಿದ್ದರು. ಪೆಟ್ರೋಲಿಯಂ ಕ್ಷೇತ್ರದಲ್ಲಿ ಸಮಾವೇಶ ನಡೆಸಲು ಆಸಕ್ತಿವಹಿಸಿದ ಪ್ರಥಮ ವಿಶ್ವಸಂಸ್ಥೀಯ ಅಂಗವೆಂದರೆ ಇದೇ. 1958 ಡಿಸೆಂಬರ್ನಲ್ಲಿ ಏಷ್ಯ ಹಾಗೂ ದೂರಪ್ರಾಚ್ಯದ ಪೆಟ್ರೋಲಿಯಂ ಸಂಪತ್ತಿನ ಅಭಿವೃದ್ಧಿಯನ್ನು ಕುರಿತ ಸಮಾವೇಶವನ್ನು ನವದೆಹಲಿಯಲ್ಲಿ ನಡೆಸಲಾಯಿತು. ಎರಡನೆಯ ಸಮಾವೇಶ ಸೇರಿದ್ದು 1962 ಸೆಪ್ಟೆಂಬರ್ನಲ್ಲಿ-ಟೆಹರಾನಿನಲ್ಲಿ.
ಎಂಜಿನಿಯರಿಂಗ್
[ಬದಲಾಯಿಸಿ]ಲೋಹ ಮತ್ತು ಎಂಜಿನಿಯರಿಂಗ್ ಉಪಸಮಿತಿಯ ಮೂಲಕ ಏಷ್ಯ ಹಾಗೂ ಏಷ್ಯೇತರ ತಜ್ಞರನ್ನು ವಿಚಾರ ವಿನಿಮಯಕ್ಕಾಗಿ ಒಂದುಗೂಡಿಸಲಾಗುತ್ತಿದೆ. ಈ ಉಪಸಮಿತಿ ಕಬ್ಬಿಣ ಮತ್ತು ಉಕ್ಕಿನ ಉತ್ಪಾದನೆಗಳ ಬಗ್ಗೆ ಹೊಸ ವಿಧಾನವನ್ನು ಸೂಚಿಸಿದೆ. ಈ ಪ್ರದೇಶದ ದೇಶಗಳಲ್ಲಿ ಸಿಗುವ ನಾನ್ಕೋಕಿಂಗ್ ಕಲ್ಲಿದ್ದಲನ್ನು ಹೇಗೆ ಉಪಯೋಗಿಸಿಕೊಳ್ಳಬಹುದೆಂಬುದರ ಬಗ್ಗೆ ಸಲಹೆಗಳನ್ನು ಕೊಟ್ಟಿದೆ. ಆಗಿಂದಾಗ್ಗೆ ಪ್ರಕಟವಾಗುವ ‘ಕಬ್ಬಿಣ ಮತ್ತು ಉಕ್ಕು’ ಪತ್ರಿಕೆಯ ಮೂಲಕ ಈ ಬಗ್ಗೆ ಉಪಯುಕ್ತ ಮಾಹಿತಿಗಳು ಪ್ರಕಟವಾಗುತ್ತಿವೆ.
ಹಡಗು ಮತ್ತು ದೋಣಿ ನಿರ್ಮಾಣ, ಯಂತ್ರ ಕೈಗಾರಿಕೆ ಮುಂತಾದವಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಆಯೋಗ ಪರಿಶೀಲಿಸುತ್ತದೆ. ಇವುಗಳ ಅಭಿವೃದ್ಧಿಯ ಬಗ್ಗೆ ಇದು ಸದಸ್ಯರಾಷ್ಟ್ರಗಳಿಗೆ ನೀಡುತ್ತಿರುವ ಸಲಹೆ ಸಹಾಯ ಅಪಾರ.
ವಸತಿನಿರ್ಮಾಣ:
[ಬದಲಾಯಿಸಿ]ಕಡಿಮೆ ವರಮಾನದ ಜನಗಳ ವಸತಿ ಸಮಸ್ಯೆಗಳನ್ನು ಬಗೆಹರಿಸಲು ಪ್ರತ್ಯೇಕವಾದ ಕಾರ್ಯತಂಡವೊಂದುಂಟು. ವಸತಿ ನಿರ್ಮಾಣ ಸಮಸ್ಯೆಗಳನ್ನು ಸತತವಾಗಿ ಅಭ್ಯಸಿಸಲು ವಿಶ್ವರಾಷ್ಟ್ರಸಂಸ್ಥೆ ಮತ್ತಿತರ ರಾಷ್ಟ್ರಗಳ ಸಹಕಾರದೊಂದಿಗೆ ನವದೆಹಲಿ ಮತ್ತು ಬಾಂಡುಂಗ್ಗಳಲ್ಲಿ ಪ್ರಾದೇಶಿಕ ಗೃಹನಿರ್ಮಾಣ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸಾರಿಗೆ ಮತ್ತು ಸಂಪರ್ಕ: ಇದಕ್ಕೆ ಸಂಬಂಧಪಟ್ಟ ಸಮಸ್ಯೆಗಳ ಪರಿಹಾರಕ್ಕಾಗಿ ಒಳನಾಡಿನ ಸಾರಿಗೆ ಮತ್ತು ಸಂಪರ್ಕ ಸಮಿತಿ ವಿವಿಧ ಸಾರಿಗೆ ವ್ಯವಸ್ಥೆಗಳ ಸಮನ್ವಯ ಸಾಧ್ಯತೆ, ಸಾರಿಗೆ ಅಭಿವೃದ್ಧಿ ಮತ್ತು ಯೋಜನೆ ಮುಂತಾದ ವಿಷಯಗಳಲ್ಲಿ ಅಧ್ಯಯನ ನಡೆಸಿದೆ. ರೈಲ್ವೆ ಮತ್ತು ರಸ್ತೆ ಸಾರಿಗೆ ಸಂಪರ್ಕ ಮುಂತಾದವುಗಳ ಅಭಿವೃದ್ಧಿಗಾಗಿ ಅನೇಕ ಅಧ್ಯಯನ ತಂಡಗಳೂ ಸಮೀಕ್ಷೆಗಳೂ ನಡೆದಿವೆ. ಆಯೋಗದ ಗಮನ ಸೆಳೆದಿರುವ ಇನ್ನೊಂದು ಮುಖ್ಯ ವಿಚಾರವೆಂದರೆ ಪ್ರವಾಸೋದ್ಯಮ.
ಪ್ರವಾಹ ಹತೋಟಿ, ಜಲಸಂಪತ್ತು ಮತ್ತು ಕೃಷಿ ಅಭಿವೃದ್ಧಿ
[ಬದಲಾಯಿಸಿ]ಪ್ರವಾಹ ಹತೋಟಿ ಮತ್ತು ಜಲಸಂಪದಭಿವೃದ್ದಿ ಬ್ಯೂರೋವನ್ನು 1949ರಲ್ಲಿ ಸ್ಥಾಪಿಸಲಾಯಿತು. ಈ ಬ್ಯೂರೋ ಸದಸ್ಯ ರಾಷ್ಟ್ರಗಳಲ್ಲಿನ ಜಲಸಂಪದಭಿವೃದ್ದಿಯನ್ನು ಕುರಿತ ವಿಷಯಗಳ ಅಧ್ಯಯನ, ಪ್ರಕಟನೆ, ಸೂಕ್ತನೆರವು ನೀಡುತ್ತಿರುವುದಲ್ಲದೆ ಕೃಷಿ ಅಭಿವೃದ್ಧಿಗಾಗಿ ಈ ಆಯೋಗ ಆಹಾರ ಮತ್ತು ಕೃಷಿ ಸಂಸ್ಥೆಯೊಂದಿಗೆ ಸಹವರ್ತಿಸುತ್ತಿದೆ. (ಸಿ.ಕೆ.ಆರ್.)