ವಿಷಯಕ್ಕೆ ಹೋಗು

ಏಮೀಲ್ ಜೋಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಏಮೀಲ್ ಜೋಲಾ (1840-1902. ಫ್ರೆಂಚ್ ಕಾದಂಬರಿಕಾರ. ಸ್ವಭಾವವಾದದ ಪ್ರವರ್ತಕರಲ್ಲಿ ಪ್ರಮುಖ.

ಬದುಕು

[ಬದಲಾಯಿಸಿ]

ಈತನ ತಾಯಿ ಫ್ರೆಂಚರವಳು. ತಂದೆ ಇಟಲಿಗರ್ಧ ಗ್ರೀಸಿಗರ್ಧ ಸೇರಿದವ. ಅವನೊಬ್ಬ ಎಂಜಿನಿಯರ್, ಏ ಅನ್‍ಪ್ರೊವೆನ್ಸ್ ಎಂಬ ಊರಿನಲ್ಲಿ. ಜಗಳಗಂಟಿಯಾಗಿದ್ದು ಊರಿನ ಪುರಸಭೆಯ ಮೇಲೆ ದಾವಾಹಾಕಿ ವ್ಯಾಜ್ಯ ತೀರ್ಮಾನವಾಗುವ ಮುನ್ನ 1847ರಲ್ಲಿ ಮೃತ್ಯವಶನಾದ. ಕುಟುಂಬ ಬಡತನದಲ್ಲಿ ನರಳಿತು. ಏಮೀಲ್ ಅಲ್ಲಿಯೇ ಅಲ್ಪಸ್ವಲ್ಪ ವಿದ್ಯಾಭ್ಯಾಸ ಪಡೆದುಕೊಂಡು ಹೆಚ್ಚಿನ ವಿದ್ಯಾರ್ಜನೆಗೆ ಪ್ಯಾರಿಸ್ಸಿಗೆ ಬಂದ (1858). ಬಿ.ಎ. ಪದವಿ ಅವನಿಗೆ ಸಿಕ್ಕಲಿಲ್ಲ. 1860ರಲ್ಲಿ ಪುಸ್ತಕ ಪ್ರಕಟನಕಾರ ಹ್ಯಾಚೆಟ್ ಎಂಬಾತನ ಸಂಸ್ಥೆಯಲ್ಲಿ ಒಂದು ಪೌಂಡು ವಾರವೇತನದ ಮೇಲೆ ಪುಸ್ತಕ ಕಟ್ಟುವ ಕೆಲಸದಲ್ಲಿ ನಿರತನಾಗಿ ಐದು ವರ್ಷ ಅದೇ ಉದ್ಯೋಗದಲ್ಲಿದ್ದ. ಹಾಗೆಯೇ ಪದ್ಯಗಳನ್ನೂ ಸಣ್ಣ ಕಥೆಗಳನ್ನೂ ಬರೆಯತೊಡಗಿದ. 1864ರಲ್ಲಿ ಕೆಲವು ಸಣ್ಣ ಕಥೆಗಳನ್ನೂ ಮಾರನೆಯ ವರ್ಷ ಒಂದು ಕಾದಂಬರಿಯನ್ನೂ ಪ್ರಕಟಿಸಿದ. 1886ರ ಪ್ರಾರಂಭದಲ್ಲಿ, ಇದ್ದ ಉದ್ಯೋಗವನ್ನು ಬಿಟ್ಟು ಸಾಹಿತ್ಯವನ್ನೇ ಕಸಬನ್ನಾಗಿ ಮಾಡಿಕೊಂಡು ಜೀವನದ ಹೋರಾಟ ನಡೆಸಿದ. ಅನೇಕ ವರ್ಷ ಕಾಸಿಲ್ಲದೆ ಕಷ್ಟ ಪಟ್ಟನಾದರೂ ಆತ್ಮವಿಶ್ವಾಸವನ್ನೂ ಧೈರ್ಯವನ್ನೂ ಕಳೆದುಕೊಳ್ಳಲಿಲ್ಲ.

