ವಿಷಯಕ್ಕೆ ಹೋಗು

ಎಳ್ಳು ಅಮಾವಾಸ್ಯೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಳ್ಳು ಅಮಾವಾಸ್ಯೆ ದಕ್ಷಿಣಾಯನದ ಮಾರ್ಗಶಿರ ಮಾಸದ ಅಮಾವಾಸ್ಯೆಯ ದಿನವಾಗಿದ್ದು, ಎಳ್ಳು ಬೆಳೆ ಬರುವ ದಿನವನ್ನು ಎಳ್ಳಮಾವಾಸ್ಯೆ ಎಂದು ಆಚರಿಸುತ್ತಾರೆ. ಭಾರತದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ರೈತರು ಈ ದಿನವನ್ನು ಆಚರಿಸುತ್ತಾರೆ. ಈ ದಿನ ಕರ್ನಾಟಕದಲ್ಲಿ ಮಲೆನಾಡು, ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕನ್ನಡ ಪ್ರದೇಶದಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಎಳ್ಳು ಅಮಾವಾಸ್ಯೆ ದಿನವು ಆಹಾರ ಸಂಸ್ಕೃತಿಯ ಪ್ರತೀಕವಾಗಿದೆ.

ಐತಿಹ್ಯ

[ಬದಲಾಯಿಸಿ]

ಮಹಾಭಾರತದಲ್ಲಿ ಪಾಂಡವರು ಹಾಗೂ ಕೌರವರ ನಡುವೆ ನಡೆದ ಕುರುಕ್ಷೇತ್ರ ಯುದ್ಧದಲ್ಲಿ ಮಡಿದಂತಹ ಅವರ ಬಂಧುಮಿತ್ರರಿಗಾಗಿ ಪಿಂಡ ಪ್ರಧಾನ ಮಾಡಿರುವ ಈ ದಿನವನ್ನು ಎಳ್ಳಮವಾಸ್ಯೆ (ಎಳ್ಳು ಅಮವಾಸ್ಯೆ) ಎಂದು ಆಚರಿಸಲಾಗುತ್ತದೆ.

ರೈತರ ಆಚರಣೆ

[ಬದಲಾಯಿಸಿ]

ಇದೊಂದು ದಿನ ರೈತರ ಹಬ್ಬ. ರೈತರು ಅವರ ಜಮೀನಿನಲ್ಲಿ ಎಳ್ಳು ಹಾಗೂ ಬೆಲ್ಲವನ್ನು ಚಿಮ್ಮುತ್ತಾರೆ. ಇವುಗಳು ಭೂಮಿಯ ಫಲವತ್ತತೆಯನ್ನು ಕಾಪಾಡುವ ಎರೆಹುಳಗಳಿಗೆ ಆಹಾರವಾಗುತ್ತದೆಯೆಂಬ ಉದ್ದೇಶದಿಂದ ಚಿಮ್ಮಲಾಗುತ್ತದೆ. ಅವರ ಹೊಲದಲ್ಲಿ ಬೆಳೆದ ಹಿಂಗಾರು ಪೈರುಗಳ ನಡುವೆ ಬನ್ನಿಮರವನ್ನು ಹುಡುಕಿ ಅದಕ್ಕೆ ಪೂಜೆ ಮಾಡಿ ಭೂಮಿತಾಯಿಗೆ ಚರಗ ಚೆಲ್ಲುವುದು ಈ ಹಬ್ಬದ ವಿಶೇಷವಾಗಿದೆ. ಕೆಲವರು ಪಾಂಡವರ ಸ್ವರೂಪವಾಗಿ ಐದು ಕಲ್ಲುಗಳಿಗೆ ಪೂಜೆ ಸಲ್ಲಿಸುತ್ತಾರೆ. ಈ ದಿನಕ್ಕೆ ಮೂರು ನಾಲ್ಕು ದಿನವಿರುವಾಗಲೇ ರೈತರ ಮನೆಗಳಲ್ಲಿ ನಾನಾ ರೀತಿಯ ಚಟ್ನಿ, ಕಾಳು, ಎಣ್ಣೆಗಾಯಿ, ಎಳ್ಳು ಹಾಗೂ ಸೇಂಗಾ ಹೋಳಿಗೆ, ಎಳ್ಳು ಹಚ್ಚಿದ ಸಜ್ಜೆ, ಜೋಳದ ರೊಟ್ಟಿ, ಚಿಕ್ಕಿ, ಬರ್ತಾ, ಪಾಲಕ್ ಮೆಂತ್ಯೆ ಉಪಯೋಗಿಸಿ ತಯಾರಿಸುವ ತಿಂಡಿ, ಭಜ್ಜಿ ಸೇರಿದಂತೆ ನಾನಾ ಬಗೆಯ ಖಾದ್ಯವನ್ನು ತಯಾರಿಸಿ ನಂತರ ರೈತಾಪಿ ವರ್ಗದವರು ಕುಟುಂಬ ಸಮೇತರಾಗಿ ಸಹಭೋಜನ ಮಾಡಿ ಸಂಭ್ರಮಿಸುತ್ತಾರೆ.[೧]

ಚರಗ ಚೆಲ್ಲುವ ಹಬ್ಬದ ಹಿಂದಿರುವ ವೈಜ್ಞಾನಿಕ ಕಾರಣ

[ಬದಲಾಯಿಸಿ]

ಎಳ್ಳು ಅಮಾವಾಸ್ಯೆಯ ಸಮಯದಲ್ಲಿ ಹಿಂಗಾರು ಪೈರುಗಳು ಬೆಳೆದಿರುತ್ತವೆ. ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಜೋಳ ಮತ್ತು ಕಡಲೆಯನ್ನು ಬೆಳೆಯುತ್ತಾರೆ. ಹಾಗಾಗಿ ಜೋಳದ ಮಧ್ಯೆ ಕಡಲೆ ಬೆಳೆಗೆ ಕಾಯಿಕೊರಕ ಹುಳುವು ಬಿದ್ದು ಬೆಳೆಯ ನಾಶಕ್ಕೆ ಕಾರಣವಾಗುತ್ತದೆ. ಆದ್ದರಿಂದ ನಾನಾ ಬಗೆಯ ಖಾದ್ಯಗಳನ್ನು ಚರಗ ಚೆಲ್ಲಿದಾಗ ಅವುಗಳನ್ನು ತಿನ್ನುವ ಸಲುವಾಗಿ ಹಕ್ಕಿಗಳು ಹೊಲಕ್ಕೆ ಬಂದಾಗ ಈ ಹುಳಗಳನ್ನು ಕಂಡು ಅವುಗಳನ್ನು ತಿನ್ನುತ್ತವೆ. ಇದರಿಂದ ಕಾಯಿಕೊರಕದ ಹುಳುಗಳ ನಿಯಂತ್ರಣವಾಗುತ್ತದೆ. ಈ ಕಾರಣಕ್ಕಾಗಿ ಚರಗ ಚೆಲ್ಲುವ ಹಬ್ಬವನ್ನು ಆಚರಿಸುತ್ತಾರೆ.[೨]

ಅಲಂಕಾರ

[ಬದಲಾಯಿಸಿ]

ಈ ದಿನ ಎತ್ತುಗಳಿಗೆ ಝೂಲ ಹಾಕಿ ಕೋಡಣಸು, ಗೊಂಡೆ, ಹಣೆಕಟ್ಟುಗಳಿಂದ ಅಲಂಕಾರ ಮಾಡುತ್ತಾರೆ. ಅವುಗಳ ಕೊರಳಿಗೆ ಮತ್ತು ಹಣೆಗೆ ಕಟ್ಟಿದ ಗೆಜ್ಜೆಯನ್ನು ನುಡಿಸುತ್ತ ಹೊಲಗಳ ಕಡೆಗೆ ಬಂಡಿಯನ್ನು ಎಳೆಯುವ ರೀತಿಯು ಗ್ರಾಮೀಣ ಸೊಗಡನ್ನು ಪರಿಚಯಿಸುತ್ತದೆ.[೩] ಹಾಗೆ ಎತ್ತಿನಗಾಡಿ, ಟ್ರ್ಯಾಕ್ಟರುಗಳಿಗೆ ರಿಬ್ಬನ್, ಬಲೂನುಗಳನ್ನು ಕಟ್ಟಿ ಸಿಂಗರಿಸುತ್ತಾರೆ.

ದೇವಾಲಯಗಳಲ್ಲಿ ಪ್ರಾರ್ಥನೆ

[ಬದಲಾಯಿಸಿ]

ಈ ದಿನ ರೈತರು ಉತ್ತಮ ಇಳುವರಿಗಾಗಿ ಪ್ರಾರ್ಥಿಸಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಿಸುತ್ತಾರೆ. ಶನಿ ದೋಷ ಇರುವವರು, ಸಾಡೇಸಾತಿ ನಡೆಯುತ್ತಿರುವವರು ಶನಿ ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡುತ್ತಾರೆ.

