ವಿಷಯಕ್ಕೆ ಹೋಗು

ಎವರೆಸ್ಟ್‌ ಶಿಖರಾರೋಹಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇತಿಹಾಸ

[ಬದಲಾಯಿಸಿ]

ಸಾಹಸ ಸಾಧನೆಯ ಪ್ರತೀಕವಾದ ಪರ್ವತಾರೋಹಣದ ಪರಿಮಿತಿಯಾದ ಎವರೆಸ್ಟ್ ಶಿಖರಾರೋಹಣ ಇಡೀ ಮಾನವಕುಲಕ್ಕೆ ಒಂದು ದೊಡ್ಡ ಸವಾಲಾಗಿತ್ತು. ಸುಮಾರು 100ಕ್ಕೂ ಹೆಚ್ಚು ವರ್ಷಗಳ ಸತತ ಪ್ರಯತ್ನವಾಗಿ ಅನೇಕ ಸಾವು-ನೋವುಗಳನ್ನು ಅನುಭವಿಸಿ ಕಡೆಗೂ ಮಾನವನು ಪಡೆದ ಸಾಧನೆ ಅತ್ಯಂತ ಮಿಗಿಲಾದುದು. ಇದರ ಹಿಂದೆ ಒಂದು ದೊಡ್ಡ ಇತಿಹಾಸವೇ ನಡೆದುಹೋಗಿದೆ. ಇದರ ಆಕರ್ಷಣೆ, ಮಾನವನ ಛಲಗಾರಿಕೆಗೆ ನಿದರ್ಶನ: 1923ರಲ್ಲಿ ಶಿಖರಾರೋಹಣದಲ್ಲಿ ಅತ್ಯಂತ ಆಸಕ್ತಿವಹಿಸುತ್ತಿದ್ದ ಜಾರ್ಜ್ ಮಲ್ಲೋರಿಯವರನ್ನು ಪತ್ರಿಕಾ ವರದಿಗಾರನೊಬ್ಬ "ಎವರೆಸ್ಟ್‍ನ್ನು ಏಕೆ ಹತ್ತುವಿರಿ?" ಎಂದು ಕೇಳಿದ ಪ್ರಶ್ನೆಗೆ ಅವರು ನೀಡಿದ ಉತ್ತರ "ಬಿಕಾಸ್ ಇಟ್ ಈಸ್ ದೇರ್ (ಅದು ಅಲ್ಲಿರುವುದರಿಂದ)"! ಎಂದಿಗೂ ಮರೆಯಲಾಗದ ಅರ್ಥಗರ್ಭಿತ ವೈಚಾರಿಕವಾದ ಉಕ್ತಿ ಇದಾಯಿತು.

ಭಾರತ ಮತ್ತು ಟಿಬೆಟ್‍ನ ಮಧ್ಯಭಾಗದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಸುಮಾರು 2,400 ಕಿ.ಮೀ.ಗಳು ಉತ್ತರದಿಂದ ದಕ್ಷಿಣಕ್ಕೆ ಸುಮಾರು 400 ಕಿ.ಮೀ. ವಿಸ್ತೀರ್ಣದಲ್ಲಿ ಹಬ್ಬಿರುವ ಅತಿ ದೊಡ್ಡ ಪರ್ವತಶ್ರೇಣಿ ಹಿಮಾಲಯ. ಇದರ ಸಾವಿರಾರು ಹಿಮಚ್ಛಾದಿತ ಉನ್ನತ ಶಿಖರಗಳಲ್ಲಿ ಒಂದಾದ ಎವರೆಸ್ಟ್ ಶಿಖರವನ್ನು 1841ರಲ್ಲಿ ಮೊಟ್ಟಮೊದಲಿಗೆ ಗುರುತಿಸಿದವರು ಭಾರತದಲ್ಲಿ ಸೇವೆ ಸಲ್ಲಿಸುತ್ತಿದ್ದ ಬ್ರಿಟಿಷ್ ಸರ್ವೇಯರ್ ಜನರಲ್ ಸರ್ ಜಾರ್ಜ್ ಎವರೆಸ್ಟ್ ಎಂಬುವರು. ಇನ್ನೂ ಹೆಸರಿಸಿಲ್ಲದ ಈ ಶಿಖರವನ್ನು ಪೀಕ್-ಘಿಗಿ ಎಂದು ಕರೆದರು.

1852ರಲ್ಲಿ ನಡೆಸಿದ ಮಾಪನದಲ್ಲಿ ಇದು ಜಗತ್ತಿನ ಅತ್ಯುನ್ನತ ಶಿಖರವೆಂದು ಪರಿಗಣಿಸಲ್ಪಟ್ಟಿತು. 1856ರ ಹೊತ್ತಿಗೆ ಈ ಶಿಖರದ ಎತ್ತರ 29,002 ಅಡಿಗಳೆಂದು ತೀರ್ಮಾನವಾಯಿತು. ಈ ಕಾರ್ಯದಲ್ಲಿ ಉತ್ತಮ ಸೇವೆ ಸಲ್ಲಿಸಿದ ಸರ್ವೇ ಆಫ್ ಇಂಡಿಯಾದ ನಾಥಾಸಿಂಗ್ ಭಾರತೀಯ ನೌಕರನೆಂಬುದು ಹೆಮ್ಮೆಯ ವಿಷಯ. ಪೀಕ್‍ಗಳನ್ನು ಶೋಧಿಸಿದ ಕೀರ್ತಿಗಾಗಿ 1865ರಲ್ಲಿ ಸರ್ ಜಾರ್ಜ್ ಎವರೆಸ್ಟ್‍ರ ಹೆಸರನ್ನೇ ಶಿಖರಕ್ಕೆ ನಾಮಕರಣ ಮಾಡಿ "ಮೌಂಟ್ ಎವರೆಸ್ಟ್ ಎಂದು ಕರೆಯಲಾಯಿತು. 1920ರಲ್ಲಿ ಟಿಬೆಟ್‍ನ ದಲಾಯಿ ಲಾಮ ಅವರ ಅನುಮತಿಯನ್ನು ಪಡೆದು ಎವರೆಸ್ಟ್‍ನ ಉತ್ತರ ಭಾಗದ ಪರಿಶೋಧನೆ ಮತ್ತು ಶಿಖರಾರೋಹಣ ಪ್ರಯತ್ನ ಮಾಡಲು ಸರ್ ಫ್ರಾನ್ಸಿಸ್ ಯಂಗ್ ಹಸ್ಬೆಂಡ್ ಅವರ ನೇತೃತ್ವದ ಸಮಿತಿಯೊಂದನ್ನು ರಚಿಸಲಾಯಿತು.

ವಿಶ್ವದ ಎಲ್ಲ ದೇಶಗಳ ಪರ್ವತಾರೋಹಿಗಳ ಗುರಿಯಾಗಿದ್ದ ಎವರೆಸ್ಟ್ ಆರೋಹಣದಲ್ಲಿ ಪ್ರಾರಂಭದಿಂದಲೂ ಬ್ರಿಟಿಷರದು ಮೇಲುಗೈ ಆಗಿತ್ತು. ಇದರ ಫಲವಾಗಿ 1921ರಲ್ಲಿ ಎವರೆಸ್ಟ್ ಶಿಖರಾರೋಹಣದ ಮೊಟ್ಟಮೊದಲ ಸಾಹಸಯಾತ್ರೆ ಕರ್ನಲ್ ಚಾಲ್ರ್ಸ್ ಹೋವಾರ್ಡ್ ಬ್ಯೂರಿ ನಾಯಕತ್ವದ ಬ್ರಿಟಿಷ್ ತಂಡ. ಪ್ರಥಮ ಪ್ರಯತ್ನದಲ್ಲಿಯೇ ತಂಡದ ಗೈ ಬುಲ್ಲಾರ್ ಮತ್ತು ಜಾರ್ಜ್ ಮಲ್ಲೋರಿ 23,000 ಅಡಿಗಳ (7,000 ಮೀ.) ಎತ್ತರದ ಉತ್ತರ ಮೇಲ್ಕಣಿವೆ (ನಾರ್ತ್ ಕೋಲ್)ಯವರೆಗೆ ಆರೋಹಣ ಮಾಡಿ ಶಿಖರದ ತುದಿ ಮುಟ್ಟುವ ಸಾಧ್ಯತೆಯನ್ನು ಕಂಡುಕೊಂಡರು. ಮರುವರ್ಷದಲ್ಲಿಯೇ (1922) ಸಿ ಜಿ ಬ್ರೂಸ್ ನಾಯಕತ್ವದ ತಂಡವು ಹಿಂದಿನ ದಾರಿಯಲ್ಲೇ ಮುಂದುವರೆದು 27,300 ಅಡಿ (8,320 ಮೀ.)ಗಳವರೆಗೆ ಏರಿತು. ಪ್ರಥಮ ಬಾರಿಗೆ ಆಮ್ಲಜನಕವನ್ನು ಬಳಸಲಾಯಿತು. ದುರದೃಷ್ಟವಶಾತ್ ಈ ಸಾಹಸದಲ್ಲಿ ಏಳು ಜನ ಶೆರ್ಪಾಗಳು ನಾರ್ತ್‍ಕೋಲ್‍ನ ಕೆಳಭಾಗದಲ್ಲಿ ಸಂಭವಿಸಿದ ಭೀಕರ ನೀರ್ಗಲ್ಲಿನ ಕುಸಿತದಲ್ಲಿ ಸಿಕ್ಕಿ ಜೀವ ತೆತ್ತರು.

