ವಿಷಯಕ್ಕೆ ಹೋಗು

ಉಷ್ಣವಿದ್ಯುತ್ ವಸ್ತುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಷ್ಣವಿದ್ಯುತ್ ವಸ್ತುಗಳು[][] ಪ್ರಬಲವಾದ ಅಥವಾ ಅನುಕೂಲಕರ ರೂಪದಲ್ಲಿ ಉಷ್ಣವಿದ್ಯುತ್ ಪರಿಣಾಮವನ್ನು ಪ್ರದರ್ಶಿಸುತ್ತವೆ. ಉಷ್ಣವಿದ್ಯುತ್ ಪರಿಣಾಮವೆಂದರೆ ಉಷ್ಣಾಂಶದ ವ್ಯತ್ಯಾಸವು ವಿದ್ಯುದ್ವಿಭವವನ್ನು ಉಂಟುಮಾಡುವ ಅಥವಾ ವಿದ್ಯುತ್ ಪ್ರವಾಹವು ಉಷ್ಣಾಂಶದ ವ್ಯತ್ಯಾಸವನ್ನು ಸೃಷ್ಟಿಸುವ ವಿದ್ಯಮಾನ.

ಉಷ್ಣ ವಿದ್ಯುತ್ತು ಎಂದರೆ ಲೋಹತಂತಿಯೊಂದರ ತುದಿಗಳನ್ನು ಭಿನ್ನ ಲೋಹದ ಇನ್ನೊಂದು ತಂತಿಯ ತುದಿಗಳಿಗೆ ಬೆಸುಗೆ ಹಾಕಿ ಜೋಡಿಸಿದ ಸಂಧಿಗಳನ್ನು ಭಿನ್ನ ತಾಪಗಳಲ್ಲಿ ಇರಿಸಿದಾಗ ಈ ಸಂವೃತ ಮಂಡಲದಲ್ಲಿ ವಿದ್ಯುಚ್ಚಾಲಕ ಬಲ ಉಂಟಾಗಿ ಹರಿಯುವ ವಿದ್ಯುತ್ತು (ಥರ್ಮೊಎಲೆಕ್ಟ್ರಿಸಿಟಿ). ವಿಭಿನ್ನ ಲೋಹಗಳ ಪರಮಾಣುಗಳ ನ್ಯೂಕ್ಲಿಯಸ್-ಎಲೆಕ್ಟ್ರಾನ್ ಬಂಧನಬಲಗಳು ವಿಭಿನ್ನವಾಗಿರುತ್ತವೆ. ಎರಡು ಭಿನ್ನಲೋಹಗಳು ಪರಸ್ಪರ ಸ್ಪರ್ಶಿಸಿದಾಗ ಎಲೆಕ್ಟ್ರಾನುಗಳು ಸಾಪೇಕ್ಷವಾಗಿ ಬಂಧನಬಲ ಕಡಿಮೆ ಇರುವ ಲೋಹದಿಂದ ಇನ್ನೊಂದಕ್ಕೆ ಹರಿಯುತ್ತವೆ. ತತ್ಪರಿಣಾಮವಾಗಿ ಸ್ಪರ್ಶಬಿಂದುವಿನಲ್ಲಿ ಅಥವಾ ಸಂಧಿಯಲ್ಲಿ ವಿಭವಾಂತರ ಉಂಟಾಗುತ್ತದೆ. ಎರಡು ವಿಭಿನ್ನ ಲೋಹತಂತಿಗಳಿದ ರಚಿತವಾದ ಸಂವೃತ ಮಂಡಲದಲ್ಲಿ ಎರಡು ಸಂಧಿಗಳಿರುತ್ತವೆ. ಇವೆರಡರ ತಾಪಗಳು ಸಮವಿದ್ದಾಗ ಉತ್ಪತ್ತಿಯಾಗುವ ವಿಭವಾಂತರಗಳು ಸಮ ಮತ್ತು ವಿರುದ್ಧವಾಗಿದ್ದು ವಿದ್ಯುಚ್ಚಾಲಕ ಬಲ ಸೊನ್ನೆಯಾಗುತ್ತದೆ. ಸಂಧಿಗಳ ತಾಪಗಳು ಅಸಮವಾಗಿದ್ದರೆ ಅದು ಸೊನ್ನೆಯಾಗುವುದಿಲ್ಲ. ಎಂದೇ, ವಿದ್ಯುತ್ಪ್ರವಾಹ ಉಂಟಾಗುತ್ತದೆ. ರಷ್ಯನ್-ಜರ್ಮನ್ ಭೌತವಿಜ್ಞಾನಿ ತಾಮಸ್ ಯೋಹಾನ್ ಸೀಬೆಕ್ (1770-1831) ಈ ವಿದ್ಯಮಾನವನ್ನು ಆವಿಷ್ಕರಿಸಿದ್ದರಿಂದ (1821) ಇದಕ್ಕೆ ಸೀಬೆಕ್ ಪರಿಣಾಮ ಎಂಬ ಹೆಸರುಂಟು.

ಭಿನ್ನಲೋಹಗಳ ಸಂಧಿ ಮೂಲಕ ವಿದ್ಯುತ್ತನ್ನು ಹರಿಸಿದರೆ ಅಲ್ಲಿ ಉಷ್ಣದ ಹೀರಿಕೆ ಅಥವಾ ಬಿಡುಗಡೆ ಆಗುತ್ತದೆ. ಇದರಿಂದ ತಾಪವ್ಯತ್ಯಾಸ ಉಂಟಾಗುವುದು. ಫ್ರೆಂಚ್ ರಸಾಯನವಿಜ್ಞಾನಿ ಜೀನ್ ಚಾರ್ಲ್ಸ್ ಪೆಲ್ಟಿಯರ್ (1785-1845) ಆವಿಷ್ಕರಿಸಿದ (1834) ಈ ವಿದ್ಯಮಾನವೇ ಪೆಲ್ಟಿಯರ್ ಪರಿಣಾಮ. ಶೀತಲೀಕರಣದಲ್ಲಿ ಇದರ ಅನ್ವಯವಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Goldsmid, H. Julian (2016). Introduction to Thermoelectricity. Springer Series in Materials Science. Vol. 121. Berlin, Heidelberg: Springer Berlin Heidelberg. Bibcode:2016inh..book.....G. doi:10.1007/978-3-662-49256-7. ISBN 978-3-662-49255-0.
  2. Snyder, G.J.; Toberer, E.S. (2008). "Complex Thermoelectric Materials". Nature Materials. 7 (2): 105–114. Bibcode:2008NatMa...7..105S. doi:10.1038/nmat2090. PMID 18219332.


ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: