ವಿಷಯಕ್ಕೆ ಹೋಗು

ಏಷ್ಯದ ಪ್ರಾಗಿತಿಹಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಏಷ್ಯದ ಪ್ರಾಗಿತಿಹಾಸ: ವಿಶ್ವದಲ್ಲೇ ಬಲುದೊಡ್ಡದಾದ ಏಷ್ಯ ಖಂಡ ಆದಿಕಾಲದಿಂದಲೂ ವೈವಿಧ್ಯಗಳ ಆಗರವೆನಿಸಿದೆ. ಈ ವೈವಿಧ್ಯಗಳನ್ನು ಮಾನವನ ಉಗಮ ಕಾಲದಿಂದಲೇ ನೋಡಬಹುದು.

ಪೂರ್ವಶಿಲಾಯುಗ

[ಬದಲಾಯಿಸಿ]

ಪೂರ್ವಶಿಲಾಯುಗದ ಆರಂಭ ಕಾಲದಲ್ಲಿ ಮಾನವ ಆಫ್ರಿಕ ಪ್ರದೇಶಗಳಲ್ಲಿ ಉಗಮ ಹೊಂದಿ ತನ್ನ ಸಂಸ್ಕೃತಿ ಕಾರ್ಯವನ್ನು ಪ್ರಾರಂಭಿಸಿ ಕ್ರಮೇಣ ವಿಶ್ವದ ಇತರ ಭಾಗಗಳಿಗೆ ಪ್ರಸರಿಸಿದನೆಂಬುದು ಕೆಲವು ವಿದ್ವಾಂಸರ ನಂಬಿಕೆ. ಈ ವಿಷಯದಲ್ಲಿ ಖಚಿತವಾದ ಸಾಕ್ಷ್ಯಾಧಾರಗಳು ಇನ್ನೂ ದೊರಕಿಲ್ಲ. ಮಧ್ಯ ಪ್ಲಿಸ್ಟೊಸೀನ್ ಯುಗದ ವೇಳೆಗಾಗಲೇ ಏಷ್ಯದ ಹಲವು ಭಾಗಗಳಲ್ಲಿ ಮಾನವನಿದ್ದ ಬಗ್ಗೆ ಆಧಾರಗಳು ಸಿಕ್ಕಿವೆ. ಇಂಡೋನೇಷ್ಯದ ಜಾವದ್ವೀಪ ಮತ್ತು ಚೀನದ ರಾಜಧಾನಿ ಪೀಕಿಂಗ್ ಬಳಿಯ ಚೌಕಾಟಿಯನ್ ಗುಹೆಗಳಲ್ಲಿ ಪುರ್ವ ಶಿಲಾಯುಗದ ಆದಿಕಾಲಕ್ಕೆ ಸೇರಿದ ಮಾನವನ ಪಳೆಯುಳಿಕೆಗಳು (ಫಾಸಿಲ್ಸ್‌) ದೊರಕಿದ್ದು ಆತ ಏಷ್ಯದ ಕಪಿಮಾನವ (ಪಿಥೆಕಾಂಥ್ರೋಪಸ್ ಏಷ್ಯಾಟಿಕಸ್) ಸಂತತಿಗೆ ಸೇರಿದವನೆಂದು ತಿಳಿದುಬಂದಿದೆ. ಇಂಡೋನೇಷ್ಯದ ಪಜ್ಜಿಟೇನಿಯನ್, ಚೀನದ ಚೌಕಾಟಿಯನ್, ಮಲೆಯದ ತಂಪಾನಿಯನ್, ಮಯನ್ಮಾರ್ನ ಅನ್ಯಾಥಿಯನ್ ಮತ್ತು ವಾಯವ್ಯ ಭಾರತದ ಸೋಹನ್ ಸಂಸ್ಕೃತಿಗಳು ಉಂಡೆಕಲ್ಲಿನಿಂದ ಮಾಡಿದ ತುಂಡುಕೊಡಲಿ, ಒರೆಯುವ ಕತ್ತಿ ಮತ್ತು ಚಕ್ಕೆಕಲ್ಲಿನಾಯುಧಗಳಿಂದ ಕೂಡಿ ಒಂದೇ ರೀತಿಯವಾಗಿರುವುದರಿಂದ ಈ ಕಪಿಮಾನವನೇ ಈ ಸಂಸ್ಕೃತಿಗಳ ಕರ್ತೃವೆಂದು ಅಭಿಪ್ರಾಯ ಪಡಲಾಗಿದೆ. ಇದೇ ಕಾಲದಲ್ಲಿ ಭಾರತದ ಇತರ ಭಾಗಗಳಲ್ಲಿ (ಮುಖ್ಯವಾಗಿ ಮಧ್ಯ ಮತ್ತು ದಕ್ಷಿಣಭಾರತ) ಮತ್ತು ಪಶ್ಚಿಮ ಏಷ್ಯದ ಅನೇಕ ಭಾಗಗಳಲ್ಲಿ ಇದಕ್ಕಿಂತಲೂ ಮುಂದುವರಿದ ಕೈಗೊಡಲಿ ಸಂಸ್ಕೃತಿ ಹರಡಿತ್ತು. ಭಾರತ ಪರ್ಯಾಯದ್ವೀಪದ ನರ್ಮದ, ಗೋದಾವರಿ, ಕೃಷ್ಣ ಮತ್ತು ಪಾಲಾರ್ ನದೀಕಣಿವೆಗಳಲ್ಲಿ ಅಬೆವಿಲಿಯನ್ ಮತ್ತು ಅಷುಲಿಯನ್ ಹಂತಗಳಿಗೆ ಸೇರಿದ ಕೈಗೊಡಲಿ ಸಂಸ್ಕೃತಿ ಬಹಳ ಪ್ರಬಲವಾಗಿತ್ತು. ಪಶ್ಚಿಮ ಏಷ್ಯದಲ್ಲಿ ಇತ್ತೀಚಿನ ಸಂಶೋಧನೆಗಳಿಂದ ಈ ಸಂಸ್ಕೃತಿಯ ವಿಷಯ ಸ್ವಲ್ಪಮಟ್ಟಿಗೆ ಬೆಳಕಿಗೆ ಬಂದಿದೆ. ಇರಾನಿನ ಅನೇಕ ಪರ್ವತಗುಹೆ ಮತ್ತು ಮೈದಾನ ಪ್ರದೇಶಗಳಲ್ಲೂ ಮಧ್ಯ ಅರೇಬಿಯದ ಅಡ್ಡಾವಾದಿಮಿ, ಇರಾಕಿನ ಬಾರ್ಡಾಬಲ್ಕಾ, ಜಾರ್ಡನಿನ ಬಯಿರ್ವೆಲ್ಸ್‌ ಬಳಿಯಲ್ಲೂ ವಿವಿಧ ಹಂತಗಳಿಗೆ ಸೇರಿದ ಕೈಗೊಡಲಿ ಮತ್ತು ಇತರ ಆಯುಧಗಳು ದೊರಕಿ, ಪುರ್ವಶಿಲಾಯುಗದ ಮಾನವನ ಬಗೆಗೆ ಮಾಹಿತಿಗಳನ್ನು ಒದಗಿಸಿವೆ. ಪುರ್ವ ಏಷ್ಯ ಪ್ರದೇಶಗಳಲ್ಲಿ ಮೇಲೆ ಹೇಳಿದ ಉಂಡೆಕಲ್ಲಿನಾಯುಧಗಳ ಸಂಸ್ಕೃತಿಗಳು ಪ್ಲಿಸ್ಟೋಸೀನ್ ಯುಗದ ಬಹುಭಾಗದವರೆಗೂ ಮುಂದುವರಿಯುತ್ತಿದ್ದು ಅಂತ್ಯಭಾಗದಲ್ಲಿ ಸ್ವಲ್ಪಮಟ್ಟಿಗೆ ಬದಲಾವಣೆ ಹೊಂದಿದಂತೆ ಕಾಣುತ್ತದೆ. ವಾಯವ್ಯ ಭಾರತದ ಸುಧಾರಿತ ಸೋಹನ್ ಸಂಸ್ಕೃತಿ ಮತ್ತು ಚೌಕಾಟಿಯನ್ ಮೇಲ್ಗುಹೆಯಲ್ಲಿನ ಅವಶೇಷಗಳು ಈ ಹಂತಕ್ಕೆ ಸೇರಿದವು. ಮೊದಲ ಕಾಲದ ತುಂಡು ಕೊಡಲಿ ಮತ್ತು ಒರೆಯುವ ಕತ್ತಿಗಳ ಬಳಕೆ ಅಲ್ಪಸ್ವಲ್ಪ ಮುಂದುವರಿದರೂ ಈ ಹಂತದಲ್ಲಿ ಚಕ್ಕೆಕಲ್ಲುಗಳಿಂದ ಮಾಡಿದ ಒರೆಯುವ ಆಯುಧ ಮತ್ತು ಮೊನೆಗಳೇ ಪ್ರಧಾನವಾಗಿದ್ದುವು. ಚೀನಾದ ಷಾನ್ಸಿ ಪ್ರಾಂತ್ಯದ ಟಿಂಗ್ತ್ಸುನ್ ನೆಲೆಯಲ್ಲೂ ಈ ರೀತಿಯ ಅವಶೇಷಗಳು ದೊರಕಿವೆ.

ಕೈಗೊಡಲಿ ಸಂಸ್ಕೃತಿಗಳು ಬಳಕೆಯಲ್ಲಿದ್ದ ದಕ್ಷಿಣ ಮತ್ತು ಪಶ್ಚಿಮ ಏಷ್ಯದ ಅನೇಕ ಪ್ರದೇಶಗಳಲ್ಲಿ ಆಯುಧ ತಯಾರಿಕೆ ವಿಧಾನಗಳಲ್ಲಿ ಪ್ರಗತಿ ಕಂಡುಬಂದದ್ದಲ್ಲದೆ ಕ್ರಮೇಣ ಕೈಗೊಡಲಿ ಸಂಸ್ಕೃತಿ ಮರೆಯಾಗಿ ಚಕ್ಕೆಕಲ್ಲಿನಾಯುಧಗಳು ಹೆಚ್ಚು ಬಳಕೆಗೆ ಬಂದುವು. ಭಾರತದ ಬಹುಭಾಗಗಳಲ್ಲಿ ಮಧ್ಯ ಶಿಲಾಯುಗ ಸಂಸ್ಕೃತಿಯೆಂದು ಹೆಸರಾಗಿರುವ ಈ ಸಂಸ್ಕೃತಿಯಲ್ಲಿ ಆಯ್ದ ಕಲ್ಲುಗಳಿಂದ ಮಾಡಿದ ಸಣ್ಣ ಗಾತ್ರದ ವಿವಿಧ ರೀತಿಯ ಒರೆ ಯುವ, ಕೊರೆಯುವ ಆಯುಧ ಗಳೂ ಮೊನೆಗಳೂ ಪ್ರಧಾನವಾಗಿವೆ. ಪಶ್ಚಿಮ ಏಷ್ಯ ಪುರ್ವಶಿಲಾಯುಗ ಸಂಸ್ಕೃತಿಗಳ ಕೇಂದ್ರವಾದ ಯುರೋಪಿನ ನೆರೆಯಲ್ಲಿದ್ದದ್ದರಿಂದ ಅಲ್ಲಿನ ಪ್ರಭಾವ ಹೆಚ್ಚಾಗಿದ್ದು ಅಲ್ಲಿನ ಮಧ್ಯಶಿಲಾಯುಗೀನ ಮೌಸ್ಟೀರಿ ಯನ್ ಮತ್ತು ಲೆವಾಲ್ವಾಸಿಯನ್ ಸಂಸ್ಕೃತಿಯ ರೀತಿಯ ಅವಶೇಷ ಗಳು ಉತ್ತರ ಆಫ್ಘಾನಿಸ್ತಾನದ ಬ್ಯಾಕ್ಟ್ರಿಯ ಪ್ರದೇಶದ ಬಾಲ್ಕ್‌ ಮತ್ತು ಹೈಬಕ್ ಪಟ್ಟಣಗಳ ಪರಿಸರದಲ್ಲೂ ಇರಾನಿನ ಕರ್ಮನ್ಫಾ ಮತ್ತು ಇರಾಕಿನ ಕುರ್ಡಿಸ್ತಾನದಲ್ಲಿ ಹಲವೆಡೆಗಳಲ್ಲೂ ಸಿರಿಯ ಮತ್ತು ಪ್ಯಾಲೆಸ್ಟೈನಿನ ಹಲವಾರು ಪ್ರದೇಶಗಳಲ್ಲೂ ದೊರಕಿವೆ.