ಮತ್ತೆ 1924ರಲ್ಲಿ 3ನೆಯ ಬ್ರಿಟಿಷ್ ತಂಡ ಸಿದ್ಧವಾಯಿತು. ಜಿ ಬ್ರೂಸ್‍ರ ಅನಾರೋಗ್ಯದ ಕಾರಣ ನೇತೃತ್ವವನ್ನು ಜಾರ್ಜ್ ಮಲ್ಲೊರಿ ವಹಿಸಿಕೊಂಡರು. ಇದಲ್ಲದೆ ತಂಡಕ್ಕೆ ಹೊಸ ಸದಸ್ಯರುಗಳಾಗಿ ನೋಯೆಲ್ ಇ ಓಡೆಲ್ ಮತ್ತು ಆ್ಯಂಡ್ರ್ಯೂ ಇರ್ವೀನ್ ಸೇರಿಕೊಂಡರು. ತಂಡದ ಎಡ್ವರ್ಡ್ ನಾರ್ಟನ್ ಮತ್ತು ಹೊವಾರ್ಡ್ ಸೋಮರ್‍ವೆಲ್ ಆಮ್ಲಜನಕವಿಲ್ಲದೆ ಆರೋಹಣ ನಡೆಸಿ, 28,126 ಅಡಿ (8,570 ಮೀ.) ಎತ್ತರವನ್ನು ತಲುಪಿದರು. ಮುಂದಿನ 29 ವರ್ಷಗಳವರೆಗೆ ಯಾರೂ ತಲಪಲಾಗದಿದ್ದ ಎತ್ತರ ಅದಾಗಿತ್ತು. ಆರೋಹಣದ ಮರು ಪ್ರಯತ್ನದಲ್ಲಿ ಜಾರ್ಜ್ ಮಲ್ಲೊರಿ ಮತ್ತು ಆ್ಯಂಡ್ರ್ಯೂ ಇರ್ವೀನ್ ಆಮ್ಲಜನಕ ಸಲಕರಣೆಯೊಂದಿಗೆ ಬಹಳ ಎತ್ತರಕ್ಕೇರಿದರು.

ನೋಯೆಲ್ ಓಡೆಲ್

[ಬದಲಾಯಿಸಿ]

ಆಕಾಶದಲ್ಲಿ ಎರಡು ಚುಕ್ಕಿಗಳಂತಿದ್ದ ಇವರನ್ನು ನೋಯೆಲ್ ಓಡೆಲ್ ಕಂಡಿದ್ದರು. ನಂತರ ಕವಿದ ಮಂಜಿನಿಂದ ಮುಂದೇನಾಯಿತೆಂದು ತಿಳಿಯಲೇ ಇಲ್ಲ. ಇವರು ವಾಪಸಾಗಲಿಲ್ಲ. ಈ ಇಬ್ಬರು ಪರ್ವತಾರೋಹಿಗಳು ಎವರೆಸ್ಟ್ ತುದಿ ತಲುಪಿದರು ಎಂದು ಕೆಲವರೆಂದರೆ ತುದಿ ಸೇರುವ ಮೊದಲೇ ಇವರುಗಳು ಸಾವಿಗೀಡಾಗಿರಬಹುದೆಂದು ಕೆಲವರು ಶಂಕಿಸುತ್ತಾರೆ. ಪರ್ವತಾರೋಹಣದಲ್ಲಿ ಆಧಾರಗಳೇ ಪ್ರಮುಖವಾಗಿರುವುದರಿಂದ ಮತ್ತು ಈ ಪರ್ವತಾರೋಹಿಗಳು ತುದಿ ಮುಟ್ಟಿದ ಸೂಚನೆಗಳಿಲ್ಲದುದರಿಂದ ಇವರು ಶಿಖರಾರೋಹಣ ಮಾಡಿರುವರೆಂಬುದು ನಿರ್ಧಾರವಾಗಿಲ್ಲ. ಆನಂತರ 1933ರಲ್ಲಿ ಆ್ಯಂಡ್ರ್ಯೂ ಇರ್ವೀನ್‍ರ (ಐಸ್‍ವಿಕ್ಸ್) ಹಿಮಗೊಡಲಿಯನ್ನು ಸುಮಾರು 27,700 ಅಡಿ (8,440 ಮೀ.) ಎತ್ತರದಲ್ಲಿ ಪತ್ತೆ ಮಾಡಲಾಯಿತು. ಇತ್ತೀಚೆಗೆ 1999ರ ಸಂಶೋಧನಾ ತಂಡವು ಮಲ್ಲೊರಿಯವರ ದೇಹವನ್ನು 26,750 ಅಡಿ (8155 ಮೀ.) ಎತ್ತರದಲ್ಲಿ ಪತ್ತೆ ಮಾಡಿದರು. ಈ ದುರಂತಗಳಿಂದ ಬೇಸರಗೊಂಡಿದ್ದ ದಲಾಯಿ ಲಾಮ ಅವರು ಟಿಬೆಟ್ ಮೂಲಕ ಶಿಖರಾರೋಹಣ ಪ್ರಯತ್ನಗಳಿಗೆ ತಡೆಹಾಕಿದರು. ಆದರೂ 9 ವರ್ಷಗಳ ನಂತರ ತಂಡಗಳ ಅತೀವ ಬೇಡಿಕೆಗಳಿಗೆ ಮಣಿದು ಮತ್ತೆ ಪ್ರಯತ್ನಕ್ಕೆ ಅನುಮತಿ ನೀಡಲಾಯಿತು. 1933ರ ನಾಲ್ಕನೆಯ ಬ್ರಿಟಿಷ್ ತಂಡವು ಹ್ಯೂ ರಟ್ಲೆಡ್ಜ್‍ರ ನೇತೃತ್ವದಲ್ಲಿ ದಿಟ್ಟ ಪ್ರಯತ್ನವನ್ನು ನಡೆಸುವ ಮೂಲಕ, ತಂಡದ ವಿನ್ ಹ್ಯಾರಿಸ್ ಮತ್ತು ಎಲ್ ಆರ್ ವೇಜರ್ ಇದುವರೆಗೂ ತಲಪಿದ್ದ ಅತಿ ಎತ್ತರದ ಜಾಗವನ್ನು ತಲಪಿದರೂ, ಮೇಲ್ಭಾಗದಲ್ಲಿ ಎದುರಾದ ದುರ್ಗಮ ಪ್ರದೇಶವನ್ನು ದಾಟಲಾಗದೆ ಹಿಂದಿರುಗಬೇಕಾಯಿತು. 1935ರ ಬ್ರಿಟಿಷರ ಐದನೆಯ ತಂಡದ ನಾಯಕ ಎರಿಕ್ ಷಿಪ್ಟನ್. ಕಿರಿವಯಸ್ಸಿನ ಹೊರೆಯಾಳಾಗಿ ಬಂದ ತೇನ್‍ಸಿಂಗ್‍ರ ಮೊದಲನೆಯ ತಂಡವೂ ಇದಾಗಿತ್ತು. ಮಳೆಗಾಲದ ನಂತರ ಮಾಡಿದ ಈ ಪ್ರಯತ್ನವು ಅತೀವ ಹಿಮಪಾತದಿಂದ ವಿಫಲವಾಯಿತು.

1936ರ ಆರನೆಯ ಪ್ರಯತ್ನವೂ ಸಹ ಇದೇ ರೀತಿ ವಿಫಲಗೊಂಡಿತು. 1938ರಲ್ಲಿ ತಂಡದ ನಾಯಕ ಬಿಲ್ ಟಿಲ್‍ಮ್ಯಾನ್ ಹಾಗೂ ತೇನ್‍ಸಿಂಗ್ ಸೇರಿದಂತೆ ಏಳು ಜನರ ತಂಡವು 27,900 ಅಡಿ (8,290 ಮೀ.)ವರೆಗೆ ಏರಲು ಮಾತ್ರ ಸಾಧ್ಯವಾಯಿತು. ಈ ಸಮಯಕ್ಕೆ ಎರಡನೆಯ ಮಹಾಯುದ್ಧ ಪ್ರಾರಂಭವಾಗಿ ಮುಂದಿನ 12 ವರ್ಷಗಳ ವರೆಗೆ ಎವರೆಸ್ಟ್ ಪ್ರಯತ್ನಗಳನ್ನು ಕೈ ಬಿಡಬೇಕಾಗಿ ಬಂದಿತು. 1950ರಲ್ಲಿ ಟಿಬೆಟ್‍ನ್ನು ಆಕ್ರಮಿಸಿದ ಚೀನಿಯರು ಶಿಖರದ ಉತ್ತರದ ಕಡೆಯಿಂದ ಪ್ರವೇಶ ನಿಷೇಧ ಮಾಡಿದರು. ಆದರೆ ದಕ್ಷಿಣದಿಂದ ಎವರೆಸ್ಟ್ ಏರುವ ತಂಡಗಳಿಗೆ ನೇಪಾಳ ಸರಕಾರ ಅನುಮತಿ ನೀಡಿತು. 1950 ಬ್ರಿಟಿಷ್ ಮತ್ತು ಅಮೆರಿಕೆಯ ಜಂಟಿ ತಂಡವೊಂದು ಪ್ರಯತ್ನ ನಡೆಸಿ ಕುಂಭು ಹಿಮನದಿಯವರೆಗೆ ತಲಪಲು ಸಾಧ್ಯವಾಯಿತು. 1951ರಲ್ಲಿ ಎರಿಕ್ ಷಿಪ್ಟನ್‍ರ ಮುಂದಾಳ್ವಿಕೆಯ ತಂಡವು ಕುಂಭು ಹಿಮನದಿಯನ್ನು ಭೇದಿಸುವ ಪ್ರಯತ್ನ ಮಾಡಿ ಹಿಂತಿರುಗಿತು. ಈ ತಂಡಕ್ಕೆ ಮೊದಲಬಾರಿಗೆ ಸೇರಿದವರು ನ್ಯೂಜಿಲ್ಯಾಂಡ್‍ನ ಎಡ್ಮಂಡ್ ಹಿಲೇರಿ.[]