ಸಮುದ್ರ ಸ್ನಾನ

[ಬದಲಾಯಿಸಿ]

ಕರ್ನಾಟಕದಲ್ಲಿ ಮಲೆನಾಡು, ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗಗಳಲ್ಲಿ ಈ ದಿನ ತೀರ್ಥ ಸ್ನಾನವೇ ಪ್ರಮುಖವಾಗಿದೆ. ಈ ದಿನ ತರ್ಪಣ ಬಿಡುವ ಮೊದಲು ಜನರು ಸಮುದ್ರದಲ್ಲಿ ಮುಳುಗು ಹಾಕುತ್ತಾರೆ. ಕೆಲವುಕಡೆಯ ಜನರು ನದಿಗಳಲ್ಲಿ ತೀರ್ಥ ಸ್ನಾನ ಮಾಡಿ ಪಿತೃಗಳಲ್ಲಿ ಪ್ರಾರ್ಥಿಸುತ್ತಾರೆ. ಸಮುದ್ರ ಸ್ನಾನ ಮಾಡಿದರೆ ಚರ್ಮ ರೋಗ ಗುಣವಾಗುತ್ತದೆ ಎಂಬ ನಂಬಿಕೆಯಿದೆ. ಉಡುಪಿ ಜಿಲ್ಲೆಯಲ್ಲಿರುವ ವಡಭಾಂಡೇಶ್ವರ ದೇವಾಲಯದಲ್ಲಿ ಬಲರಾಮ ದೇವರ ದರ್ಶನ ಮಾಡುವುದರಿಂದ ಒಳ್ಳೆದಾಗುತ್ತದೆ ಎಂಬ ನಂಬಿಕೆಯಿದೆ.[೪]

ವಡಭಾಂಡೇಶ್ವರ ಬಲರಾಮ ದೇವಸ್ಥಾನ

[ಬದಲಾಯಿಸಿ]
ವಡಭಾಂಡೇಶ್ವರ ಬಲರಾಮ ದೇವಸ್ಥಾನ

ಉಡುಪಿಯಯಲ್ಲಿ ನೆಲೆಸಿರುವ ಶ್ರೀ ಕೃಷ್ಣನ ಸಹೋದರನಾದ ಬಲರಾಮ ಉಡುಪಿಯಿಂದ ೬ ಕಿ.ಮೀ.ದೂರದಲ್ಲಿನ ಮಲ್ಪೆಯ ವಡಭಾಂಡೇಶ್ವರದಲ್ಲಿ ದ್ವಾರಕೆಯಿಂದ ಜೊತೆಯಾಗಿ ಬಂದು ಇಲ್ಲಿ ನೆಲೆಯಾಗಿದ್ದಾನೆ.[೫]

ಶ್ರಾದ್ಧ

[ಬದಲಾಯಿಸಿ]

ಈ ದಿನ ಮಹಾಭಾರತದಲ್ಲಿ ಪಾಂಡವರು ಕುರುಕ್ಷೇತ್ರ ಯುದ್ಧದಲ್ಲಿ ಮಡಿದ ಅವರ ಬಂಧಗಳಿಗೆ ತರ್ಪಣ ಬಿಟ್ಟಿರುವ ದಿನ. ಹಾಗಾಗಿ ಈ ದಿನ ಶ್ರಾದ್ಧ ಕಾರ್ಯಗಳನ್ನು ಮಾಡಲು ಸೂಕ್ತವಾದ ದಿನವಾಗಿದೆ. ಈ ದಿನ ತರ್ಪಣ ಬಿಟ್ಟು, ಬಡವರಿಗೆ ಊಟ ಹಾಕಿ, ದಾನ ನೀಡಿ ಶ್ರಾದ್ಧ ಕಾರ್ಯಗಳನ್ನು ಮಾಡುವುದರಿಂದ ಬದುಕಿನಲ್ಲಿ ಶಾಂತಿ, ನೆಮ್ಮದಿ ಇರುತ್ತದೆಯೆಂಬ ನಂಬಿಕೆಯಿದೆ. ವಿಶೇಷವಾಗಿ ಎಳ್ಳನ್ನು ದಾನ ಮಾಡುತ್ತಾರೆ. ಎಳ್ಳಿಗೆ ಪಾಪ ನಾಶಮಾಡುವ ಶಕ್ತಿಯಿದೆ ಎನ್ನುವ ನಂಬಿಕೆ ಜನರಲ್ಲಿದೆ.

ಉಲ್ಲೇಖಗಳು

[ಬದಲಾಯಿಸಿ]
  1. https://www.udayavani.com/homepage-karnataka-edition/topnews-karnataka-edition/gadaga-farmar-family-celebrating-ellu-amavasya
  2. https://kannada.news18.com/news/state/charaga-festival-of-farmers-in-north-karnataka-vs-307413.html
  3. https://vijaykarnataka.com/news/dharawada/-/articleshow/28246542.cms
  4. https://www.udayavani.com/video-gallery/devotional-sea-bath-on-the-coast
  5. "ಆರ್ಕೈವ್ ನಕಲು". Archived from the original on 2023-09-03. Retrieved 2022-06-26.