ವಿಷಯಕ್ಕೆ ಹೋಗು

ಉರ್ದು ಸಾಹಿತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಖನಿಯ ಮೊದಲ ಉರ್ದು ಕವಿ ವಲೀ ದೆಹಲಿಗೆ ನೀಡಿದ ಮೊಟ್ಟ ಮೊದಲ ಭೇಟಿಯೆ (1900) ಉತ್ತರಭಾರತದಲ್ಲಿ ಉರ್ದುಕಾವ್ಯದ ಅಸ್ತಿಭಾರಕ್ಕೆ ಕಾರಣವಾಯಿತು. ಅದುವರೆಗೂ ದೆಹಲಿಯ ಕವಿಗಳು ಉರ್ದುವಿನಲ್ಲಿ ಮಾತನಾಡಿ ಪರ್ಷಿಯನ್ನಿನಲ್ಲಿ ಬರೆಯುತ್ತಿದ್ದರು. ದಕ್ಷಿಣದಲ್ಲಿ 400 ವರ್ಷಗಳಿಂದ ಉರ್ದುವಿನಲ್ಲಿ (ದಖನಿ) ಗದ್ಯಪದ್ಯ ಸೃಷ್ಟಿಯಾಗುತ್ತಿದ್ದ ಸಂಗತಿ ಅವರಿಗೆ ತಿಳಿದೇ ಇರಲಿಲ್ಲ. ವಲೀಯ ಕಾವ್ಯವನ್ನು ಓದಿ, ಕೇಳಿದ ಜನ ಅದರ ಓಘವನ್ನು ಕಂಡು ಮಾರು ಹೋದರು. ವಲೀಯ ಪದ್ಯಗಳು ಬಹುಬೇಗ ಜನಪ್ರಿಯವಾದವು. ಬಜಾರುಗಳಲ್ಲಿ ಅವನ ಕಾವ್ಯವನ್ನು ಜನ ಹಾಡತೊಡಗಿದರು. ಎಲ್ಲ ಕಡೆಯೂ ಅವನಿಗೆ ಗೌರವಪೂರ್ಣ ಸ್ವಾಗತ ದೊರೆಯಿತು. ಹೀಗೆ ವಲೀಯ ಭೇಟಿ ಉತ್ತರ ಭಾರತದ ಕಾವ್ಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನುಂಟುಮಾಡಿತಲ್ಲದೆ ಅದರ ಭಾಷೆಯನ್ನು ಪರ್ಷಿಯನ್ನಿನಿಂದ ಉರ್ದುವಿಗೆ ಬದಲಾಯಿಸಿತು. ಆದ್ದರಿಂದ ದೆಹಲಿಯ ಕವಿಗಳು ದಖನಿ ಕವಿಗಳನ್ನು ಅನುಸರಿಸಿದರಲ್ಲದೇ ತಮ್ಮ ಆಡುಭಾಷೆಯಾದ ಉರ್ದುವಿನಲ್ಲೇ ಕಾವ್ಯವನ್ನು ರಚಿಸಿದರು. ಆದರೆ ಬಹುಮಟ್ಟಿಗೆ ಅನೇಕ ಕವಿಗಳಿಗೆ ಪರ್ಷಿಯನ್ ಕಾವ್ಯಗಳೇ ಮೇಲ್ಪಂಕ್ತಿಗಳಾಗಿದ್ದುವು. ಹಾಗಾಗಿ ಉರ್ದು ಕಾವ್ಯ ಪರ್ಷಿಯನೀಕರಣಗೊಂಡಿರುವುದನ್ನು ಬಹುಸುಲಭವಾಗಿ ಗುರುತಿಸಬಹುದು. ವಲೀಯಂಥ ದೇಶೀಯ ಕವಿಗೂ ಈ ಪ್ರಭಾವ ತಗಲದಿರಲಿಲ್ಲ. ಅವನ ಮೊದಲ ಕಾವ್ಯಗಳಲ್ಲಿ ಕಾಣಬಹುದು. ವಲೀಯೇ ಅಲ್ಲದೆ ಫಿರಾಕಿ, ಫಕ್ರೀ, ಅಜಾóದ್, ತಾಲಿಲೆ ಮತ್ತು ಇತರ ಕೆಲವಾರು ಕವಿಗಳು ದೆಹಲಿಗೆ ಭೇಟಿನೀಡಿದರು. ವಲೀಯಂತೂ ಉರ್ದು ಕಾವ್ಯದ ಜನಕನಾದುದರಿಂದ ಔಚಿತ್ಯಪೂರ್ಣವಾಗಿ ಬಾಬಾ-ಎ-ರೀಖ್ತ (ಉರ್ದು ಕಾವ್ಯದ ತಂದೆ) ಎಂಬ ಹೊಗಳಿಕೆಗೆ ಪಾತ್ರನಾದ. ಇವನು ದೆಹಲಿಯಿಂದ ತಂದ ಪರ್ಷಿಯನ್ ಪ್ರಭಾವ ದಕ್ಷಿಣದಲ್ಲಿ ದಖನಿಯ ಪಥವನ್ನು ಬದಲಾಯಿಸಿದುದೇ ಅಲ್ಲದೆ ಉರ್ದುವನ್ನು ದಖನಿಯ ಸ್ಥಾನದಲ್ಲಿಟ್ಟಿತು.

ವಲೀಯ ಸುತ್ತಮುತ್ತ ಗುಂಪುಗೂಡಿದ ಕವಿಗಳಲ್ಲಿ ಸಿರಾಜುದ್ದೀನ್ ಸಿರಾಜ್ (1714-63) ಅತ್ಯಂತ ಶ್ರೇಷ್ಠನಾದವ. ಔರಂಗಾಬಾದಿನಿಂದ ಬಂದ ಈತ ಒಬ್ಬ ಸೂಫಿ. ದೊಡ್ಡ ಸತ್ತ್ವದ ಕವಿಯಾಗಿದ್ದ ಇವನು ಗಜûಲ್‍ಗಳ ಒಂದು ಪೂರ್ಣ ಕುಲ್ಲಿಯಾತನ್ನು ರಚಿಸಿದ್ದಾನೆ. ವಸ್ತುವಿನ ನೂತನತೆ, ಚಿಂತನೆಯ ಔನ್ನತ್ಯವನ್ನು ಇವನಲ್ಲಿ ಕಾಣಬಹುದು. ಇವನ ಭಾಷೆ ದಖನಿಗಿಂತ ಉರ್ದುವಿನ ಕಡೆಗೆ ಹೆಚ್ಚು ವಾಲಿದೆ. ಸೂಫಿ ಸಿದ್ಧಾಂತದ ಪ್ರಚಾರವೇ ಇವನ ಉದ್ದೇಶ. ವಾರಕ್ಕೊಮ್ಮೆ ಮುಷಾಯರಗಳನ್ನು ತನ್ನ ಮನೆಯಲ್ಲಿ ಈತ ಏರ್ಪಡಿಸುತ್ತಿದ್ದ, ವಲೀಯ ಉತ್ತರಾಧಿಕಾರಿಯೆಂದು ಜನ ಈತನನ್ನು ಪರಿಗಣಿಸಿದ್ದರು. ದಕ್ಷಿಣ ಭಾರತದಲ್ಲಿ ಮೊಘಲರ ಆಳ್ವಿಕೆ ಕೊನೆಗೊಂಡ ಮೇಲೆ (1700) ದಖನಿ ದಕ್ಷಿಣದಲ್ಲಿ ಆಡುಭಾಷೆಯಾಗಿ ಮುಂದುವರಿಯಿತಲ್ಲದೇ ಇಂದಿಗೂ ಈ ಪ್ರದೇಶದಲ್ಲಿ ಆಡುಭಾಷೆಯಾಗಿದೆ. ಗದ್ಯಪದ್ಯಗಳ ಭಾಷೆಯಾಗಿ 18ನೆಯ ಶತಕದ ಮಧ್ಯದವರೆಗೂ ಹೈದರಾಬಾದ್, ಮದ್ರಾಸ್, ಮೈಸೂರು ಮತ್ತು ಮಹಾರಾಷ್ಟ್ರಗಳಲ್ಲಿ ಇದು ಬಳಕೆಯಲ್ಲಿತ್ತು. ಆದರೆ ಕ್ರಮೇಣ ಉತ್ತರದಿಂದ ಬಂದ ಪರ್ಷಿಯನೀಕೃತ ಉರ್ದುವಿನ ಪ್ರಭಾವದಲ್ಲಿ ತನ್ನ ಬಣ್ಣವನ್ನು ಕಳೆದುಕೊಂಡಿತು. ಅಂತ್ಯದಲ್ಲಿ ಬರೆವಣಿಗೆ ಭಾಷೆಯಾಗಿ ಬೇರೂರಿದ ಉರ್ದು ದಖನಿಯನ್ನು ಕೆಳ ತಳ್ಳಿತು.

ಹೀಗೆ ವಲಿಯ ಉರ್ದು ಕವಿತೆ ಉತ್ತರ ಭಾರತದ ಕವಿಗಳಿಗೆ ಮೇಲುಪಂಕ್ತಿ ಎನಿಸಿತು. ಆ ಭಾಗದಲ್ಲಿ ಉರ್ದು ಕವಿತೆಯನ್ನು ಜನಪ್ರಿಯಗೊಳಿಸಿದ ಹಾತಿಂ (1669-1792). ಖಾನ್ ಆರ್‍ಜುó (1689-1756), ಮುಂತಾದ ಕೀರ್ತಿವಂತ ಕವಿಗಳು ಉದಿಸಿದರು. ಮೀರ್ ತಕಿ ಮೀರ್ (1713-1810), ಮಿಜಾರ್ó ರಫಿ ಸೌದಾ (1713-1781), ಖಾಜ ಮೀರ್ ದರ್ಜ್( 1720-1785) ಮತ್ತು ಮೀರ್ ಮೊಹಮ್ಮದ್ ಸೋಜ್ó (1720-1798) ಎಂಬ ನಾಲ್ವರು ಶ್ರೇಷ್ಠ ಕವಿಗಳು ಬಹಳ ಬೇಗ ಮುಂದಕ್ಕೆ ಬಂದು ದೇಶದಲ್ಲಿ ಶಾಶ್ವತವಾದ ಕೀರ್ತಿಯನ್ನು ಗಳಿಸಿದರು. ಅವರು ಭಾಷೆಯನ್ನು ಸಂಸ್ಕರಿಸಿದುದೇ ಅಲ್ಲದೆ ಕೆಲವು ಮನೋಹರವಾದ ಪರ್ಷಿಯನ್ ವಾಕ್ಸರಣಿಗಳನ್ನೂ ಪದಪುಂಜಗಳನ್ನೂ ಬಳಕೆಗೆ ತಂದರು. ಇದರ ಪರಿಣಾಮವಾಗಿ ಕೆಲವು ನಿರುಪಯುಕ್ತ ಹಳೆಯ ಶಬ್ದಗಳು ಪ್ರಾಚೀನವಾಕ್ಯರಚನಾರೀತಿಗಳೂ ಮೂಲೆಗೆ ಬಿದ್ದುವು. ಜನಕ್ಕೆ ಕವಿತೆಯ ವಿಷಯದಲ್ಲಿರುವ ಆಂತರಿಕವಾದ ಪ್ರೀತಿ ಮುಷೈರಾಗಳ (ಕವಿಗೋಷ್ಠಿ) ಮೂಲಕ ಹೊರಹೊಮ್ಮಿ ನಾಡ ತುಂಬ ಹೆಚ್ಚಾಗಿ ಉರ್ದುವನ್ನು ಬಳಸತೊಡಗಿದರು. ದಕ್ಷಿಣ ಭಾರತದ ದೂರ ಪ್ರಾಂತ್ಯಗಳಲ್ಲಿ ಕೂಡ ಮದ್ರಾಸಿನ ಮೌಲಾನಾ ಬಾಕರ್ ಆಗಾಹ್ (1744-1805) ಮತ್ತು ಅವನ ಇತರ ಶಿಷ್ಯರು ಭಾವಗೀತೆಗಳನ್ನೂ ಮಸ್ನವಿಗಳನ್ನೂ (ಧೀರ್ಘಕವನಗಳು) ಉರ್ದುವಿನಲ್ಲಿ ರಚಿಸುವುದಕ್ಕೆ ತೊಡಗಿ ಅನೇಕ ಗ್ರಂಥಗಳನ್ನೂ ಬರೆದು ದೇಶದ ಈ ಭಾಗದಲ್ಲಿ ಉರ್ದು ಹೆಚ್ಚು ಹೆಚ್ಚಾಗಿ ಜನಪ್ರಿಯವಾಗುವಂತೆ ಮಾಡಿದರು.

