ಉರುಗುಗೊರಳು
ಉರುಗುಗೊರಳು ಯಾವ ಕಾರಣದಿಂದಲಾದರೂ ಕತ್ತನ್ನು ಸೊಟ್ಟವಾಗಿ ಇರಿಸಿಕೊಂಡಿದ್ದು ಅತ್ತಿತ್ತ ಆಡಿಸದಂತೆ ಇರುವಿಕೆ (ರೈ ನೆಕ್[೧]), ಕತ್ತು ಹಿಡಿದಂತಿರಬಹುದು. ಇಲ್ಲವೇ ಸೆಡೆತುಕೊಂಡಿರಬಹುದು. ಹಿಡಿದಂತಿರುವ ಸೊಟ್ಟ ಕತ್ತು ಹುಟ್ಟುತ್ತಲೆ ಬಂದಿರುವುದು. ಅಂತೂ ಎಳೆತನದಲ್ಲೇ ಹೀಗಾಗಿರುವುದಾದರೂ ಹಸುಗೂಸಿನಲ್ಲಿ ಕೊರಳು ಅಷ್ಟಾಗಿ ಬೆಳೆಯದೆ ಮೋಟಾಗಿರುವುದರಿಂದ ಆಗ ಸುಲಭವಾಗಿ ಗೊತ್ತಾಗದಿರಬಹುದು. ಇಲ್ಲಿ ಮುಖ್ಯವಾಗಿ ತಲೆಯನ್ನು ಒಂದು ಪಕ್ಕಕ್ಕೆ ಬಾಗಿಸಿ ಗಲ್ಲವನ್ನು ಇನ್ನೊಂದು ಪಕ್ಕಕ್ಕೆ ತಿರುಗಿಸಿ ತಲೆವಾಲುವಂತೆ ಮಾಡುವ ಸ್ನಾಯುವಾದ ಎದೆ ಎಲುಗುಚೂಚುಕಂದ (ಸ್ಟರ್ನೊಮ್ಯಾಸ್ಟಾಯ್ಡ್) ಮೊಟಕಾಗಿ ಬಿರುಸಾಗಿ ಬಿರಿಸಿಕೊಂಡು, ಮುಟ್ಟಿದರೆ ಕಡ್ಡಿಯಂತೆ ಗಡುಸಾಗಿ ತೋರುವುದು. ಇದಕ್ಕೆ ಸಂಬಂಧಿಸಿದ ಅಕ್ಕಪಕ್ಕದ ಕೂಡಿಸುವ ಊತಕದ ಬೆಳೆವಣಿಗೆಯೂ ಕೂಡಿರುವುದು. ಹೀಗಾಗುವುದರ ಸರಿಯಾದ ಕಾರಣ ಗೊತ್ತಿಲ್ಲ. ಹೆರಿಗೆ ಆಗುವಾಗಿನ ಅಪಾಯ ಪೆಟ್ಟುಗಳಿಂದ ಆ ಸ್ನಾಯು ಹಾಗೆ ಬಿರುಸಾಗಿ ಮುದುರಿಕೊಳ್ಳುವುದೆಂಬ ಒಂದು ಅಭಿಪ್ರಾಯವಿದೆ. ಎಳೆಗೂಸಿನಲ್ಲೇ ಕೊರಳಿನ ಸ್ನಾಯುಗಳ ಅರನಾರಿ (ಪಾಶ್ರ್ವವಾಯು, ಲಕ್ವ, ಪೆರಾಲಿಸಿಸ್) ಆಗುವುದು ಕಾರಣವೆಂದು ಕೆಲವರ ಮತವಿದೆ. ಇದಕ್ಕೆ ಕುಮ್ಮಕ್ಕಾಗಿ ಸೊಟ್ಟಕತ್ತು ಬಾಗಿರುವ ಪಕ್ಕದ ಮೊಗ ಚೆನ್ನಾಗಿ ಬೆಳೆಯದಿರುವುದು. ಇಂಥ ಸೊಟ್ಟ ಕತ್ತನ್ನು ಸರಿಪಡಿಸುವ ಒಂದು ಉಪಾಯ ಶಸ್ತ್ರ ಕ್ರಿಯೆಯಿಂದ ಆ ಸ್ನಾಯುವನ್ನು ಕತ್ತರಿಸಿ ಬಿಡಿಸುವುದು. ಆಗ ಸೊಟ್ಟಕತ್ತು ನೆಟ್ಟಗಾಗಿ ಸರಾಗವಾಗಿ ಆಡಿಸಬಹುದು. ಆದರೆ ತೀರ ಎಳೆಯದರಲ್ಲೇ ಹೀಗೆ ಮಾಡದಿದ್ದಲ್ಲಿ ಮೊಗದ ಅಸಮರೂಪ (ಎಸಿಮೆಟ್ರಿ) ಹಾಗೇ ಉಳಿದುಬಿಡಬಹುದು. ಶಸ್ತ್ರಕ್ರಿಯೆ ಆದಮೇಲೆ ಇನ್ನೊಂದು ಪಕ್ಕದ ಸ್ನಾಯುಗಳಿಗೆ ಬಲಬರುವ ತನಕ ತಲೆಯನ್ನು ಎದುರು ಕಡೆಗೆ ಕೆಲಕಾಲ ಎಳೆದಿಟ್ಟಿರಬೇಕಾಗುತ್ತದೆ.
ಸೆಡೆತದಿಂದಾದ ಸೊಟ್ಟ ಕತ್ತಿಗೆ ಒಂದು ಪಕ್ಕದ ಸ್ನಾಯುಗಳ ಮಿತಿಮೀರಿದ ಎಳೆತವೇ ಕಾರಣ, ಈ ಸೆಡೆತ ಬಿಟ್ಟು ಬಿಟ್ಟು ಬರಬಹುದು; ಇಲ್ಲವೇ ಎಡೆಬಿಡದೆ ಇರಬಹುದು. ಆಳವಾದ ಗಾಯವಾಗಿ ಕಲೆಗಟ್ಟುವುದು, ಕೊರಳಿನ ಬೆನ್ನೆಲುಬುಗಳ ರೋಗಗಳು, ಹಾಲುರಸ ಗ್ರಂಥಿಗಳ ಉರಿತ, ಮೆಂಡಿಕೆಯುರಿತ (ಟಾನ್ಸಿಲೈಟಿಸ್), ಕಣ್ಣಿನ ನೋಟದ ವ್ಯತ್ಯಾಸ, ಕೀಲುವಾತ (ರುಮ್ಯಾಟಿಸಂ), ಕೊರಳಿನ ಗ್ರಂಥಿಗಳ ಊತ, ಗಂಟಲ ಹಿಂದುಗಡೆ ಗೋಡೆಯಲ್ಲಿ ಏಳುವ ಕುರು, ಕಿರ್ಮಿದುಳಿನ (ಸೆರಿಬೆಲಂ್ಲ) ಗಂತಿಗಳು ಮುಖ್ಯಕಾರಣಗಳು; ಉನ್ಮಾದದಲ್ಲೂ (ಹಿಸ್ಟೀರಿಯ) ಚಳಿಗೊಡ್ಡಿದ್ದರಿಂದಲೂ ಕೊರಳಿನ ಬೆನ್ನುಲುಬುಗಳ ಉರುಗು ಗೊಳಾಗಬಹುದು, ಕ್ಷಯ ರೋಗದಿಂದಲೂ ಆಗುವುದು ಸಾಮಾನ್ಯ. (ಡಿ.ಎಸ್.ಎಸ್.) (ಪರಿಷ್ಕರಣೆ: ನಾ. ಸೋಮೆಶ್ವರ)
ಉಲ್ಲೇಖಗಳು
[ಬದಲಾಯಿಸಿ]