ಪಶ್ಚಿಮ ಏಷ್ಯ ಪುರ್ವಶಿಲಾ ಯುಗದ ಅಂತ್ಯಭಾಗದಲ್ಲಿ ಮಾನವನ ಕಾರ್ಯರಂಗದ ಕೇಂದ್ರ ವಾಗಿತ್ತು. ಆಧುನಿಕ ಮಾನವ (ಹೋಮೋಸೇಪಿಯನ್) ಈ ಪ್ರದೇಶದಲ್ಲಿ ಉಗಮಿಸಿ ಕ್ರಮೇಣ ಯುರೋಪಿಗೆ ಕೂರಲಗು ಆಯುಧಗಳ ಸಂಸ್ಕೃತಿಗಳೊಂದಿಗೆ ಪ್ರವೇಶಿಸಿ, ಅಲ್ಲಿನ ಪುರ್ವಶಿಲಾಯುಗದ ಅಂತ್ಯಕಾಲೀನ ಸಂಸ್ಕೃತಿಗೂ ಅಭೂತಪುರ್ವ ಕಲೆಗಳಿಗೂ ಕಾರಣಕರ್ತನಾದನೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಆತ ಯುರೋಪಿನಲ್ಲಿ ಸಾಧಿಸಿದಷ್ಟು ಪ್ರಗತಿಯನ್ನು ತನ್ನ ಉಗಮಸ್ಥಾನವಾದ ಪ್ಯಾಲೆಸ್ಟೈನಿನಲ್ಲಿ ಸಾಧಿಸದಿದ್ದರೂ ಪಶ್ಚಿಮ ಏಷ್ಯದ ಅನೇಕ ಪ್ರದೇಶಗಳಲ್ಲಿ ಇಂಥ ಸಂಸ್ಕೃತಿಗಳ ಅವಶೇಷಗಳನ್ನು ಉಳಿಸಿದ್ದಾನೆ. ಇರಾಕ್, ಪ್ಯಾಲೆಸ್ಟೈನ್, ಸಿರಿಯ ಮತ್ತು ಜಾರ್ಡನ್ಗಳಲ್ಲಿ ಈ ಅವಶೇಷಗಳು ದೊರಕಿವೆ.

ಮಧ್ಯಶಿಲಾಯುಗ

[ಬದಲಾಯಿಸಿ]

ಮಧ್ಯ ಶಿಲಾಯುಗಕ್ಕೆ ಸೇರಿದ ಸೂಕ್ಷ್ಮ ಶಿಲಾಯುಗದ ಸಂಸ್ಕೃತಿಗಳು ಸಹ ಪಶ್ಚಿಮ ಏಷ್ಯದಲ್ಲಿ ವಿಶೇಷವಾಗಿ ನೆಲೆಸಿದ್ದವು. ಜಾರ್ಡನಿನ ಆಗ್ನೇಯ ಭಾಗಗಳಲ್ಲಿ ಅಂತ್ಯಪುರ್ವಶಿಲಾಯುಗದಿಂದ ಕ್ರಮೇಣ ಬದಲಾಗುತ್ತ ಮಧ್ಯಶಿಲಾಯುಗೀನ ಸಂಸ್ಕೃತಿರೂಪಕ್ಕೆ ಪರಿವರ್ತನೆಗೊಳ್ಳುತ್ತಿರುವ ಹಂತದ ಅವಶೇಷಗಳು ಕಂಡುಬಂದಿವೆ. ಪ್ಯಾಲೆಸ್ಟೈನಿನ ಮೌಂಟ್ ಕಾರ್ಮೆಲಿನ ವಾಡಿ-ಎಲ್-ನಟೂಫ್ ಗುಹೆಗಳಲ್ಲಿನ ಸೂಕ್ಷ್ಮಶಿಲಾಯುಧದ ನಟೂಫಿಯನ್ ಸಂಸ್ಕೃತಿ ಬಹಳ ಪ್ರಸಿದ್ಧವಾದದ್ದು. ಇದು ಯುರೋಪಿನ ಸಮಕಾಲೀನ ಸೂಕ್ಷ್ಮಶಿಲಾಯುಧ ಸಂಸ್ಕೃತಿಗಳನ್ನು ಹೋಲುತ್ತಿದ್ದರೂ ಕ್ರಮೇಣ ಮಾನವನ ಸಂಸ್ಕೃತಿಯ ಪ್ರಗತಿ ಯಲ್ಲಿ ಪ್ರಧಾನ ಹಂತವಾದ ಆಹಾರೋತ್ಪಾದನೆಗೆ ಕಾರಣವಾದ ನವಶಿಲಾಯುಗ ಕ್ರಾಂತಿಗೆ ಈ ನಟೂಫಿಯನ್ ಸಂಸ್ಕೃತಿಯೇ ಮೂಲಾಧಾರವೆಂದು ಪ್ರಾಕ್ತನ ಶಾಸ್ತ್ರಜ್ಞರು ಸಾಧಿಸಿದ್ದಾರೆ. ಈ ಜನ ಮೊದಲ ಹಂತದ ವ್ಯವಸಾಯೋ ದ್ಯಮ ಮತ್ತು ಪಶುಪಾಲನೆಯನ್ನು ರೂಢಿಗೆ ತಂದವರೆಂಬುದನ್ನು ಇವರು ಉಪಯೋಗಿಸುತ್ತಿದ್ದ. ಅಲಂಕೃತ ಕುಡುಗೋಲು ಮತ್ತು ಅರೆಯುವ ಕಲ್ಲುಗಳು ವ್ಯಕ್ತಪಡಿ ಸುತ್ತವೆ. ಇವರು ಪರ್ವತಗುಹೆ ಗಳಿಂದ ಕ್ರಮೇಣ ಮೈದಾನ ಪ್ರದೇಶಗಳಿಗೆ ವಲಸೆ ಬರುತ್ತಿದ್ದ ರೆಂಬುದು ಸ್ವಲ್ಪ ಅನಂತರದ ಕಾಲದ ಐನ್ ಮಲ್ಲಹಾ ನೆಲೆ ಯಿಂದ ಸಿದ್ಧಪಡುತ್ತದೆ. ಮುಂದಿನ ಹಂತವನ್ನು ರೂಪಿಸುವ ಜೆರಿಕೋ ನೆಲೆಯ ಕೆಳಗಿನ ಪದರಗಳ ಸಂಸ್ಕೃತಿಯೊಂದಿಗೆ ಸಂಪರ್ಕ ವಿತ್ತೆಂಬುದನ್ನೂ ಇದು ಸೂಚಿಸು ತ್ತದೆ. ಸಿರಿಯ, ಇರಾಕಿನ ಹಜರ್ ಮದ್ ಮತ್ತು ಷನಿದಾರ್ ಗುಹೆಗಳು, ಜರ್ಜಿ ಮತ್ತು ಪಲೇಗಾವ್ರಾ ನೆಲೆಗಳು, ಇರಾನಿನ ಕರ್ಮನ್ಕ್ಷಾ ಬಳಿಯ ಟಿಪೆ ಅಸಿಯಾಬ್, ಆಫ್ಘಾನಿಸ್ತಾನದ ಕಾರಾಕಾಮರ್ ಮುಂತಾದೆಡೆ ಗಳಲ್ಲೂ ಸಮಕಾಲೀನ ಸೂಕ್ಷ್ಮಶಿಲಾಯುಧ ಸಂಸ್ಕೃತಿಗಳ ಅವಶೇಷಗಳು ದೊರಕಿವೆ.

ಭಾರತದಲ್ಲಿ ಮಧ್ಯಶಿಲಾಯುಗಕ್ಕೆ ಸೇರುವ ಸೂಕ್ಷ್ಮಶಿಲಾಯುಧ ಸಂಸ್ಕೃತಿಗಳ ಅವಶೇಷಗಳು ಹಲವಾರೆಡೆಗಳಲ್ಲಿ ಸಿಕ್ಕಿವೆ. ದಕ್ಷಿಣದಲ್ಲಿ ತಿರುನೆಲ್ವೇಲಿ ಜಿಲ್ಲೆಯಲ್ಲಿರುವ ಸಾಯರ್ಪುರಂ ಮುಂತಾದ ತೇರಿನೆಲೆಗಳಲ್ಲೂ ದಾಮೋದರ್ ನದೀಕಣಿವೆಯಲ್ಲಿರುವ ಬೀರ್ಭಾನ್ಪುರದ ಬಳಿಯೂ ಸಿಂಗ್ರೌಲಿ ನದೀಕಣಿವೆಯಲ್ಲಿ ವಿಂಧ್ಯಪರ್ವತದ ಪಚ್ಮಾರಿ ಮುಂತಾದ ಪ್ರದೇಶದಲ್ಲೂ ಮುಂಬಯಿ ಬಳಿಯ ಖಾಂಡಿವ್ಲಿ ಮತ್ತು ಬೋರಿವ್ಲಿ ಬಳಿಯೂ ದೊರಕಿರುವ ಸೂಕ್ಷ್ಮಶಿಲಾಯುಧ ಸಂಸ್ಕೃತಿಗಳ ಅವಶೇಷಗಳು ಪ್ರ.ಶ.ಪು. 4-5ನೆಯ ಸಹಸ್ರಮಾನಗಳಿಗೋ ಇನ್ನೂ ಮೊದಲಕಾಲಕ್ಕೋ ನಿರ್ದೇಶಿತವಾದರೆ ಇತರೆಡೆಗಳಲ್ಲಿನ ಆ ಸಂಸ್ಕೃತಿಯ ಮಾಹಿತಿಗಳು ಅನಂತರದ ಕಾಲಕ್ಕೆ ಸೇರುತ್ತವೆ. ಗುಜರಾತಿನ ಲಂಘನಾಜ್, ಹೀರ್ಪುರ, ಪಾಕಿಸ್ತಾನದ ಸುಕ್ಕೂರ್ ಮತ್ತು ರೋಹ್ರಿಗಳಲ್ಲಿ ಈ ಹಂತದಿಂದ ಕ್ರಮೇಣ ಆಹಾರೋತ್ಪಾದನೆಯ ಹಂತವನ್ನು ತಲುಪುತ್ತಿರುವ ಮಾಹಿತಿಗಳೂ ಕಂಡುಬಂದಿವೆ.