ಈ ಕಾಲದಲ್ಲಿ ಮೀರ್ ಹಸನ್ (1726-1786) ಎಂಬಾತ ಸೆಹ್‍ರುಲ್ ಬಯನ್ (ವಾಗ್ವಿಭವದ ಯಕ್ಷಿಣಿ) ಎಂಬ ತನ್ನ ಮಸ್ನವಿಯನ್ನು ರಚಿಸಿ ಪ್ರಸಿದ್ಧನಾದ. ಈ ಕವಿತೆ ತನ್ನ ಸೌಂದರ್ಯ ಸರಳತೆಗಳಿಂದ ಉರ್ದುಕವಿತೆಗಳ ಪೈಕಿ ಅತ್ಯುತ್ತಮವೆನಿಸಿದೆ.

ದಕ್ಷಿಣ ಮತ್ತು ಪಂಜಾಬುಗಳಿಂದ ಉರ್ದುವಿನ ಕೇಂದ್ರ ದೆಹಲಿಗೆ ಸರಿದರೂ ಅಲ್ಲಿ ಮೊಗಲರ ಆಳ್ವಿಕೆ ಕ್ಷೀಣಿಸಿದ ಬಳಿಕ ಒಂದಿಲ್ಲೊಂದು ಸಮಯದಲ್ಲಿ ಕವಿಗಳು ದೆಹಲಿಯಿಂದ ಕಾಲ್ತೆಗೆಯತೊಡಗಿ ಲಖ್‍ನೌದಲ್ಲಿದ್ದ ಔಧ್ ನವಾಬರ ವಿಪುಲವೂ ಉದಾರವೂ ಆದ ಆಶ್ರಯಕ್ಕೆ ಹೋಗಬಯಸಿದರು. ಈ ನವಾಬರು ವೈಭವದಲ್ಲೂ ಔದಾರ್ಯದಲ್ಲೂ ಪ್ರತಿಷ್ಠಾ ಪ್ರದರ್ಶನದಲ್ಲೂ ಆಶ್ರಯದಾನದಲ್ಲೂ ದೆಹಲಿಗೆ ದೊರೆಗಳನ್ನು ಮೀರಿಸಲೆಳೆಸಿದರು. ಕೀರ್ತಿಶಾಲಿಗಳಾದ ಕವಿಗಳು ತಮ್ಮ ಸುತ್ತಲೂ ಇರಬೇಕೆಂಬುದಲ್ಲದೆ ಸ್ವತಃ ಪದ್ಯರಚನೆಯಲ್ಲೂ ಇವರು ದೆಹಲಿ ರಾಜರನ್ನು ಅನುಕರಿಸಿದರು. ಮೀರ್ ಸೌದಾ ಎಂಬುವರು ದೆಹಲಿಯಿಂದ ಲಖ್‍ನೌಗೆ ಆಗಲೇ ವಲಸೆ ಬಂದಿದ್ದರು ಹಾಗೆಯೇ ಇತರರೂ ಅಲ್ಲಿಗೆ ವಲಸೆ ಬಂದರು. ಲಖೌನೌದ ದೊರೆಗಳು ಅವರಿಗೆ ಆಸರೆಕೊಟ್ಟರು. ಈ ಕವಿಗಳು ಉರ್ದುವಿನಲ್ಲಿ ಬಹಳ ಗ್ರಂಥಗಳನ್ನು ರಚಿಸಿದ್ದಾರೆ. ಇನ್ಯಾ ಎಂಬಾತ ಸ್ವಭಾವತಃ ತುಂಬ ಹಾಸ್ಯಗಾರ. ಆತನಲ್ಲಿ ಬೇಕಾದಷ್ಟು ನಗೆಮಾತುಗಳಿದ್ದುವು. ಅವನ್ನು ಆತ ಸಂಭಾಷಣೆಯಲ್ಲೂ ಪದ್ಯಗಳನ್ನೂ ಎರಚಿಹೋಗಿದ್ದಾನೆ. ದರ್ಯಾಯೆ ಲತಾಫತ್ (ಸಾರ ಸಾಗರ) ಎಂಬುದು ಈತನ ಕೃತಿ, ಇದನ್ನು ಉರ್ದುವಿನ ಬಗ್ಗೆ ಪರ್ಷಿಯನ್‍ನಲ್ಲಿ ಬರೆದ ಮೊದಲ ವ್ಯಾಕರಣವೆಂದು ಪರಿಗಣಿಸಲಾಗಿದೆ.

ಸಆದತ್ ಯಾರ್ ಖಾನ್ ರಂಗೀನ್ (1755-1835) ಎಂಬಾತನನ್ನು ರೀಖ್ತಿಕವಿತೆಯ ಜನಕನೆಂದು ಹೇಳುತ್ತಾರೆ. ಹೆಂಗಸರ ಮಾತಿನಲ್ಲೇ ರಾಗೋತ್ಕಟ ಕವಿತೆಗಳನ್ನು ರಚಿಸುವುದು, ಈ ಪ್ರಕಾರದ ಸ್ವರೂಪ, ಹೆಂಗಸರಿಗೇ ವಿಶಿಷ್ಟವಾದ ಉಕ್ತಿರೀತಿಗಳನ್ನು ಪದಗಳನ್ನೂ ಇದರಲ್ಲಿ ಬಳಸಲಾಗುತ್ತದೆ. ಪೂರ್ವದ ಕವಿಗಳ ರಚನೆಗಳಲ್ಲಿ, ಅದರಲ್ಲೂ ಬಿಜಾಪುರದ ಹಾಷಿಮಿ ಎಂಬುವನ ಕವಿತೆಯಲ್ಲಿ ಈ ಕವಿತಾ ರೂಪದ ಕುರುಹುಗಳಿವೆ. ಮನಸ್ಸನ್ನು ಕಾಮವಿಕಾರಕ್ಕೆ ಒಳಗಾಗಿಸುವ ಇಂಥ ಮಸಾಲೆ ಹಾಕಿದ ಪದ್ಯಗಳು ತುಂಬ ಜನಪ್ರಿಯವಾಗಿ ಶ್ಲಾಘನೆಗೆ ಪಾತ್ರವಾದುವು.

ದೆಹಲಿಯಿಂದ ಬಂದ ಕವಿಗಳು ಲಖ್‍ನೌದ ಜನತೆಯಲ್ಲಿ ಕವಿತಾಭಿರುಚಿಯನ್ನು ಹುಟ್ಟಿಸಿದರು. ಆಗಾಗ ಕವಿಸಭೆಗಳು ಏರ್ಪಟ್ಟು ಜನರಿಗೆ ಅವುಗಳದ್ದೇ ಹುಚ್ಚಾಯಿತು. ಕವಿತಾಸ್ಪರ್ಧೆಗಳಿಂದ ಕವಿಗಳ ತೇಜಸ್ಸೂ ವೃದ್ಧಿಯಾಯಿತು. ಸರಳ ಮತ್ತು ಒಳ್ಳೆಯ ಓಟವುಳ್ಳ ಪದ್ಯಗಳಲ್ಲಿ ಭಾವಗಳನ್ನು ಚಿತ್ರಿಸುವುದು ದೆಹಲಿಯ ಕವಿಗಳ ವೈಶಿಷ್ಟ್ಯವಾಗಿತ್ತು. ಕಲ್ಪನೆಗಳೂ ಶಬ್ದಗಳೂ ಭಾವನೆಗಳಿಗೂ ವಿಚಾರಗಳಿಗೂ ಅಡಿಯಾಳಾಗಿದುವು. ಅತ್ಯುತ್ಪ್ರೇಕ್ಷೆಗಳಿಗೆ ಈ ಕವಿಗಳು ಮನಗೊಡಲಿಲ್ಲ. ಆದರೆ ಲಖ್‍ನೌ ಕವಿಗಳು ಈ ಸಂಪ್ರದಾಯದಿಂದ ದೂರ ಸರಿದು ತಮ್ಮದೇ ಒಂದು ಹಾದಿಯಲ್ಲಿ ನಡೆದರು, ಅವರು ಪದಗಳಿಗೂ ಅಲಂಕರಗಳಿಗೂ ವಿಶಿಷ್ಟ ಗಮನ ಕೊಟ್ಟರು. ರೀತಿಗಾಗಿ ಭಾವಗಳು ಬಲಿಯಾದವು. ಪರಸ್ಪರ ಸಂಬದ್ಧವೂ ದ್ವಿಪದಿಯ ವಿಷಯಕ್ಕೆ ಸಂಗತವೂ ಆದ ಶಬ್ದಗಳನ್ನು ಮಾತ್ರ ಅವರು ಬಳಸುತ್ತಿದ್ದರು. ಶಬ್ದಗಳಿಗೆ ಇಷ್ಟು ಮಹತ್ತ್ವವನ್ನು ಕೊಟ್ಟಿದ್ದರಿಂದ ಸಮಯ ಸ್ಪೂರ್ತಿ ತಪ್ಪಿ ಕೃತಕತೆ ತಲೆಹಾಕಿತು. ಕವಿತೆಗೆ ಸಾಂಪ್ರದಾಯಿಕ ಸ್ವರೂಪ ಬಂತು, ಭಾವನಾ ಸ್ವಾತಂತ್ರ್ಯ, ಕರುಣರಸ, ನೈಜಭಾವಗಳು, ವಾಗ್ವೈಖರಿ, ಸರಳತೆ-ಇವೆಲ್ಲವೂ ಶಬ್ದಕ್ಕೆ ಬಲಿಯಾದುವು. ಈ ರೀತಿಯ ಶಬ್ದಸಂಸ್ಕರಣ ಷೇಕ್ ಇಮಾಂಬಕ್ಷ್ ನಾಸಿಕ್ (ಮ.1838) ಎಂಬಾತನಿಂದ ಪ್ರಾರಂಭವಾಯಿತು. ಲಖ್‍ನೌ ಮತ್ತು ರಾಮ್‍ಪುರಗಳಲ್ಲಿದ್ದ ಆತನ ಶಿಷ್ಯರು ತಮ್ಮ ನುಡಿಗಟ್ಟುಗಳನ್ನೂ ಪದಗಳನ್ನೂ ಗುರಿವಿನಂತೆ ಬಹಳ ಎಚ್ಚರಿಕೆಯಿಂದ ಆಯ್ದು ಬಳಸತೊಡಗಿದರು. ಹೀಗೆ ಲಖ್‍ನೌಪಂಥ ಭಾಷೆಯಲ್ಲಿನ ಕೆಲವು ವ್ಯತ್ಯಾಸಗಳಿಗೆ ಕಾರಣವಾಯಿತು. ಲಖ್‍ನೌದ ಕವಿಗಳೂ ಜನಗಳೂ ತಮ್ಮ ಶಬ್ದ ಪ್ರಯೋಗಗಳು ದೆಹಲಿಯ ಜನರೂ ಕವಿಗಳೂ ಬಳಸುವ ನುಡಿ ಮತ್ತು ನುಡಿಗಟ್ಟುಗಳಿಗಿಂತಲೂ ಮೇಲ್ತರದವೆಂದು ವಾದಿಸಿದರು. ಈ ವ್ಯತ್ಯಾಸಗಳು ವ್ಯಾಕರಣಕ್ಕೂ ಹಬ್ಬಿದುವು. ಲಖ್‍ನೌದವರು ಕೆಲವು ಶಬ್ದಗಳನ್ನು ಪುಲ್ಲಿಂಗದವರೆಂದರೆ ದೆಹಲಿಯವರು ಅವನ್ನು ಸ್ತ್ರೀಲಿಂಗದವೆನ್ನುತ್ತಿದ್ದರು. ಇದು ಪರಸ್ಪರವಾಯಿತು. ಈ ವ್ಯತ್ಯಾಸಗಳು ಆಯಾ ಪಂಥದವರ ಸ್ಪರ್ಧಾಕ್ಷೇತ್ರವಾಗಿ ಈಗಲೂ ಹೋರಾಟ ನಡೆಯುತ್ತಿದೆ.