ಅನೇಕ ಹುರುಪಿನ ವಿಮರ್ಶೆಗಳನ್ನೂ ಕಸುವುಳ್ಳ ಪ್ರಬಂಧಗಳನ್ನು ಬರೆದ. 1868ರಲ್ಲಿ ಪ್ರಕಟವಾದ ಆತನ ಎರಡು ಕಾದಂಬರಿಗಳ ತುಂಬ ಘೋರ ಬೀಭತ್ಸತೆ ಗಿಡಿದಿತ್ತು. 1870ರಲ್ಲಿ ಹೆಬ್ಬಯಕೆಯ ಸಾಹಿತ್ಯೋದ್ಯಮವೊಂದನ್ನು ಕೈಹಿಡಿದ. ರೂಗನ್-ಮಕ್ಕಾರ್ ಎಂಬೊಬ್ಬನ ಮನೆತನದ ಐದು ತಲೆಮಾರಿನ ಸಂಸಾರ ಚಿತ್ರವನ್ನು 20 ಕಾದಂಬರಿಗಳಲ್ಲಿ ರೂಪಿಸಲು ಯತ್ನಿಸಿದ. ಆ ಸರಣಿಯಲ್ಲಿ ಮೊದಲ ಕೃತಿ ರೂಗನರ ನಸೀಬು 1871ರಲ್ಲೂ ಕೊನೆಯ ಕೃತಿ ಡಾಕ್ಟರ್ ಪ್ಯಾಸ್ಕಲ್ 1893ರಲ್ಲೂ ಪ್ರಕಟಗೊಂಡವು. 23 ವರ್ಷಗಳ ಸತತ ಪ್ರಯತ್ನವ ಕಾದಂಬರಿಗಳ ಕೆಲವು ವಿಶಿಷ್ಟ ಲಕ್ಷಣಗಳೂ ಕವಿಗೆ ಖ್ಯಾತಿ ತಂದುಕೊಟ್ಟವು. 30 ಮುಖ್ಯ ಪಾತ್ರಗಳೂ ಸುಮಾರು 1000 ಅಮುಖ್ಯ ಪಾತ್ರಗಳೂ ಆ ಬೃಹತ್ಕಥೆಯಲ್ಲಿ ರೂಪ ತಾಳಿದೆ; ಫ್ರಾನ್ಸಿನ ಜೀವನದ ನಾನಾ ಮುಖಗಳು ಸುವ್ಯಕ್ತವಾಗಿವೆ. 1877ರಲ್ಲಿ ಪ್ರಕಟವಾದ ಲ ಅಸಮ್ಮ ಎಂಬ ಕುಡಿತವನ್ನು ಕುರಿತ ಕಾದಂಬರಿಯೂ 1880ರಲ್ಲಿ ಪ್ರಕಟವಾದ ನಾನಾ ಎಂಬ ಕಾದಂಬರಿಯೂ ಚೆನ್ನಾಗಿ ಖರ್ಚಾಗಿ, ಮತ್ತೆ ಮತ್ತೆ ಮುದ್ರಣಗೊಂಡು ಲೇಖಕನಿಗೆ ಹಣವನ್ನೂ ಕೀರ್ತಿಯನ್ನೂ ತಂದವು. ಅನಂತರ ಜೋಲಾ ರೋಮ್, ಪ್ಯಾರಿಸ್, ಲೂರ್ಡ್ ನಗರಗಳ ಅಚ್ಚರಿಯ ಚರಿತ್ರೆಗಳನ್ನು ಕಥಾರೂಪದಲ್ಲಿ ವಿವರಿಸಿದೆ. 1899 ರಿಂದ 1902ರ ವರೆಗಿನ ಕಾಲದಲ್ಲಿ ಬಹುಸಂತಾನ, ದುಡಿಮೆ. ಸತ್ಯ-ಇವುಗಳ ಮೇಲೆ ಮೂರು ಗ್ರಂಥಗಳನ್ನು ಬರೆದ. ನಾಲ್ಕನೆಯದಾದ ನ್ಯಾಯ ಎಂಬುದು ಲಿಖಿತವಾಗದೇ ನಿಂತಿತು. ಅವನ ಹೇಳಿಕೆಯಂತೆ ಹೆರಿಗೆ, ಕಾಯಕ, ಸತ್ಯ, ನ್ಯಾಯ,-ಈ ನಾಲ್ಕೂ ನೂತನ ಸುವಾರ್ತೆಗಳು. ಅವನದ್ದೇ ಆದ ಉದ್ಧಾರಕ ತತ್ತ್ವಗಳನ್ನು ಬರೆಯದೆ ಒಂದು ದಿನವನ್ನೂ ಜೋಲಾ ಕಳೆಯಲಿಲ್ಲ.