ಸಮಕಾಲೀನ ಚೀನದಲ್ಲಿ ಮಧ್ಯಶಿಲಾಯುಗ ಸಂಸ್ಕೃತಿಗಳ ರೂಪ ಬೇರೆಯಾಗಿಯೇ ಕಂಡುಬಂದಿದೆ. ಪ್ಲಿಸ್ಟೊಸೀನ್ ಯುಗದ ಅಂತ್ಯಭಾಗದಲ್ಲಿ ಬಳಕೆಗೆ ಬಂದ ಆರ್ಡಾಸ್ ಸಂಸ್ಕೃತಿ ಹಳದಿ ನದಿಯ ತಿರುವಿನಲ್ಲಿರುವ ಆರ್ಡಾಸ್ ಹುಲ್ಲುಗಾವಲು ಪ್ರದೇಶದ ದಕ್ಷಿಣದಂಚಿನಲ್ಲಿ ಕಂಡುಬಂದಿದೆ. ಸಮಕಾಲೀನ ಮಾನವ ಅವಶೇಷಗಳು ಈವರೆಗೂ ದೊರಕಿಲ್ಲ. ಷು ಇ ಟುಂಗ್ ಕಾ ಎಂಬ ನೆಲೆಯಲ್ಲಿ ಬೂದಿಯೊಡ ಗೂಡಿದ ಐದು ಒಲೆಗಳೂ ಹೇರಳವಾಗಿ ಕಲ್ಲಿನಾಯುಧಗಳೂ ದೊರಕಿವೆ. ಒರೆಯುವ, ಕೊರೆಯುವ ಆಯುಧಗಳೂ ಮೊನೆಗಳೂ ವಿಶೇಷವಾಗಿರುವ ಈ ಸಂಸ್ಕೃತಿಯನ್ನು ಪ್ಲೀಸ್ಟೋಸಿನ್ ಯುಗದ ಅಂತ್ಯಭಾಗಕ್ಕೆ ನಿರ್ದೇಶಿಸ ಲಾಗಿದ್ದರೂ ಮಧ್ಯಶಿಲಾಯುಗ ಸಂಸ್ಕೃತಿಗಳ ಹಲವಂಶಗಳು ಇಲ್ಲಿ ಕಂಡುಬಂದು ಇವು ಮುಂದಿನ ಹಂತವನ್ನು ಸೂಚಿಸುವುವೆಂದು ಹೇಳಬಹುದಾಗಿದೆ. ಅನಂತರದ ಕಾಲದಲ್ಲಿ ಯುರೋಪಿನ ಸೂಕ್ಷ್ಮಶಿಲಾಯುಧ ಸಂಸ್ಕೃತಿಗಳಿಗೆ ಹೋಲಿಸಬಹುದಾದ ಸಂಸ್ಕೃತಿಗಳ ಅವಶೇಷಗಳು ವಿಶೇಷವಾಗಿಲ್ಲದಿದ್ದರೂ ದಕ್ಷಿಣದ ಕ್ವಾಂಗ್ಸೀ ಪ್ರದೇಶದ ಗುಹೆಯಲ್ಲಿನ ಅವಶೇಷಗಳು ವಿಯೆಟ್ನಾಮಿನ ಬ್ಯಾಕ್ಸನ್ ಸಂಸ್ಕೃತಿಯನ್ನು ಹೋಲುತ್ತವೆ. ಉತ್ತರದಲ್ಲಿ ಮಂಗೋಲಿಯ, ಮಂಚೂರಿಯ ಪ್ರದೇಶಗಳಲ್ಲಿ ಹವಾಗುಣದ ಬದಲಾವಣೆಯಿಂದ ಆಹಾರ ಸಂಗ್ರಹಣೆ ಮತ್ತು ಬೇಟೆಯ ಮೇಲೆ ಆಧಾರಿತವಾಗಿದ್ದ ಸಂಸ್ಕೃತಿಗಳು ಕ್ರಮೇಣ ಪರಿವರ್ತನೆಗೊಂಡು ಜನ್ಮತಳೆದ ಪ್ರಾರಂಭ ದೆಶೆಯ ವ್ಯವಸಾಯ ಸಂಸ್ಕೃತಿಗಳ ಅವಶೇಷಗಳು ಅನೇಕ ನೆಲೆಗಳಲ್ಲಿ ಕಂಡುಬರುತ್ತವೆ. ಸೂಕ್ಷ್ಮಶಿಲಾಯುಧ ಸಂಸ್ಕೃತಿಗಳನ್ನು ಹೋಲುವ ಈ ಅವಶೇಷಗಳು ಗೋಬಿ ಮರುಭೂಮಿ, ಮಂಚೂರಿಯ ಮತ್ತು ಆರ್ಡಾಸ್ ಪ್ರಾಂತ್ಯಗಳಲ್ಲಿ ವಿಶೇಷ; ಈ ಸಂಸ್ಕೃತಿಯ ಮುಖ್ಯ ನೆಲೆ ಷಬರಕ್-ಉಸು. ಪುರ್ವ ಷೆನ್ಸಿ ಪ್ರಾಂತ್ಯದಲ್ಲಿ ಮಧ್ಯಶಿಲಾಯುಗದ ಅಂತ್ಯ-ನವಶಿಲಾಯುಗ ಪ್ರಾರಂಭಕಾಲಗಳಿಗೆ ಸೇರುವ ಸಂಸ್ಕೃತಿಯ ಅವಶೇಷಗಳು 15 ಮರಳು ದಿಬ್ಬಗಳ ಮೇಲೆ ಕಂಡುಬಂದಿದೆ. ಷ-ಯುವಾನ್ ಸಂಸ್ಕೃತಿಯೆಂದು ಇದರ ಹೆಸರು. ಇದು ಗೋಬಿ ಸಂಸ್ಕೃತಿಯ ದಕ್ಷಿಣದ ಎಲ್ಲೆಯನ್ನು ಸೂಚಿಸುತ್ತದೆಂದು ಹೇಳಬಹುದು.

ದಕ್ಷಿಣ ಚೀನ, ಇಂಡೋ-ಚೀನ ಮತ್ತು ಇಂಡೋನೇಷ್ಯ ಪ್ರದೇಶಗಳಲ್ಲಿ ಈ ಕಾಲದ ಸಂಸ್ಕೃತಿಗಳ ರೂಪುರೇಷೆಗಳು ಸಾಕಷ್ಟು ವಿಶದವಾಗಿಲ್ಲ. ಈ ಪ್ರದೇಶಗಳಲ್ಲಿ ಪ್ರಮುಖ ಕಾಣಿಕೆಯೆಂದರೆ ಆಗ್ನೇಯ ಏಷ್ಯ ಮತ್ತು ಶಾಂತಿಸಾಗರದ ದ್ವೀಪಸ್ತೋಮಗಳಲ್ಲಿ ತಮ್ಮ ಸಂಸ್ಕೃತಿಯ ಪ್ರಸಾರ. ಬಹುಶಃ ಏಷ್ಯದಲ್ಲಿ ಬತ್ತದ ವ್ಯವಸಾಯ ಕಲೆಯನ್ನು ಹರಡಿದುದಕ್ಕೆ ಇವೇ ಕಾರಣ. ಇದು ಚೀನದ ಲುಂಗ್ಷಾನ್ ಸಂಸ್ಕೃತಿಯ ಕೊಡುಗೆಯಾಗಿರಬಹುದು. ಈ ಪ್ರದೇಶಗಳಲ್ಲಿ ಆಗ ಹರಡಿದ್ದ ಬ್ಯಾಕ್ಸನ್ ಅಥವಾ ಹೋಬಿನ್ಹಿಯನ್ ಸಂಸ್ಕೃತಿಯಲ್ಲಿ ಮುಖ್ಯ ಆಯುಧ ಪುರ್ವಶಿಲಾಯುಗ ಕಾಲದಿಂದಲೂ ಬಳಕೆಯಲ್ಲಿದ್ದ ತುಂಡು ಕೊಡಲಿ. ಇದಲ್ಲದೆ ಅನೇಕ ಚಕ್ಕೆಕಲ್ಲಿನಾಯುಧಗಳೂ ಬಳಕೆಯಲ್ಲಿದ್ದುವು. ಪೆಜ್ವಾನ್, ಕ್ವಾಂಗ್ಸಿ, ವಿಯೆಟ್ನಾಮ್, ಥೈಲೆಂಡ್, ಮಲೆಯ ಮತ್ತು ಇಂಡೋನೇಷ್ಯಗಳಲ್ಲಿ ಹಬ್ಬಿದ್ದ ಈ ಸಂಸ್ಕೃತಿಯ ಜನ ಗುಹೆಗಳಲ್ಲಿ ವಾಸಿಸುತ್ತಿದ್ದು ಕಾಡುಹಂದಿ, ಜಿಂಕೆ, ಪಶುಗಳು, ಆಮೆ ಮುಂತಾದ ಪ್ರಾಣಿಗಳನ್ನು ತಿನ್ನುತ್ತಿದ್ದರು. ವಿವಿಧ ರೀತಿಯ ಜಲಚರಗಳೂ ಇವರ ಆಹಾರ. ಅರೆಯುವ ಕಲ್ಲುಗಳು ದೊರಕಿರುವು ದರಿಂದ ಸಸ್ಯಾಹಾರಿಗಳೂ ಆಗಿದ್ದರೆಂದು ಹೇಳಬಹುದು. ಕ್ರಮೇಣ ಈ ಜನ ನವಶಿಲಾಯುಗ ಸಂಸ್ಕೃತಿಗಳನ್ನಳವಡಿಸಿಕೊಂಡು, ನಯಮಾಡಿದ ಕಲ್ಲಿನಾಯುಧ ಮತ್ತು ಮಡಿಕೆಗಳನ್ನು ಉಪಯೋಗಿಸುತ್ತಿದ್ದುದಲ್ಲದೆ ವ್ಯವಸಾಯೋಪ ಜೀವಿಗಳೂ ಆದರೆಂಬುದಕ್ಕೆ ಮಾಹಿತಿಗಳು ಕೆಲವಾರು ನೆಲೆಗಳಲ್ಲಿ ದೊರಕಿವೆ. ಆಗ್ನೇಯ ಏಷ್ಯದ ದ್ವೀಪಗಳಲ್ಲಿ ಸೂಕ್ಷ್ಮಶಿಲಾಯುಧಗಳು ಪ್ರಮುಖವಾಗಿರುವ ಹಲವಾರು ನೆಲೆಗಳು ಬೆಳಕಿಗೆ ಬಂದಿವೆ. ಬೇಟೆಯನ್ನು ಮುಖ್ಯ ಕಸುಬಾಗಿ ಹೊಂದಿದ್ದ ಗುಹೆಗಳಲ್ಲಿ ವಾಸಿಸುತ್ತಿದ್ದ ಈ ಜನ ಏಷ್ಯದ ಮುಖ್ಯ ಭೂಭಾಗದ ಸಂಸ್ಕೃತಿಗಳೊಂದಿಗೆ ಯಾವ ರೀತಿಯ ಸಂಪರ್ಕ ಹೊಂದಿದ್ದರೆಂಬುದನ್ನು ನಿರ್ಧರವಾಗಿ ಹೇಳಲಾಗಿಲ್ಲ. ಸುಮಾತ್ರದ ಜಾಂಬಿ ಜಿಲ್ಲೆಯ ಗುಹೆಗಳಲ್ಲೂ ಜಾವದ ಬ್ಯಾಂಡಿಯೊಂಗ್ ಬಳಿಯ ಸರೋವರ ತೀರದಲ್ಲೂ ಫಿಲಿಪೀನ್ಸ್‌ ನಲುಜೋ಼ನ್ ಜಿಲ್ಲೆಯಲ್ಲೂ ಆಬ್ಸಿಡಿಯನಿನಿಂದ ಮಾಡಿದ ಸೂಕ್ಷ್ಮವಾದ ಆಯುಧಗಳು ದೊರಕಿವೆ. ಸಿಲೆಬಸ್ ದ್ವೀಪದ ನೈರುತ್ಯಭಾಗ ದಲ್ಲಿನ ಗುಹೆಗಳಲ್ಲಿ ಈ ಗುಂಪಿಗೆ ಸೇರಿದ ಅವಶೇಷಗಳು ಪ್ರಾಣಿಗಳ ಅವಶೇಷಗಳೊಂದಿಗೆ ಸಿಕ್ಕಿವೆ. ನಾಯಿಯ ನ್ನುಳಿದು ಇಲ್ಲಿ ದೊರಕಿದ ಇತರ ಪ್ರಾಣಿಗಳ ಅವಶೇಷಗಳು ಸಾಕುಪ್ರಾಣಿಗಳ ವರ್ಗಕ್ಕೆ ಸೇರದಿರುವುದರಿಂದ ಬೇಟೆ ಈ ಜನರ ಮುಖ್ಯ ಕಸುಬಾಗಿದ್ದಿತೆಂದು ತಿಳಿದುಬರುತ್ತದೆ. ಈ ಸಂಸ್ಕೃತಿಗಳು ಇಂಡೋನೇಷ್ಯ ಸಂಸ್ಕೃತಿಗಳಿಂದ ಹುಟ್ಟಿದವೋ ಅಥವಾ ಉತ್ತರ ಚೀನ ಪ್ರಾಂತ್ಯದಿಂದ ಹುಟ್ಟಿದವೋ ಎಂಬುದು ಸಮಸ್ಯೆಯಾಗೇ ಉಳಿದಿದೆ.