ಎವರೆಸ್ಟ್ ವಿಜಯ ಸಾಧನೆಯ ಓಟದಲ್ಲಿ ಬ್ರಿಟಿಷರನ್ನು ಹಿಂದೆ ಹಾಕಲು ಹಾತೊರೆಯುತ್ತಿದ್ದ ಸ್ವಿಸ್ (ಸ್ವಿಟ್ಜರ್ಲೆಂಡ್) ತಂಡಗಳು 1952ರಲ್ಲಿ ದಿಟ್ಟ ಪ್ರಯತ್ನವನ್ನು ಮಾಡಿದುವು. ವಸಂತಕಾಲದ ಮೊದಲ ಪ್ರಯತ್ನದಲ್ಲಿ ಡಾ. ಈ ವಿನ್ ಡ್ಯೂನಾಂಟ್ ನೇತೃತ್ವದ ತಂಡವು ಕುಂಭು ಹಿಮನದಿಯನ್ನು ಸಫಲವಾಗಿ ಭೇದಿಸಿ, ದಕ್ಷಿಣ ಪೂರ್ವದ ದಾರಿಯನ್ನು ಮಾಡಿ 27,550 ಅಡಿ (8,382 ಮೀ.) ಎತ್ತರದಲ್ಲಿ 7ನೆಯ ಶಿಬಿರವನ್ನು ಸ್ಥಾಪಿಸಿತು. ಹೊರೆಯಾಳುಗಳ ನಾಯಕ (ಸರದಾರ) ತೇನ್‍ಸಿಂಗ್ ಮತ್ತು ರೇಮಂಡ್ ಲ್ಯಾಂಬರ್ಟ್ ಆಮ್ಲಜನಕದ ಉಪಕರಣದೊಂದಿಗೆ ಎವರೆಸ್ಟ್‍ನ ದಕ್ಷಿಣ ಶಿಖರದ ಕೆಳಭಾಗದಲ್ಲಿ 28,210 ಅಡಿ (8,595 ಮೀ.) ವರೆಗೆ ಏರಿ ಹಿಂದಿರುಗಿದರು. ಅದೇ ವರ್ಷದ ಮಳೆಗಾಲದ ನಂತರ ಹೊರಟ ಜಿ ಚಿವಾಲ್ಲೆ ನಾಯಕತ್ವದ ಸ್ವಿಸ್ ತಂಡ ಲೊಟ್ಸೆ ಶಿಖರದ ಏರಿನ ಮೇಲೆ ಆರೋಹಣ ಮಾಡಿತು. ನೀರ್ಗಲ್ಲು ಕುಸಿತದಲ್ಲಿ ಶೆರ್ಷಾ ಮಿಂಗ್ಮಾ ದೊರ್ಜಿಯ ಸಾವಿನಿಂದಲೂ, ಹಗ್ಗ ಸಡಿಲಗೊಂಡು ತಂಡವು ಸುಮಾರು 600 ಅಡಿಗಳ ಕೆಳಗೆ ಉರುಳಿದರಿಂದಲೂ ತಂಡವು ಹಿಮ್ಮೆಟ್ಟಬೇಕಾಯಿತಾದರೂ ಈ ತಂಡ ತೆರೆದ ಮಾರ್ಗವೇ ಮುಂದಿನ ವರ್ಷಗಳಲ್ಲಿ ಯಶಸ್ವಿಯಾದ ದಾರಿಯಾಯಿತು. ಇಂದಿಗೂ ಇದು ಬಹಳಷ್ಟು ತಂಡಗಳು ಬಳಸುವ ಮಾರ್ಗ.