ಈ ಕಾಲದಲ್ಲಿ ನಾಸಿಕ್ ಮತ್ತು ಆತಿಷ್ ಎಂಬ ಕವಿಗಳು ಭಾಷಾಶುದ್ಧಿಗೆ ಗಮನಕೊಟ್ಟು ರೂಪಕಾಲಂಕಾರಗಳನ್ನು ಬಳಸಿ ಕಾವ್ಯ ರಚಿಸಿದರು. ಆತಿಷ್‍ನ ಶಿಷ್ಯನಾದ ಪಂಡಿತ್ ದಯಾಶಂಕರ್ ನಸೀಂ ಎಂಬಾತ ಗುಲ್‍ಜಾóರೆ ನಸೀಂ ಎಂಬ ಪ್ರಸಿದ್ಧ ಮಸ್ನವಿಯನ್ನು ಬರೆದ ಪ್ರಖ್ಯಾತ ಕವಿ. ಇದು ಈಗಲೂ ಜನಪ್ರಿಯವಾಗಿದೆ.

ಕರ್ಬಲಾದಲ್ಲಿ ಇಮಾಂ ಹುಸೇನ್ ಮತ್ತು ಸಂಗಡಿಗರು ಮಡಿದ ದುರಂತ ಇಸ್ಲಾಮಿನ ಇತಿಹಾಸದಲ್ಲಿ ಬಹು ವಿಷಾದಕರ ಪ್ರಸಂಗ, ಇದನ್ನು ಪ್ರತಿವರ್ಷವೂ ಮೊಹರಮ್ಮಿನ ಮೊದಲ ಹತ್ತು ದಿವಸಗಳಲ್ಲಿ ಜನಕ್ಕೆ ಶ್ರವಣ ಮಾಡಿಸಲಾತ್ತದೆ. ದಕ್ಷಿಣದ ಹಾಗು ದೆಹಲಿಯ ಪ್ರಾಚೀನ ಕವಿಗಳು ದುರಂತಕ್ಕೀಡಾದ ಈ ಮಹಾ ನಾಯಕರ ಪೈಕಿ ಯಾರದರೊಬ್ಬರನ್ನು ಕುರಿತು ಶೋಕಗೀತೆಗಳನ್ನು ರಚಿಸಲು ಯತ್ನಿಸುತ್ತಿದ್ದರು. ಮೀರ್ ಖಲೀಕ್ (1704-1804) ಮೀರ್ ಬಬ್ಬರ್ ಆಲಿ ಅನೀಸ್ (1802-1874) ಮಿರ್ಜಾ ಸಲಾಮತ್ ಆಲಿ ದಬೀರ್ (1803-1875) ಮುಂತಾದ ಕವಿಶ್ರೇಷ್ಠರು ಈ ತೆರೆದ ರಚನೆಗಳನ್ನು ಉತ್ತಮದರ್ಜೆಗೆ ತಂದು ಲಖ್‍ನೌದಲ್ಲಲ್ಲದೆ ಇಡೀ ದೇಶದಲ್ಲೆಲ್ಲ ಅದನ್ನು ಜನಪ್ರಿಯಗೊಳಿಸಲು ತಮ್ಮ ಸಮಸ್ತ ಗಮನವನ್ನೂ ಕೊಟ್ಟರು. ಮೀರ್ ಖಲೀಕನ ಮಗ ಮೀರ್ ಅನಿಸ್ ತಂದೆಯ ಹೆಜ್ಜೆಯನ್ನೇ ಅನುಸರಿಸಿ ನಡೆದ, ಆದರೆ ಕಥಾವಸ್ತುವನ್ನು ಕಥಾಪ್ರಸಂಗಗಳ ಶುದ್ಧವಾದ ನುಡಿಗಟ್ಟುಗಳನ್ನೂ ನಿರ್ಮಲವಾದ ಭಾಷೆಯನ್ನೂ ಉಪಯೋಗಿಸುತ್ತಿದ್ದ. ಈತ ಸಾವಿರಾರು ಶೋಕಗೀತೆ (ಮರ್ಸಿಯ), ಪ್ರಗಥ, ಚೌಪದಿ ಮತ್ತು ಗೀತೆಗಳನ್ನು ರಚಿಸಿದ, ಹರ್ಷ-ಶೋಕ, ರಾಗ-ದ್ವೇಷ, ಮತ್ಸರ-ಈರ್ಷೆ, ಭಯ-ಮೃತ್ಯು ಮುಂತಾದ ಮಾನವೀಯ ಭಾವಗಳನ್ನೂ ರಾಗಗಳನ್ನೂ ರಚಿಸಿರುವ ಶೋಕಗೀತಕಾರರ ಪೈಕಿ ಈತ ಒಬ್ಬ ವಿಲಕ್ಷಣಪುರುಷ, ಈತನ ತರುವಾಯ ಇಣಿಕೆ ಬರುವವ ಮಿಜಾರ್óದಬಿರ್. ಈತನಿಗೆ ಗಂಭೀರವಾದ ಉಕ್ತಿ ಮತ್ತು ನಾದಗುಂಫನವುಳ್ಳ ಶಬ್ದಗಳಲ್ಲಿ ತುಂಬ ಪ್ರೀತಿ. ಈ ಶೋಕಗೀತಕರರಿಬ್ಬರ ಶಿಷ್ಯರು ತಮ್ಮ ಸ್ಪರ್ಧೆಗಳಿಂದ ಇಡೀ ಲಖ್‍ನೌವನ್ನು ಎರಡು ಪಕ್ಷಗಳಾಗಿ ವಿಭಜಿಸಿದರು.

ನಜೀóರ್ ಅಕ್ಬರಾಬಾದಿ ಎಂಬ ಕಾವ್ಯನಾಮದ ವಲೀ ಮಹಮ್ಮದನ (ಮ.1830) ಅಂತಸ್ತೇ ಬೇರೆ. ಈತನನ್ನೂ ಇಂಥ ಪಂಥದವನೆಂದೂ ಇಂಥ ಕಾಲಕ್ಕೆ ಸೇರಿದವನೆಂದೂ ಹೇಳುವ ಹಾಗಿರಲಿಲ್ಲ. ಧನ ಮತ್ತು ಭೋಗಗಳನ್ನು ಕಂಡರೆ ಈತನಿಗೆ ತೀರ ತಿರಸ್ಕಾರ, ತನ್ನ ದಿವ್ಯವೂ ಮೋಹಕವೂ ಆದ ಕವಿತೆಯ ಮೂಲಕ ಜನಗಳಿಗೆ ನೀತಿಯನ್ನು ಬೋಧಿಸಿ ಐಹಿಕವಸ್ತುಗಳ ವಿಷಯದಲ್ಲಿ ಹೆಮ್ಮೆಗೊಳ್ಳಬಾರದೆಂದು ಹೇಳುತ್ತ ಸ್ವಾರ್ಥತ್ಯಾಗವನ್ನೂ ದಾನಶೀಲತೆಯನ್ನೂ ಈತ ಉಪದೇಶಿಸುತ್ತಿದ್ದ, ಮತ ಪಂಥಗಳ ಮತ್ತು ಮತಭೇದಗಳ ಹಿಡಿತಕ್ಕೆ ಈತ ಒಳಗಾಲಿಲ್ಲ. ಆದ್ದರಿಂದ ಹಿಂದೂಗಳೂ ಮುಸ್ಲಿಮರೂ ಈತನನ್ನು ತುಂಬ ಮಮತೆಯಿಂದ ಕಾಣುತ್ತಿದ್ದರು. ಈತನ ಸೂಫೀ ಕವಿತೆಗಳು ಎಲ್ಲ ವರ್ಗದ ಜನಕ್ಕೂ ಹಿಡಿಸುತ್ತಿತ್ತು. ಆಜಾóಮ್ ಹಾಲಿ, ಸರೂರ್ ಮತ್ತು ಚಕ್‍ಬಸ್ತ ಎಂಬವರಿಂದ ಉದಿಸಿದ ರಾಷ್ಟ್ರೀಯವೂ ಸಹಜವೂ ಆದ ಕವಿತೆಯ ಹೊಸ ಪಂಥವನ್ನು ಪ್ರಾರಂಭಿಸಿದವ ಈತನೇ.

ವೆಲ್ಲೂರಿನ ಮೌಲಾನಾ ಬಾಕಿರ್ ಆಗಾಹ್ (1744-1800) ಎಂಬಾತ ಅರಬ್ಬೀ, ಪರ್ಷಿಯನ್ ಮತ್ತು ಉರ್ದು ಭಾಷೆಗಳಲ್ಲಿ ಗದ್ಯಪದ್ಯಾತ್ಮಕವಾದ ಅನೇಕ ಕೃತಿಗಳನ್ನು ರಚಿಸಿದ್ದಾನೆ.

ಗಾಲಿಬ್, ಜಾಕ್, ಮೋಮಿನ್ ಮತ್ತು ಜûಫರ್ ಎಂಬುವರು ಬೆಳಕಿಗೆ ಬಂದು ಉರ್ದು ಕವಿತೆಯ ಆಕಾಶದಲ್ಲಿ ತೊಳತೊಳಗಿದಾಗ ದೆಹಲಿ ಪುನಃ ಹೆಚ್ಚಿನ ಪ್ರಾಮುಖ್ಯಕ್ಕೆ ಬಂತು. ಮಹಾಪ್ರತಿಭಾಶಾಲಿಯಾದ ಮಿರ್ಜಾ ಅಸದುಲ್ಲಾಖಾನ್ ಗಾಲಿಬ್‍ನನ್ನು (1796-1869) ಜಗತ್ತಿನ ಅತ್ಯುತ್ತಮ ಕವಿಗಳ ಪಂಕ್ತಿಗೆ ಸೇರಿಸಬಹುದು. (ನೋಡಿ- ಗಾಲಿಬ್)

ಗಾಲಿಬ್ ಪರ್ಷಿಯನ್ನಿನಲ್ಲೂ ಉರ್ದುವಿನಲ್ಲೂ ಶ್ರೇಷ್ಠ ಗದ್ಯವನ್ನು ಬರೆದಿದ್ದಾನೆ. ಆತ ತನ್ನ ಮಿತ್ರರಿಗೆ ಬರೆದ ಪತ್ರಗಳು ಇಂದು ಶ್ರೇಷ್ಠ ಸಾಹಿತ್ಯವೆನಿಸಿಕೊಂಡಿವೆ.