ನವಶಿಲಾಯುಗ

[ಬದಲಾಯಿಸಿ]

ನವಶಿಲಾಯುಗ ಕಾಲದಲ್ಲಿ ಪಶ್ಚಿಮ ಏಷ್ಯ ಬಹಳ ಪ್ರಧಾನಪಾತ್ರ ವಹಿಸಿತ್ತು. ಈ ಮೊದಲೇ ತಿಳಿಸಿರುವಂತೆ ಪ್ಯಾಲೆಸ್ಟೈನ್ ಮತ್ತು ಸಿರಿಯದ ಕೆಲಭಾಗಗಳಲ್ಲಿ ಮಧ್ಯಶಿಲಾಯುಗದ ನಟೂಫಿಯನ್ನರು ಬೆಟ್ಟಗುಡ್ಡ ಪ್ರದೇಶಗಳಿಂದ ಮೈದಾನ ಪ್ರದೇಶಗಳಿಗೆ ಇಳಿದುಬಂದು ಕ್ರಮೇಣ ಆಹಾರೋತ್ಪಾದನೆಯ ಚಟುವಟಿಕೆಗಳಲ್ಲಿ ತೊಡಗಲಾರಂಭಿಸಿದ್ದರು. ಪ್ಯಾಲೆಸ್ಟೈನಿನ ಮೌಂಟ್ ಕಾರ್ಮೆಲ್ ಗುಹೆಗಳು, ಐನ್ ಮಲ್ಲಹಾ, ಜೆರಿಕೊ, ಜಾರ್ಡನಿನ ಸೆಯ್ಲ್‌-ಅಕ್ಲಟ್, ಇರಾಕಿನ ಜಾ ವಿ ಷೆಮಿ, ಷನಿದಾರ್, ಕರೀಮ್ ಷಾಹಿರ್, ಮ್ಲಾಫಾತ್ ಮುಂತಾದ ನೆಲೆಗಳು ನವಶಿಲಾಯುಗದ ಕ್ರಾಂತಿಯ ವಿವಿಧ ಹಂತಗಳನ್ನು ಕ್ರಮಾಗತವಾಗಿ ನಿರೂಪಿಸುತ್ತವೆ. ಪ್ರ.ಶ.ಪು. 9ನೆಯ ಸಹಸ್ರಮಾನಕ್ಕೆ ನಿರ್ದೇಶಿತವಾಗುವ ಈ ನೆಲೆಗಳ ಮೊದಲ ಹಂತದಲ್ಲಿ ನಯಮಾಡಿದ ಕಲ್ಲಿನ ಕೊಡಲಿಗಳಿಗೂ ಅಗೆಯುವ ಕೋಲಿನ ಭಾರದ ಗುಂಡುಗಳೂ ಅರೆಯುವ ಕಲ್ಲುಗಳೂ ಒರಟಾಗಿ ಕಟ್ಟಿದ ಗುಡಿಸಲ ಅವಶೇಷಗಳೂ ಸಾಕುಪ್ರಾಣಿಗಳಾದ ಆಡು, ಕುರಿ ಮತ್ತು ದನಗಳ ಅವಶೇಷಗಳೂ ದೊರಕಿ, ವ್ಯವಸಾಯ, ಮಾನವನ ಸ್ಥಿರವಸತಿ ಮತ್ತು ಪಶುಸಂಗೋಪನೆಗಳು ಜನರ ಮುಖ್ಯ ಚಟುವಟಿಕೆ ಗಳಾಗಿದ್ದುವೆಂಬುದನ್ನು ತಿಳಿಸುತ್ತವೆ. ಈ ಜನ 200ಕ್ಕೂ ಮಿಗಿಲಾದ ಮನೆಗಳಿದ್ದ ತಮ್ಮ ಗ್ರಾಮವನ್ನು ರಕ್ಷಿಸಲು ಕೋಟೆ ಕಂದಕಗಳನ್ನು ನಿರ್ಮಿಸಿಕೊಂಡಿದ್ದರೆಂಬುದು ಜೆರಿಕೋ ನೆಲೆಯಲ್ಲಿ ದೊರಕಿದ ಮಾಹಿತಿಗಳಿಂದ ತಿಳಿದುಬರುತ್ತದೆ. ಇವರು ಕೆಲಕಾಲದಲ್ಲೆ ಮಡಕೆ ಕುಡಿಕೆಗಳನ್ನು ಉಪಯೋಗಿಸಲಾರಂಭಿಸಿದರು. ಸಮಕಾಲೀನ ಸಂಸ್ಕೃತಿಗಳು ಇರಾಕೀ ಕುರ್ಡಿಸ್ತಾನದ ಜಾರ್ಮೋ ನೆಲೆಯಲ್ಲೂ ಕಂಡು ಬಂದಿವೆ. ಮೊದಲಿಗೆ ಮಣ್ಣಿನ ಪಾತ್ರೆಗಳು ಬಳಕೆಯಲ್ಲಿರಲಿಲ್ಲ. ಇವರ ಆಯುಧೋಪಕರಣಗಳು ಕಲಾಕುಶಲತೆಯಿಂದ ಕೂಡಿದ್ದುವು. ಇವರ ಮತೀಯ ಮತ್ತು ಸಾಮಾಜಿಕ ಪ್ರಗತಿಯ ಬಗೆಗೂ ಆಧಾರಗಳು ದೊರಕಿವೆ. ಜೆರಿಕೋ ಸಂಸ್ಕೃತಿ ಗಿಂತಲೂ ಸ್ವಲ್ಪ ಈಚಿನದಾದ ಈ ಸಂಸ್ಕೃತಿಯ ಕಾಲ ಪ್ರ.ಶ.ಪು. 6750. ಇದರ ಮುಂದಿನ ಹಂತವಾದ ಸುಧಾರಿತ ನವಶಿಲಾಯುಧ ಸಂಸ್ಕೃತಿಯ ಚಿಹ್ನೆಗಳು ಇರಾಕಿನ ಹಸುನಾ, ಮಟಾರ್ರಾ, ನಿನಿವ್ಹೆ ಮುಂತಾದ ನೆಲೆಗಳಲ್ಲೂ ಪ್ಯಾಲೆಸ್ಟೈನ್, ಸಿರಿಯ, ಜಾರ್ಡನ್ ಪ್ರದೇಶಗಳ ಹಲವಾರು ನೆಲೆಗಳಲ್ಲೂ ಇರಾನಿನ ಟಿಪೆಸರಬ್ನಲ್ಲೂ ಅದರ ಮುಂದಿನ ಹಂತ ಸಿಯಾಲ್ಕ್‌, ಚಷ್ಮಾಆಲಿ, ಅನೌ ಮುಂತಾದ ನೆಲೆಗಳಲ್ಲೂ ಆಫ್ಘಾನಿಸ್ತಾನದ ಮುಂಡೀಗಕ್ ನೆಲೆಯಲ್ಲೂ ಕಂಡುಬಂದಿದೆ. ಪಶ್ಚಿಮ ಏಷ್ಯದಲ್ಲಿ ಮಾನವನ ಸಂಸ್ಕೃತಿಯ ಪ್ರಗತಿಯ ಚಿತ್ರ ಪಡೆಯಲು ಇವೆಲ್ಲ ಸಹಾಯಕ. ಮುಂದಿನ ಹಂತವಾದ ಇರಾಕಿನ ಹಲಾಫ್ ಸಂಸ್ಕೃತಿಯ ಕಾಲದಲ್ಲಿ ನವಶಿಲಾಯುಗದ ಸಂಸ್ಕೃತಿಯ ಪ್ರಮುಖ ವಾಗಿದ್ದರೂ ಮೊತ್ತ ಮೊದಲಿಗೆ ತಾಮ್ರದ ಪರಿಚಯವಾದದ್ದು ಆಗಲೇ. ಆ ವರೆಗೂ ಸಂಸ್ಕೃತಿಯ ಪ್ರಗತಿ ಸಾಧನೆಯಲ್ಲಿ ಅಗ್ರಗಣ್ಯವಾಗಿದ್ದ ಈ ಪ್ರದೇಶಕ್ಕೆ ಹೊರಗಿನ ಪ್ರದೇಶಗಳಿಂದ ಮೊತ್ತಮೊದಲಿಗೆ ಮಾರ್ಗದರ್ಶನ (ಕೆಲವಿಷಯಗಳಲ್ಲಿ ಮಾತ್ರ) ದೊರಕಿತೆಂದು ಹೇಳಬಹುದು. ತಾಮ್ರದ ಉಪಯೋಗ ಮತ್ತು ತಯಾರಿಕೆಯ ವಿಧಾನಗಳು ಮೊದಲಿಗೆ ಉತ್ತರ ಇರಾನಿನಲ್ಲಿ ಕಂಡುಹಿಡಿಯಲಾಗಿದ್ದು ಕ್ರಮೇಣ ಇವನ್ನು ಇರಾಕಿಗೆ ತರಲಾಯಿತೆಂದು ತಿಳಿದುಬರುತ್ತದೆ. ಆ ವರೆವಿಗೂ ಉತ್ತರ ಇರಾಕಿನಲ್ಲಿ ಮಾತ್ರ ಜನವಸತಿಯಿತ್ತು. ದಕ್ಷಿಣಭಾಗವಾಗ ಜೌಗುಪ್ರದೇಶ. ಆದರೆ ಆ ಕಾಲದಲ್ಲಿ ಪ್ರಾರಂಭವಾದ ಉಬೇದ್ ಸಂಸ್ಕೃತಿ ದಕ್ಷಿಣಭಾಗಕ್ಕೂ ಮೊದಲ ಬಾರಿಗೆ ಪ್ರಸರಿಸಿ ಅಲ್ಲಿನ ಫಲವತ್ತಾದ ಮೆಕ್ಕಲು ಮಣ್ಣಿನ ಪ್ರದೇಶಗಳಲ್ಲಿ ಸಂಪದ್ಯುಕ್ತ ವ್ಯವಸಾಯ ಪದ್ಧತಿಯನ್ನು ಸ್ಥಾಪಿಸಿದ್ದಲ್ಲದೆ ನಾಗರಿಕಜೀವನದ ಬುನಾದಿ ಹಾಕಿತು. ಈ ತಾಮ್ರಶಿಲಾಯುಗೀನ ಸಂಸ್ಕೃತಿಗಳು ಇರಾಕಿನಲ್ಲಿ ಪ್ರಾರಂಭವಾಗಿ ಕಾಲಕ್ರಮೇಣ ನೆರೆಹೊರೆಯ ಪ್ರದೇಶಗಳಾದ ಸಿರಿಯ, ಪ್ಯಾಲೆಸ್ಟೈನ್, ಜಾರ್ಡನ್ ಪ್ರದೇಶಗಳಿಗೂ ಹರಡಿತು. ಇರಾನಿನ ಉತ್ತರ ಭಾಗದಲ್ಲಿ ಸೂಸ ಮುಂತಾದ ನೆಲೆಗಳಲ್ಲಿ ಪ್ರಗತಿದಾಯಕ ಸಂಸ್ಕೃತಿಗಳು ನೆಲೆಗೊಂಡವು. ಸುಮಾರು ಇದೇ ಸಮಯದಲ್ಲಿ ಇರಾಕ್ ಮತ್ತು ಇರಾನ್ಗಳಲ್ಲಿ ಚಿತ್ರಲಿಪಿ ಬಳಕೆಗೆ ಬಂತು. ನೆರೆಯ ಪ್ರದೇಶಗಳೊಡನೆ ವಾಣಿಜ್ಯವೂ ಬೆಳೆದು, ಸಂಪದ್ಯುಕ್ತ ನಾಗರಿಕ ಜೀವನ ತ್ವರಿತಗತಿಯಲ್ಲಿ ಬೆಳೆಯಿತು. ಮುಂದಿನ ಹಂತಗಳಾದ ಉರೂಕ್ ಮತ್ತು ಜೆಂಡೆಟ್ನಾಸರ್ ಸಂಸ್ಕೃತಿಗಳ ಕಾಲದಲ್ಲಿ ಹೆಚ್ಚು ಪ್ರಗತಿ ಆಯಿತು. ನೀರಾವರಿ ವ್ಯವಸಾಯ, ಬರೆವಣಿಗೆಯ ಉಪಯೋಗ ಮತ್ತು ಇಟ್ಟಿಗೆಯ ಕಟ್ಟಡ-ಇವು ಹೆಚ್ಚಾಗಿ ಬಳಕೆಗೆ ಬಂದು ಕೊನೆಗೆ ಸುವ್ಯವಸ್ಥಿತ ರಾಜ್ಯಪದ್ಧತಿಗಳು ಸ್ಥಾಪಿತವಾದುವು. ಐತಿಹಾಸಿಕ ಯುಗದ ಸುಮೇರಿಯನ್ ಸಂಸ್ಕೃತಿ ಪ್ರಾರಂಭವಾದದ್ದು ಆಗಲೇ. ಸಿರಿಯ, ಪ್ಯಾಲೆಸ್ಟೈನ್ ಮತ್ತು ಇರಾನ್ಗಳಲ್ಲಿ ಇಷ್ಟು ಬೇಗ ಐತಿಹಾಸಿಕ ಯುಗ ಪ್ರಾರಂಭವಾಗಿದ್ದರೂ ಕ್ರಮೇಣ ಇರಾಕಿನ ಸುಮೇರಿಯನ್ ನಾಗರಿಕತೆಯ ಪ್ರಭಾವದಿಂದ ನಾಗರಿಕತೆ ಹರಡಿತು. ಭಾರತದಲ್ಲಿ ನವಶಿಲಾಯುಗದ ಸಂಸ್ಕೃತಿ ಪ್ರಾದೇಶಿಕ ವೈವಿಧ್ಯಗಳಿಂದ ಕೂಡಿದೆ. ಇರಾನಿನ ಸಮಕಾಲೀನ ಸಂಸ್ಕೃತಿಗಳ ಪ್ರಭಾವ ಕಂಡುಬರುವ ನವಶಿಲಾಯುಗ ಸಂಸ್ಕೃತಿ ದಖನ್ ಪ್ರದೇಶದಲ್ಲೂ ಪುರ್ವತೀರದಲ್ಲೂ ಪ್ರ.ಶ.ಪು. 2300ರ ಸುಮಾರಿನಲ್ಲಿ ತಲೆದೋರಿ, ಬಳ್ಳಾರಿ ರಾಯಚೂರು ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿತ್ತು. ಇದು ಕ್ರಮೇಣ ಕರ್ನಾಟಕದ ಇತರ ಪ್ರದೇಶಗಳಿಗೂ ಆಂಧ್ರದ ಪಶ್ಚಿಮ ಮತ್ತು ಉತ್ತರ ಭಾಗಗಳಿಗೂ ತಮಿಳುನಾಡಿನ ಉತ್ತರಭಾಗಗಳಿಗೂ ಹಬ್ಬಿತು. ನಯ ಮಾಡಿದ ಕಲ್ಲಿನಾಯುಧಗಳು ಕೈಯಲ್ಲಿ ರೂಪಿಸಿದ ಮಣ್ಣಿನ ಪಾತ್ರೆಗಳ ಮತ್ತು ಪಶುಪಾಲನೆಯ ಉಪಯೋಗ ತಿಳಿದಿದ್ದ ಈ ಜನ ಕ್ರಮೇಣ ವ್ಯವಸಾಯವನ್ನು ಆರಂಭಿಸಿ ಬೆಟ್ಟದ ತಪ್ಪಲುಗಳಿಂದ ಮೈದಾನ ಪ್ರದೇಶಗಳಿಗೆ ಬಂದು ನೆಲೆಸಿದರು. ರಾಯಚೂರು ಜಿಲ್ಲೆಯ ಪಿಕ್ಲಿಹಾಲ್, ಮಸ್ಕಿ, ಬಳ್ಳಾರಿ ಜಿಲ್ಲೆಯ ಸಂಗಕಲ್ಲು, ತೆಕ್ಕಲಕೋಟೆ, ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಆಂಧ್ರಪ್ರದೇಶದ ನಾಗಾರ್ಜುನಕೊಂಡ, ಯಲ್ಲೇಶ್ವರಂ ಮುಂತಾದವು ಇವರ ಮುಖ್ಯ ನೆಲೆಗಳಲ್ಲಿ ಕೆಲವು. ಇದೇ ಸುಮಾರಿನಲ್ಲಿ ಕಾಶ್ಮೀರದಲ್ಲಿ ಚೀನದ ಪ್ರಭಾವವಿದ್ದ ನವಶಿಲಾಯುಗ ಸಂಸ್ಕೃತಿ ಬಳಕೆಯಲ್ಲಿತ್ತು. ಈ ಜನ ಮೇಲೆ ಹೇಳಿದ ಸಂಸ್ಕೃತಿ ಲಕ್ಷಣಗಳನ್ನು ಹೊಂದಿದ್ದುದಲ್ಲದೆ ನೆಲದಲ್ಲಿ ಹಳ್ಳಗಳನ್ನಗೆದು ಅವುಗಳ ಮೇಲೆ ಹುಲ್ಲುಚಾವಣಿಗಳನ್ನು ಹೊದಿಸಿ ರಚಿಸಿದ ಗುಡಿಸಲುಗಳಲ್ಲಿ ವಾಸಿಸುತ್ತಿದ್ದರು. ಮೊದಲು ಪಶುಪಾಲನೆ, ಬೇಟೆ ಇವರ ಮುಖ್ಯ ಕಸುಬುಗಳಾಗಿದ್ದರೂ ಕ್ರಮೇಣ ವ್ಯವಸಾಯವನ್ನು ಪ್ರಾರಂಭಿಸಿದುದಾಗಿ ತಿಳಿದುಬರುತ್ತದೆ. ಪುರ್ವಭಾಗದಲ್ಲಿ ಅಸ್ಸಾಂ, ಬಂಗಾಲ, ಬಿಹಾರ್ ಮತ್ತು ಒರಿಸ್ಸ ಪ್ರಾಂತ್ಯಗಳಲ್ಲಿ ಆಗ್ನೇಯ ಏಷ್ಯ ಮತ್ತು ದಕ್ಷಿಣ ಚೀನಗಳ ಪ್ರಭಾವವಿದ್ದ ನವಶಿಲಾಯುಗಕ್ಕೆ ನಿರ್ದೇಶಿತವಾಗುವ ಅವಶೇಷ ಗಳು ದೊರಕಿದ್ದರೂ ಪ್ರ.ಶ.ಪು. ಒಂದನೆಯ ಸಹಸ್ರಮಾನಕ್ಕೆ ಸೇರಬಹುದಾದ ಈ ಹಿಂದುಳಿದ ಸಂಸ್ಕೃತಿಯ ವಿಷಯವಾಗಿ ಹೆಚ್ಚಿನ ಮಾಹಿತಿಗಳು ಗೊತ್ತಾಗಿಲ್ಲ. ಮಧ್ಯ ಮತ್ತು ಪಶ್ಚಿಮ ಭಾರತಗಳಲ್ಲಿ ಭೌಗೋಳಿಕ ಕಾರಣಗಳಿಂದ ಈ ನವಶಿಲಾ ಯುಗ ಸಂಸ್ಕೃತಿ ಹರಡಲು ಸಾಧ್ಯವಾಗದೆ ಸೂಕ್ಷ್ಮಶಿಲಾ ಯುಗಧ ಸಂಸ್ಕೃತಿಗಳ ಅನಂತರ ತಾಮ್ರಶಿಲಾಯುಗದ ಸಂಸ್ಕೃತಿಗಳು ಬಳಕೆಗೆ ಬಂದವು. ನಾಗರಿಕತೆಯ ಉನ್ನತ ಮಟ್ಟ ತಲಪಿದ್ದ ಹರಪ್ಪ ನಾಗರಿಕತೆ ವಾಯವ್ಯದಲ್ಲಿ ಸಿಂಧೂ ನದೀತೀರದಲ್ಲಿ ಮೊದಲಿಗೆ ಪ್ರಾರಂಭವಾಗಿ ಕ್ರಮೇಣ ಪುರ್ವ ಮತ್ತು ದಕ್ಷಿಣ ಭಾಗಗಳಲ್ಲಿ ಹರಡಿತು. ಆಫ್ಘಾನಿಸ್ತಾನ ಮತ್ತು ಬಲೂಚಿಸ್ತಾನಗಳ ಪರ್ವತ ಪ್ರದೇಶಗಳಲ್ಲಿ ನೆಲೆಸಿದ್ದ, ಆಹಾರೋತ್ಪಾದನೆಯ ಹಂತದ ಪಂಗಡಗಳಿಂದ ಕ್ರಮೇಣ ಬೆಳೆದು ಬಂದ, ಮತ್ತು ಸುಮೇರಿಯನ್ ನಾಗರಿಕತೆಯೊಡನೆ ಸಂಪರ್ಕ ಪಡೆದಿದ್ದ ಈ ಸಂಸ್ಕೃತಿ ವ್ಯವಸಾಯ ಮತ್ತು ಕೈಗಾರಿಕೆಗಳ ಮೇಲೆ ಆಧಾರಿತವಾಗಿದ್ದು, ಭಾರತದ ಇತರ ಕೆಲವು ಪ್ರದೇಶಗಳೊಂದಿಗೂ ಹೊರದೇಶಗಳೊಂದಿಗೂ ವ್ಯಾಪಾರ ಸಾಂಸ್ಕೃತಿಕ ಸಂಪರ್ಕಗಳನ್ನು ಬೆಳೆಸಿಕೊಂಡಿತ್ತು. ಈ ಸಂಸ್ಕೃತಿಯ ಮುಖ್ಯ ನೆಲೆಗಳಾಗಿದ್ದ ರಾಬಿ ನದಿ ದಂಡೆಯ ಹರಪ್ಪ ಮತ್ತು ಸಿಂಧೂ ನದಿ ದಂಡೆಯ ಮೊಹೆಂಜೊದಾರೊಗಳಲ್ಲಿನ ಉತ್ಖನನಗಳಿಂದ ಈ ಅಂಶ ವ್ಯಕ್ತಪಡುತ್ತದೆ. ಈ ಅಕ್ಷರಸ್ಥ ನಾಗರಿಕತೆ ಬಹು ಶೀಘ್ರವಾಗಿ ಉನ್ನತ ಮಟ್ಟ ತಲಪಿ ತನ್ನ ಪ್ರಭಾವವನ್ನು ನೆರೆಯ ಗಂಗಾ-ಯಮುನಾ ಬಂiÀÄಲಿಗೂ ಸೌರಾಷ್ಟ್ರ ಪ್ರದೇಶಕ್ಕೂ ಬಲೂಚಿಸ್ತಾನ ಮತ್ತು ಸಿಂಧ್ ಪ್ರಾಂತ್ಯಗಳಿಗೂ ವಿಸ್ತರಿಸಿತ್ತು. ಆದರೆ ಕ್ರಮೇಣ ಆಂತರಿಕ ಕಾರಣಗಳ ಒತ್ತಡಗಳಿಗೊಳಗಾಗಿ ಕ್ಷೀಣಗೊಂಡಿತು. ಈ ನಾಗರಿಕತೆಯ ಜೀವಿತ ಕಾಲವನ್ನು ಪ್ರ.ಶ.ಪು.2300-1700 ಎಂದು ನಿರ್ದೇಶಿಸಲಾಗಿದೆ. ಇದರ ಅವನತಿಯ ಅನಂತರ ಗಂಗಾನದಿ ಬಂiÀÄಲಿನಲ್ಲೂ ಮಧ್ಯ ಮತ್ತು ಪಶ್ಚಿಮ ಭಾರತ ಪ್ರದೇಶಗಳಲ್ಲೂ ಇದರ ಮತ್ತು ಮೊದಲಿನ ಸೂಕ್ಷ್ಮಶಿಲಾಯುಧ ಸಂಸ್ಕೃತಿಗಳಿಂದ ಉದಿಸಿದ ತಾಮ್ರ ಶಿಲಾಯುಗೀನ ಸಂಸ್ಕೃತಿಗಳು ರೂಢಿಗೆ ಬಂದುವು. ಹರಪ್ಪ ನಾಗರಿಕತೆಯಲ್ಲಿ ರೂಢಿಯಲ್ಲಿದ್ದ ಅಕ್ಷರತೆ ಮತ್ತು ನಗರ ಜೀವನ ಕಣ್ಮರೆಯಾದರೂ ಮುಂದುವರಿದ ವ್ಯವಸಾಯ ಪದ್ಧತಿಯೂ ಗ್ರಾಮೀಣ ಜೀವನವೂ ಇದಕ್ಕೆ ಸಂಬಂಧಿಸಿದ ಕೈಗಾರಿಕೆಗಳೂ ಪ್ರಧಾನವಾಗಿದ್ದ ಈ ಪ್ರಾಗೈತಿಹಾಸಿಕ ಸಂಸ್ಕೃತಿಯ ಕಾಲದಲ್ಲಿ ಫಲವತ್ತಾದ ಗಂಗಾ ಯಮುನಾ ನದೀಬಂiÀÄಲಿನಲ್ಲಿ ಹೆಚ್ಚು ಪ್ರಗತಿಯಾಯಿತು. ಕಬ್ಬಿಣ ಬಳಕೆಗೆ ಬಂದದ್ದು ಪ್ರ.ಶ.ಪು. 2ನೆಯ ಸಹಸ್ರಮಾನದ ಕೊನೆಯಲ್ಲಿ. ಕ್ರಮೇಣ ಮಧ್ಯ ಮತ್ತು ದಕ್ಷಿಣ ಭಾರತಗಳಿಗೂ ಕಬ್ಬಿಣಯುಗದ ಸಂಸ್ಕೃತಿ ಹರಡಿತು. ಈ ವೇಳೆಗಾಗಲೇ ಉತ್ತರ ಭಾರತದಲ್ಲಿ ಮೊದಲ ಐತಿಹಾಸಿಕ ರಾಜ್ಯಗಳು ಸ್ಥಾಪಿತವಾಗಿ ಚಾರಿತ್ರಿಕಯುಗದ ಪ್ರಾರಂಭವಾಗಿತ್ತು. ದಕ್ಷಿಣ ಭಾರತದಲ್ಲಿ ಕಬ್ಬಿಣಯುಗವನ್ನು ಪ್ರಾಗಿತಿಹಾಸ ಕಾಲವೆಂದು ಪರಿಗಣಿಸಲಾಗಿದೆ. ಆ ಸಮಯದಲ್ಲಿ ಪ್ರಭಾವಶಾಲಿಯಾಗಿದ್ದ ಬೃಹತ್ಶಿಲಾಸಮಾಧಿ ಸಂಸ್ಕೃತಿಯ ಜನ ಸುಧಾರಿತ ನೀರಾವರಿ ವ್ಯವಸಾಯ, ಕುಂಬಾರ ಚಕ್ರದಿಂದ ತಯಾರಾದ ಮಣ್ಣಿನ ಪಾತ್ರೆ, ಕಬ್ಬಿಣದಿಂದ ಮಾಡಿದ ಆಯುಧೋಪಕರಣ-ಇವನ್ನು ಬಳಕೆಗೆ ತಂದು ಗ್ರಾಮೀಣ ಜೀವನ ಪದ್ಧತಿ ಸ್ಥಾಪಿಸಿದರು. ಪ್ರ.ಶ.ಪು. 5-4ನೆಯ ಶತಮಾನಗಳ ವೇಳೆಗೆ ಇಲ್ಲಿ ಬರೆವಣಿಗೆ, ರಾಜ್ಯಭಾರ ಪದ್ಧತಿ ಮತ್ತು ನಗರಜೀವನ ಕ್ರಮಗಳು ರೂಢಿಗೆ ಬಂದು ಇತಿಹಾಸ ಯುಗ ಪ್ರಾರಂಭವಾಯಿತು.