1953 ಎವರೆಸ್ಟ್ ವಿಜಯದ ವರ್ಷ. ಮತ್ತೆ ಪ್ರಯತ್ನಕ್ಕಿಳಿದ ಕರ್ನಲ್ ಜಾನ್ ಹಂಟ್ ನಾಯಕತ್ವದ ಬ್ರಿಟಿಷ್ ತಂಡ ಸ್ವಿಸ್ ತಂಡವು ಸ್ಥಾಪಿಸಿದ್ದ ಮಾರ್ಗವಾಗಿ ಮುಂದುವರೆದು ದಕ್ಷಿಣ ಮೇಲ್ಕಣಿವೆಯನ್ನು (ಸೌತ್‍ಕೋಲ್) ತಲುಪಿತು. ಇಲ್ಲಿಂದ ಶಿಖರದ ತುದಿಗೇರಲು ಇಬ್ಬಿಬ್ಬರ ತಂಡಗಳನ್ನು ಮಾಡಲಾಗಿ, ಮೇ 26ರಂದು ಮೊದಲಿಗೆ ಹೊರಟ ಡಾ ಆರ್ ಸಿ ಈವಾನ್ಸ್ ಮತ್ತು ಟಿ ಬೋರ್ಡಿಲಾನ್ ಜೋಡಿ ದಕ್ಷಿಣ ಶಿಖರವನ್ನು ಮದ್ಯಾಹ್ನ ಒಂದು ಘಂಟೆಯ ಹೊತ್ತಿಗೆ ಸೇರಿತು. ಆದರೆ, ಆಮ್ಲಜನಕದ ಕೊರತೆ ಹಾಗೂ ಅಂದು ಮಧ್ಯಾನ್ಹ ಪ್ರಾರಂಭವಾದ ಬಿರುಗಾಳಿಯಿಂದಾಗಿ ಹಿಂತಿರುಗಬೇಕಾಯಿತು. ಇದರ ಫಲವಾಗಿ, ಎರಡನೆಯ ಜೋಡಿ ಹಿಲೇರಿ ಮತ್ತು ತೇನ್‍ಸಿಂಗ್ ಅವರಿಗೆ ಎವರೆಸ್ಟ್ ತುದಿ ಮುಟ್ಟುವ ಪ್ರಯತ್ನದ ಸುವರ್ಣಾವಕಾಶ ಒದಗಿತು. 29ರಂದು ಮುಂಜಾನೆಯೇ ಹೊರಟ ಇವರು 9 ಘಂಟೆಗೆ ದಕ್ಷಿಣ ಶಿಖರವನ್ನು ತಲುಪಿ, 40 ಅಡಿ ಎತ್ತರದ (ಈಗ ಹಿಲೇರಿ ಸ್ಟೆಪ್ ಎಂದು ನಾಮಾಂಕಿತವಾಗಿರುವ) ಬಂಡೆಯನ್ನು ಏರಿ, ಬೆಳಗಿನ 11.30 ಘಂಟೆಗೆ ಎವರೆಸ್ಟ್ ಶಿಖರದ ತುದಿಯನ್ನು ತಲುಪಿ ವಿಜಯದ ಕಹಳೆಯನ್ನೂದಿದರು. ಕಾಕತಾಳೀಯ ಎಂಬಂತೆ ಎವರೆಸ್ಟ್‍ನ್ನು ಶೋಧಿಸಿದ 100 ವರ್ಷಗಳಿಗೆ ಸರಿಯಾಗಿ ಶಿಖರವನ್ನೇರಿದ ವಿಶ್ವದ ಮೊದಲಿಗರಾದ ಎಡ್ಮಂಡ್ ಹಿಲೇರಿ ಮತ್ತು ತೇನ್‍ಸಿಂಗ್ ನಾರ್ಗೆ ಇಡೀ ಮಾನವಕುಲವೇ ಹೆಮ್ಮೆಪಡುವಂತಹ ಸಾಧನೆ ಮಾಡಿದರು. ಪ್ರಸ್ತುತ ಕಾಲದಲ್ಲಿ ಲಭ್ಯವಿರುವ ಯಾವ ವಿಶೇಷ ಉಪಕರಣಗಳಿಲ್ಲದೆ, ಜೀವವನ್ನೇ ಪಣತೊಟ್ಟು ಉನ್ನತ ಸಾಧನೆಗೈದ ಈ ವೀರರ ಹೆಸರುಗಳು ಸುವರ್ಣಾಕ್ಷರಗಳಲ್ಲಿ ಬರೆಯುವಂತಹವು. ಹಿಲೇರಿಯವರಿಗೆ `ಸರ್ ಬಿರುದು ನೀಡಿ ಗೌರವಿಸಲಾಯಿತು. ಪರ್ವತಾರೋಹಣವು ಬೆಳೆದಂತೆ, ಮುಂದಿನ ದಶಕಗಳಲ್ಲಿ ವಿಶ್ವದ ವಿವಿಧ ದೇಶಗಳ ತಂಡಗಳು ಶಿಖರಾರೋಹಣವನ್ನು ನಡೆಸುತ್ತಾ ಬಂದು ಈವರೆಗೆ ಸುಮಾರು 2,800ಕ್ಕೂ ಹೆಚ್ಚು ಪರ್ವತಾರೋಹಿಗಳು ಶಿಖರವನ್ನು ಏರಿದ್ದರೆ, ಈ ಸಾಹಸದಲ್ಲಿ ಅಸು ನೀಗಿದವರು 180ಕ್ಕೂ ಹೆಚ್ಚು. ಎವರೆಸ್ಟ್ ಏರಲು ಮುಖ್ಯವಾಗಿ ನಾರ್ತ್‍ಕೋಲ್ ಮತ್ತು ಸೌತ್‍ಕೋಲ್ ಮಾರ್ಗಗಳಾಗಿದ್ದರೂ, ಒಟ್ಟು 15 ಕಡೆಯಿಂದ ಶಿಖರಾರೋಹಣ ಮಾಡಲಾಗಿದೆ. ಅನೇಕ ದಾಖಲೆಗಳೂ ಸ್ಥಾಪಿತವಾಗಿವೆ. (ದಾಖಲೆಗಳನ್ನು ನೋಡಿ)