ಮೊಗಲ್ ವಂಶದ ಕೊನೆಯ ರಾಜನಾದ ಬಹಾದ್ದುರ್‍ಷಾ ಜûಫರ್ (1755-1862) ಗಣನೀಯವಾದ ಒಬ್ಬ ದೊಡ್ಡ ಕವಿ. ಈತನ ಗುರುವಾಗಿದ್ದ ಷೇಕ್ ಇಬ್ರಾಹಿಂ ಜಾóಕ್ (1789-1854) ಕೂಡ ಬಹಳ ಪ್ರಸಿದ್ಧ ಕವಿ. ಇವರ ಕವಿತೆ ವಾಗ್ವೈಭವದಿಂದ ಕೂಡಿದೆ. ಓಟ ಚೆನ್ನಾಗಿದೆ. ರೀತಿ ಮಧುರವಾಗಿದ್ದು ಮನೋಹರವಾದ ಸರಳತೆಯಿಂದ ಕೂಡಿದೆ.

ಹಕೀಂ ಮೋಮಿನ್ ಖಾನ್ ಮೋಮಿನ್ (1800-1851) ತನ್ನ ಸಮಕಾಲೀನರ ಪೈಕಿ ವಯಸ್ಸಿನಲ್ಲಿ ಕಿರಿಯವ. ಅವರಿಗಿಂತ ಮುಂದೆ ದೈವಾಧೀನನಾದವ. ಆದರೆ ಕವಿತೆಯಲ್ಲಿ ತುಂಬಾ ಪಳಗಿದಕೈ ಎನಿಸಿಕೊಂಡವ, ಸೂಕ್ಷ್ಮ ಭಾವನೆಗಳಿಗೂ ಉನ್ನತ ಕಲ್ಪನೆಗಳಿಗೂ ಈತನ ಪದ್ಯಗಳು ಪ್ರಖ್ಯಾತವಾಗಿವೆ. ಉಪಮಾನೋತ್ಪ್ರೇಕ್ಷೆಗಳು ಇವನಲ್ಲಿ ಅಸಾಧಾರಣವಾಗಿವೆ.

1856ರಲ್ಲಿ ಔಧ್ ಸಂಸ್ಥಾನ ಬ್ರಿಟಿಷರ ಸ್ವಾಧೀನಕ್ಕೆ ಬಂತು 1857ರಲ್ಲಿ ಭಾರತೀಯ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಯಿತು. ಆಗ ದೆಹಲಿ ಮತ್ತು ಲಖ್‍ನೌಗಳ ವ್ಯಾಮೋಹ ಕವಿಗಳಿಗೆ ಬಿಟ್ಟು ಹೋಯಿತು. ಅವರು ತಮ್ಮ ಆಶಾನೇತ್ರಗಳನ್ನು ಸಣ್ಣರಾಜ್ಯಗಳಾದ ರಾಮಪುರದತ್ತಲೂ ಸಂಪನ್ನವಾದ ಹೈದರಾಬಾದಿನತ್ತಲೂ ತಿರುಗಿಸಿದರು. ಲಖ್‍ನೌದ ಮುನ್ಷಿ ಅಮೀರ್ ಅಹಮದ್ ಮೀನಾಯಿ (1828-1900) ಎಂಬಾತನನ್ನು ರಾಮ್‍ಪುರ ಆಕರ್ಷಿಸಿತು. ಆತನ ಪ್ರತಿಸ್ಪರ್ಧಿಯಾದ ದೆಹಲಿಯ ಕವಿ ಮಿಜಾರ್ó ಫಸೀಹುಲ್ ಮುಲ್ಕ್ ದಘ್ (1831-1905) 1888ರಲ್ಲಿ ಹೈದರಾಬಾದಿಗೆ ಬಂದ ನಿಜಾóಮ ಈತನನ್ನು ತನ್ನ ಕವಿತಾ ಗುರುವಾಗಿ ಮಾಡಿಕೊಂಡ. ಈತನ ರಚನೆಗಳಲ್ಲಿ ಗಜûಲ್‍ಗಳು (ಪ್ರಣಯಗೀತೆ) ಮುಖ್ಯ.

ಪರ್ಷಿಯನ್ ಭಾಷೆಗೆ ಮನ್ನಣೆ ದೊರೆಯುತ್ತಿರುವವರೆಗೂ ಉರ್ದುಗದ್ಯ ಬೆಳೆದು ಮುಂಬರಿಯಲು ಅವಕಾಶ ದೊರೆಯಲಿಲ್ಲ. ತಮ್ಮ ಶಿಷ್ಯರು ಮತ್ತು ಅನುಯಾಯಿಗಳ ಉಪಯೋಗಕ್ಕಾಗಿ ಅನೇಕ ಮುಸ್ಲಿಂ ಯೋಗಿಗಳು ಚಿಕ್ಕ ಪುಸ್ತಕಗಳನ್ನು ಹಳೆಯ ಉರ್ದುವಿನಲ್ಲಿ ಬರೆದರು. ಪರ್ಷಿಯನ್ನಿನಿಂದ ಕೆಲವು ಶೃಂಗಾರ ಕಥೆಗಳು ಉರ್ದುವಿಗೆ ಅನುವಾದಿತವಾದವು. ಅದು ಕವಿತೆಗೆ ಪ್ರಶಸ್ತವಾದ ಕಾಲ. ಉರ್ದು ಕವಿಗಳೇ ಸ್ವತಃ ತಮ್ಮ ಕವನಗಳನ್ನು ಉರ್ದುವಿನಲ್ಲಿ ಬರೆಯಲು ಬಯಸದೆ ಪರ್ಷಿಯನ್ ಭಾಷೆಯಲ್ಲಿ ಕಟ್ಟಲು ಆಸೆಪಡುತ್ತಿದ್ದರು. ಈಸ್ಟ್ ಇಂಡಿಯ ಕಂಪನಿಯ ನೌಕರರಾಗಿದ್ದ ಬ್ರಿಟಿಷ್ ಅಧಿಕಾರಿಗಳು ಪರ್ಷಿಯನ್ ಭಾಷೆಯ ವ್ಯಾಸಂಗಕ್ಕೆ ಅಷ್ಟಾಗಿ ಗಮನ ಕೊಡದೆ ದೇಶೀಯ ಭಾಷೆಗಳನ್ನು, ಮುಖ್ಯವಾಗಿ ಜನಗಳಲ್ಲಿ ಹರಡಿದ್ದ ಹಿಂದೂಸ್ತಾನಿಯನ್ನು ಕಲಿತು ಎಲ್ಲ ಪಂಗಡಗಳ ಸಂಪರ್ಕವನ್ನೂ ಇರಿಸಿಕೊಳ್ಳಬೇಕೆಂಬ ಅಂಶವನ್ನು ಮನಗಂಡ ಕೆಲವೇ ಕೆಲವರ ಪೈಕಿ ಡಾ. ಜಾನ್ ಗಿಲ್ ಕ್ರಿಸ್ಟ್ (1750-1841) ಎಂಬ ವೈದ್ಯವೃತ್ತಿಯ ವಿದ್ವಾಂಸನೊಬ್ಬ ಈತ ಕಲ್ಕತ್ತೆಯಲ್ಲಿ ಸ್ಥಾಪಿತವಾದ (1800) ಪೋರ್ಟ್ ವಿಲಿಯಂ ಕಾಲೇಜಿಗೆ ಅಧ್ಯಕ್ಷನಾಗಿ ನಿಯಮಿತನಾದ. ಈತನ ದಕ್ಷವೂ ಸಹಾನುಭೂತಿಯುಳ್ಳದ್ದೂ ಆದ ಆಡಳಿತದಲ್ಲಿ ಮೀರ್ ಅಮ್ಮನ್, ಮೀರ್ ಷೇರ್ ಆಲಿ ಆಫ್‍ಸೋಸ ((1735-1809), ಮೀರ್ ಬಹಾದೂರ್ ಅಲಿ ಹುಸೇನಿ ಮತ್ತು ಇತರರು ಈ ಕಾಲೇಜಿನಲ್ಲಿ ಸಂಗಡಿಸಿದರಲ್ಲದೆ, ಅಧಿಕಾರಿಗಳ ವ್ಯಾಸಂಗಕ್ಕೆ ಪಠ್ಯಪುಸ್ತಕಗಳನ್ನು ರಚಿಸಿ ಉರ್ದುವಿಗೊಂದು ಗದ್ಯದ ಮೇಲುಪಂಕ್ತಿಯನ್ನೂ ಹಾಕಿಕೊಟ್ಟರು. ಷಾ ವಲೀವುಲ್ಲನ ಪುತ್ರರಾದ ಮೌಲ್ವಿರಫಿಯುದ್ದೀನ್ (1753-1814) ಮತ್ತು ಮೌಲ್ವಿ ಅಬ್ದುಲ್ ಕಾದಿರ್ (1740-1817) ಎಂಬುವರು ಕುರಾನನ್ನು ಸರಳವೂ ಶುದ್ಧವೂ ಆದ ಉರ್ದುವಿಗೆ ಭಾಷಾಂತರಿಸಿದರು. ದೂರದ ದಕ್ಷಿಣದಲ್ಲಿ ಮದ್ರಾಸಿನ ಕಾಜಿ ಬದ್ರುದ್ದೌಲ (1796-1863) ಉರ್ದುವಿನಲ್ಲಿ ಕೆಲವು ಫನವಾದ ಕೃತಿಗಳನ್ನು ರಚಿಸಿ ಅದರ ಭಾಷೆಯನ್ನು ಹಿಂದಿ ಎಂದು ಕರೆದ.

ಈ ಘಟ್ಟದಲ್ಲಿ ಫಕೀರ್ ಮುಹಮ್ಮದ್ ಗೋಯ (ಮ.1850) ಮತ್ರು ಮಿಜಾó ರಜಬ್ ಆಲಿ ಬೇಗ್ ಸುರೂ (1786-1867) ಮುಂತಾದ ಕೆಲವು ವಿದ್ವಾಂಸರು ಕೆಲವು ಕತೆಗಳನ್ನೂ ಶೃಂಗಾರ ಕತೆಗಳನ್ನೂ ಪ್ರಾಸಬದ್ಧ ಗದ್ಯದಲ್ಲಿ ರಚಿಸಿದರು. ಆದರೆ ಇದು ಸಾಮಾನ್ಯರ ಬಳಕೆಗೆ ಎಟುಕದಂಥ ಗದ್ಯವಾಗಿ ಜನರಲ್ಲಿ ಅಷ್ಟಾಗಿ ಹರಡಲಿಲ್ಲ. ಮಿರ್ಜಾ ಗಾಲಿಬ್ ಮತ್ತು ಸರ್ ಸೈಯದ್ ಅಹಮದ್‍ಖಾನ್ (1817-1898) ಎಂಬುವರು ಭಾಷೆಯನ್ನು ಕೃತಕತೆಯ ಮತ್ತು ಶಬ್ದಾಡಂಬರದ ಸಂಕೋಲೆಯಿಂದ ಬಿಡಿಸಿದರು. ದೇಶಾದ್ಯಂತ ಮುದ್ರಣಯಂತ್ರಗಳು ಹರಡಿ ಹಳೆಯ ರೂಢಿಗಳನ್ನೆಲ್ಲ ಮುರಿದುವು. ಅನೇಕ ಪುಸ್ತಕಗಳನ್ನೂ ಕಾಲಿಕ ಪತ್ರಿಕೆ, ಸಂಚಿಕೆ, ಮತ್ತು ವೃತ್ತಾಂತ ಪತ್ರಿಕೆಗಳನ್ನೂ ಪ್ರಕಟಿಸಲು ಸಾಧ್ಯವಾಯಿತು. ಇಂಗ್ಲಿಷ್ ಸಾಹಿತ್ಯ ಮತ್ತು ಪಾಶ್ಚಾತ್ಯ ಸಂಸ್ಕøತಿಗಳು ಉರ್ದುವಿನಲ್ಲಿ ಹೊಸದಾರಿಗಳನ್ನು ತೆರೆದುವು. ಸರ್ ಸೈಯದ್ ಅಹಮದಾಖಾನ್ ಎಲ್ಲ ರಾಜಕೀಯ ಸಾಮಾಜಿಕ ಮತ್ತು ಸಾಂಸ್ಕøತಿಕ ಸಮಸ್ಯೆಗಳನ್ನೂ ತನ್ನ ಪ್ರಖ್ಯಾತವಾದ ತಹಬೇಬುಲ್ ಅಖ್ಲಾಕ್ ಎಂಬ ಮಾಸ ಪತ್ರಿಕೆಯಲ್ಲಿ ಚರ್ಚಿಸಲು ಪ್ರಾರಂಭಿಸಿದ. ಇದು ಬೇಗ ಭಾರತದ ಮುಸ್ಲಿಂರಲ್ಲಿ ಒಂದು ಕ್ರಾಂತಿಯನ್ನೆಬ್ಬಿಸಿತು. ಸರಳ ಮತ್ತು ನಿರರ್ಗಳ ಶೈಲಿಯಲ್ಲಿ ಈತ ಕೆಲವು ಗ್ರಂಥಗಳನ್ನು ಉರ್ದುವಿನಲ್ಲಿ ಬರೆದ. ಈತನ ಉರ್ದು ಶೈಲಿ ಹಿಂದೆಂದೂ ಕಾಣದಂಥ ನಿಷ್ಣಾತ ಶೈಲಿ. ಹಾಲಿ ಈತನನ್ನು ಉರ್ದುಗದ್ಯದ ಜನಕನೆಂದು ಕರೆಯುತ್ತಾನೆ. ಈತನ ಆಕರ್ಷಕ ವ್ಯಕ್ತಿತ್ವ ಸಾಹಿತ್ಯೋತ್ಸಾಹಿಗಳ ತಂಡವನ್ನು ತನ್ನತ್ತ ಸೆಳೆಯಿತು. ಈ ಗುಂಪಿನ ಕಾರ್ಯಗಳು ತುಂಬ ವ್ಯಾಪಕವಾದುವು. ಇದರಲ್ಲಿ ಮುಖ್ಯರಾದವರು ನವಾಬ್ ಮೊಹಸಿನುಲ್-ಮುಲ್ಕ್ (1837-1907). ನವಾಬ್ ವಕಾರುಲ್-ಮುಲ್ಕ (1839-1917). ಮೌಲಾನ ಆಲ್‍ತಾಫ್ ಹುಸೇನ್ ಹಾಲಿ (1837-1914) ಮೌಲ್ವಿ ಜಿóೀರ್ ಅಹಮದ್ (1831-1912), ಮೌಲಾನ ಮುಹಮ್ಮದ್ ಹುಸೇನ್ ಆಜಾóದ್ (1829-1910). ಇವರೆಲ್ಲರೂ ಉರ್ದುವಿಗೆ ಹಿಂದೆ ಅಲಭ್ಯವಾಗಿದ್ದ ಹೊಸ ವಿಷಯಗಳನ್ನು ಭಾವನೆಗಳನ್ನೂ ತುಂಬಿ ಅದನ್ನು ಸಂಪನ್ನಗೊಳಿಸಿದರು.

ಹಾಲಿ ಮತ್ತು ಆಜಾóಧರು ಉರ್ದುಕವಿತೆಯಲ್ಲಿ ಒಂದು ಹೊಸ ಯುಗವನ್ನು ತೆರೆದರು. ಅವರು ಗಜಲುಗಳನ್ನೂ ಕಸೀದಗಳನ್ನೂ ಪರಿಷ್ಕಕರಿಸಿ ಅವುಗಳ ಕ್ಷೇತ್ರವನ್ನು ವಿಸ್ತರಿಸಿದರು. ಪ್ರಖ್ಯಾತ ಶೃಂಗಾರರಸಯುಕ್ತ, ಸೂಫೀಭಾವಪರಿಪ್ಲುತ, ದಾರ್ಶನಿಕ ಮತ್ತು ನೈತಿಕ ಕಾವ್ಯಪ್ರಕಾರಗಳ ಜೊತೆಗೇ ನೈಸರ್ಗಿಕ, ರಾಷ್ಟ್ರೀಯ, ರಾಜಕೀಯ ಮತ್ತು ಸಾಂಸ್ಕøತಿಕ ವಸ್ತುಗಳೂ ಉದಿಸಿದುವು. ಆಜಾóದನದು ಇತರರಿಗೆ ಅನುಕರಿಸಲು ಅಸಾಧ್ಯವಾದ ಒಂದು ವಿಶಿಷ್ಟ ಶೈಲಿ. ಹಾಲಿಯ ಜೊತೆಗೆ ಈತನೂ ಉರ್ದು ಸಾಹಿತ್ಯದ ಮೇಲೆ ದೂರವ್ಯಾಪಿಯೂ ಬಹು ಪರಿಣಾಮಕಾರಿಯೂ ಆದ ಪ್ರಭಾವವನ್ನು ಬೀರಿದ ಹೊಸ ಪ್ರಕಾರಗಳನ್ನು ಬಳಕೆಗೆ ತಂದ ಕೀರ್ತಿಗೆ ಭಾಗಿಯಾಗಿದ್ದಾನೆ.

ಮೀರತ್ತಿನ ಮೌಲಿ ಮುಹಮ್ಮದ್ ಇಸ್ಮಾಯೀಲ್ (1844-1917) ಮುನ್ಷಿ ದುರ್ಗಾ ಸಹಾಯ್ ಸರೂರ್ (1873-1910). ಸೈಯದ್ ಅಕ್ಬರ್ ಹುಸೇನ್ ಅಕ್ಬರ್ (1846-1921). ಬ್ರಿಜ್ ನಾರಾಯಣ ಚಕ್‍ಬಸ್ತ್ (1882-1926) ಮುಂತಾದವರು ಆಧುನಿಕ ಯುಗದ ಶ್ರೇಷ್ಠ ಪ್ರತಿಭಾಶಾಲಿಯಾದ ಡಾ. ಸರ್ ಮುಹಮ್ಮದ್ ಇಕ್ಬಾಲ್ (1875-1938) ಎಂಬ ಮಹಾಕವಿಗೆ ಮುಂಚಿನ ಕೆಲವು ಶ್ರೇಷ್ಠ ಕವಿಗಳು ಇಕ್ಬಾಲನ ಆಶ್ಚರ್ಯಕರವಾದ ಉರ್ದು ಮತ್ತು ಪರ್ಷಿಯನ್ ಕವಿತೆಗಳು ಜನರ ಮನಸ್ಸನ್ನು ಪರಿವರ್ತನಗೊಳಿಸುವುದರಲ್ಲಿ ತುಂಬ ಸಮರ್ಥವಾದವು. ಇಕ್ಬಾಲ್ ಶ್ರೇಷ್ಠ ವಿಚಾರಶೀಲ ಮತ್ತು ದಾರ್ಶನಿಕ.


ಮುಂದಿನ ಕವಿಗಳು ಆತನ ಮೇಲುಪಂಕ್ತಿಯನ್ನು ಅನುಸರಿಸಿದರು. ಅವರು ತಮ್ಮ ಕವಿತೆಗಳಲ್ಲಿ ವಾಸ್ತವಿಕತೆಗೆ ಹೆಚ್ಚು ಗಮನವಿತ್ತರು. ಸೈಯದ್ ಫಜóಲುಲ್ ಹಸರತ್ ಮೋಹಾನಿ (1875-1951) ಗೊಂಡಾವಿನ ಅಸಘರ್ ಹುಸೇನ್ ಅಸಫರ್ (1884-1935), ಬದಾಯೂನಿನ ಪಾವಕತ್ ಆಲಿಖಾನ್ ಫಾನಿ (1879-1941) ಮತ್ತು ಮುರಾದಾಬಾದಿನ ಅಲಿ ಸಿಕಂದರ್ ಜಿಗರ್ (1890-1960) ಎಂಬುವರು ಭಾವಗೀತೆಗಳಲ್ಲಿ ಹೊಸಪ್ರವೃತ್ತಿಗಳನ್ನು ತೆರೆದು ಪ್ರೇಯಸಿಯ ದೇಹಾಂಗವರ್ಣನೆ ಮೊದಲಾದ ಹಳೆಯ ಸಂಪ್ರದಾಯಗಳ ಶೃಂಖಲೆಯಿಂದ ಅದನ್ನು ಪಾರುಗೊಳಿಸಿದರು. ಹೈದರಾಬಾದಿನ ಅಂಜದ್ ಹುಸೇನ್ ಅಂಜದ್ (1886-1961) ಸರಳವಾಗಿಯೂ ಸರಾಗವಾಗಿಯೂ ಓಡುವ ಚೌಪದಿಗಳನ್ನು ರಚಿಸಿ ಪ್ರಖ್ಯಾತನಾದ. ಆತನೊಬ್ಬ ದೊಡ್ಡ ಉಪದೇಶ, ಆತನ ಕವಿತೆಗಳ ತುಂಬ ನೀತಿವಾಕ್ಯಗಳಿವೆ.