ಪೂರ್ವ ಏಷ್ಯ ಮತ್ತು ಚೀನ ಪ್ರದೇಶಗಳಲ್ಲಿ ಪ್ರ.ಶ.ಪು. 3000ದ ಸುಮಾರಿಗೆ ಸೈಬೀರಿಯ, ಮಂಚೂರಿಯ ಮತ್ತು ಮಂಗೋಲಿಯ ಪ್ರದೇಶಗಳಲ್ಲಿ ನೆಲಸಿದ್ದ ಸೂಕ್ಷ್ಮಶಿಲಾಯುಧ ಸಂಸ್ಕೃತಿಗಳ ಜನ ನಯಗೊಳಿಸಿದ ಕಲ್ಲಿನಾಯುಧ ಮತ್ತು ಮಣ್ಣಿನ ಪಾತ್ರೆಗಳ ಉಪಯೋಗವನ್ನು ಪಶ್ಚಿಮದಿಂದ ಕಲಿತುಕೊಂಡರು. ವ್ಯವಸಾಯ ಮತ್ತು ಪಶುಪಾಲನೆಗಳ ಪರಿಚಯವಿಲ್ಲದಿದ್ದರೂ ಈ ಸಂಸ್ಕೃತಿಗಳನ್ನು ನವಶಿಲಾಯುಗ ಸಂಸ್ಕೃತಿಗಳೆಂದು ಹೆಸರಿಸಲಾಗಿದೆ. ಬೇಟೆ ಮುಖ್ಯ ಕಸಬಾಗಿದ್ದು ಈ ಜನ ಇದಕ್ಕಾಗಿ ಸಾಕಿದ ನಾಯಿಗಳನ್ನುಪಯೋಗಿಸುತ್ತಿದ್ದರು. ಮಡಕೆಗಳನ್ನು ಹಗ್ಗದ ಗುರುತುಗಳಿಂದ ಅಲಂಕರಿಸುತ್ತಿದ್ದರು. ಚೀನದ ಹ್ವಾಂಗ್ ಹೋ ಕಣಿವೆಯಲ್ಲಿ ನೆಲೆಸಿದ್ದ ನವಶಿಲಾಯುಗ ಸಂಸ್ಕೃತಿ ಹೆಚ್ಚು ಪ್ರಗತಿಪರವಾಗಿತ್ತು. ವ್ಯವಸಾಯ ಬಳಕೆಯಲ್ಲಿತ್ತು. ಅನಂತರ ದಕ್ಷಿಣ ಚೀನ, ಇಂಡೋಚೀನ ಪ್ರದೇಶಗಳಲ್ಲಿ ಹರಡಿದ ಈ ಸಂಸ್ಕೃತಿ ಕ್ರಮೇಣ ಪ್ರಬಲಗೊಂಡಿತು. ಇಂಡೋ-ಚೀನದ ಟಾಂಕಿಂಗ್ ಪ್ರದೇಶದ ಹೋಬಿನ್ಹ್‌ ಎಂಬಲ್ಲಿ ಸಣ್ಣ ಗಾತ್ರದ ಕಲ್ಲಿನಾಯುಧಗಳು ಬಳಕೆಯಲ್ಲಿದ್ದರೆ, ಬ್ಯಾಕ್ಸನಿನಲ್ಲಿ ಅಂಚುಗಳನ್ನು ನಯಗೊಳಿಸಿದ ಕಲ್ಲಿನ ಕೊಡಲಿ ಮತ್ತು ಒರಟಾದ ಮಡಕೆಗಳು ಬಳಕೆಯಲ್ಲಿದ್ದುವು. ಈ ಪ್ರದೇಶದಲ್ಲೆಲ್ಲ ಕ್ರಮೇಣ ಪುರ್ಣವಾಗಿ ನಯಗೊಳಿಸಿದ ಚೌಕಾಕಾರದ ಕೊಡಲಿ ಪ್ರಧಾನ ಆಯುಧವಾಯಿತು. ಹಿಡಿಯಲ್ಲಿ ಸೇರಿಸಲು ಅನುಕೂಲವಾಗುವಂಥ ಭುಜಗಳುಳ್ಳ ಕೊಡಲಿಗಳೂ ಸ್ವಲ್ಪಕಾಲಾನಂತರ ಬಳಕೆಗೆ ಬಂದುವು. ಈ ವೇಳೆಗೆ ಚೀನದ ದಕ್ಷಿಣ ಭಾಗಗಳಲ್ಲಿ ಕಂಚಿನ ಬಳಕೆ ರೂಢಿಗೆ ಬಂದು ಕ್ರಮೇಣ ಈ ಪ್ರದೇಶಗಳಿಗೂ ಹಬ್ಬಿತು. ಕಲ್ಲಿನ ಆಯುಧಗಳನ್ನು ಸಹ ಕಂಚಿನ ಆಯುಧಗಳ ಮಾದರಿಯಲ್ಲಿ ಅದೇ ತಯಾರಿಕಾ ವಿಧಾನಗಳಿಂದ ಮಾಡುತ್ತಿದ್ದಿರಬಹುದೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಆಗ್ನೇಯ ಏಷ್ಯದಾದ್ಯಂತ ಪ್ರಬಲವಾಗಿದ್ದ ಈ ಸಂಸ್ಕೃತಿಯ ಪ್ರಭಾವ ಪುರ್ವಭಾರತದ ಅಸ್ಸಾಂ ಬಂಗಾಲ ಪ್ರದೇಶಗಳ ಮೇಲೆ ಆದದ್ದು ಬಹುಶಃ ಈ ಹಂತದಲ್ಲೆ.

ವ್ಯವಸಾಯಾಧಾರಿತ ಪಂಗಡಗಳು ಮಧ್ಯ ಚೀನದ ಹೋನಾನ್ ಪ್ರಾಂತ್ಯದ ಹ್ವಾಂಗ್ ಹೋ ಮತ್ತು ಷೆನ್ಸಿಗಳಲ್ಲಿ ಹಳದಿ ಮೆಕ್ಕಲುಮಣ್ಣಿನ ಮೈದಾನಗಳಲ್ಲಿ ತಲೆದೋರಿತು. ಬಹುಶಃ ಮಧ್ಯ ಮತ್ತು ಪಶ್ಚಿಮ ಏಷ್ಯದಿಂದ ಬಂದ ಈ ವ್ಯವಸಾಯ ಮತ್ತು ಪಶುಸಂಗೋಪನೋದ್ಯಮಗಳು ಕ್ರಮೇಣ ಹೋನಾನ್ ಪ್ರಾಂತ್ಯದ ಇತರ ಭಾಗಗಳಲ್ಲೂ ಕಾನ್ಸು ಪ್ರಾಂತ್ಯದಲ್ಲೂ ಹರಡಿ ಜನಜೀವನ ರೀತಿಯನ್ನು ಸುಧಾರಿತಗೊಳಿಸಿತು. ಈ ಪ್ರಭಾವಗಳೊಡನೆ ಮಡಕೆಗಳನ್ನು ಬಣ್ಣಗಳಿಂದ ಅಲಂಕರಿಸುವ ಕಲೆಯೂ ಬಂದಂತೆ ಕಾಣುತ್ತದೆ. ಯಾಂಗ್-ಷಾವೊ ಸಂಸ್ಕೃತಿಯೆಂದು ಹೆಸರಾದ ಈ ಸಂಸ್ಕೃತಿಯ ಜನಕ್ಕೆ ಮೊದಲಿನಿಂದಲೂ ಧಾನ್ಯಗಳನ್ನು ಬೆಳೆಯುವ ವಿಧಾನ ಗೊತ್ತಿತ್ತು. ಇವರು ಬತ್ತದ ಬೇಸಾಯವನ್ನು ದಕ್ಷಿಣ ಪ್ರದೇಶಗಳಿಂದ ಕಲಿತುಕೊಂಡರು. ವಿಶಾಲವಾದ ಗ್ರಾಮಗಳಲ್ಲಿ ಚಚ್ಚೌಕದ ಮನೆಗಳಲ್ಲಿ ವಾಸಿಸುತ್ತಿದ್ದ ಈ ಜನ ಧಾನ್ಯಗಳನ್ನು ನೆಲದೊಳಗಿನ ಹಳ್ಳಗಳಲ್ಲಿ ಶೇಖರಿಸುತ್ತಿದ್ದರು. ಗ್ರಾಮದ ಹೊರಭಾಗಗಳಲ್ಲಿ ಶವಗಳನ್ನು ಹೂಳುತ್ತಿದ್ದರು. ಮಣ್ಣಿನ ಪಾತ್ರೆಗಳನ್ನು ಕೈಯಿಂದ ತಯಾರಿಸುತ್ತಿದ್ದರು. ಅವುಗಳನ್ನು ಬಣ್ಣಗಳಿಂದ ಅಲಂಕರಿಸುತ್ತಿದ್ದರು.

ಅನಂತರದ ಮುಂದುವರಿದ ಸಂಸ್ಕೃತಿಯ ಮಾಹಿತಿಗಳೂ ಹ್ವಾಂಗ್ ಹೊ ಕಣಿವೆಯ ಪುರ್ವಭಾಗಗಳಲ್ಲಿ ದೊರಕಿವೆ. ಇವು ಲುಂಗ್-ಷಾನ್ ಸಂಸ್ಕೃತಿಯೆಂದು ಹೆಸರಾಗಿದೆ. ಯಾಂಗ್-ಷಾವೊ ಸಂಸ್ಕೃತಿ ಯೊಂದಿಗೆ ಅನೇಕ ಹೋಲಿಕೆ ಗಳಿರುವ ಲುಂಗ್-ಷಾನ್ ಸಂಸ್ಕೃತಿಯ ಮಡಕೆಗಳು ಹೆಚ್ಚು ನಯ, ಕುಂಬಾರ ಚಕ್ರದ ಮೇಲೇ ಮಾಡಲ್ಪಟ್ಟಿದ್ದು. ಇವುಗಳ ಬಣ್ಣ ಕಪ್ಪು, ಹೊಸ ಹೊಸ ಆಕಾರದ ಮಡಕೆಗಳೂ ಬಳಕೆಗೆ ಬಂದುವು. ಈ ಹಂತದಲ್ಲಿ ಜನಜೀವನ ರೀತಿ ಸುಧಾರಿತವಾಯಿತು. ದನಕುರಿ ಗಳನ್ನೂ ಕೆಲವು ಸಲ ಕುದುರೆ ಗಳನ್ನೂ ಸಾಕುವುದು ರೂಢಿಗೆ ಬಂತು. ಮುಂದುವರಿದ ವ್ಯವಸಾಯ ವಿಧಾನಗಳಿಂದ ಐಶ್ವರ್ಯ ಅಭಿವೃದ್ಧಿ ಹೊಂದಿ ನಾಗರಿಕತೆ ಬೆಳೆಯಲಾರಂಭಿಸಿತು. ಮತೀಯ, ಸಾಮಾಜಿಕ ಆಚಾರಪದ್ಧತಿಗಳು ಬೆಳೆದುವು. ಲುಂಗ್-ಷಾನ್ ಕೊನೆಯ ಹಂತದ ಹ್ಸಿಯಾವೊ-ತ್ಸನ್ ಸಂಸ್ಕೃತಿ ಕಾಲ ಕ್ರಮದಲ್ಲಿ ಯಾಂಗ್ಟ್ಸಿ ಬಂiÀÄಲು, ಷೆಜ್ವಾನ್, ದಕ್ಷಿಣ ಸಮುದ್ರತೀರ ಮತ್ತು ಆಗ್ನೇಯ ಏಷ್ಯಗಳಿಗೆ ಹರಡಿ ಬಲು ಪ್ರಭಾವಶಾಲಿಯಾಯಿತೆನ್ನಬಹುದು. ಬತ್ತದ ಬೇಸಾಯ ಪದ್ಧತಿ ಪುರ್ವ ಏಷ್ಯದಲ್ಲೆಲ್ಲ ಹರಡಿದ್ದು ಅಕ್ಕಿ ಈ ಪ್ರದೇಶದ ಮುಖ್ಯ ಆಹಾರವಾಗಿದ್ದು ಆಗಲೇ. ಪ್ರ.ಶ.ಪು. 2ನೆಯ ಸಹಸ್ರಮಾನದ ಅಂತ್ಯಕಾಲದ ವೇಳೆಗೆ ನಗರಸ್ಥ ಜೀವನ ನೆಲೆಯಾಗಿ ನಿಂತು ಐತಿಹಾಸಿಕ ಚೀನೀ ಸಂಸ್ಕೃತಿಯ ಆಸ್ತಿಭಾರವೇರ್ಪಟ್ಟಿತ್ತೆಂಬುದು ಷಾಂಗ್ ವಂಶದ ಸ್ಥಾಪನೆಯಿಂದಲೂ ಹ್ಸಿಯಾವೊ-ತ್ಸುನ್ ನಗರದ ಸಂಪದ್ಭರಿತ ಸ್ಥಿತಿಗಳಿಂದಲೂ ತಿಳಿದುಬರುತ್ತದೆ. ವಿಶಾಲ ಸುವ್ಯವಸ್ಥಿತ ನಗರದಲ್ಲಿ ಅರಮನೆ, ಕುಶಲಕರ್ಮಿಗಳ ವಸತಿಗಳು, ಆಯಾಕಾರದ ಮರದ ಕಟ್ಟಡಗಳು, ಕಲ್ಲಿನ ಅಥವಾ ಕಂಚಿನ ಪೀಠಗಳ ಮೇಲೆ ನಿಲ್ಲಿಸಿದ ಕಂಬಗಳ ಸಾಲುಗಳಿಂದ ಕೂಡಿದ ವಿಶಾಲ ಭವನಗಳು-ಇವೆಲ್ಲ ಈ ನಾಗರಿಕತೆಯ ಮಟ್ಟವನ್ನು ಸೂಚಿಸುತ್ತವೆ. ಪುರಾತನ ವಿಶ್ವದ ನಾಗರಿಕತೆಗಳ ಕುರುಹುಗಳಲ್ಲಿ ಷಾಂಗ್ ಸಂಸ್ಕೃತಿಕಾಲದ ಕಂಚಿನ ವಸ್ತುಗಳದು ವಿಶಿಷ್ಟ ಸ್ಥಾನ. ಈ ಕಾಲದ ಸಮಾಧಿಗಳಲ್ಲಿರುವ ಐಶ್ವರ್ಯ ಈ ಜನರ ಪ್ರಗತಿಯನ್ನು ಸೂಚಿಸುತ್ತದೆಂದು ಹೇಳಬಹುದು. ಈ ಜನಕ್ಕೆ ಬರೆವಣಿಗೆ ಗೊತ್ತಿತ್ತು ಎಂಬುದು ಕಂಚಿನ ಪಾತ್ರೆಗಳ ಮೇಲಿನ ಕೆಲವು ಶಾಸನಗಳಿಂದ ತಿಳಿದುಬರುತ್ತದೆ. ಈ ಶಾಸನಗಳದು ಚೀನೀ ಭಾಷೆ. ಇತಿಹಾಸಯುಗಕ್ಕೆ ಸೇರಿದ ಚೌ ವಂಶ ಅಧಿಕಾರಕ್ಕೆ ಬಂದದ್ದು ಅನಂತರ (ಪ್ರ.ಶ.ಪು.1027-222).

ಇಂಡೋ-ಚೀನದಲ್ಲಿ ಹೋಬಿನ್ಹಿಯನ್ ಬ್ಯಾಕ್ಸೋನಿಯನ್ ಸಂಸ್ಕೃತಿಗಳು ಬಹಳಕಾಲ ಬಳಕೆಯಲ್ಲಿದ್ದು ಪ್ರ.ಶ.ಪು. ಮೊದಲನೆಯ ಸಹಸ್ರಮಾನದ ಮಧ್ಯಕಾಲದಲ್ಲಿ ಕ್ರಮೇಣ ಕಂಚು ಮತ್ತು ಕಬ್ಬಿಣಗಳ ಉಪಯೋಗ ಗೊತ್ತಿದ್ದ ಡಾಂಗ್ಸನ್ ಸಾಮ್ರಾಂಗ್ಸನ್ ಸಂಸ್ಕೃತಿಗಳು ರೂಢಿಗೆ ಬಂದವಲ್ಲದೆ ವ್ಯವಸಾಯ ಪಶುಪಾಲನೆಗಳು ಹರಡಿದುವು. ಕೆಲವು ಪ್ರದೇಶಗಳಲ್ಲಿ ಇತ್ತೀಚಿನವರೆಗೂ ಬಳಕೆಯಲ್ಲಿದ್ದ ಬಾಕು. ರಂಧ್ರವಿರುವ ಕೊಡಲಿ, ಭರ್ಜಿಯ ಮೊನೆ ಮತ್ತು ತಾಮ್ರದ ಬುರುಡುಮದ್ದಲೆಗಳು ಬಳಕೆಗೆ ಬಂದದ್ದೂ ಈ ಕಾಲದಲ್ಲೆ. ಕ್ರಮೇಣ ಚೀನ ಮತ್ತು ಭಾರತಗಳ ಸಂಸ್ಕೃತಿಗಳು ಪ್ರ.ಶ. ಮೊದಲನೆಯ ಸಹಸ್ರಮಾನದ ದೀರ್ಘಕಾಲದಲ್ಲಿ ಈ ಪ್ರದೇಶಗಳಿಗೆ ಹರಡುವವರೆಗೂ ಇವು ಪ್ರಾಗಿತಿಹಾಸ ಮಟ್ಟದಲ್ಲೇ ಇದ್ದು ಮಧ್ಯಯುಗೀನ ಇತಿಹಾಸ ಕಾಲದಲ್ಲಿ ಚಾರಿತ್ರಿಕ ಯುಗವನ್ನು ಪ್ರವೇಶಿಸಿದುವು.

16-17ನೆಯ ಶತಮಾನಗಳಲ್ಲಿ ಮಲೇಷ್ಯದ ದ್ವೀಪಗಳನ್ನು ಐರೋಪ್ಯರು ಪ್ರವೇಶಿಸುವವರೆಗೂ ಇಲ್ಲಿ ಅನಾಗರಿಕ ಶಿಲಾಯುಗ ಹಂತದ ಪಂಗಡಗಳಿದ್ದುವು. ಈ ಜನಕ್ಕೆ ಅಕ್ಕಿಯ ಉಪಯೋಗ ಗೊತ್ತಿರಲಿಲ್ಲ. ಬಾಳೆ, ಹಲಸು, ತೆಂಗು ಮುಂತಾದ ಬೆಳೆಗಳನ್ನಿವರು ಬೆಳೆಯುತ್ತಿದ್ದರು. ಹಂದಿ, ನಾಯಿ, ಕೋಳಿ ಮತ್ತು ಜಲಚರಗಳೂ ಇವರ ಆಹಾರ ಪುರೈಕೆಯ ಸಾಧನಗಳಾಗಿದ್ದವು. ನಯಗೊಳಿಸಿದ ಕಲ್ಲಿನಾಯುಧಗಳನ್ನು ಉಪಯೋಗಿಸುತ್ತಿದ್ದರು. ಕೈಯಿಂದ ಮಾಡಿದ ಮಡಕೆಗಳು ಬಳಕೆಯಲ್ಲಿದ್ದವು.

ಕೊರಿಯದಲ್ಲಿ ಪ್ರ.ಶ.ಪು. 3ನೆಯ ಸಹಸ್ರಮಾನದಲ್ಲಿ ಉತ್ತರ ಏಷ್ಯದ ಪ್ರಭಾವ ಬೀರುವ ನವಶಿಲಾಯುಗ ಸಂಸ್ಕೃತಿಗಳು ತಲೆದೋರಿದುವು. ಮೊದಮೊದಲು ಬೇಟೆ ಮತ್ತು ಮೀನುಗಾರಿಕೆ ಇಲ್ಲಿಯ ಜನರ ಮುಖ್ಯ ಕಸಬು. ಕ್ರಮೇಣ ಮಣ್ಣಿನ ಪಾತ್ರೆಗಳ ಉಪಯೋಗವನ್ನೂ ಕಲ್ಲಿನ ಕಟ್ಟಡಕಲೆಯನ್ನೂ ಇವರು ಅರಿತರು. ಪ್ರ.ಶ.ಪು. 4ನೆಯ ಶತಮಾನದಲ್ಲಿ ಕಂಚು ಮತ್ತು ಕಬ್ಬಿಣಗಳ ಬಳಕೆಯೂ ಅನಂತರ ವ್ಯವಸಾಯವೂ ರೂಢಿಗೆ ಬಂದುವು. ಪ್ರ.ಶ.ದ ಅರಂಭಕಾಲದಲ್ಲಿ ಜಪಾನ್ ಚೀನಗಳ ಪ್ರಭಾವ ಹೆಚ್ಚಿದಾಗ ಇಲ್ಲಿ ಐತಿಹಾಸಿಕ ಯುಗದ ಆರಂಭವಾಯಿತು.

ಜಪಾನಿನ ಅತ್ಯಂತ ಪುರಾತನ ಅವಶೇಷಗಳು ಪ್ರ.ಶ.ಪು. 3-2ನೆಯ ಸಹಸ್ರಮಾನಗಳ ನವಶಿಲಾಯುಗ ಸಂಸ್ಕೃತಿಗಳಿಗೆ ಸೇರಿದವು. ಈ ಸಂಸ್ಕೃತಿಗಳಲ್ಲಿ ಎರಡು ಹಂತಗಳುಂಟು. ಮೊದಲನೆಯದಾದ ಜಮೋನ್ ಸಂಸ್ಕೃತಿಯಲ್ಲಿ (ಪ್ರ.ಶ.ಪು. 2500-250) ಹಗ್ಗದ ಗುರುತಿರುವ ಮಡಕೆಗಳ ಉಪಯೋಗ ಗೊತ್ತಿದ್ದು ಇದು ಪುರ್ವ ಸೈಬೀರಿಯದ ಸಂಸ್ಕೃತಿಗಳನ್ನು ಹೋಲುತ್ತದೆ. ಈ ಸಂಸ್ಕೃತಿಯ ಜನಕ್ಕೆ ವ್ಯವಸಾಯ ಗೊತ್ತಿರಲಿಲ್ಲ. ನಯಗೊಳಿಸಿದ ಕಲ್ಲಿನಾಯಧಗಳು ಆಗ ಬಳಕೆಯಲ್ಲಿದ್ದವು. ಬೇಟೆ ಮತ್ತು ಮೀನುಗಾರಿಕೆ ಮುಖ್ಯ ಕಸಬು. ನೆಲದಲ್ಲಿ ತೋಡಿದ ಹಳ್ಳಗಳ ಮೇಲೆ ಭೂಮಿಯಲ್ಲಿ ನೆಟ್ಟ ಕಂಬದ ಸಹಾಯದಿಂದ ನಿಲ್ಲಿಸಿದ್ದ ಚಾವಣಿಗಳಿದ್ದ ಗುಡಿಸಲುಗಳಲ್ಲಿ ಇವರ ವಾಸ. ಎರಡನೆಯ ಯ ಯೋ ಇ ಸಂಸ್ಕೃತಿ ಕಾಲದಲ್ಲಿ (ಪ್ರ.ಶ.ಪು. 250-ಪ್ರ.ಶ. 250) ಇವರಿಗೆ ವ್ಯವಸಾಯದ ಪರಿಚಯವಾಯಿತು. ಬತ್ತದ ಬೇಸಾಯ ರೂಢಿಗೆ ಬಂದದ್ದು ಆಗ, ಸ್ವಲ್ಪ ಕಾಲಾನಂತರ ಕಂಚಿನ ಉಪಯೋಗ ತಿಳಿದುಬಂದು, ಪ್ರಗತಿಯ ವೇಗ ಹೆಚ್ಚಿತು. ಕುಂಬಾರಚಕ್ರದಿಂದ ತಯಾರಿಸಿದ ಮಡಕೆಗಳೂ ಬತ್ತದ ನೀರಾವರಿ ಬೇಸಾಯವೂ ಈ ಸಂಸ್ಕೃತಿಯ ಮುಖ್ಯಲಕ್ಷಣಗಳು. ಅನಂತರ ಈ ಪ್ರದೇಶ ಚೀನದ ದಾಳಿಗಳಿಗೆ ತುತ್ತಾಯಿತು. ಆಗ ಚರಿತ್ರಯುಗ ಪ್ರಾರಂಭವಾಯಿತೆನ್ನಬಹುದು. (ಬಿ.ಕೆ.ಜಿ.)

ಉಲ್ಲೇಖಗಳು

[ಬದಲಾಯಿಸಿ]