ತೇನ್‍ಸಿಂಗ್‍ರ ಸಾಹಸದ ಅನಂತರ 1957ರಲ್ಲಿ ಭಾರತೀಯ ತಂಡವು ಆರನೆಯ ಉನ್ನತ ಪರ್ವತವಾದ ಚೋ ಓಯು ವನ್ನು ಏರಿದ ಹಿನ್ನೆಲೆಯಲ್ಲಿ ಭಾರತೀಯ ಪರ್ವತಾರೋಹಣ ಸಂಸ್ಥೆ (ಇಂಡಿಯನ್ ಮೌಂಟನಿಯರಿಂಗ್ ಫೌಂಡೇಷನ್) ನವದೆಹಲಿಯಲ್ಲಿ ಸ್ಥಾಪಿತವಾಯಿತು. 1960ರಲ್ಲಿ ಬ್ರಿಗೇಡಿಯರ್ ಗ್ಯಾನ್‍ಸಿಂಗ್ ನೇತೃತ್ವದ ಮೊದಲನೆಯ ಭಾರತೀಯ ತಂಡವು ಎವರೆಸ್ಟ್ ಆರೋಹಣ ಪ್ರಯತ್ನಿಸಿತು. ಶಿಖರವು ಕೇವಲ 700 ಅಡಿ ದೂರವಿದ್ದಾಗ, ಪ್ರತಿಕೂಲ ಹವಾಮಾನದಿಂದ ಹಿಂತಿರುಗಿತು. 1962ರಲ್ಲಿಯೇ ಮೇಜರ್ ಜಾನ್ ಡಯಾಸ್ ನಾಯಕತ್ವದ ತಂಡವು ಶಿಖರದ 400 ಅಡಿ ಕೆಳಭಾಗದವರೆಗೆ ಏರಿ ಹಿಂತಿರುಗಿದರು. ಕೊನೆಗೆ 1965ರಲ್ಲಿ ಕಮ್ಯಾಂಡರ್ ಎಂ ಎಸ್ ಕೊಹ್ಲಿಯವರ ನಾಯಕತ್ವದಲ್ಲಿ 9 ಭಾರತೀಯರು ವಿಜಯಿಗಳಾದರು. ಇವರಲ್ಲೊಬ್ಬರಾದ ನವಾಂಗ್ ಗೊಂಬು 1963ರಲ್ಲಿ ಅಮೆರಿಕನ್ನರ ತಂಡದೊಡನೆ ಒಮ್ಮೆ ಶಿಖರವೇರಿದ್ದು, ಎವರೆಸ್ಟ್‍ನ್ನು ಎರಡು ಬಾರಿಗೆ ಏರಿದ ವಿಶ್ವದ ಮೊದಲನೆಯ ಪರ್ವತಾರೋಹಿಯಾದರು. ಮುಂದೆ 1984ರಲ್ಲಿ ಮಹಿಳಾ ತಂಡದ ಬಚ್ಚೇಂದ್ರಿಪಾಲ್ ಎವರೆಸ್ಟ್ ಏರಿದ ಭಾರತದ ಪ್ರಥಮ ಮಹಿಳೆಯಾದರು.

ಇಷ್ಟೆಲ್ಲಾ ಸಾಧನೆಗಳಾದರೂ, ಎವರೆಸ್ಟ್‍ನ್ನು ಎಂದಿಗೂ ಯಾರಿಗೂ ಗೆದ್ದೆನೆಂಬ ಭಾವನೆ ಸಲ್ಲದು. ದೈವಸ್ವರೂಪವಾದ ಆ ತಾಯಿ ಮುಗ್ದಮನಸ್ಸಿನಿಂದ ಗೌರವಿಸಿ ಬಂದ ಪರ್ವತಾರೋಹಿಗಳನ್ನು ತನ್ನ ಮಡಿಲಿಗೆ ಕರೆಯುತ್ತಾಳೆ, ಬರಮಾಡಿಕೊಳ್ಳುತ್ತಾಳೆ. ಪ್ರಕೃತಿಯನ್ನು ಸೃಷ್ಟಿಯ ಅನಂತಾನಂತತೆಯಲ್ಲಿ ಮಾನವ ಕೇವಲ ಒಂದು ಬಿಂದುವಿನಂತೆ.

ಎವರೆಸ್ಟ್ ದಾಖಲೆಗಳು

[ಬದಲಾಯಿಸಿ]

1953 ತೇನ್‍ಸಿಂಗ್ ನಾರ್ಗೆ ಮತ್ತು ಸರ್ ಎಡ್ಮಂಡ್ ಹಿಲೇರಿ ಶಿಖರವನ್ನೇರಿದ ಮೊದಲ ಪರ್ವತಾರೋಹಿಗಳು.

1960 ಚೀನೀಯರ ತಂಡವು ಉತ್ತರದಿಂದ ಶಿಖರವನ್ನೇರಿದ ಮೊದಲಿಗರು.

1965 ಭಾರತೀಯ ನವಾಂಗ್ ಗೊಂಬು ಎರಡು ಬಾರಿ ಶಿಖರವನ್ನೇರಿದ ಮೊದಲಿಗರಾದರು.

1975 ಜಪಾನ್ ದೇಶದ ಜಂಕೋ ಟೇಬೀ ಶಿಖರವನ್ನೇರಿದ ಪ್ರಥಮ ಮಹಿಳೆ.

1980 ರೀನ್‍ಹೋಲ್ಡ್ ಮೆಸ್ನರ್ ಒಂಟಿಯಾಗಿ ಶಿಖರವೇರಿದ ಮೊದಲಿಗ.

1984 ಶಿಖರವೇರಿದ ಪ್ರಥಮ ಭಾರತೀಯ ಮಹಿಳೆ ಬಚ್ಚೇಂದ್ರಿ ಪಾಲ್.

1988 ನ್ಯೂಜಿಲ್ಯಾಂಡ್‍ನ ಲಿಡಿಯಾ ಬ್ರ್ಯಾಡಿ ಆಮ್ಲಜನಕವಿಲ್ಲದೆ ಏರಿದ ಪ್ರಥಮ ಮಹಿಳೆ.

1999 ಬಾಬು ಚಿರಿ ಶೆರ್ಪಾ ಶಿಖರದ ಮೇಲೆ ರಾತ್ರಿ ಕಳೆದ ಏಕೈಕ ಪರ್ವತಾರೋಹಿ.

2001 ಅಮೆರಿಕದ ಎರಿಕ್ ವೀಹೆನ್ ಮೈಯರ್ ಶಿಖರವೇರಿದ ಮೊದಲನೆಯ ಅಂಧಪರ್ವತಾರೋಹಿ.

2002 ಶಾಮ ವಾಕಾನಬೆ (64ರ ಹರೆಯದ) ಶಿಖರವೇರಿದ ಅತ್ಯಂತ ಹಿರಿಯ ಮಹಿಳೆ.

2003 70ರ ಹರೆಯದ ಯೂಶಿರೋ ಮಿಯೂರಾ ಶಿಖರವೇರಿದ ಅತ್ಯಂತ ಹಿರಿಯ ವ್ಯಕ್ತಿ

2003 ಅಮೆರಿಕದ ಗ್ಯಾರಿ ಗಲ್ಲರ್ ಶಿಖರವೇರಿದ ಒಂದು ಕೈಯಿಲ್ಲದ ಪರ್ವತಾರೋಹಿ.

2003 ನೇಪಾಳದ ಲಕ್ಪಾ ಗೇಲು ಶೆರ್ಪಾ ಅತ್ಯಂತ ವೇಗವಾಗಿ ಶಿಖರವನ್ನೇರಿದವರು(ಸಮಯ 10ಘಂ, 56ನಿ, 46ಸೆ.)

2003 ಅಮೆರಿಕದ ಜೆಸ್ ರೋಸ್ಕೆಲ್ಲಿ ಶಿಖರವೇರಿದ ಅತಿ ಕಿರಿಯ.

2003 ನೇಪಾಳದ ಅಪಾ ಶೆರ್ಪಾ ಅತಿ ಹೆಚ್ಚು ಬಾರಿ ಶಿಖರವೇರಿದವ. (ಈವರೆಗೆ 13 ಬಾರಿ)


ವಿಶ್ವದ 8,000 ಮೀ.ಗಿಂತ ಎತ್ತರದ 14 ಶಿಖರಗಳನ್ನು ಏರಿದ ಮೊದಲಿಗ ರೀನ್‍ಹೋಲ್ಡ್ ಮೆಸ್ನರ್.

(ಬಿ.ವಿ.ಪ್ರಕಾಶ್)


ಉಲ್ಲೇಖಗಳು

[ಬದಲಾಯಿಸಿ]