ರಾಷ್ಟ್ರೀಯ ಹೆಗ್ಗೌರವಕ್ಕೆ ಕಾರಣವಾದ ಹೋರಾಟ

[ಬದಲಾಯಿಸಿ]

ಸಾಹಿತ್ಯ ತಂದುಕೊಟ್ಟ ಯಶಸ್ಸಿನ ಜೊತೆಗೆ 1898-99ರಲ್ಲಿ ಅವನಿಂದ ಆದ ಒಂದು ಸೇವೆ ಅವನ್ನು ರಾಷ್ಟ್ರೀಯ ವ್ಯಕ್ತಿಯ ಹೆಗ್ಗೌರವಕ್ಕೆ ಏರಿಸಿತು. ಕ್ಯಾಪ್ಟನ್ ದೇಪಸ್ ಎಂಬಾತನನ್ನು ದೆವ್ವ ದ್ವೀಪವೆಂಬ ಏಕಾಂತ ಸೆರೆಮನೆಗೆ ದೂಡಿದ್ದರು. ಅವನು ದಿಟವಾಗಿ ಪ್ರಾಮಾಣಿಕ. ತಪ್ಪಿತಸ್ಥ ಉನ್ನತ ವಂಶದ ಬೇರೊಬ್ಬ. ವರ್ಷಗಳ ಅನಂತರ ಡ್ರೇಫಸ್ಸನ ಹೆಂಡತಿ ತನ್ನ ಪತಿಯ ಬಿಡುಗಡೆಗಾಗಿ ಜೋಲಾನ ಸಹಾಯ ಕೋರಿದಳು. ಜೋಲಾ ಆಕೆಗೆ ಭರವಸೆಯಿತ್ತು ಹಿಂದಾದ ತೀರ್ಪನ್ನು ತಿರಸ್ಕರಿಸಬೇಕೆಂದೂ ತಿರುಗು ಪರಿಶೀಲಿಸಿ ನಿಜವಾದ ಅಪರಾಧಿಗಳನ್ನು ಶಿಕ್ಷಿಸಬೇಕೆಂದೂ ಸರ್ಕಾರವನ್ನು ಬಹಿರಂಗವಾಗಿ ಕಳತೊಡಗಿದ. ಎದುರುಕಕ್ಷಿಗಳಾದರೊ ಬಲಸಾಮಥ್ರ್ಯಗಳುಳ್ಳ ಸೇನಾನಿಗಳು. ಯುದ್ಧಮಂತ್ರಿಯೂ ಅವರ ಕಡೆಗಿದ್ದ. ಜೋಲಾ ಬೆದರಲಿಲ್ಲ. ಹೆಮ್ಮೆಟ್ಟಲಿಲ್ಲ. ಆ ವಿಚಾರ ನ್ಯಾಯಾಸ್ಥಾನದ ಮುಂದೆ ಬರುವಂತೆ ಮಾಡಿದ. ಕೊನೆಗೆ ಡ್ರೇಫಸ್ ನಿರ್ದೋಷಿಯೆಂದು ಬಿಡುಗಡೆ ಹೊಂದಿದ. ತನ್ನ ಮಿತ್ರ, ಸ್ಥಾನ, ಕೀರ್ತಿಗೆ ಕಠಿಣ ಅಪಾಯ ಒದಗಬಹುದಾಗಿದ್ದರೂ ಹಿಂಜಿರಿಯದೆ ಅನ್ಯಾಯಕ್ಕೊಳಗಾಗಿದ್ದ ಪುಟ್ಟ ಸಂಸಾರವನ್ನು ಉದ್ಧಾರಗೈದು ಧೀರನೆನ್ನಿಸಿಕೊಂಡ ಜೋಲಾ ಬಹು ಜನಪ್ರಿಯವೆನಿಸಿದ. 1902ರಲ್ಲಿ ಆತ ಸತ್ತಾಗ ಜನ ಅದ್ಧೂರಿಯಾಗಿ ಆತನ ಅಂತ್ಯಸಂಸ್ಕಾರ ನಡೆಸಿದರು. ಸುಪ್ರಸಿದ್ದ ಸಾಹಿತಿ ಅನತೋಲ್ ಫ್ರಾನ್ಸ್ ಆ ಸಂದರ್ಭದಲ್ಲಿ ಜೋಲಾನನ್ನು ಕುರಿತು ಭಾವೋದ್ರೇಕದಿಂದ ಮಾತನಾಡಿದ. ಅಲ್ಲಿ ನೆರೆದವರಲ್ಲಿ ಡ್ರೇಫಸನೂ ಒಬ್ಬ.