ಹತ್ತೊಂಬತ್ತನೆಯ ಶತಮಾನ ಮುಗಿಯುವ ಹೊತ್ತಿಗೆ ಉರ್ದು ಗದ್ಯದಲ್ಲಿ ಮಹತ್ತರವಾದ ಬದಲಾವಣೆ ಕಂಡು ಬಂತು. ಅನೇಕ ಮಾಸ, ವಾರ, ದಿನಪತ್ರಿಕೆಗಳು ಉರ್ದು ಭಾಷೆ ಮತ್ತು ಸಾಹಿತ್ಯ ಪ್ರಸಾರಕ್ಕಾಗಿ ಹುಟ್ಟಿಕೊಂಡುವು. ಮುನಿಷಿ ನೌಲ್ ಕಿಶೋರ್ (1836-1895) ಲಖ್‍ನೌದಲ್ಲಿ ತನ್ನ ಅಚ್ಚಿನಯಂತ್ರವನ್ನು ಸ್ಥಾಪಿಸಿದ. ಇದು ಉರ್ದು ಭಾಷೆ ಮತ್ತು ಸಾಹಿತ್ಯದ ಮೇಲೆ ತುಂಬ ಪರಿಣಾಮಕಾರಿಯಾದ ಪ್ರಭಾವವನ್ನು ಬೀರಿತು. ಈತ ಪ್ರಾಯಶಃ ಎಲ್ಲ ಉರ್ದುಕವಿಗಳ ಕವನ ಸಂಗ್ರಹಗಳನ್ನೂ ಪ್ರತಿಷ್ಠಾವಂತ ಸಾಹಿತ್ಯಗಳು ರಚಿಸಿದ ದೊಡ್ಡ ದೊಡ್ಡ ಪ್ರೇಮ ಮತ್ತು ಸಾಹಸದ ಕಥೆಗಳನ್ನೂ ಕಥಾಪ್ರಸಂಗಗಳನ್ನೂ ಪ್ರಕಟಿಸಿದ. ಲಖ್‍ನೌದ ಓಧ್ ಅಖ್‍ಬಾರ್ ಮತ್ತು ಔಧ್‍ಪಂಚ್ ಎಂಬ ದಿನ ಮತ್ತು ವಾರಪತ್ರಿಕೆಗಳು, ದೆಹಲಿಯ ಅಷ್ರಫುಲ್ ಅಖಾಬಾರ್. ಲಹೋರಿನ ಪೈಸಾ ಅಖ್‍ಬಾರ್, ಬೊಂಬಾಯಿಯ ಕುಷ್ಫುಲ್ ಅಖ್‍ಬಾರ್. ಮದ್ರಾಸಿನ ಷಾಂಸುಲ್ ಅಖ್‍ಬಾರ್. ಬೆಂಗಳೂರಿನ ಕಾಸಿಮುಲ್ ಅಖ್‍ಬಾರ್(ಇವು ಉರ್ದು ಓದುಗರ ವಲಯವನ್ನು ವಿಸ್ತರಿಸಿ ಅವರನ್ನು ಅದರ ಸಾಹಿತ್ಯದತ್ತ ಸೆಳೆದವು. ಪಂಡಿತ ರತನನಾಥ್ ಸರ್‍ಷಾರ್ (1847-1902) ಎಂಬಾತ ಒಬ್ಬ ಲೇಖಕ. ಆತ ಅನೇಕ ಕೃತಿಗಳನ್ನು ಉರ್ದುವಿನಲ್ಲಿ ರಚಿಸಿದ್ದಾನೆ. ಫಸಾನ್-ಡ-ಆಜಾóದ್ ಎಂಬುದು ಶೈಲಿಗೂ ಭಾಷೆಗೂ ಪ್ರಖ್ಯಾತವಾದ ಅತನ ಗ್ರಂಥಗಳ ಪೈಕಿ ಒಂದು. ಈತ ತನ್ನ ಕಾಲದ ಸಮಾಜದ ಅನೇಕ ಮುಖಗಳನ್ನೂ ನೈಜವಾಗಿ ರೇಖಿಸಿದ್ದಾನೆ. ಮೌಲ್ವಿ ಅಬ್ದುಲ್ ಹಲಿಂ ಷರರ್ (1860-1326) ಅನೇಕ ಕಾದಂಬರಿಗಳನ್ನೂ ಸಣ್ಣಕತೆಗಳನ್ನೂ ರಚಿಸಿ ಖ್ಯಾತನಾಗಿದ್ದಾನೆ.

ಮುನ್ಷಿ ಪ್ರೇಮಚಂದ್‍ನ (1880-1936) ನಿಜನಾಮ ಧನಪತರಾಯ್. ಈತ ಸಣ್ಣ ಕತೆಗಳ ಮತ್ತು ಕಾದಂಬರಿಗಳ ಕ್ಷೇತ್ರದಲ್ಲಿ ತುಂಬ ಹೆಸರುವಾಸಿಯಾದವ. ಯಾವ ಪೂರ್ವಾಗ್ರಹಗಳಿಗೂ ಒಳಗಾಗದೆ ಈತ ತನ್ನ ಕಾಲದ ರೈತರು. ಭೂಮಾಲೀಕರು. ಜಹಗೀರದಾರರು ಮತ್ತು ಜಮೀನುದಾರರ ಸಮಸ್ಯೆಗಳನ್ನು ತನ್ನ ಕೃತಿಗಳಲ್ಲಿ ಚರ್ಚಿಸಿದ್ದಾನೆ. ಭಾರತೀಯ ಜನರ ವಿಷಯದಲ್ಲಿ ಪ್ರೇಮಚಂದನ ತಿಳಿವಳಿಕೆ, ಮಾನವೀಯತೆ ಮತ್ತು ಶಬ್ದಗಳ ಮೇಲಿನ ಅಸಾಧಾರಣವಾದ ಪ್ರಭುತ್ವ(ಇವು ಈತನ ಉರ್ದು ಬರೆವಣಿಗೆಯನ್ನು ಆದರ್ಶಕ್ಕೇರಿಸಿದವು. 1936ರಲ್ಲಿ ಈತ ಸ್ವರ್ಗಸ್ಥನಾಗುವ ವೇಳೆಗೆ ಉರ್ದು ಮತ್ತು ಹಿಂದಿ ಭಾಷೆಗಳಲ್ಲಿ ಈತನೇ ಉತ್ತಮೋತ್ತಮ ಕಾದಂಬರಿಕಾರ ಮತ್ತು ಸಣ್ಣಕತೆಗಳ ಲೇಖಕನೆಂಬ ಪರಿಗಣನೆಗೆ ಭಾಜನನಾಗಿದ್ದ.

ಅಂಜುಮನ್ ತರಕ್ಕಿ ಉರ್ದು ಎಂಬ ಹೆಸರಿನ ಒಂದು ದೊಡ್ಡ ಸಂಶೋಧನಾಲಯವನ್ನು 1903ರಲ್ಲಿ ಹೈದರಬಾದಿನಲ್ಲಿ ತೆರೆಯಲಾಯಿತು. ಮೌಲಾನಾ ಷಿಬ್ಲಿನೊಮಾನಿ ಎಂಬ ಪ್ರಖ್ಯಾತ ಸಾಹಿತಿ ಮತ್ತು ವಿಮರ್ಶಕ ಇದರ ಮೊದಲ ಕಾರ್ಯದರ್ಶಿ. 1913ರಲ್ಲಿ ಡಾ. ಮೌಲ್ವಿ ಅಬ್ದುಲ್ ಹಕ್ (1870-1961) ಕಾರ್ಯದರ್ಶಿಯಾದಾಗ ಇದು ತುಂಬ ಅಭಿವೃದ್ಧಿಗೆ ಬಂತು. ಇದರ ಆಡಳಿತ ಕಚೇರಿಯನ್ನು ಹೈದರಾಬಾದಿನಿಂದ ಔರಂಗಾಬಾದಿಗೆ ವರ್ಗಾಯಿಸಲಾಯಿತು. ಉರ್ದು ಎಂಬ ತ್ರೈಮಾಸಿಕ ಪತ್ರಿಕೆಯನ್ನು 1921ರಲ್ಲಿ ಹೊರಡಿಸಲಾಯಿತು. ಇದು 1948ರವರೆಗೂ ನಿರಂತರವಾಗಿ ಪ್ರಕಟವಾಗುತ್ತಿತ್ತು. ಮೌಲವಾಗಿ ಅಬ್ದುಲ್ ಹಕ್ ಹಳೆಯ ಉರ್ದು ಹಸ್ತ ಪತ್ರಿಕೆಗಳನ್ನೆಲ್ಲ ಕಲೆಹಾಕಿ ಸಂಪಾದಿಸಿ ವಿದ್ವತ್ಪೂರ್ಣ ಉಪೋದ್ಘಾತಗಳನ್ನು ಬರೆದು ಇದರಲ್ಲಿ ಪ್ರಕಟಿಸುತ್ತಿದ್ದ, ಈತ ಒಂದು ಘನವಾದ ಉರ್ದು-ಇಂಗ್ಲಿಷ್ ನಿಘಂಟನ್ನು ಪ್ರಕಟಿಸಿದ. ಹಕ್ ತಾನೇ ಸ್ವತಃ ಒಂದು ಸಂಸ್ಥೆ. ಈ ಸಂಶೋಧನಾಲಯದ ಶಾಖೆಗಳನ್ನು ದೇಶಾದ್ಯಂತ ಸ್ಥಾಪಿಸಲು ಎಲ್ಲ ಕಡೆಯಿಂದ ಅನೇಕ ವಿದ್ವಾಂಸರ ಸಹಕಾರವನ್ನು ಈತ ಪಡೆದ. 1938ರ ಅಕ್ಟೋಬರ್ ತಿಂಗಳಲ್ಲಿ ಅಂಜುಮನ್ ಅನ್ನು ದೆಹಲಿಗೆ ವರ್ಗಾಯಿಸಲಾಯಿತು. ಮತ್ತು ಹಮಾರಿ ಜûಬಾನ್ ಎಂಬ ಪತ್ರಿಕೆಯನ್ನು 1941ರಲ್ಲಿ ಹೊರಡಿಸಲಾಯಿತು. ಈ ಪತ್ರಿಕೆ ಈಗಲೂ ಅಲಿಘರಿನಿಂದ ಪ್ರಕಟವಾಗುತ್ತಿದೆ. ಉರ್ದು ಭಾಷೆಗೂ ಸಾಹಿತ್ಯಕ್ಕೂ ಈತ ಮಾಡಿದ ಸೇವೆಯನ್ನು ಪುರಸ್ಕರಿಸಿ ಭಾರತೀಯರು ಈತನಿಗೆ ಬಾಬಾ-ಎ-ಉರ್ದು (ಉರ್ದು ಭಾಷೆಯ ತಂದೆ) ಎಂಬ ಉಚಿತವಾದ ಬಿರುದನ್ನು ಸಲ್ಲಿಸಿದರು. ದರ್ ಆಲ್-ಮುಸ್ ಫೀಸ್ ಅಥವಾ ಷಿಬ್ಲಿ ಅಕೆಡಮಿ ಎಂಬ ಮತ್ತೊಂದು ಇಂಥದೇ ಸಂಶೋಧನಾಲಯವನ್ನು ಷಿಬ್ಲಿಯೇ ಆಜûಮ್‍ಗಡದಲ್ಲಿ 1914ರಲ್ಲಿ ಸ್ಥಾಪಿಸಿದ. ಇಲ್ಲಿ ಪ್ರಮುಖವಾದ ಧಾರ್ಮಿಕ ಹಾಗೂ ಸಾಹಿತ್ಯದ ಸಂಶೋಧನೆಗಳನ್ನು ನಡೆಸಲಾಯಿತು.

ಭಾರತದ ಮಾಜಿ ವಿದ್ಯಾಮಂತ್ರಿ ಮೌಲಾನಾ ಅಬುಲ್ ಕಲಾಂ ಅಜಾದ್ (1889-1958) ಒಬ್ಬ ದೊಡ್ಡ ವಿದ್ವಾಂಸ, ವಾಗ್ಮಿ ಮತ್ತು ಉರ್ದು ಬರಹಗಾರ. ಉರ್ದು ಗದ್ಯದಲ್ಲಿ ಈತನದೇ ಒಂದು ಅನುಕರಣೀಯವಾದ ವಿಶಿಷ್ಟ ಶೈಲಿ. ಈತ ಆಲ್-ಹಿಲಾಲ್ ಮತ್ತು ಆಲ್-ಬಲಾಗ್ ಎಂಬ ಪತ್ರಿಕೆಗಳನ್ನು ಕಲ್ಕತ್ತೆಯಲ್ಲಿ ಪ್ರಾರಂಭಿಸಿದ.


ಇಂಗ್ಲಿಷ್ ಮತ್ತಿತರ ಭಾಷೆಗಳಲ್ಲಿ ಅನೇಕ ವಿಷಯಗಳ ಮೇಲಿನ ಉತ್ಕøಷ್ಟ ಕೃತಿಗಳನ್ನು ಉರ್ದುವಿಗೆ ಭಾಷಾಂತರಿಸಲು ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾನಿಲಯ 1917ರಲರಲಿ ದಾರುಲ್ ತರ್ಜುಮಾ ಎಂಬ ಭಾಷಾಂತರ ಇಲಾಖೆಯನ್ನು ಸ್ಥಾಪಿಸಿತು. ಈ ಪುಸ್ತಕಗಳನ್ನು ಹೈದರಾಬಾದ್ ಸಂಸ್ಥಾನದ ಶಾಲೆಗಳಲ್ಲೂ ಕಾಲೇಜುಗಳಲ್ಲೂ ಬೇರೆ ಬೇರೆ ದರ್ಜೆಗಳಿಗೆ ಪಠ್ಯ ಪುಸ್ತಕಗಳನ್ನಾಗಿ ಇಡಲಾಗಿತ್ತು. ಉರ್ದುವಿನಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಪರಿಭಾಷಾ ಶಬ್ದಕೋಶವನ್ನು ರಚಿಸಲು ಜಯಪ್ರದವಾದ ಪ್ರಯತ್ನಗಳನ್ನು ಕೈಗೊಳ್ಳಲಾಯಿತು.

1921ರ ಅಸಹಕಾರ ಚಳವಳಿಯ ಕಾಲದಲ್ಲಿ ಜಾಮಿಯ ಮಿಲ್ಲಿಯ ಎಂಬ ಶುಲ್ಕರಹಿತ ರಾಷ್ಟ್ರೀಯ ವಿದ್ಯಾಸಂಸ್ಥೆಯೊಂದನ್ನು ದೆಹಲಿಯಲ್ಲಿ ಸ್ಥಾಪಿಸಬೇಕೆಂದು ನಿಶ್ಚಯಿಸಿದರು. ಈ ಸಂಸ್ಥೆಯಿಂದ ವಿವಿಧ ವಿಷಯಗಳ ಮೇಲೆ ಶ್ರೇಷ್ಠ ದರ್ಜೆಯ ಗ್ರಂಥಗಳು ಪ್ರಕಟವಾದುವು. ಇಂದಿಗೂ ಈ ಕಾರ್ಯ ಮುಂದುವರಿದಿದೆ. ಹೈದರಾಬಾದಿನ ಇದಾರಾ ಅದಬಿಯಾತೆ ಉರ್ದು (1925) ಅಲಹಾಬಾದಿನ ಹಿಂದೂಸ್ಥಾನಿ ಅಕೆಡಮಿ (1927), ದೆಹಲಿಯ ನಡಿವತುಲ್ ಮುಸನ್ನಿಫೀನ್ (1938) ( ಇವು ಇತರ ಸಂಶೋಧನ ಕೇಂದ್ರಗಳು.

ಇಪ್ಪತ್ತನೆಯ ಶತಮಾನ ತನ್ನ ಪ್ರಥಮ ಚತುರ್ಭಾಗದ ಅಂತ್ಯವನ್ನು ಮುಟ್ಟುತ್ತಿರುವಾಗ ರೊಮ್ಯಾಂಟಿಸಿಸಂ, ರ್ಯಾಡಿಕಲಿಸಂ ಮತ್ತು ರ್ಯಾಷನಲಿಸಂ ಎಂಬ ಮೂರು ಸಾಹಿತ್ಯ ಪಂಥಗಳು ಅನೇಕ ವಿಧಗಳಲ್ಲಿ ಪ್ರಕಟವಾಗುತ್ತಿದ್ದುವು. ಸ್ವಾತಂತ್ರ್ಯಕ್ಕಾಗಿ ಮೊದಲಾದ ರಾಷ್ಟ್ರೀಯ ಹೋರಾಟ ಒಂದು ಹೊಸ ಘಟ್ಟ ಪ್ರವೇಶಿಸುತ್ತಿತ್ತು. ಅಂತರರಾಷ್ಟ್ರೀಯ ದೃಶ್ಯವೂ ಬೇಗ ಬೇಗ ಬದಲಾಯಿಸುತ್ತಿತ್ತು. ಅಲ್ಲಲ್ಲಿ ಅತೃಪ್ತಿಯ ಸೂಚನೆಗಳೂ ಸಾಮಾಜಿಕ ಧಾರ್ಮಿಕ ಮತ್ತು ಸಾಹಿತ್ಯಿಕ ತತ್ತ್ವಗಳಿಗೆ ವಿರುದ್ಧವಾಗಿ ಕಾಲ್ಪನಿಕ ಪ್ರತಿಭಟನೆಗಳೂ ತಲೆದೋರುತ್ತಿದ್ದುವು. ತರುಣರು ತಮ್ಮ ಬಾಳುವೆ ಮತ್ತು ಪ್ರಣಯದ ರೀತಿಗಳಲ್ಲಿ ಸ್ವಾತಂತ್ರ್ಯವನ್ನು ಬಯಸಿದರು. ಅವರು ತಮ್ಮ ಬರೆಹಗಳಿಗೆ ಒಂದು ತರದ ಹೊಸತನವನ್ನೂ ಉಲ್ಲಾಸವನ್ನೂ ಧ್ಯೇಯ ಸಂಪನ್ನತೆಯನ್ನೂ ತಂದರು. ತಮ್ಮ ಶೈಲಿ, ಶಬ್ದ ಮತ್ತು ಶಬ್ದಪುಂಜಗಳ ರೀತಿ ರೂಪ ಸೌಂದರ್ಯಗಳಲ್ಲಿ ಅವರು ತುಂಬ ಎಚ್ಚರಿಕೆ ವಹಿಸಿದರು. ಆದರೆ ಅವರ ಭಾವಗಳು ಆಳವಾಗಿರಲಿಲ್ಲ, ನೀತಿಯ ವಿಷಯದಲ್ಲಿ ಅವರ ಉತ್ಸಾಹ ಕಡಿಮೆ, ಉನ್ನತ ವಿಚಾರಗಳಿಗೂ ಅವರಲ್ಲಿ ಆಸ್ಪದ ಅಲ್ಪವಾಗಿತ್ತು. ಫ್ರೆಂಚ್, ಇಂಗ್ಲಿಷ್ ಮತ್ತು ರಷ್ಯನ್ ಬರಹಗಾರರ ಮೂಲಕೃತಿಗಳಿಂದಲೂ ಭಾಷಾಂತರಗಳಿಂದಲೂ ಅವರು ಪ್ರಭಾವಿತರಾಗಿದ್ದರು. ಹಳೆಯದಾವುದೂ ತಮಗೆ ಬೇಡವೆಂಬ ಮನೋಭಾವವನ್ನು ತಳೆದು ಪಾಶ್ಚಾತ್ಯ ಸಾಹಿತ್ಯ ಸಂಪ್ರದಾಯಗಳಲ್ಲಿ ಮಗ್ನರಾಗಿದ್ದ ತರುಣ ಬರಹಗಾರರ ತಂಡವೊಂದು ಉರ್ದು ಓದುಗರಿಗೂ ಅಂದಿನವರೆಗೂ ತಿಳಿಯದಿದ್ದ ವಿಷಯಗಳ ಮೇಲೆ ಕಥೆಗಳನ್ನೂ ಕಾದಂಬರಿಗಳನ್ನೂ ರಚಿಸತೊಡಗಿತು. ತಮ್ಮ ಕಥೆಗಳು ತಂತ್ರದಲ್ಲಿ ಕೊನೆಮುಟ್ಟಿವೆಯೆಂದೂ ಕಲ್ಪನೆಯಲ್ಲಿ ಪರಿಣಿತವಾಗಿದೆಯೆಂದೂ ಅವರೇ ಒಪ್ಪಿಕೊಳ್ಳುತ್ತಿರಲಿಲ್ಲ ಆದರೆ ತಮ್ಮ ವಸ್ತುಗಳಲ್ಲೂ ರೂಪಗಳಲ್ಲೂ ಒಂದು ಹೊಸ ನಿಟ್ಟನ್ನು ತೋರುತ್ತವೆ(ಎಂದಷ್ಟನ್ನು ಮಾತ್ರ ಹೇಳುತ್ತಿದ್ದರು. ಜೇಮ್ಸ್ ಜಾಯ್ಸ್, ಫ್ರಾಯ್ಡ್, ಮಾಕ್ರ್ಸ್, ಗಾರ್ಕಿ, ಡಿ. ಎಚ್, ಲಾರೆನ್ಸ್ ಮತ್ತು ಟಾಲ್ಸ್‍ಸ್ಟಾಯ್(ಇವರೆಲ್ಲರ ಬರಹಗಳೂ ಬೆರಕೆಯಾಗಿಹೋಗಿ ಓದುಗರ ಮತ್ತು ಬರಹಗಾರರ ಮುಂದೆ ನೋಟದ ಹೊಸ ತಿರುವುಗಳನ್ನೇ ತೆರೆದುವು. ಮೊದಮೊದಲಿನ ಈ ಪ್ರಯತ್ನಗಳು ಜಯಗಳಿಸದಿದ್ದರೂ ಮುಂದಿನ ಬರಹಗಳ ಗೆಲುವಿಗೆ ಇವು ನಾಂದಿಯಾದವು. ಉರ್ದು ಸಾಹಿತ್ಯದ ಇತಿಹಾಸದಲ್ಲಿ 1936ನೆಯ ಇಸವಿ ಗಮನಾರ್ಹವಾದ ವರ್ಷ. ಅದು ಸಾಹಿತ್ಯವೊಂದಕ್ಕೆ ಅಲ್ಲ, ಇಡೀ ನಾಡಿಗೇ ಮಹತ್ತ್ವಪೂರ್ಣವಾದದ್ದು. ಏಕೆಂದರೆ ಆ ವರ್ಷದಲ್ಲೇ ಪ್ರಗತಿಶೀಲ ಲೇಖಕರ ಚಳವಳಿ ಒಂದು ಸ್ಪಷ್ಟ ರೂಪವನ್ನು ತಳೆದುದು. ಅದರ ಮೊದಲ ಸಮ್ಮೇಳನ ಲಖ್‍ನೌದಲ್ಲಿ 1936ರ ಏಪ್ರಿಲ್ ತಿಂಗಳಲ್ಲಿ ಸಮಾವೇಶಗೊಂಡಿತು. ಮುನ್ಷಿ ಪ್ರೇಮ್‍ಚಂದ್ ಅದರ ಅಧ್ಯಕ್ಷ. ಸಮ್ಮೇಳನ ಉರ್ದುವಿನಲ್ಲಿನ ಉದ್ದೇಶ ರಹಿತ, ಅಸ್ಪಷ್ಟಾರ್ಥ ಶುದ್ಧರೂಪನಿಷ್ಠ ಲೇಖನಗಳ ಮೇಲೆ ಯುದ್ಧವನ್ನು ಘೋಷಿಸಿ ಒಂದು ಪ್ರಕಟಣೆಯನ್ನು ಹೊರಡಿಸಿತು. ನೋಟದ ಹರವನ್ನು ವಿಸ್ತರಿಸಿ ಲೇಖಕರ ಸೃóಷ್ಟಿಶಕ್ತಿ ವಿಕಸಿಸುವಂತೆ ಮಾಡುವ ವಾಸ್ತವತೆ, ವಿಚಾರನಿಷ್ಠೆ ಮತ್ತು ನವಕಲಾಕುಶಲ ಸಾಹಿತ್ಯ ರೂಪಾನ್ವೇಷಣೆ(ಮುಂತಾದ ಮೌಲ್ಯಗಳಿಗೆ ವಿಶೇಷ ಗಮನಕೊಡಬೇಕೆಂದು ಒತ್ತಿ ಹೇಳಿತು.. ಇಕ್ಬಾಲನ ಅನಂತರ ಉರ್ದುಸಾಹಿತ್ಯದ ಶ್ರೇಷ್ಠ ಕವಿ ಎನಿಸಿದ ಷಬ್ಬೀರ್ ಹಸನ್‍ಖಾನ್ ಜೋಷ್ ಮಲಿಹಾಬಾದಿ ಎಂಬಾತ ತನ್ನ ವಿಶಿಷ್ಟ ಕೌಶಲವನ್ನೂ ಕಾಲವನ್ನೂ ಪ್ರಣಯ, ಪ್ರಕೃತಿಪ್ರೇಮ, ಮಾನವೀಯತೆ, ಮದಿರಾಪ್ರಮದಾ ಪ್ರಶಂಸೆ ಮುಂತಾದ ಶೃಂಗಾರ ಭಾವಗಳಿಗೆ ಮೀಸಲಿಟ್ಟು ಕವಿತೆಗಳನ್ನು ರಚಿಸುತ್ತಿದ್ದ ತನ್ನದೇ ಆದ ರಂಜಕ ಮಾರ್ಗದಲ್ಲಿ ಕ್ರಾಂತಿಪರವಾದ ಸ್ವಾತಂತ್ರ್ಯ, ಪ್ರಗತಿ ಮತ್ತು ಸಮಾನತಾಭಾವಗಳತ್ತ ತಿರುಗಿದ, ಆತನ ರುದ್ರಪ್ರತಿಭೆ, ಭಾಷೆ ಮತ್ತು ಶೈಲಿಯ ಪ್ರಭುತ್ವಗಳು ಇತರ ಕವಿಗಳನ್ನು ಪ್ರಭಾವಿಸಿದುವು. ಫೈಜ್ó, ಮಜಾóಜ್ó, ಆಲಿಸರ್ದಾರ್, ಜಾಫ್ರಿ, ಅಖ್ತರ್, ಷೀರಾನಿ, ಆನಂದ್ ನಾರಾಯಣ ಮುಲ್ಲಾ ಮುಖದೂಮ್ ಮೊಹ್ಯುದ್ದೀನ್ ಫಿರಾಜ್ ಗೋರಖ್‍ಪೂರಿ ಮತ್ತು ಇತರರು ಪರಕೀಯರ ಆಡಳಿತ, ಅಜ್ಞಾನ, ಬಡತನ, ದಬ್ಬಾಳಿಕೆ ಮತ್ತು ಯುದ್ಧಗಳನ್ನು ತೆಗಳುತ್ತ ಹೊರಬಂದರು. ಅವರು ಕ್ರಾಂತಿಯನ್ನೂ ಜನಪ್ರೀತಿಯನ್ನೂ ಹಾಡಿ ಹರಸಿದರು.

ಕಥೆಗಾರರ ಪೈಕಿ ಕೃಷ್ಣ ಚಂದ್ರ, ರಾಜೇಂದ್ರ ಸಿಂಗ್, ಬೇದಿ, ಇಸಮತ್ ಚುಗ್ ತಾಯಿ, ಖ್ವಾಜ ಅಹಮದ್ ಅಬ್ಬಾಸ್, ಅಲಿ ಅಬ್ಬಾಸ್, ಹುಸೇನಿ, ಹಯತುಲ್ಲ, ಆನ್‍ಸಾರಿ, ಸಅದತ್ ಹಸನ್ ಮನಟೋ, ಸಾದಿಕ್ ಹುಸೇನ್ ಸರ್‍ಧನವಿ, ತೀರ್ಥರಾಮ್ ಫಿರೊಝ್ ಪುರಿ, ಅಹಮದ್ ನದೀಂ ಕಾಸಿಮಿ, ಅಜಿóೀಜ್ó ಅಹಮದ್, ರೈಸ್ ಅಹಮದ್ ಜಾಫರಿ ಮತ್ತು ಇತರರನೇಕರು ಹೆಸರುವಾಸಿಯಾಗಿದ್ದಾರೆ. ಪ್ರೊಮಸೂದ್ ಹಸನ್ ರಜ್ó ವಿ, ನೈಯಾಜ್ ಫತೇಪುರಿ. ಆಲ್ ಅಹಮದ್ ಸರೂರ್, ಪ್ರೊ. ರಷೀದ್ ಅಹಮದ್ ಸಿದ್ದಿಕ್ಕಿ ಎಂಬುವರು ವಿಮರ್ಶೆಯಲ್ಲಿ ಪ್ರಖ್ಯಾತರಾಗಿ ಅನೇಕ ಗ್ರಂಥಗಳನ್ನು ಬರೆದಿದ್ದಾರೆ.

ಉರ್ದು ಭಾರತ ರಾಜ್ಯಾಂಗದಲ್ಲಿ ಪರಿಗಣಿತವಾಗಿರುವ 14 ಭಾಷೆಗಳಲ್ಲಿ ಒಂದು. ಭಾರತದಲ್ಲಿ ಉರ್ದುಪ್ರಾಂತ್ಯ ಯಾವುದೂ ಇಲ್ಲ. ಅದರೆ ದೇಶದ ಬಹುಭಾಗದ ಜನ ಈ ಭಾಷೆಯನ್ನು ಆಡಿ ಅರ್ಥಮಾಡಿಕೊಳ್ಳುತ್ತಿದ್ದಾರೆ. ಈ ಭಾರತೀಯ ಭಾಷೆ ಭಾರತದ ಸುತ್ತಮುತ್ತಲ ದೇಶಗಳಾದ ಇರಾನ್, ಆಫ್‍ಘಾನಿಸ್ಥಾನ, ಅರೇಬಿಯ, ಸಿಲೋನ್, ಬರ್ಮ ಮತ್ತು ಪೂರ್ವ ಆಫ್ರಿಕ ಮತ್ತು ಪಾಕಿಸ್ತಾನಗಳಲ್ಲಿ ಪ್ರಚಲಿತವಿದೆ. ದೇಶದ ಎಲ್ಲ ಕಡೆಗಳಲ್ಲೂ ಉರ್ದುಪತ್ರಿಕೋದ್ಯಮವಿದೆ. ನೂರಾರು ದಿನ. ಎರಡು ದಿನ. ವಾರ ಮತ್ತು ಪಕ್ಷಪತ್ರಿಕೆಗಳೂ ಉರ್ದುವಿನಲ್ಲಿ ಪ್ರಕಟವಾಗುತ್ತಿವೆ. ನಿಯತಕಾಲಿಕಗಳು ಲಂಡನ್, ಏಡನ್ ಮತ್ತು ಪೂರ್ವ ಆಫ್ರಿಕ ನಗರಗಳಿಂದ ಪ್ರಕಟವಾಗುತ್ತಿವೆ. ದೇಶದ ಬಹುಪಾಲು ಎಲ್ಲ ನಗರಗಳಲ್ಲೂ ಉರ್ದುಪುಸ್ತಕಗಳು ಪ್ರಕಟವಾಗುತ್ತಿವೆ. ಬಹುಪಾಲು ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿ ಉರ್ದು ಪೀಠಗಳಿದ್ದು ಅವುಗಳಲ್ಲಿ ಸ್ನಾತಕೋತ್ತರ ಮತ್ತು ಸಂಶೋಧನಾವಕಾಶಗಳಿವೆ. ಮಾಸ್ಕೋ. ಮದೀನ, ಪ್ಯಾರಿಸ್ ಮತ್ತು ಲಂಡನ್ ವಿಶ್ವವಿದ್ಯಾನಿಲಯಗಳಂಥ ಕೆಲವು ವಿದೇಶ ವಿಶ್ವವಿದ್ಯಾನಿಲಯಗಳಲ್ಲಿ ಸ್ವತಂತ್ರವಾಗಿ ಉರ್ದು ಅಧ್ಯಾಪನ ಮತ್ತು ಸಂಶೋಧನಾವಕಾಶಗಳಿವೆ. ಪಾಕಿಸ್ತಾನ ಉರ್ದುವನ್ನು ತನ್ನ ರಾಷ್ಟ್ರ ಭಾಷೆಯಾಗಿ ಅಳವಡಿಸಿಕೊಂಡಿದೆ. ಪಾಕಿಸ್ತಾನದಲ್ಲಿ ಉರ್ದುವನ್ನು ತನ್ನ ಪ್ರದೇಶದ ಭಾಷೆಯೆಂದು ಹೇಳಿಕೊಳ್ಳುವ ಯಾವ ಪ್ರಾಂತ್ಯವೂ ಇಲ್ಲ. ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾನಿಲಯದಲ್ಲಿ ಉರ್ದು ದಶಕಗಳ ಕಾಲ ಎಲ್ಲ ತರಗತಿ ಮಟ್ಟದಲ್ಲೂ ಬೋಧನಮಾಧ್ಯಮವಾಗಿದ್ದುದಲ್ಲದೆ ಜಯಪ್ರದ ಪ್ರಯೋಗವೂ ಆಯಿತು. ಉರ್ದು ಸಾಹಿತ್ಯಕ್ಕೆ ಮುಸ್ಲಿಮರಷ್ಟೇ ಹಿಂದೂಗಳೂ ಸೇವೆ ಸಲ್ಲಿಸಿದ್ದಾರೆ. ಇದು ಕೇವಲ ಮುಸ್ಲಿಂ ಭಾಷೆಯಲ್ಲ. ಮುಸ್ಲಿಂ ಸಾಹಿತ್ಯವೂ ಅಲ್ಲ. ಉರ್ದು ಸಂಸ್ಕøತಿ. ಹಿಂದೂ ಮುಸ್ಲಿಂ ಸಂಸ್ಕøತಿಯ ಮಿಶ್ರಣವಾದ ಭಾರತೀಯ ಸಂಸ್ಕøತಿ. ಉರ್ದು ಮುದ್ರಣ ಇನ್ನೂ ಬರವಣೆಗೆಯಲ್ಲಿ ನಡೆಯುತ್ತಿದೆ. ಉರ್ದುವಿನ ಅಚ್ಚುಮೊಳೆಗಳಿದ್ದರೂ ಉರ್ದು ಮುದ್ರಣಕ್ಕೆ ನಸ್ತಾಲಿಕ್ ರೀತಿಯ ಪರ್ಷಿಯನ್ ಮೂಲದ ಬರವಣಿಗೆಯನ್ನು ಉಪಯೋಗಿಸುತ್ತಿದ್ದಾರೆ. ಅಚ್ಚಿನ ಮೊಳೆಯಿಂದ ಮುದ್ರಿಸುವುದು ಇನ್ನೂ ಜನಪ್ರಿಯವಾಗಿಲ್ಲ. ಪ್ರಪಂಚದ ಜನಸಂಖ್ಯೆಯಲ್ಲಿ ಉರ್ದು ಆಡುಭಾಷೆಯಾಗಿ ಮೂರನೆಯ ಸ್ಥಾನ ಗಳಿಸಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]