ವಿಷಯಕ್ಕೆ ಹೋಗು

ಎಂ.ವಾಸುದೇವರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಎಂ. ವಾಸುದೇವರಾವ್ ಇಂದ ಪುನರ್ನಿರ್ದೇಶಿತ)

ಎಂ ವಾಸುದೇವರಾವ್ಅವರು ೧೯೨೮ ರಲ್ಲಿ ಚಿತ್ರದುರ್ಗ ಜಿಲ್ಲೆಯ ಜಗಳೂರಿನಲ್ಲಿ ಜನಿಸಿದರು. ಪತ್ರಿಕೋದ್ಯಮದಲ್ಲಿ ಪದವಿ ಪಡೆದ ಬಳಿಕ ಇವರು ಕನ್ನಡದ ಪತ್ರಕರ್ತರಾಗಿ ಸೇವೆ ಆರಂಭಿಸಿ, ಬೆಂಗಳೂರು, ಮುಂಬಯಿ, ಚೆನ್ನೈಗಳಲ್ಲಿ ವಿವಿಧ ರೀತಿಯ ಸಾಹಿತ್ಯಸೇವೆ ಸಲ್ಲಿಸಿ ನಿವೃತ್ತರಾದರು. ಬಹುಕಾಲ ಇವರು ತಿಪಟೂರಿನಲ್ಲಿ ನೆಲೆಸಿ, ಹಲವಾರು ಕೃತಿಗಳನ್ನು ರಚಿಸಿ, ಅನುವಾದಿಸಿ ಪುಸ್ತಕರೂಪದಲ್ಲಿ ಪ್ರಕಟಿಸಿದರು. ಇವರ ಕೃತಿಗಳಲ್ಲಿ ಅನುವಾದಗಳೇ ಹೆಚ್ಚಿದ್ದು, ಅಸಂಖ್ಯ ಪತ್ತೇದಾರಿ ಕಾದಂಬರಿಗಳನ್ನೂ ಕನ್ನಡಕ್ಕೆ ತಂದ ಕೀರ್ತಿ ಇವರದು. ದೂರದರ್ಶನದ "ಅಜಿತನ ಸಾಹಸಗಳು" ಪತ್ತೇದಾರಿ ಸರಣಿ ಇವರ ಅನುವಾದಗಳನ್ನು ಆಧರಿಸಿದ್ದುದು ಅವರ ಜನಪ್ರಿಯ ಶೈಲಿಗೆ ಹಿಡಿದ ಕನ್ನಡಿ. ಕನ್ನಡದಲ್ಲಿ ಷೆರ್ಲಾಕ್ ಹೋಮ್ಸ್ ನ ಪತ್ತೇದಾರಿ ಸರಣಿಯ ಸಮಗ್ರ ಅನುವಾದವನ್ನು ಕನ್ನಡಕ್ಕೆ ತಂದ ವಾಸುದೇವರಾವ್ ಅವರು, ಕನ್ನಡದ ಸರ್ ಆರ್ಥರ್ ಕಾನನ್ ಡಾಯ್ಲ್ ಎನ್ನುವುದು ಅತಿಶಯೋಕ್ತಿಯಲ್ಲ. ಬೊಕಾಷಿಯೋನ ಮತ್ತು ರಿಬಾಲ್ಡನ ಕತೆಗಳಂತಹ ಅನುವಾದಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಿದ ವಾಸುದೇವರಾವ್ ಅವರು, ೧೯೫೨ರಲ್ಲಿ ಪ್ರಕಟವಾದ ಕರ್ನಾಟಕ ಡೈರೆಕ್ಟರಿಯ ಸಹಾಯಕ ಸಂಪಾದಕರಲ್ಲೊಬ್ಬರಾಗಿದ್ದವರು. ಇವರ ಸ್ನೇಹಿತರೂ ಒಡನಾಡಿಗಳೂ ಆದ ಮತ್ತೊಬ್ಬ ಖ್ಯಾತ ಅನುವಾದಕರಾದ ಕೆ.ಎಸ್.ಕರುಣಾಕರನ್ ಅವರು ಇವರ ಹಲವು ಕೃತಿಗಳಿಗೆ ಮುನ್ನುಡಿ ಬರೆದಿದ್ದಾರೆ. ನಿರ್ಮಲ ಪ್ರಕಾಶನ ಹಮ್ಮಿಕೊಂಡ "ಕನ್ನಡದ ಚಿಣ್ಣರಿಗೆ ವಿಶೇಷ ಕೊಡುಗೆ" ಎಂಬ ಯೋಜನೆಯಡಿಯಲ್ಲಿ, ಎಂ.ಜಿ. ಗೋವಿಂದರಾಜು, ಸಿದ್ದಯ್ಯ ಪುರಾಣಿಕ, ಸುಮತೀಂದ್ರ ನಾಡಿಗ ಹಾಗೂ ಟಿ.ಎಸ್.ನಾಗರಾಜ ಶೆಟ್ಟರ ಜೊತೆಗೂಡಿ ಮಕ್ಕಳಿಗಾಗಿ ಐದು ಉತ್ತಮ ಗುಣಮಟ್ಟದ ಪುಸ್ತಕಗಳನ್ನು ಹೊರತಂದರು. ಮೈಸೂರಿನ ಕುವೆಂಪುನಗರದಲ್ಲಿ ವಿಶ್ರಾಂತ ಜೀವನ ನಡೆಸಿ, ಬೆಂಗಳೂರಿನ ವಿದ್ಯಾಪೀಠದ ಬಳಿ ಕೊನೆಯ ದಿನಗಳನ್ನು ಕಳೆದ ವಾಸುದೇವರಾವ್, ಕೊನೆಯವರೆಗೂ ಯಾವ ಪ್ರಶಸ್ತಿಗಳಿಗೂ ಹವಣಿಸದೆ ಎಲೆಮರೆಯ ಕಾಯಿಯಂತೆ ಜೀವಿಸಿ, ೨೦೦೪ರಲ್ಲಿ ಕೊನೆಯುಸಿರೆಳೆದ ಆದರ್ಶವ್ಯಕ್ತಿ. ಕನ್ನಡವನ್ನು ಅನುವಾದಗಳಿಂದ ಹೇಗೆ ಶ್ರೀಮಂತವನ್ನಾಗಿಸಬಹುದೆಂಬುದಕ್ಕೆ ಇವರ ಕೃತಿಗಳೇ ಸಾಕ್ಷಿ. ಇವರ ಕೃತಿಗಳಲ್ಲಿ ಕೆಲವು ಇಂತಿವೆ:

ಕೃತಿಗಳು

[ಬದಲಾಯಿಸಿ]

ಕಥಾ ಸಂಕಲನ

[ಬದಲಾಯಿಸಿ]
  • ಬೊಕಾಷಿಯೋನ ಮತ್ತು ರಿಬಾಲ್ಡನ ಕತೆಗಳು

ಕಾದಂಬರಿ

[ಬದಲಾಯಿಸಿ]

ಸರ್ ಆರ್ಥರ್ ಕಾನನ್ ಡಾಯ್ಲ್ ನ ಷೆರ್ಲಾಕ್ ಹೋಮ್ಸ್ ಪತ್ತೇದಾರಿ ಕಾದಂಬರಿಗಳ ಸಮಗ್ರ ಅನುವಾದ:

  • ರಕ್ತಪರಿಶೋಧನೆ
  • ನಾಲ್ವರ ಸಂಕೇತ
  • ಭೀತಿಯ ಕಣಿವೆ
  • ಬ್ಯಾಸ್ಕರ್ವಿಲ್ಲಿಯ ಬೇಟೆನಾಯಿ
  • ಕಪ್ಪುಮುತ್ತಿನ ರಹಸ್ಯ
  • ಹಳದಿಮುಖ
  • ಷೆರ್ಲಾಕ್ ಹೋಮ್ಸ್ ರ ನೆನಪುಗಳು

ಇತರೆ:

  • ಡ್ರಾಕುಲ (ಬ್ರಾಂ ಸ್ಟೋಕರ್)
  • ಸೈಕೋ (ಆಲ್ ಫ್ರೆಡ್ ಹಿಚ್ ಕಾಕ್)
  • ಮೂರನೆ ಕಣ್ಣು (ಲೋತ್ಸಾಂಗ್ ರಂಪಾ)

ಇತ್ಯಾದಿ

ಸಂಪಾದನೆ

[ಬದಲಾಯಿಸಿ]
  • ಕರ್ನಾಟಕ ಡೈರೆಕ್ಟರಿ

ಸಂಗ್ರಹಾನುವಾದ

[ಬದಲಾಯಿಸಿ]
  • ವಿಶ್ವಜಾನಪದ ಸಂಗ್ರಹ

ಬಾಲಸಾಹಿತ್ಯ

[ಬದಲಾಯಿಸಿ]
  • ಸಮುದ್ರತಳದಲ್ಲಿ ೨೦೦೦೦ ಯೋಜನಗಳು (ಜೂಲ್ಸ್ ವೆರ್ನ್ ನ ಫ್ರೆಂಚ್ ಕಾದಂಬರಿಯ ಅನುವಾದ)

ಪುರಸ್ಕಾರ

[ಬದಲಾಯಿಸಿ]

ಹಲವು ಪುರಸ್ಕಾರಗಳಿಗೆ ಪಾತ್ರರಾಗಿದ್ದ ವಾಸುದೇವರಾವ್ ಯಾವ ಪ್ರಶಸ್ತಿಗಾಗಿಯೂ ರಾಜಕಾರಣಿಗಳ ಹಿಂದೆ ಬಿದ್ದವರಲ್ಲ.