ಐದಾರು ಮಂದಿ ಯುವಕರು ಜೋಲಾನ ಶಿಷ್ಯರಾಗಲು ಹಾತೊರೆದರು. ಆದರೆ ಜೋಲಾ ಯಾವ ಮಠವನ್ನೂ ಸ್ಥಾಪಿಸಲು ಇಚ್ಚಿಸಲಿಲ್ಲ. ಅದು ವ್ಯಕ್ತಿ ಸ್ವಾತಂತ್ರ್ಯದ ಕೊಲೆ ಎಂದು ಅವನ ಅಭಿಪ್ರಾಯ. ಯೂರೋಪು, ಅಮೆರಿಕಗಳಲ್ಲೆಲ್ಲ ಜೋಲಾನ ಖ್ಯಾತಿ ಹರಡಿತು.

ಜೋಲಾನ ಸಾಹಿತ್ಯಗುಣ

[ಬದಲಾಯಿಸಿ]

ಜೋಲಾ ರೂಢಿಗೆ ತಂದ ರಚನಾಪದ್ಧತಿ ಬಿಡಿ ಪಾತ್ರಗಳ ಮನೋವಿಶ್ಲೇಷಣಕ್ಕೆ ಅನುಕೂಲವಾಗಿರಲಿಲ್ಲ. ಆದ್ದರಿಂದ ಅವನ ಪಾತ್ರಗಳು ಆವೇಶ ಪ್ರಮುಖವಾದವು: ರೀತಿನೀತಿಗಳ ನಿರ್ಬಂಧವಾವುದನ್ನು ಅರಿಯದೆ ರಭಸದಿಂದ ಕಾರ್ಯಾನುರಕ್ತವಾಗುವಂಥವು. ವ್ಯಕ್ತಿಯನ್ನು ಚಿತ್ರಿಸುವುದಕ್ಕಿಂತ ಹೆಚ್ಚಾಗಿ ಜೋಲಾ ಗುಂಪು ಸಮೂಹಗಳನ್ನು ಬಣ್ಣಿಸುವುದರಲ್ಲಿ ನಿಸ್ಸೀಮ. ಜನಸಂದೋಹ ಅತಿ ಉಲ್ಲಾಸದಲ್ಲಿಯೋ ಅತಿ ಸಂಕಟದಲ್ಲಿಯೋ ದಾಪಿಡುವುದನ್ನು ಅವನಷ್ಟು ಆಸಕ್ತಿಯಿಂದಲೂ ಕಾಲಾಯುಕ್ತವಾಗಿಯೂ ಮನಮುಟ್ಟುವಂತೆಯೂ ನಿರೂಪಿಸಿದವರು ವಿರಳ. ಗಣಿಕಾರ್ಮಿಕರ ದಾಳಿ, ರಾವುತರ ಮುನ್ನುಗ್ಗುವಿಕೆ, ಪ್ಯಾರಿಸ್ ರಾಜಮಾರ್ಗದ ಗಲಭೆ ಗಲಾಟೆ ಇತ್ಯಾದಿ ವರ್ಣನೆಗಳು ಮರೆಯಲಾಗದಂಥವು. ಆತನದು ಭವ್ಯಕಾವ್ಯದ ಕವಿಯ ವಿಭಾವನೆ. ನಿಸರ್ಗ ವರ್ಣನೆಯಲ್ಲಿ ಆತ ವಿಶಾಲ ಗಗನ, ವಿಶಾಲ ಭೂಮಿ, ಭೋರಿಡುತ್ತ ಹರಿಯುವ ಮಹಾನದಿ, ಖುತುಗಳ ಗಾಢ ಪರ್ಯಟನ-ಮುಂತಾದುವುಗಳ ಭಕ್ತ. ಒಂದು ವಿಧದ ರಮ್ಯ ಸಾಂಕೇತಿಕತೆ ಅವನ ಅಪೂರ್ವ ಗುಣ; ನಿರ್ಜೀವ ಪದಾರ್ಥಗಳಿಗೆ ಮಾನುಷ ವ್ಯಕ್ತಿತ್ವವನ್ನು ಆರೋಪಿಸಿ ಅವು ರುದ್ರರಮಣೀಯತೆಯಿಂದ ಮರೆಯುವಂತೆ ಆತ ಎಸಗಬಲ್ಲ. ಒಂದು ಗಣಿ ಒಂದು ರೈಲ್ವೆ ಎಂಜಿನ್ನು, ಒಂದು ಪಾನದಂಗಡಿ, ಒಂದು ಸಂತೆಮಾಳ-ಯಾವುದೇ ಆಗಲಿ ಆತನ ಹಸ್ತಗುಣದಿಂದ ದೈತ್ಯನಂತೆ ಎದ್ದುನಿಂತು ಹತಭಾಗ್ಯರನ್ನು ಇಡಿಯಾಗಿ ನುಂಗಬಲ್ಲದು. ಆದರೆ ವಿಕ್ಟರ್ ಹ್ಯೂಗೋನಂತೆ ಜೋಲಾ ಮೊದಲ ವರ್ಗದ ಕೆಲಸಗಾರನಲ್ಲ.

ಸಾಹಿತ್ಯ ವಿಮರ್ಶೆ

[ಬದಲಾಯಿಸಿ]

ಸಾಹಿತ್ಯ ವಿಮರ್ಶೆಯಲ್ಲಿ ಜೋಲಾನ ಸ್ಥಾನ ಗಣನೀಯವಾದುದಲ್ಲ. ಅಷ್ಟೇಕೆ, ಅವನ ತತ್ತ್ವಗಳನ್ನು; ಅರಿಯದ ಬಾಲಕನ ಅಭಿಪ್ರಾಯಗಳೆಂದು ವಿಮರ್ಶಕರು ಹಳಿದಿದ್ದಾರೆ. ವಿಮರ್ಶೆಯ ವಿಚಾರವಾಗಿ ನಾಲ್ಕೈದು ಪ್ರಬಂಧಗಳನ್ನು 1880-81ರಲ್ಲಿ ಆತ ಬರೆದ; ಅವುಗಳಲ್ಲಿ ತನ್ನ ಮಮತೆಯ ಸಿದ್ಧಾಂತವಾದ ಪ್ರಾಯೋಗಿಕ ಕಾದಂಬರಿ ಎಂಬುದನ್ನು ಪ್ರತಿಪಾದಿಸಿದ. ಪ್ರಾಯೋಗಿಕತೆ ಆಗಾಗಲೇ ಪ್ರಚುರವಾಗಿದ್ದ ಸ್ವಾಭಾವಿಕತೆಯ ಒಂದು ಶಾಖೆ ಅಷ್ಟೆ. ಸ್ವಭಾವಿಕತೆಯೇ ಅದರ ಮೂಲಾಧಾರ. ಜೋóಲಾ ಹೀಗೆ ವಾದಿಸಿದ: ವೈದ್ಯವಿದ್ಯೆ ಒಂದು ಕಲೆಯಾಗಿತ್ತು. ಇತ್ತೀಚೆಗೆ ಒಂದು ವಿಜ್ಞಾನವಾಗುತ್ತಿದೆ. ಹಾಗೆಯೇ ಕಲೆಯಾಗಿರುವ ಸಾಹಿತ್ಯವೂ ಏತಕ್ಕೆ ವಿಜ್ಞಾನವಾಗಬಾರದು ? ಹಾಗಾಗುವುದಕ್ಕೆ ಸಾಹಿತಿ ಪ್ರಕೃತಿವಿಜ್ಞಾನಿಯಂತೆ ತಾನೂ ಪ್ರಯೋಗಪರೀಕ್ಷೆಗಳನ್ನು ಬಳಸಿಕೊಳ್ಳಬೇಕು. ಜನಗಳ ಕಾರ್ಯರಾಶಿಯನ್ನು ಪರಿಶೀಲಿಸಿ ಹಿಂದೆ ಅಡಗಿರುವ ಮನುಷ್ಯರನ್ನೂ ಮನುಷ್ಯಸ್ವಭಾವವನ್ನೂ ಹೊರಗೆಡಬೇಕು. ಪುಸ್ತಕ, ಚಿತ್ರ ಮುಂತಾದವುಗಳ ಸಹಾಯದಿಂದ ಸಾಮಾಜಿಕ ಜೀವನವನ್ನು ಯಥಾರ್ಥವಾಗಿ ನಿರೂಪಿಸಬೇಕು. ಕಾದಂಬರಿಕಾರ ಮೊದಲ ರೈಲ್ವೆ ಅಂಗಡಿ, ಕಾಯಿಪಲ್ಯದ ಮಾರುಕಟ್ಟೆ, ಸೈನಿಕ ವಸತಿ, ಗಣಿ, ದಳ್ಳಾಳಿ ಕಚೇರಿ, ಭಿಕ್ಷುಕರ ಬೀಡು, ವೇಶ್ಯಾವಾಟಿಕೆ-ಮುಂತಾದುವಕ್ಕೆ ಹೋಗಿ ನೋಡಿ ಕೇಳಿ ಮಾನವಿಕ ವರದಿಯೊಂದನ್ನು ತಯಾರಿಸಿಕೊಳ್ಳಬೇಕು. ಆದರೆ ಆತ ಕೇವಲ ಸುದ್ದಿಗಾರನಾಗಕೂಡದು; ನೀರಸವರದಿಯಿಂದ ಅವನೆಂದಿಗೂ ಕಾದಂಬರಿಕಾರನಾಗಲಾರ. ತನ್ನ ಬುದ್ಧಿಶಕ್ತಿ, ವಿಭಾವಶಕ್ತಿ. ಕಲಾಕೌಶಲ್ಯಗಳ ನೆರವಿನಿಂದ ಜೀವಂತ ಸ್ತ್ರೀಪುರುಷರನ್ನು ಸೃಷ್ಟಿಸಬೇಕು. ಉಜ್ವಲ ಪರಿಸರ ಸನ್ನಿವೇಶಗಳನ್ನು ಹಿನ್ನೆಲೆಯಾಗಿಸಬೇಕು. ಸ್ವಾರಸ್ಯಕರವಾಗಿ ಕಥೆಯನ್ನು ಹೇಳಬೇಕು. ಆದರ ಸುಳ್ಳಿಗಾಗಲಿ ಬರಿ ಕಲ್ಪನೆಗಾಗಲಿ ರವೆಯಷ್ಟೂ ಆಸ್ಪದವಿರಬಾರದು. ನೈಪುಣ್ಯ ಪ್ರತಿಭೆ ಹಿರಿಯ ಉದ್ದೇಶ ಅವನನ್ನು ನಡೆಸದಿದ್ದರೆ, ಪ್ರಾಯೋಗಿಕ ವಿಧಾನ ಮೊಂಡುಕತ್ತಿಯಂತೆ ಅನುಪಯುಕ್ತ. ಈ ಬಗೆಯ ನಿರ್ಮಾಣ ಕೃಷಿ ಎರಡು ವಿಧದಲ್ಲಿ ಸಾರ್ಥಕವಾಗುತ್ತದೆ. ವಿಷಯ ಯಾವುದೇ ಆಗಲಿ ಅದನ್ನು ಸಾಹಿತ್ಯಕ್ಕೆ ಬಳಸಿಕೊಳ್ಳಬಹುದು ಅಶ್ಲೀಲತೆಯೆಂಬ ಮಾತು ಅಲ್ಲಿ ಏಳಲಾರದು. ಮಾನವವಿಕಾಸದಲ್ಲೂ ಸಾಹಿತ್ಯಪ್ರಗತಿಯಲ್ಲೂ ಜೋಲಾನಿಗೆ ದೃಢನಂಬಿಕೆ ಇತ್ತು. ಅವನ ಹೇಳಿಕೆಯಂತೆ ಸಾಹಿತ್ಯವೊಂದು ಪ್ರವಾಹದಂತೆ ಹರಿಯುತ್ತಿದೆ. ಕಾದಂಬರಿ ಎಂಬುದು ಪ್ರವಾಹದ ನೆತ್ತಿಯಲ್ಲಿ ಬುರುಗಾಗಿ ಕಾಣುವ ನೊರೆ, ಹೊಸತನವೂ ವೈಜ್ಞಾನಿಕತೆಯೂ ಅದರ ಲಾಂಛನ. ನಾಟಕ ಹಿಂದೆಬೀಳುತ್ತಿದೆಯೆಂದೇ ಅವನ ಭೀತಿ. ಅದೂ ಸ್ವಾಭಾವಿಕತೆಯನ್ನು ರೂಢಿಸಿಕೊಳ್ಳಬೇಕು. ಇಲ್ಲದಿದ್ದರೆ ಅದಕ್ಕೆ ಸಾವು ನಿಶ್ಚಯ. ಹಾಗೆಯೇ ಪದ್ಯಕಾವ್ಯವೂ ಏನೋ ಒಂದು ಸಂದಿಗ್ಥಸ್ಥಿತಿಯಲ್ಲಿ ಕೃಶವಾಗುತ್ತಿದೆಯೆಂದೂ ಅದರ ಭವಿಷ್ಯದ ಬಗ್ಗೆ ತನಗೆ ಅತಿಯಾದ ಶಂಕೆಯುಂಟೆಂದೂ ಅವನ ಅಭಿಮತ. ತತ್ತ್ವದೃಷ್ಟಿಯಿಂದ ಜೋಲಾಗೆ ಟೇನ್ ಒಬ್ಬ ಗುರು; ತಾನು ಅವನ ಶಿಷ್ಯನೆಂದೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ. ಸಂತ ಬವ್ ಇನ್ನೊಬ್ಬ ಗುರು. ಬರುಬರುತ್ತ ಅವರಿಬ್ಬರ ಲೋಪದೋಷ ಹೆಚ್ಚು ಹೆಚ್ಚು ಸ್ಪಷ್ಟವಾಗಿ ಕಾಣತೊಡಗಿತು. ಬವ್ ಹೆಂಗಸಿನಂತೆ ಮೃದು. ಟೀನ್ ತುಂಬ ಗಡುಸು. ಕಾಂದಬರಿ ರಚನೆಯಲ್ಲಿ ಬಲ್‍ಜಾóಕ್ ಅವನಿಗೆ ಆದರ್ಶ. ಬಾಲ್‍ಜಾಕ್ ಎಂದರೆ ಇಡೀ ಫ್ರಾನ್ಸು-ಎಂಬುದು ಅವನ ಮತ. ಎಲ್ಲವನ್ನೂ ಆತ ನೋಡಿದನಂಥೆ ಹೇಳಬೇಕಾದ್ದೆಲ್ಲವನ್ನೂ ಹೇಳಿದನಂತೆ. ಷೇಕ್ಸ್‍ಪಿಯರನ ವೈಭವ ದೊಡ್ಡದೆಂದು ಜೋಲಾ ಒಪ್ಪಿದ ಆದರೆ ಗಯಟೆ ಕವಿ ಮಾತ್ರ ವಸ್ತುಸಂಗ್ರಹಾಲಯದಲ್ಲಿ ಇಡತಕ್ಕ ಕವಿಯೆಂದು ಆಕ್ಷೇಪಿಸಿದ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: